ಮಣ್ಣು ಮುಕ್ಕುವ ಹುಲ್ಲು ಬೀಜದಂತೆಲ್ಲವೂ
ಮಳೆಯೊಡನೆ ಮೊಳೆಯಬಹುದು;
ನೀರ ಹೊಗೆಯನು ಮಾಡಿ, ಮೈ ನೀರ ಹರಿಸುವಾ
ಬಿಸಿಲಿನಲ್ಲೊಣಗಲಹುದು.

ಕವಿಲೀಲೆಯಂತೆ ಎಲೆ ಕೂಸೆ, ಲಲಿತಾ! ನಿನ್ನ
ಒಂದುವರೆ ತಿಂಗಳಿನ ಕುನ್ನಿ ಬಾಳು;
ತಲೆದೋರಿ ಮೈವೆತ್ತು ಕಣ್ಣು ತೆರೆಯದ ಕಾಣ-
ದೊಂದಕ್ಕೆ ಹೆಸರಿಟ್ಟು ಬರೆದ ಹಾಡು.

ಹುಲ್ಲನಿತ್ತಾದರೂ ಸಲುಹಲಾರದಗೇಕೊ
ಮಾಯೆ ಮಮತೆಯು? ಬಿಡಿಸ ಬರದ ಗಂಟು!
ಕಾಯುವದದೆಂತು? ಸರಿ, ಸಾಯುವದೆ ಮೇಲಾಯ್ತು.
ಕೊಲುವ ಯಮನಿಗು ಕೊಂಚ ಕರಣೆಯುಂಟು.
*****