ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಇದಕ್ಕೆ ಉತ್ತರವಾಗಿ ಸಂಖ್ಯೆ ಜಾಸ್ತಿಯಿದ್ದುದಾದರೂ ಯಾವಾಗ ಎಂದು ಕೇಳಬಹುದು. ನಿಜ, ಕನ್ನಡದಲ್ಲಿ ವಿಮರ್ಶೆಯೆ೦ಬ ಸಾಹಿತ್ಯ ಪ್ರಕಾರ ಸುರುವಾದ್ದೇ ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ, ಎಂದರೆ ೧೯೬೦ರ ದಶಕದಲ್ಲಿ. ಅದಕ್ಕೆ ಮೊದಲಿನ ವಿಮರ್ಶೆಯೆಲ್ಲವೂ ‘ಪ್ರಿ-ಕ್ರಿಟಿಕಲ್’ (ವಿಮರ್ಶಾಪೂರ್ವ) ಹಂತಕ್ಕೆ ಸೇರಿದ ಬರಹಗಳೆ೦ದು ಗುರುತಿಸಬಹುದಾದ್ದು. ಇದೊಂದು ರೀತಿಯ ಟ್ಯಾಕ್ಸಾನಮಿ (taxonomy)ಯ ಅರ್ಥಾತ್ ವರ್ಗೀಕರಣದ ಪ್ರಯತ್ನ. ಪಠ್ಯವೊಂದು ಕವಿತೆಯೇ ಅಲ್ಲವೇ, ಕವಿತೆಯಾಗಿದ್ದರೆ ಅದು ಯಾವ ಪ್ರಕಾರಕ್ಕೆ ಸೇರಿದ್ದು, ಪ್ರಾಸ, ಲಯ, ಅಲಂಕಾರ ವಿಧಾನಗಳೇನು ಹಾಗೂ ಇದನ್ನು ಬರೆದ ಕವಿಯ ಪರಿಚಯವೇನು ಎಂಬಿತ್ಯಾದಿ ಪ್ರಶ್ನೆಗಳು ಇಲ್ಲಿ ಎತ್ತಲ್ಪಡುತ್ತವೆ. ಸಾಹಿತ್ಯ ವಿಮರ್ಶೆಯ ಆಗಮನಕ್ಕೆ ಈ ಪೂರ್ವ ಹಂತವು ಅಗತ್ಯವಾದರೂ ವಿಮರ್ಶೆ ಇಲ್ಲಿಗೆ ನಿಲ್ಲುವುದಿಲ್ಲ; ಅಥವಾ ಇಂಥ ಪ್ರಶ್ನೆಗಳು ಕೆಲವೊಮ್ಮೆ ಗೌಣವೂ ಆಗಬಹುದು. ನಾವಿಂದು ಸಾಹಿತ್ಯ ವಿಮರ್ಶೆಯೆ೦ದು ಗುರುತಿಸುವ ಪಠ್ಯ ರೀತಿ ನವ್ಯ ಸಾಹಿತ್ಯದ ಕಾಲದಲ್ಲಿ ಆಧುನಿಕ ಪ್ರಜ್ಞೆಯ ಅಂಗವಾಗಿ ಹುಟ್ಟಿಕೊಂಡದ್ದಾದರೂ, ಇದಕ್ಕೆ ಕೆಲವು ವರ್ಷಗಳ ಮುನ್ನವೇ ಅ.ನ.ಕೃ., ನಿರಂಜನ, ತ.ರಾ.ಸು., ಬಸವರಾಜ ಕಟ್ಟೀಮನಿ ಮುಂತಾದವರು ಭಾಗವಹಿಸಿದ್ದ ಪ್ರಗತಿಶೀಲ ಚಳುವಳಿ ಕೂಡಾ ಸಾಹಿತ್ಯವನ್ನು ನಾವು ನೋಡುವ ರೀತಿಯನ್ನು ಬದಲಿಸಿತು ಎನ್ನುವುದನ್ನು ಇಲ್ಲಿ ನೆನೆದುಕೊಳ್ಳಬೇಕಾಗುತ್ತದೆ. ಪಗತಿಶೀಲತೆ ಸಹಾ ಸಾಹಿತ್ಯ ಚರ್ಚೆಯನ್ನು ಟ್ಕಾಕ್ಸಾನಮಿಗಿ೦ತ ಮುಂದಕ್ಕೆ ತೆಗೆದುಕೊಂಡು ಹೋಯಿತು-ಸಾಹಿತ್ಯದ ಓದನ್ನು ಸಮಾಜದ ವಿಶ್ಲೇಷಣೆಯಾಗಿ ಮಾರ್ಪಡಿಸಿದವರೇ ಪ್ರಗತಿಶೀಲರು.

ಆದರೂ ಸಾಹಿತ್ಯ ವಿಮರ್ಶೆ ವಿಪುಲವಾಗಿ ಬೆಳೆದುದು ನವ್ಯದ ಸಂದರ್ಭದಲ್ಲೇ. ಎಂ.ಜಿ. ಕೃಷ್ಣಮೂರ್ತಿ, ಯು. ಆರ್. ಅನಂತಮೂರ್ತಿ, ಶಾಂತಿನಾಥ ದೇಸಾಯಿ. ಜಿ. ಎಚ್. ನಾಯಕ, ಸುಮತೀಂದ್ರ ನಾಡಿಗ, ಪಿ. ಲಂಕೇಶ್, ಬಿ. ದಾಮೋದರ ರಾವ್, ಗಿರಡ್ಡಿ ಗೋವಿಂದರಾಜ್ ಮೊದಲಾದವರ ಹೆಸರು ಇಲ್ಲಿ ಉಲ್ಲೇಖನೀಯ. ಹೊಸತೊಂದು ಕೃತಿ ಬಂದರೆ ಅದನ್ನು ವಿಮರ್ಶಿಸಲು ವಿಮರ್ಶಕರ ತಂಡವೇ ಸಿದ್ಧವಿತ್ತು. ಇಂಥ ವಿಮರ್ಶೆಗಳು ಮುಖ್ಯವಾಗಿ ವಿಚಾರ ಸಂಕೀರ್ಣಗಳಲ್ಲಿ ಓದುವ ಪ್ರಬಂಧಗಳ ಹಾಗೂ ತದನಂತರದ ಚರ್ಚೆಯ ರೂಪದಲ್ಲಿದ್ದು, ಇವು ಕೆಲವೊಮ್ಮೆ ಅಡಿಗರ ‘ಸಾಕ್ಷಿ’ಯಲ್ಲಿ ಅಥವಾ ಪತ್ಯೇಕವಾಗಿ ಪುಸ್ತಕರೂಪದಲ್ಲಿ ಪ್ರಕಟಗೊಳ್ಳುತ್ತಿದ್ದುವು. ಗಮನಿಸಬೇಕಾದ ಅಂಶವೆಂದರೆ ಇಂಥ ಹಲವರು ತಮ್ಮನ್ನು ವಿಮರ್ಶಕರೆ೦ದು ಗುರುತಿಸಿಕೊಳ್ಳದಿದ್ದರೂ ಈ ಸಾಹಿತ್ಯ ಕಾಯಕದಲ್ಲಿ ತೊಡಗಿರುತ್ತಿದ್ದುದು. ಇದರಲ್ಲಿ ಅನಂತಮೂರ್ತಿಯವರದ್ದು ಒಂದು ಮಾದರಿ ನಿದರ್ಶನ: ಅನಂತಮೂರ್ತಿಯವರು ಕವಿ, ಕತೆಗಾರ, ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದರೂ, ನವ್ಯ ಸಾಹಿತ್ಯವನ್ನು ಅದರಲ್ಲೂ ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು-ಹೊಸ ಜನಾಂಗದ ಓದಿಗೆ ಒಗ್ಗಿಸುವ ಆಗಿನ ಕಾಲದ ಅತ್ಯಗತ್ಯದ ಕೆಲಸವನ್ನು ಮಾಡಿದರು. ಇದೊಂದು ರೀತಿಯಲ್ಲಿ ಇಂಗ್ಲಿಷ್ನಲ್ಲಿ ಟಿ.ಎಸ್. ಎಲಿಯಟ್ ಮಾಡಿದ ಕೆಲಸಕ್ಕೆ ಸಮನಾದುದು. ಸೃಜನಶೀಲ ಲೇಖಕರಾಗಿದ್ದು, ವಿಮರ್ಶೆಯ ಆಕರ್ಷಣೆಗೆ ಒಳಗಾಗಿ ಅದರಲ್ಲೇ ಮುಂದುವರಿದವರೂ ಇದ್ದಾರೆ: ಉದಾಹರಣೆಗೆ, ಕತೆಗಾರರಾಗಿ ಸಾಹಿತ್ಯ ಜೀವನ ಆರಂಭಿಸಿ ನ೦ತರ ವಿಮರ್ಶೆಯಲ್ಲೇ ಪ್ರಧಾನ ಕೊಡುಗೆ ನೀಡಿದ ಗಿರಡ್ಡಿ ಗೋವಿಂದರಾಜ್.

ಕನ್ನಡದ ಸುಪ್ರಸಿದ್ಧ ವಿಮರ್ಶಕರಾಗಿದ್ದ ಎಂ.ಜಿ. ಕೃಷ್ಣಮೂರ್ತಿ, ಕೀರ್ತಿನಾಥ ಕುರ್ತಕೋಟಿ ಮತ್ತು ಡಿ. ಆರ್. ನಾಗರಾಜ್ ಈಗಿಲ್ಲ. ಹಿರಿಯ ತಲೆಮಾರಿಗೆ ಸೇರಿದ ಜಿ. ಎಸ್. ಆಮೂರರು ಆರಂಭದಲ್ಲಿ ಇಂಗ್ಲೀಷ್‌ನಲ್ಲೇ ಕೆಲಸ ಮಾಡುತ್ತಿದ್ದರೂ ನಂತರದ ದಿನಗಳಲ್ಲಿ ಅವರ ಈ ಇಂಗ್ಲಿಷ್ ವಿಮರ್ಶೆಯ ಅನುಭವ ಕನ್ನಡಕ್ಕೆ ದೊರಕುವಂತಾಯಿತು. ಆಮೂರರಿಗಿಂತ ಕಿರಿಯರ ಸಾಲಿನಲ್ಲೀಗ ಸಿ. ಎನ್. ರಾಮಚಂದ್ರನ್, ಕೆ. ವಿ. ನಾರಾಯಣ, ಕಿ. ರಂ. ನಾಗರಾಜ್, ಎಚ್. ಎಸ್. ರಾಘವೇಂದ್ರ ರಾವ್, ಜಿ. ಎನ್. ರಂಗನಾಥರಾವ್, ನರಹಳ್ಳಿ ಬಾಲಸುಬ್ರಮಣ್ಯ, ಟಿ. ಪಿ. ಅಶೋಕ, ರಾಜೇಂದ್ರ ಚೆನ್ನಿ, ಬಸವರಾಜ್ ಕಲ್ಗುಡಿ, ಡಿ. ಎಸ್. ನಾಗಭೂಷಣ, ಕೇಶವ ಶರ್ಮ ಮುಂತಾದವರಿದ್ಧಾರೆ. ಆದರೆ ಇವರೂ ಸದ್ಯ ಹಿರಿಯರ ಸಾಲಿಗೆ ಸೇರಿದವರೇ. ಇವರ ನಂತರದ ಪೀಳಿಗೆಯಲ್ಲಿ ಎಸ್. ಆರ್. ವಿಜಯಶಂಕರ್, ಕೆ. ಸತ್ಯನಾರಾಯಣ, ಬಸವರಾಜ್ ಸಬರದ ಮುಂತಾದವರು ವಿಮರ್ಶಾಪ್ರಜ್ಞೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. (ನಾನಿಲ್ಲಿ ಎಲ್ಲರನ್ನೂ ಹೆಸರಿಸಲಾರದ್ದಕ್ಕೆ ಕ್ಷಮೆಯಿರಲಿ.) ಆದರೆ ಮುಂದೆ ನೋಡಿದಾಗ ಹೆಚ್ಚೇನೂ ಗೋಚರಿಸುವುದಿಲ್ಲ. ‘ನನ್ನ ನ೦ತರ ಪ್ರಳಯ’ ಎಂಬ ಧೋರಣೆಯಿಂದ ಈ ಮಾತನ್ನು ಹೇಳುತ್ತಿಲ್ಲ. ವಿಮರ್ಶಕರು ಬಂದೇ ಬರುತ್ತಾರೆ ನಿಜ. ಆದರೂ ಪ್ರಬುದ್ಧವಾದ ವಿಮರ್ಶೆಗೆ ಪ್ರೋತ್ಸಾಹಕರವಲ್ಲದ ವಾತಾವರಣವೊಂದು ಸಾರ್ವತ್ರಿಕವಾಗಿ ನಿರ್ಮಾಣವಾಗುತ್ತಿರುವಂತೆ ಅನಿಸುತ್ತದೆ. ವಿಮರ್ಶೆಗೆ ಆಳವೂ ಹರವೂ ಆದ ಅಧ್ಯಯನ, ಬಹುಭಾಷಾಪಾಂಡಿತ್ಯ, ಕಾಲಾವಕಾಶ ಅಗತ್ಯ. ಕನಿಷ್ಠ ಸಾಹಿತ್ಯದ ಕುರಿತಾದ ಪ್ಯಾಶನ್ ಆದರೂ ಲೇಖಕನಿಗೆ ಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಇದಕ್ಕೆಲ್ಲ ಅನುವುಗಳು ಎಲ್ಲಿ? ಭಾಷೆ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿರುವವರು ಕಡಿಮೆಯಾಗಿದ್ದಾರೆ. ಪುಸ್ತಕವೊಂದನ್ನು ಆರಂಭದಿಂದ ಕೊನೆತನಕ ಓಮ್ಮೆ ಕೂಡಾ ಓದಲು ಸಮಯವಿಲ್ಲದಿರುತ್ತ, ಮತ್ತೆ ಮತ್ತೆ ಓದಿ ಮನನ ಮಾಡುವವರು ಯಾರಿದ್ದಾರೆ?

ನಮ್ಮ ಪತ್ರಿಕೆಗಳಲ್ಲಿ ಕಳೆದ ಒಂದು ದಶಕದಿಂದ ನಡೆದ ಬದಲಾವಣೆಗಳು ಸದ್ಯದ ಸ್ಥಿತಿಗೆ ಒಂದು ನಿದರ್ಶನವಾಗಬಹುದು. ಕೆಲವು ವರ್ಷಗಳ ಹಿಂದೆ ಪತ್ರಿಕೆಗಳ ಭಾನುವಾರ ಪುರವಣಿಗಳು ಸಾಹಿತ್ಯ ವಿಮರ್ಶೆಗೆ ಹಾಗೂ ಸ೦ವಾದಗಳಿಗೆ ಸಾಕಷ್ಟು ಸ್ಥಳಾವಕಾಶ ಕಲ್ತಿಸುತ್ತಿದ್ದುವು. ೧೯೭೦ರಲ್ಲಿ ಪಿ. ಲಂಕೇಶ್ ಸಂಪಾದಿಸಿ ಅಕ್ಷರ ಪ್ರಕಾಶನದಿಂದ ಪ್ರಕಟಿತವಾದ ‘ಅಕ್ಷರ ಹೊಸ ಕಾವ್ಯ’ದ ಕುರಿತಾಗಿ ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಸುದೀರ್ಘವಾಗಿ ನಡೆದ ವಾದ ವಿವಾದಗಳೇ ಇದಕ್ಕೆ ಸಾಕ್ಷಿ. ಆಗ ಅಂಥ ಚರ್ಚೆ ನಡೆದುದು ಯಾವುದೇ ರಾಜಕೀಯ ಕಾರಣಗಳಿಂದ ಅಲ್ಲ-ಸಾಹಿತ್ಯದ ಮೇಲಿನ ಆಸಕ್ತಿಯಿಂದ ಮಾತ್ರ. ಸದ್ಯ ಇಂಥದೊಂದು ಚರ್ಚೆ ಎಸ್. ಎಲ್. ಭೈರಪ್ಪನವರ ಕಾದಂಬರಿ ‘ಆವರಣ’ದ ಕುರಿತಾಗಿ ನಡೆದರೂ, ಅದು ರಾಜಕೀಯ ಪೇರಿತವಾದ್ದಲ್ಲದೆ ಸಾಹಿತ್ಯ ಪ್ರೀತಿಯಿಂದ ಅಲ್ಲ. ಬಹುಶಃ ಆ ಕಾದಂಬರಿಯೇ ರಾಜಕೀಯವಾದ್ದರಿಂದ ಅದು ಹಾಗಾದ್ದಿರಬಹುದು; ಆದರೆ ಪ್ರಶ್ನೆಯೆಂದರೆ, ರಾಜಕೀಯ ಮಹತ್ವವಿಲ್ಲದ ಸಾಹಿತ್ಯ ಕೃತಿಯೊಂದರ ಬಗ್ಗೆ ಇಷ್ಟೊಂದು ಪುಟಗಳನ್ನು ಪತ್ರಿಕೆಗಳು ನೀಡಲು ತಯಾರಿವೆಯೇ ಎನ್ನುವುದು. ಹಿಂದೆ ಪುಸ್ತಕ ವಿಮರ್ಶೆಯೆನ್ನುವುದು ಸಾಕಷ್ಟು ದೀರ್ಘವಾಗಿದ್ದು ಅದಕ್ಕೆ ಸಾಹಿತ್ಯ ವಿಮರ್ಶೆಯ ಮಹತ್ವ ದೊರಕುತ್ತಿತ್ತು. ಈಗಲಾದರೆ ಪತ್ರಿಕಾಲೇಖನಗಳೆಲ್ಲ ಕುಬ್ಜವಾಗುತ್ತ ಬಂದು ಪುಸ್ತಕ ವಿಮರ್ಶೆ ಕೇವಲ ಪುಸ್ತಕ ಪರಿಚಯವಾಗುತ್ತಿದೆ. ಅದಕ್ಕೂ ಪತ್ರಕರ್ತರ ವಶೀಲಿ ಮಾಡಬೇಕಾಗುತ್ತದೆ ಎಂಬ ವದಂತಿಯೂ ಇದೆ! ತಿಂಗಳಿಗೆ ಒಮ್ಮೆಯಾದರೂ ಟೈಮ್ಸ್ ಲಿಟರರಿ ಸಪ್ಲಿಮೆಂಟಿನಂಥ ಪುರವಣಿಯೊಂದನ್ನು ತನ್ನಿ ಎಂದು ಎಷ್ಟು ವಿನಂತಿಸಿಕೊಂಡರೂ ಪತ್ರಿಕೆಗಳು ಇಂಥ ಸಾಹಸಕ್ಕೆ ಕೈಯಿಕ್ಕುತ್ತಿಲ್ಲ.

ಇದಕ್ಕೆಲ್ಲ ಪತ್ರಿಕೆಗಳ ಉತ್ತರವೆಂದರೆ ಗಂಭೀರವೂ ಸುದೀರ್ಘವೂ ಆದ ಸಾಹಿತ್ಯಿಕ ಲೇಖನಗಳನ್ನು ಜನ ಓದುವುದಿಲ್ಲ ಎನ್ನುವುದು. ಇದು ವಾಸ್ತವವೇ ಆಗಿರಬಹುದು. ಆದ್ದರಿ೦ದ ಪತ್ರಿಕೆಗಳನ್ನು ದೂರಿ ಪ್ರಯೋಜನವೂ ಇಲ್ಲ. ಮುದ್ರಣ ಮಾಧ್ಯಮಗಳು ದೃಶ್ಯ ಮಾಧ್ಯಮಗಳ ಜತೆ ಪೈಪೋಟಿ ನಡೆಸಬೇಕಾಗಿ ಬಂದಿರುವುದು ದುರದೃಷ್ಟವೇ ಸರಿ. ಆದ್ದರಿಂದಲೇ ಇಲಿ ಗಾತ್ರದ ಲೇಖನಕ್ಕೆ ಆನೆ ಗಾತ್ರದ ಚಿತ್ರಗಳು ಕಾಣಿಸುತ್ತಿರುವುದು. ಪತ್ರಿಕೆಗಳು ಓದಿ ಮನನ ಮಾಡುವ ಮಾಧ್ಯಮಗಳಾಗಿರದೆ, ನೋಡಿ ಒಗೆಯುವ ಸಾಧನಗಳಾಗಿವೆ. ಸದ್ಯದ ವೇಗವರ್ಧಕ ಯುಗದಲ್ಲಿ ಮನಃಪಟಲದ ಮೇಲೆ ಛಾಯಾಚಿತ್ರಗಳು ಎಷ್ಟು ಧಾವಂತದಲ್ಲಿ ಹಾಯ್ದು ಹೋಗುತ್ತಿವೆಯೆಂದರೆ ಯಾವುದೂ ದೀರ್ಘಕಾಲದ ಪರಿಣಾಮಗಳನ್ನು ಬೀರುವುದಿಲ್ಲ. ಇದು ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಗಳನ್ನು ನೋಡಿದಂತೆ: ಒಂದರ ಮೇಲೊಂದನ್ನು ನೋಡುತ್ತಲೇ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ.

ಇಂಥ ಪರಿಸ್ಥಿತಿಯಲ್ಲಿ ಸಾಹಿತ್ಯ ಸ೦ವಾದಕ್ಕೇ ಮೀಸಲಾದ ಚಿಕ್ಕ ಪತ್ರಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಇರಬೇಕು; ಆದರೆ ಇಲ್ಲ. ಚಿಕ್ಕ ಪತ್ರಿಕೆಗಳು ಸಾಕಷ್ಟು ಜನರನ್ನು ತಲುಪುತ್ತಿಲ್ಲ ಎನ್ನುವುದೊಂದು ಸಮಸ್ಯೆಯಾದರೆ ಅವಕ್ಕೆ ಕೂಡಾ ಮೌಲಿಕ ಲೇಖನಗಳ ಕೊರತೆಯಿದೆ ಎನ್ನುವುದು ಇದಕ್ಕಿಂತಲೂ ಗಂಭೀರವಾದ ಸಮಸ್ಯೆ. ಈಚೆಗೆ ಅ೦ಬೆಗಾಲಿಡುತ್ತಿರುವ ಅಂತರ್ಜಾಲ ಪತ್ರಿಕೆಗಳು ಈ ನಿಟ್ಟಿನಲ್ಲಿ ಎಷ್ಟು ಪರಿಣಾಮಕಾರಿಯೋ ಕಾದುನೋಡಬೇಕಾಗಿದೆ.

ವಿಮರ್ಶೆಯಾದರೂ ಯಾಕೆ ಬೇಕು ಎ೦ದು ಕೇಳುವವರಿದ್ದಾರೆ. ಇದಕ್ಕೆ ಸಾಕ್ರೆಟಿಸ್ ಎರಡು ಸಾವಿರ ವರ್ಷಗಳ ಹಿಂದೆಯೇ ಉತ್ತರ ನೀಡಿದ್ದಾನೆ: ಪರಿಶೀಲನೆಗೆ ಒಳಗಾಗದ ಜೀವನ ಜೀವಿಸಲು ಯೋಗ್ಯವಲ್ಲ ಎಂದು. ಆದರೆ ವಿಮರ್ಶೆ ಯಾಕೆ ಎನ್ನುವ ಮಂದಿ ವಿಜಕ್ಕೂ ವಿಮರ್ಶೆಯನ್ನು ನಿರಾಕರಿಸಿ ಈ ಮಾತನ್ನು ಹೇಳುತ್ತಿಲ್ಲ. ಐಡಿಯಲಾಗ್ ಜನರು (ಎಂದರೆ ಸಿದ್ಧಾಂತಿಗಳು) ಕೃತಿ ಎನ್ನುವುದನ್ನೊಂದು ಗೂಟವಾಗಿಸಿ ತಂತಮ್ಮ ಸಿದ್ಧಾಂತಗಳನ್ನು ತೂಗುಹಾಕುವ ಅತಿರೇಕಗಳಿಗೆ ಇಂಥ ಮಾತುಗಳು ಬರುತ್ತವೆ. ಉದಾಹರಣೆಗೆ, ಫ್ರಾಯ್ಡಿಯನರಿಗೆ ಮನುಷ್ಯನ ಪ್ರತಿಯೊಂದು ವರ್ತನೆಯೂ ಲೈಂಗಿಕ ದಮನದ ಸಂಕೇತವಾದರೆ, ಮಾರ್ಕ್ರಿಸ್ಟರಿಗೆ ಪ್ರತಿಯೊಂದು ಸಂಗತಿಯೂ ಆರ್ಥಿಕ ಶೋಷಣೆಯ ಕುರುಹಾಗಿ ಕಾಣಿಸುತ್ತದೆ; ಅದೇ ರೀತಿ ಎಲ್ಲ ತರದ ವರ್ಗೀಕರಣವೂ ದಲಿತವಾದಿಗಳಿಗೆ ಜಾತಿ ಪದ್ಧತಿಯ ಕರಾಳತನವೆಂದು ತೋರಿದರೆ, ಸ್ತ್ರೀವಾದಿಗಳಿಗೆ ಲಿಂಗ ತಾರತಮ್ಯದ ಪರಣಾಮವೆಂದು ಅನಿಸುತ್ತದೆ. ನಾನಿದನ್ನೆಲ್ಲ ಅತಿ ಸರಳೀಕರಿಸಿ ಇಲ್ಲಿ ಹೇಳುತ್ತಿರುವುದರಿಂದ ಇದು ಅಸಹಜ ಎನಿಸಬಹುದಾದರೂ, ನಿಷ್ಪಕ್ಷಪಾತವಾಗಿ ನೋಡಿದರೆ ಸಾಹಿತ್ಯ ವಿಮರ್ಶೆಯಲ್ಲಿ ಇಂಥ ವಿಪರ್ಯಾಸಗಳು ಆಗಾಗ ಕಾಣಿಸಿಕೊಂಡಿವೆ ಎನ್ನುವುದನ್ನು ಬಹುಶಃ ಯಾರೂ ಅಲ್ಲಗಳೆಯಲಾರರು. ೧೯೭೦ರ ದಶಕದಷ್ಟು ಹಿಂದೆಯೇ ಸೂಸನ್ ಸೊಂಟಾಗ್ ತನ್ನ Against Criticism (`ವಿಮರ್ಶೆಯ ವಿರುದ್ಧ’) ಎಂಬ ಲೇಖನದಲ್ಲಿ ಇದರ ಕುರಿತಾಗಿ ಎಚ್ಚರಿಕೆ ನೀಡಿದ್ದಳು.

ಆದರೆ ವಿಮರ್ಶೆಯ ಕುರಿತಾದ ಅಸಹನೆ ಮೂಲತಃ ಸಾಹಿತ್ಯದ ಕುರಿತಾದ ಅಸಹನೆ ಮೂಲತಃ ಅಕ್ಷರ ಸಂಸ್ಕೃತಿಯ ಕುರಿತಾದ ಅಸಹನೆ. ಅಕ್ಷರ ಸಂಸ್ಕೃತಿ ಇಂದು ಪರಸ್ಪರ ವಿರುದ್ಧವಾದ ಇಬ್ಬಗೆಯ ಧಾಳಿಗಳನ್ನು ಎದುರಿಸಬೇಕಾಗಿದೆ. ಒಂದು, ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಜನರ ಪರವಾದ ವಾದ: ಅಕ್ಷರ ಸಂಸ್ಕೃತಿ ಶೋಷಣೆಗೆ ಕಾರಣವಾದ್ದರಿಂದ ಅಕ್ಷರವೇ ಗುಮಾನಿಯದು ಎಂಬ ತರ್ಕ. ಇನ್ನೊಂದು: ವಾಲ್ಟರ್ ಜೆ. ಓಂಗ್ ಹೇಳುವ ಅಧುನಿಕ ಯುಗದ secondary orality(ದ್ವಿತೀಯ ಮೌಖಿಕತೆ); ಎಂದರೆ ತಾಂತ್ರಿಕ ಯುಗದ ಅಕ್ಷರಸ್ಥರು ಸಹಾ ಮತ್ತೆ ಮೌಖಿಕತೆಯ ಕಡೆಗೆ ಮರಳುವುದು. ಇಂದು ನಾವು ವ್ಯಾಪಕವಾಗಿ ಬಳಸುತ್ತಿರುವ ಸೆಲ್ ಫೋನ್ ಇದಕ್ಕೊಂದು ಉದಾಹರಣೆ. (ಓಂಗ್ ಈ ಮಾತನ್ನು ಹೇಳಿದಾಗ ಸೆಲ್ ಫೋನ್ ಇನ್ನೂ ಬಳಕೆಗೆ ಬಂದಿರಲಿಲ್ಲ ಎನ್ನುವುದು ಆತನ ಕಾಲಜ್ಞಾನ ಗುಣವನ್ನು ಸೂಚಿಸುತ್ತದೆ! ನೋಡಿ; ವಾಲ್ಟರ್ ಜೆ. ಓಂಗ್: Orality and Literacy: Technologizing the world, ೧೯೮೨.)

ಸಾಹಿತ್ಯವಾಗಲಿ ವಿಮರ್ಶೆಯಾಗಲಿ ಇಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿಕೊಂಡೇ ಮುಂದುವರಿಯಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಯಾಸಿ ರತ್ನ
Next post ಇದೊ, ಶ್ರಾವಣ ಬಂದಿದೆ!

ಸಣ್ಣ ಕತೆ

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys