ರೈತ ಸಂದರ್ಶನ

ರೈತ ಸಂದರ್ಶನ

ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನೇ ಸಂದರ್ಶಿಸುವುದು ರೂಢಿಯಾಗಿಬಿಟ್ಟಿದೆ. ಇದರಿಂದಾಗಿ ತಿಳಿದವರ ಬಗ್ಗೆಯೇ ತಿಳಿಯುತ್ತ ಹೋಗುವ ಏಕಮುಖ ಬೆಳವಣಿಗೆಯ ಅಪಾಯದತ್ತ ಅರಿವಿಲ್ಲದೆಯೇ ಅಡಿ ಇಡುತ್ತಿದ್ದೇವೆ. ಈ ಅಪಾಯದಿಂದ ಪಾರಾಗಿ ಒಂದು ಆರೋಗ್ಯಕರ ಹಾದಿಯನ್ನು ಹಿಡಿಯುವ ಹಂಬಲದಿಂದ ಅನಿವಾರ್ಯವಾಗಿ ಭಿನ್ನ ರೀತಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಾಗಿದೆ.

ದೇಶದ ಬೆನ್ನೆಲುಬು ರೈತ ಎಂದು ಅವನನ್ನು ಬೆನ್ನ ಹಿಂದೆಯೇ ಜೋಪಾನವಾಗಿ ಕಾಯ್ದಿರಿಸಿದ್ದೇವೆ. ಎಲ್ಲರ ಉಸಿರಿಗೂ ಉಸಿರಾದವನ ಉಸಿರಿನ ಬಗ್ಗೆ ನಮಗೆ ಯೋಚನೆಯೇ ಇಲ್ಲ. ವಾಸ್ತವದಲ್ಲಿ ಅವನ ಸ್ಥಿತಿಗತಿ, ಬದುಕಿನ ರೀತಿ ನೀತಿ, ತಿಳಿವಳಿಕೆಯ ಮಟ್ಟ. ಆಸೆ ಆಕಾಂಕ್ಷೆಗಳನ್ನು ಅರಿವ ಅರಿವು ನಮಗಾಗಿಲ್ಲ. ಆದಕಾರಣವೇ ನಮ್ಮ ದೇಶದ ಸ್ಥಿತಿಗತಿ ಮೇಲ್ನೋಟಕ್ಕೆ ಬದಲಾದಂತೆ ಕಂಡರೂ ಅಂತರಂಗದಲ್ಲಿ ಹಳೆಯದಾಗಿಯೇ ಉಳಿದು ಯಾವ ಬದಲಾವಣೆಗೂ ತೆರೆದುಕೊಳ್ಳದೆ ಸಂಕುಚಿತವಾಗುತ್ತಿದೆ. ರೈತನೊಂದಿಗೆ ಉಳಿದವರ ಸಂಬಂಧ ಎಂದಿನವರೆಗೆ ನೈಜ ರೀತಿಯಲ್ಲಿ ಬೆಸೆದುಕೊಳ್ಳುವುದಿಲ್ಲವೋ ಅಂದಿನವರೆಗೂ ದೇಶವನ್ನು ಆವರಿಸಿರುವ ಗಾಡಾಂಧಕಾರ ದೂರವಾಗುವುದಿಲ್ಲ. ಪಶ್ಚಿಮದಲ್ಲಿ ಸೂರ್ಯೋದಯವನ್ನರಸುತ್ತಿರುವ ದೇಶದ ದೃಷ್ಟಿ ಬದಲಾಗುವುದಿಲ್ಲ. ಈ ಸಂದರ್ಶನದ ರೈತ ಚನ್ನೇಗೌಡರು ಹಾಸನ ಜಿಲ್ಲೆಯ ಜನಿವಾರ ಗ್ರಾಮದವರು. ಇವರ ಸಂದರ್ಶನ ಬಹುತೇಕ ರೈತರ ಬದುಕಿನ ಪ್ರತಿನಿಧಿಕವಾಗುವುದು, ನಮ್ಮ ಹಳ್ಳಿಗಳ ಜಡ ಬದುಕಿಗೆ ಉದಾಹರಣೆಯಾಗಬಲ್ಲದು.

-ನಮಸ್ಕಾರ, ನಿಮ್ಮ ಹೆಸರು ?
ಚನ್ನೇಗೌಡ
-ವಯಸ್ಸು ?
೩೫
-ಮದುವೆ, ಮಕ್ಕಳು ?
ಆಗೈತೆ. ಎಲ್ಡು ಹೆಣ್ಣು, ಎಲ್ದು ಗಂಡು.
– ಎಲ್ಲಿಯವರೆಗೆ ಓದಿದ್ದೀರಾ ?
ಐದನೆ ಕಿಲಾಸು.
– ಆಸ್ತಿ
ಎಲ್ಡೂವರೆ ಎಕರೆ. ಅದ್ರಲ್ಲಿ ಗದ್ದೆ ಅರ್ಧ ಎಕರೆ.
-ಸ್ವಯಾರ್ಜಿತ ಎಷ್ಟು ? ಪಿತ್ರಾರ್ಜಿತ ಎಷ್ಟು ?
ಒಂದೆಕ್ರೆ ಸ್ವಯಾರ್ಜಿತ, ಮಿಕ್ಕಿದ್ದು ಪಿತ್ರಾರ್ಜಿತ.
-ಸರಿ. ಇಷ್ಟು ನಿಮ್ಮ ಸಂಸಾರಕ್ಕೆ ಸಾಕಾಗುತ್ತ?
ಎಲ್ಲಾತೈತೆ ತಗಳ್ಳಿ.
-ಮತ್ತೆ ?
ಕೂಲಿ ಪಾಲಿ ಮಾಡ್ತೀನಿ.
-ಕೂಲಿಮಾಡಿ ವರ್ಷಕ್ಕೆ ಎಷ್ಟು ಸಂಪಾದನೆ ಮಾಡ್ತೀರಿ ?
೪೦೦ ರಿಂದ ೫೦೦ ರೂಪಾಯಿ ಮಾಡ್ತೀನಿ.
-ಅಷ್ಟರಿಂದ ನಿಮ್ಮ ಸಂಸಾರಕ್ಕೆ ಸಾಕಾಗುತ್ತ ?
ಇಲ್ಲ. ಹೆಚ್ಚು ಕಮ್ಮಿ ಇದ್ದಂಗೆ ಮಾಡಾದು.
-ನೀವು ಐದನೆ ಕ್ಲಾಸಿನವರೆಗೆ ಓದಿದ್ದೀನಿ ಅಂದ್ರಿ. ನಿಮ್ಮ ಮಕ್ಕಳನ್ನ ಎಲ್ಲಿವರೆಗೆ ಓದುಸ್ಬೇಕು ಅಂತ ತೀರ್ಮಾನಮಾಡಿದ್ದೀರಿ ?
ಆವರ ಹಣೇಲಿ ಬರ್ದಂಗೆ.
-ಅಂದ್ರೆ ನಿಮ್ಮ ಮನಸ್ಸಿನಲ್ಲಿರೋದು ?
ನನ್ನ ಆತ್ಮದಾಗೆ ಓದಿಸ್ಬೇಬೇಕು ಅಂತ ಐತೆ.
– ಎಲ್ಲೀವರೆಗೆ ?
ನ್ವಾಡಿ, ಎಲ್ರೂನೂ ಓದ್ಸಾಕಾಗಕಿಲ್ಲ. ಆರಂಬಕ್ಕೆ ಬೇಕಲ್ಲ ! ಓದಾರು ಎಲ್ಲಿವರ್ಗೆ ಕಲೀತಾರೋ ಯಂಗೆ ಯೇಳಾದು.
-ನಿಜ, ಒಬ್ಬ ಹುಡುಗನಿಗೆ ಒಂದು ವರ್ಷಕ್ಕೆ ಓದೋದಕ್ಕಾಗಿ ಎಷ್ಟು ಖರ್ಚುಮಾಡ್ತೀರಿ?
ಏನಿಲ್ಲ ಅಂದ್ರು, ಬಟ್ಟೆ ಬರೆ ಎಲ್ಲ ಸೇರಿ ಒಂದಿನ್ನೂರೂಪಾಯಿ ಆಯ್ತದೆ.
-ಅಂದ್ರೆ ನಿಮ್ಮ ದುಡಿಮೆ ಆದಕ್ಕೆ ಸಾಕಾಗುತ್ತದೆಯೆ ?
ಅದ್ಕೆ ಕೆಲವ್ರುನ್ನ ಆರಂಬಕ್ಕೆ ಹಾಕ್ತೀನಿ?
-ಹಣ ಸಾಕಾದ್ರೆ ಎಲ್ರುನ್ನು ಓದುಸ್ತೀರ ಅನ್ನಿ ?
ಇಲ್ಲ ಜಮೀನಿಗೆ ಒಬ್ರು ಬೇಕಲ್ಲ !
-ಅಂದ್ರೆ ಜಮೀನಿನಲ್ಲಿ ಇರೋರು ಓದಬಾರದು ಅಂತಲೆ ?
ಓದಿದ್ರೆ ಅವ್ರು ಜಮೀನಿನಾಗೆ ಗೆಯ್ಯಬೇಕಲ್ಲ.
-ಅಂದ್ರೆ ಓದಿದೋರು ಕೆಲಸಮಾಡಲ್ಲ, ಅಂತ್ಲೆ ?
ಏ, ಎಲ್ಲಿ ಮಾಡ್ತಾರೆ ತಗಳ್ಳಿ, ಎಲ್ಲ ಗಿಲೀಟಿನ ಬದುಕು; ಅತ್ಲಾಗೂ ಇಲ್ಲ . ಇತ್ಲಾಗೂ ಇಲ್ಲ.
-ಅಂದಹಾಗೆ ಚನ್ನೇಗೌಡ್ರೆ, ನಿಮ್ಮ ದಿನ ನಿತ್ಯದ ಜೀವನ ಹೇಗೆ ? ಅಂದ್ರೆ ?
-ಅಂದ್ರೆ ನೋಡಿ, ನೀವು ಬೆಳಿಗ್ಗೆ ಹಾಸಿಗೆಯಿಂದೆದ್ದು….
ಅಯ್ಯೋ ಹಾಸ್ಗೆ ಎಲ್ಲಿ ಬಂತು ? ಚಾಪೆ ಗೋಣಿಚೀಲ ಅನ್ನಿ.
-ಹ್ಞು, ಹಾಗೆ ಅಂದ್ಕೊಳ್ಳಿ. ಚಾಪೆ ಮೇಲಿಂದ ಎದ್ದು ಮತ್ತೆ ರಾತ್ರಿ ಮಲ್ಗೋವರ್ಗೂ ಏನೇನ್ ಮಾಡ್ತೀರಾ ? ಐದು ಘಂಟೆಗೆ ಏಳಾದು, ಸಪ್ಪುಸದೆ ತರಾದು, ದನಕರ ಕಟ್ಟಾದು. ಕಸ ಬಾಚಾದು, ಆರಂಭ ಕೆಲಸ್ಕ ಹೋಗಾದು, ಸಂಜಿನಾಗ ಬಂದು ದೇವ್ರಿಗೆ ಧೂಪಹಾಕಿ ಉಂಡು ಮಲಗಾದು.
-ನಿಮ್ಮ ನಿತ್ಯದ ಊಟ ತಿಂಡಿ ಹೇಗೆ ?
ವತ್ತರಿಕೆ ಒಂದು ರಾಗಿರೊಟ್ಟಿ, ಮಧ್ಯಾನ್‌ದಾಗ ರಾಗಿಮುದ್ದೆ, ಅನ್ನ ಸಾರು. ರಾತ್ರಿನಾಗ ಮತ್ತೆ ರಾಗಿಮುದ್ದೆ, ಅನ್ನಸಾರು.
-ಸಾಯಂಕಾಲ ತಿಂಡಿ ಏನೂ ತಿನ್ನಲ್ಲವೆ ?
ಇಲ್ಲ ಎಂದಾದ್ರು ಒಂದೊಂದಿನ ತಂಗ್ಳ ತಿನ್ನಾದು.
-ಅಂದ್ರೆ ಇಡೀ ವರ್ಷವೆಲ್ಲ ಹೀಗೆ! ಹೂಂ, ಹಬ್ಬಹರಿದಿನದಾಗ, ಜಾತ್ರಿನಾಗ ಬಿಟ್ಟರೆ ಎಣ್ಣೆತಿಂಡಿ, ಪಾಯಸ, ಮಾಂಸ, ಮೀನು ಒಂದೀಟು ಇರುತ್ತೆ.
-ಯಾವ ಯಾವ ಹಬ್ಬ ಮಾಡ್ತೀರಿ? ಗೌರಿಹಬ್ಬ, ಮಳೆಹಬ್ಬ, ದೀಪಾವಳಿ, ಉಗಾದಿ, ಊರಿನಜಾತ್ರೆ.
-ಪ್ರತಿ ಹಬ್ಬದಲ್ಲೂ ಹೊಸ ಬಟ್ಟೆ ಹೊಲಿಸ್ತೀರಿ ?
ಇಲ್ಲ, ಇಲ್ಲ. ಅಯ್ಯೋ! ಎಲ್ಲಿಂದ ಬಂತು? ವರ್ಸಕ್ಕೆ ಎಲ್ಡು ಷರಟು, ಎಲ್ಡು ನಿಕ್ಕಾರು, ಎಲ್ಡು ಬನೀನು, ಎಲ್ಡು ವಲ್ಲಿ (ಟವಲ್) ಮತ್ತೆ ವಂದು ಪಂಜೆ (ಪಂಚೆ).
-ನಿಮ್ಮದು ಯಾವ ಧರ್ಮ ?
ಧರ್ಮ ಅಂದ್ರೆ, ಎಲ್ಲಾರ ಧರ್ಮನೆ ನಮ್ದು.
-ಅಲ್ಲ ಅಲ್ಲ ಹಾಗಲ್ಲ. ನೋಡಿ ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ. ಇಸ್ಲಾಂ ಧರ್ಮ, ಜೈನಧರ್ಮ, ಬೌದ್ಧಧರ್ಮ ಇತ್ಯಾದಿ ಬೇರೆ ಬೇರೆ ಧರ್ಮಗಳಿವೆ. ಅದರಲ್ಲಿ ನಿಮ್ಮದು ಯಾವ ಧರ್ಮ ?
ನಮ್ಮದು ಒಕ್ಕಲಿಗ ಧರ್ಮ
– ಒಕ್ಕಲಿಗ ಅನ್ನೋದು ಜಾತಿ ಅಲ್ಲವೆ. ಧರ್ಮ ಹೇಗಾಗುತ್ತೆ ?
ಅದೇನೋ ನಂಗೆ ತಿಳ್ಯಾಕಿಲ್ಲ.
– ಆಯ್ತು, ಜಾತಿ ಅಂದ್ರೆ ಏನು ? ಅದನ್ನಾದ್ರು ಹೇಳಬಹುದಲ್ಲ ?
ಜಾತಿ ಅಂದ್ರೆ! ಒಬ್ಬಬ್ಬರದು ಒಂದೊಂದು ಜಾತಿ ಐತಲ್ಲ.
-ಯಾವ ಯಾವುದು ಅಂತೀರಿ ಗೌಡಗಳು, ವಷ್ಟಮರು(ವೈಷ್ಣವರು), ಕುರುಬರು, ನೊಣಬರು, ಲಿಂಗಾತ್ರು , ಹೋಲೀರು, ಬಾಂಬ್ರು, ಮಾದಿಗರು, ಹಾರವರು, ಸಾಬರು, ಗೊಂಬೆರಾಮ್ರು, ಕುಟುಂಬ್ರು , ಮಂಡ್ರು, ಹಂದಿ ಚಿಕ್ಕ್ರು ಇಂಗೆ….
-ಚನ್ನೇಗೌಡ್ರೆ, ಇಷ್ಟೆಲ್ಲಾ ಜಾತಿ ಐತಲ್ಲ, ಇದನ್ನೆಲ್ಲಾ ಯಾರು ಮಾಡಿದ್ರು ಅಂತೀರಿ?
ಯಾರು ಮಾಡಿದ್ರು ಅಂದ್ರೆ ? ಇದೊಳ್ಳೆ ಚಂದಾಯ್ಲಲ್ಲ !
-ಅಂದ್ರೆ , ಇದು ಮನುಷ್ಯರು ಮಾಡಿದ್ದೋ ಅಥವಾ ದೇವ್ರು ಮಾಡಿದ್ದೋ?
ಅದೇನೋ ನಂಗೆ ತಿಳಿಯಾಕಿಲ್ಲ. ಹಿಂದಿನಿಂದ ಮಾಡ್ಕೊಂಡು ಬಂದವ್ರೆ, ನಾವು ಮಾಡ್ಕಂಡು ಹೋಗಾದು. ಅಂಗೆ ನಮ್ಮ ಮಕ್ಳು ಮಾಡ್ಕಂಡು ವಾಗ್ಬೇಕು.
-ಜಾತಿ ಅನ್ನೋದೆಲ್ಲಾ ಸುಳ್ಳು ಅನ್ಸಿಲ್ಲವಾ, ನಿಮಗೆ ?
ಆದೆಂಗನ್ಸುತ್ತೆ.
-ಅಂದ್ರೆ ಎಲ್ಲರೂ ಮನುಷ್ಯರೆ. ಎಲ್ಲರ ಮೈಲೂ ಇರೋದು ರಕ್ತ ಮಾಂಸವೆ, ಆಂತದ್ರಲ್ಲಿ ಅವನು ಆ ಜಾತಿ, ಇವನು ಈ ಜಾತಿ ಅಂತ ಅನ್ನೋದು ಯಾಕೆ. ಮನುಷ್ಯ ಅಂದ್ರೆ ಆಗೋದಿಲ್ಲವೆ ?
ಎಲ್ರು ಮನುಷ್ಯರೆ. ಆದರೆ ಹಿಂದಿನೋರು ಮಾಡ್ಬುಟ್ಟವರಲ್ಲ !
-ಅವರು ಮಾಡಿದರೇನಂತೆ, ನಾವು ಬಿಟ್ಟುಬಿಡೋದು.
ಅದೆಂಗಾಯ್ತೀತೆ, ಅಂಗಂತ ಜಾತಿ ಕೆಟ್ಟೋರನ್ನೆಲ್ಲಾ ಮನೀಗೆ ಸೇರಿಸ್ಕಂತಾರ!
-ಜಾತಿ ಕೆಟ್ಟವರು ಅಂದ್ರೆ ಯಾರು ?
ಹೋಲೆರು,
-ಹೇಗೆ ?
ಅವ್ರು ತಿನ್ನಬಾರದ ಪದಾರ್ಥ ತಿನ್ತಾರೆ,
-ಪದಾರ್ಥ ತಿಂದರೆ ಏನಂತೆ. ಅಚ್ಚುಕಟ್ಟು ತಾನೆ ಮುಖ್ಯ ?
ಆದ್ರು ಸೇರಿಸೋಕೆ ಹೀಯಾಳಿಸುತ್ತೆ.
-ಹಾಗಂತ ನಿಮ್ಮ ಮನಸ್ಸಿನಲ್ಲಿ ನೀವು ಅಂದುಕೊಂಡಿರೋದ್ರಿಂದ ಹಾಗಾಗುತ್ತೆ, ಅಲ್ವೆ?
ಒಂದ್ಪಕ್ಷ ನಾವು ಸೇರ್ಸಿದ್ರು, ಊರಿನವರು ಒಪ್ಪಬೇಕಲ್ಲ ! ನಮ್ಮನ್ನ ಹೊರಗಾಕ್ತಾರೆ. ದಿಟ, ಅಂಗಾರೆ ನಮ್ನನ್ನ ಬಾಂಬ್ರು ಮನೀಗೆ ಸೇರಿಸ್ಕಂತಾರ? ಏ ಅಲ್ಲೆ ಅಟ್ಟಿನಾಗಿರೋ ಅಂತಾರೆ.
-ಅಂದ್ರೆ ನೀವು ಬ್ರಾಹ್ಮಣರ ಮನೆಗೆ ಹೋಗಿದ್ದೀರಾ ಅನ್ನಿ?
ಹೌದು.
-ಯಾವಾಗ ಹೋಗಿದ್ರಿ , ಎಲ್ಲಿ?
ಹಾಸನದ ಜೋಯಿಸ್ರು ಮನೀಗೆ.
-ಯಾತಕ್ಕೆ ಹೋಗಿದ್ರಿ ?
ಇಂಗೆ ಇತ್ತಾವಲ್ಲ, ಮಳೆ ಪಳೆ, ತಾಯಿತ, ಸಾಸ್ತ್ರ ಅಂತ.
-ಅವರು ಒಳಕ್ಕೆ ಸೇರುಸ್ತೆ ಅಲ್ಲೆ ಇರೋ ಅಂತಾಂದ್ರು ಅಂದ್ರಲ್ಲ ಆಗ ನಿಮಗೆ ಏನನ್ನುಸ್ತು?
ಏನ್ ಇವ್ರ ಮಯ್ಯಾಗೆ ಚಿನ್ನ ಹರೀತೀತಾ, ಯಾಕಂಗಾಡ್ತಾರೆ ಅನ್ನುಸ್ತು.
-ನೋಡಿ ನಿಮಗೆ ಹಾಗೆ ಅನ್ನುಸುತ್ತಲ್ಲಾ, ನೀವು ಹೊಲೇರನ್ನ ಮನೆಗೆ ಬರಬೇಡ ಅಂದಾಗ ಅವರ ಮನಸ್ಸಿಗೆ ಹಾಗೆ ಅನ್ಸೋದಿಲ್ಲವೆ
ಅನ್ಸಿದ್ರೆ ಏನ್ಮಾಡಾದೇಳಿ. ಹಿಂದಿನೋರು ಅಂಗೆ ಮಾಡವ್ರಲ್ಲ! ಅಂಗಾರೆ ಬಾಂಬ್ರು ನಮ್ಮ ಸೇರಿಸ್ಕಂತಾರಾ?
-ಜೋಯಿಸರ ಹತ್ತಿರ ಹೋಗಿದ್ದೆ ಅಂದ್ರಿ, ಮಳೆ ಬೆಳೆ ಕೇಳೋದಿಕ್ಕೆ. ಅವರು ಹೇಳಿದ ಹಾಗೆ ಮಳೆ ಬೆಳೆ ಆಗಿದೆಯೆ? ಇಲ್ಲ ತಗಳಿ.
-ಮತ್ತೆ ಅವರನ್ನ ಕೇಳಿ ಏನು ಪ್ರಯೋಜನ?
ಮನಸ್ಸಿಗೆ ಒಂದು ಇರುತ್ತಲ್ಲ. ಏನಾದ್ರು ಒಳ್ಳೇದಾಗಬೌದು ಅಂತ.
-ಅಂದ ಹಾಗೆ ನಿಮಗೆ ದೇವ್ರು ದಿಂಡ್ರು ಅಂತ ನಂಬಿಕೆ ಇದೆಯೇ?
ಇಲ್ದೆ ಇದ್ದಾತ.
-ಯಾವ ಯಾವ ದೇವರ ಮೇಲೆ ನಂಬಿಕೆ ಇದೆ?
ನಮ್ಮೂರು ಚಿಕ್ಕಮ್ಮ, ಆಂಜನೇಯ, ಧರ್ಮಸ್ಥಳ, ಮಿಡಿಚಲಮ್ಮ, ಸುಂಕನಮ್ಮ, ಇಂಗೆ ಇರ್ತಾವಲ್ಲ ಭೂತ ದಯ್ಯ ಅಂತ.
– ಈ ದೇವರನ್ನೆಲ್ಲಾ ಯಾರು ಮಾಡಿದ್ದು?
ಅದೇ ಕಲ್ಲಿನಾಗಿರೋ ದೇವ್ರು.
– ಈ ದೇವರುಗಳಿಗೆ ಪೂಜೆಗೆ ಅಂತ ವರ್ಷಕ್ಕೆ ಎಷ್ಟು ಖರ್ಚು ಮಾಡ್ತೀರ? ಹೇಗೆ ಮಾಡ್ತೀರ?
ಇಂಗೆ ಹರಕೆಗೆ ಮರಿ ಬಿಡಾದು, ಕೋಳಿ ಕೊಡಾದು, ಪರ್ಸೆ ಹೋಗಾದು ಅಂತ ವರ್ಷಕ್ಕೆ ಏನಿಲ್ಲ ಅಂದ್ರು ೪೦೦ ರೂಪಾಯಿಂದ ೫೦೦ ರೂಪಾಯಿನವರ್ಗೂ ಖರ್ಚಾಗುತ್ತೆ.
-ನೋಡಿ , ಚನ್ನೇಗೌಡ್ರೆ , ಒಂದು ಮಗೂಗೆ ಒಂದು ವರ್ಷಕ್ಕೆ ಓದ್ಸೋದಕ್ಕೆ ೨೦೦ರೂಪಾಯಿ ಬೇಕಾಗುತ್ತೆ ಅಂದ್ರಿ. ಈ ದೇವರು ದಿಂಡ್ರು ಅಂಥ ನೀವು ೪೦೦ ರಿಂದ ೫೦೦ ರೂಪಾಯಿವರೆಗೂ ಖರ್ಚುಮಾಡ್ತೀರ. ಇದನ್ನೆಲ್ಲಾ ಬಿಟ್ಟು ಅದೇ ದುಡ್ಡನ್ನು ಬ್ಯಾಂಕಿನಲ್ಲಿಟ್ಟರೆ ನಿಮ್ಮ ಮಕ್ಕಳ ವಿದ್ಯೆ, ಬಟ್ಟೆ ಬರೆ, ಮುಂದಿನ ಮದುವೆ ಹೀಗೆ ಒಳ್ಳೆ ಕೆಲ್ಸಕ್ಕೆ ಆಗೋದಿಲ್ಲವೆ?
ಅಯ್ಯೋ ಅದಿದ್ದಂಗೆ ಆಯ್ತೀತೆ ಹೇಳಿ. ಅಂಗಾರ ದೇವ್ರು ದಿಂಡ್ರು ಬುಡಕಾದತೆ. ಬುಟ್ರೆ ನಾವು ನೆಮ್ದಿಯಿಂದಿರಾದೆಂಗೆ.
-ನೋಡಿ, ಚನ್ನೇಗೌಡ್ರೆ, ಇನ್ನೊಂದೆರಡು ಪ್ರಶ್ನೆ ಕೇಳ್ತೀನಿ . ನಾವು ಇರೋದು ಯಾವ ದೇಶದಲ್ಲಿ?
ತಿಳಿಯೊಕಿಲ್ಲ.
-ನಮ್ಮದು ಯಾವ ರಾಷ್ಟ್ರ ಅಂತ ಗೊತ್ತಿಲ್ಲವೆ ?
ಇಲ್ಲ.
-ನಾವಿರೋದು ಯಾವ ರಾಜ್ಯದಲ್ಲಿ ?
ಕರ್ನಾಟಕದಲ್ಲಿ.
-ಕರ್ನಾಟಕದಲ್ಲೋ, ಮೈಸೂರ್ನಲ್ಲೋ?
ಮುಂಚೆ ಮೈಸೂರ್‍ನೆ ಈಗ ಹೆಸ್ರು ಬದಲಾಯ್ಸಿದ್ರಲ್ಲಾ.
-ನೀವು ಯಾವ ಯಾವ ಊರು ನೋಡಿದೀರಾ ? ಧರ್ಮಸ್ಥಳ, ಗೊರೂರು , ಕನ್ನಂಬಾಡಿ , ಬೇಲೂರು , ಬಿಷ್ಠಮ್ಮನಕೆರೆ, ವಿದ್ಯಾಪೀಠ ಇನ್ನು ನಮ್ಮ ಸುತ್ತಮುತ್ತ ಇರಾ ಹಳ್ಳಿಗಳು.
-ನಮ್ಮ ಪ್ರಧಾನಿ ಯಾರು ?
ಮುರಾರ್ಜಿ
-ಹಾಗಂತ ಹೇಗೆ ಗೊತ್ತಾಯ್ತು ?
ಪೇಪರ್ನಾಗೆ, ಅದೂ ಅಲ್ದೆ ಅವ್ರಿವ್ರು ಮಾತಾಡ್ತರಲ್ಲ
-ಪೇಪರ್ ಓದ್ತೀರಾ ?
ಓದಾಕೆ ಬರಾಕಿಲ್ಲ. ಒಂದೊಂದಕ್ಷರ ಕೂಡ್ಸಿ ನೋಡಾದು.
-ನಿಮ್ಮ ಊರಿಗೆ ಪೇಪರ್ ಬರುತ್ತಾ, ಯಾವುದು ?
ಯಾವುದು ಬರಾಕಿಲ್ಲ.
-ಮತ್ತೆ ಎಲ್ಲಿ ನೋಡ್ತೀರಾ ? ಹಾಸನಕ್ಕೆ ಸಂತೆ ಗಿಂತೆಗೆ ಅಂತ ಹೋದಾಗ ಯಾರಾರು ಹಿಡ್ಕಂಡಿದ್ರೆ.
-ನಿಮ್ಮೂರಿನಲ್ಲಿ ಯಾರೂ ಓದಿದವರಿಲ್ಲವೆ?
ಅಯ್ಯೋ ಇಲ್ದೆ ಏನು ಬಿ. ಎ. ಇಂಜಿನಿಯರು ಮಾಡಿರಾರು ಅವ್ರೆ. ಅವ್ರಾರು ತರ್ಸಾಕಿಲ್ಲ.
-ನಮ್ಮ ಈಗಿನ ಮುಖ್ಯ ಮಂತ್ರಿಗಳು ಯಾರು ?
ಅದೆ ಮೈಸೂರಿನ ಮಹಾರಾಜ್ರು.
– ಇಂದಿರಾಗಾಂಧಿ ಈಗ ಏನಾಗಿದ್ದಾರೆ ?
ಅವ್ರು ಸೋತ್ರಲ್ಲ, ಜನತಾಪಕ್ಷದಿಂದ. ರಾಜಿನಾಮೆ ಕೊಟ್ರು.
-ಅವರದು ಯಾವ ಪಕ್ಷ . ಹಸು ಕರು.
-ಅವರು ಸೋತಿದ್ದು ನಿಮಗೆ ಹೇಗೆ ಅನ್ನುಸ್ತು?
ಬಡವರಿಗೆ ಸಾಲ ಗೀಲ ಕೊಡ್ಸಿದ್ರು , ಬಡವರ್ನ ಮುಂದೆ ತರಬೇಕು, ಸಾವುಕಾರ್ನ ಹಿಂದಕ್ಕೆ ಇಡ್ಬೇಕು ಅಂತ ಮಾಡಿದ್ರು. ಮುಂದಕ್ಕೆ ಅವ್ರೆ ಬಂದ್ರುಬರಬಯ್ದು.
-ಜೀತ ಮಾಡೋದನ್ನ ಕಿತ್ತಾಕಿದ್ರಲ್ಲ ಅದು ಒಳ್ಳೆದಾಯ್ತಲ್ಲವೆ ?
ಜೀತ ತೆಗೆಯೊಕೆ ಆಗಾಕಿಲ್ಲ. ಯಾಕೆ ಅಂತೀರೋ . ಎಲ್ಲಾದ್ನೂ ಗೌರ್ಮೆಂಟೆ ಕೊಡ್ತೀತಾ? ಧಣಿಗೆ ನಂಬ್ಕಂಡೆ ಇಂದಿಲ್ಲ ನಾಳೆ ಒಳ್ಳೇದಾಗೆ ಆಯ್ತಿತೆ, ಕೊಟ್ಟೇ ಕೊಡ್ತಾರೆ.
-ಬಡವರ ಸಾಲ ವಾಪಸ್ಸು ಕೊಂಡಗಿಲ್ಲ ಅಂತ ಕಾನೂನು ಮಾಡಿದ್ರಲ್ಲಾ ಅದು ಗೊತ್ತಾ ?
ಗೊತ್ತು ಅಂಗೆ ಮಾಡ್ಬಾರ್ದು. ಇನ್ನೊಂದೆರಡು ಕಂತು ಕೊಟ್ಟಿದ್ರೆ ತೀರಿಸ್ಬೋದು . ಇನ್ನೊಬ್ಬರ ಋಣ ನಮಗ್ಯಾಕೆ.
-ಈ ಸಾರಿ ಸರಿಯಾಗಿ ಮಳೆ ಬೆಳೆ ಆಗಲಿಲ್ಲ. ಸರ್ಕಾರಕ್ಕೆ ಈ ಸಾರಿ ಕಂದಾಯ ಮನ್ನಾ ಮಾಡಿ ಅಂತ ಯಾತಕ್ಕೆ. ಬರೆದುಕೊಳ್ಳಬಾರದು,
ಅಯ್ಯೋ, ಕಂದಾಯ ಕಟ್ಟದೆ ಹೋದ್ರೆ ಭೂಮಿ ಮ್ಯಾಗೆ ಹಕ್ಕೆಂಗೆ ಇರುತ್ತೆ. ಸರ್ಕಾರ ಬ್ಯಾಡ ಅಂದ್ರು ನಾವು ಕಟ್ಲೇಬೇಕು. -ಓಟು ಹಾಕೋವಾಗ ಯಾರಿಗೆ ಹಾಕಬೇಕು ಅಂತ ನೀವು ಹೇಗೆ ತೀರ್ಮಾನ ತಗೊಂತಿಂರಾ ?
ಯಾರಿಂದ ಅನುಕೂಲವಾಗುತ್ತೆ ಅವರಿಗೆ ಹಾಕೋದು
-ಊರಿನವರು ಹೇಳಿದಾಗೆ ಇಲ್ಲ ಹಣ ಕೊಟ್ಟವರ ಕಡೆ?
ಇಲ್ಲ ಇಲ್ಲ ನಮ್ಮ ಮನಸ್ಸು ಹೆಂಗೆ ಹೇಳುತ್ತೋ ಅಂಗೆ
– ಆಯ್ತು ಚನ್ನೇಗೌಡ್ರೆ, ನಮಸ್ಕಾರ.
ಅಯ್ಯೊಯ್ಯೋ, ನನಗ್ಯಾಕೆ ಸ್ವಾಮಿ, ನಮಸ್ಕಾರ.
*****
ಜುಲೈ ೧೯೭೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹ್ಯಾಗೆ
Next post ಸರಕಾರದ ವಿರುದ್ಧ ನಾಯಕ

ಸಣ್ಣ ಕತೆ

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…