ಮೊದಲನೆಯವಳು ಟ್ಯೂಬು ಲೈಟಿನಂತ ಸುಪ್ರಕಾಶ ಸಭ್ಯ ನಗೆ ಹೊತ್ತುಬರುತ್ತಾಳೆ.
ಸುತ್ತ ಇದ್ದವರತ್ತೆಲ್ಲ ಸರ್‍ವೋಪಯೋಗಿ ಮುಗುಳ್ನಗೆ ಬೀರುತ್ತಾ,
ರೋಗಿಗಳ ಎದೆಯಲ್ಲಿ ಆಸೆಯ ಬುಗ್ಗೆ ಚಿಮ್ಮಿಸುತ್ತಾ ದಡ ದಡ ಬರುತ್ತಾಳೆ.
ಕಂಡ ತಕ್ಷಣ, ಅವಳ ಸಭ್ಯತೆಯ ಪರ್ವತ ಏರಲಾರದೆ,
ರೋಗಿಗಳು ಎದುಸಿರು ಬಿಡುತ್ತಾ ಗೋಡೆಯತ್ತ ಮುಖ ಮಾಡುತ್ತಾರೆ.
ಇರಲಿ ಅಪಘಾತ, ಇರಲಿ ನೋವು, ಇರಲಿ ನರಳಾಟ, ಇರಲಿ ಖಾಯಿಲೆ,
ಮನುಷ್ಯರ ನೋವಿನೆದುರು ಅವಳಿಗೆಷ್ಟು ಧೈರ್ಯ, ಎಂಥ ಮುಗುಳ್ನಗು!
ನಮ್ಮ ಪುಣ್ಯ, ಬಹಳ ಹೊತ್ತು‌ಇರುವುದಿಲ್ಲ ಆಕೆ.
ಬಿರುಗಾಳಿಯಂತೆ ವಾರ್ಡು ಸುತ್ತಿ,
ಅಮೆರಿಕದ ಬಾಂಬರ್‌ನ ಹಾಗೆ ನಗೆಯನ್ನು ಆಸ್ಫೋಟಿಸಿ,
ಒಂದು ವಾರ ರಜೆಯ ಮೇಲೆ ತೆರಳುತ್ತಾಳೆ.
ಅದೃಷ್ಟವಿದ್ದರೆ ಇನ್ನೂ ನಾಲ್ಕು ದಿನ ಹೆಚ್ಚೇ ರಜೆ ಸಿಕ್ಕೀತು.

ಇನ್ನೊಬ್ಬ, ದಷ್ಟಪುಷ್ಟ ರಣಹದ್ದಿನಂಥ ಸಂತ ಬಂದ.
ಮೈ ಕೈ ತಟ್ಟಿತಡವಿ ಹೆಪ್ಪುಗಟ್ಟಿದ ಆಸೆಯನ್ನು ಎಲ್ಲರಿಗೆ ಇಷ್ಟಿಷ್ಟು ಹಂಚಿದ.
ಸ್ವರ್ಗದ ಅಪ್ಸರೆಯರೂ ನರಕದ ಎಣ್ಣೆಬಾಂಡಲಿಗಳೂ ಕೋಮಾದ ಶೂನ್ಯತೆಯೂ
ಇನ್ನೂ ದೂರವಿದೆ ಎಂದು ಗೊತ್ತಿರುವ ರೋಗಿಗಳು
ಸಂತನ ಕಣ್ಣ ರೆಪ್ಪೆಯ ತುದಿಯಲ್ಲಿ ಬಚ್ಚಿಟ್ಟುಕೊಂಡಿರುವ ತಿರಸ್ಕಾರ ಕಂಡು
ಅಂಜುತ್ತಾರೆ, ಮುದುಕನೊಬ್ಬ ದ್ವೇಷವನ್ನು ಮಸೆದು ‘ಹೋಗು ಮಾರಾಯ
ಹೋಗು, ಹೊರಟು ಹೋಗು’ ಅನ್ನುತ್ತಾ ನರಳುತ್ತಾನೆ.

ಆಮೇಲೆ ಬಂದವನು ಚತುರ, ಚಾಣಾಕ್ಷ,
ಬೆಡ್ಡಿನ ಪಕ್ಕ ಸ್ಟೂಲು ಎಳೆದುಕೊಂಡು
ನಿಧಾನವಾಗಿ ಕಿತ್ತಳೆ ಸುಲಿಯುತ್ತಾ
‘ನಮ್ಮ ಬೆಕ್ಕು ನಾಲ್ಕು ಮರಿಹಾಕಿದೆ ಗೊತ್ತೆ?
ಮೊನ್ನೆ ಮಳೆ ಬಂತಲ್ಲ, ಮಹಡಿ ಮೇಲಿದ್ದ ಹೂವಿನ ನಾಲ್ಕು ಪಾಟು ಬಿದ್ದು
ಒಡೆದೇ ಹೋಯಿತಲ್ಲ!
ಅಯ್ಯೋ ಮನೆಯಲ್ಲಿ ಎಲ್ಲರಿಗೂ ನೆಗಡಿ ಮಾರಾಯ!
ನಿನಗೂ ಎಲ್ಲಿ ಹತ್ತೀತೋ ಅಂತ ಹದಿನೈದು ದಿನ ಬರಲೇ ಇಲ್ಲ ಗೊತ್ತಾ?
ಯಾಕೆ ಇಲ್ಲಿ ಇರುವ ಬೇರೆಯವರಿಗೂ ನನ್ನಿಂದ ತೊಂದರೆ,’ ಅಂದರೆ
ರೋಗಿಯ ಕಣ್ಣಲ್ಲಿ ನಿರಾಸಕ್ತಿ:
ನನಗೆ ಯಾಕೆ ಬೆಕ್ಕಿನ ಮರಿಯ ಕತೆ
ಯಾಕೆ ಒಡೆದ ಪಾಟನ ಸುದ್ಧಿ
ಯಾಕೆ ಅವರ ನೆಗಡಿಯ ಗೋಳು?
ತೋಳಿಗೆ ಡ್ರಿಪ್ಪು ಚುಚ್ಚಿಸಿಕೊಂಡು,
ಇನ್ನೊಂದು ಕೈಗೆ ರಕ್ತದ ನಳಿಗೆ ತೂರಿಸಿಕೊಂಡು,
ಅಂಗಾತ ಮಲಗಿ ಸೂರು ದಿಟ್ಟಿಸುತ್ತಾ,
ಮೈ ಸವೆದು, ಚರ್ಮ ಒಳಗೆ ಮೂಳೆ ಮೈ ಹೊರಗೆ ಆಗಿ,
ಇದೇ ಈಗ ಈಜಿಪ್ಪಿನ ಸಮಾಧಿಯಿಂದ ತಂದ ಮಹಾರಾಜನಂತೆ
ಈ ಕ್ಷಣದ, ಈ ಈಗಿನ ನೋವಿನ, ಈಗಿನ ನರಳಾಟದ
ಕಥೆ ಹೇಳಲು ಬಯಸಿ, ಹೇಳಲಾರದೆ ಸುಮ್ಮನಿರುತ್ತಾನೆ.
ರೋಗಿ ಮಾತಾಡಬಾರದು.

ನಾಲ್ಕನೆಯವನು ಅಮ್ಮನನ್ನು ನೋಡಲು ಬಂದ ಮಗ.
ಒಂದಾದ ಮೇಲೆ ಒಂದು ಜೋಕು ಹೇಳಿ ನಗಿಸಿದ.
‘ಯಾಕಮ್ಮ ಯೋಚನೆ. ನೀನು ಇಷ್ಟರಲ್ಲೆ
ಜಿಂಕೆಯಂತೆ ನೆಗೆಯುತ್ತ ಓಡಾಡಬಹುದಂತೆ!
ಬೇಕಿದ್ದರೆ ಮೊಮ್ಮಕ್ಕಳೊಡನೆ ಕುಂಟೆ ಬಿಲ್ಲೆ ಆಡಬಹುದು!
ಇನ್ನು ಹದಿನೈದು ದಿನದಲ್ಲಿ
ಎಂದಿನಂತೆ ಮೂವತ್ತುಕೊಡ ನೀರು ಸೇದಿ
ಎಲ್ಲರಿಗೂ ಅಡುಗೆ ಮಾಡಿ ಬಡಿಸಬಹುದು!
ಗೋಪಾಲಸ್ವಾಮಿ ಬೆಟ್ಟ ಅರ್ಧ ಗಂಟೆಯಲ್ಲಿ ಹತ್ತಿ ಇಳಿಯಬಹುದ೦ತೆ’
ಎಡಗಾಲಿಗೆ ಸುತಿದ್ದ ಐದು ಕಿಲೋ ತೂಕದ ಪ್ಲಾಸ್ಟರು
ಕಾಲನ್ನು ಮೇಲೆತ್ತಿ ಹಿಡಿದಿರುವ ಸರಪಳಿ
ಅದಕ್ಕೆ ಕಟ್ಟಿದ ತೂಕದ ಕಲ್ಲು
ಪಕ್ಕದಲ್ಲೆ ಇರುವ ಸ್ಟೀಲಿನ ಊರುಗೋಲು
ಅವನ ಕಣ್ಣಿಗೇ ಕಾಣುವುದಿಲ್ಲ.
ಕುಲಪುತ್ರನ ಭವಿಷ್ಯವಾಣಿ ಕೇಳಿ
‘ದೇವರೇ, ಈ ಮಗನಿಗೆ ಹುಚ್ಚುಹಿಡಿಯಿತೇನಪ್ಪಾ’
ಅಂದುಕೊಳ್ಳುತ್ತಾಳೆ ಮುದುಕಿ.
ಅಯ್ಯೋ, ಅವಳಂದುಕೊಂಡದ್ದು ನಿಜ, ಅನ್ನಿಸುತ್ತದೆ.

ಐದನೆಯವನೊಡನೆ ತೇಲಿ ಬಂತು ಎರೆ ಮಣ್ಣಕಂಪು.
ಗಂಜಲದ, ಹಾಲಿನ ಜೋಳದ, ಬಿಸಿಲ, ಜಾತ್ರೆಯ ನೆನಪು.
ಬಹಳ ಹೊತ್ತು ಹೆಜ್ಜೆ ಊರಿದರೆ ಈ ಫಿನಾಯಿಲ್ ಸ್ವಚ್ಛ ನೆಲದಲ್ಲೆ ಬೇರುಬಿಟ್ಟಾವೆಂದು
ಅಂಜಿಕೆಯಿಂದೆಂಬಂತೆ ಒಂದು ಎಮ್ಮೆ ಕಾಲಿಂದ ಇನ್ನೊಂದಕ್ಕೆ ಮೈ ಭಾರ ವರ್ಗವಾಗುತ್ತಿತ್ತು.
ಆಗಾಗ ಪವಿತ್ರ ನೋಟ ಸುತ್ತಲೂ ಹಾಯುತಿತ್ತು.
ಬಂದದ್ದರಿಂದ ಯಾರಿಗೆ ತೊಂದರೆಯಾಯಿತೋ ಎಂದು ಅಂಜುತ್ತಿತ್ತು.
ಬಿಳಿಯ ಗೋಡೆಗಳೆ ತಟ್ಟನೆ ಅದುಮಿ ಅಪ್ಪಚ್ಚಿ ಮಾಡಿಯಾವೆಂದು ಹೆದರುತ್ತಿತ್ತು.
ಹಗುರವಾಗಿ ಹಿಡಿದ ಬೆರಳ ನಡುವೆ ಪೊಟ್ಪಣದಿಂದ ಇಣುಕುವ ಮಲ್ಲಿಗೆ,
ಪೇಪರಿನಲ್ಲಿ ಸುತಿದ್ದರೂ ಎದ್ದುಕಾಣುವ ಬಾಳೆ, ಮಗುವಿನ ಬೆರಳಂತೆ ಆಡುವ ಬೆರಳು,
ಕುರ್ಚಿಯ ತುದಿಯಲ್ಲಿ ಕಷ್ಟಪಟ್ಟು ಕೂತು, ಹೇಗೋ ಬ್ಯಾಲೆನ್ಸು ಉಳಿಸಿಕೊಂಡು,
ಅರ್ಧಗಂಟೆ ಸುಮ್ಮನೇ ಕೂತು,
ಸಮಯ ಮುಗಿದ ಕೂಡಲೇ ಬಿಗಿಹಿಡಿದ ಉಸಿರು ಬಿಡಲು ತಟ್ಟನೆದ್ದು ಹೊರಗೆ ನಡೆದು
ಪಿಳ ಪಿಳ ಕಣ್ಣುಮಿಟುಕಿಸಿ ಆಸತ್ರೆಯಿಂದ ಹೊರ ಹೆಜ್ಜೆ ಇಟ್ಪಾಗ
ಸಂಜೆ ಮುಗಿದು ರಾತ್ರಿ ಕಾಲಿಟ್ಟದ್ದು ಅವನ ಗಮನಕ್ಕೇ ಬಂದಿರಲಿಲ್ಲ.

ಆರನೆಯವನು ಸದ್ದಿಲ್ಲದೆ ಬರುತ್ತಾನೆ.
ಎಂಥ ವಿಶ್ವಾಸ ಮುಖದಲ್ಲಿ, ಹೆಜ್ಜೆಯಲ್ಲಿ.
ಅವನ ಕೈಯಲ್ಲಿ ಹಣ್ಣುಗಳ ಪಾಸೂ ಇಲ್ಲ
ಬ್ರೆಡ್ಡಿನ ಗುರುತಿನ ಚೀಟಿಯೂ ಇಲ್ಲ.
ಬೆನ್ನಮೇಲೊಂದು ಒಗೆದ ಬೆಡ್ ಶೀಟುಗಳ ರಾಶಿ,
ವಾರ್ಡಿನ ತುದಿಯ ಬೀರುವಿನಲ್ಲಿಟ್ಟು ಆಮೇಲೆ
ರೋಗಿಗಳ ಕಣ್ಣಿಗೆ ಕಾಣದಂತೆ, ಕಿವಿಗೆ ಕೇಳದಂತೆ,
ನರ್ಸನ್ನುಸ್ವಲ್ಪ ದೂರಕ್ಕೆ ಕರೆದು
ಎರಡು ಮಾತು ಪಿಸುಗುಡುತ್ತಾನೆ.
ಸೂರ್ಯಾಸ್ತದಷ್ಟೇ ಖಚಿತವಾಗಿ
ಅದೇ ಹೊತ್ತಿಗೆ ಬರುತ್ತಾನೆ, ಹೋಗುತ್ತಾನೆ.
ಯಾರೂ ಅವನ ನೋಡದಿದ್ದರೂ
ಅವನು ಬಂದು ಹೋದದ್ದು
ಎಲ್ಲರಿಗೂ ಗೊತ್ತು.
*****
ಮೂಲ: ಚಾರ್ಸ್‌ ಕಾಸ್ಲೆ