ಕೀಟ

ಕೀಟ

ಚಿತ್ರ: ಹ್ಯಾರಿ ಸ್ಟ್ರಾಸ್

ಚಿಕ್ಕಚಿಕ್ಕ ಮನೆಗಳು ಒತ್ತೊತ್ತಾಗಿದ್ದ ಆ ಹಳ್ಳಿ ಚಪ್ಪಟೆಯಾಗಿರುವ ನೆಲದ ಮೇಲಿದ್ದರೂ, ಬಲು ಎತ್ತರದಲ್ಲಿತ್ತು. ಮೊಳೆ ಹೊಡೆದ ಡೊಡ್ಡ ಸೈಜಿನ ಒರಟೊರಟು ಶೂಗಳು ಜಾರುತ್ತಿದ್ದುದರಿಂದ ಸಮಯ ಉಳಿಸಲೆಂದು ಅವರಿಬ್ಬರು ಕೈಗಳ ಸಹಾಯದಿಂದ ಏದುಸಿರುಬಿಡುತ್ತ, ಇಳಿಜಾರನ್ನು ಹತ್ತುತ್ತಿದ್ದರು.

ಆಚೆ ಕಡೆ, ಚಿಕ್ಕ ಕಾರಂಜಿಯೆದುರು ಒಂದಿಷ್ಟು ಹೆಂಗಸರು ಗುಂಪು ಕಟ್ಟಿಕೊಂಡು ಜೋರಾಗಿ ಹರಟುತ್ತ ನಿಂತಿದ್ದವರು ಈಗ ಒಮ್ಮೆಲೆ ತಿರುಗಿ ಮೌನವಾಗಿಬಿಟ್ಟರು. ದಣಿದು ಸುಸ್ತಾಗಿ, ಬೆವರಿನಿಂದ ತೊಯ್ದ ನೀಲಿಗಿಟ್ಟಿದ ಮುಖದ ಗಂಡಸರಿಬ್ಬರು ತಮ್ಮತ್ತಲೇ ಬರುತ್ತಿರುವುದು ಕಾಣಿಸಿತು. ಅರೇ…. ಅವರು ಟೊರ್ಟೊರಿಸಿ ಸೋದರರಲ್ವೆ…. ಹೌದು ಹೌದು…. ಅವರೇ…. ನೆಲಿ ಮತ್ತು ಸಾರೋ ಟೊರ್ಟೊರಿಸಿ. ಛೇ ಪಾಪ…. ಆ ಸ್ಥಿತಿಯಲ್ಲಿ ಗುರುತೂ ಹತ್ತುತ್ತಿರಲಿಲ್ಲ. ಏನಾಯ್ತು ಅವರಿಗೆ? ಅಂಥ ಹತಾಶಸ್ಥಿತಿ ಯಾಕಿದ್ದಿರಬಹುದು

ಚಿಕ್ಕವನಾಗಿದ್ದ ನೆಲಿ, ಪೂರ್ತಿ ಬಳಲಿದ್ದರೂ ಉಸಿರು ಬಿಡುತ್ತ ಹೆಂಗಸರ ಪ್ರಶ್ನೆಗಳಿಗೆ ಉತ್ತರಿಸಲು ಹೆಣಗಾಡುತ್ತಿದ್ದ. ಆದರೆ, ಸಾರೋ ಅವನ ರಟ್ಟೆಗೆ ಕೈಹಾಕಿ ಅಲ್ಲಿಂದೆಳದುಕೊಂಡು ಹೋದ.

‘ಜಿಯೂರ್ಲಾನ್ನು ಜಾರು…. ನಮ್ಮ ಅಣ್ಣ’ ಎಂದು ಹೇಳಿದ ನೆಲಿ, ತಿರುಗಿ, ಒಂದು ಕೈಯನ್ನೆತ್ತಿ ಸ್ವಸ್ತಿವಾಚನ ಮಾಡುವಂತೆ ಸನ್ನೆಮಾಡಿದ.

ಇದನ್ನು ಕೇಳಿದ್ದೇ, ಆ ಹೆಂಗಸರು ಒಂದು ರೀತಿಯ ಭಯಮಿಶ್ರಿತ ಅನುಕಂಪ ವ್ಯಕ್ತಪಡಿಸುತ್ತ ಚೀರಿಬಿಟ್ವರು.

ಅವರಲ್ಲೊಬ್ಬಳು ಗಟ್ಟಿಯಾಗಿ, “ಯಾರು ಮಾಡಿದ್ದು?” ಎಂದು ಕೇಳಿದಳು.

“ಯಾರೂ ಅಲ್ಲ…. ಆ ಭಗವಂತ ಮಾಡಿದ್ದು!” ಕೂಗಿದ ನೆಲಿ.

ಇಷ್ಟು ಹೇಳಿದ ಇಬ್ಬರೂ, ಈಗ ಆ ಪುಟ್ಟಹಳ್ಳಿಯ ಯಾವುದೋ ಗಲ್ಲಿಯಲ್ಲಿ ರುವ ಮುನಿಸಿಪಲ್ ವೈದ್ಯನ ಮನೆಯತ್ತ ಓಡಿದರು.
* * *

ವೈದ್ಯನ ಹೆಸರು ಸಿಡೋರೊ ಲೊಜಿಕ್ಕೊಲೊಝೀ. ಆತ ತೆರೆದೆದೆಯಲ್ಲಿ ಅರ್ಧ ತೋಳಿನ ಅಂಗಿಯನ್ನುಟ್ಟು, ತನ್ನ ಜೋಲುಬಿದ್ಡ ಕೆನ್ನೆ, ಕನಿಷ್ಠ ಹತ್ತು ದಿನಗಳಾದರೂ ಆಗಿದೆಯೆಂಬಂತಿದ್ದ ಒರಟಾದ ಗಡ್ಡ, ನೀರೂರುವ ಆಳಕ್ಕಿಳಿದ ಊದಿದ ಕಣ್ಣುಗಳಲ್ಲಿ ಕೋಣೆಯಿಂದ ಕೋಣೆಗೆ ತನ್ನ ಸ್ಲಿಪರನ್ನು ಎಳೆದುಕೊಂಡು ಶತಪಥ ಬರುತ್ತಿದ್ದ. ಒಂಬತ್ತು ವರ್ಷದ ತನ್ನ ಮಗಳನ್ನು ಎತ್ತಿಕೊಂಡಿದ್ದ. ಖಾಯಿಲೆಯಿಂದ ಸೊರಗಿದ ಅವಳ ಚರ್ಮ ಮೂಳೆಗಂಟಿಕೊಂಡಿತ್ತು. ಅವನ ಹೆಂಡತಿ ಕಳದ ಹನ್ನೊಂದು ತಿಂಗಳಿಂದ ಹಾಸಿಗೆ ಹಿಡಿದಿದ್ದಳು. ಗಂಡ ಎತ್ತಿಕೊಂಡಿದ್ದ ಹಿರಿಯ ಮಗಳಲ್ಲದೆ ಇನ್ನೂ ಆರು ಪುಟ್ಟ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ ಅವಳಿಗೆ. ಮನೆ ಚಿಂದಿ ಚೂರುಗಳಿಂದಾಗಿ ಗಲೀಜಾಗಿತ್ತು. ಅಸ್ತವ್ಯಸ್ತ ವಾಗಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುದನ್ನು ಯಾರಾದರೂ ನೋಡಿದರೆ ಭಯ ಹುಟ್ಟಿಸುವಂತಿದ್ದವು. ಒಂದು ಮೂಲೆಯಲ್ಲಿ ಮುರಿದ ಪ್ಲೇಟು-ತಾಟುಗಳು, ಕೊಳೆತ ಕಾಯಿಪಲ್ಲೆ ಸಿಪ್ಪೆಯ ಚಿಕ್ಕಗೋಪುರವಿತ್ತು. ಮುರಿದ ಕುರ್ಚಿಗಳು, ತಳವಿಲ್ಲದ ಈಸಿ ಚೇರುಗಳು, ಹೊಲಿಯದೆ ಎಷ್ಟೋ ದಿನಗಳಾಗಿರಬೇಕು ಎಂಬ ಭಾವ ಹುಟ್ಟಿಸುವ ಚಿಂದಿ ಹಾಸಿಗೆ, ನೂಲುಕಿತ್ತು ಹೋಗಿರುವ ಚಾದರಗಳು ನೆಲದ ಮೇಲೆ ಅಸಡ್ಡಾಳ ಹರಡಿ ಕೊಂಡಿದ್ದವು. ದಿಂಬುಗಳನ್ನೇ ಅಸ್ತ್ರವಾಗಿಸಿ ಹಾಸಿಗೆಯ ಮೇಲೆ ಯುದ್ಧ ಮಾಡುವ ಆಟ ಆಡುವುದೆಂದರೆ ಅವನ ಹುಡುಗರಿಗೆ ಬಹಳ ಖುಷಿ! ಒಂದಾನೊಂದು ಕಾಲದಲ್ಲಿ ಪುಟ್ಟ ದಿವಾನ ಖಾನೆಯೇ ಆಗಿದ್ದ ಆ ಕೋಣೆಯಲ್ಲಿ ಇನ್ನೂ ಶಿಥಿಲವಾಗದೆ ಇದ್ದ ಏಕೈಕ ವಸ್ತುವೆಂದರೆ ಗೋಡೆಯ ಮೇಲೆ ತೂಗಿಸಿದ್ದ ಬೃಹತ್ ಗಾತ್ರದ ಭಾವಚಿತ್ರ ಮಾತ್ರ. ಅದೂ ಅವನದ್ದೇ – ಡಾ. ಸಿಡೋರೋ ಲೊಜಿಕ್ಕೊಲೋನದ್ದು. ಆಗಷ್ಟೇ ಯುವ ‘ಪದವೀಧರನಾಗಿದ್ದ ವೈದ್ಯ ಭಾವಚಿತ್ರದಲ್ಲಿ ಶುಭ್ರವಾಗಿ, ಮುಗುಳ್ನಗುತ್ತಿದ್ದ. ಚೆಂದ ಕಾಣುತ್ತಿದ್ದ.

ತನ್ನ ಓಲಾಡುವ ಸ್ಲಿಪ್ಪರಿನಲ್ಲೇ ಭಾವಚಿತ್ರದ ಹತ್ತಿರ ಹೋದ. ಹಳದಿಗೆ ತಿರುಗಿದ್ದ ತನ್ನ ಹಲ್ಲುಗಳನ್ನು ಪ್ರದರ್ಶಿಸುತ್ತ, ಗಾಬರಿಯಿಂದ ಅದರತ್ತ ನೋಡಿ ತಲೆಯಾಡಿಸಿದ. ಖಾಯಿಲೆ ಬಿದ್ದ ತನ್ನ ಮಗಳಿಗೆ ಅದನ್ನು ತೋರಿಸುತ್ತ, “ಸಿಸಿನೆಲ್ಲೋ, ಸಿಸೀನೆ!” ಎಂದ.

ಅವನ ತಾಯಿ, ಬಹಳ ಹಿಂದೆ, ಅವನನ್ನು ‘ಸಿಸಿನೆಲ್ಲೋ’ ಎಂದು ಮುದ್ದಿನಿಂದ ಕರೆಯುವುದಿತ್ತು. ಬದುಕಿಗೆ ಆಧಾರಸ್ತಂಭವಾಗಿದ್ದ ಈ ಮುದ್ದುಮಗನಿಂದ ಅವಳು ಏನೇನೋ ಅಪೇಕ್ಷೆ ಇಟ್ಟುಕೊಂಡಿದ್ದಳು.

“ಸಿಸಿನೆಲ್ಲೋ ಸಿಸೀನೆ!”

ಬಂದ ಆ ರೈತರಿಬ್ಬರನ್ನೂ ಹುಚ್ಚುನಾಯಿಗಳೆಂಬಂತೆ, “ಏನು?” ಎಂದು ಸ್ವಾಗತಿಸಿದ.

ಟೊಪ್ಪಿಯನ್ನು ಕೈಲಿ ಹಿಡಿದ ಸಾರೋ ಟೊರ್ಟೊರೇಸಿ ಏದುಸಿರು ಬಿಡುತ್ತ, ‘ಡಾಕ್ಬರೇ…. ನಮ್ಮ ಅಣ್ಣ…. ಸಾಯ್ತಾ ಇದ್ದಾನೆ…. ಬಡವ ಪಾಪ’ ಎಂದ.

“ಒಳ್ಲೆಯದೇ ಆಯಿತು ಬಿಡು…. ಚರ್ಚಿನ ಗಂಟೆ ಬಾರಿಸಿ ಎಲ್ಲರೂ ಒಟ್ಟಿಗೇ ಆಚರಿಸೋಣ” ಎಂದು ವೈದ್ಯ ಚೀರಿದ.

“ಇಲ್ಲ. ಸರ್…. ಆತ ಹಾಗೇ ಸಾಯ್ತಾ ಇದ್ದಾನೆ…. ಮಾಂಟೆಲೂಸ್ಸಾದಲ್ಲಿ ಸರ್…. ಯಾವ ಕಾರಣದಿಂದ ಎಂದು ಯಾರಿಗೂ ಗೊತ್ತಿಲ್ಲ ಸರ್….” ಇನ್ನೊಬ್ಬ ದನಿಗೂಡಿಸಿದ.

“ಮಾಂಟೆಲೂಸ್ಸಾದಲ್ಲೇ?” ಆ ಹಳ್ಳಿಯಿಂದ ಅದು ಸುಮಾರು ಏಳುವ್ ಮೈಲಿ ದೂರದಲ್ಲಿತು.. ಅದೂ ಎಂಥ ಕೆಟ್ಟ ರಸ್ತೆ!

“ಬೇಗ ಸರ್…. ದಯವಿಟ್ಟು ಬೇಗ ಹೊರಡಿ” ಟೊರ್ಟೊರೋಸಿ ಅಂಗಲಾಚಿದ.

“ಆತನ ಚರ್ಮ ಕಪ್ಪುಬಣ್ಣಕ್ಕೆ ತಿರುಗಿದೆ ಸರ್…. ಊದಿಕೊಂಡಿದ್ದು ನೋಡಿದರೆ ಹೆದರಿಕೆ ಆಗ್ತದೆ. ಪ್ಲೀಸ್ ಸರ್!” ಎಂದ.

“ಆದರೆ ಹೇಗೆ ಬರಲಿ? ನಡಕೊಂಡೇ ಬರಲಾ…. ಹತ್ತು ಮೈಲಿ ನಡೆದುಕೊಂಡೇ ಬರಬೇಕಾ ನಾನು? ತಲೆಗಿಲೆ ಕೆಟ್ಟಿದೆಯಾ ನಿಮಗೆ? ಒಂದು ಹೇಸರಗತ್ತೆಯ ವ್ಯವಸ್ಥೆ ಮಾಡಿ…. ತಂದಿದ್ದೀರಾ ಹೇಗೆ?” ವೈದ್ಯ ಅರಚಿದ.

ಓಡಿಹೋಗಿ ಈಗಲೇ ತರ್ತೇನೆ ಎಂದ ಸಾರೋ ಟೊರ್ಟೊರೋಸಿ ಮಾಯವಾಗಿಬಿಟ್ಟ. “ಹಾಗಾದರೆ, ಈ ನಡುವೆ ನಾನೊಂದು ಶೇವ್ ಮಾಡಿಕೊಂಡು ಬರ್ತೇನೆ….” ಎಂದ ಚಿಕ್ಕವ ನೆಲಿ.

ವೈದ್ಯ ನಿಂತಲ್ಲೇ ಅವನನ್ನು ನುಂಗುವಂತೆ ನೋಡಿದ.

“ಈವತ್ತು ಭಾನುವಾರ ಸರ್…. ನನಗೆ ಬೇರೆ ಕಡೆ ಕೆಲಸ ಇದೆ ಸರ್.” ಎಂದು ನೆಲಿ ಕ್ಷಮೆ ಯಾಚಿಸುತ್ತ, ಗೊಂದಲದಲ್ಲಿಯೇ ಮುಗುಳ್ನಕ್ಕ.

‘ಓಹೋ…. ಬೇರೆ ಕಡೆ ಕೆಲಸವೇ?…. ಹಾಗಾದರೆ ಸ್ವಲ್ಪ ಇವಳನ್ನು ಎತ್ತಿಕೋ” ಎಂದು ವ್ಯಂಗ್ಯವಾಗಿ ಹೇಳುತ್ತ, ವೈದ್ಯ ತನ್ನ ಖಾಯಿಲೆಬಿದ್ದ ಮಗಳನ್ನು ನೆಲಿಯ ಕೈಗಿತ್ತು ಇನ್ನೂ ತನ್ನ ಮಕ್ಕಳೆಲ್ಲರನ್ನೂ ಒಬ್ಬೊಬ್ಬರನ್ನೇ ಅವನಿಗೆ ಕೊಡುತ್ತ, “ತಗೋ…. ಬಡ್ಡೀಮಗನೆ…. ತಗೋ! ತಗೋ! ತಗೋ! ಎಂದು ಸಿಟ್ಟಿನಿಂದಲೇ ಅವರೆಲ್ಲರನ್ನೂ ಅವನ ಮೊಣಕಾಲಿನ ಗಂಟುಗಳ ಸುತ್ತ ಜಮಾಯಿಸಿದ.

ಹಾಗೇ, ನೆಲಿಯನ್ನು ಮಕ್ಕಳ ಜತೆ ಬಿಟ್ಟು ಬೆನ್ನ ತಿರುಗಿಸಿ ಸ್ವಲ್ಪದೂರ ಹೋದವನೇ ಮತ್ತೆ ವಾಪಸು ಬಂದು ತನ್ನ ಮಗಳನ್ನು ಎತ್ತಿ ಕೊಳ್ಳುತ್ತ, ‘ನಿವಾಳಿಸಿ ಇಬ್ಬರೂ…. ಹೋಗಿ ಒಂದು ಹೇಸರಗತ್ತೆ ತಗೊಂಡು ಬನ್ನಿ…. ಹೋಗಿ. ಆಮೇಲೆ ನಾನೂ ನಿಮ್ಮ ಜತೆ ಸೇರುತ್ತೇನೆ’ ಎಂದು ಕೂಗಿದ.

ನೆಲಿ ಟೊರ್ಟೊರೋಸಿ ಪುನಃ ನಕ್ಕು ಸೋದರ ಹೋದ ದಿಕ್ಕಿನತ್ತ ಓಡಿದ. ಅವನಿಗೀಗ ಇಪ್ಪತ್ತು ವರ್ಷ. ಅವನು ಮದುವೆಯಾಗಲಿರುವ ಹುಡುಗಿ ಲೂಜಾಗೆ ಹದಿನಾರು. ಗುಲಾಬಿಯಂತಿದ್ದಳು. ಅವನಿಗೆ ಏಳಲ್ಲ; ಹನ್ನೆರಡು ಮಕ್ಕಳಾದರೂ ಬೇಕೆನಿಸಿತ್ತು. ಅವರನ್ನೆಲ್ಲ ಸಾಕಲು ನಗುನಗುತ್ತ, ದೇವರು ದಯಪಾಲಿಸಿದ್ದ ಶಕ್ತಿಶಾಲಿ ದೇಹವನ್ನವಲಂಬಿಸಲು ಆಗಲೇ ನಿರ್ಧಾರಮಾಡಿಬಿಟ್ಟಿದ್ದ. ಎಂದಿನಂತೆ ನಗುತ್ತ, ಹಾಡುತ್ತ ಪಿಕಾಸಿ ಹಿಡಿದು ಬೆವರು ಸುರಿಸುತ್ತ ಪಕ್ಕಾ ಕಸುಬುಗಾರನಂತೆ ಕೆಲಸ ಮಾಡುವುದೆಂದು ನಿರ್ಧರಿಸಿದ್ದ. ಊರಿನವರು ಅವನನ್ನು ‘ಕವಿ ಟ್ವಿಯೋಲಾ’ ಎಂದು ಸುಮ್ಮಸುಮ್ಮನೆ ಕರೆಯುತ್ತಿರಲಿಲ್ಲ. ತನ್ನ ಸುತ್ತ ಸುಳಿಯುವ ತಂಗಾಳಿಯನ್ನು ನೋಡಿ ಮುಗುಳ್ನಗುತ್ತಿದ್ದ ಈತ ತನ್ನ ಸಹಾಯಕ ಗುಣ, ಒಳ್ಳೆಯ ಸ್ವಭಾವ, ಕುಶಾಲುಮಾಡುವ ಬುದ್ದಿಯಿಂದ ಊರಿನ ಎಲ್ಲ ರಿಗೂ ಪ್ರೀತಿಪಾತ್ರನಾಗಿದ್ದ. ಅನೇಕ ಹೆಂಗಸರಲ್ಲಿ ಅಸೂಯೆ ಹುಟ್ಟಿಸುವಷ್ಟು ಸುಂದರವಾಗಿ ಕಾಣುತ್ತಿದ್ದ ಇವನ ಗುಂಗುರು ಕೂದಲುಗಳನ್ನು ಮತ್ತು ಹೊಂಬಣ್ಣದ ಚರ್ಮವನ್ನು ಹದಮಾಡುವ ತಾಕತ್ತು ಸ್ವಯಂ ಆ ಸೂರ್ಯನಿಗೇ ಇರಲಿಲ್ಲ. ತನ್ನ ಹೊಳೆಯುವ ನೀಲಿಕಂಗಳಿಂದ ಅವನು ಹೆಂಗಸರತ್ತ ಒಂದು ವಿಚಿತ್ರ ನೋಟ ಬೀರಿದ್ದೇ ಅವರೆಲ್ಲ ಉದ್ರೇಕದಿಂದ ನಾಚಿ ನೀರಾಗುತ್ತಿದ್ದರು.

ಆ ದಿವಸ ಮಾತ್ರ, ಅಣ್ಣ ಜಾರೂವಿನ ಸಮಸ್ಯೆಗಿಂತಲೂ ಹೆಚ್ಚಾಗಿ ನೆಲಿ, ತನ್ನ ಮುದ್ದಿನ ಲೂಜಾಳ ಮುನಿಸಿಗೇ ಸಂಕಟಪಡುತ್ತಿದ್ದ. ಅವಳು ಆರು ದಿನಗಳಿಂದ ಆ ಒಂದು ಭಾನುವಾರಕ್ಕಾಗಿ ಕೆಲಕ್ಷಣಗಳನ್ನಾದರೂ ಅವನ ಜತೆ ಕಳೆಯಲು ಹಾತೊರೆಯುತ್ತಿದ್ದಳು. ಆದರೆ ಆತ ತನ್ನ ಆತ್ಮಸಾಕ್ಷಿಗನುಗುಣವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ವಿರುದ್ಧವಾಗುವ ಕೆಲಸ ಮಾಡಬಲ್ಲ ನೆ? ಬಡಪಾಯಿ ಜಿಯೂರ್ಲಾನ್ನು! ಅವನೂ ಕೂಡ ಯಾವುದೋ ಕೆಲಸದಲ್ಲಿ ಮುಳುಗಿದ್ದ ಪಾಪ! ಇದ್ದಕ್ಕಿದ್ದಂತೆ ಎಂಥ ಗ್ರಹಚಾರ ಬಂದುಬಿಟ್ವಿತು! ಮಾಂಟೆಲೂಸ್ಸಾದಲ್ಲಿರುವ ಲೋಪ್ಸ್‍ನ ಫಾರ್ಮ್‍ನಲ್ಲಿ, ಆ ದಿವಸ ಆತ ಮರಹತ್ತಿ ಬಾದಾಮುಗಳನ್ನು ಕೊಯುತ್ತಿದ್ದ. ಹಿಂದಿನ ದಿವಸ ಬೆಳಿಗ್ಗೆ, ಅಂದರೆ ಶನಿವಾರದ ಹವಾಮಾನ ಮಳೆಯ ಸೂಚನೆ ಕೊಟ್ಟಿತ್ತಾದರೂ ಮಳಯೇನೂ ಸುರಿದಿರರಲಿಲ್ಲ. ಮಧ್ಯಾಹ್ನದ ಹೊತ್ತು, ಲೋಪ್ಸ್ ಹೇಳಿದ: “ಈ ಮಳೆದೇನೂ ಗ್ಯಾರಂಟಿ ಇಲ್ಲ ಮಾರಾಯಾ….. ನನ್ನ ಬಾದಾಮುಗಳು ಹಾಗೇ ನೆಲದ ಮೇಲೆ ಮಳನೀರಿಗೆ ಕೊಚ್ಚಿ ಹೋಗುವುದು ನನಗಿಷ್ಣವಿಲ್ಲ.” ಅಲ್ಲೇ ಇದ್ದ ತನ್ನ ಕೆಲಸದ ಹೆಂಗಸರಿಗೆ ಸ್ಟೋರ್ ಹೌಸಿಗೆ ಹೋಗಿ ಅವುಗಳ ಸಿಪ್ಪೆ ಸುಲಿಯುವಂತೆ ಆಜ್ಞಾಪಿಸಿದ ಕೂಡ. ನಂತರ, ನೆಲಿ ಮತ್ತು ಸಾರೋ ಟೊರ್ಟೊರೋಸಿಯವರಿದ್ದ ಗುಂಪಿಗೂ, “ನೀವೂ ಬೇಕಿದ್ದರೆ ಹೋಗಿ ಆ ಹೆಂಗಸರ ಜತೆ ಸಿಪ್ಪೆ ಸುಲಿಯಬಹುದು” ಎಂದ. ಜಿಯೂರ್ಲಾನ್ನು ಜಾರು ತಕ್ಷಣ ಹೇಳಿದ: “ಆಯಿತು…. ಹೋಗ್ತೇವೆ. ಆದರೆ ನಮಗೆ ಇಡೀ ದಿವಸದ ಮಜೂರಿ ಸಿಗುವುದೇ? ಇಪ್ತತ್ತೈದು ಸೊಲ್ದಿ ಸಿಗಬಹುದೆ?” “ಇಲ್ಲ-ಬರೇ ಅರ್ಧ ಮಾತ್ರ ಸಿಗುತ್ತದೆ…. ನಿಮಗೆ ಅದನ್ನು ಪಾವತಿಸುವಾಗ ನಾನೇ ಖುದ್ದು ಲೆಕ್ಕ ಮಾಡಿಕೊಡುತ್ತೇನೆ. ಹೆಂಗಸರಿಗೆ ಕೊಡುವಂತೆ ಬರೇ ಅರ್ಧ ಮಾತ್ರ.” ಎಂದ ಲೋಪ್ಸ್. ಎಷ್ಟು ಕೊಬ್ಬು ಅವನಿಗೆ! ಬಹುಶಃ ಗಂಡಸರಿಗೆ, ಇಡೀ ದಿವಸದ ಕೂಲಿ ಸಂಪಾದಿಸುವಷ್ಟು ಕೆಲಸ ಅಲ್ಲಿರಲಿಲ್ಲವೇನೋ”? ಮಳೆ ಕೂಡಾ ಇರಲಿಲ್ಲ. ಹಾಗೆ ನೋಡಿದರೆ ಇಡೀ ರಾತ್ರಿ, ಇಡೀ ಹಗಲು ಮಳೆಯೇ ಸುರಿಯಲಿಲ್ಲ. “ಅರ್ಧ ಮಜೂರಿಯೆ? ಆ ಹೆಂಗಸರ ಹಾಗೆ ನಾಮ ಪ್ಯಾಂಟ್ ಧರಿಸುವವ…. ಗಂಡಸು. ಸದ್ಯ ಅರ್ಧದಿನದ ಸಂಬಳ ಕೊಟ್ಟುಬಿಡಿ ನಾನು ಹೋಗ್ತೇನೆ” ಎಂದ ಜಿಯೂರ್ಲಾನ್ನು ಜಾರು.

ಆತ ಕೊನೆಗೂ ಹೋಗಲಿಲ್ಲ. ತನ್ನ ಸೋದರರು ಮಾತ್ರ ಹೆಂಗಸರಿಗೆ ನಿಗದಿಯಾದಷ್ಟು ಮಜೂರಿಗೆ ಬಾದಾಮ್ನ ಸಿಪ್ಪೆ ಸುಲಿಯಲು ಒಪ್ಪಿ ಕೊಂಡುಬಿಟ್ಟಿದ್ದರಿಂದ ಆತ ಸಂಜೆತನಕ ಕಾಯಬೇಕಾಯಿತು. ನಡುವೊಮ್ಮೆ, ಪಿಳಿಪಿಳಿ ನೋಡುತ್ತ ಸುಮ್ನೆ ನಿಂತೇ ಇರುವುದು ಬೋರ್ ಅಂತೆನಿಸಿ, ಹೊರಡುವ ಸಮಯಕ್ಕೆ ಸರಿಯಾಗಿ ಕೆಲಸದಾಳಿಗೆ ಎಬ್ಬಿಸಲು ತಿಳಿಸಿ ಅಲ್ಲೇ ತೂಕಡಿಸಿದ.

ಅವರೆಲ್ಲ ಕಳೆದ ಒಂದೂವರೆ ದಿವಸದಿಂದ ಬಾದಾಮುಗಳನ್ನು ಕೊಯುತ್ತಿದ್ದರೂ ತಕ್ಕಷ್ಟು ಸಂಗ್ರಹವಾಗಿರಲಿಲ್ಲ. ಅಲ್ಲಿದ್ದ ಹೆಂಗಸರೆಲ್ಲ, ಅದೆಷ್ಟೇ ಹೊತ್ತಾದರೂ ಎಲ್ಲ ಬಾದಾಮುಗಳನ್ನು ಆ ಸಂಜೆಯೇ ಸುಲಿಯುವುದೆಂದೂ, ರಾತ್ರೆ ಅಲ್ಲಿಯೇ ಉಳಿದು, ಮಾರನೇ ದಿವಸ ಇನ್ನೂ ಕತ್ತಲು ಕತ್ತಲು ಇರವಾಗಲೇ ಊರಿಗೆ ಹಿಂದಿರುಗುವುದೆಂದೂ ನಿರ್ಧರಿಸಿದರು. ಹಾಗೇ ಮಾಡಿದರು ಕೂಡ. ಲೋಪ್ಸ್ ಅವರಿಗೆಂದೇ ಬೇಯಿಸಿದ್ದ ಬೀನ್ಸು ಮತ್ತು ವೈನನ್ನು ತರಿಸಿದ. ಸಿಪ್ಪೆಸುಲಿಯುವುದೆಲ್ಲ ಮುಗಿದ ನಂತರ, ಸುಮಾರು ಮಧ್ಯರಾತ್ರಿಯ ಹೊತ್ತಿಗೆ ಗಂಡಸರು, ಹೆಂಗಸರೆಲ್ಲರೂ ತೆನೆಬಡಿಯುವ ನೆಲದ ಮೇಲೆಯೇ ಮೈಯನ್ನು ಗಾಳಿಗೊಡ್ಡಿ ನಿದ್ದೆಹೋದರು. ಸುತ್ತಲಿನ ಹುಲ್ಲು ಇಬ್ಬನಿಯಿಂದ ಒದ್ದೆಯಾಗಿರುವುದು ನೋಡಿದರೆ ಮಳೆಯೇ ಬಂದಿರಬೇಕು ಎಂದನಿಸುತ್ತಿತ್ತು.

“ಲೈಯೊಲಾ…. ಹಾಡು ಮಾರಾಯಾ!” ಎಂದು ಯಾರೋ ಹೇಳಿದ್ದೇ ನೆಲಿ ಹಾಡಲು ಶುರುಮಾಡಿಯೇಬಿಟ್ಟ. ಮೇಲೆ ಆಗಸದಲ್ಲಿ ದಟ್ಟಮೋಡಗಳ ನಡುವೆ ಚಂದ್ರ ಕಣ್ಣು ಮುಚ್ಚಾಲೆಯಾಡುತ್ತಿದ್ದ. ಚಂದ್ರ, ಅವನಿಗೆ ಲೂಜಾಳ ಮುಖದಂತೆಯೇ ಕಂಡ. ಪ್ರೇಮದ ತೀವ್ರತೆಗೆ ತಕ್ಕಂತೆ ಬದಲಾಗುತ್ತ ಚಂದ್ರ ಕೂಡ ಮುಗುಳ್ನಗುವುದೋ, ದುಃಖಿತನಾಗುವುದೋ, ಸಂತೋಷಪಡುವುದೋ ಮಾಡುತ್ತಿದ್ದಂತಿತ್ತು.

ಕೊಟ್ಟಿಗೆಯಲ್ಲೇ ಇದ್ದ ಜಿಯೂರ್ಲಾನ್ನು ಜಾರುನನ್ನು ಬೆಳಗಾಗುವ ಮೊದಲೇ ಸಾರೋ ಎಬ್ಬಿಸಲೆಂದು ಹೋದಾಗ ಜ್ವರದಿಂದ ಕಪ್ಪಾಗಿ ಊದಿಕೊಂಡಿದ್ದು ಗೊತ್ತಾಯಿತು.

ಇದನ್ನೆಲ್ಲ ವಿವರಿಸಿ ಹೇಳಿದ್ದು ನೆಲಿ ಟೊರ್ಟೊರೋಸಿ. ಅದೂ ಕ್ಷೌರದಂಗಡಿಯಲ್ಲಿ. ಯಾವುದೋ ಒಂದು ಗಳಿಗೆಯಲ್ಲಿ ಕ್ಷೌರಿಕನ ಮನಸ್ಸು ಚಂಚಲವಾಗಿದ್ದೇ, ಬ್ಲೇಡಿನಿಂದ ಸಣ್ಣ ಗಾಯವಾಯಿತು. ಗದ್ದದ ಹತ್ತಿರ ತೀರಾ ಸಣ್ಣಗಾಯ! ಅದೂ ಕಣ್ಣಿಗೆ ಕಾಣಿಸದಷ್ಟು ಚಿಕ್ಕದು! ನೆಲಿಗೆ ಅದನ್ನೆಲ್ಲ ನೋಡುವಷ್ಟು ಪುರುಸೊತ್ತೂ ಇರಲಿಲ್ಲ. ಯಾಕೆಂದರೆ ಅಷ್ಟರಲ್ಲಾಗಲೇ ಲೂಜಾ ತನ್ನ ತಾಯಿಯೊಂದಿಗೆ ಕ್ಷೌರದಂಗಡಿಯ ಬಾಗಿಲಲ್ಲಿ ಪ್ರತ್ಯಕ್ಷಳಾಗಿದ್ದಳು. ಅವಳ ಪಕ್ಕದಲ್ಲೆ ಜಿಯೂರ್ಲಾನ್ನು ಜಾರುವಿನ ಹೆಂಡತಿಯಾಗಲಿರುವ ಮಿತಾ ಲುಮಿಯಾ ಕೂಡಾ ನಿಂತಿದ್ದಳು; ಹತಾಶೆಯಿಂದ ರೋದಿಸುತ್ತಿದ್ದಳು.

ತನ್ನ ಗಂಡನಾಗಲಿರುವವನನ್ನು ಕಾಣಲು ಮಾಂಟೆಲೂಸ್ಸಾದ ತನಕ ಹೋಗುವುದು ಬೇಡ ಎಂದು ಆ ಬಡಪಾಯಿ ಹುಡುಗಿಗೆ ಅರ್ಥವಾಗುವಂತೆ ವಿವರಿಸಬೇಕಾದರೆ ಅವರಿಗೆ ಸಾಕು ಸಾಕಾಯಿತು. ಅವನನ್ನು ಕರಕೊಂಡು ಬಂದ ನಂತರ ಸಂಜೆ ಮಾತಾಡಿಸಿದರಾಯಿತು ಎಂದು ಸಮಾಧಾನ ಹೇಳಿದರು. ಅವರನ್ನು ಸೇರಿಕೊಂಡ ಸಾರೋ, “ವೈದ್ಯರಾಗಲೇ ಹೇಸರಗತ್ತೆ ಹತ್ತಿಯಾಗಿದ್ದು ಇನ್ನಷ್ಟು ಹೊತ್ತು ಕಾಯುವುದು ಸಾಧ್ಯವಿಲ್ಲ ಎಂದಿದ್ದಾರೆ ಅಂತಂದ. ವೆಲಿ, ಲೂಜಾಳನ್ನು ತಾಳ್ಮೆಯಿಂದಿರುವಂತೆ ಬೇಡಿಕೊಂಡ. ಸಂಜೆ ತಾನು ವಾಪಾಸಾದ ನಂತರ ಶುಭ ಸುದ್ಧಿಯನ್ನೇ ಕೊಡುವೆ ಎಂದೂ ಹೇಳಿದ.

ನಿಜದಲ್ಲಿ, ಪರಸ್ಪರ ಕೈಕೈ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಮತ್ತು ಆಗಷ್ಟೇ ನಿಶ್ಚಿತಾರ್ಥ ಮುಗಿಸಿರುವ ಜೋಡಿಗಳಿಗೆ ಇಂಥ ದುಃಖದ ಸಂಗತಿಗಳು ಕೊಡಾ ರಮ್ಯವಾದವುಗಳೇ.
* * *

ಎಂಥ ಹಾಳುಗೆಟ್ಟ ರಸ್ತೆಯಪ್ಪಾ ಇದು! ಸಾರೋ ಮತ್ತು ನೆಲಿ ಹೇಸರಗತ್ತೆಯ ಲಗಾಮನ್ನು ಎರಡೂ ಬದಿ ಹಿಡಿದುಕೊಂಡಿದ್ದರೂ ಕೂಡಾ ಪ್ರಪಾತಗಳಿರುವ ಆ ರಸ್ತೆಯಲ್ಲಿ ಲೋಜಿಕ್ಕೊಲೋಗೆ ಕಣ್ಣೆದುರೇ ಸಾವನ್ನು ಕಂಡಹಾಗಾಗುತ್ತಿತ್ತು.

ಅಷ್ಟು ಎತ್ತರದಿಂದ ಆ ವಿಶಾಲ ಊರಿನ ಬಯಲು-ಕಣಿವೆಗಳೆಲ್ಲ ಸ್ಪಷ್ಟ ಕಾಣುತ್ತಿದ್ದವು. ಬಾದಾಮು, ಆಲಿವ್ ಹಣ್ಣುಗಳ ತೋಪುಗಳೂ ಕಾಣುತ್ತಿದ್ದವು. ಆಗಲೇ ಹಳದಿಗೆ ತಿರುಗಿದ್ದ ಪೈರಿನ ಮೋಟುಗಳು ಅಲ್ಲಲ್ಲಿ ನೆಲ ಸ್ವಚ್ಛ ಮಾಡಲೆಂದು ಒಟ್ಟಿದ್ದ ಬೆಂಕಿಯಿಂದಾಗಿ ಕಪ್ಪಾಗಿದ್ದವು. ಹಿನ್ನೆಲೆಗೆ ಕಡುನೀಲಿ ಕಡಲು, ಮಲ್ಬರಿ, ಸೈಪ್ರಸ್ ಕ್ಯಾರೋಬ್ ಮತ್ತು ಆಲಿವ್ ಮರಗಳು ತಂತಮ್ಮ ಹಸಿರನ್ನು ಹಿಡಿದಿಟ್ಟುಕೊಂಡಿದ್ದವು. ಅತ್ತ ಬಾದಾಮ್ ಮರದ ತುದಿಗಳಂತೂ ಆಗಲೇ ಬಡಕಲಾಗಿದ್ದವು. ಸುತ್ತ ಗಾಳಿ ಬೀಸುತ್ತಿದ್ದರೂ, ಅದನ್ನು ಮೀರಿ ಬಿಸಿಲಿನ ಝಳಪಿತ್ತು. ಆಗಾಗ, ಪಾಪಾಸುಕಳ್ಳಿಯ ಮುಳ್ಳು ಮೇಳಿಗಳಾಚೆಯಿಂದ, ಲಾರ್ಕ್ ಪಕ್ಷಿಯ ಕೂಗಿಗೋ ಅಥವಾ ಮಾಗ್‍ಪೈ ಪಕ್ಷಿಯ ಚಿಲಿಪಿಲಿಗೋ ಅಂತೂ ವೈದ್ಯ ಕೂತಿದ್ದ ಹೇಸರಗತ್ತೆಯ ಕಿವಿಗಳು ನಿಮಿರಿ ನಿಲ್ಲುತ್ತಿದ್ದವು.

“ಕೆಲಸಕ್ಕೆ ಬಾರದ ಹೇಸರಗತ್ತೆಯಿದು” ಎಂದಾತ ಹಲುಬುತ್ತಿದ್ದ.

ಎದುರು ಕಣ್ಣಿಗೆ ರಾಚುತ್ತಿದ್ದ ಬಿಸಿಲನ್ನೂ ಲೆಕ್ಕಿಸದ ವೈದ್ಯ, ಹೇಸರಗತ್ತೆಯ ಕಿವಿಗಳನ್ನೇ ಎವೆಯಿಕ್ಕದೆ ಗಮನಿಸುತ್ತಿದ್ದ. ಜತೆಯಲ್ಲಿ ತಂದಿದ್ದ ಛತ್ರಿ ಹಾಗೆಯೇ ಭುಜದಲ್ಲಿ ನೇತಾಡುತ್ತಿತ್ತು.

ಟೊರ್ಟೊರೋಸಿ ಸೋದರರು, “ಹೆದರಬೇಡಿ ಸರ್, ನಾವಿದ್ದೇವಲ್ಲ” ಎಂದು ಹುರಿದುಂಬಿಸುತ್ತಿದ್ದರು.

ನಿಜದಲ್ಲಿ, ವೈದ್ಯ ಅಷ್ಟೊಂದು ಭಯಪಡುವ ಅವಶ್ಯಕತೆಯೇ ಇರಲಿಲ್ಲ. ಆದರೆ ತಾನು ಭಯಪಡುತ್ತಿರುವುದು ತನ್ನ ಮಕ್ಕಳಿಗಾಗಿ ಎಂದ. ಆ ಏಳುಮಂದಿ ದುರಾದೃಷ್ಟವಂತರಿಗಾದರೂ ಆತ ಬದುಕುಳಿಯಬೇಕಿತ್ತಲ್ಲ!

ಅವನ ಗಮನ ಬೇರೆಡೆ ಸೆಳೆಯಲು ಟೊರ್ಟೊರೋಸಿ ಸೋದರರು ಬೆಳೆ ಹಾಳಾದ ಬಗ್ಗ ಹೇಳಿದರು. “ಗೋಧಿ, ಬಾರ್ಲಿ, ಬೀನ್ಸು – ಯಾವುದೂ ಈ ಬಾರಿ ಹೆಚ್ಚಿಗೇನೂ ಸಿಕ್ಕಿಲ್ಲ ಸರ್. ಇನ್ನು ಬಾದಾಮುಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಪ್ರತಿ ಬಾರಿ ಅವು ಒಳ್ಳೇ ಫಲ ಕೊಡುವುದೂ ಇಲ್ಲ. ಒಮ್ಮೆ ಭರಪೂರ ಬೆಳೆಬಂದರೆ ಇನ್ನೊಮ್ಮೆ ಏನೂ ಸಿಗುವುದಿಲ್ಲ. ಅಲಿವ್ ಹಣ್ಣುಗಳ ಬೆಳೆಗಳಂತೂ ವಿಪರೀತ ಹಿಮಬಿದ್ದು ಎಲ್ಲ ಹಾಳಾಗಿಹೋದವು. ಅತ್ತ ರೈತರಿಗೂ ತಮಗಾದ ನಷ್ಟ ಭರಿಸಲು ಸಾಧ್ಯವಾಗದೇ ಹೋಯಿತು. ಇನ್ನು ದ್ರಾಕ್ಷಿಬೆಳೆಗಳಿಗೂ ಯಾವುದೋ ರೋಗ ತಗಲಿಬಿಟ್ಟಿತು.”

“ನನ್ನನ್ನು ಸಂತೋಷಪಡಿಸಲು ಒಳ್ಳೇ ಉಪಾಯವಿದು” ಎಂದು ವೈದ್ಯ ಆಗಾಗ ತಲೆಯಾಡಿಸುತ್ತ ಹೇಳುತ್ತಿದ್ದ .

ಎರಡು ಗಂಟೆಗಳ ಪ್ರಯಾಣ ಮುಗಿಸಿದ ನಂತರ ಮಾತಾಡಲು ಎಲ್ಲ ವಿಷಯಗಳೂ ಖಾಲಿಯಾದವು. ಪ್ರತಿಯೊಬ್ಬರೂ ಮೌನವಾಗಿಬಿಟ್ಟರು. ಅವರೀಗ ಸಾಗುತ್ತಿದ್ದ ರಸ್ತೆ ಸಪಾಟಾಗಿತು. ಬಿಳಿಧೂಳಿನ ಹುಡಿ ಚೆಲ್ಲಿದ್ದ ಆ ರಸ್ತೆಯಲ್ಲಿ ಹೇಸರಗತ್ತೆಯ ನಾಲ್ಕು ಕಾಲುಗಳ ಖುರಪುಟದ ಸದ್ದು ಮತ್ತು ಆ ರೈತರಿಬ್ಬರ ಮೊಳೆಹೊಡೆದಿದ್ದ ದೊಡ್ಡಶೂಗಳು ಮಾತ್ರ ಸಂಭಾಷಣೆ ನಡೆಸುತ್ತಿರುವಂತಿತ್ತು. ಲೈಯೋಲಾ, ಒಂದು ಹಂತದಲ್ಲಿ ನಿರಾಸಕ್ತಿಯಿಂದ ಸಣ್ಣದನಿಯಲ್ಲಿ ಹಾಡಲು ಶುರುಮಾಡಿದ, ತಕ್ಷಣವೇ ನಿಲ್ಲಿಸಿಬಿಟ್ಟ. ರಸ್ತೆಯಲ್ಲಿ ಒಂದು ನರಹುಳುವೂ ಕಾಣುತ್ತಿರಲಿಲ್ಲ. ಭಾನುವಾರವಾಗಿದ್ದರಿಂದ ಊರಿನವರೆಲ್ಲ ಚರ್ಚ್‍ಗೆ, ಕೆಲವರು ಶಾಪ್ಪಿಂಗ್‍ಗೆ, ಇನ್ನು ಕೆಲವರು ಆಟವಾಡಲೆಂದು ಹೋಗಿದ್ದರು. ಮಾಂಟೆಲೂಸ್ಸಾದಲ್ಲಿ ಪ್ರಾಯಶಃ ಜಿಯೂರ್ಲಾನ್ನು ಜಾರು ಬಳಿ ಯಾರೂ ಇರಲಿಲ್ಲ. ಬಡಪಾಯಿ ಜಾರು!

ಹಳಸಲು ನಾತ ಬೀರುತ್ತಿದ್ದ ಕೊಟ್ಟಿಗೆಯಲ್ಲಿ ಆತ ಕೈಕಾಲು ಚಾಚಿಕೊಂಡು ಒಂಟಿ ಬಿದ್ದುಕೊಂಡಿರುವುದನ್ನು ಕೊನೆಗೂ ಅವರು ಹುಡುಕಿದರು. ಗುರುತೇ ಸಿಗಲಾರದಷ್ಟು ಊದಿಕೊಂಡು ನೀಲಿಗಟ್ಟಿದ್ದ ಅವನು ಇನ್ನೂ ಜೀವಂತವಾಗಿದ್ದ.

ಗೊರಕೆಹೊಡೆಯುವಂತೆ ಉಸಿರಾಡುತ್ತಿದ್ದ.

ಮೇವಿನಪೆಟ್ಟಿಗೆಯ ಪಕ್ಕದಲ್ಲೇ ಅಗುಳಿಹಾಕಿದ್ದ ಬಾಗಿಲ ಮೂಲಕ ಬಿಸಿಲು ಅವನ ಮುಖಕ್ಕೆ ರಾಚುತ್ತಿತ್ತು. ಮೂಗು ಬಾತುಕೊಂಡಿದ್ದು ತುಟಿಗಳು ವಿಕಾರವಾಗಿ ಊದಿಕೊಂಡಿದ್ದವು. ಆತ ಮನುಷ್ಯನಂತೆ ಕಾಣುತ್ತಲೇ ಇರಲಿಲ್ಲ. ಆ ಊದಿಕೊಂಡಿದ್ದ ತುಟಿಗಳ ಮೂಲಕವೇ ಉಸಿರಾಟ ಗುರುಗುರು ಎಂದು ಗೊರಕೆ ಹೊಡೆಯುವಂತೆ ಕೇಳಿಸುತ್ತಿತ್ತು. ಅವನ ದಟ್ಟ ಗುಂಗುರು ಕೂದಲುಗಳ ಎಡೆಯಲ್ಲಿ ಹುಲ್ಲಿನ ಕಂತೆಯೊಂದು ಬಿಸಿಲಿಗೆ ಮಿರಿಮಿರಿ ಹೊಳೆಯುತ್ತಿತ್ತು. ಈ ಭಯಾನಕ ದೃಶ್ಯ ನೋಡಿದ್ದೇ ಗರಬಡಿದವರಂತೆ ಆ ಮೂವರು ಹೆದರಿ ಅಲ್ಲಿಯೇ ನಿಂತುಬಿಟ್ಟರು. ಹೇಸರಗತ್ತೆ ಮಾತ್ರ ಕೊಟ್ಟಿಗೆಯ ಸವೆದನೆಲವನ್ನು ಕಾಲಿನಿಂದ ಕೆರೆಯುತ್ತ ಒದರಾಡುತ್ತಿತ್ತು. ನಂತರ ಸಾರೋ ಟೊರ್ಟೊರೋಸಿ ಸಾಯಹೊರಟವನ ಹತ್ತಿರ ಹೋಗಿ ಪ್ರೀತಿಯಿಂದ, “ಜಿಯೂರ್ಲಾ; ಜೆಯೂರ್ಲಾ ಡಾಕ್ಬರು ಬಂದಿದ್ದಾರೆ” ಎಂದ.

ನೆಲಿ ಹೇಸರಗತ್ತೆಯನ್ನು ಕಂಬಕ್ಕೆ ಕಟ್ಟಿಹಾಕಲೆಂದು ಆಚೆಗೆಲ್ಲೋ ಹೋಗಿಬಿಟ್ಟ. ಗೋಡೆಯ ಮೇಲೆ ಕತ್ತೆಯ ನೆರಳೊಂದು ಬಿದ್ದಂತೆ ಕಾಣಿಸುತ್ತಿತ್ತು.

ಜೆಯೂರ್ಲಾನ್ನು ಜಾರುನನ್ನು ಮತ್ತೊಮ್ಮೆ ಕರೆದಾಗ ತನ್ನ ಗಡುಸು ಉಸಿರಾಟವನ್ನು ನಿಲ್ಲಿಸಿ ಕಣ್ತೆರೆಯಲು ಪ್ರಯತ್ನಿಸಿದ. ಭಯ ಸೂಸುತ್ತಿದ್ದ ಈ ಎರಡೂ ಕಣ್ಣುಗಳು ಕೆಂಪೇರಿ ಕಪ್ಪು ವೃತ್ತಗಳು ಮೂಡಿದ್ದವು. ತನ್ನ ಊದಿಕೊಂಡ ಬಾಯನ್ನು ತೆರೆದು ಅದು ಉರಿಯುತ್ತದೆ ಎಂಬಂತೆ ಮುಲುಕತೊಡಗಿದ.

“ನಾನು ಸಾಯ್ತಾ ಇದ್ದೇನೆ!”

“ಇಲ್ಲ…. ಇಲ್ಲ…. ಹಾಗೆಲ್ಲ ಹೇಳಬೇಡಿ…. ನೋಡಿಲ್ಲಿ ನಾವು ಡಾಕ್ಟರನ್ನು ಕರಕೊಂಡೇ ಬಂದಿದ್ದೇವೆ” ಎಂದ ಸಾರೋ ಉದ್ವೇಗದಿಂದ.

ನನ್ನನ್ನು ಹಳ್ಳಿಗೆ ಕರಕೊಂಡು ಹೋಗಿ!” ಜಾರು ಬೇಡಿಕೊಂಡ.

ಆಗ ಸಾರೋ, ತಟ್ಟನೆ, “ಹೌದೌದು…. ನೋಡಿಲ್ಲಿ ನಾವು ಹೇಸರಗತ್ತೆ ಯನ್ನು ತಂದಿದ್ದೇವೆ” ಎಂದು ಹೇಳಿದ. ಈ ಸಲ ನೆಲಿ ಓಡಿಬಂದು, ಬಾಗುತ್ತ, “ಧೈರ್‍ಯ ಕಳಕೊಳ್ಳಬೇಡ. ಜಿಯೂರ್ಲಾ…. ನಿನ್ನನ್ನು ಬೇಕಿದ್ದರೆ ಹೊತ್ತುಕೊಂಡೇ ಹೋಗ್ತೇನೆ” ಎಂದ.

ಜಿಯೂರ್ಲಾನ್ನು ಜಾರು ನೆಲಿಯ ಸ್ವರಬಂದತ್ತ ತಿರುಗಿ, ತನ್ನ ಭಯಭೀತ ಕಣ್ಣುಗಳಿಂದ ಒಂದು ಕ್ಷಣನೋಡಿದ. ನಂತರ ಒಂದು ಕೈಯಿಂದ ಅವನ ಬೆಲ್ಟನ್ನು ಹಿಡಿದು “ನೀನಾ?” ಎಂದ.

“ಹೌದು. ನಾನೇ…. ಧೈರ್ಯವಾಗಿರು! ಅಳುತ್ತ ಇದ್ದೀಯಲ್ಲ ಅಳಬೇಡ’ ಜಿಯೂರ್ಲಾ…. ಅಳಬೇಡ. ಏನೂ ಆಗಿಲ್ಲ!” ಎಂದು ಹೇಳಿದವೇ ಅವನ ಎದೆಯ ಮೇಲೆ ಕೈಯಿಟ್ಪ. ಅದು ಬಿಕ್ಕಳಿಕೆಯಿಂದಾಗಿ ನಡುಗುತ್ತಿತ್ತು. ಶ್ವಾಸ ಕಟ್ಟಿದ್ದರೂ ಜಾರು ಆವೇಶದಿಂದ ತಲೆಯಾಡಿಸುತ್ತ ಒಂದು ಕೈಯನ್ನೆತ್ತಿ ನೆಲಿಯ ಕುತ್ತಿಗೆಯ ಹಿಂಭಾಗವನ್ನು ಹಿಡಿದುಕೊಂಡು ಅತ್ತ ವಾಲಿದ.

“ನಾವಿಬ್ಬರೂ ಒಂದೇ ಕಾಲಕ್ಕೆ ಮದುವೆಯಾಗುವವರಿದ್ದೆವು….”

ಕುತ್ತಿಗೆಗೆ ಬಿಗಿಯಾಗಿದ್ದ ಅವನ ಕೈಯನ್ನು ಬಿಡಿಸುತ್ತ, ‘ಅನುಮಾನವೇ ಬೇಡ. ನಾವಿಬ್ಬರೂ ಒಂದೇ ಕಾಲಕ್ಕೆ ಮದುವೆ ಆಗಿಯೇ ಸಿದ್ಧ ಎಂದ ನೆಲಿ.

ಈ ಎಲ್ಲದರ ನಡುವೆ, ವೈದ್ಯ ಸಾಯುತ್ತ ಬಿದ್ದಿರುವವನನ್ನೇ ಗಮನಿಸುತ್ತಿದ್ದ. ವಿಷಯ ಸ್ಪಷ್ಟವಾಗಿತ್ತು; ಇದು ಆಂಥ್ರಾಕ್ಸ್ ಎಂಬ ಖಾಯಿಲೆಯಾಗಿತ್ತು.

“ಹೇಳು…. ಯಾವುದಾದರೂ ಕೀಟ ಕಚ್ಚಿದ್ದು ನೆನಪಾಗ್ತಾ ಇದೆಯಾ?”

ಜಾರು “ಇಲ್ಲ” ಎಂದ ತಲೆಯಲ್ಲಾಡಿಸುತ್ತ.

“ಕೀಟ?” ಸಾರೋ ಕೇಳಿದ.

ವೈದ್ಯ ಆ ಅಶಿಕ್ಷಿತರಿಬ್ಬರಿಗೂ ಆ ಖಾಯಿಲೆಯ ಕುರಿತು ತನ್ನಿಂದ ಸಾಧ್ಯವಾದಷ್ಟು ವಿವರಿಸಿದ. ಈ ಪರಿಸರದಲ್ಲಿ ಯಾವುದೋ ಪ್ರಾಣಿ ಸತ್ತಿರಬೇಕು. ಯಾವುದೋ ಕೊರಕಲಿನಲ್ಲಿ ಬಿಸಾಡಿದ ಹೆಣಕ್ಕೆ ಮುತ್ತಿಕೊಂಡ ಕೀಟಗಳು ಅದೆಷ್ಟೋ ಯಾರಿಗ್ಗೊತ್ತು ? ಅವುಗಳಲ್ಲೊಂದು ಕೀಟ ಈ ಖಾಯಿಲೆಯನ್ನು ಜಾರೋಗೆ ತಗುಲಿಸಿರಬೇಕು.

ಆ ವೈದ್ಯ ಮಾತನಾಡುತ್ತಿದ್ದಾಗ ಜಾರು ಮುಖವನ್ನು ಗೋಡೆಯತ್ತ ತಿರುಗಿಸಿದ್ದ. ಯಾರ ಅರಿವಿಗೂ ಬಾರದಿದ್ದರೂ, ಸಾವು ಮಾತ್ರ ಹೊಂಚು ಹಾಕಿ ಕೂತಿತ್ತು. ಗೋಡೆಯ ಮೇಲೊಂದು ಕೀಟ ಅಲುಗಾಡದೆ ಕೂತಿತ್ತು. ಸೂಕ್ಷ್ಮವಾಗಿ ಗಮನಿಸಿದರೆ, ಅದು ತನ್ನ ಎದುರಿನ ಎರಡು ಕಾಲುಗಳನ್ನು ಪರಸ್ಪರ ತಿಕ್ಕುತ್ತ ಬಾಯಿಯ ನಳಿಕೆಯನ್ನು ಸಂತೃಪ್ತಿಯಿಂದ ಊದುತ್ತಿತ್ತು. ಜಾರು ಅದನ್ನು ನೋಡಿ ದುರುಗುಟ್ಟಿದ.

ಒಂದು ಕೀಟ….

ಇದೇ ಕೀಟವೋ ಅಥವಾ ಇವ್ಯಾವುದೋ ಯಾರಿಗ್ಗೊತ್ತು? ಈಗ ವೈದ್ಯನ ಮಾತು ಕೇಳಿಸಿಕೊಳ್ಳುತ್ತಿದ್ದವನಿಗೆ ನೆನಪಾಗತೊಡಗಿತು. ಹೌದು…. ಹಿಂದಿನ ದಿವಸ ಲೋಪ್ಸ್‍ನ ಬಾದಾಮುಗಳನ್ನು ಅವನ ತಮ್ಮಂದಿರು ಸುಲಿದು ಮುಗಿಸುವುದನ್ನೇ ಕಾಯುತ್ತ ಮಲಗಿದವನಿಗೆ ಒಂದು ಕೀಟ ಗೋಳು ಹೊಯ್ದಿತ್ತು. ಇದು ಅದೇ ಇದ್ದಿರಬಹುದೇ? ಎಂಬ ಸಣ್ಣ ಅನುಮಾನವೂ ಬಂತು. ಅದು ಕಣ್ಣೆದುರಿಗೇ ಹಾರಿದ್ದನ್ನು ಅವನ ದೃಷ್ಟಿ ಹಿಂಬಾಲಿಸಿತು…. ಓ ಅಲ್ಲಿ ಅಷ್ಟು ದೂರವಿದ್ದ ನೆಲಿಯ ಗಲ್ಲದ ಮೇಲೆ ಅದು ಕುಳಿತುಕೊಂಡಿತ್ತು. ಅವನ ಗಲ್ಲದಿಂದ ಅದೀಗ ಮೆಲ್ಲ ಮೆಲ್ಲ ಅಡ್ಡಾದಿಡ್ಡಿ ಅವನ ಗದ್ದದ ಬಳಿ ಹಾರುತ್ತ ಬ್ಲೇಡಿನಿಂದುಂಟಾದ ಗಾಯವನ್ನ ಬಲವಾಗಿ ಕಚ್ಚಿಬಿಟ್ಟಿತು.

ಜಿಯೂರ್ಲಾನ್ನು ಜಾರು ಕೆಲಹೊತ್ತು ಅದನ್ನೇ ದಿಟ್ಟಿಸುತ್ತ ಕೂತ. ನಂತರ ಉಸಿರೆಳೆದು ಕೊಳ್ಳುತ್ತ ಸಣ್ಣದನಿಯಲ್ಲಿ, “ಅದು ಒಂದು ಕೀಟ ಇದ್ದಿರಬಹುದೆ?” ಎಂದು ಕೇಳಿದ.

“ಒಂದು ಕೀಟವೆ? ಹೌದು. ಯಾಕಿರಬಾರದು?” ವೈದ್ಯ ಕೇಳಿದ.

ಜಿಯೂರ್ಲಾನ್ನು ಜಾರು ಮತ್ತೇನೂ ಹೇಳಲಿಲ್ಲ. ಕೀಟವನ್ನೇ ಎವೆಯಿಕ್ಕದೆ ನೋಡತೊಡಗಿದ. ಆದರೆ ನೆಲಿಗೆ ಮಾತ್ರ ವೈದ್ಯನ ಮಾತಿಗೆ ಮಂಕಾಗಿ ಕೀಟವನ್ನು ಓಡಿಸುವುದು ಮರೆತೇ ಹೋಯಿತು. ಜಾರು ವೈದ್ಯನ ಮಾತಿಗೆ ಯಾವುದೇ ಗಮನಕೊಡದಿರುವುದು ಮತ್ತು ಆತ ಮಾತನಾಡಿದ್ದನ್ನು ಕೇಳಿಯೇ ಖುಷಿಯಾಗಿ ನೆಲಿಗೆ ಕೀಟ ಕಡಿಯುತ್ತಿರುವ ನೋವು ಅರಿವಾಗಲೇ ಇಲ್ಲ. ಆತ ಚಲನೆಯನ್ನೇ ಮರೆತ ವಿಗ್ರಹದಂತಿದ್ದ. ಓಹ್…. ಪಕ್ಕನೆ ಅದು ಆ ಕ್ರೀಟವೇ ಆಗಿದ್ದಲ್ಲಿ! ಹೌದು, ನಂತರ ಇಬ್ಬರಿಗೂ ಒಂದೇ ಕಾಲಕ್ಕೆ ಮದುವೆಯಾಗುವುದು ಕೂಡಾ ಖಂಡಿತ. ಈಗ ಸದೃಢ ಶರೀರ ಹೊಂದಿದ ತಮ್ಮನ ಜೀವ ಇದ್ದಕ್ಕಿದ್ದಂತೆ ಅವನಲ್ಲಿ ಅಸಮಾಧಾನ, ಅಸೂಯೆ, ಎಲ್ಲವನ್ನು ಹುಟ್ಟಿಸಿತು. ಒಮ್ಮೆಗೇ, ಕಡಿತದ ಅನುಭವವುಂಟಾಗಿ ಕೈಯನ್ನೆತ್ತಿ ಕೀಟವನ್ನು ಓಡಿಸಿ ಗದ್ದ ಭಾಗವನ್ನು ಬೆರಳುಗಳಿಂದ ತುರಿಸಿಕೊಳ್ಳತೊಡಗಿದ. ಅತ್ತ ತಿರುಗಿದರೆ, ಜಾರು ಅವನನ್ನೇ ದಿಟ್ಟಿಸುತ್ತ ಭಯಂಕರವಾದ ತನ್ನ ತುಟಿಗಳನ್ನು ಅಗಲಿಸುತ್ತ ವಿಕಾರವಾಗಿ ನಗುತ್ತಿದ್ದ. ಈಗ ಇಬ್ಬರೂ ಪರಸ್ಪರ ನೋಡಿದರು. ನಂತರ ಜಾರು “ಕೀಟ” ಅಂತಂದ.

ನೆಲಿಗೆ ಏನೆಂದು ಅರ್ಥವಾಗದೆ ತಲೆಬಾಗಿಸಿ ಕಿವಿಗೊಟ್ಟು, “ಏನು ಹೇಳ್ತಾ ಇದ್ಬೀ?” ಎಂದ. “ಕೀಟ…. ಕೀಟ….” ಪುನರುಚ್ಚರಿಸಿದ.

“ಯಾವ ಕೀಟ? ಎಲ್ಲಿ ದಿಗ್ಬ್ರಮೆಯಿಂದ ನೆಲಿ, ವೈದ್ಯನತ್ತ ನೋಡುತ್ತ ಹೇಳಿದ. “ಓ…. ಅಲ್ಲಿ ನೀನೀಗ ತುರಿಸಿಕೊಳ್ಳುತ್ತ ಇದ್ಬಿಯಲ್ಲ. ಅಲ್ಲೇ, ನನಗೆ ಗ್ಯಾರಂಟಿಯಿದೆ!” ಎಂದ ಜಾರು. ನೆಲಿ ಗದ್ದದ ಮೇಲಿನ ಆ ಸಣ್ಣ ಗಾಯವನ್ನು ವೈದ್ಯನಿಗೆ ತೋರಿಸಿದ. “ಅದರಲ್ಲೇನಿದೆ? ಸಣ್ಣ ತುರಿಕೆ ಅಷ್ಟೆ.” ವೈದ್ಯ ಹುಬ್ಬೇರಿಸಿ ಹತ್ತಿರದಿಂದ ಪರೀಕ್ಷಿಸಬೇಕು ಎನ್ನುವಂತೆ ಅವನನ್ನೇ ನೋಡಿದ. ಕೊಟ್ಟಿಗೆಯ ಹೊರಗೆ ಕರಕೊಂಡು ಹೋದಾಗ ಸಾರೋ ಅವರನ್ನು ಹಿಂಬಾಲಿಸಿದ.

ಆಮೇಲೇನಾಯ್ತು? ಜಿಯೂರ್ಲಾನ್ನು ಜಾರು ಕಾದ…. ಕಾದ…. ಬಹಳ ಹೊತ್ತಿನ ತನಕ ವಿಚಿತ್ರ ಉದ್ವೆಗದಲ್ಲೇ ಕಾದ. ಹೊರಗಡೆಯ ಮಾತುಗಳನ್ನು ಗೊಂದಲದಲ್ಲೇ ಕೇಳಿಸಿಕೊಂಡ. ಇದ್ದಕ್ಕಿದ್ದಂತೆ ಜಾರೋ ಆವೇಶದಿಂದಲೇ ಕೊಟ್ಚಿಗೆಗೆ ವಾಪಾಸಾದ. ಬಂದವನೇ, ಇವನತ್ತ ತಿರುಗಿಯೂ ನೋಡದೆ, ಗೊಣಗಾಡುತ್ತ ಹೇಸರಗತ್ತೆ ಯನ್ನು ಹೊರಡಿಸಿದ.

“ಅಯ್… ನನ್ನ ನೆಲ್ಲಿ… ನೆಲ್ಲುಶಿಯೋ!

ಹಾಗಾದರೆ, ಕಚ್ಚಿದ್ದು ನಿಜವೆ? ಅವನನ್ನು ನಾಯಿಯ ಹಾಗೆ ಅಲ್ಲೇ ತೊರೆದು ಅವರೆಲ್ಲ ಹೊರಟೇಬಿಟ್ಟರೆ? ತನ್ನ ಮೊಣಕೈಯನೆತ್ತಿ, “ಸಾರೋ…. ಸಾರೋ” ಎಂದು ಎರಡೆರಡು ಸಾರಿ ಕರೆದ. ಯಾರೂ ಇರಲಿಲ್ಲ. ಸುತ್ತಲೂ ಮೌನ. ಮೊಣಕೈಗಳ ಮೇಲೆ ದೇಹವನ್ನು ಜಾಸಿ ಹೊತ್ತು ಆಧರಿಸಲೂ ಸಾಧ್ಯವಾಗದೆ ವಾಪಾಸು ಒರಗಿದ. ಸ್ವಲ್ಪ ಹೊತ್ತಿನ ತನಕ ಭಯಹುಟ್ಟಿಸುವ ಹೊರಗಿನ ಮೌನವನ್ನು ಸಹಿಸಲಾಗದೆ ತನ್ನೊಳಗೇ ಏನೋ ಮಾಡುತ್ತಿದ್ದ. ತಕ್ಷಣವೇ ಅವನಿಗೆ ಈಗಷ್ಟೇ ಘಟಿಸಿರುವುದೆಲ್ಲ ಕನಸಿರಬಹುದೇ ಅಥವಾ ತಾನು ಜ್ವರದ ಸ್ಥಿತಿಯಲ್ಲಿ ಇಂಥ ಕೆಟ್ಟ ಕನಸನ್ನು ಕಂಡೆನೆ ಎಂದೆನಿಸಿತು. ಈಗ ಗೋಡೆಯತ್ತ ಮುಖ ತಿರುಗಿಸಿದವನಿಗೆ ಮತ್ತೆ ಕೀಟ ಕಾಣಿಸಿತು. ಅದೀಗ ತನ್ನ ಬಾಯಿಯ ನಳಿಕೆಯನ್ನು ಮತ್ತೆ ಊದುತ್ತ, ವೇಗವಾಗಿ ತನ್ನೆರಡೂ ಕಾಲುಗಳನ್ನೂ ಪರಸ್ಪರ ತಿಕ್ಕುತ್ತ ಬಹಳ ಸಂತೃಪ್ತಿಯಿಂದಿರುವಂತೆ ಅವನಿಗೆ ಕಾಣಿಸಿತು.

*****

ಇಟಾಲಿಯನ್ ಮೂಲ: ಲುಯಿಗಿ ಪಿರಾಂಡೆಲ್ಲೋ
The Fly

Previous post ಹುಷಾರು
Next post ಕ್ಷಣಗಳು

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…