ಯಾಕೆ ಸೃಷ್ಟಿಸಿದೆ ನನ್ನನೀ ರೀತಿ
ಅಲ್ಲಿಗೂ ಸಲ್ಲದೆ ಇಲ್ಲಿಯೂ ನಿಲ್ಲದೆ
ಇರುಳಿನೇಕಾಂತದ ನೀರವತೆಯಲ್ಲಿ
ನನಗೆ ನಾನೇ ಆಗುವಂತೆ ಭೀತಿ

ಬೀಸಿತೆ ಗಾಳಿ? ಆ! ಏನದು ಎದ್ದು
ಮರಮರದ ಮೇಲು ಮರಮರವೆಂದು
ಹಾರುವುದೆ ಕುಣಿಯುವುದೆ ಕುಪ್ಪಳಿಸುವುದೆ
ನೋಡುವೆನು ನಾನು ಒಮ್ಮೊಮ್ಮೊ ಕದ್ದು

ಒಗೆದು ತಲೆಕೆಳಗೆ ಮೇಲಕ್ಕೆ ಕಾಲು
ಜೋತಾಡುವುದು ಅಧೊಗತಿಯಷ್ಟೆ
ವೃಕ್ಷಗಳಲ್ಲಿ ಕೂಡ ಒಂದು ಮಾತ್ರವೆ
ಬಿಡುವುದು ವಿರುದ್ಧ ದಿಕ್ಕಿಗೆ ಬಿಳಲು

ಆದರೂ ದೃಷ್ಟಿ ಆಕಾಶದ ಕಡೆಗೆ
ಅದರಾಚೆಗೇನಿದೆಯೆಂಬುದು ಗೊತ್ತು
ಯಾರಿಗೂ ಹೇಳಲಾರದ ರಹಸ್ಯವ ಹೊತ್ತು
ಕಾಯುವೆನು ಯಾವ ಖಯಾಮತಿನ ವರೆಗೆ?

ಉರುಳಿಬಿದ್ದಾಗಲೂ ಒಂದೊಂದು ಮರವು
ಅಂದುಕೊಳ್ಳುವೆನು ಇದುವೆ ಕೊನೆ ಎಂದು
ಕೊನೆಯಿಲ್ಲ ಮೊದಲಿಲ್ಲ ಶತಮಾನಗಳು ಕಳೆದು
ದಿನವೊಂದರಲೆ ಎಷ್ಟು ಹುಟ್ಟು ಸಾವು!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)