ಕೋಮಟಿಗನೊಬ್ಬನಿದ್ದನು. ಅವನ ಆಳುಮಗನ ಹೆಸರು ಇಕ್ಯಾ. “ತುಪ್ಪ ಕೊಂಡುಕೊಂಡು ಬಾ” ಎಂದು ಕೋಮಟಿಗ ಹೇಳಿದರೆ, ಇಕ್ಯಾ ತುಪ್ಪ ಕೊಂಡು ತರುವಾಗ ಲೆಕ್ಕ ಹಾಕತೊಡಗಿದನು – “ಈ ಉಳಿದ ನಾಲ್ಕು ರೂಪಾಯಿಕೊಟ್ಟು ಕೋಳಿ ಕೊಂಡರೆ ಕೆಲವು ದಿನಗಳಲ್ಲಿ ಕೋಳಿಯದೊಂದು ದೊಡ್ಡ ಗೂಡೇ ಆಗುವದು. ಅವುಗಳನ್ನೆಲ್ಲ ಮಾರಿ ಕುದುರೆ ತರಬೇಕು.” ಹೀಗೆ ಶೇಖಮಹಮ್ಮದನ ವಿಚಾರ ಮಾಡುವಷ್ಟರಲ್ಲಿ ತುಪ್ಪದ ಗಡಿಗೆ ಕೆಳಗೆ ಬಿದ್ದು ಒಡೆದುಹೋಯಿತು. ಅದಕ್ಕಾಗಿ ಕೋಮಟಿಗ ಆತನನ್ನು ಕೆಲಸದಿಂದ ತೆಗೆದು ಹಾಕಿದನು.
ಇಕ್ಯಾ- ಬೇರೂಬ್ಬ ಕೋಮಟಿಗನಲ್ಲಿ ದುಡಿಯಲು ನಿಂತನು. ಅಂಗಡಿಯಲ್ಲಿ ಕುಳಿತು ಎಣ್ಣೆ ಉಪ್ಪು ನಗದಿ ರೊಕ್ಕ ತಂದವರಿಗೆ ಮಾತ್ರ ಕೊಟ್ಟನು. “ಇಷ್ಟೇ ವ್ಯಾಪಾರವಾಯಿತೇನೋ ಇಕ್ಯಾ” ಎಂದರೆ “ನಗದೀ ವ್ಯಾಪಾರ ಇಷ್ಟಾಗಿದೆ” ಎಂದು ಮರುನುಡಿದನು.
“ಕೆಲವರಿಗೆ ಉದ್ರಿನೂ ಕೊಡಬೇಕು” ಎಂದು ಕೋಮಟಿಗ ಹೇಳಿದ್ದರಿಂದ, ಮರುದಿನ ಬಂದವರಿಗೆ ಹೋದವರಿಗೆ ಉದ್ರಿಕೊಟ್ಟು, ಅಂಗಡಿಯೊಳಗಿನ ಜೀನಸನ್ನೆಲ್ಲ ಆಗುಮಾಡಿಬಿಟ್ಟನು. ಅದಕ್ಕಾಗಿ ಕೋಮಟಿಗನು ಅಂಗಡಿಯನ್ನೇ ಮುಚ್ಚಿದನು.
“ಇಕ್ಯಾ, ಈ ಹುಡುಗರಿಗೆ ಹೊರಕಡೆಗೆ ಕರಕೊಂಡು ಹೋಗಿಬಾ” ಎಂದರೆ ಅವರನ್ನು ಬಯಲಲ್ಲಿ ಅಡ್ಡಾಡಿಸಿಕೊಂಡು ಮನೆಗೆ ಬರುವನು. “ಕೂಡಿಸಿಕೊಂಡು ಬಾ” ಅಂದಾಗ ಮಾತ್ರ ಹುಡುಗರಿಗೆಲ್ಲ ಕೂಡಿಸಿಕೊಂಡು ಬರುವನು. “ಕುದುರೆ ನೀರಡಿಸಿದಂತಿದೆ. ನೀರು ತೋರಿಸಿಕೊಂಡುಬಾ” ಎಂದು ಹೇಳಿದರೆ, ಕುದುರೆಯನ್ನೊಯ್ದು ದಂಡೆಯ ಮೇಲೆ ನಿಲ್ಲಿಸಿಕೊಂಡು ತರುವನು. “ಅಲ್ಲೋ ಹುಚ್ಚಾ ಕುದುರೆಗೆ ನೀರು ಕುಡಿಸಿಕೊಂಡು ಬಾ” ಅ೦ದಾಗ, ಹಾಗೇ ಆಗಲೆಂದು ಹೋಗಿ ಕುದುರೆಗೆ ನೀರು ಕುಡಿಸಿಕೊ೦ಡು ಬರುವನು.
ಕೋಮಟಿಗನು ಮಾವನ ಮನೆಗೆ ಹೊರಟನು. ಗಾರಿಗೆ, ಕೋಡಬಳೆ, ಪುಟ್ಟ ಗೋಳಿ ಎಲ್ಲ ಸಜ್ಜು ಮಾಡಿ ಕೊಟ್ಟದ್ದರು. ಬೇಗನೆ ನಸುಕಿನಲ್ಲೆದ್ದು ಮೈತೊಳಕೊಂಡರು. ಹಡಪ ತುಂಬಿ, ಕುದುರೆಯ ಮೇಲೆ ಹೇರಿದರು. ಕೋಮಟಿಗನು ಐದೂ ಬೆರಳಿಗೆ ಐದು ಉ೦ಗುರ ಹಾಕಿದನು. ಅವನು ಕೈ ಬೀಸುವಾಗ ಒಂದು ಉಂಗುರ ಬಿತ್ತು ಕೆಳಗೆ. ಇಕ್ಯಾ ಆ ಉಂಗುರವನ್ನು ಮಣ್ಣಿನಿಂದ ಮುಚ್ಚಿಟ್ಟನು. “ಏನೋ ಇಕ್ಯಾ ಮುಚ್ಚಿಟ್ಟದ್ದು” ಎಂದು ಕೇಳಿದರೆ, “ಏನೋ ಕೆಂಪು ಕಾಣಿಸಿತು. ಮುಚ್ಚಿಬಿಟ್ಟೆ” ಎಂದನು. “ಹಾದಿಯಲ್ಲಿ ಏನಾದರೂ ಬಿದ್ದರೆ ಅದನ್ನು ತೆಗೆದುಕೊ೦ಡು ಬರಬೇಕು” ಎಂದು ಕೋಮಟಿಗನು ಅವನಿಗೆ ಎಚ್ಚರಿಕೆಕೊಟ್ಟನು.
ಆ ಬಳಿಕ ಹಾದಿಯಲ್ಲಿ ಬಿದ್ದಿದ್ದನ್ನೆಲ್ಲ ಎತ್ತಿ ಹಡಪದಲ್ಲಿ ತುಂಬಿದನು. ನುಣ್ಣಗಿನ ಕಲ್ಲು ಹರಳುಗಳನ್ನೆಲ್ಲ ಹಡಪದಲ್ಲಿ ಹಾಕಿಟ್ಟನು.
“ಬಹಳ ದಿನಗಳಾದ ಬಳಿಕ ಮಾವನ ಮನೆಗೆ ಬಂದಿರುವಿರಿ. ಒಮ್ಮೆಲೆ ಮಾವನ ಮನೆಗೆ ಹೋಗಬೇಡಿರಿ. ನಾ ಹೇಳಿದಂತೆ ಈ ಗುಡಿಯಲ್ಲಿ ಕುಳಿತುಕೊಳ್ಳಿರಿ. ನಿಮ್ಮ ಸೂಟುಬೂಟು ನನಗೆ ಕೊಡಿರಿ. ನಾ ಹೋಗಿ ನೀವು ಬಂದ ಸಮಾಚಾರ ಹೇಳುತ್ತೇನೆ. ಊದಿಸುತ್ತ ಬಾರಿಸುತ್ತ ಬಂದು, ಅಳಿಯನನ್ನು ಕರೆದೊಯ್ದು ಮನೆ ಹೊಗಿಸಿ ಕೊಳ್ಳಲಿ” ಎಂದು ಇಕ್ಯಾ ಯುಕ್ತಿ ಹೇಳಿದನು.
ಮಾಲಕನ ಸೂಟುಬೂಟು ತಾನು ಹಾಕಿಕೊಂಡು, ತನ್ನ ಬಟ್ಟೆಗಳನ್ನು ಮಾಲಕನಿಗೆ ಕೊಟ್ಟು ಕೋಮಟಿಗನ ಮಾವನ ಮನೆಗೆ ಹೋಗಿ ಅಳಿಯನ ಸಮಾಚಾರ ಹೇಳಿದನು. ತಾನು ಅಳಿಯನ ಗೆಳೆಯನೆಂದು ತಿಳಿಸಿದನು –
“ನಿಮ್ಮ ಅಳಿಯನಿಗೆ ಹುಚ್ಚು ಹಿಡಿದಿದೆ. ಹನುಮಂತದೇವರ ಗುಡಿಯ ಕಟ್ಟೆಯ ಮೇಲೆ ಕುಳಿತಿದ್ದಾನೆ.” ಎಂಬ ಸಮಾಚಾರ ಕೇಳಿ, ಅತ್ತೆಮಾವಂದಿರು ಚಿಂತಿಸುತ್ತ ಬಂದು ನೋಡಿದರೆ – ಅಳಿಯನು ಹರಿದ ಹಾಗೂ ಮಾಸಿದ ಬಟ್ಟೆ ಹಾಕಿಕೊಂಡಿದ್ದಾನೆ. ಅವನನ್ನು ಒತ್ತಾಯಮಾಡಿ ಮನೆಗೆ ಕರಕೊಂಡು ಹೋದರು.
ಇಕ್ಯಾ ಅಡಿಗೆ ಮನೆಗೆ ಹೋಗಿ ಹೇಳಿದನು –
“ನಿಮ್ಮ ಅಳಿಯ ನವಣಕ್ಕಿಯ ಬೋನ, ಮೂರುವರ್ಷದ ಹುಣಿಸೆ ಹಣ್ಣಿನ ಸಾರು ಮಾತ್ರ ಉಣ್ಣುತ್ತಾನೆ. ಮತ್ತೇನೂ ಉಣ್ಣುವುದಿಲ್ಲ.”
“ಈಗಲಾದರೂ ನನ್ನ ಬಟ್ಟೆ ಕೊಡೋ ಇಕ್ಯಾ,” ಎಂದು ಕೋಮಟಿಗ ಕೇಳಿದರೆ “ನಾಳೆ ಮುಂಜಾನೆ ಹೊತ್ತರಳಿ ಕೊಡತೀನಿ. ಎಂದಾರೆ ಬಟ್ಟೆ ಕಂಡಿದ್ಯೋ ಇಲ್ಲೋ ?” ಎಂದನು ಇಕ್ಯಾ.
“ಬಯಲುಕಡೆಗೆ ಹೋಗಬೇಕು ನಡೆಯೋ ಇಕ್ಯಾ” ಎಂದು ರಾತ್ರಿಯಲ್ಲಿ ಕೋಮಟಿಗ ಕೇಳಿದನು.
“ನಾನೇನೂ ಬರೂದಿಲ್ಲಪ್ಪ” ಎಂದನು ಇಕ್ಯಾ.
ಮಲಗುವ ಕೋಣೆಯಲ್ಲಿಯೇ ಕೋಮಟಿಗನು ಹೊಲಸು ಮಾಡಬೇಕಾಯಿತು. ಆದ್ದರಿಂದ ನಸುಕಿನಲ್ಲಿಯೇ ಎದ್ದು ಹಳ್ಳಕ್ಕೆ ಹೊರಟನು.
“ನಿಮ್ಮಳಿಯ ಹೇಳಿಕೇಳಿ ಹುಚ್ಚ, ಈಗ ಮನೆಬಿಟ್ಟು ಹೊಂಟಾನ” ಎಂದು ಇಕ್ಯಾ ಹೇಳಿದ್ದರಿಂದ ಭಾವಂದಿರು ಬಂದು – “ಮಾವ ಎಲ್ಲಿ ಹೊರಟಿ, ಯಾಕೆ ಹೊರಟಿ” ಎಂದು ತರುಬಿ ಮಾತಾಡಿಸುವಷ್ಟರಲ್ಲಿ ಅರಿವೆ ಕೆಳಗೆ ಬಿದ್ದು ಎಲ್ಲರ ಮುಂದೆ ಅವಮಾನವಾಯಿತು.
ಹಳ್ಳದಲ್ಲಿ ಬಟ್ಟೆ ಒಗೆದರು. ಕೋಮಟಿಗ ಹನುಮಂತ ದೇವರ ಗುಡಿಯಲ್ಲಿ ಕುಳಿತನು. ಹೆಂಡತಿ ಆರತಿ ತೆಗೆದುಕೊಂಡು ಗುಡಿಗೆ ಬಂದಳು. “ದೇವರ ಮುಂದೆ ತೆಂಗು ಒಡೆಯದೆ ನಿನ್ನ ಗಂಡನ ತಲೆಗೇ ತೆಂಗು ಒಡೆ” ಎಂದು ಇಕ್ಯಾ ಸೂಚನೆ ಕೊಡುತ್ತಾನೆ. ಅದರಂತೆ ತೆಂಗು ಒಡೆಯುವಷ್ಟರಲ್ಲಿ ಕೋಮಟಿಗ ಕವಳುಹತ್ತಿ ಸತ್ತು ಬಿದ್ದನು.
ಇಕ್ಯಾ ಕೋಮಟಿಗನ ಹೆಂಡತಿಗೆ ಲಗ್ನವಾದನಂತೆ.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು