ಸಮರ್ಥರಾಗಿದ್ದ ಕಾರಣಕ್ಕಾಗಿಯೇ ತುಳಿತಕ್ಕೆ ಒಳಗಾದ ಕೆಲವೇ ಪ್ರಾಮಾಣಿಕ ವಿಚಾರವಂತರಲ್ಲಿ ಎದ್ದು ಕಾಣುವ ಎರಡು ಹೆಸರುಗಳೆಂದರೆ ಡಾ||ಲೋಹಿಯಾ ಹಾಗೂ ಡಾ|| ಅಂಬೇಡ್ಕರ್. ಇಂದಿಗೂ ಇವರ ವಿಚಾರಗಳನ್ನು ಕುರಿತ ಗ್ರಂಥಗಳು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಯಕ್ಕೆ ಒಳಗಾಗದೆ ಇರುವುದನ್ನು, ಗ್ರಂಥಾಲಯಗಳಲ್ಲಿ ಇವರ ಕೃತಿಗಳು ಕಾಣದೆ ಇರುವುದನ್ನು ಜಾತಿ ತನ್ನ ಕೌರ್ಯದ ಆಳವನ್ನು ಎಷ್ಟು ತೀಕ್ಷ್ಣವಾಗಿ ಕಾಯ್ದುಕೊಂಡಿದೆ; ಆ ಮೂಲಕ ಇಡೀ ಮಾನವ ಕುಲವನ್ನು ಹೇಗೆ ತುಕ್ಕು ಹಿಡಿಸುತ್ತಿದೆ, ಜೀವಜೀವಗಳ ನಡುವೆ ವೈಷಮ್ಯದ ವಿಷವನ್ನು ಹೇಗೆ ನಯಗಾರಿಕೆಯಿಂದ ಬಿತ್ತಿಕೊಂಡು ಬಂದಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ವಾಸ್ತವ ಬದುಕಿಗೆ ಇಂದು ಡಾ|| ಲೋಹಿಯಾ ಹಾಗೂ ಡಾ|| ಅಂಬೇಡ್ಕರ್ ಅವರ ವಿಚಾರವನ್ನು ತಿಳಿಯುವುವದರ ಅಗತ್ಯ ಹೆಚ್ಚಿನದಾಗಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡಿ ಎಂಬ ಹಳ್ಳಿಯ ಮಹಾರ್ ಎಂಬ ಕುಟುಂಬದಲ್ಲಿ ರಾಮ್‌ಜಿ ಮಳೂಜೀ ಸಂಕಪಾಲ ಹಾಗೂ ಭೀಮಾಭಾಯಿ ಆವರಿಗೆ ೧೪-೪-೧೮೯೧ ರಂದು ಸಂಭವಿಸಿದ ಪುಣ್ಯ ಪುತ್ರ ಡಾ|| ಅಂಬೇಡ್ಕರ್. ಬಾಲ್ಯದಲ್ಲಿ ಸವರ್ಣೀಯರ ಅಮಾನುಷ ಕ್ರೌರ್ಯದ ತುಳಿತಕ್ಕೆ ಸಿಕ್ಕು ತಮ್ಮ ಚೇತನವನ್ನು ಪ್ರಜ್ವಲಿಸಿಕೊಂಡು ೧೯೧೨ ರಲ್ಲಿ ತಮ್ಮ ಬಿ. ಎ. ಪದವಿಯನ್ನು ಪಡೆದು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹೋಗಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ನೀತಿ ತತ್ವಶಾಸ್ತ್ರಗಳ ಅಧ್ಯಯನ ಮಾಡಿ ಎಂ. ಎ. ಹಾಗೂ ಪಿ.ಎಚ್‌.ಡಿ ಪಡೆದು ೧೯೧೭ ರಲ್ಲಿ ಭಾರತಕ್ಕೆ ಹಿಂದಿರುಗಿ ೧೯೨೨ ರಲ್ಲಿ ಬ್ಯಾರಿಸ್ಟರ್ ಆದರು. “ಅರ್ಥಶಾಸ್ತ್ರದ ಮೇಲಿನ ರೂಪಾಯಿ ಸಮಸ್ಯೆ” ಎಂಬ ವಿಷಯದ ಮೇಲೆ ಪ್ರೌಢ ಪ್ರಬಂಧ ಬರೆದು, ಡಿ ಎಸ್ ಪಿ ಪದವಿ ಗಳಿಸಿದರು. ನಂತರ ವಕೀಲರಾಗಿ ೧೯೨೬ ರಲ್ಲಿ ಬೊಂಬಾಯಿ ವಿಧಾನ ಪರಿಷತ್ತಿನ ಸದಸ್ಯರಾಗಿ, ೧೯೩೫ರಲ್ಲಿ ಬಾಂಬೆ ಕಾನೂನು ಕಾಲೇಜಿನಲ್ಲಿ ಪ್ರಿನ್ಸಿಪಾಲರಾದರು.

ದೇಶದ ವಕೀಲರಿಗಿರಬೇಕಾದ ಅಗತ್ಯವನ್ನು ಕುರಿತು ಪ್ರಸ್ತಾಪಿಸಿದ ಅಂಬೇಡ್ಕರ್ಆವರು “ನ್ಯಾಯವಾದಿಯಾದವನಿಗೆ ಕೇವಲ ಕಾಯಿದೆಯ ಜ್ಞಾನವೊಂದೇ ಸಾಲದು, ಕಾಯಿದೆಯ ಮೂಲ ತತ್ವಗಳ ಅಭ್ಯಾಸದೊಡನೆ ಕಾಯಿದೆಯ ಅನುಷಂಗಿಕವಾದ ನೀತಿಶಾಸ್ತ್ರ, ಮೊದಲಾದ ವಿಷಯಗಳ ಅಭ್ಯಾಸವೂ ಬೇಕು” ಎಂದರು.

ರಾಷ್ಟ್ರದ ವಿಭಜನೆಯ ಕಾಲಕ್ಕೆ ಪಾಕಿಸ್ತಾನ ಹಾಗೂ ಹಿಂದೂಸ್ಥಾನದ ಹಿಂದೂ ಮುಸ್ಲಿಮರನ್ನು ಕಾಯಿದೆ ರೀತ್ಯ ಸ್ಥಳಾಂತರಿಸುವ ವ್ಯವಸ್ಥೆ ಮಾಡಬಾರದೆಂದು ೧೯೪೦ ರಲ್ಲಿ ರಾಷ್ಟ್ರೀಯ ವಿಭಜನೆ ಕುರಿತ ತಮ್ಮ “ಥಾಟ್ಸ್‌ ಆನ್ ಪಾರ್ಟಿಷನ್” ಎಂಬ ಪುಸ್ತಕದಲ್ಲಿ ಸೂಚಿಸಿದರು. ೧೯೪೨ ರಲ್ಲಿ ವ್ಶೆಸ್‌ರಾಯರ ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರಾಗಿ ೧೯೪೬ ರ ಭಾರತ ವಿಸರ್ಜನೆಯಾದ ಮೇಲೆ ಬಾಂಬೆಯಲ್ಲಿ “ಸಿದ್ದಾರ್ಥ” ಕಾಲೇಜನ್ನು ಸ್ಥಾಪಿಸಿ ೧೯೪೭ ರಲ್ಲಿ ನಂತರ ಕಾನೂನು ಮಂತ್ರಿಯ ಪದವಿಗೇರಿದರು. ಭಾರತದ ಸಂವಿಧಾನ ಅವರ -ಏಕೈಕ ಶ್ರಮದ ಫಲ ಎನ್ನುವಷ್ಟರಮಟ್ಟಿಗೆ ಅವರು ಹಗಲು ರಾತ್ರಿಗಳೆನ್ನದ ಅದಕ್ಕಾಗಿ ದುಡಿದರು.

ವಿಚಾರ ಪ್ರಚಾರಕ್ಕಾಗಿ ಪತ್ರಿಕೆಯ ಅಗತ್ಯವನ್ನು ಕಂಡುಕೊಂಡ ಡಾ” ಅಂಬೇಡ್ಕರ್‌ರವರು ‘ಮೂಕನಾಯಕ’ ‘ಬಹಿಷ್ಕೃತ ಭಾರತ’ ಹಾಗೂ ‘ಸಮತಾ’ಎಂಬ ಪತ್ರಿಕೆಗಳನ್ನು ಫ್ರಕಟಿಸುತ್ತಿದ್ದರು.

ಪ್ರಜಾಸತ್ತಾತ್ಮಕ ಸಮಾಜವಾದ ತತ್ವಗಳು, ಮೂಲಭೂತ ಹಕ್ಕುಗಳು ಎಂದಿಗೂ ಅಬಾದಿತವಾಗಿ ಉಳಿಯುವಂತೆ ಕಾಯಿದೆಯಿಂದ ಸ್ಥಿರಪಡಿಸದೇಕೆನ್ನುವ ಹಾಗೆ ಧೀನದಲಿತರ ಏಳ್ಗೆಯ ವಿಚಾರಗಳನ್ನು ಬದುಕಿನ ಧ್ಯೇಯವಾಗಿಸಿ- ಕೊಂಡು ತಮ್ಮ ಹೋರಾಟವನ್ನು ಮುಂದುವರಿಸಿದರು.

ಒಂದು ಮುಕ್ತ ಸಮಾಜ ಜಾತಿವಿನಾಶದಿಂದ ಮಾತ್ರ ಸಾಧ್ಯ ಎಂದು ಸೈದ್ಧಾಂತಿಕವಾಗಿ ನಂಬಿ ‘ಜಾತಿ ವಿನಾಶ’ ಎಂಬ ಒಂದು ವೈಚಾರಿಕ ಪುಸ್ತಕವನ್ನು ಬರೆದು ಆ ಮೂಲಕ ತಮ್ಮ ಸಿದ್ದಾಂತವನ್ನು ಪ್ರಚುರ ಪಡಿಸಿದರು. ಅಂತಹ ವಿಚಾರಗಳನ್ನು ಹತ್ತಿಕ್ಕುವ ಮೂಲಕ ತಮ್ಮ ಮೊಗವಾಡವನ್ನು ಹಾಕುವ ಸವರ್ಣೀಯರ ಕುಯುಕ್ತಿ ನಡೆಯದೆ ಇರಲಿಲ್ಲ. ಆದನ್ನೆಲ್ಲಾ ಕಟುವಾಗಿ ಟೀಕಿಸಿ “ಜಾತಿಪದ್ಧತಿ ಎಂಬುದು ಸವರ್ಣೀಯರ ಹಿತವನ್ನು ಕಾಯುತ್ತಿರುವ ಒಂದು ಬಲವಾದ ಆಯುಧ”. ‘ಹಿಂದೂ ಧರ್ಮವನ್ನು ಕುಲಗೆಡಿಸಿದ ಮೊಟ್ಟ ಮೊದಲ ಬನ ಬ್ರಾಹ್ಮಣರು ಮತ್ತು ಬ್ರಾಹ್ಮ ತತ್ವ’ ‘ದಯೆ, ಅನುಕಂಪ, ಸಹನೆ ಎಲ್ಲವನ್ನೂ ಸರ್ವವಾಶಮಾಡಿರುವುದು ಹಿಂದೂಗಳ ಜಾತೀಯತೆ’ ಅದ್ದರಿಂದ ಎಲ್ಲಿಯವರೆವಿಗೆ ಹಿಂದೂಗಳು ತಮ್ಮ ಜಾತಿಪದ್ಧತಿಯನ್ನು ನಾಶಮಾಡುವುದಿಲ್ಲವೋ ಅಲ್ಲಿಯವರೆಗೂ ಹಿಂದು ಸಂಘಟನೆ ಸಾಧ್ಯವಿಲ್ಲ. ಹೀಗಾಗಿ ಹಿಂದು ಜನಾಂಗ ಲೋಕದ ದುರ್ಬಲ ಜನರಲ್ಲಿ ದುರ್ಬಲರಾಗಿ, ಎಳೆದಾಡಿಕೊಂಡು ಸಾಗುವ ಹೆಳವ ಜೀವನವೇ ಅವರಿಗೆ ಪ್ರಾಪ್ತಿ. ಹಿಂದೂಗಳು ಅತ್ಯಂತ ಸಹನಶೀಲರೆಂತಲೂ ಕೆಲವರು ಹೇಳುವುದುಂಟು. ಆದರೆ ನಿಜವಾಗಿ ಆದು ಸಹನೆಯಲ್ಲ. ಎದೆಗಾರಿಕೆಯಿಲ್ಲದ ಹೇಡಿ ಹಾಕುವ ಡೊಂಬುತನಕ್ಕೆ ತಾತ್ವಿಕ ಮಾತಿನ ಪೋಷಾಕು ಆಷ್ಟೆ” ಎಂದು ತಮ್ಮ ನಿರ್ಭೀತ ವಿಚಾರಗಳನ್ನು ಎತ್ತಿದ ಸ್ವರದಲ್ಲಿ ಗುಡುಗಿದರು. ಆ ಗುಡುಗಿನ ಆರ್ಭಟಕ್ಕೆ ನಡುಗಿದ ಮಹಾತ್ಮನೆನಿಸಿಕೊಂಡ ಗಾಂಧಿಯ ಎದೆ ತನ್ನ ಸ್ಥಾನಮಾನವನ್ನು ಉಳಿಸಿಕೊಳ್ಳುವ ಸಲುವಾಗಿ “ಜಾತೀಯತೆ ಎಂಬುದೊಂದು ಸಂಪ್ರದಾಯ ಅಷ್ಟೆ. ಅದರ ಹುಟ್ಟು ನನಗೇನು ತಿಳಿಯದು. ಆದರೆ ಆಧ್ಯಾತ್ಮಿಕತೆಯಾಗಾಗಲಿ ರಾಷ್ಟ್ರೀಯ ಪ್ರಗತಿಯಾಗಲಿ ಜಾತೀಯತೆಯಿಂದ ಆಗಿರುವ ಹಾನಿ ಏನೆಂಬುದೇ ನನಗೆ ಅರ್ಥವಾಗುತ್ತಿಲ್ಲ. ವರ್ಣಾಶ್ರಮಕ್ಕೂ ಜಾತೀಯತೆಗೂ ಏನು ಸಂಬಂಧವಿದೆಯೋ ನನಗೆ ತಿಳಿಯದು. ಇದರಲ್ಲಿ ನಮ್ಮ ಕರ್ತವ್ಯ ಮುಖ್ಯವೇ ಹೊರತು ಹಕ್ಕಲ್ಲ. ವರ್ಣವ್ಯವಸ್ಥೆ ನಿರ್ಮೂಲನದಿಂದ ಜಾತೀಯತೆಯನ್ನ ನಾಶ ಮಾಡುವ ನಿಮ್ಮ ಸಿದ್ಧಾಂತವಲ್ಲಿ ಅರ್ಥವಿಲ್ಲ.’- (ಹರಿಜನ ಜುಲೈ ೧೮, ೧೯೩೬) ಎಂದು ಸವರ್ಣೀಯರ ಜಾತಿಪದ್ಧತಿಗೆ ಇಂಬುಗೊಟ್ಟು ಡಾ|| ಅಂಬೇಡ್‌ಕರರ ಜಾತಿ ವಿನಾಶವನ್ನು ಖಂಡಿಸಿದರು,

ಹಿಂದೂ ಕಾಯಿದೆಯ ಕ್ರೋಢೀಕರಣದ ವಿಷಯದಲ್ಲಿ ಅದು ಸಿಖ್ ಬೌದ್ಧ, ಜೈನರಿಗೂ ಅನ್ವಯಿಸಬೇಕೆಂಬುದನ್ನು ಇವರು ಪ್ರಭಲವಾಗಿ ಸಮರ್ಥಿಸಿದರು. ಆ ಕ್ರೋಢೀಕರಣ ಕಾಯಿದೆಗೆ ಮಂತ್ರಿಮಂಡಲದಲ್ಲಿ ಮತ್ತು ದೇಶದಲ್ಲಿ ಪ್ರಭಲವಾದ ವಿರೋಧವೆದ್ದಿತು. ಸರ್ಕಾರವೂ ಕೂಡ ಕೇವಲ ವಿವಾಹ ಮತ್ತು ತದ್ವಿಚ್ಚೇದ ಭಾಗವನ್ನು ಎತ್ತಿಕೊಳ್ಳಲು ನಿರ್ಣಯಿಸಿತು. ಮುಂದೆ ಅದೂ ಅಂಗೀಕೃತವಾಗಲು ಸಾಧ್ಯವಾಗದೆ ಹೋದಾಗ ಜಡಗಟ್ಟಿದ ಹಿಂದೂ ದೃಷ್ಟಿಗೆ ಹೇಸಿ ೧೯೫೧ ನೆಯ ಅಕ್ಟೋಬರ್‌ನಲ್ಲಿ ಮಂತ್ರಿಪದವಿಗೆ ರಾಜಿನಾಮೆ ಇತ್ತು ಸುಪ್ರೀಂ ಕೋರ್ಟಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು.

‘ಯಾವ ಸಮಾಜವೇ ಆಗಲೀ ಸತ್ತ ಸಂಪ್ರದಾಯಗಳು, ಕ್ಷುಲ್ಲಕವಾದ ಸನಾತನತೆಗಳನ್ನಷ್ಟೆ ಆದರಿಸಿ ನಿಂತು ಬಹಳಕಾಲ ಬದುಕಲಾರದು’ ಎನ್ನುವ ಜಾನ್‌ಡೇವಿ ಆವರ ಮಾತುಗಳನ್ನು ಸದಾ ಮೆಲುಕು ಹಾಕುತ್ತಿದ್ದರು. ಪಾಚಿಗಟ್ಟಿ ಕೊಳೆತು ನಾರುತ್ತಾ ಮನುಷ್ಯ ಮನುಷ್ಯರಲ್ಲಿ ವೈಷಮ್ಯದ ವಿಷ ವೃತ್ತವನ್ನು ವೃದ್ಧಿಸುತ್ತಾ ಮಾನವಕುಲಕ್ಕೆ ಮಾರಕವಾಗಿರುವ ಹಿಂದೂ ಧರ್ಮವನ್ನು ಧಿಕ್ಕರಿಸಿ ೧೯೫೬ ರಲ್ಲಿ ಲಕ್ಷಾಂತರ ಮಹಾರ್ ಜನರೊಂದಿಗೆ ಬೌದ್ಧ ಮತವನ್ನು ಸ್ವೀಕರಿಸಿ ೬-೧೨-೧೯೫೬ ರ ಡಾ|| ಅಂಬೇಡ್ಕರ್ ತಮ್ಮ ಕಡೆಯ ಉಸಿರೆಳೆದರು.

ಡಾ|| ಅಂಬೇಡ್ಕರ್‌ರವರನ್ನು ಕುರಿತು ಮಾತನಾಡುತ್ತಾ ಡಾ||ಲೋಹಿಯು ‘ಭಾರತದಲ್ಲಿ ಕೆಳಜಾತಿ ಜನಗಳಿಂದ ಪುಟಿದೆದ್ದ ನಾಯಕತ್ವ ಪಡೆದ ನಿಜವಾದ ಅಂದೋಲನವಿಲ್ಲವೇ ಇಲ್ಲ. ಯಾರಾದರೂ ಇದ್ದರೆ ಅದು ಡಾ|| ಅಂಬೇಡ್ಕರ್ ನಾಯಕತ್ವದಲ್ಲಿ ಎನ್ನಬಹುದು. ಡಾ||ಅಂಬೇಡ್ಕರ್‌ರವರು ೩೦-೪೦ ಅಥವಾ ೫೦ ಲಕ್ಷ ಮಹಾರರ ಕನ್ನಡಿಯಾಗಿದ್ದರು. ಇಂಥ ಒಬ್ಬ ದೊಡ್ಡ ನಾಯಕ ಪದ್ಮಾಶಾಲಿ, ಮಹಾರರು, ನಾಯಿಂದರು, ಜುಲಾಹಾಗಳು ಮತ್ತು ಅಗಸ ಸಮುದಾಯ- ದಿಂದ ಎಷ್ಟು ಬೇಗ ಉದಯಸುತ್ತಾನೋ ಹೇಳುವುದು ಕಷ್ಟ.’

ಡಾ|| ಅಂಬೇಡ್ಕರ್‌ರವರ ಅಗಾಧವಾದ ಕಾಯಿದೆ ಪಾಂಡಿತ್ಯ, ನವ್ಯ ನ್ಯಾಯತತ್ವಗಳ ಪ್ರತಿಪಾದನೆಗಳು, ಹೊಸಬಗೆಯ ಸಮಾಜ ಸಂಘಟನಾ ವಿಚಾರಗಳು, ಇವರಿಗೆ ಜನತೆಯಿಂದ “ಅಭಿನವ ಮನು” ಎಂಬ ಗೌರವವನ್ನು ದೊರಕಿಸಿಕೊಟ್ಟವು ಎಂದು ವಿಶ್ವಕೋಶವೊಂದರಲ್ಲಿ ನಮೂದಿಸಲಾಗಿದೆ. ಮಾನವತಾವಾದಿ ಡಾ||ಅಂಬೇಡ್ಕರ್‌ ಅವರನ್ನು ಮಾನವ ವಿರೋಧಿ ಮನುವಿಗೆ ಹೋಲಿಸುವ ಅಸಹ್ಯ ಕೆಲಸವನ್ನು ಇನ್ನು ಮುಂದೆ ಯಾರೂ ಮಾಡದಿರಲಿ.

ಡಾ||ಅಂಬೇಡ್ಕರ್‌ಅವರ ಅಂತರಂಗದ ತುಡಿತದ ವಿಚಾರವನ್ನು ಸ್ಪಷ್ಟವಾಗಿ ಗುರುತಿಸಿ ಹೇಳುವುದಾದರೆ ವಿಶ್ವವಿಖ್ಯಾತ ತತ್ವಜ್ಞಾನಿ ಪಿನೋಸಾ ಹೇಳಿದಂತೆ “ರಾಷ್ಟ್ರದ ಅಂತಿಮ ಗುರಿ ಜನರನ್ನು ಗುಲಾಮರನ್ನಾಗಿಸುವುದಲ್ಲ, ಭಯದ ಮೂಲಕ ಅವರನ್ನು ಅಂಕೆಯಲ್ಲಿಡುವುದಲ್ಲ, ಬದಲಾಗಿ, ಭಯ ನೋವು, ದುಃಖದಿಂದ ಮುಕ್ತರಾಗಿ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡು ಬದುಕುವುದು. ಜ್ಞಾನವಂತರನ್ನು ವಿಚಾರವಂತರನ್ನು ಕ್ರೂರಮೃಗಗಳಾಗಿ, ಯಂತ್ರಗಳನ್ನಾಗಿ ಮಾಡುವುದು- ರಾಷ್ಟ್ರದ ಅಂತಿಮಗುರಿಯಲ್ಲ ಎಂದು ನಾನು ಮತ್ತೊಮ್ಮೆ ಒತ್ತಿ ಹೇಳುತ್ತೇನೆ”
ಎನ್ನುವುದು ಆಗಿದ್ದಿತು.

ಡಾ|| ಅಂಬೇಡ್ಕರ್ “ಜಾತಿವಿನಾಶ” “ಗಾಂಧಿ ಮತ್ತು ಗಾಂಧಿವಾದ” “ಥಾಟ್ಸ್ ಆಫ್ ಪಾರ್ಟಿಷನ್”. ‘ರಾನಡೆ’ ಗಾಂಧಿ ಮತ್ತು ಜಿನ್ನಾ, ‘ಪಾಕೀಸ್ತಾನದ ಬಗೆಗೆ ಚಿಂತನೆ’ ಬ್ರಿಟಿಷ್ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ ವಿಕಾಸ, ಹಾಗೂ ‘ರೂಪಾಯಿಯ ಸಮಸ್ಯೆ’ ಎನ್ನುವ ಮತ್ತು ಇತರ ಪುಸ್ತಕಗಳನ್ನು ತಮ್ಮ ಕಾಣಿಕೆಯಾಗಿ ನೀಡಿದ್ದಾರೆ.

ದೇಶದ ಬಗ್ಗೆ, ಬದುಕಿನ ಬಗ್ಗೆ ಯಾರಿಗಾದರೂ ನಿಜವಾಗಿ ಕಳಕಳಿಯಿದ್ದರೆ ಅವರು ಡಾ||ಅಂಬೇಡ್ಕರ್ ಹಾಗೂ ಡಾ||ಲೋಹಿಯಾ ಅವರ ಅಧ್ಯಯನ ಮಾಡದೆ ಹೋದರೆ ಅದು ಅಪೂರ್ಣವಾಗುತ್ತದೆ.

-೧೯೭೯