Home / ಲೇಖನ / ಇತರೆ / ಅಂದದ ಮನೆಗೊಂದು ಚೆಂದದ ಹೆಸರು

ಅಂದದ ಮನೆಗೊಂದು ಚೆಂದದ ಹೆಸರು

ನನ್ನ ಚಡ್ಡಿ ದೋಸ್ತು ಮಲ್ಲು ಬೆಂಗಳೂರಿನಲ್ಲಿ ಬನಶಂಕರಿಯ ಏರಿಯಾದಲ್ಲಿ ಒಂದು ೪೦-೩೦ ಸೈಟ್ ಬಹಳ ಹಿಂದೆಯೇ ಖರೀದಿಸಿದ್ದ. ‘ಐಟಿ-ಬಿಟಿ’ ಖ್ಯಾತಿ ಇಂದಾಗಿ ಸೈಟು ಮನೆಗಳ ಬೆಲೆಗಳು ಆಕಾಶದತ್ತ ಜಿಗಿಯ ಹತ್ತಿದವು. ಮನೆ ಕಟ್ಟಲು ಈಗ ಸಮಯ ಸೂಕ್ತವಾಗಿದೆ ಎಂದೂ ಇನ್ನೂ ತಡ ಮಾಡುವುದು ಸರಿಯಲ್ಲವೆಂದೂ ತೀರ್ಮಾನಿಸಿ ದಂಪತಿಗಳಿಬ್ಬರಿಗೂ ಇಷ್ಟವಾಗುವಂತೆ ಪ್ಲಾನ್ ಬರೆಸಿ ಲೋನ್ ಸ್ಯಾಂಕ್ಷನ್ ಮಾಡಿಸಿಕೊಂಡ. ಗುದ್ದಲಿ ಪೂಜೆಯೂ ನೆರವೇರಿತು. ಆರು ತಿಂಗಳುಗಳ ಒಳಗೆ ‘ಗೃಹ ಪ್ರವೇಶ’ ಮಾಡುವಷ್ಟರ ಮಟ್ಟಿಗೆ ಕಟ್ಟಡ ಮೇಲೆದ್ದಿತು. ಸೂಕ್ತವಾದ ಹೆಸರು ಅವನಿಗೆ ಸಿಕ್ಕಿರಲಿಲ್ಲ. ಸ್ನೇಹಿತರುಗಳ ಬಳಿ ಪ್ರಸ್ತಾಪಿಸಿದ. ಕೆಲವು ಹೆಸರುಗಳು ಸೂಚಿಸಲ್ಪಟ್ಟರೂ ಸೂಕ್ತವಾಗಿರಲಿಲ್ಲ. “ಆ ಕೆಲಸವನ್ನು ಪುರೋಹಿತರಿಗೆ ಬಿಟ್ಟು ಬಿಡು; ಅವರೇ ನಿನ್ನ ಜಾತಕ ನೋಡುತ್ತಾ ಒಳ್ಳೆಯ ಹೆಸರು ಸೂಚಿಸಿಬಿಡುತ್ತಾರೆ.” ಎಂದು ನಾನು ಹೇಳಿದೆ.

“ಲೇ ಮಲ್ಲೀ, ಇವತ್ತು ಆಫೀಸಿನಿಂದ ಸಂಜೆ ಬೇಗ ಬರುತ್ತೇನೆ; ಪುರೋಹಿತರ ಮನೆಗೆ ಹೋಗಿ ‘ಗೃಹ ಪ್ರವೇಶ’ದ ಲಗ್ನ ಇಡಿಸಬೇಕು ಸಿದ್ಧವಾಗಿರು” ಎಂದು ಹೆಂಡತಿಗೆ ಹೇಳಿದ. ಇಬ್ಬರೂ ಸಂಜೆ ಪುರೋಹಿತರ ಮನೆ ಕಡೆ ಹೆಜ್ಜೆ ಹಾಕಿದರು.

ದಾರಿಯಲ್ಲಿ ಮಲ್ಲಿ ಗಂಡನನ್ನು ಮಾತಿಗೆ ಎಳೆದಳು. “ರೀ, ಮನೆಗೆ ಒಂದು ಒಳ್ಳೆಯ ಹೆಸರು ಇಡಬೇಕು; ಅದು ಹೇಗಿರಬೇಕು ಎಂದರೇ ಹಿಂದೆ ಯಾರೂ ಇಟ್ಟಿರಬಾರದು; ಅಪರೂಪದ್ದಾಗಿರಬೇಕು.” ಎಂದಳು. “ನಾನು ನನ್ನ ಸ್ನೇಹಿತರೊಂದಿಗೆ ಈ ವಿಚಾರ ಪ್ರಸ್ತಾಪ ಮಾಡಿದೆ; “ಇದನ್ನು ಪುರೋಹಿತರ ವಿವೇಚನಗೆ ಬಿಟ್ಟುಬಿಡು; ಏಕೆಂದರೆ ಶಾಸ್ತ್ರ ಸಮ್ಮತವಾಗಿರಬೇಕು. ಅವರೇ ಒಳ್ಳೆಯ ಹೆಸರು ಸೂಚಿಸುತ್ತಾರೆ ಎಂದರು. “ನಾವು ‘ಗೃಹಪ್ರವೇಶ’ಕ್ಕೆ ದಿನ ಗೊತ್ತು ಮಾಡಿದ ಬಳಿಕ ಇದನ್ನು ಪ್ರಸ್ತಾಪಿಸೋಣ.” ಎಂದ. ಪುರೋಹಿತರ ಮನೆ ಬಾಗಿಲು ತಟ್ಟಿದಾಗ ಅವರೇ ಖುದ್ದಾಗಿ ಅತಿಥಿಗಳನ್ನು ಒಳಕ್ಕೆ ಸ್ವಾಗತಿಸಿದರು. ಬಂದಿದ್ದ ಕಾರಣವನ್ನೆಲ್ಲಾ ವಿಶದವಾಗಿ ತಿಳಿಸಿದಾಗ ತುಂಬಾ ಸಂತೋಷಪಟ್ಟರು. ದಂಪತಿಗಳ ಚಾತಕಗಳನ್ನು ಪರಿಶೀಲಿಸಿದರು. ರಾಶಿ ನಕ್ಷತ್ರ, ಜನ್ಮಲಗ್ನ, ಎಲ್ಲವನ್ನೂ ಜಾಲಾಡಿ, ಮೀನಾ ಮೇಷ ಎಂದೆಲ್ಲಾ ಬೆರಳಾಡಿಸಿ ಸೂಕ್ತವಾದ ದಿನವನ್ನು, ಮುಹೂರ್ತದ ವೇಳೆಯನ್ನು ತಿಳಿಸಿದರು. ದಂಪತಿಗಳಿಗೆ ಒಪ್ಪಿಗೆ ಆಯಿತು.

“ಇದಲ್ಲಾ ಸರಿ ಹೋಯಿತು. ಆದರೆ ನಮ್ಮಮನೆಗೆ ಅಂದರೆ ಈಗ ಕಟ್ಟುತ್ತಿರುವ ಮನೆಗೆ ಸೂಕ್ತ ಹೆಸರು ಸರಿಯಾದ್ದು ಯಾವುದೂ ಸಿಕ್ತಿಲ್ಲ, ಒಳ್ಳೆಯ ಹೆಸರೊಂದನ್ನು ಸೂಚಿಸಿ. ಆದರೆ ಆ ಹೆಸರು ಸೂಕ್ತವಾಗಿರಬೇಕು. ಪೇಟೆಯಲ್ಲಿ ಹೆಸರುಗಳನ್ನು ಸೂಚಿಸುವ ಪುಸ್ತಕಗಳೇ ಖರೀದಿಗೆ ಸಿಗುತ್ತವೆ. ಅದರಲ್ಲಿ ಕಣ್ಣಾಡಿಸಿದಕ್ಕೆ ಒಂದೂ ಚಂದದ ಹೆಸರು ಸಿಗಲಿಲ್ಲ.” ಮಲ್ಲಿ ಮಾತು ಸೇರಿಸಿದಳು.

ಚಂದದ ಹೆಸರಿಗಾಗಿ ಪುರೋಹಿತರು ಮತ್ತೆ ಪಂಚಾಂಗದ ಮೊರೆ ಹೊಕ್ಕರು. ಕೊನೆಗೂ ಪರಿಹಾರ ದೊರೆಯಿತು. “ನೋಡಮ್ಮಾ ನಿಮ್ಮ ಹಾಗೂ ನಿಮ್ಮ ಯಜಮಾನರಿಗೆ ಪಂಚಾಂಗದ ಶಾಸ್ತ್ರದ ಪ್ರಕಾರ ಹೆಸರಿನ ಮೊದಲಕ್ಷರ ‘ಬ’ ಎಂದು ಆರಂಭವಾಗಬೇಕು. ಕಾಗುಣಿತದ ಅಭ್ಯಂತರವಿಲ್ಲ. ಉದಾಹರಣೆಗೆ ‘ಭಾಮಿನಿ’, ‘ಭಾನು’, ‘ಭಾಗ್ಯ ಲಕ್ಷ್ಮಿ’ ಎಂದೆಲ್ಲಾ ಆಗಬಹುದು. ‘ಬೆನಕ’ ಎಂದೂ ಆಗಬಹುದು.” ಎಂದು ಪುರೋಹಿತರು ಮಲ್ಲಿಯ ಗಮನ ಸೆಳೆದು ನುಡಿದರು. ‘ಈ ಹೆಸರುಗಳು ಮಾಮೂಲಿಯವು; ಕೊಂಚ ಅಪರೂಪವಾಗಿದ್ದರೆ ಚೆಂದ” ಎಂದಳು ಮಲ್ಲಿ. “ಹಾಗಾದರೆ ‘ಭುವನಜ’ ಅಥವಾ ‘ಭುವನೇಶ್ವರಿ’ ಆಗಬಹುದೋ” ಕೇಳಿದರು ಪುರೋಹಿತರು. ಮಲ್ಲಿ ಮಲ್ಲರು ಈ ಹೆಸರುಗಳನ್ನು ಒಪ್ಪಲಿಲ್ಲ. ಪುರೋಹಿತರಿಗೆ ಚಿಂತೆಗೆ ಇಟ್ಟುಕೊಂಡಿತು. ‘ಬ’ಕಾರ ಸೂಚಿಸಿದರೆ ನನ್ನನ್ನು ಒಳ್ಳೆ ‘ಬಕರನನ್ನಾಗಿ ಮಾಡುತ್ತಿದ್ದಾರಲ್ಲಾ’ ಎಂದು ಮನಸ್ಸಿನಲ್ಲೇ ನೊಂದುಕೊಂಡರು.

“ನೋಡಮ್ಮಾ ಏನೋ ಒಂದು ಒಳ್ಳೆಯ ಹೆಸರು ಇಟ್ಟರಾಯಿತು. ಇದಕ್ಕೆ ತಲೆಬಿಸಿ ಮಾಡಿಕೊಳ್ಳುವುದು ಏನೂ ಇಲ್ಲ; ಬೆಂಗಳೂರಿನಲ್ಲಿ ಒಂದು ಸೈಟು ಹೊಂದಿರುವುದೇ ಈಗ ಪ್ರೆಸ್ವೀಜ್ ಪ್ರಶ್ನೆ. ಅದರಲ್ಲೂ ನೀವು ಮನೆ ಕಟ್ಟಿರುತ್ತೀರಿ. ಭಾರೀ ಆಸ್ತಿವಂತರಾಗಿ ಬಿಟ್ಟರಿ. ಮನೆ ಎಂದರೆ – ಅದೂ ಸ್ವಂತದ್ದು ಎಂದ ಮೇಲೆ ಏನೆಂದು ತಿಳಿದಿರಿ; ನಿಮಗೆ ಪಾಪ, ತಿಳಿಯದು. ಅದೊಂದು ‘ಬೆಲೆ ಬಾಳುವ ರತ್ನ’ ಕಣಮ್ಮಾ. ಈಗ ನಿಮ್ಮ ಮೈ ಮೇಲೆ ಧರಿಸುವ ಚಿನ್ನದ ಒಡವೆಗಳು, ಬೆಳ್ಳಿ ಸಾಮಾನುಗಳು, ವಜ್ರ-ವೈಡೂರ್ಯ ಯಾವುದೇ ಇರಲಿ ಅದೆಲ್ಲವುಗಳಿಗಿಂತ ಹೆಚ್ಚು ‘ಬೆಲೆ ಬಾಳುವ ರತ್ನ’ವಲ್ಲದೆ ಮತ್ತೇನು? ಈ ದಿನದ ಬೆಲೆಗೆ ಮುಂದೆ ಒಂದು ದಿನ ಯಾರಾದರೂ ಖರೀದಿಸಲು ಕೇಳಿದರೆ ನೀವು ಈ ಬೆಲೆಗೇ ಕೊಟ್ಟು ಬಿಡುತ್ತೀರಾ?” ಎಂದೆಲ್ಲಾ ಪುರೋಹಿತರು ಕೊರೆದಾಗ ದಂಪತಿಗಳಿಬ್ಬರಿಗೂ ಜ್ಞಾನೋದಯವಾಯ್ತ. “ಹೌದು, ಪುರೋಹಿತರೇ ನಮಗೆ ಸಿಕ್ಕೇ ಬಿಟ್ಟತು!” ಇಬ್ಬರೂ ಒಕ್ಕೊರಳಲ್ಲಿ ನುಡಿದರು. “ಏನು ಆ ಹೆಸರು?” ಪುರೋಹಿತರು ಕೇಳಿದರು. “ಅದೇ ನೀವು ಹೇಳಿದಿರಲ್ಲಾ ‘ಬೆಲೆ ಬಾಳುವ ರತ್ನ’ ಅದನ್ನೇ ಮನಗೆ ಇಟ್ಟು ಬಿಡುತ್ತೇವೆ” ಎಂದರು. ಪುರೋಹಿತರಿಗೂ ಒಪ್ಪಿಗೆಯಾಯಿತು. ಅಂದದ ಮನೆಗೆ ಚಂದದ ಹೆಸರು ಸಿಕ್ಕಿದ್ದಾಕ್ಕಾಗಿ ಪುರೋಹಿತರಿಗೆ ವಂದಿಸಿದರು. ‘ಗ್ರಹಪ್ರವೇಶಕ್ಕೆ’ ಬಂದು ಆಮಂತ್ರಿಸಿದಾಗ ಬಂದು ಕಾರ್ಯ ನೆರವೇರಿಸಿ ಕೊಡಬೇಕೆಂದು ಪ್ರಾರ್ಥಿಸಿದರು. ಕಾಫಿ ಆತಿಥ್ಯ ಪಡೆದು ದಂಪತಿಗಳು ಜಾಗ ಖಾಲಿ ಮಾಡಿದರು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...