ಐದು ಕೊಡಗಳ ಆತ್ಮಕಥೆ

ಐದು ಕೊಡಗಳ ಆತ್ಮಕಥೆ

ಗಾಂಧಿ ಯುಗದಲ್ಲಿ ಏನು ಆದೀತು ಏನು ಆಗಲಿಕ್ಕಿಲ್ಲ! ಇದರ ಕಲ್ಪನೆ ಸಹ ಮಾಡುವದಾಗುವದಿಲ್ಲ. ಬಾಹ್ಯದೃಷ್ಟಿಗೆ ಅತ್ಯಂತ ಸ್ವಾರ್ಥಿಗಳೆಂದು ಹೆಸರಾದ ಜನರು ತಮ್ಮ ಮನೆ ಮಕ್ಕಳ ಮೇಲೆ ತುಳಿಸಿಪತ್ರ ಇರಿಸಲೂ ಸಿದ್ಧವಾಗಿರುವದನ್ನೂ ಎಷ್ಟೊ ಹೇಡಿಗಳು ಇಂದು ತಮ್ಮ ಪ್ರಾಣಾಹುತಿಯನ್ನೇ ಕೊಡಲು ಮುಂದೆ ಬಂದಿರುವದನ್ನು ನೋಡಿದರೆ ನಾವೇನು ಸ್ಪಪ್ನ ಸೃಷ್ಟಿ ಯಲ್ಲಿರುವೆವೋ ಏನೊ ಎಂದು ಅನಿಸಬಹುದು. ಇಂಥ ಒಂದು ವಿಚಿತ್ರ ಘಟನೆಯು ಬಾಗಲಕೋಟೆಯ ಜೇಲಿನಲ್ಲಿ ನಡೆದದ್ದು ನನ್ನ ಅನುಭವಕ್ಕೆ ಬಂದಿತು ಅದನ್ನೆ ನನ್ನ ಗೆಳೆಯರ ಲಾಭಕ್ಕಾಗಿ ಇಲ್ಲಿ ಸಂಕ್ಷಿಪ್ತ ರೂಪದಲ್ಲಿ ಕೊಡತ್ತಿದ್ದೇನೆ.

ನಾನು ಆದಿನ ಬಾಗಲಕೋಟೆಯ ಜೇಲಿನಲ್ಲಿದ್ದೆ. ಬ್ರಿಟಿಶ್‌ ಸರಕಾರದ ಆತಿಥ್ಯ. ನನ್ನ ಕೋಣೆಯಲ್ಲಿಯೇ ೫ ಹಿತ್ತಾಳಿ ಕೊಡಗಳಿದ್ದವು. ಅವು ಅಲ್ಲಿ ಹೇಗೆ ಬಂದವು? ಯಾಕೆ ಬಂದವು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಉಂಟಾಯಿತು. ಆದರೆ ಯಾರಿಗೆ ಕೇಳಬೇಕು? ನನ್ನ ಕೋಣೆಯ ಕಾವಲುಗಾರನನ್ನು ನೋಡಿದರೆ ಅವನೊಬ್ಬ ಸೂತ್ರದಗೊಂಬೆ, ತಾನು “ಡ್ಯೂಟಿ” ಮೇಲೆ ಇದ್ದಾಗ ಕೈದಿ ಇರಲಿ ಅಥವಾ ಏನೆ ವಸ್ತುಗಳಿರಲಿ ಅವನ್ನು ಇದ್ದುಕ್ಕಿದ್ದಂತೆ ತನ್ನ ಬದಲಿಯಾಗಿ ಬಂದವನಿಗೆ ಒಪ್ಪಿಸುವದಷ್ಟೆ ಗೊತ್ತು. ಆದರೆ ಆ ಕೊಡಗಳ ಕಡೆಗೆ ಮೇಲಿಂದ ಮೇಲೆ ನೋಡಿದಂತೆ ನನ್ನ ಕುತೂಹಲವು ಮಾತ್ರ ಬೆಳಯತೊಡಗಿತು. ಅವುಗಳ ಮೈತುಂಬ ಬಿದ್ದ ತಗ್ಗುಗಳು ಕಂಟ ಕುಸಿದು ವಿದ್ರೂಪವಾದ ಅವುಗಳ ಸ್ವರೂಪ, ಅವುಗಳಲ್ಲಿ ಅಲ್ಲಲ್ಲಿ ಕಾಣುವ ಛಿದ್ರಗಳು, ಮತ್ತು ಅನೇಕ ದಿನಗಳ ವರೆಗೆ ಕೈಯಾಡಿಸದೆ ಬಿಟ್ಟಿದ್ದರಿಂದ ಹಸಿರುಗಟ್ಟಿ ಹೋದ ಅವುಗಳ ಬಣ್ಣ, ಇವನ್ನೆಲ್ಲ ನೋಡಿದರೆ ಈ ಕೊಡಗಳೂ ಸಹ ಮನುಷ್ಯರಂತೆಯೇ ಈ ಸಂಸಾರಸಾಗರದಲ್ಲಿ ಅನೇಕ ಹೊಡೆತಕ್ಕೆ ಸಿಕ್ಕು ಕಡೆಗೆ “ಇಲ್ಲಿಗೆ” ಬಂದಿರಬಹುದೆಂದು ಅನಿಸತೊಡಗಿತು. ದುಷ್ಟ ಹಾಗೂ ಕ್ರೂರವಾದ ಬಾಹ್ಯ ಜಗತ್ತಿನಿಂದ ತಮ್ಮ ಬೆಂದು ಹೋದ, ನೊಂದ ಅಂತಃಕರಣವನ್ನು ಮಾಮುಲೇದಾರ ಕಚೇರಿಯ ಈ ಚಿಕ್ಕ ಕೋಣೆಯಲ್ಲಿ ಬಚ್ಚಿಟ್ಟು ಕೊಳ್ಳಲು ಇಲ್ಲಿಗೆ ಬಂದಿರಬೇಕೆಂದು ಅನಿಸಿತು. ಅಂತೂ ಸಂಜೆಯಾದರೂ ನನಗೆ ಆ ಕೊಡಗಳ ನಿಜ ಸಂಗತಿಯೇ ಗೊತ್ತಾಗಲಿಲ್ಲ. ರಾತ್ರಿಯಾದರೂ ನನ್ನ ಮನಸ್ಸಿನಲ್ಲಿ ಇನ್ನೂ ಅದೇ ವಿಚಾರವೆ ಕಟಿಯುತ್ತಿತ್ತು.

ರಾತ್ರಿ ಸುಮಾರು ೧೧ ಗಂಟೆಯಾಗಿರಬಹುದು. ನಾನು ಇನ್ನೂ ತೂಕಡಿಸುತ್ತಿದ್ದೆ, ಅಷ್ಟರಲ್ಲಿ ಕಾಲ ಕೆಳಗೆ ಏನೋ ಸರಿದಾಡಿದಂತೆ ಭಾಸವಾಯಿತು. ಇಲಿಗಳೇನಾದರೂ ಇರಬಹುದೆಂದು ಮತ್ತೊಂದು ಬದಿಗೆ ಹೊರಳಿದೆ. ಪುನಃ ಮತ್ತೊಮ್ಮೆ ಅದೇ ಪ್ರಕಾರದ ಸಪ್ಪಳವಾಯಿತು. ಈ ಸಾರೆ ಸ್ವಲ್ಪ ಹೆಚ್ಚು ಲಕ್ಷ ಕೊಟ್ಟು ಆ ಕಡೆಗೆ ನೋಡಲು, ನನ್ನ ಕಾಲ ಹತ್ತಿರ ಮೂಲೆಯಲ್ಲಿಟ್ಟಿದ್ದ ಕೊಡವು ಎರಡನೇ ಕೊಡದ ಕಡೆಗೆ ಸರಿಯುವದು ಕಾಣಿಸಿತು. ನಾನು ಆಶ್ಚರ್ಯದಿಂದ ಅವಕ್ಕಾದೆ. ಚಳಿಗಾಲದಲ್ಲಿ ಚಳಿ ಕಾಯಿಸಲು ಬೈಲಿನಲ್ಲಿ ಹಳ್ಳಿಗರು ಗುಂಪು ಕಟ್ಟಿಕೊಂಡು ಕೂಡುವಂತೆ, ಆ ಐದೂ ಕೊಡಗಳು ಕೂಡಿ ಕೊಂಡವು. ಅದರೊಳಗೆ ಒಂದು ಕೊಡದ ಬಾಯಿಂದ ಕೆಲವು ಶಬ್ದಗಳೂ ಸಹ ಹೊರಟಂತೆ ಕೇಳಿಸಿತು. ಛೆ! ಕೊಡಗಳೆಂದಾದರೂ ಮಾತಾಡಬಹುದೆ? ಎಂದು ವಿಚಾರ ಮಾಡುತ್ತಿರುವಾಗ “ಎ ಭಾಳ ಬ್ಯಾಸರಕಿ ಬಂದದ ಒಂದು ಚುಟ್ಟಾ ಅರೆ ಇದ್ದರ ತಗಿ ಅಲಾ” ಎಂದು ಆ ಕೊಡವು ಅನ್ನುವದು ಸ್ಪಷ್ಟವಾಗಿ ಕೇಳಿಸಿತು. ಮುಂದೆ ಆ ಐದೂ ಕೊಡಗಳು ತಮ್ಮ ತಮ್ಮೊಳಗೆ ಏನೋ ಮಾತಾಡತೊಡಗಿದವು. ಕುತೂಹಲ ಕೆರಳಿ ಮತ್ತಿಷ್ಟು ಕಿವಿಗೊಟ್ಟು ಕೇಳಿದೆ. ಅವು ತಮ್ಮ ತಮ್ಮೊಳಗೆ ತಾವು ಮಾಮಲೇದಾರ ಕಚೇರಿಯ ಈ ಕೋಣೆಯೊಳಗೆ ಹೀಗೆ ಬಂದೆವೆಂಬುದರ ಇತಿಹಾಸವನ್ನು ಹೇಳುತ್ತಿದ್ದವು. ಒಂದು ಕೊಡವು ತನ್ನ ಆತ್ಮಕಥೆಯನ್ನು ಹೇಳುವಾಗ ಉಳಿದವುಗಳು ಅದನ್ನು ಲಕ್ಷ ಕೊಟ್ಟು ಕೇಳುತ್ತಿದ್ದವು. ನಾನಿನ್ನೂ ಆಗ ಅರನಿದ್ದೆಯಲ್ಲಿಯೇ ಇದ್ದೆ. ಆದ್ದರಿಂದ ಅವು ಹೇಳಿದ್ದೆಲ್ಲಾ ನನ್ನ ಲಕ್ಷ್ಯದಲ್ಲಿ ಉಳಿದಿಲ್ಲ. ಆದರೂ ಸ್ಮರಣೆಯಲ್ಲಿದ್ದಷ್ಟನ್ನೆ ಹೇಳುತ್ತಿರುವೆನು.

ಒಂದನೇ ಕೊಡದ ಆತ್ಮಕಥೆ

“ಗೆಳೆಯರೇ ನನ್ನ ಈ ಅವತಾರದ ಕಡೆಗೆ ನೋಡಿ ನಗಬೇಡಿರಿ. ನನ್ನ ಮೈತುಂಬ ಈಗ ತೂತು ತಗ್ಗುಗಳು ಬಿದ್ದಿವೆ. ಮತ್ತು ಕಂಠವೂ ಕುಸಿ ಬಿದ್ದಂತೆ ಕಾಣಬಹುದು. ಅದರೆ ನಾನು ಜನ್ಮತಃ ಹೀಗೆ ಇದ್ದೇನೆಂದು ಮಾತ್ರ ತಿಳಿಯಬೇಡಿರಿ. ನಾನೂ ಎಷ್ಟೋ ಸುದಿನಗಳನ್ನು ಕಂಡಿದ್ದೇನೆ. ಒಂದು ಊರಿನ ಒಬ್ಬ ಕಂಚಗಾರನ ಮನೆಯಲ್ಲಿ ನನ್ನ ಜನ್ಮವಾಯಿತು. ನನ್ನ ಆಗಿನ ಮನಮೋಹಕ ರೂಪ ಹಾಗೂ ಮೈಕಟ್ಟನ್ನು ಕಂಡು ಕಂಚುಗಾರನ ಹೆಂಡತಿಯು ಹುಚ್ಚಾಗಿ ನನ್ನನ್ನು ಮಾರಬಾರದೆಂದು ಹಟ ಹಿಡಿದಳು. ಆದರೆ ಅದು ಕಂಚುಗಾರನ ಮನಸ್ಸಿಗೆ ಬರಲಿಲ್ಲ. ತಾನು ಮಾಡಿದ ಕೊಡಗಳ ಸಲುವಾಗಿ ಹೀಗೆ ಹಟ ಹಿಡಿಯುತ್ತ ಕುಳಿತರೆ ಮನೆ ತುಂಬೆಲ್ಲ ಕೊಡಗಳನ್ನೇ ಇಟ್ಟುಕೊಂಡು ಹೊಟ್ಟೆಗೆ ಕೇರು ಹಾಕಿಕೊಳ್ಳುವ ಪ್ರಸಂಗ ಬಂದೀತೆಂದು ನಿಷ್ಟುರವಾಗಿ ಹೇಳಿದನು. ಹೆಂಡತಿಯ ಉತ್ತರ ಕೂಡ ಕಾಯದೇ, ನನ್ನನ್ನು ಎತ್ತಿಕೊಂಡು ಒಬ್ಬ ವ್ಯಾಪಾರಿಗೆ ಕೊಟ್ಟು ಬಂದನು. ಅಲ್ಲಿ ನನ್ನ ಬಳಗದವರೊಂದಿಗೆ ನಾನು ಎರಡು ತಿಂಗಳವರೆಗೆ ಮಾತ್ರ ಇದ್ದೆನು. ಮುಂದೆ ವೈಶಾಖ ಮಾಸವು ಬಂದಿತು. ಹತ್ತಿಯ ವ್ಯಾಪಾರವು ಅದೇ ಪ್ರಾರಂಭವಾಗಿತ್ತು. ಆ ಸುಮಾರಿಗೆ ದಂಪತಿಗಳ ಜೋಡಿಯೊಂದು ನಾನಿದ್ದ ಅಂಗಡಿಗೆ ಬಂದಿತು. ಅವರಿಗೆ ಒಂದು ಕೊಡವನ್ನು ಕೊಳ್ಳುವದಿತ್ತು. ಅವರು ಬಡವರಿದ್ದರೂ ಹತ್ತಿಯ ಸುಗ್ಗಿಯಲ್ಲಿ ೧೫-೨೦ ರೂಪಾಯಿಗಳನ್ನುಳಿಸಿದ್ದರು. ಈ ರೂಪಾಯಿಗಳಿಂದ ತನಗೊಂದು ಜರೆದಂಚಿನ ರೂಮಾಲು, ಹೆಂಡತಿಗೊಂದು ಸೀರೆ ತೆಗೆದು ಕೊಳ್ಳ ಬೇಕೆಂದು ಗಂಡನ ವಿಚಾರವಿತ್ತೆಂದು ನನಗೆ ನಂತರ ತಿಳಿಯಿತು. ಅವರು ಅಂಗಡಿಗೆ ಬಂದಾಗ ಬರಿ ಗಂಡನ ತಲೆಯ ಮೇಲೆ ಅಷ್ಟೆ ಹೊಸ ರೂಮಾಲು ಕಂಡು ಬಂದರೂ, ಹೆಂಡತಿಯ ಆಗ್ರಹದ ಮೇರೆಗೆ ಸೀರೆ ತೆಗೆದುಕೊಳ್ಳದೆ ಒಂದು ಹಿತ್ತಾಳೆಯ ಕೊಡ ತೆಗೆದುಕೊಳ್ಳುವದನ್ನು ಅವರು ನಿಶ್ಚಯಿಸಿದಂತೆ ತೋರಿತು. ಅಂಗಡಿಯೊಳಗಿದ್ದಷ್ಟೆಲ್ಲ ಕೊಡಗಳನ್ನುತಿರುವಿ ಹಾಕಿದರೂ ಆ ಮಹಾರಾಯಳ ಮನಸ್ಸಿಗೆ ಒಂದೂ ಬರಲಿಲ್ಲ. ಕಟ್ಟಕಡೆಗೆ ನಾನು ಆಕೆಯ ಕೈಗೆ ಸಿಕ್ಕಿದೆ. ಆಕೆಯ ದರ್ಶನದಿಂದಲೇ ನಾನು ಮೋಹಿತನಾಗಿದ್ದೆ. ಹಾಗೂ ಕರ್ಮ ಧರ್ಮ ಸಂಯೋಗದಿಂದ ನನ್ನನ್ನೇ ಆಕೆಯು “ಪಾಸು” ಮಾಡಿದಳು. ಒಂದು ಯಃಕಶ್ಚಿತ್‌ ಕೊಡದ ಸಲುವಾಗಿ ಇಷ್ಟು ಚೌಕಸಿ (ಜಿಕೇರಿ) ಮಾಡಿದ್ದಕ್ಕಾಗಿ ಆಕೆಯ ಗಂಡ ಎಷ್ಟು ಗೇಲಿ ಮಾಡಿದರೂ ಆಕೆಯೇನೂ ಮಣಿಯಲಿಲ್ಲ. ನನ್ನ ತೂಕ ಮಾಡಿ ಅಂಗಡಿಕಾರನು ಬೆಲೆಯನ್ನು ಹೇಳಿದ. ಅದು ಬಹಳವೆನಿಸಿ ಎಲ್ಲಿ ಆಕೆ ನನ್ನ ಕೈ ಬಿಡುವಳೋ ಎಂದು ಹೆದರಿದೆ. ಅದರೆ ಮುಂದೆ ಇಬ್ಬರೂ ಸಲ್ಪ ಜಗ್ಗಾಡಿ, ಒಂದು ಬೆಲೆಯನ್ನು ಗೊತ್ತು ಮಾಡಿ ನನ್ನನ್ನು ತಕ್ಕೊಂಡರು. ನಾನು ಆ ದಂಪತಿಗಳ ಜೊತೆಗೆ ಅವರೂರಿಗೆ ಹೊರಟೆ. ದಾರಿಯಲ್ಲಿ ನನ್ನನ್ನು ಅವರು ತಮ್ಮ ಪ್ರೀತಿಯ ಮಗನಂತೆ ಹೆಗಲಮೇಲೂ ಬಗಲಲ್ಲಿಯೂ ಕರೆದು ಕೊಂಡು ಹೊರಟರು.

ಅಂತೂ ನಾನೊಂದು ಹಳ್ಳಿಯ ಜೀವಿಯಾದೆ. ನನ್ನನ್ನು ಕೊಂಡುತಂದ ಮನೆಯಲ್ಲಿ ಮಣ್ಣಿನ ಮಡಿಕೆಗಳೆ ಹೆಚ್ಚಾಗಿದ್ದುದರಿಂದ ನಾಲ್ಕು ಹಿತ್ತಾಳೆ ಸಾಮಾನುಗಳಲ್ಲಿ ನಾನೇ ಅಗ್ರ ಸ್ಥಾನವನ್ನು ಪಡೆದೆ. ನನ್ನನ್ನು ತಂದ ಎರಡನೇ ದಿವಸದಿಂದಲೇ ನಿನ್ನ “ಅವ್ವ” ನನ್ನನ್ನು ಬಗಲಲ್ಲಿ ಕೂಡಿಸಿ ಕೊಂಡು ನೀರಿಗೆ ಹೊರಟಳು. ಆಕೆ ನನ್ನನ್ನು ಪ್ರೀತಿಸುವದನ್ನು ನೋಡಿದರೆ ಆಕೆಯನ್ನು ಅವ್ವನೆಂದೇ ನಾನು ಕರೆಯಬೇಕು. ಆಕೆಗೆ ಇತರರು ಚಿನ್ನವ್ವ ಎಂದು ಕರೆಯುತ್ತಿದ್ದರು. ನದಿ ಮುಟ್ಟುವದರೊಳಗೆ ಕನಿಷ್ಟ ೪೦-೫೦ ಜನರಾದರೂ ಚಿನ್ನವ್ವನಿಗೆ `ಈ ಕೊಡ ಎಲ್ಲಿಂದ ತಂದೆ, ಎಷ್ಟು ಕೊಟ್ಟೆ, ತೂಕ ಎಷ್ಟಿದೆ ಹೆಸರು ಹಾಕಿಸಿದೆಯಾ’ ಎಂದು ಮುಂತಾದ ನೂರಾರು ಪ್ರಶ್ನೆಗಳನ್ನು ನನ್ನ ಬಗ್ಗೆ ಕೇಳುತ್ತಿದ್ದರು. ಅವಳು ಅದಕ್ಕೆಲ್ಲ ಉತ್ತರ ಕೊಡುತ್ತ ನದಿ ಮುಟ್ಟಲು ೧೫ ನಿಮಿಷದ ಬದಲು ಒಂದು ತಾಸು ಹತ್ತಿತು. ಆದರೂ ಆಕೆಗೆ ಬೇಸರ ಬರಲಿಲ್ಲ. ನಾನು ಬಗಲೊಳಗೆ ತನ್ನ ಜೊಚ್ಚಲ ಮಗನೇ ಕುಳಿತಿರುವೆನೆಂದು ಆಕೆ ತಿಳಿದುಕೊಂಡು ಬಿಟ್ಟಿದ್ದಳು!

ನದಿಯಲ್ಲಿ ತಾನು ಜಳಕ ಮಾಡುವದಕ್ಕಿಂತ ಮುಂಚೆ ಚಿನ್ನವ್ವನು ನನ್ನ ಮೈಯನ್ನು ಹುಣಚೆ ಹಣ್ಣು ಹಚ್ಚಿ ಉಸುಕಿನಿಂದ ಸ್ಪಚ್ಛವಾಗಿ ತೊಳೆದಳು. ನನ್ನನ್ನು ಎಷ್ಟೆ ತಿಕ್ಕಿದರೂ ಆಕೆಗೆ ಸಮಾಧಾನವಾಗಲಿಲ್ಲ. ಕಡೆಗೆ ಬಹಳ ತಡವಾದೀತೆಂಬ ಭಯದಿಂದ ನಿರುಪಾಯಳಾಗಿ ಮನೆಗೆ ತಿರುಗಿದಳು. ನನ್ನನ್ನು ಅಂಚು ಮಟ ತಂಬಿ ತಲೆಯ ಮೇಲೆ ಇಟ್ಟು ಕೊಂಡಳು ನನ್ನನ್ನು ಎತ್ತಿಕೊಳ್ಳಲು ಆಕೆಗೆ ಆಸರ ಕೊಡಲು ಒಬ್ಬ ತರುಣ ಮುಂದೆ ಬಂದಿದ್ದ. ಅದರೆ ಚೆನ್ನವ್ವನು “ಇದೇನು `ಘಗ್ಗರಿ, ಕೊಡ. ಏನೊ, ಇಟ ಐತಿ. ಇದಕ್ಯಾಕ ಎಡ್ನೆದವರ ಕೈ” ಎಂದು ಅವನ ಸಹಾಯವನ್ನು ನಿರಾಕರಿಸಿದ್ದಳು. ನಾನೇನು ಚಿಕ್ಕವನಿರಲಿಲ್ಲ ತನ್ನನ್ನು ಒಬ್ಬಳೆ ಎತ್ತಿಕೊಂಡು ಹೋಗಿ ಚಿನ್ನವ್ವನಿಗೆ ಬಹಳ ಶ್ರಮವಾಗಿರಲೇಬೇಕು. ಆದರೆ ಆ ತರುಣನು ಅದೇ ಹೆಂಡೆಗಸ ಮಾಡಿ (ಗೊಬ್ಬರ ತೆಗೆದು) ಬಂದದ್ದರಿಂದ ಅವನ ಕೈ ಹೊಲಸು ನನ್ನ ಮೈಗೆ ಹತ್ತೀತೆಂಬುದೆ ಅವಳ ಭಯ. ಅದಕ್ಕಾಗಿಯೇ, ಆಕೆ ಅವನ ಸಹಾಯ ನಿರಾಕರಿಸಿದಳು.

ಚಿನ್ನವ್ವನನ್ನು ಕರಕೊಂಡು ಮನೆಗೆ ತಿರುಗಿದಳು. ಹಾದಿಯಲ್ಲಿ ಪುನಃ ಮೊದಲಿನ ಪ್ರಶ್ನೆಗಳನ್ನೇ ಮತ್ತೆ ಅನೇಕರು ಕೇಳಿದರು ಅದಕ್ಕೆಲ್ಲ ಆಕೆ ನಗುನಗುತ್ತಲೆ ಉತ್ತರ ಕೊಡುತ್ತಿದ್ದಳು. ಮನೆ ಬಾಗಿಲಿಗೆ ಬಂದ ಕೊಡಲೆ ನನ್ನನ್ನು ಇಳಿಸಿಕೊಳ್ಳಲು ಆಕೆ ತನ್ನ ಗಂಡನನ್ನು ಕರೆದಳು. ಅವನು ಕೂಡಲೆ ಎದ್ದು ಬಂದು, ಕೆಲ ನಿಮಿಷ ಆತ, ನನ್ನನ್ನೂ ತನ್ನ ಹೆಂಡತಿಯನ್ನೂ ಆಶೆಯಿಂದ ನೋಡಿ ಕೆಳಗೆ ಇಳಿಸಿ, ಅಡಿಗೆ ಮನೆಯಲ್ಲಿ ಸ್ಪಚ್ಚವಾಗಿ ಸಾರಿಸಿದ ಒಂದು ಮೂಲೆಯಲ್ಲಿ ಇರಿಸಿದ.

ಈ ರೀತಿ ಆ ದಂಪತಿಗಳ ಅಚ್ಚುಮೆಚ್ಚಿನ ಚೊಬ್ಚಲ ಮಗನಾಗಿ ಆ ಮನೆಯಲ್ಲಿ ನಾನು ಆನಂದದಿಂದ ಇರುತ್ತಿದ್ದೆ. ಆದರೆ ಎಲ್ಲ ಸಮನೆಲ್ಲಿರಬೇಕು? ಕಾಲ ಚಕ್ರ ತಿರುಗಿತು. ಭರಮಪ್ಪನು ಚಿನ್ನವ್ವನ ಗಂಡನು ಬಾಗಿಲಕೋಟಿಗೆ ಮೇಲಿಂದ ಮೇಲೆ ಹೋಗ ತೊಡಗಿದನು. ಒಬ್ಬ ಗೆಳಯನ ಕೃಪೆಯಿಂದ ಆತನಿಗೆ ಸುರಾಪಾನದ ವ್ಯಸನ ಹತ್ತಿತು. ಮೊದಲನೇಯ ದಿವಸ ಭರಮಪ್ಪ ಕುಡಿದು ಮನೆಗೆ ಬಂದಾಗ್ಗೆ ಏನು ಶೆರೆಯ ದುರ್ಗಂಧ ವಾಸವು ಹಬ್ಬಿತೋ ಅದರಿಂದ ಆ ಪುಟ್ಟ ಮನೆಯ ಪ್ರೀತಿಯ ಸುಗಂಧವು ಶಾಶ್ವತವಾಗಿ ಅಳಿದು ಹೋಯಿತು. ಚಿನ್ನವ್ವನ ಮೋರೆಯ ಮೇಲಿನ ಮುಗಳ್ನಗೆ ಕಮರಿ ಹೋಯಿತು. ಅವಳ ಮುಖ ಚರ್ಯೆಯ ಮೇಲೆ ಯಾವಾಗಲೂ ಭೀತಿಯ ಕಳೆ ಸುರಿಯುತ್ತಿತ್ತು. ಅಗತ್ಯದ ಕೆಲಸದ ಹೊರತು ಗಂಡ ಹೆಂಡಿರ ಪರಸ್ಪರ ಮಾತು ಕತೆಗಳು ನಿಂತು ಹೋದುವು. ಮೊದಲಿನ ನಗುವದು ನಲಿಯುವದು ಎಲ್ಲವೂ ಮಾಯವಾದವು. ಶೆರೆಯ ಗುಂಗು ಇಳಿದ ಕೂಡಲೆ ಭರಮಪ್ಪನು ಒಬ್ಬ ಆರೋಪಿಯಂತೆ ಮುಖ ಮಾಡಿಕೊಂಡು ಸ್ತಬ್ದನಾಗಿ ಕೂಡುತ್ತಿದ್ದ. ಕೋಪದಿಂದ ಉರಿದು, ಹಾಯ್ದಾಡುವ ಚಿನ್ನವ್ವನ ಕಡೆಗೆ ನೋಡಿ ಆತ ಒಮ್ಮೊಮ್ಮೆ ತನ್ನ ವಿಕಟ ಹಾಗೂ ಕ್ರೂರವಾದ ನಗೆಯನ್ನೂ ಬೀರುತ್ತಿದ್ದ.

ಇಂಥ ಪ್ರಕ್ಷುಬ್ಧ ಮನಸ್ಥಿತಿಯಲ್ಲಿ ಚಿನ್ನವ್ವನ ಮನಸ್ಸು ಸಂಸಾರದಿಂದ ದೂರಾಗತೊಡಗಿತು. ನನ್ನ ಮೇಲಿನ ಆಕೆಯ ಪ್ರೀತಿಯು ಎಳ್ಳಷ್ಟೂ ಕಡಿಮೆ ಯಾಗದಿದ್ದರೂ ನನ್ನ ಸ್ಪಚ್ಛತೆಯ ಬಗ್ಗೆ ಆಕೆ ಮೊದಲಿನಷ್ಟು ಕಾಳಜಿ ತೆಗೆದು ಕೊಳ್ಳುತ್ತಿರಲಿಲ್ಲ. ನಾನು ಮಖಾಳನಾಗತೊಡಗಿದೆ. ಒಂದು ರಾತ್ರಿ ಭರಮಪ್ಪನ ಬಿರ್ಕ ತಲೆಯಿಂದ ಮನೆಗೆ ಬಂದ. ಪರಸ್ಪರರ ಪ್ರೀತಿಯ ಕುರುಹಾದ ಆತನ ಜರದಂಚಿನ ರುಮಾಲು ತಲೆಯ ಮೇಲಿರಲಿಲ್ಲ. ಚಿನ್ನವ್ವಹನಿಗೆ ಅದು ಒಮ್ಮೆಲೆ ಹೊಳೆಯಿತು. ಕೂಡಲೆ ಆ ರುಮಾಲಿನ ಬಗ್ಗೆ ಆಕೆ ವಿಚಾರಿಸಿದಳು. ಆದರೆ ಭರಮಪ್ಪ ಮಾತ್ರ ಅದಕ್ಕೆ ಉತ್ತರ ಕೊಡುವ ಸಿತಿಯಲ್ಲಿರಲಲ್ಲ. ಬೆಳಕು ಹರಿಯುತ್ತಲೆ ಅಮಲಿಳಿದ ಭರಮಪ್ಪ ಹೆಂಡತಿಯ ಕಣ್ಣು ತಪ್ಪಿಸಿ ತನ್ನ ಕೆಲಸಕ್ಕೆ ಹೋದ.

ಮುಂದೆ ಏಳೆಂಟು ದಿನಗಳು ಶಾಂತವಾಗಿ ಉರುಳಿದವು ಎನ್ನುವಷ್ಟರಲ್ಲಿ ಒಂದು ದುರ್ಘಟನೆ ಸಂಭವಿಸಿತು. ಭರಮಪ್ಪನಿಗೆ ಶೆರೆಯ ತಲಬಾಗಿದ್ದರೂ ಆತನ ಹತ್ತಿರ ಒಂದ ಒಡಕ ಕವಡಿ ಸಹ ಇರಲಿಲ್ಲ. ಮಧ್ಯಾಹ್ನದ ಸುಮಾರು ಮೂರು ಘಂಟೆಯ ವೇಳೆಯಾಗಿರಬಹುದು. ಚಿನ್ನವ್ವನು ಕೂಲಿ ಮಾಡಿ ಬಂದು ದಣಿದದರಿಂದ ಹಾಯಾಗಿ ಬಿದ್ದುಕೊಂಡಿದ್ದಳು. ಆಕೆ ಮಲಗಿದ್ದು ಕಂಡು ಭರಮಪ್ಪ ಕಳ್ಳಹೆಜ್ಜೆಯಿಂದ ಅಡಿಗೆಯ ಮನೆಯಲ್ಲಿ ಪ್ರವೇಶ ಮಾಡಿದ. ಅತ್ತಿತ್ತ ನೋಡುತ್ತ ನಡುಗುತ್ತಿರುವ ತನ್ನ ಕೈಗಳಿಂದ ನನ್ನನ್ನು ಹಗುರಾಗಿ ಎತ್ತಿಕೊಂಡು ಹೊರಗೆ ಬಂದ. ಭರಮಪ್ಪನ ಚಲನವಲನಗಳನ್ನು ನೋಡಿದ ಕೂಡಲೆ ನನಗೆ ಏನೋ ದುರ್ಧರ ಪ್ರಸಂಗ ಬಂದೇ ತೀರುವದೆಂದು ಸಂಶಯ ಬಂದಿತು. ಭರಮಮಪ್ಪನು ತನ್ನ ಕರಾಳ ಹಸ್ತದಿಂದ ನನ್ನನ್ನು ಎತ್ತಿದ ಕೂಡಲೆ ನಾನು ಚಿನ್ನವ್ವನನ್ನು ಕರೆದೆ. ಆದರೆ ನಿರ್ಜೀವಿಯಾದ ನನ್ನ ಕೂಗು ಚಿನ್ನವ್ವನಿಗೆ ಕೇಳಿಸಿತೋ ಇಲ್ಲೋ ನನಗೆ ಗೊತ್ತಿಲ್ಲ. ಚಿನ್ನವ್ಪನು ಮಾತ್ರ ಭರಮಪ್ಪನು ಅಡಿಗೆ ಮನೆಯೊಳಗಿಂದ ಪಾರಾಗುವದರೊಳಗಾಗಿಯೆ ಎಚ್ಚರಾದಳು.

ಭರಮಪ್ಪನ ಸ್ವರೂಪ ನೋಡಿದ ಕೂಡಲೆ ಅಕೆಗೆ ಅವನ ಉದ್ದೇಶ ಹೊಳೆಯಿತು. ಕೂಡಲೆ ಆಕೆ ಸಿಂಹಿಣಿಯಂತೆ ಅವನ ಮೇಲೆ ಹಾರಿ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಗಂಡ ಹೆಂಡತಿಯರ ಬಡಿದಾಟಕ್ಕೆ ಪ್ರಾರಂಭವಾಯಿತು. ಇವರಿಬ್ಬರ ಗುದ್ದಾಟದಲ್ಲಿ ನನ್ನೊಳಗಿನ ಅರ್ಧಕ್ಕಿಂತ ಹೆಚ್ಚು ನೀರು ಚಲ್ಲಿ ಹೋಯಿತು. ಭರಮಪ್ಪನು ಗಂಡುಸಾಗಿದ್ದರೂ ಸಹ ನನ್ನ ಮೇಲಿನ ಮಮತೆಯ ಬಲದಿಂದ ಚಿನ್ನವ್ವನ ಬಲವು ದ್ವಿಗುಣಿತವಾಗಿ, ಅವನ ಕೈಯೂಳಗಿಂದ ಆಕೆ ನನ್ನನ್ನು ಕಸಿದುಕೊಂಡಳು. ಆದರೆ ಅಷ್ಟರಲ್ಲಿ ಆಕೆಯ ಕೈ ಜಾರಿ ನಾನು ಕೆಳಗೆ ಅಪ್ಪಳಿಸಿಕೊಂಡು ಬಿದ್ದು ಉರುಳಿಬಿಟ್ಟೆ. ಬಿದ್ದ ಹೊಡತದಿಂದ ನನಗೆ ಅನೇಕ ಕಡೆಗೆ ತಗ್ಗುಗಳು ಬಿದ್ದವು. ನನ್ನ ಸ್ಥಿತಿಯು ಹೀಗಾದ್ದನ್ನು ಕಂಡ ಕೂಡಲೆ ಚಿನ್ನವ್ವನು ತನ್ನ ಹಣೆಯನ್ನು ಗೋಡೆಗೆ ಬಡಿದು ಕೊಳ್ಳಹತ್ತಿದಳು. ಇದನ್ನು ನೋಡಿ ನಮ್ಮಿಬ್ಬರನ್ನು ಬಿಟ್ಟು ಭರಮಪ್ಪನು ಓಡಿ ಹೋದ. ಶೆರೆಯ ಸಲುವಾಗಿ ಆತನ ರುಮಾಲು ಒತ್ತಿ ಬಿದ್ದಿದ್ದರೂ ಚಿನ್ನವ್ವನ ಕೃಪೆಯಿಂದ ನಾನು ಮಾತ್ರ ಆ ದಿನ ಉಳಿದುಕೊಂಡೆ.

ಅತ್ತು, ಅತ್ತು ದಣಿದ ಮೇಲೆ ಭಾರವಾದ ಅಂತಃಕರುಣದಿಂದ ಚಿನ್ನವ್ವನು ನನ್ನನ್ನು ಎತ್ತಿ ಒಳಗೆ ಒಯ್ದಿಟ್ಟಳು. ಮುಂದೆ ಎರಡು ದಿವಸಗಳಾದರೂ ಭರಮಪ್ಪನ ಸುದ್ದಿಯೇ ಇಲ್ಲ. ಮೂರನೆ ದಿನ ಪೋಲೀಸರ ಕಾವಲಿನೊಂದಿಗೆ ಭರಮಪ್ಪನು ಮನೆಗೆ ಬಂದ; ಶೆರೆ ಕುಡಿದು ಗೊಂದಲ ಮಾಡಿದ್ದಕ್ಕಾಗಿ ಅವನಿಗೆ ಐದು ರೂಪಾಯಿ ದಂಡವಾಗಿತ್ತು. ಅದರ ಸಲುವಾಗಿ ಪೋಲೀಸರು ಜಪ್ತಿ ಮಾಡಿ ನನ್ನನ್ನು ಇಲ್ಲಿಗೆ ತಂದರು. ಒಯ್ಯುವಾಗ ಚಿನ್ನವ್ವನು ಹಾಡಿ ಹಾಡಿ ಹೊರಳಾಡಿ ಅತ್ತಳು. ಇದು ಇನ್ನೂ ನನ್ನ ಕಣ್ಣಮುಂದೆ ಕಟ್ಟಿದೆ. ಅದೆಲ್ಲವನ್ನು ನೆನೆದರೆ ಮೈ ಜುಮ್ಮ ಅನ್ನುತ್ತದೆ. ನಾನು ಬಡವರ ಮನೆಯ್ಲಲಿರುತ್ತಿದ್ದರೂ ಅತ್ಯಂತ ಸುಖದಿಂದ ಇರುತ್ತಿದ್ದೆ. ಈ ಸುಡಗಾಡು ಶೆರೆ ನನ್ನನ್ನು ಈ ಅವಸ್ಥೆಗೀಡು ಮಾಡಿತು. ಕಳೆದ ಸುಖದದಿನಗಳನ್ನು ಪುನಃ ಈ
ಜನ್ಮದಲ್ಲಿ ಕಾಣಬಹುದೇ?

ಉಳಿದ ಕೊಡಗಳ ಕಥೆ

ತನ್ನ ಕಥೆಯನ್ನು ಮುಗಿಸಿ ಕೊಡವು ಸುಮ್ಮನೆ ಕುಳಿತಿತು. ಆ ಮೇಲೆ ಎರಡು ಕೊಡಗಳು ತಮ್ಮ ಕಥೆಯನ್ನು ಪ್ರಾರಂಭಿಸಿದವು. ಅದೇನು ಅಷ್ಟು ಮನೋವೇಧಕವಿಲ್ಲದ್ದರಿಂದ ಸಂಪೂರ್ಣವಾಗಿ ನನ್ನ ಸ್ಮರಣೆಯಲ್ಲಿ ಉಳಿದಿಲ್ಲ. ಆವೆರಡು ಕೊಡಗಳೂ ಒಂದೇ ಮನೆಯಿಂದ ಬಂದಿದ್ದವು. ಅವು ಬಂದ ಮನೆತನವು ಒಂದು ಹಳ್ಳಿಯಲ್ಲಿ ಎಂಟೆತ್ತಿನ ಕಮತ ಮಾಡು ತ್ತಿತ್ತು. ಆ ಮನೆಗೆ ಬಹು ನೀರು ಬೇಕಾಗುತ್ತಿದ್ದುದರಿಂದ ಎತ್ತಿನ ಮೇಲೆ ಲಗಳಿ ಹಾಕಿ ನಾಲ್ಕು ನಾಲ್ಕು ಕೊಡ ಒಮ್ಮೆಲೆ ತರುತ್ತಿದ್ದರು. ಈ ಎರಡೂ ಕೊಡಗಳು ಆ ಲಗಳಿ ಒಳಗಿನವಿದ್ದವು. ನೀರು ತರುವ ಆಳು ಉಸುರಿನಿಂದ ಕೊಡಗಳನ್ನು ಮೇಲಿಂದ ಮೇಲೆ ತಿಕ್ಕುತ್ತಿರಬೇಕೆಂಬುದರ ಕಲ್ಪನೆ ಕೂಡ ಇರುತ್ತಿರಲಿಲ್ಲ. ಲಗಳಿ ಎತ್ತು ಒಮ್ಮೊಮ್ಮೆ ಹೊಸದೂ ಅಥವಾ ಉದ್ದಟವೂ ಇದ್ದಾಗ ಸಬರದ ಮೇಲಿನ ಕೊಡಗಳನ್ನು ಕೆಳಗೆ ಅಪ್ಪಳಿಸುತ್ತಿದ್ದವು. ಅದರಿಂದ ಈ ಕೊಡಗಳು ನೆಗ್ಗಿ ಅಷ್ಟು ಮುಖಗಳೇ ಆಗಿಬಿಟ್ಟಿವೆ. ಆದರೂ ಒಂದು ದೊಡ ಮನೆತನದಲ್ಲಿ ಕೆಲಸ ಮಾಡಿದ ಕೀರ್ತಿಯು ಈ ಕೊಡಗಳಿಗಿದ್ದವು. ಒಮ್ಮೆ ಆ ಮನೆಯಲ್ಲಿ ಲಮಾಣಿ ಜನರಿಂದ ಎಷ್ಟೋ ಸಾಮಾನುಗಳು ಕಳವಾಗಿ ಹೋದವು. ನಂತರ ಪೋಲೀಸ ತಪಾಸಣೆಯಲ್ಲಿ ಈ ಎರಡೂ ಕೊಡಗಳು ಮಾತ್ರ ಸಿಕ್ಕಿದವು. ಅವನ್ನೇ ಈಗ ಈ ಕಚೇರಿಯ ಕೋಣೆಯಲ್ಲಿ ತಂದಿಟ್ಟಿದ್ದರು.

೪ ನೆಯ ಕೊಡದ ಕಥೆ

ಇದು ಸ್ಪಲ್ಪ ಮನೋರಂಜಕವಿತ್ತು. “ನನ್ನ ತುದಿಗಿದ್ದ ಕಲಾಕೃತಿಯಿಂದ ಹಾಗೂ ನನ್ನ ಆಕಾರದಿಂದಲೇ ನಾನು ದೇವರ ಪೂಜೆಗಾಗಿ ಕೆಲಸ ಮಾಡುತ್ತಿದ್ದೆನೆಂಬುದು ನಿಮಗೆ ಗೊತ್ತಿರಬಹುಹುದು. ದೇವರ ಆರಾಧನೆಯಿಂದಲೇ ತನಗೆ ಬಹಳ ದಿನಗಳ ಮೇಲೆ ಗಂಡಸುಮಗ ಹುಟ್ಟಿದ್ದರಿಂದ ಒಬ್ಬ ಶ್ರೀಮಂತ ಗೃಹಸ್ತನ ಹೆಂಡತಿಯು ನನ್ನನ್ನು ಮುದ್ದಾಂ ಕೊಂಡು ಆ ದೇವರ ಗುಡಿಗೆ ದಾನಕೊಟ್ಟಿದ್ದಳು. ನನ್ನನ್ನು ಕಂಡು ಆಗುಡಿಯ ಪೂಜಾರಿಗೂ ಅತ್ಯಂತ ಸಂತೋಷವಾಯಿತು. ಅಗ್ರೋದಕವನನ್ನು ನನ್ನಲ್ಲಿಯೇ ತುಂಬುತ್ತಿದ್ದ. ಸತ್ಕಾರ್ಯಕ್ಕಾಗಿ ನನ್ನ ಉಪಯೋಗವಾಗುತ್ತಿರುವದನ್ನು ನೋಡಿ ನನಗೂ ಬಹಳ ಸಮಾಧಾನವಾಗಿತ್ತು. ಹೀಗೆ ಕೆಲವು ಮಾಸಗಳು ಕಳೆದು ಹೋಗಲಾಗಿ ಒಂದು ದಿನ ಆ ಪೂಜಾರಿಯು ನೀರು ತರಬೇಕೆಂದು ನನ್ನನ್ನು ನದಿಗೆ ಒಯ್ದಾಗ ಅವನ ಪರಿಚಿತಳಾದ ಒಬ್ಬ ಸ್ತ್ರೀಯು ನನ್ನನ್ನು ಬಹಳ ಹೊಗಳಿದಳು. ಆಕೆಯ ಸ್ತುತಿಯನ್ನು ಕೇಳಿ ನನಗೆ ಸಂತೋಷವಾಗದೆ ಹೆದರಿಕೆ ಉಂಟಾಯಿತು. ನಾನು ಗುಡಿಗೆ ಬಂದೆ. ಮುಂದೆ ೩-೪ ದಿನಗಳ ಮೇಲೆ ಮಧ್ಯಾನ್ಹ ೩-೪ ಘಂಟೆಯ ಸುಮಾರಕ್ಕೆ ಗುಡಿಯೊಳಗೆ ಬಂದು ಆ ಪೂಜಾರಿಯು ನನ್ನನ್ನು ಹಿಡಿದುಕೊಂದು ಹೊರಟ. ಇಂಧ ಅಡ್ಡವೇಳೆಯಲ್ಲಿ ನನ್ನನ್ನು ಎಲ್ಲಿಗೆ ಒಯ್ಯುತ್ತಿರಬಹುದೆಂಬುದು ನನಗೆ ಹೊಳೆಯಲಿಲ್ಲ. ನನ್ನನ್ನು ಹಿಡಿದುಕೊಂಡು ಗುಡಿಯ ಹೊಸಲಿನ ವರೆಗೆ ಹೋಗಿ, ಆತ ಪುನಃ ತಿರುಗಿ ಬಂದು ನನ್ನ ಸ್ಥಳದಲ್ಲಿ ನನ್ನನ್ನಿಳಿಸಿದ. ನನ್ನನ್ನು ಎತ್ತಿಕೊಂಡು ಎಲ್ಲಿಗೋ ಹೋಗುವ ಬಗ್ಗೆ ಅವನ ಮನಸ್ಸು ಇನ್ನೂ ಹೊಯ್ದಾಡುತ್ತಿದ್ದಂತೆ ತೋರಿತು. ಮೂರು ದಿನಗಳ ವರೆಗೂ ಅವನು ಹೀಗೆ ಮಾಡಹತ್ತಿದ. ನನ್ನನ್ನು ಹೊರಗೆ ಒಯ್ಯುವಷ್ಟು ಅವನ ಮನಸ್ಸಿನ ಧೈರ್ಯವಾಗಿದ್ದಿಲ್ಲವೆಂದು ತೋರುತ್ತಿದೆ. ಆದರೆ ನಾಲ್ಕನೇ ದಿನ ಅದೇ ಹೊತ್ತಿಗೆ ಪೂಜಾರಿಯು ಗುಡಿಯೊಳಗೆ ಬಂದಕೂಡಲೇ ಈ ದಿನ ಈತನು ತನ್ನ ಮನಸ್ಸಿನಲ್ಲಿದ್ದುದನ್ನು ಮಾಡಿಯೇ ತೀರುವನೆಂದು ನನಗೆ ಗೊತ್ತಾಯಿತು. ನನ್ನನ್ನು ಎತ್ತಿಕೊಂಡವನೇ ತನ್ನ ಮನೆಯ ದಾರಿ ಹಿಡಿದು ಬಿಟ್ಟ. ಅವನ ಮನೆಯಲ್ಲಿ ಎಲ್ಲರೂ ದೇವರ ಕೊಡವನ್ನು ಮನೆಗೆ ಹೇಗೆ ತಂದಿರಿ” ಎಂದು ಕೇಳಹತ್ತಿದರು. ಅವರ ಮುಂದೆ ಕೊಡಕ್ಕೆ ಹೆಸರು ಹಾಕಿಸುವದಿದೆ ಎಂದು ಗುಳಿಗೆ ಹೊಡೆದ ಆ ಪೂಜಾರಿ.

ಅದೇ ದಿನ ರಾತ್ರಿ ೧೧ ಘಂಟೆ ಸುಮಾರಕ್ಕೆ ಆ ಪೂಜಾರಿಯು ನನ್ನನ್ನು ಒಬ್ಬ ಹೆಂಗಸಿನ ವಶಕ್ಕೆ ಒಪ್ಪಿಸಿ ಬಿಟ್ಟ. ಆ ದಿನ ನದಿಯ ಮೇಲೆ ನನ್ನನ್ನು ಮಿತಿಮೀರಿ ಹೊಗಳಿದ ಹೆಂಗಸೇ ಅವಳಿದ್ದಳು. ಪೂಜಾರಿಯು ಅವಳನ್ನು ಪೂಜಿಸುತ್ತಿದ್ದ. ಆದರೆ ಅವಳ ಮನೆಯಲ್ಲಿ ನನಗೆ ಬಹಳ ದಿನಗಳಿರಬೇಕಾಗಲಿಲ್ಲ. ಕೆಲವು ದಿನಗಳ ಮೇಲೆ ಆ ಸ್ತ್ರೀಯು ಕಾಲರಾದಿಂದ ಒಮ್ಮಿಂದೊಮ್ಮೆಲೆ ಇಹಲೋಕವನ್ನು ತ್ಯಜಿಸಿದಳು. ಹತ್ತಿರದವರು ಯಾರೂ ಇರಲಿಲ್ಲ. ಪೋಲೀಸರು ಪಂಚನಾಮೆ ಮಾಡಿ ಅಕೆಯ ಆಸ್ತಿಯನ್ನುನಾಜರರ ವಶಕ್ಕೆ ಕೊಟ್ಟರು. ಅದರಲ್ಲಿ ನಾನೂ ಬಂದೆ. ಇನ್ನು ಮುಂದೆ ನನ್ನ ನಶೀಬದಲ್ಲಿ ಏನು ಇದೆಯೊ ಯಾರು ಬಲ್ಲರು.

೫ನೇ ಕೊಡದ ಕಥೆ

ಕೊಡವು ಇಲ್ಲಿಯವರೆಗೆ ಸ್ತಬ್ದವಾಗಿ ಕುಳಿತು ತನ್ನ ಸರದಿ ಬಂದ ಕೂಡಲೆ ಮೊದಲು ಒಂದು ದೀರ್ಘವಾದ ನಿಟ್ಟುಸಿರನ್ನು ಬಿಟ್ಟು ಹೀಗೆ ಹೇಳಿತು. “ನಾನು ಸುದೈವದಿಂದ ಒಂದು ದೊಡ್ಡ ಮನೆತನವನ್ನು ಸೇರಿಕೊಂಡು ಸುಖವಾಗಿದ್ದೆ. ಕನಿಷ್ಠ ೩೦-೪೦ ಜನರಾದರೂ ಅಲ್ಲಿರುತ್ತಿದ್ದರು. ಅವರೆಲ್ಲರೂ ಒಂದಿಲ್ಲೊಂದು ಕೆಲಸದಲ್ಲಿ ತತ್ಪರರಾಗಿಯೇ ಇರುತ್ತಿದರು. ಆ ಮನೆಯ ಹಿರಿಯ ಮಗನ ಲಗ್ನವು ಸುಲಕ್ಷಣೆಯಾದ ಒಬ್ಬ ಸುಂದರ ಯುವತಿಯ ಕೂಡ ಜರುಗಿತು. ಸೊಸೆಯು ಅತ್ತಿಯ ಮನೆಗೆ ಬಂದಳು. ಆ ತರುಣ ದಂಪತಿಗಳನ್ನು ನೋಡಿದರೆ ರತಿ ಕಾಮರ ಕಲ್ಪನೆಯು ಯಾರಿಗಾದರೂ ಬರುತ್ತಿತ್ತು. ಅದನ್ನು ನೋಡಿ ವಿಧಿಗೆ ಹೊಟ್ಟೆ ಕಿಚ್ಚು ಆಗಿರಬೇಕು. ಆ ಹಿರಿಯ ಮಗನ ಮನಸ್ಸಿನಲ್ಲಿ ತನ್ನ ತರುಣ ಸುಂದರ ಹೆಂಡತಿಯ ಶೀಲದ ಬಗ್ಗೆ ಸಂಶಯ ಉತ್ಪನ್ನವಾಯಿತು. ಕೂಡಲೆ ಆಕೆಯನ್ನು ನಾನಾ ವಿಧವಾಗಿ ಪೀಡಿಸಹತ್ತಿದ. ಪಾಪ ಅಕೆಯೇನು ಮಾಡಬೇಕು. ಒಂದು ದಿನ ದೇವರ ಪೂಜೆಗೆ ಮಡಿ ನೀರು ತರುವ ನೆಪ ಮಾಡಿಕೊಂಡು ಹೊರಬಿದ್ದಳು. ಬಾವಿಯ ದಂಡಿಯ ಮೇಲೆ ನನ್ನನ್ನಿಟ್ಟವಳೇ ತಾನು ಒಳಗೆ ಹಾರಿಕೊಂಡಳು. ನೀರೊಳಗೆ ಬೀಳುವ ಮುಂದೆ ಆ ತರುಣ ಜೀವಿಯು ಮಾಡಿದ ಅರ್ತನಾದವು ಇನ್ನೂ ನನ್ನ ಕಿವಿಯಲ್ಲಿ ದನಿಗೊಳ್ಳುತ್ತಿದೆ ಆ ಮೇಲೆ ಪೋಲೀಸರು ಪಂಚನಾಮೆ ಮಾಡಿ ನನ್ನನ್ನು ಇಲ್ಲಿ ತಂದು ಒಗೆದರು. ಈಗಲೂ ಆ ದುರ್ದೈವಿ ತರುಣಿಯ ನೆನಪಾದ ಕೂಡಲೆ ಎದೆಯು ದಸ್ಸನ್ನುತ್ತದೆ.

ಹೀಗೆ ಹೇಳುತ್ತ ನಿಜವಾಗಿಯೂ ಆ ಐದನೆಯ ಕೊಡವು ಅತ್ಯಂತ ಕರ್ಕಶ ಸ್ವರದಿಂದ ಚೀರಿತು. ಅದನ್ನು ಕೇಳುತ್ತಲೆ ನಾನು ಗಡಬಡಿಸಿಕೊಂಡು ಎಚ್ಚತ್ತೆ. ಎದ್ದು ನೋಡುವದರೊಳಗೆ ಆ ಕೊಡಗಳು ತಮ್ಮ ತಮ್ಮ ಸ್ಥಾನ ಗಳಲ್ಲಿಯೇ ಇದ್ದುವು. ನನ್ನ ಕೋಣೆಯ ಕಾವಲಗಾರನು ಮಾತ್ರವಿಚಿತ್ರ ಸ್ವರದಿಂದ “ಆಲಬೆಲ್‌” ಕೊಡುತ್ತಿದ್ದ.
****
೧೭-೧-೧೯೪೯ ಕರ್ಮವೀರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧಾನ್ಯದ ಹೊಟ್ಟು ತೂರಿದಂತೆ ಒಟ್ಟು ತೂರಬಹುದೇ?
Next post ನಾನು-ನೀನು

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…