Home / ಕಥೆ / ಕಿರು ಕಥೆ / ಜೇನುಹುಳು ಮತ್ತು ನೊಣಗಳು

ಜೇನುಹುಳು ಮತ್ತು ನೊಣಗಳು

ಆ ಮನೆಯ ಅಂಗಳದ ಮರವೊಂದರ ಟೊಂಗೆಯಲ್ಲಿ ಜೀನುಹುಳುಗಳು ಗೂಡು ಕಟ್ಟಿದ್ದವು.  ಮನೆಯ ಯಜಮಾನನಿಗೆ ಗೂಡೆಂದರೆ ಅಭಿಮಾನ, ಪ್ರೀತಿ, ಅವನು ಅದನ್ನು ಕಾಳಜಿಯಿಂದ ರಕ್ಷಿಸುತ್ತಿದ್ದ.  ಗೂಡು ಕಟ್ಟಿದ ಜೇನುಹುಳುಗಳೂ ಅಷ್ಟೆ.  ಒಮ್ಮೆಯೂ ಅಪಾಯಕಾರಿಯಾಗಿ ವರ್ತಿಸುತ್ತಿರಲಿಲ್ಲ.  ಒಂದು ಗೂಡಾದ ನಂತರ ಮತ್ತೊಂದು ಗೂಡನ್ನು ಜೇನುಹುಳುಗಳು ಅಲ್ಲಿ ಕಟ್ಟುತ್ತಲೇ ಇದ್ದವು.  ಮೆನಯ ಸದಸ್ಯರಿಗೆಲ್ಲ ಮಧುರಜೇನು ಸಿಗುತ್ತಿತ್ತು.  ಯಜಮಾನ ಅದನ್ನು ಸುತ್ತಮುತ್ತಲಿನ ಜನಕ್ಕೂ ಹಂಚುತ್ತಿದ್ದ.  ಜೇನು ಸವಿದ ಅವನ ಮನಸ್ಸು ಜೇನುಹುಳುಗಳ ಬಗ್ಗೆ ಕೃತಜ್ಞವಾಗಿತ್ತು.

ಅವನ ಮನೆಯ ಒಳಗೂ-ಹೊರಗೂ ಹಾರಾಡಿಕೊಳ್ಳುವ ನೊಣಗಳಿಗೆ ಯಜಮಾನನ ಮೇಲೆ ವಿಪರೀತ ಸಿಟ್ಟು.  ಅವನು ತಮ್ಮನ್ನು ದ್ವೇಷಿಸುತ್ತಾನೆ ಮತ್ತು ಧಿಕ್ಕರಿಸುತ್ತಾನೆ ಎಂದು ಆ ನೊಣಗಳು ಆರೋಪಿಸುತ್ತಿದ್ದವು.  ಅತ್ತಿತ್ತ ಹಾರಾಡಿದರೆ, ಒಂದು ಕಡೆಗೆ ಕುಳಿತರೆ ಯಜಮಾನನ ಕಣ್ಣು ಕೆಂಪಾಗಿ ನೊಣಗಳ ಮೇಲೆ ದಾಳಿ ಮಾಡುತ್ತಿದ್ದವು.  ಮನೆಯಲ್ಲಿದ್ದ ಹೆಂಗಸರೂ ಅಷ್ಟೆ “ಈ ಹಾಳಾದ ನೊಣ” ಎಂದು ಒಟಗುಡುತ್ತ, ನೀರಲ್ಲಿ ವಿಷ ಹಾಕಿ ನೊಣಗಳನ್ನು ಕೊಲ್ಲುತ್ತಿದ್ದರು.  ಅಥವಾ ಮನೆಯೊಳಗೆ ಪ್ರವೇಶಿದಂತೆ ಯತ್ನಿಸುತ್ತಿದ್ದರು.

ಅವರದು ಪಕ್ಷಪಾತ ಬುದ್ಧಿ ಎಂದು ನೊಣಗಳು ಹತಾಶೆಯಿಂದ ಹೇಳಿಕೊಳ್ಳುತ್ತಿದ್ದವು..  ಜೇನುಹುಳಗಳಿಗೆ ಗೌರವ ಕೊಡುವ ಅವರು ತಮ್ಮನ್ನು ಕಂಡರೆ ಅಪಾಯ ಎದುರಾದಂತೆ ವರ್ತಿಸುವರೆಂದು ತಹತಹಿಸುತ್ತಿದ್ದವು.  ಈ ಮನುಷ್ಯರು ತಮ್ಮನ್ನು ದ್ವೇಷಿಸಲು ಜೇನುಹುಳಗಳೇ ಕಾರಣವೆಂದು ಮತ್ಸರದಿಂದ ತಳಮಳಿಸುತ್ತಿದ್ದವು.

ಅಸೂಯೆ ವರ್ಧಿಸಿದಂತೆ ನೊಣಗಳು ಯಜಮಾನನ ಮೇಲೆ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದ್ದವು.  ಯಜಮಾನನೂ ಛಲದಿಂದ ನೊಣಗಳೊಂದಿಗೆ ಹೋರಾಡುತ್ತಿದ್ದ.  ಅವನ ಆಕ್ರೋಶದ ದಾಳಿಗೆ ಸಿಕ್ಕು ಕೆಲವು ನೊಣಗಳು ಸತ್ತು ನೆಲಕುರುಳುತ್ತಿದ್ದವು.  ಹೆಂಗಸರು ಅವನ್ನೆಲ್ಲ ಗುಡಿಸಿ ತಿಪ್ಪೆಗೆಸೆಯುತ್ತಿದ್ದರು.  ಸತ್ತ ನೊಣಗಳನ್ನು, ಇರುವೆಗಳು ಮುತ್ತಿಕೊಂಡು ಎಳೆದೊಯ್ಯುವಾಗ ಉಳಿದ ನೊಣಗಳು ದುಃಖದಿಂದ ಒದ್ದಾಡುತ್ತಿದ್ದವು.

ಒಮ್ಮೆ ಯಜಮಾನ ಆರಾಮಾಗಿ ಕುಳಿತಾಗ ನೊಣಗಳು ಗುಂಪಾಗಿ ಬಂದು ನೇರವಾಗಿ ಕೇಳಿದವು – “ಸ್ವಾಮಿ, ಯಜಮಾನರೆ ಜೇನುಹುಳಗಳಿಗೆ ತೋರಿಸುವ ಪ್ರೀತಿ ನಮಗೇಕಿಲ್ಲ?”

“ಜೇನು ಹುಳುಗಳು ನಿಮ್ಮಂತೆ ಅಪಾಯಕಾರಿಯಲ್ಲ ಅದಕ್ಕೆ” ನಿರ್ವಿಕಾರನಾಗಿ ಹೇಳಿದ.

“ಅವು ಮನುಷ್ಯನನ್ನು ಕಚ್ಚಿ ಕೊಲ್ಲುತ್ತವೆ.”

“ಹೌದು… ಮನುಷ್ಯನು ತೊಂದರೆ ಕೊಟ್ಟಾಗ ಮಾತ್ರ.”

“ನಮ್ಮಿಂದ ನಿಮಗೇನು ಕಷ್ಟ?”

“ನಿಮಗೆ ಅನ್ನ ಯಾವುದು ಹೊಲಸು ಯಾವುದು ವ್ಯತ್ಯಾಸವೇ ಗೊತ್ತಿಲ್ಲ.  ಜೇನುಹುಳುಗಳು ಸತತವಾಗಿ ದುಡಿದು, ಎಲ್ಲರಿಗೂ ಸಿಹಿಯಾದ ಜೇನು ಹನಿ ನೀಡಿ ಉಪಕಾರ ಮಾಡುತ್ತವೆ.  ಅವುಗಳದು ನಿಸ್ಪೃಹ ಬದುಕು.  ನಿಮ್ಮದು ಸ್ವಾರ್ಥದ ಕೊಳಕು.  ಎಂಜಲಿನ ದಾಹಕ್ಕೆ ಮನುಷ್ಯರನ್ನು ಬಲಿ ತಗೊಂತೀರಿ ನೀವು”  ಗುಂಪಾಗಿ ಕುಳಿತಿದ್ದ ನೊಣಗಳ ಮೇಲೆ ಬಲವಾಗಿ ಕೈ ಬೀಸಿದ ಯಜಮಾನ.

ರೆಕ್ಕೆ ಬಿಚ್ಚಿದ ನೊಣಗಳು ಬಚ್ಚಲ ಮೋರಿಯತ್ತ ಹಾರಿ ನಾಚಿಕೆಯಿಲ್ಲದಂತೆ ಹೊಲಸು ನೆಕ್ಕತೊಡಗಿದವು.

*****

Tagged:

One Comment

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...