ದೀಪದ ಕಂಬ (ಜೀವನ ಚಿತ್ರ) 1

ನನ್ನ ಜೀವನದ ಕೆಲವು ಘಟನೆಗಳನ್ನು ನಾನು ಕೇಳಿದ್ದು, ನೋಡಿದ್ದು ಇವುಗಳನ್ನು ನನ್ನಿಂದಲೇ ಕೇಳಬೇಕು, ಓದಬೇಕು ಎನ್ನುವುದು ನನ್ನ ಮಕ್ಕಳ, ಮೊಮ್ಮಕ್ಕಳ ಬಯಕೆ. ಇದನ್ನು ಈಡೇರಿಸದಿದ್ದರೆ ನನ್ನ ಮೂರು ದಶಕಗಳ ಅಧ್ಯಾಪನ ವೃತ್ತಿಗೆ ನ್ಯಾಯವಾಗಲಿಕ್ಕಿಲ್ಲ.

“ಶ್ರೀ ಕೊಡ್ಲೆಕೆರೆ ಅನಂತ ಭಟ್ಟರ ತೃತೀಯ ಪುತ್ರ ಮಹಾಬಲೇಶ್ವರ ಭಟ್ಟನ ಶುಭ ಜನನ” – ಇದು ನಾನು ಬರೆದದ್ದಲ್ಲ. ನನ್ನ ಜಾತಕದಲ್ಲಿ ನಮೂದಾಗಿದ್ದು: ಲಿಖ್ಯತೇ ಜನ್ಮಪತ್ರಿಕಾ, ಎಂದು.

ವೈದಿಕ ಮನೆತನದವನಾದ ನನಗೆ ಕಾಲಕಾಲಕ್ಕೆ ನೆರವೇರಬೇಕಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ನನ್ನ ಅಪ್ಪಯ್ಯ, ಅಬ್ಬೆ ನನ್ನನ್ನು ಕೆಳಗಿನ ಶಾಲೆಗೆ ಒಂದನೇ ತರಗತಿಗೆ ದಾಖಲಿಸಿದರು. ನನ್ನ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಮನೆ ಗುರು ನನ್ನಬ್ಬೆ ಒಬ್ಬಳೇ. ನನ್ನ ತಂದೆಯವರು ಆಗ ದೂರದ (ಈಗೇನೂ ಅಷ್ಟು ದೂರವಲ್ಲ) ತೀರ್ಥಹಳ್ಳಿಯಲ್ಲಿ ನಮ್ಮ ಮಠದ ಪಾರುಪತ್ಯದಾರರು ಆಗಿದ್ದರು. ಮನೆಯ ಕಾರುಬಾರು ನಮ್ಮಮ್ಮನದೇ. ಜೊತೆಯಲ್ಲಿ ಇನ್ನಿಬ್ಬರು ಅಮ್ಮನ ಸಹಾಯಕರು: ಪನ್ನಿ ತಾತಮ್ಮ ಹಾಗೂ ಪಂಡಿತ ಕಾಮಾಚಿಕ್ಕಿ.

ಒಂದನೇಯತ್ತೆಯಲ್ಲಿ ನನ್ನ ಮಾಸ್ತರರು ಅಲ್ಲ ಮಾಸ್ತರಣಿ ಶ್ರೀಮತಿ ಪರಮೇಶ್ವರಿ ಪಂಡಿತ. ಎಕ್ಕಂ, ದಹಂ, ಶತಂಗಳಿಗೆ ೧, ೧೦, ೧೦೦ ರ ಕಲ್ಲುಗಳನ್ನು ಬೇರೆ ಬೇರೆ ಬಟ್ಟೆಯಲ್ಲಿ ಕಟ್ಟಿ ಅವುಗಳನ್ನು ಉಪಯೋಗಿಸಿ ಲೆಕ್ಕ ವಿವರಿಸುತ್ತಿದ್ದರು. ಕೂಡುವ, ಕಳೆಯುವ ಲೆಕ್ಕಗಳನ್ನು ಚಿಕ್ಕ ಮಕ್ಕಳಾದ ನಮಗೆ ವಿವರಿಸಿ ಹೇಳುತ್ತಿದ್ದರು.ಕಲ್ಲುಸಕ್ಕರೆ ಪೊಟ್ಟಣ ತಂದು ಕಳೆಯುವ ಲೆಕ್ಕ ಕಲಿಸಿದರು. “ಮಾಚಾ, ೨೦ ರಲ್ಲಿ ೮ ಹೋದರೆ ಎಷ್ಟು?” ನನಗೆ ಪ್ರಶ್ನೆ. “ಪುರುಷಾ, ೮ ಸಕ್ಕರೆ ಹೋಳು ನೀನು ತಿನ್ನು” ಎಂದರು. ಉಳಿದ ಹರಳುಗಳನ್ನು ನಾನು ಎಣಿಸಬೆಕು. ಆಗಲೂ ತಪ್ಪಾಗಿ ಹೇಳಿದರೆ ಕಿವಿಗೆ ಬಿತ್ತು ಹರಳು!

ಶ್ರಾವಣ ಮಾಸದ ಪೂಜೆ – ಊರ ಹಿರಿಯ ಮನೆತನದ ಗೋಪಿಯವರದು. ಶ್ರಾವಣದ ಒಂದು ತಿಂಗಳು ಪೂಜೆಯು ಬೆಳಿಗ್ಗೆ ಒಂಬತ್ತು, ಹತ್ತು ಘಂಟೆಯವೆರೆಗೂ ನಡೆಯುವುದು. ಕೊನೆಯ ದಿನ, ಅಮಾವಾಸ್ಯೆ, ದೇವಾಲಯಕ್ಕೆ ಬಂದ ವಟುಗಳಿಗೆಲ್ಲಾ ದಕ್ಷಿಣೆ ಕೊಡುತ್ತಿದ್ದರು. ಕೆಳಗಿನ ಶಾಲೆಯ ವಟುಗಳನ್ನು ತಾವೇ ಕರೆದು ತಂದು ಅವರಿಗೆ ದಕ್ಷಿಣೆ ಕೊಡಿಸಿ ತಿರುಗಿ ಶಾಲೆಗಳಿಗೆ ಕರೆತಂದು ಎಲ್ಲರನ್ನೂ ಬಿಡುತ್ತಿದ್ದರು. ಯಾರೋ ಇದನ್ನು ಆಕ್ಷೇಪಿಸಿದಾಗ “ನೋಡು, ಶಿಕ್ಷಕರಾದ ನಾವು ಸಮಾಜದಲ್ಲಿ ಹೊಂದಿಕೊಂಡಿರಬೇಕಾಗುತ್ತದೆ” ಎಂದು ಶಿಕ್ಷಕಿ ಶ್ರೀಮತಿ ಪರಮೇಶ್ವರಿ ಪಂಡಿತ ವಿವರಿಸಿ ಹೇಳಿದರು.

ಎರಡನೇಯತ್ತೆಗೆ ಬಂದಾಗ ಶ್ರೀ ಪರಮೇಶ್ವರ ಚಿತ್ರಿಗೆಮಠ ಎಂಬ ಶಿಕ್ಷಕರು. ‘ಮಂಕುತಿಮ್ಮನ ಕಗ್ಗ’ ದಲ್ಲಿ ಬರುವಂತೆ ಸಾಧು. ಏಟು, ಪೆಟ್ಟು ಇವರ ಹತ್ತಿರ ಸುಳಿಯದು. ಒಮ್ಮೆ ಶಾಲೆಯ ಹಿಂದುಗಡೆ ಮನೆ ಸರಸಕ್ಕ”ಪರಮೇಶ್ವರ ಮಾಸ್ತರರೇ, ಈ ನಾಣಿಗೆ ಎರಡು ಬಾರ್ಸಿ. ನನ್ನ ಮಗಳಿಗೆ ಕುಂಟಿ ಹೇಳಿ ಚಾಳಿಸ್ತ” ಎಂದಳು. ಪರಮೇಶ್ವರ ಮಾಸ್ತರು “ನೋಡು, ನಾನು ಇಲ್ಲಿ ಇರುವುದು ನಾಣಿಗೆ ನಾಲ್ಕು ಅಕ್ಷರ ಹೇಳಲು. ಹೊಡೆಯಲಿಕ್ಕಲ್ಲ. ಅವ ಕುಂಟಿ ಹೇಳಿದರೆ ತಪ್ಪು. ನಾನು ಅವನಿಗೆ ತಿಳಿಸಿ ಹೇಳ್ತೇನೆ. ಅಷ್ಟೇ ಅಲ್ಲ, ಅವನ ತಾಯಿಗೂ ಮನೆಗೆ ಹೋಗುವಾಗ ಹೇಳುತ್ತೇನೆ. ನಾನು ಇರುವುದು ಶಿಕ್ಷೆ ಕೊಡಲು ಅಲ್ಲ” ಎಂದು ತಮ್ಮ ನಯ, ನಾಜೂಕಿಗೆ ಸ್ವಲ್ಪವೂ ಕುಂದು ಬರದಂತೆ ಸರಸಕ್ಕಳಿಗೆ ತಿಳಿ ಹೇಳಿದರು. ನಮ್ಮ ಅದೃಷ್ಟ, ಮೂರನೇಯತ್ತೆಗೂ ಅವರೇ ಮಾಸ್ತರರು. ಏಟು, ಬೈಗುಳ ಏನೂ ಇಲ್ಲದೇ ಮೊದಲ ಮೂರು ತರಗತಿಗಳನ್ನು ಪರಮೇಶ್ವರಾನುಗ್ರಹದಿಂದ ಕಳೆದು ನಾಲ್ಕನೇಯತ್ತೆಗೆ ಬಂದೆ.

ಶ್ರೀ ರಾಜಾರಾಮ ಚಿತ್ರಿಗೆಮಠ (ಶ್ರೀ ರಾ.ವೆಂ. ಚಿತ್ರಿಗೆಮಠ) ನಮ್ಮ ಪರಮಭಾಗ್ಯ ಎಂಬಂತೆ ಸಿಕ್ಕರು. ಪರಮಭಾಗ್ಯ ಎಂದು ನನಗೆ ಆಗ ಅನಿಸದಿದ್ದರೂ ಮುಂದೆ ಐದು, ಆರು, ಏಳರಲ್ಲಿ ಮತ್ತು ವಿದ್ಯಾಭ್ಯಾಸವನ್ನು ಮುಂದುವರಿಸಿದಾಗಲೆಲ್ಲಾ ಅನ್ನಿಸಿತು. ಆಗ ಅವರು ಎಲ್ಲರಂತೆ ಒಬ್ಬ ಮಾಸ್ತರರು. ಆದರೆ ಅವರಲ್ಲಿ ಇದ್ದ ಭಾಷಾ ಸಂಪತ್ತು, ಗಣಿತ ಜ್ಞಾನ, ಭಾಷಣಕಲೆ ಪ್ರಚ್ಛನ್ನವಾಗಿ ನಮಗೆ ತೆರವಿಲ್ಲದೇ ಹರಿದು ಬಂದಿದ್ದು ಅರಿವಾದದ್ದು ನಂತರದ ದಿನಗಳಲ್ಲಿ. ಮೇಲಣ ಶಾಲೆಯಲ್ಲಿ ಒಂದು ಸಮ್ಮೇಳನ ಇತ್ತು. ನಾವು ನಾಲ್ಕೈದು ಜನರಿಂದ ಒಂದು ನಾಟಕ ಆಡಿಸಿದರು.ಬಣ್ಣ ಇಲ್ಲ, ಡ್ರೆಸ್ ಇಲ್ಲ, ಬರೇ ಮಾತು, ನಟನೆ. ಆ ನಾಟಕಕ್ಕೆ ಆ ಸಮ್ಮೇಳನದಲ್ಲಿ ಮೊದಲನೇ ನಂಬರು ಬಂತು. ನಮಗೆಲ್ಲರಿಗೂ ನನ್ನಿಂದಲೇ ಮೊದಲನೇ ನಂಬರು ಬಂತು ಎಂಬ ಹೆಮ್ಮೆ.ಮುಂದೆ ನಾನು ಶಿಕ್ಷಕನಾದ ಮೇಲೆ ಮಕ್ಕಳಿಗೆ ನಾಟಕ ತರಬೇತಿ ಕೊಡಲು ವಿಶೇಷ ತರಬೇತಿಗಾಗಿ ಬೆಂಗಳೂರಿಗೆ ಹೋಗಲು ಆಯ್ಕೆ ಆದದ್ದು….ಎಲ್ಲಾ ನನ್ನ ಬಾಲ್ಯದ ಆ ನಾಟಕದಿಂದಾಗಿ. ನಮ್ಮ ರಾಜಾರಾಮ ಮಾಸ್ತರರ ತಲೆಗೆ ಚೆಲ್ವ ಬಿಳೇ ಟೋಪಿ (ದೇವರ ತಲೆಗೆ ಬಿಲ್ವಪತ್ರೆ ತಪ್ಪಿದರೂ ಟೋಪಿ ಸ್ಥಾನ ಬದಲಿಸುತ್ತಿರಲಿಲ್ಲ). ಅಷ್ಟೇ ಶುಭ್ರ ಕಚ್ಚೆ ಪಂಚೆ.ಕೋಟಿನ ಬಣ್ಣ ಮಾತ್ರ ಬೇರೆ. ಕೈಯಲ್ಲಿ ಬೇಸಿಗೆ, ಮಳೆ, ಚಳಿ ಎಲ್ಲ ಕಾಲದಲ್ಲೂ ಛತ್ರಿ. ರಾಜಾರಾಮ ಮಾಸ್ತರರ ಬಗೆಗೆ ನನಗೆ ಎಲ್ಲಿಲ್ಲದ ಗೌರವ. ನಾನು ಒಂಬತ್ತನೇಯತ್ತೆಯಲ್ಲಿದ್ದಾಗ ಬರೆದ ಎಂಟು,ಹತ್ತು ಭಾಮಿನಿ ಷಟ್ಪದಿಯ ಪತ್ರಗಳನ್ನು ನನ್ನ ಶಿವರಾಮಣ್ಣ ಇವರಿಗೆ ಕಾಣಿಸಿದನಂತೆ. “ಚೆನ್ನಾಗಿ ಬರೆದಿದ್ದಾನೆ. ಮತ್ತೂ ಪದ್ಯ ಬರೆಯತ್ತಿರುವಂತೆ ಹೇಳು” ಎಂದರಂತೆ. ಅಷ್ಟೇ ಅಲ್ಲ, ನಾಲ್ಕೈದು ವರ್ಷಗಳ ನಂತರ ಊರಿನಲ್ಲಿ ನಾನು ಸಿಕ್ಕಾಗ ನೆನಪಿಟ್ಟು “ಏ ಕೊಡ್ಲೆಕೆರೆ, ಷಟ್ಪದಿ ಚೆನ್ನಾಗಿ ಬರೆದಿದ್ದೆ ನೀನು. ನಿನ್ನಣ್ಣ ಕಾಣಿಸಿದ” ಎಂದು ಬೆನ್ನು ಚಪ್ಪರಿಸಿದರು ನಾಗಪ್ಪ ಶೆಟ್ಟಿ ಅಂಗಡಿ ಎದುರು. ಆಗ ಈಗ ನಾನು ಬರೆಯುತ್ತಲೇ ಇದ್ದೆ – ನನಗೆ ಭಾಮಿನಿ ಬರುವವರೆಗೂ, ನಂತರವೂ. ಹೀಗೆ ನನ್ನ ನಾಲ್ಕನೇಯತ್ತೆ ಅಬಾಧಿತವಾಗಿ ಮುಗಿದು ಐದನೇಯತ್ತೆಗೆ ನನ್ನ ಗಾಡಿ – ಗುಲ್ವಾಡಿ ಮಾಸ್ತರರಿರುವ ಮೇಲಣ ಶಾಲೆಗೆ ಚಲಿಸಿತು. ಈವರೆಗೂ ಕೊಡ್ಲೆಕೆರೆ ಮಾಚನಾಗಿದ್ದವನು ತಕ್ಷಣ ಮಾಚಾ ಕೊಡ್ಲೆಕೆರೆ ಆದ ಹೆಮ್ಮೆ.

ಐದು ಮತ್ತು ಆರನೇಯತ್ತೆಗೆ ಗುಲ್ವಾಡಿ ಮಾಸ್ತರರು. ಸಾಮಾನ್ಯವಾಗಿ ಒಂದು ಕೈಯಲ್ಲಿ ಛಡಿ ಇರಲೇಬೇಕು. ಹೊಡೆಯಲಿಕ್ಕಲ್ಲ, ಹೆದರಿಸಲು. ಒಮ್ಮೆ ಮಾತ್ರ ನಮ್ಮ ಮಾಸ್ತರರು ರುದ್ರಾವತಾರ ತಾಳಿದರು. ವಿದ್ಯಾರ್ಥಿಗಳಲ್ಲಿ ಒಬ್ಬ ಸಾಣಿಕಟ್ಟೆಯಲ್ಲಿ ಬಸ್ ಅಪಘಾತ ಆದ ಸುದ್ದಿ ಕೇಳಿ ಶಾಲೆ ಬಿಟ್ಟ ಕೂಡಲೇ ಹತ್ತೂವರೆಗೆ ಮನೆಗೆ ಹೋಗದೆ ಒಂದು, ಒಂದೂವರೆ ಮೈಲು ದೂರದ ಸಾಣಿಕಟ್ಟೆಗೆ ಬಿಸಿಲಲ್ಲಿ ಹೋದ. ಅವನು ತಿರುಗಿ ಮನೆಗೆ ಬಂದದ್ದು ತುಂಬಾ ತಡವಾಗಿ, ಒಂದೂವರೆಗೆ! ಅವನ ಮನೆ ಜನವೆಲ್ಲಾ ಗಾಬರಿ. ಸೀದಾ ಮಾಸ್ತರರ ಮನೆಗೆ ಬಂದು ‘ನಮ್ಮ ಹುಡುಗ ಇನ್ನೂ ಮನೆಗೆ ಬರಲಿಲ್ಲ’ ಎಂದರು. ಪಾಪ! ಗಾಬರಿಗೊಂಡ ಮಾಸ್ತರರು ತಕ್ಷಣ ಕೋಟು ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಹುಡುಗ ಮನೆ ಸೇರಿದ. ನಿಟ್ಟುಸಿರು ಬಿಟ್ಟು ಮಾಸ್ತರರು ಊಟಕ್ಕೆ ಕುಳಿತರು. ನಂತರ ಮಧ್ಯಾಹ್ನ ಎರಡೂವರೆಗೆ ಶಾಲೆ ಆರಂಭ. ಆ ಹುಡುಗನನ್ನು ಕರೆದು ಕಾಲು ನೀಡಿಸಿ, ಕೂಡ್ರಿಸಿ ಕಾಲಿಗೆ ಒಂದೇ ಸವನೆ ಪಟಪಟ ಎಂದು ಏನಿಲ್ಲವೆಂದರೂ ಹದಿನೈದಿಪ್ಪತ್ತು ಸಲ ಹೊಡೆದರು. ನಮಗೆಲ್ಲಾ ಅಳು ಬಂತು. “ನಮಗೆಲ್ಲಾ ಎಷ್ಟೊಂದು ಆತಂಕ ಮಾಡಿದೆ, ಇದೇ ಕಾಲಿನಿಂದಲ್ಲವೇ ನಡೆದುಕೊಂಡು ಹೋದದ್ದು” ಎಂದು ಬೈದರು. ಚಿತ್ರಿಗೆ ಮಾಸ್ತರರು ‘ಕುಂಟಿ’ ಎಂದವನಿಗೆ ತೋರಿಸಿದ ಶಿಕ್ಷೆಗೂ, ಇಂದು ಗುಲ್ವಾಡಿ ಮಾಸ್ತರರು ಕೊಟ್ಟ ಶಿಕ್ಷೆಗೂ ಅಜಗಜಾಂತರ. “ಕುಣಿಯೋಣು ಬಾರ” ಇದನ್ನು ನಮ್ಮ ಮಠದ ಭಟ್ಟರ ಮಗ ಹೊಸ ಶೈಲಿಯಲ್ಲಿ ಹಾಡುತ್ತಿದ್ದ. ನಮ್ಮ ಮಾಸ್ತರರಿಗೆ ಖುಷಿಯೋ ಖುಷಿ. ಎಲ್ಲಾ ಮಾಸ್ತರರ ಮುಂದೂ ಅವರ ಕ್ಲಾಸಿಗೆ ಕರೆದುಕೊಂಡು ಹೋಗಿ ಹಾಡಿಸುತ್ತಿದ್ದರು, ಖುಷಿ ಪಡುತ್ತಿದ್ದರು. ಹಾಗೇ ಶಿಷ್ಯರ ಕೆಟ್ಟ ನಡತೆಯನ್ನೂ ಕಠೋರವಾಗಿ ಶಿಕ್ಷಿಸಿ ಕಿಂಚಿತ್ ಒಳ್ಳೆಯದನ್ನು ಪರ್ವತ ಮಾಡಿ ನಮ್ಮ ಐದು, ಆರನೇಯತ್ತೆಯನ್ನು ನಿರ್ವಹಿಸಿ ನಮ್ಮನ್ನು ಅಂದಿನ ಮುಲ್ಕಿ ಕ್ಲಾಸಿಗೆ (ಏಳನೇಯತ್ತೆಗೆ) ಹರಸಿ ಕಳಿಸಿದರು.

ಆರನೇಯತ್ತೆಯಲ್ಲಿದ್ದಾಗ ನಮಗೆ ಹಿಂದಿ ಪ್ರಾರಂಭವಾಯಿತು. ಬಂಕಿಕೊಡ್ಲದ ವೆಂಕಟರಾಯ ಜನ್ನು ಮಾಸ್ತರರು ಹಿಂದಿ ಕಲಿಸುವವರು. ಅವರು ಹುಡುಗರೊಂದಿಗೆ ಹುಡುಗರಾಗಿ ಕಲಿಸುತ್ತಿದ್ದರು, ಕಲೆಯುತ್ತಿದ್ದರು. ನಮ್ಮಲ್ಲಿ ಕೆಲವರನ್ನು ಹಿಂದಿ ಪ್ರಥಮ ಪರೀಕ್ಷೆಗೆ ಕೂಡ್ರಿಸಿದರು. ನಾನು ಮತ್ತು ನನ್ನ ದೋಸ್ತ ಭೂಷಣ (ಡಾ. ಎಸ್. ವಿ. ಜಠಾರ, ಈಗ) – ಇಬ್ಬರ ಭಾಷಣ ಹಿಂದಿ ಮಾಸ್ತರರಿಗೆ ಅಚ್ಚು ಮೆಚ್ಚು. ಎರಡು-ಮೂರು ಮೈಲು ದೂರದ ಬಂಕಿಕೊಡ್ಲಿಗೆ, ಅವರ ಮನೆಗೆ ಆಗಾಗ ಹೋಗುತ್ತಿದ್ದೆವು. ಅವರ ಮನೆ ಪಾಗಾರದ ಹತ್ತಿರ ರಾಜನೆಲ್ಲಿಕಾಯಿ ಮರ ಇತ್ತು. ನಮಗಿಬ್ಬರಿಗೂ ಅಮೃತಪಾಯ ಶಿಕ್ಷಣ. ನಾನು, ಭೂಷಣ ಪರಮ ದೋಸ್ತರು. ಒಮ್ಮೆ ತೊರ್ಕೆ ಶಾಲೆಯಲ್ಲಿ ಸಮ್ಮೇಳನ. ನಾವಿಬ್ಬರೂ ಎರಡು ಮೈಲು ನಡೆದುಕೊಂಡು ಹೋಗಿ ಬಂದೆವು. ಈ ಸಮ್ಮೇಳನದಿಂದಾದ ಲಾಭವೆಂದರೆ ನಮ್ಮ ಸಮೀಪದ ನೆಂಟರಾದ ಶ್ರೀ ಸಿದ್ಧೇಶ್ವರರಲ್ಲಿ ಪೊಗದಸ್ತು ಊಟ. ಆ ಸಮ್ಮೇಳನ ಯಾವುದೆಂಬುದು ಮರೆತು ಹೋಗಿದೆ. ಅರ್ಥವಾಗಿದ್ದೂ ಬಹಳ ಕಡಿಮೆ. ಆದರೂ ಊಟ ಸಿಗದೇ ಅನರ್ಥವಾಗಲಿಲ್ಲ!

ಮುಲ್ಕಿ ಕ್ಲಾಸಿಗೆ ಅಂದರೆ ಏಳನೇಯತ್ತೆಗೆ ಹೆಡ್‌ಮಾಸ್ಟರ್ ಶಂಭು ಹೆಗಡೆಯವರು. ತುಂಬಾ ಒಳ್ಳೇ ಮಾಸ್ತರರು. ಸಹಶಿಕ್ಷಕರಿಗಾಗಲೀ ವಿದ್ಯಾರ್ಥಿಗಳಿಗಾಗಲೀ ದೊಡ್ಡ ಮಾತನಾಡುವವರಲ್ಲ. ಮಕ್ಕಳೆಂದರೆ ತುಂಬಾ ಪ್ರೀತಿ. ಏಳನೇಯತ್ತೆಗೆ ಹಿಂದಿನ ತರಗತಿಗಳಂತೆ ಅಲ್ಲ, ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆ ಮಾಸ್ತರರು. ಅವರಲ್ಲಿ ಹೊಂದಾಣಿಕೆ ಇರುವಂತೆ ಹೆಡ್‌ಮಾಸ್ಟರು ಚಾಣಾಕ್ಷತನದಿಂದ ನೋಡಿಕೊಳ್ಳುತ್ತಿದ್ದರು. ಇವರ ಕಾಲದಲ್ಲೇ ನಮ್ಮ ಶಾಲೆಗೆ ಮಾನ್ಯ ಸ.ಪ.ಗಾಂವಕರರು ಅತಿಥಿಗಳಾಗಿ ಬಂದಿದ್ದರು. ಅವರು ತಮ್ಮ ಕಂಚಿನ ಕಂಠದಿಂದ “ತಾಯೆ ಬಾರ, ಮೊಗವ ತೋರ” ಹಾಡಿದರು. ಇಡೀ ಶಾಲೆ ನಿಶ್ಶಬ್ದವಾಗಿ ಆಲಿಸಿತು ಎಂದರೆ ಏನೂ ಅಲ್ಲ. ಶಾಲೆಗೆ ತಾಗಿ ರಸ್ತೆ, ಅಲ್ಲಿ ಹೋಗುತ್ತಿದ್ದ ಪಟ್ಟಣಶೆಟ್ಟಿ, ಹಿತ್ತಲಕಾಯಿ ಪಾಂಡು, ಎಲೆ ಅಡಿಕೆ ಮುಕುಂದ ಎಲ್ಲರೂ ಬಂದು ಜಾಗ ಇದ್ದಲ್ಲಿ ಕುಳಿತು ಕೇಳಿ ಸಂತೋಷಪಟ್ಟರು. ಗುಲ್ವಾಡಿ ಮಾಸ್ತರು ಮಕ್ಕಳಿಂದ ‘ಕುಣಿಯೋಣು ಬಾರ’ ಹಾಡಿಸಲು ಮರೆಯಲಿಲ್ಲ.

ಬಂತು ಪರೀಕ್ಷೆ ಕಟ್ಟುವ ಕಾಲ. ಕೆಲವರಿಗೆ ಪಾಲಕರನ್ನ ಕರೆಸಿ ‘ನಿಮ್ಮ ಮಗನಿಗೆ ಬರುವ ವರ್ಷ ಕಟ್ಟಿಸಿದರಾಯಿತು’ ಎನ್ನುತ್ತಿದ್ದರು. ನಾನು ಒಂದು ಅಚಾತುರ್ಯ ಮಾಡಿದೆ ಎನಿಸುತ್ತದೆ. ಮನೆಗೆ ಬಂದು “ಅಬೆ, ಶಂಭು ಮಾಸ್ತರರು ನನಗೆ ಮುಂದಕ್ಕೆ ಕಟ್ಟಿಸುತ್ತಾರಂತೆ” ಎಂದೆ. ನಮ್ಮಮ್ಮ ಸಂಜೆ ಅವರ ಮನೆ ಕಡೆಗೆ ಹೋಗುವವಳು ಮಾಸ್ತರರಿಗೆ ಸಿಕ್ಕಿ “ನಮ್ಮ ಮಗನಿಗೆ ಹಾಗಾದರೆ ಮುಂದಕ್ಕೆ ಕಟ್ಟಿಸಿ” ಎಂದಳು. ಶಂಭು ಮಾಸ್ತರರು ಹೂಂ ಅಂದರು. ಅವರಿಗೂ ಕಡಿಮೆ ಜನ ಕಟ್ಟಿ ಹೆಚ್ಚು ಜನ ಪಾಸಾದರೆ ಒಳ್ಳೆಯದು. ಹೀಗೆ ನನ್ನ ಮುಲ್ಕಿ ಪರೀಕ್ಷೆ ಸದ್ಯಕ್ಕೆ ಬಂದಾಯಿತು. ಈಗ ಒಮ್ಮೆ ನಮ್ಮ ಹಳೆಯ ಕಾಲದ ಸಮಾಜದ ವಿವರ ನೀಡುತ್ತೇನೆ. ನನ್ನ ಬಾಲ್ಯಕಾಲದ ಚಿತ್ರಣದ ದೃಷ್ಟಿಯಿಂದ ಅದೂ ಮುಖ್ಯವಾದುದೇ.

ನಾನೀಗ ಹೇಳ ಹೊರಟಿರುವುದು ಆ ಕಾಲದ ವಿಧವೆಯರ ಕುರಿತಾಗಿ ಕೆಲವು ವಿಷಯಗಳನ್ನು. ತಾತಮ್ಮ ವಿಧವೆ. ಅವಳ ಅಕ್ಕನ ಮಗಳು ತಿಮ್ಮಕ್ಕ. ತಿಮ್ಮಕ್ಕಳ ಗಂಡ ಸತ್ತಾಗ ತಾತಮ್ಮ ವಿಧವೆಯರ ಪಾಡನ್ನು ಕುರಿತು ಹೇಳಿದ್ದಳು. ಅದನ್ನು ಅವಳ ಬಾಯಿಂದಲೇ ಕೇಳಬೇಕು.

“ಮುಂಡೆಗೆ ಮೂರು ಖಂಡಗ ಅಕ್ಕಿ, ಮೂರು ರೂಪಾಯಿ”. ಈ ‘ಮುಂಡೆ’ ಶಬ್ದ ಯಾಕೆ ಎಂದು ಕೇಳಿದಾಗ “ಹಿರಿಯರಿಗೆ ಇನ್ನೂ ಉತ್ತಮ ಶಬ್ದ ಹೊಳೆಯಲಿಲ್ಲ” ಎಂದಳು. ಅಯ್ಯೋ, ನೆನಪಿಸಿಕೊಂಡರೆ ಈಗಲು ಅಳು ಬರುತ್ತದೆ. ದಿನಾ ಒಂದು ಶಿದ್ದೆ ಅಕ್ಕಿ, ವರ್ಷಕ್ಕೆ ೩೬೦ ಶಿದ್ದೆ. ಮೂರು ಖಂಡಗ ಆಯಿತು. ಕ್ಷೌರಿಕನಿಗೆ ಕೊಡಲು, ಇನ್ನೇನಾದರೂ ದಕ್ಷಿಣೆ ಕೊಡಲು ಉಳಿದ ಹಣವಂತೆ. ಬಹುತೇಕ ಮನೆಯವರೆಲ್ಲಾ ಮನೆಯ ಕುಡಿಯನ್ನು ಬೆಳಗಲು ಬಂದ ಭಾಗ್ಯಮ್ಮನಿಗೆ ಕೊಡುತ್ತಿದ್ದ ‘ಭುಕ್ತಾಂಶ’. ಈಗಲೂ ನನಗೆ ಇದನ್ನು ನೆನಪಿಸಿಕೊಂಡು ಬರೆಯುವಾಗ ಕಣ್ಣು ಒದ್ದೆಯಾಗುತ್ತದೆ. ನಮ್ಮೆಲ್ಲರ ಒಕ್ಕೊರಲ ಬೇಡಿಕೆ “ದೇವರೇ, ಅಮ್ಮನಿಗೆ ಹೆಣ್ಣುಮಗಳು ಆಗದಿರಲಿ”. ದೇವರು ನೆರವೇರಿಸಿದ. ಆದರೆ ನಮ್ಮ ಊರಿನ ಭವಾನಿ, ಮಾದೇವಿ, ನಮ್ಮ ತಿಮ್ಮಕ್ಕ ಇವರ ಗತಿ? ತಾತಮ್ಮ ಹೇಳಿದ ಮಾತು ನೆನಪಿಸಿಕೊಂಡರೆ ಹೊಟ್ಟೆ ಕಿವುಚುತ್ತದೆ. “ಕೈಗಟ್ಟಿ ಇರುವವರೆಗೆ ಅವಲಕ್ಕಿ ಕುಟ್ಟುತ್ತಾಳೆ. ದೊಡ್ಡ ಮನೆಗಳಿಗೆ ಅಡಿಗೆ ಸಹಾಯಕ್ಕೆ ಹೋಗುತ್ತಾಳೆ”. ಅಯ್ಯೋ ಎನಿಸುತ್ತದೆ, ಇಂಥ ಎಷ್ಟೋ ತಿಮ್ಮಕ್ಕಂದಿರು ಮದುವೆ ಮನೆ, ಶ್ರಾದ್ಧದ ಮನೆಗೆ ಹೋಗಿ ಸಂಪಾದಿಸಿ ತಮ್ಮ ಮಕ್ಕಳಿಗೆ ಯೋಗ್ಯ ವಿದ್ಯಾಭ್ಯಾಸ ಕೊಡಿಸಿದವರುಂಟು. ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದವರುಂಟು. ಮುಂದೆ ಸರ್ಕಾರಗಳು ಅವರ ಸಹಾಯಕ್ಕೆ ಮುಂದಾದವು – ಕುರುಡುಗಣ್ಣಿಗೆ ಮೆಳ್ಳುಗಣ್ಣು. ಕೆಲವರಂತೂ ಬಾಲವಿಧವೆಯರು. ಒಬ್ಬಳು ಹತ್ತೋ, ಹನ್ನೊಂದನೇ ವರ್ಷದವಳು. ಸದ್ಯ ಸಮಾಜ ಅಷ್ಟರಮಟ್ಟಿಗೆ ಕುರುಡಾಗಲಿಲ್ಲ. ಅವಳನ್ನು ವಿರೂಪಗೊಳಿಸಲಿಲ್ಲ. ಕೆಲವರು ಓದು ಮುಂದುವರಿಸಿ ಶಿಕ್ಷಕಿಯರಾದರು. ನಮ್ಮಂಥವರಿಗೆ ಮಾರ್ಗದರ್ಶಕರಾದರು. ಇದೇ ರೀತಿ ಪರಿತ್ಯಕ್ತೆಯರ ಪಾಡು. ಮನೆಯ ಸೊಸೆಯನ್ನು ವಿನಾಕಾರಣ ಮನೆಯಿಂದ ಹೊರ ಹಾಕಿ ಮಗನಿಗೆ ಬೇರೆ ಮದುವೆ ಮಾಡಿಸುತ್ತಿದ್ದರು.

ಮೇಲೆ ಹೇಳಿದ ಪನ್ನಿತಾತಿ ಮತ್ತು ಕಾಮಾಚಿಕ್ಕಿ ನಮ್ಮಮ್ಮನ ಚಿಕ್ಕಿಯರು. ಪನ್ನಿತಾತಿಗೆ ನಮ್ಮ ಮನೆಯಲ್ಲೇ ವಾಸ. ಆದರೆ ನಮ್ಮೆಲ್ಲರ ಬಟ್ಟೆಗಳನ್ನೂ ತೊಳೆಯಲು ಕೋಟಿತೀರ್ಥಕ್ಕೆ ತೆಗೆದುಕೊಂಡು ಹೋಗಿ, ತೊಳೆದು, ಅಲ್ಲೇ ದಡದ ಮೇಲಿರುವ ಅವರ ಮನೆ ಪನ್ನಿಮನೆಯಲ್ಲಿ ಒಂದು ಕೋಲಿಗೆ ಹರಡಿ, ಒಣಗಿದ ಮೇಲೆ ಮಾರನೇ ಮಧ್ಯಾಹ್ನ ತರುತ್ತಿದ್ದಳು. ಮಧ್ಯಾಹ್ನದ ಊಟ ಅವಳ ಮನೆ ಪನ್ನಿ ಮನೆಯಲ್ಲೇ. ಪನ್ನಿತಾತಿ ಅರ್ಧಕುರುಡಿ, ಆದರೂ ಬಟ್ಟೆಗಳನ್ನು ಎಷ್ಟು ಸ್ವಚ್ಫವಾಗಿ ತೊಳೆಯುತ್ತಿದ್ದಳು! ಅದೂ ಆ ಕಾಲದಲ್ಲಿ ಸಾಬೂನಿನ ಬಳಕೆ ಇರಲಿಲ್ಲ! ಅವಳ ರಾತ್ರಿಯ ಫಳಾರ ಮಾತ್ರ ನಮ್ಮ ಮನೆಯಲ್ಲಿ. ಅರ್ಧ ಮುಷ್ಠಿ ಅವಲಕ್ಕಿ, ಹಾಲು ಹಾಕಿ ಮಾಡಿದ ಅವಲಕ್ಕಿ ಗಂಜಿ. ಅವಳು ತನ್ನ ಅರವತ್ತನೇ ವಯಸ್ಸಿಗೆ ಗಂಡ ಸದಾಶಿವ ಭಾವನನ್ನು ಕಳೆದುಕೊಂಡಳು. ಆ ಹತ್ತು, ಹನ್ನೆರಡು ದಿನ ಅವಳದು ಪನ್ನಿ ಮನೆಯಲ್ಲೇ ರಾತ್ರಿ ವಾಸ. ಆದರೆ ಬೆಳಗಾಗುತ್ತಿದ್ದಂತೇ ಎದ್ದು ನಮ್ಮ ಮನೆಗೆ ಬಂದು ಬೆಳಗಿನ ಶೌಚಕ್ರಿಯೆಗಳನ್ನು ಮುಗಿಸಿ ದೊಡ್ಡ ಬೆಳಗಾಗುತ್ತಿದ್ದಂತೆ ಪನ್ನಿ ಮನೆಗೆ ಮುಂದಿನ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಳು. ಒಂದು ಬೆಳಿಗ್ಗೆ ಶೌಚ ಮುಗಿಸಿ ಕೈಕಾಲು ತೊಳೆಯಲು ಬಾವಿಕಟ್ಟೆ ಹತ್ತಿರ ನೀರಿಗಾಗಿ ಕಾಯುತ್ತಿದ್ದಳು. ನನ್ನ ತಮ್ಮ ಮೂರ್ತಿ ತಾತಮ್ಮನನ್ನು ನೋಡಿದ. “ಅಬೇ, ಯಾರೋ ತಾತಮ್ಮನ ತಲೆಗೆ ಕಂಚಿಶಿಪ್ಪೆ ಟೋಪಿ ಹಾಕಿದ್ದಾರೆ” ಎಂದ. ನಮ್ಮ ಅಮ್ಮ ಅಳಲು ಶುರು ಮಾಡಿದಳು. ನಾವು “ಏ ಮಳ್ಳ, ಅದು ಕಂಚಿಶಿಪ್ಪೆ ಅಲ್ಲ. ಪನ್ನಿ ಭಾವ ಸತ್ತಿದ್ದರಿಂದ ತಲೆ ಕೂದಲು ತೆಗೆದಿದ್ದಾರೆ” ಎಂದೆವು. ಆಗ ಮೂರ್ತಿಯೂ ದೊಡ್ಡದಾಗಿ ಅಳತೊಡಗಿದ. “ನನಗೆ ತಾತಮ್ಮನನ್ನು ನೋಡಲು ಆಗುವುದಿಲ್ಲ. ಅವಳಿಗೆ ಕೂದಲು ಬೇಕು”. ಈಗ ತಾತಮ್ಮನೂ ಅತ್ತಳು. ನಾವೆಲ್ಲ ತೀರ ಚಿಕ್ಕವರು. ತಾತಮ್ಮನ ಮಗ್ಗುಲಲ್ಲಿ ಮಲಗುತ್ತಿದ್ದೆವು. ನಿದ್ದಗಣ್ಣಿನಲ್ಲಿ ತಾತಮ್ಮನ ಕೂದಲೇ ನಮಗೆ ಆಸರೆ. ನಿಜವೆಂದರೆ ಕೊನೆಗೆ ಕ್ಷೌರಿಕನಿಗೆ ಉಳಿದ ಕೂದಲು ಬಹಳ ಕಡಿಮೆ.

ಕೂದಲು ಅಂದ ಕೂಡಲೇ ನೆನಪಾಗುತ್ತಿದೆ: ನಾನು ಮೂರ್ತಿಯಷ್ಟೆ ದೊಡ್ಡವನಿರುವಾಗ ನನಗೊಂದು ಯೋಚನೆ. ಎಲ್ಲ ಹೆಂಗಸರಿಗೂ ಕೂದಲು ಉಂಟು. ಆದರೆ ಆಚೆಮನೆ ಗಂಗತ್ತೆ, ಈಚೆಮನೆ ಪಾತತ್ತೆಗೆ ಕೂದಲೇ ಇಲ್ಲ. ಇವರಿಗೆ ಹುಟ್ಟುತ್ತಲೇ ಕೂದಲಿಲ್ಲವೇ – ಈ ಪ್ರಶ್ನೆ ನನ್ನೊಳಗೇ ಐದಾರು ತಿಂಗಳು ಕೇಳಿಕೊಳ್ಳುತ್ತಿದ್ದೆ. ಕೊನೆಗೊಮ್ಮೆ ಧೈರ್ಯಮಾಡಿ ತಾತಮ್ಮನಿಗೆ ಈ ಪ್ರಶ್ನೆ ಕೇಳಿದೆ. ತಾತಮ್ಮನಿಗೆ ಉತ್ತರ ಗೊತ್ತು, ಹೇಳಲಾರಳು. ನಾನು ಬಿಡಲಾರೆ. ಮುಂದೆ ಕಾರಣ ತಿಳಿದಾಗ ನನಗೆ ಆದ ಆಘಾತ ಬಹಳ.

ಕೇರಳದ ಒಂದು ದಂಪತಿಯನ್ನು ನನ್ನ ಐದಾರನೇ ವರ್ಷದಿಂದ ನೋಡುತ್ತಿದ್ದೆ. ಕೇರಳದವರೆಂದು ಯಾರೂ ಗುರುತಿಸಬಹುದು. ಶಂಕರಕುಟ್ಟಿ (ಮಲೆಯಾಳಿ ಅಜ್ಜ). ಮೊಣಕಾಲಿನವರೆಗೆ ಶುಭ್ರ ಮುಂಡು. ಒಳಗೆ ಶುಭ್ರ ಲಂಗೋಟಿ, ಹೊದೆಯಲು ತೀರ ದೊಡ್ಡದಲ್ಲದ ಒಂದು ಬಿಳಿಯ ಪಂಜಿ. ದಿನವೂ ಬೆಳಿಗ್ಗೆ ಹೂ ಕೊಯ್ದು ಈಶ್ವರ ದೇವಸ್ಥಾನಕ್ಕೆ ಕೊಟ್ಟು ಬರುವುದು. ಅಮ್ಮ ಎಂದು ನಾವು ಕರೆಯುತ್ತಿದ್ದ ಅವನ ಹೆಂಡತಿಯ ಹೆಸರು ಪಾರ್ವತಿ. ಗಂಡನಿಗೆ ತಕ್ಕ ಸಾತ್ವಿಕ ಹೆಣ್ಣು. ಕಿವಿಗಳಲ್ಲಿ ದೊಡ್ಡ ತೂತು – ಮೀಡಿಯಂ ಚಕ್ಕುಲಿ ಆಕಾರದ್ದು! ಈ ಸಾತ್ವಿಕ ದಂಪತಿಗಳು ಇಲ್ಲೇ ಇರಬೇಕೆಂದು ಯಾರೋ ಪುಣ್ಯಾತ್ಮರು ದಿನವೂ ಒಂದು ಶಿದ್ದೆ ಅಕ್ಕಿ ಕೊಡುತ್ತಿದ್ದರು. ಅದನ್ನು ಶಿವಾರ್ಪಣೆ ಮಾಡಿ ಬಲಿ ಆದ ನಂತರ ಅನ್ನದ ಚರಿಗೆಯನ್ನು ತಾವಿದ್ದ ಹೊನ್ನಳ್ಳಿ ಮಠಕ್ಕೆ ತಂದು ಉಣ್ಣುತ್ತಿದ್ದರು. ಸುತ್ತು ಮುತ್ತಲಿನ ಮನೆಯವರು ಯಾರಾದರೂ ಪದಾರ್ಥ ಕೊಡುತ್ತಿದ್ದರು. ಪ್ರತಿ ಸೋಮವಾರ ವೇ.ಮೂ. ತಮ್ಮಣ್ಣ ಉಪಾಧ್ಯರು ಈಶ್ವರ ದೇವಾಲಯದ ಪುರಾಣ ಚೌಕಿಯಲ್ಲಿ ಪುರಾಣ ಓದುತ್ತಿದ್ದರು. ಶ್ರೋತೃಗಳು: ಪರಸ್ಥಳದ ಭಕ್ತರಲ್ಲಿ ಕೆಲವರು, ಊರಿನವರು ಐದಾರು ಜನ. ಶಂಕರ ಕುಟ್ಟಿ ಮಾತ್ರ ಖಾಯಂ ಶ್ರೋತೃ. ಒಮ್ಮೆ ಪುರಾಣ ಓದುತ್ತಿರುವಾಗ ಶಂಕರಕುಟ್ಟಿ, ಪುರಾಣಿಕರ ಸನಿಹ ಕುಳಿತವನು ಬಾಗಿಲ ಕಡೆ ಸರಿಯುತ್ತಾ ಹೋದನು – ಬಂದವರಿಗೆ ಜಾಗ ಮಾಡಿಕೊಡಲು. ಕೊನೆಗೊಮ್ಮೆ ದೀಕ್ಷಿತರ ಲಕ್ಷ್ಯ ಕುಟ್ಟಿ ಕಡೆ ಹೋಯಿತು. ಇನ್ನೇನು, ಪೌಳಿ ಕೆಳಗೆ ಬೀಳುತ್ತಾನೆ- ಆಗ ‘ಶಂಕರಾ’ ಎಂದು ಕೂಗಿದರು. ಕುಟ್ಟಿ ಸಾವರಿಸಿಕೊಂಡು ವಿಷಯ ವಿವರಿಸಿದನು. ಪುರಾಣ ಶುರುವಾದ ಕೂಡಲೆ ಬಹಳ ಜನ ಕೇಳಲು ಬರುತ್ತಾ ಇದ್ದರಂತೆ. ಅವರಿಗೆ ಅನುವು ಮಾಡಿಕೊಡಲು ಕುಟ್ಟಿ ಸರಿಯುತ್ತಾ ಹೋದನಂತೆ. “ಯಾರು ಆ ಜನ? ಈಗ ಎಲ್ಲಿ?” ಎಂದರೆ ಶಂಕರಕುಟ್ಟಿ ಕೈ ಮುಗಿದ. “ಅವರು ಅಪರಿಚಿತರು. ಶಂಕರನ ಊರಿನವರು. ತಮ್ಮಣ್ಣ ದೀಕ್ಷಿತರ ಪುರಾಣ ಕೇಳಲು ಸಿದ್ಧಿಕ್ಷೇತ್ರಕ್ಕೆ ಬಂದವರು” ಎಂದನಂತೆ. ತಮ್ಮಣ್ಣ ಉಪಾಧ್ಯರ ಶಿವಪುರಾಣ ಕೇಳಲು ಕೈಲಾಸದಿಂದಲೂ ಜನ ಬರುತ್ತಿದ್ದರು – ಇದು ಕುಟ್ಟಿಯ ಬಲವಾದ ನಂಬಿಕೆ.

ಪಾರ್ವತಿ ಒಂದು ದಿನ ದೇವಸ್ಥಾನಕ್ಕೆ ಹೋಗುವಾಗ ಒಬ್ಬ ತುಂಟ “ಪಾರ್ವತಿ ಎಮ್ಮೆ, ಅಕ್ಕಚ್ಚು ಕುಡಿಯುವ ಎಮ್ಮೆ” ಎಂದನಂತೆ. ಅವನನ್ನು ಬೆನ್ನಟ್ಟಿ ಹೋಗಿ ಕೊಟ್ಟಿಗೆಯಲ್ಲಿ ಅವಿತಿರಿರುವ ಅವನ ಕಿವಿ ಹಿಡಿದು “ನಾನು ಎಮ್ಮೆ, ನೀನು ಎಮ್ಮೆ ತಮ್ಮ. ಕಲ್ಗಚ್ಚು ಕುಡಿಯಲು ಇಲ್ಲಿಗೆ ಬಂದೆ” ಎಂದು ತನ್ನ ಅರ್ಧ ಮಲೆಯಾಳಿ ಕನ್ನಡದಲ್ಲಿ ಬೈದಳಂತೆ.

ಪ್ರಭಾತ ಫೇರಿ

೧೯೪೨-೪೩ರಲ್ಲಿ ಮತ್ತು ನಂತರ – ದಿನವೂ ಬೆಳಿಗ್ಗೆ ಮಕ್ಕಳ, ಹೆಂಗಸರ ಪ್ರಭಾತ ಫೇರಿ ನಡೆಯುತ್ತಿತ್ತು. “ಗಾಂಧಿ ಮಹಾರಾಜಕೀ ಜೈ”, “ಭಾರತಕ್ಕೆ ಸ್ವಾತಂತ್ರ್ಯ ಕೊಡಿ”, “ತಿರುವುತ್ತ ರಾಟಿಯನ್ನು, ತರುವ ಸ್ವರಾಜ್ಯವನ್ನು” ಇವು ಸ್ಲೋಗನ್. ನಾನು ಏಳನೇಯತ್ತೆ ಇರಬೇಕು, ಈ ಪ್ರಭಾತಫೇರಿಯಲ್ಲಿದ್ದೆ. ಪೋಲೀಸರು ಬಂದು ನಮ್ಮನ್ನೆಲ್ಲಾ ಅರೆಸ್ಟ್ ಮಾಡಿ ಲಾಕಪ್ಪಿಗೆ ಹಾಕಿದರು. ಮಕ್ಕಳು ಗಂಜಿ ಊಟವನ್ನೂ ಮಾಡಿಲ್ಲ ಎಂದು ತಾಯಂದಿರು ಅಳುತ್ತಾ ಬಂದರೂ, ಯಾರನ್ನೂ ಬಿಡಲಿಲ್ಲ. ಊರಿನವರೇ ಎಲ್ಲಾ ಒಟ್ಟಿನಲ್ಲಿ ಅವಲಕ್ಕಿ ಚಹಾ ಹೊಟೆಲ್‌ನಿಂದ ತರಿಸಿಕೊಟ್ಟರು, ನಾನೂ ಕುಡಿದೆ. ಆದರೆ ತಕ್ಷಣ ವಾಂತಿ ಆಗಿ ಕಣ್ಣು ಬಿಡುವ ಪರಿಸ್ಥಿತಿ. ಬೇರೇನೂ ಆಗಲಿಲ್ಲ. ಪಂಚನಾಮೆ ಪ್ರಾರಂಭ. ನನ್ನ ಹತ್ತಿರ ‘ಮಾಣೀ, ನಿನಗೆ ವಯಸ್ಸು’ ಎಂದಾಗ ‘ಹದಿನೆಂಟು’ ಎಂದೆ. ‘ಮೀಸೆ ಇಲ್ಲ, ಗಡ್ಡ ಇಲ್ಲ, ಹದಿನೆಂಟಂತೆ’ ಎಂದು ಬೆನ್ನ ಮೇಲೆ ಮೆಲ್ಲಗೆ ಹೊಡೆದು ‘ಮನೆಗೆ ನಡೆ’ ಎಂದರು. ಹಾಗೆ ಮೂವತ್ತು ನಲವತ್ತು ಜನರನ್ನು ತಿರುಗಿ ಕಳಿಸಿದರು. ಹದಿನೆಂಟು ವರ್ಷವಾದರೆ ಜೈಲಿಗೆ ಕಳಿಸುತ್ತಾರೆ ಎಂದು ನಾವೆಲ್ಲ ‘ಹದಿನೆಂಟು’ ಎಂದಿದ್ದು. ಅವರು ಕೇಳುತ್ತಾರೆಯೇ!”ನಡೆಯಿರಿ ಮಧ್ಯಾಹ್ನ ಶಾಲೆಗೆ” ಎಂದು ಕಳಿಸಿಬಿಟ್ಟರು. ನಮ್ಮಲ್ಲಿ ಒಬ್ಬ ಪೋಲೀಸ್ ಪೇದೆಯ ಮಗನೂ ಇದ್ದನು.

ಮತ್ತೆ ಈಗ ನನ್ನ ವಿದ್ಯಾಭ್ಯಾಸದ ವಿಷಯಕ್ಕೆ ಹಿಂತಿರುಗುತ್ತೇನೆ. ಅದು ೧೯೪೪ರ ಪ್ರಾರಂಭ. ನಮ್ಮದು ವೈದಿಕರ ಮನೆ. ಅಪರೂಪಕ್ಕೆ, ತುಂಬಾ ಪರಿಚಿತರಿದ್ದರೆ ಅಂಥವರು ನಮ್ಮ ಮನೆಗೆ ಬಂದು ಉಳಿದುಕೊಳ್ಳುವುದಿತ್ತು. ಶ್ರೀ ಕ್ಷೇತ್ರದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ ಹೋಗುವುದು ಅಂಥವರ ಉದ್ದೇಶ ಹೀಗೆ ಪರಿಷೆಯಾಗಿ ಬಂದವರು ಶಿವಮೊಗ್ಗಾದ ಬಾಲೋಜಿರಾಯರು ಮತ್ತು ಅವರ ಕುಟುಂಬ. ಅವರ ಸಮೀಪದ ಬಂಧು ವೆಂಕೋಬರಾಯರಿಗೆ ಸಂತಾನವಿಲ್ಲ. ಹೀಗಾಗಿ ನಾಗ ಪ್ರತಿಷ್ಠೆ, ಶ್ರೀ ದೇವರಲ್ಲಿ ವಿಶೇಷ ಪೂಜೆ ಇವನ್ನೆಲ್ಲಾ ನಾಲ್ಕೈದು ದಿನಗಳಲ್ಲಿ ನೆರವೇರಿಸಿದರು. ಹೋಗುವಾಗ ಅವರ ದೃಷ್ಟಿ ನನ್ನ ಮೇಲೆ ಬಿತ್ತು. “ಇವ ಇಲ್ಲಿ ಪರೀಕ್ಷೆ ಕಟ್ಟಲಿಲ್ಲ, ಏನು ಮಾಡ್ತಾನೆ, ಇವನನ್ನು ನಾನು ಶಿವಮೊಗ್ಗಾಕ್ಕೆ ಒಯ್ದು ತೀರ್ಥಹಳ್ಳಿಗೆ ಅನಂತಭಟ್ಟರಲ್ಲಿ ಕಳುಹಿಸುತ್ತೇನೆ. ಅಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದಲ್ಲಾ” ಎಂದರು. ಸೂಚನೆ ಯೋಗ್ಯವಾಗಿದೆ ಎನಿಸಿತು. ನನ್ನನ್ನು ಅದೇ ಫಾಲ್ಗುಣ ಮಾಸದಲ್ಲಿ ಶಿವಮೊಗ್ಗಾಕ್ಕೆ ಶ್ರೀ ಬಾಲೋಜಿರಾಯರ ಜೊತೆ ಕಳಿಸಿದರು. ಆಗ ಅವರ ಮಗ ರಾಮು, ಈಗ ಎಚ್. ಬಿ. ರಾಮರಾವ್, ಅವರ ಜೊತೆ ಶಿವಮೊಗ್ಗಾಕ್ಕೆ ಹೋದೆ. ಮುಂದೆ ಇಪ್ಪತ್ತು ವರ್ಷಗಳ ನಂತರ ಇದೇ ಎಚ್.ಬಿ.ರಾಮರಾವ್ ನಮ್ಮ ಭದ್ರಕಾಳಿ ಹೈಸ್ಕೂಲಿನ ಹೆಡ್‌ಮಾಸ್ಟರ್ ಆಗಿ ನೇಮಕವಾದರು. ಕಾಲಾಯ ತಸ್ಮೈ ನಮಃ. ನನ್ನನ್ನು ಸ್ವಲ್ಪ ಕಾಲ ಅಲ್ಲಿರಿಸಿಕೊಂಡು ಬಾಲೋಜಿರಾಯರು ನನ್ನ ಭವಿಷ್ಯತ್ತಿನ ವಿದ್ಯಾರ್ಜನೆಯ ಪ್ರೇರಕ,ಪೂರಕ ಸ್ಥಳ ಶ್ರೀ ರಾಮಚಂದ್ರಾಪುಮಠದ ತೀರ್ಥಹಳ್ಳಿಯ ಮಠಕ್ಕೆ ಕಳಿಸಿದರು. ನನ್ನ ವ ನಮ್ಮ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತ ಶ್ರೀ ಹಂದೆ ಶಾನುಭೋಗರು ನನ್ನನ್ನು ಮಠದ ಒಳಗೆ ಕರೆದುಕೊಂಡು ಹೋಗಿ ನನಗೆ ಒಂದು ಕೋಣೆಯನ್ನು ವಾಸಕ್ಕಾಗಿ ಏರ್ಪಾಡು ಮಾಡಿದರು. ಇಷ್ಟಕ್ಕೂ ನಮ್ಮ ತಂದೆ ಶ್ರೀ ಅನಂತ ಭಟ್ಟರು ಹೊಸನಗರ ಮಠದಲ್ಲಿ ಕಾರ್ಯನಿಮಿತ್ತ ಎಂದು ಹತ್ತು ದಿನ ಇರಲು ಹೋಗಿದ್ದರು. ಇದು ಆ ವರ್ಷದ ಚೈತ್ರಮಾಸ. ನನ್ನನ್ನು ಶ್ರೀರಾಮನವಮಿಗೆ ತಂದೆಯವರು ಹೊಸನಗರದಿಂದ ಬಂದು ಕರೆದುಕೊಂಡು ಹೋದರು. ಕಾರಿನಲ್ಲಿ, ಕೆಲವು ಬೆಲೆಬಾಳುವ ವಸ್ತುಗಳನ್ನು ಒಯ್ಯುವುದಿತ್ತು. ಅಂತೂ ನನ್ನ ಪರಸ್ಥಳದ ವಾಸ ಶಿವಮೊಗ್ಗೆ, ತೀರ್ಥಹಳ್ಳಿ, ಹೊಸನಗರಗಳಲ್ಲಿ ಪ್ರಾರಂಭವಾಯಿತು.

ಇದೇ ವರ್ಷ ಮೇದಲ್ಲಿ ತಂದೆಯವರು ಗೋಕರ್ಣಕ್ಕೆ ಹೋದಾಗ- ಪನ್ನಿತಾತಿ, ಕಾಮಾಚಿಕ್ಕಿ ಮೊದಲೇ ನಿರ್ಣಯಿಸಿರಬೇಕು – “ಅನಂತ, ಮಕ್ಕಳೆಲ್ಲಾ ದೊಡ್ಡಾದೊ, ಕೊನ್ನುಗುಲಿಗೆ ಹೆದರುವುದಿಲ್ಲ. ಶಿವರಾಮ, ಗಜು ಇಬ್ಬರೂ ಮುಲ್ಕಿ ನಪಾಸು. ಶಾಲೆಗೆ ಹೋಗ್ತ್ವೋ, ಇಲ್ಲ್ಯೊ. ಎಲ್ಲಾ ಹೇಳ್ತೊ – ಗಜು ಕಾಂಗ್ರೆಸ್ಸಿನಲ್ಲಿ ಅಡಗಿರುವವರಿಗೆ ಸಹಾಯ ಮಾಡ್ತ. ದೇಶಸೇವೆ. ನಮ್ಮ ಲೆಕ್ಕದಲ್ಲಿ ದೇಶಸೇವೆ ಗೋಪಿಭಟ್ಟರಿಗೆ, ಶಿರೂರು ಮುಕುಂದ ಪ್ರಭು, ಇಂಥವರಿಗೆ. ಮನೆಯಲ್ಲಿ ಬೇಕಾದ ಹಾಗೆ ಇದ್ದು. ಇದೆಲ್ಲ ಓದಿ ಮುಗಿಸಿದ ನಂತರ ಅಲ್ಲವೇ?”.ಮುದುಕಿಯರ ಮಾತು ತಂದೆಯವರಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಿತು. ಮಕ್ಕಳ ವಿದ್ಯಾಭ್ಯಾಸ ಮುಖ್ಯ. ತಕ್ಷಣ ಎರಡು ಕೆಲಸ ಮಾಡಿದರು: ಗೋಕರ್ಣ ಮನೆ ನೋಡಿಕೊಂಡಿರಲು ಯೋಗ್ಯ ಜನ. ನಾವು ತೀರ್ಥಹಳ್ಳಿಯಲ್ಲಿರಲು ಶ್ರೀ ಮಠದ ಗುರುಗಳು ಶ್ರೀ ರಾಮಚಂದ್ರ ಭಾರತಿಗಳ ಒಪ್ಪಿಗೆ. ಶ್ರೀಗಳವರು “ಅನಂತ, ಈ ಮೊದಲೇ ನೀನು ಈ ಕೆಲಸ ಮಾಡಬೇಕಿತ್ತು. ಇರಲಿ, ನಮ್ಮ ಅಪ್ಪಣೆ ಉಂಟು, ಯೋಗ್ಯ ಕಾಲ ನಿಶ್ಚಯಿಸಿ ಮಠಕ್ಕೆ ಸಂಸಾರ ಸಮೇತ ಬಾ” ಎಂದರು. ಸರಿ, ಅದೇ ಮಳೆಗಾಲದಲ್ಲಿ ಅಂಕೋಲೆ ಮೇಲೆ ಹುಬ್ಬಳ್ಳಿಗೆ ಹೋದರು. ಅಲ್ಲಿ ನಮ್ಮ ಚಿಕ್ಕಮ್ಮ ಶ್ರೀಮತಿ ಗೌರಮ್ಮ ಪಂಡಿತ ಇದ್ದರು. ಶ್ರೀ ಸ.ಪ. ಗಾಂವಕರ ಸಾಹೇಬರ ಸಹಕಾರದಿಂದ ಶಿಕ್ಷಕಿಯಾಗಿ ಆಗಷ್ಟೇ ಕೆಲಸ ಪ್ರಾರಂಭಿಸಿದ್ದರು. ಅಲ್ಲಿ ಕಾಮಾಚಿಕ್ಕಿ, ಪನ್ನಿತಾತಿ ಮತ್ತು ಗಜಣ್ಣ ಇವರನ್ನು ಬಿಟ್ಟು ತೀರ್ಥಹಳ್ಳಿಗೆ ಬಂದು ತಳ ಊರಿದರು.

ರಾಮಚಂದ್ರಾಪುರ ಗ್ರಾಮ ಹೊಸನಗರ ತಾಲೂಕಿನಲ್ಲಿದೆ. ಹೊಸನಗರದಿಂದ ಕೇವಲ ಮೂರು ಮೈಲಿ.ಆದರೆ ಮಳೆಗಾಲದಲ್ಲಿ ಹತ್ತು ಹನ್ನೆರಡು ಮೈಲಿ. ಸುತ್ತದ ಮೂಲಕ ಸುತ್ತಿಕೊಂಡು ಹೋಗಬೇಕು. ಚೈತ್ರ ಬಹುಳ ನವಮಿ ರಾಮನವಮಿ. ಅಂದು ಅಲ್ಲಿ ರಥೋತ್ಸವ. ಶ್ರೀಮಠದ ದೇವರು ರಾಮ, ಲಕ್ಷ್ಮಣ, ಸೀತಾ. ಸಹಸ್ರಾರು ಜನರು ಬರುತ್ತಾರೆ. ನೂರಾರು ಅಂಗಡಿಗಳು ಬರುತ್ತವೆ. ಬೆಳಿಗ್ಗೆ ರಥೋತ್ಸವ.ಆ ವರ್ಷ ವಿಶೇಷವಾಗಿ ಮಾರನೇ ದಶಮಿಯಂದು ಶ್ರೀ ಶ್ರೀಗಳಳವರಿಗೆ ಕಿರೀಟ ಧಾರಣೋತ್ಸವ. ಅಡ್ಡಪಲ್ಲಕ್ಕಿ ಉತ್ಸವ ನೋಡಲು ಬಲು ಚೆನ್ನಾಗಿರುತ್ತದೆ. ಚಿನ್ನದ ಕಿರೀಟದಲ್ಲಿರುವ ಮುತ್ತು,ರತ್ನಗಳು ಗ್ಯಾಸ್‌ಲೈಟಿನ ಬೆಳಕಿಗೆ ಕಣ್ಣು ಕೋರೈಸುತ್ತವೆ. ಇಂಥ ಕಿರೀಟೋತ್ಸವವನ್ನು ಮೊದಲು ನೋಡಿದ ಹಿಗ್ಗು,ಏಜೆಂಟ್ ಅನಂತ ಭಟ್ಟರ ಮಗನಾಗಿ ಜನ ನನ್ನನ್ನು ಗುರುತಿಸಿದ ರೀತಿ, ನಮ್ಮಲ್ಲೆಲ್ಲ ನಾನೇ ಮೊದಲಿಗನಾಗಿ ಸವಿಯುತ್ತಿರುವುದು ಇವೆಲ್ಲ ಮುಪ್ಪುರಿಗೊಂಡು ನಾನೊಬ್ಬ ನಾನೇ ಆದೆ.

ಮಾರನೇ ದಿನವೇ ನಾನು, ನಾರಾಯಣಭಟ್ಟರು ತೀರ್ಥಹಳ್ಳಿಗೆ ಹೊರಟೆವು. ನಲವತ್ತು ಮೈಲಿ ದೂರದ ತೀರ್ಥಹಳ್ಳಿಗೆ ಒಳರಸ್ತೆಯಲ್ಲಿ ಹದಿನೆಂಟು ಮೈಲಿ ನಡೆದುಕೊಂಡೇ ಹೋದೆವು.ಯಾಕೆಂದರೆ ನಾರಾಯಣಭಟ್ಟರ ಅವಶ್ಯಕತೆ ತೀರ್ಥಹಳ್ಳಿಯಲ್ಲಿತ್ತು. ಬಸ್ಸಿನಲ್ಲಾದರೆ ಎರಡು ದಿನ ಬೇಕು. ರಾಮಚಂದ್ರಾಪುರ, ಸರಯೂ, ಆರಗ, ತೀರ್ಥಹಳ್ಳಿ. ಇಷ್ಟರಲ್ಲೇ ತೀಯವರು ಬಂದು ತಾನು ಗೋಕರ್ಣಕ್ಕೆ ಹೋಗಿ ಎಲ್ಲರನ್ನೂ ಇಲ್ಲಿಗೇ ಕರೆ ತರುವುದಾಗಿ ಹೇಳಿದರು. ನನಗಂತೂ ಆದ ಸಂತೋಷ ಅಷ್ಟಿಷ್ಟಲ್ಲ.

ವೈಶಾಖ ಶುದ್ಧ ಹುಣ್ಣಿಮೆಗೆ ನೃಸಿಂಹ ಜಯಂತಿ ಆಚರಣೆ. ಎರಡು ದಿನ ಮೊದಲು, ಎರಡು ದಿನ ಬಳಿಕ ಹೊಳೆ ಆಚೆ ಕುರುವಳ್ಳಿಯಲ್ಲಿ ಶ್ರೀಮಠದ ಗಂಗಾ ವಿಶ್ವೇಶ್ವರ ದೇವರಲ್ಲಿ ಉತ್ಸವ. ನಾಲ್ಕೂ ದಿನಗಳು ವಿಜೃಂಭಣೆಯ ಆಚರಣೆ. ಊರ ಹೆಸರು ತೀರ್ಥರಾಜಪುರ. ತೀರ್ಥಹಳ್ಳಿ ಇತ್ತಲಾಗಿನ ಹೆಸರು. ನಮ್ಮ ಮಠದ ಹಿಂಭಾಗದ ಹಿತ್ತಲಿಗೆ ತಾಗಿಯೇ ತುಂಗಾನದಿ ಹರಿಯುತ್ತದೆ. ಈಗ ನಾನು ಹೇಳಿದ ತೀರ್ಥರಾಜಪುರ ಮಠ,- ಅಲ್ಲಿಯ ಸ್ವಾಮಿಗಳಿಗೆ “ತುಂಗಾನದಿಯಲ್ಲಿ ನಾನು ಇದ್ದೇನೆ, ನೀವು ತಂದು ಉಪಾಸನೆ ಮಾಡಿ” ಎಂದು ಸ್ವಪ್ನವಾಯಿತಂತೆ- ಮಠದ ಹಿಂದುಗಡೆ ತುಂಗಾನದಿಯಲ್ಲಿ ಹುಡುಕಲು ಒಂದು ಲಕ್ಷ್ಮೀನರಸಿಂಹ ಚಕ್ರ ದೊರಕಿತು. ಲೋಹದಲ್ಲಿ ಮಧ್ಯದಲ್ಲಿ ದೊಡ್ಡದಾದ ಲಕ್ಚ್ಮೀನರಸಿಂಹ, ಅದರ ಸುತ್ತ ಒಂದು ಸುತ್ತಿನಲ್ಲಿ ಏಳೆಂಟು ಲಕ್ಷ್ಮೀನರಸಿಂಹ, ವೃತ್ತದ ಇನ್ನೊಂದು ಸುತ್ತಿನಲ್ಲಿ ಹದಿನೈದು ಹದಿನಾರು ವಿಗ್ರಹ – ಹೀಗೆ ಕೆತ್ತಲ್ಪಟ್ಟಿದೆ. ಇದಕ್ಕೆ ಲಕ್ಷ್ಮೀ ನರಸಿಂಹ ಚಕ್ರ ಎಂದು ನಾಮಧೇಯ ಮಾಡಿ ನದಿಕಡೆ ಮುಖ ಮಾಡಿ ದೇವಾಲಯ ಕಟ್ಟಿಸಿದರು. ಅಂದಿನಿಂದ ಮಠಕ್ಕೆ ತಾಗಿರುವ ತುಂಗಾನದಿಯ ಭಾಗ ಚಕ್ರತೀರ್ಥವಾಯಿತು. ದಿನವೂ ಚಕ್ರತೀರ್ಥದಿಂದ ಶುಭ್ರ ಬಟ್ಟೆ ಧರಿಸಿ ಒಂದು ಕೊಡ ನೀರು ತಂದು ಮಠದಲ್ಲಿ ಶ್ರೀದೇವರಿಗೆ ಅಭಿಷೇಕ ಮಾಡಬೇಕು. ಅದು ಇಂದಿಗೂ ನಡೆದು ಬಂದಿದೆ. ಮಲೇರಿಯಾದ ಒಂದು ವಿಧವಾದ ರೋಗ ಚತುರ್ಥಿಜ್ವರ – ನಾಲ್ಕು ದಿನಕ್ಕೊಮ್ಮೆ ತಪ್ಪದೇ ಬರುವ ಜ್ವರ- ಇದಕ್ಕೆ ಚಕ್ರಪೂಜೆ ಮಾಡಿದಾಗ ಬಂದ ತೀರ್ಥದಿಂದ ರೋಗಿಗೆ ಸ್ನಾನ ಮಾಡಿಸುತ್ತಾರೆ. ಇದರಿಂದ ರೋಗ ನಿವಾರಣೆ ಎಂಬ ಭರವಸೆ ಉಂಟು.

ತುಂಗಾನದಿಯಲ್ಲಿ ಸ್ನಾನ ಮಾಡಿ ಬಂದರೆ ಮೊದಲು ಸಿಗುವುದು ಶ್ರೀರಾಮೇಶ್ವರ ದೇವಾಲಯ. ಊರಿನ ಮುಖ್ಯ ದೇವಾಲಯದ ಸುತ್ತಮುತ್ತ ಕೆಲವು ಪಾಳು ಬಿದ್ದ ಸಣ್ಣ ದೇವಾಲಯಗಳಿವೆ. ದೇವಾಲಯದಿಂದ ಹೊರಬಂದರೆ ಮೊದಲು ರಥಬೀದಿಯಲ್ಲಿ ಸಿಗುವ ದೊಡ್ಡದೇವಾಲಯವೇ ಶ್ರೀ ಲಕ್ಷ್ಮೀ ನರಸಿಂಹ ದೇವರುಳ್ಳ ಶ್ರೀರಾಮಚಂದ್ರಾಪುರ ಮಠ. ಮೊದಲು ತೀರ್ಥರಾಜಪುರ ಮಠ.

ತೀರ್ಥರಾಜ: ತುಂಗಾನದಿ ಪುರಾಣ ಪ್ರಸಿದ್ಧ ಪವಿತ್ರ ನದಿ.ಪರಶುರಾಮನು ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಫೇದನ ಮಾಡಿದ ನಂತರ ಕೊಡಲಿಗೆ ತಾಕಿದ ರಕ್ತ ತೊಳೆದರೆ ಹೋಗಲಿಲ್ಲ. ಎಲ್ಲ ಪವಿತ್ರನದಿಗಳಲ್ಲೂ ಸ್ನಾನ ಮಾಡಿ ತೊಳೆದರೂ ರಕ್ತ ಹೋಗಲೊಲ್ಲದು. ಆಗ ಶ್ರೀ ಪರಶುರಾಮ ಶೃಂಗೇರಿಯ ಹತ್ತಿರ ಬಂದು ತುಂಗಾನದಿಯಲ್ಲಿ ಅದ್ದಿದಾಗ ಸ್ವಲ್ಪ ರಕ್ತ ಹೋಯಿತಂತೆ. ಪರಶುರಾಮ ಕುಣಿದು ಕುಪ್ಪಳಿಸಿದ. ಅದೇ ನದಿಯ ಗುಂಟ ಕೊಡಲಿಯನ್ನು ಅದ್ದುತ್ತಾ ಬಂದನಂತೆ. ಅಲ್ಲಿಂದ ಸುಮಾರು ಹದಿನೆಂಟು, ಇಪ್ಪತ್ತು ಮೈಲಿ ದೂರದಲ್ಲಿ ತುಂಗಾನದಿಯಲ್ಲಿ ಬಂದು ತೀರ್ಥಾಕಾರದಲ್ಲಿ ಅದ್ದಿದರೆ ರಕ್ತವೆಲ್ಲಾ ಮಂಗಮಾಯ. ತಿಲ ಮಾತ್ರವೂ ಉಳಿಯಲಿಲ್ಲ. ಈ ಪವಿತ್ರ ಸ್ಥಳವೇ ರಾಮತೀರ್ಥವಾಯಿತು. ದಂಡೆಯ ಮೇಲಣ ಊರು ತೀರ್ಥರಾಜಪುರವಾಯಿತು. ಪ್ರತಿ ಎಳ್ಳಮಾವಾಸ್ಯೆಗೆ ಬಹುದೊಡ್ಡ ಜಾತ್ರೆ ಆಗುತ್ತದೆ. ರಥದ ಮೇಲಣ ಆಯತಾಕಾರದ ಹಲಗೆಗಳಲ್ಲಿ ಪ್ರತಿವರ್ಷ ಬಣ್ಣಗಳಿಂದ ಬಿಡಿಸಿ ಅಷ್ಟದಿಕ್ಕಿಗೂ ತೂಗು ಹಾಕುತ್ತಾರೆ. ಒಂದನೇ ಚಿತ್ರದಲ್ಲಿ ರಕ್ತಮಯ ಕೊಡಲಿಯೊಂದಿಗೆ ಕೊಡಲಿರಾಮ, ಎರಡನೇ ಚಿತ್ರದಲ್ಲಿ ಕೊಡಲಿ ತೊಳೆಯಲು ತೀರ್ಥಯಾತ್ರೆ ಪ್ರಾರಂಭ, ತುಂಗಾನದಿಯಲ್ಲಿ ಸ್ವಲ್ಪ ರಕ್ತ ಹೋಗಿದ್ದು, ಜಲ ಪಾತ್ರದಲ್ಲಿ ಯಾನ ಮುಂದುವರಿಸಿದ್ದು, ತೀರ್ಥಹಳ್ಳಿಯಲ್ಲಿ ತಿಲಮಾತ್ರವೂ ರಕ್ತ ಉಳಿಯಲಿಲ್ಲವಾದುದರಿಂದ ಅದು ತೀರ್ಥರಾಜ. ಮಾರ್ಗಶಿರ ಬಹುಳ ಅಮಾವಾಸ್ಯೆ- ಎಳ್ಳು ಅಮಾವಾಸ್ಯೆ. ಮಾರನೇ ದಿನ ಪುಷ್ಯ ಶುದ್ಧ ಪ್ರತಿಪದೆಯಂದು ಬೆಳಿಗ್ಗೆ ಮಹಾರಥೋತ್ಸವ. ಬ್ರಹ್ಮರಥೋತ್ಸವವನ್ನು ಆಚರಿಸಿ ರಥವನ್ನು ಹತ್ತು ಹನ್ನೊಂದರ ಹೊತ್ತಿಗೆ ಶ್ರೀರಾಮಚಂದ್ರಾಪುರ ಮಠದ ಎದುರು ತಂದು ನಿಲ್ಲಿಸುತ್ತಾರೆ. ನಂತರ ಮಧ್ಯಾಹ್ನ ಎರಡು-ಮೂರರ ಹಾಗೆ ಮಹಾರಥೋತ್ಸವ ರಥಬೀದಿಯಲ್ಲಿ. ಸುಮಾರು ಒಂದು ಕಿಲೋಮೀಟರ್ ದೂರವಿದ್ದೀತು, ಕಿವಿಗಡಚಿಕ್ಕುವಂತೆ ಜೈಕಾರ ಹಾಕುತ್ತಾ ರಥ ಎಳೆಯುತ್ತಾರೆ. ನಂತರ ಅಲ್ಲಿಂದ ನೆಲೆಗೆ ತರುವಾಗ ರಾತ್ರಿ ಹನ್ನೊಂದು, ಹನ್ನೆರಡು. ಪುನಃ ತೆಪ್ಪೋತ್ಸವ. ಈಗ ಕೆಲವು ವರ್ಷಗಳಿಂದ ಸಂಕ್ರಾಂತಿಗೂ ಅದೇ ರಥೋತ್ಸವ ನಡೆಯುತ್ತದೆ. ತೆಪ್ಪೋತ್ಸವ ನೋಡಲು ಸಮೀಪದ ಹಳ್ಳಿ ಮಾತ್ರವಲ್ಲದೇ ಕೋಣಂದೂರು, ಕೊಪ್ಪ, ತೂದೂರು, ಮಂಡಗದ್ದೆಗಳಿಂದಲೂ ರಾತ್ರಿ ಬರುತ್ತಾರೆ. ತೀರ್ಥಹಳ್ಳಿಯ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ- ಅಂದಿನ ಪ್ರಸಿದ್ಧ ಕಂಪನಿ ಡಂಕರ್ಲೆ- ನೋಡಲು ನಯನಮನೋಹರವಾಗಿದೆ. ಎರಡು ಬಸ್ಸುಗಳು ಏಕಕಾಲಕ್ಕೆ ಸಂಚರಿಸಬಹುದು.

ಮುಂದುವರೆಯುವುದು….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಬೊಗಸೆ ನೀರು (ಬೀದಿ ನಾಟಕದ ಹಾಡು)
Next post ಕೇವಲ ನೆನಪು

ಸಣ್ಣ ಕತೆ

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys