ಕಾಡುತಾವ ನೆನಪುಗಳು – ೪

ಕಾಡುತಾವ ನೆನಪುಗಳು – ೪

ರಾತ್ರಿ ಒಂಭತ್ತರ ಸಂಖ್ಯೆಯಂತೆ ಮುದುಡಿಕೊಂಡು ಮಲಗುತ್ತಿದ್ದ ನನಗೆ ಎಂತಹದೋ ಭಯ… ಅಭದ್ರತೆ… ಕನಸುಗಳ ಹಾವಳಿ… ಕೇಳುತ್ತಿದ್ದ ‘ರಾಕ್ಷಸರ’ ಕತೆಗಳ ಪಾತ್ರಗಳು… ನನಗರಿವಿಲ್ಲದೇ ಚಾಪೆಯ ಮೇಲೆ ಮೂತ್ರ ವಿಸರ್‍ಜಿಸಿ ಬಿಡುತ್ತಿದ್ದೆ. ಬೆಳಿಗ್ಗೆ ನಾನು ಏಳುವ ವೇಳೆಗೆ ಅವ್ವ ತನ್ನ ಕೆಲಸಕ್ಕೆ ಹೋಗಿಬಿಟ್ಟಿರುತ್ತಿದ್ದಳು. ತುಂಬಾ ದೂರ ನಡೆದು ಹೋಗಬೇಕಿತ್ತು. ಜಟಕಾಗಾಡಿಗೆ ಹಣ ತೆರುತ್ತಿರಲಿಲ್ಲ. ಹೀಗಾಗಿ ನನ್ನ ಸಣ್ಣವ್ವನ ರೌದ್ರವತಾರಕ್ಕೆ ಬಲಿಯಾಗಿಬಿಡುತ್ತಿದ್ದೆ.

“ಕತ್ತಿ ಹಂಗ್ ಬೆಳೆದಾಳೆ. ಇನ್ನೂ ಚಾಪಿ ಮ್ಯಾಲೆ ಉಚ್ಚಿ ಹೊಯ್ಕಂತಾಳು. ಇವತ್ನಿಂದ ನಿಂಗೆ ಗೋಣಿ ಚೀಲ ಸುತ್ತಿ, ಅದ್ರ ಮ್ಯಾಲೆ ಮಲಗಿಸ್ತೀನಿ” ಎಂದು ಬಯ್ಯುತ್ತಿದ್ದಳು. ಎಚ್ಚರಿಸುತ್ತಿದ್ದಳು. ಹಾಗೆಯೇ ಮಾಡುತ್ತಿದ್ದರೂ ಕೂಡಾ.

ಅಪಮಾನದಿಂದ, ದುಃಖದಿಂದ ಕುಗ್ಗಿ ಹೋಗುತ್ತಿದ್ದೆ. ಭಯ ಆತಂಕದಿಂದ ರಾತ್ರಿಯಿಡೀ ಎಚ್ಚರವಾಗಿರಲು ಪ್ರಯತ್ನಿಸುತ್ತಿದ್ದೆ. ನಿದ್ದೆ ಮಾಡಿ ಬಿಟ್ಟರೆ ಮತ್ತದೇ ತೊಳಲಾಟ… ಮತ್ತವೇ ಕನಸುಗಳು… ಆದರೆ ನಿದ್ದೆ ಯಾವಾಗ ಬರುತ್ತಿತ್ತೋ ಗೊತ್ತೇ ಆಗುತ್ತಿರಲಿಲ್ಲ. ಮತ್ತೆ ಚಾಪೆ ಒದ್ದೆಯಾಗಿ ಬಿಡುತ್ತಿತ್ತು. ಅದು ಯಾವಾಗ ನಿಂತಿತೋ ನನಗೀಗ ನೆನಪಿಲ್ಲ.

ನನ್ನ ಸಣ್ಣವ್ವ, ನನಗೆ ಹೀಯಾಳಿಸುವ, ಬಯ್ದು ನಾಲಿಗೆ ಚಟ ತೀರಿಸಿಕೊಳ್ಳುವ ಯಾವ ಅವಕಾಶವನ್ನು ಆಕೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ನನಗೇ ಅಲ್ಲ, ಎಲ್ಲರೊಂದಿಗೆ ಅದೇ ರೀತಿ ವರ್‍ತಿಸುತ್ತಿದ್ದಳು. ಯಾವಾಗಲೂ ನಾಲಿಗೆ ಕೊಂಕು ಮಾತನಾಡಲು ಮುಂದಿರುತ್ತಿತ್ತು.

ಅಂದು, ನಾನು ಮುಖಕ್ಕೆ ಹಚ್ಚಿಕೊಂಡ ಪೌಡರ್ ಹೆಚ್ಚಾಗಿತ್ತೋ ಏನೋ? ಪುಟ್ಟ ಕನ್ನಡಿಯಲ್ಲಿ ಗೊತ್ತಾಗಿರಲಿಲ್ಲ. ಅದರಲ್ಲೂ ಕನ್ನಡಿಯಲ್ಲಿ ಕದ್ದು ಕದ್ದು ನೋಡಿಕೊಳ್ಳಬೇಕಿತ್ತು! ಶಾಲೆಗೆ ಹೊರಟು ನಿಂತಿದ್ದೆ. ಸಣ್ಣವ್ವ ಎದುರಿಗೆ ಬಂದಿದ್ದಳು. “ಇಷ್ಟಾಕೆ ಪೌಡ್ರು ಬಳ್ಕೊಂಡಿದ್ದೀಯಾ? ಹೆಂಗ್ ಕಾಣ್ತೀ ಗೊತ್ತಾ? ಒಲೆಯ ಹಿಂದಿನ್‌ ಗ್ವಾಡೆಗೆ ಸುಣ್ಣ ಬಳ್ದಂಗಿದೆ” ಎಂದಳು. ನಾನು ನಿರ್‍ಲಕ್ಷಿಸಿದ್ದೆ. ಆಕೆಗದು ಗೊತ್ತಾಗಿ ಹೋಗಿತ್ತು.

“ನನ್ ಮಾತಂದ್ರೆ ನಿಂಗೆ ಅಲಕ್ಷಾನಾ? ಮಕ ನೋಡ್ಕೋ ಹೋಗು. ಈ ವಯಸ್ಗೆ ನೀನು ಹಿಂಗಾದ್ರೆ… ನಾಳೆ ಯಾವೊನ್ಜೊತೆಗಾದ್ರೂ ಓಡೋಗ್ತೀಯಾಂತ ನಂಗೊತ್ತು…”-ಕಹಿ ಕಾರಿದ್ದಳು. ನನಗದು ಅರ್‍ಥವಾಗಿರಲಿಲ್ಲ.

ಸಂಜೆ ಮನೆಗೆ ಬಂದಾಗ ಅವ್ವ ಇನ್ನೂ ಬಂದಿರಲಿಲ್ಲ. ಸಣ್ಣವ್ವ ಪಕ್ಕದ ಮನೆಯಾಕೆಯ ಜೊತೆ ಹರಟೆಗಿಳಿದಿದ್ದಳು.

“ನಂಗೊತ್ತಿತ್ತು… ಅವ್ಳು ಹಂಗೇ ಓಡೋಗ್ತಾಳೇಂತ. ನಾನು ಹೇಳಿದ್ದೆ. ಆದ್ರೆ ಅವಳವ್ವ ಕಿವಿಗೆ ಹಾಕ್ಕೊಂಡಿರಲಿಲ್ಲ…”

“ಪಾಪ… ಆ ಮನೇವೂ ಮಕ ಮುಚ್ಕೊಂಡ್ ಓಡಾಡೋಹಂಗೆ ಮಾಡ್ಬಿಟ್ಳು ನೋಡು”

“ಹೂಂ… ಹೆಣ್ಮಕ್ಳನ್ನ ಎಷ್ಟು ಅಂಕ್ಯಾಗೆ ಇಡ್ತೀವೋ ಅಷ್ಟೂ ಒಳ್ಳೇದು”

“ನಾನು ಕೇಳಿಸಿಕೊಳ್ಳದವಳಂತೆ ಒಳಗೆ ಹೋದೆ. ಆದರೆ ಆ ಮಾತುಗಳು ಕಿವಿಗೆ ಬಿದ್ದಿದ್ದವು”.

“ಯಾರು ಓಡೋಗಿದ್ದು? ಹೆಂಗೆ?”-ಎಂಬ ಪ್ರಶ್ನೆ ಎದ್ದಿತ್ತು ನನ್ನ ಮನದಲ್ಲಿ. ಉತ್ತರ ಯಾರು ಕೊಡ್ತಾರೆ? ಲಕ್ಷ್ಮಿ ಯಾವ ಹುಡುಗನ ಜೊತೆ ಓಡಿ ಹೋಗಿದ್ದಳು?

ರಾತ್ರಿ ಅವ್ವ ಗೋಡೆಗೊರಗಿಕೊಂಡು, ಎಂದಿನಂತೆ ಊಟವಾದ ನಂತರ ಪುಸ್ತಕವೊಂದನ್ನು ಓದುತ್ತಿದ್ದಳು. ನಾನು ಮೆಲ್ಲಗೆ ಅವ್ವನ ಬಳಿಗೆ ಬಂದೆ. ಅವ್ವ ಏನು? ಎನ್ನುವಂತೆ ಪುಸ್ತಕದಿಂದ ತಲೆ ಎತ್ತಿ ನೋಡಿದ್ದಳು.

“ಅವ್ವಾ… ನಂಗೊಂದ್‌ನುಮಾನ…”-ಎಂದೆ.

“ಏನ್ ಓದ್ತಾಯಿದ್ದೆ?”-ಅವ್ವ ಕೇಳಿದ್ದಳು.

“ಪಾಠದ್ದು ಅಲ್ಲ…”

“ಮತ್ತೆ…?”

“ಅದೇ ಲಕ್ಷ್ಮಿ… ಪರುಶ್ಯಾನ ಕೂಡಿ ಓಡಿ ಹೋದ್ಳಂತೆ… ಬಳ್ಳಾರಿಗೆ ಓಡಿ ಹೋಗೋದ್ಯಾಕೆ? ಬಸ್ಸಲ್ಲೇ ಹೋಗೋದ್ಬಿಟ್ಟು ಹೇಗೆ ಅಷ್ಟು ದೂರ ಓಡಿ ಹೋಗ್ತಾರೆ. ಸುಸ್ತಾಗೋದಿಲ್ವಾ?”-ಎಂದು ನನ್ನ ಅನುಮಾನದ ಬಗ್ಗೆ ಕೇಳಿದ್ದೆ.

“ನಿಂಗ್ಹೇಳಿದ್ದ್ಯಾರೂ?”-ಹುಬ್ಬು ಗಂಟಿಕ್ಕಿ ಕೇಳಿದ್ದಳು.

“ಕೇಳಿಸ್ಕಂಡಿದ್ದೆ…”

“ಇಲ್ಲಿಂದ ಹೋಗ್ತಿಯೋ ಇಲ್ವೋ…?”-ಅವ್ವನ ಮುಖದಲ್ಲಿ ಸಿಟ್ಟು.

“ಮ್… ಮ್…”

“ಪಾಠ ಓದ್ಕೊಳ್ಳೇಂದ್ರೆ… ಏನೇನೋ ಕೇಳ್ತೀಯಾ? ಹೋಗೇ ಪಾಠ ಓದ್ಕೋ…”-ವ್ಯಗ್ರಳಾಗಿದ್ದಳು ಅವ್ವ.

ನಾನಿನ್ನೂ ಅಲ್ಲೇ ನಿಂತಿದ್ದೆ.

“ನಿನ್ನನ್ಯಾರೂ ಓಡಿಸ್ಕೊಂಡ್ ಹೋಗೋಲ್ಲ… ಹೋಗು” ಸಿಟ್ಟಿನಿಂದ ಹೇಳಿದ್ದಳು.

“ಇನ್ನೊಂದ್ಸಾರಿ… ಇಂಥಾ ಮಾತು ಹೇಳಿದ್ರೆ, ಕೇಳಿದ್ರೆ ಹಲ್ಲು ಉದ್ರಿಸಿಬಿಡ್ತೀನಿ. ಹೋಗೇ ಇಲ್ಲಿಂದ…”- ಅವ್ವ ಕೈಯ್ಯಲ್ಲಿದ್ದ ಪುಸ್ತಕದಿಂದ ಹೊಡೆಯುವಂತೆ ಮುಂದೆ ಬಾಗಿದ್ದಳು.

ನಾನು ಅಲ್ಲಿಂದ ಕಾಲು ಕಿತ್ತಿದ್ದೆ. ಆದರೂ ಸಮಾಧಾನವಾಗಿತ್ತು. “ಸ್ಕೂಲಿನಿಂದ್ಲೇ ನಡ್ಕೊಂಡ್ ಮನೆಗೆ ಬರೋಕೇನೇ ಸುಸ್ತಾಗಿರುತ್ತೆ. ಇನ್ನು ಓಡೋದೆಲ್ಲಿಂದ ಬಂತು? ಅವ್ವಾನೇ ಹೇಳಿದ್ಳಲ್ಲ? ನನ್ನನ್ನಾರೂ ಓಡಿಸ್ಕೊಂಡ್ ಹೋಗೋಲ್ಲಾಂತ…”

ಅಲ್ಲಿಗೆ ನನಗೆ ಸಮಾಧಾನವಾಗಿತ್ತು. ಆದರೂ ಯಾಕೆ ಎಲ್ಲರಿಗೂ ನಾನು ಅರ್‍ಥವಾಗುತ್ತಿಲ್ಲ? ಗೊತ್ತಿಲ್ಲದ್ದನ್ನು ಕೇಳಿದ್ರೇನಾಯ್ತು? ಆಗೆಲ್ಲಾ ಮನಸ್ಸು ಗೊಂದಲದ ಗೂಡಾಗುತ್ತಿತ್ತು. ಬೇರೆಯವರಿರಲಿ, ನನ್ನ ಮನೆಯವರೇ ಯಾಕೆ ಹೀಗೆ ನನ್ನನ್ನು ಹೀಯಾಳಿಸ್ತಾರೆ? ಯಾರಿಗೂ ತಾಳ್ಮೆಯೇ ಇಲ್ಲ ಯಾಕೆ? ನನಗೇ ನಾನು ಅಪರಿಚಿತಳಾಗಿ ಬೆಳೆಯ ತೊಡಗಿದ್ದೆ.

ಚಿನ್ನೂ, ಈಗಿನಂತೆ ತಾಳ್ಮೆಯಿಂದ, ಪ್ರೀತಿಯಿಂದ ನಡೆದುಕೊಳ್ಳುವವರಿರಲಿಲ್ಲ. ಜಾಸ್ತಿ ಮಕ್ಕಳಿದ್ದುದಕ್ಕೋ… ಬಡತನದ ಬೇಗೆಯೇ ಅವರಿಗೆ ಮುಖ್ಯವಾಗಿತ್ತೋ ಏನೋ? ಯಾವ ಪ್ರಶ್ನೆಗೂ ಸಮರ್‍ಪಕ ಉತ್ತರ ಸಿಗುತ್ತಿರಲಿಲ್ಲ. ಹೆಚ್ಚು ಹೆಚ್ಚು ಕೇಳುವ ಹಾಗೂ ಇರಲಿಲ್ಲ. ಸುತ್ತಲೂ ಚೂಪಾದ ಮುಳ್ಳು ಬೇಲಿಯ ನಡುವೆ ಇದ್ದಂತೆ ಚಡಪಡಿಸುತ್ತಿದ್ದೆ… ಬೇಲಿ ಕಿತ್ತು ಹೊರಗೆ ಹೋಗಬೇಕೆನ್ನಿಸುತ್ತಿತ್ತು. ಆದರೆ, ಹಾಗೆ ಮಾಡುತ್ತಿರಲಿಲ್ಲ. ಮಾಡುವಂತೆಯೂ ಇರಲಿಲ್ಲ.

ಈ ಮಧ್ಯೆ ಅವ್ವನಿಗೆ ದಾವಣಗೆರೆಯಿಂದ ಬೇರೆ ಊರಿಗೆ ವರ್‍ಗಾವಣೆಯಾಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದಿಯಾನೆ
Next post ಬೈಜಾಂಟಿಯಮ್ಮಿಗೆ ಯಾನ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…