ಬೈಜಾಂಟಿಯಮ್ಮಿಗೆ ಯಾನ


ಮುದುಕರಿಗೆ ತಕ್ಕ ನಾಡಲ್ಲ ಅದು. ಪ್ರಾಯದ
ಹೆಣ್ಣು ಗಂಡುಗಳೆಲ್ಲ ತೋಳತೆಕ್ಕೆಗಳಲ್ಲಿ,
ಹಕ್ಕಿ ಮರಮರದಲ್ಲಿ – ಸಾವಿರುವ ಸಂತಾನ – ಹಾಡಿನುಬ್ಬರದಲ್ಲಿ,
ಸ್ಯಾಮನ್ ಮೀನುಗಳ ಪಾತ, ಮೆಕರೆಲ್ ಕಿಕ್ಕಿರಿದ ಕಡಲು,
ಗಾಳಿ ನೆಲ ಜಲ ಜೀವಕೋಟಿ ಎಲ್ಲವು ಇಲ್ಲಿ ಗ್ರೀಷ್ಮದುದ್ದಕ್ಕೂ
ಹಾಡಿ ಕೊಂಡಾಡುವುವು ಪಡೆದದ್ದ, ಹಡೆದದ್ದ, ಮಡಿದದ್ದನ್ನೆಲ್ಲ
ವಿಷಯ ಸುಖಗಾನ ಸುಳಿಯಲ್ಲಿ ಕೆಡೆದು ಇವಕ್ಕೆ
ಕಾಲದಂಕೆಗೆ ಸಿಗದ ಧೀಶಕ್ತಿ ಸ್ಮಾರಕಗಳೆಂದರೆ ಉಪೇಕ್ಷೆ.


ದನಿಯೆತ್ತಿ ಆತ್ಮ ಚಪ್ಪಾಳೆಯಕ್ಕಿ
ಮರ್ತ್ಯವಸ್ತ್ರದ ಸುಕ್ಕುಸುಕ್ಕಿಗೂ ಹಾಡುತ್ತ ತಾರಸ್ವರದತ್ತ
ಏರದಿದ್ದರೆ ಅಯ್ಯ, ಮುದಿಮನುಷ್ಯ ಒಂದು ಕಃಪದಾರ್‍ಥ,
ಗೂಟಕ್ಕೆ ಸಿಕ್ಕಿಸಿದ ಹರಕು ಕೋಟು.
ಸ್ವಂತಸ್ಮಾರಕ ಮಂತ್ರಮುಗ್ಧನೆಲ ಅದು, ಅಲ್ಲಿ
ಹಾಡು ಕಲಿಸುವ ಶಾಲೆ ಎಲ್ಲಿ? ಎಂದೇ ಬಂದೆ
ಕಡಲುಗಳ ದಾಟಿ ನಾ ಇಲ್ಲಿಗೆ,
ಬೈಜಾಂಟಿಯಮ್ ಪವಿತ್ರ ನಗರಕ್ಕೆ.


ಚಿನ್ನಮೆಟ್ಟಿದ ಭಿತ್ತಿಚಿತ್ರ ಎನ್ನುವ ಹಾಗೆ
ದಿವ್ಯಾಗ್ನಿಯಲ್ಲಿ ನಿಂತಿರುವ ಓ ಋಷಿಗಳೇ
ಹೊರಬನ್ನಿ ದಿವ್ಯಾಗ್ನಿಯಿಂದ ಡೇಗೆಯ ಹಾಗೆ ಮಂಡಲಾಕಾರ ಚಲಿಸುತ್ತ,
ದಿವ್ಯಗಾಯನ ಕಲಿಸಬನ್ನಿ ಈ ಆತ್ಮಕ್ಕೆ,
ತಿನ್ನಿ ನನ್ನೆದೆಯನ್ನು; ಈ ಮೋಹಪೀಡಿತ ಆತ್ಮ
ಕಟ್ಟುವಡೆದಿದೆ ಒಂದು ಸಾಯುವ ಮೃಗಕ್ಕೆ;
ತಾನೇನು ಎನ್ನುವುದೆ ತಿಳಿಯದದು, ಬನ್ನಿ
ಬಾಚಿಕೊಳ್ಳಿರಿ ನನ್ನ ಶಾಶ್ವತ ಶಿಲ್ಪಸ್ಥಿತಿಗೆ.


ಪ್ರಕೃತಿಯಿಂದೊಂದು ಸಲ ಆಚೆ ಜಿಗಿದೆನೊ ಸಾಕು
ಬೇಕಿಲ್ಲ ಮುಂದೆಂದೂ ನಿಸರ್‍ಗ ನೀಡುವ ದೇಹ,
ಪಡೆವೆ ಗ್ರೀಸಿನ ವಿಶ್ವಕರ್‍ಮಿ ನಿರ್‍ಮಿಸುವಂಥ
ಬಡಿದ ಚಿನ್ನದ ಅಥವ ಚಿನ್ನ ಸವರಿದ ಶಿಲಕಾಯ,
ದರ್‍ಬಾರಿನಲ್ಲಿ ತೂಕಡಿಸುತ್ತಿರುವ ದೊರೆಯನ್ನು
ಎಚ್ಚರಿಸಲೆಂದು ಅಥವಾ ಹೊನ್ನರೆಂಬೆಯಲ್ಲಿ
ಕುಳಿತು ಬೈಜಾಂಟಿಯಮ್ಮಿನ ಕುಲಶ್ರೇಷ್ಠರಿಗೆ
ಭೂತ ವರ್‍ತಮಾನ ಭವಿಷ್ಯತ್ತುಗಳ ಹಾಡಲೆಂದು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಬೈಜಾಂಟಿಯಮ್ ಈಗಿನ ಇಸ್ತಾಂಬುಲ್ ನಗರ. ಅದರ ಪ್ರಾಚೀನ ಕಾಲದ ಸಂಸ್ಕೃತಿ ಏಟ್ಸನಿಗೆ ಬಹಳ ಪ್ರಿಯವಾದದ್ದು. ಒಂದು ಕಾಲದಲ್ಲಿ ಆಧ್ಯಾತ್ಮಿಕ, ಕಲಾತ್ಮಕ ಮತ್ತು ಲೌಕಿಕನೆಲೆಗಳ ಜ್ಞಾನ ವಿವೇಕಗಳು ಜನಜೀವನದಲ್ಲಿ ಒಟ್ಟಾಗಿ ಬೆಸೆದುಕೊಂಡಿದ್ದ ನಗರ ಅದು ಎಂದು ಕವಿ ಮೆಚ್ಚಿದ್ದಾನೆ. ‘ಪ್ರಾಚೀನ ಕಾಲಕ್ಕೆ ಹೋಗಿ ಒಂದು ತಿಂಗಳು ಕಾಲ ಕಳೆಯುವ ಅವಕಾಶ ಸಿಕ್ಕಲ್ಲಿ ನಾನು ಬೈಜಾಂಟಿಯಂ ನಗರಕ್ಕೆ ಹೋಗಲು ಬಯಸುತ್ತೇನೆ’ ಎಂದು ಏಟ್ಸ್ ತನ್ನ ‘ವಿಶನ್’ ಪುಸ್ತಕದಲ್ಲಿ ಹೇಳಿಕೊಂಡಿದ್ದಾನೆ. ಇಂಗ್ಲೆಂಡ್ ಏನಿದ್ದರೂ ಭೋಗನಗರಿ; ಸಾವಿನ ಅರಿವಿಲ್ಲದೆ ಭೋಗದಲ್ಲಿ ಮುಳುಗಿಹೋಗಿರುವಂಥದ್ದು ಅಲ್ಲದ ತನ್ನ ಹಳೆಯ ವೈಭವಗಳ ಕೊಂಡಾಟದಲ್ಲಿ ತಲ್ಲೀನವಾಗಿರುವಂತದ್ದು. ಅದನ್ನು ತೊರೆದು ಆತ್ಮದ ಅಮರತ್ವವನ್ನು ಕಲಿಸಿಕೊಡುವ ಬೈಜಾಂಟಿಯಮ್ಮಿಗೆ ಹೋಗಲು ಬಯಸುತ್ತಾನೆ ಕವಿ.

(೧) ಕವಿ ಈ ಪದ್ಯದಲ್ಲಿ ತನ್ನ ನಾಡನ್ನು (ಐರ್‍‌ಲೆಂಡ್ ಅಥವಾ ಇಂಗ್ಲೆಂಡನ್ನು) ಬಿಟ್ಟು ಪ್ರಾಚೀನ ಬೈಜಾಂಟಿಯಂ ಪಟ್ಟಣಕ್ಕೆ ಬಂದಿದ್ದಾನೆ.
(೧೩) ತನ್ನ ನಾಡು ಭೋಗಭೂಮಿ. ಅದು ಹಾಡಿನಬ್ಬರದಲ್ಲಿ ಮೈಮರೆತು ಬಾಳುತ್ತಿದೆ. ‘ಸಾಲ್ಮನ್’ ಮತ್ತು ‘ಮೆಕರೆಲ್’ ಭಿನ್ನಜಾತಿಯ ಮೀನುಗಳು. ತನ್ನ ನಾಡಿನಲ್ಲಿ ಯುವಕರು(ನೆಲ) ಹಕ್ಕಿಗಳು (ಬಾನು) ಮತ್ತು ಮೀನುಗಳು (ಜಲ) ಎಲ್ಲವೂ ಕಾಮಮೋಹಿತವಾಗಿವೆ ಎಂದು ಕವಿ ಸೂಚಿಸುತ್ತಿದ್ದಾನೆ.
(೧೯) ಮಂಡಲಾಕಾರದ ಚಲನೆ ಏಟ್ಸನ ಜೈ‌ರ್ ಕಲ್ಪನೆಯನ್ನು ಸೂಚಿಸುತ್ತದೆ.
(೨೯) ಏಟ್ಸ್ ಈ ಕವನಕ್ಕೆ ಒಂದು ವಿವರಣೆಯನ್ನು ಕೊಟ್ಟಿದ್ದಾನೆ. ‘ಬೈಜಾಂಟಿಯಂ ದೊರೆಯ ಅರಮನೆಯಲ್ಲಿ ಇತ್ತೆನ್ನಲಾದ ಚಿನ್ನಬೆಳ್ಳಿಗಳ ಮರದ ಮೇಲೆ ಕೃತಕಪಕ್ಷಿಗಳು ಕೂತು ಹಾಡುತ್ತಿದ್ದವು ಎಂದು ಎಲ್ಲೋ ಓದಿದ್ದೆ’ ಎಂದು ಆ ಟಿಪ್ಪಣಿಯಲ್ಲಿ ಏಟ್ಸ್ ಹೇಳುತ್ತಾನೆ.
(೩೧) ಚಿನ್ನದ ಹಕ್ಕಿಯಾಗಿ ಬೈಜಾಂಟಿಯಮ್ಮಿನ ಕುಲಶ್ರೇಷ್ಠರಿಗೆ ತಾನು ಹಾಡಬೇಕೆಂದು ಕವಿ ಹೇಳುತ್ತಾನೆ. ಈ ಪದ್ಯ ಬರೆಯುವ ಹೊತ್ತಿಗೆ ತನ್ನ ನಾಡಿನಲ್ಲಿ ಸಂಭವಿಸಿದ್ದ ಕೆಲವು ಘಟನೆಗಳಿಂದ ಸಾಮಾನ್ಯ ಜನವರ್‍ಗದ ಬಗ್ಗೆ ಅವನ ಮನಸ್ಸು ಕಹಿಯಾಗಿತ್ತು. ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಅವರಿಗೆ ಶ್ರೇಷ್ಠ ಅಭಿರುಚಿ ಇರಲಾರದೆಂಬ ಸಂಶಯ ಅವನಲ್ಲಿ ಹೊಕ್ಕಿತ್ತು. ಹಾಗೆಂದೇ ಇಲ್ಲಿ ಕುಲಶ್ರೇಷ್ಠರ ಮಾತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೪
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೯

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys