ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ,
ಧಾವಿಸುವೆ ಹಾಸಿಗೆಗೆ ಪ್ರಿಯವಿಶ್ರಾಂತಿ ನೆಲೆಗೆ ;
ಶುರುವಾಗುವುದು ಆಗ ತಲೆಯೊಳಗೆ ಸಂಚಾರ ;
ಮೈಕೆಲಸ ಮುಗಿದು ಮನ ಹಾಯುವುದು ಚಿಂತನೆಗೆ.
ನಾನಿರುವೆ ಎಲ್ಲೊ ದೂರದಲಿ, ಆಲೋಚನೆಯ
ಯಾತ್ರೆ ಹೊರಡುವುದು ಖುಷಿಯಲ್ಲಿ ನೀನಿರುವೆಡೆಗೆ ;
ದಣಿದ ರೆಪ್ಪೆಯ ಬಿಚ್ಚಿ ದಿಟ್ಟಿಸುವೆ ಕತ್ತಲೆಯ,
ಶೂನ್ಯ ಬಗೆಯುವ ಕುರುಡನಂತೆ, ಆದರೆ ಎದೆಗೆ
ತೇಲಿಬರುವುದು ನನ್ನ ಆತ್ಮ ಕಲ್ಪಿಸಿ ಕಡೆದ
ನಿನ್ನ ಛಾಯಾರೂಪ ಕಾಳಕತ್ತಲೆಯಲ್ಲಿ ;
ಥಳಥಳಿಸಿ ಹೊಳೆವ ವಜ್ರದ ಹರಳು, ಬಿರುಸಾದ
ಇರುಳು ಸಹ ಮರುಳು, ಜ್ವಲಿಸುವುದು ಹೊಸ ಕಳೆಯಲ್ಲಿ.
ಹಗಲಲ್ಲಿ ದೇಹ ಇರುಳಲ್ಲಿ ಕಲ್ಪನೆ ಹೀಗೆ
ತುಡಿಯುತ್ತಿರಲು ನಿನಗೆ, ಶಾಂತಿ ಎಲ್ಲಿದೆ ನನಗೆ ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 27
Weary with toil, I haste me to my bed