ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ
ಮೊದಲು ಕಂಡಷ್ಟೆ ಸವಿಯಾಗಿರುವೆ ಇಂದಿಗೂ.
ಮೂರು ಚಳಿಗಾಲಗಳು ಮೂರು ಮಧುಮಾಸಗಳ
ಹೆಮ್ಮೆ ಮುಂದಿವೆ ಸುರಿದು ಮರದೆಲ್ಲ ಎಲೆಗಳೂ;
ಹಾಗೇ ಮೂರು ವಸಂತ ಹಳದಿ ಬಣ್ಣಕೆ ಬೆಳೆದು
ಚೈತ್ರ ಪರಿಮಳವೆಲ್ಲ ಗ್ರೀಷ್ಮ ಧಗೆಯಲಿ ಉರಿದು
ಕಳೆದರೂ ನೀ ಮಾತ್ರ ಮೊದಲಿನಂತೇ ಹೊಳೆದು
ಉಳಿದಿರುವೆ. ಆದರೂ ಚೆಲುವು ಕಾಣದೆ ಸರಿದು
ಸಾಗುವುದು ಗಡಿಯಾರದೊಂದು ಮುಳ್ಳಿನ ಹಾಗೆ,
ನಡುವಿನಂತರ ಭಾಸವಾಗದೇ ಇರಬಹುದು,
ನಿನ್ನ ಮೈಸಿರಿ ಮೊದಲಿನಂತೆ ಕಂಡರೂ ನನಗೆ
ನನ್ನ ಈ ಕಣ್ಣುಗಳೆ ಮೋಸಹೋಗಿರಬಹುದು,
ಹಾಗೆಂದೆ ಕೇಳು ನೀ ಪಡೆಯದೇ ಬೆಳೆವೆ:
ಮಧುಮಾಸ ತೀರಿತ್ತು ನೀ ಬರುವ ಮೊದಲೇ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 104
To me fair friend you never can be old