ಕಾಡುತಾವ ನೆನಪುಗಳು – ೭

ಕಾಡುತಾವ ನೆನಪುಗಳು – ೭

ಬಿಳಿಯ ಕೋಟುಧರಿಸಿ, ಸೀರೆಯುಟ್ಟು, ಕಾಲೇಜಿನ ಕ್ಯಾಂಪಸ್‌ಗೆ ಹೆಜ್ಜೆಯಿಟ್ಟಾಗ ರೋಮಾಂಚನವಾಗಿತ್ತು. ಡಾಕ್ಟರಾಗುವ ಅವ್ವನ ಕನಸನ್ನು ಆಗಲೇ ‘ನೆರವೇರಿಸಿ ಬಿಟ್ಟೆ’ ಎನ್ನುವಷ್ಟು ಸಂಭ್ರಮವಾಗಿತ್ತು. ಉತ್ಸಾಹದಿಂದ ಅನಾಟಮಿ ವಿಭಾಗಕ್ಕೆ ಕಾಲಿಟ್ಟೆವು.

ಡಿಸ್‌ಕಸ್‌ ಹಾಲ್‌ ತುಂಬಾ ದೊಡ್ಡದಿತ್ತು. ಹತ್ತು ಹನ್ನೆರಡು ಸ್ಟೀಲ್ ಮಂಚಗಳು, ಅವುಗಳ ಸುತ್ತಲೂ ಬಿಳಿ ಕೋಟು ಧರಿಸಿ ದೀರ್ಘ ಚರ್ಚಿಸುತ್ತಾ ನಿಂತಿದ್ದ ಸೀನಿಯರ್ ವಿದ್ಯಾರ್ಥಿಗಳು, ಅವರನ್ನು ಬೆರಗು ಕಣ್ಣುಗಳಿಂದ ನಮ್ಮಂತೆಯೇ ನೋಡುತ್ತಾ ನಿಂತಿದ್ದ ನಮ್ಮ ಬ್ಯಾಚಿನ ವಿದ್ಯಾರ್ಥಿಗಳು, ಗುಜು-ಗುಜು ಗಲಾಟೆ, ಕೈಯಲ್ಲಿ ಚಾಕುಹಿಡಿದು ಕತ್ತರಿಸಿ ನೋಡುತ್ತಿದ್ದ ನಿರ್ಜೀವ ದೇಹಗಳು, ಮುರುಟಿಕೊಂಡು ಕಪ್ಪಾಗಿ ಕಾಣುತ್ತಿದ್ದವು. ನಮ್ಮ ಬ್ಯಾಚಿನವರು ಅವರುಗಳೊಂದಿಗೆ ಸೇರಿಕೊಂಡೆವು.

ನಮಗಿಂತ ತುಸು ಸೀನಿಯರ್ ಆಗಿದ್ದ ಬ್ಯಾಚಿನ ವಿದ್ಯಾರ್ಥಿಗಳು, ಶವಚ್ಛೇದನ ನಡೆಸುವಲ್ಲಿ ಮುಂದಿದ್ದು, ನಮಗೆ ತಿಳಿಸಿ, ಕಲಿಸಿಕೊಡತೊಡಗಿರು. ನನಗೆ ಕರ್ರಗೆ ಮುರುಟಿಕೊಂಡು ಹೆಚ್ಚು ಕಡಿಮೆ ‘ಮರದ ಬೊಂಬೆಗಳಂತೆ’ ಕಾಣುತ್ತಿದ್ದ ಶವವನ್ನು ಆಸಕ್ತಿಯಿಂದ ಕಣ್ಣರಳಿಸಿ ನೋಡುತ್ತಿದ್ದೆ.

ನನ್ನ ಹತ್ತಿರ, ನನ್ನನ್ನೊರಗಿಕೊಂಡಂತೆ ನಿಂತಿದ್ದ ನರ್ಗಿಸ್, “ಯಾಕೋ ಒಂಥರಾ… ಆಗ್ತಾಯಿದೆ ಕಣೇ… ಕಣ್ಣುಗಳು ಉರೀತಾ ಇವೆ. ಹೊಟ್ಟೆ ತೊಳಸಿಕೊಂಡು ಬಂದಂತಾಗಿದೆ… ಕಾಲುಗಳಲ್ಲಿ… ಶಕ್ತಿಯೇ… ಇಲ್ಲ…”- ಹೇಳುತ್ತಲೇ ನಿಧಾನವಾಗಿ ಪ್ರಜ್ಞಾಹೀನಳಂತೆ ನೆಲಕ್ಕೆ ಕುಸಿಯತೊಡಗಿದ್ದಳು. ಅವಳ ಮುಖ ಬಿಳಿಚಿಕೊಂಡು, ಹಣೆಯ ಮೇಲೆ ಬೆವರ ಹನಿಗಳು ಮೂಡಿದ್ದವು… ತಟ್ಟನೆ ಎಲ್ಲರೂ, ಅಂದರೆ ಡಿಸ್‌ಕಸ್ ಮಾಡುತ್ತಿದ್ದ ನಮ್ಮ ಟೇಬಲ್ಲಿನ ವಿದ್ಯಾರ್ಥಿಗಳೆಲ್ಲರೂ ಅವಳತ್ತ ತಿರುಗಿ ನೋಡಿದರು.

ಅವಳನ್ನು ಎತ್ತಿ ಹಿಡಿದು, ಕೆಳಗೆ ಬೀಳುವುದನ್ನು ತಪ್ಪಿಸಲಾಯಿತು.

“ಸ್ವಲ್ಪ ನೀರು ಚಿಮುಕಿಸಿ… ಗಾಳಿಗೆ… ಜಾಗ ಬಿಡಿ… ಅಲ್ಲೇ ಕುರ್ಚಿಯ ಮೇಲೆ ಕೂಡಿಸಿ..”-ಎನ್ನುತ್ತಲೇ ಎಲ್ಲರೂ ಅವಳ ಸಹಾಯಕ್ಕೆ ನಿಂತರು. ಅವಳನ್ನು ಕುಳಿತುಕೊಳ್ಳುವಂತೆ ಮಾಡಿ, ಗಾಳಿ ಬೀಸಿದ್ದಾಯಿತು. ನೀರೂ ಚಿಮುಕಿಸಿದ್ದಾಯಿತು.

“ಗಾಬರಿಯಾಗೋದು ಬೇಡಾ… ಹೊಸದಾಗಿ… ಡಿಸ್‌ಕಸ್‌ಗಿಟ್ಟಿರೋ ಬಾಡಿ ನೋಡಿ ಹೆದರಿದ್ದಾಳೆ. ಸರಿ ಹೋಗ್ತಾಳೆ…” ಎಂದರು ಡಿಸ್‌ಕಸ್ ಹಾಲಿನಲ್ಲಿದ್ದ ಅನಾಟಮಿಯ ಅಸಿಸ್ಟೆಂಟ್ ಪ್ರೊಫೆಸರು ನರ್ಗಿಸ್ ಚೇತರಿಸಿಕೊಳ್ಳ ತೊಡಗಿದಂತೆ, ಎಲ್ಲರೂ ಅಲ್ಲಿಂದ ಚದುರಿದರು.

“ಯಾಕೆ…? ಹೆದರಿಬಿಟ್ಟೆಯಾ?”-ಎಂದೆ.

“ಇಲ್ಲಾ… ಕಣೆ. ಈ ಹಾಲ್‌ಗೆ ಬರುತ್ತಿದ್ದ ಹಾಗೆ ಎಂಥದ್ದೋ ಘಾಟು ವಾಸನೆ. ಅದರ ಮೇಲೆ ಕಣ್ಣುಗಳನ್ನು ತೆರೆಯಲೇ ಆಗ್ತಾಯಿರ್ಲಿಲ್ಲ… ವಾಂತಿ ಬರೋ ತರಹಾ ಆಯ್ತು…” ಎಂದಳು ನರ್ಗಿಸ್ ಕ್ಷೀಣವಾದ ಸ್ವರದಲ್ಲಿ.

ಹತ್ತಿರದಲ್ಲೇ ಇದ್ದ ಮೇಡಂ,

“ಅದು ಫಾರ್ಮಾಲಿನ್‌ನ ಘಾಟು ವಾಸನೆ, ಕಣ್ಣುರಿ. ಶವಗಳು ಕೊಳೆತು, ಕೆಟ್ಟು ಹೋಗದಂತಿರಲು ದೊಡ್ಡ ಟ್ಯಾಂಕ್ ತುಂಬಾ ತುಂಬಿಸಿದ್ದೀವಿ. ಕೆಲವರಿಗೆ ಈ ವಾಸನೆಯಿಂದ ಹೀಗಾಗುತ್ತೆ…” ಎಂದರು.

ನರ್ಗಿಸ್ ಸುಧಾರಿಸಿಕೊಳ್ಳತೊಡಗಿದ್ದಳು.

“ಕಷ್ಟ ಅನ್ನಿಸಿದ್ರೆ ಹಾಸ್ಟೆಲ್‌ಗೆ ಹೋಗಿ… ಬೇಕಾದರೆ”-ಎಂದರು ಮೇಡಂ.

“ಸರಿ… ಮೇಡಂ… ಸುಧಾರಿಸ್ಕೊಂಡು ಥಿಯರಿ ಕ್ಲಾಸ್‌ಗೆ ಬರ್ತೀನಿ”-ಎಂದಳು ಮೆಲುವಾಗಿ.

“ನೀವೂ ಅವಳ ಜೊತೆ ಬೇಕಾದ್ರೆ ಹೋಗಿ”-ಎಂದವರು ಹೊರಟು ಹೋದರು.

“ಏನೇ ನಿನ್ನ ಕಥೆ?” ಎಂದೆ.

“ಇಲ್ಲಾ ಕಣೆ… ಕಣ್ಣುರಿ ತಡೆದುಕೊಳ್ಳೋಕೆ ಆಗಲೇ ಇಲ್ಲ…”

“ನಡೀ ಹೋಗೋಣ…” ಎಂದು ಹೊರಡಿಸಿದೆ.

“ನನ್ನಿಂದ ನಿನಗೆ ತೊಂದರೆ…”

“ಏನಿಲ್ಲಾ… ಬಿಡು… ಮೊದಲು ನೀನು ಸುಧಾರಿಸಿಕೊ…” ಅವಳ ಕೈ ಹಿಡಿದು ಡಿಸ್‌ಕಸ್ ಹಾಲಿನಿಂದ ಹೊರಗೆ ಬಂದೆ.

ನನಗೂ ಕಣ್ಣುಗಳು ಉರಿಯುತ್ತಿದ್ದವು. ಕರ್ಚಿಫಿನಿಂದ ಒತ್ತಿ ಹಿಡಿದು ಕೊಂಡಿದ್ದೆ. ಆದರೆ ಅವಳ ಹಾಗೆ ಹೆದರಿರಲಿಲ್ಲ. ನನಗೆ ಯಾವಾಗಲೂ ಒಂಥರಾ ಭಂಡ ಧೈರ್ಯ. ಹುಂಬತನವೂ ಇರಬಹುದು. ಯಾವುದೇ ಸಮಸ್ಯೆ ಬಂದರೂ ಧೈರ್ಯದಿಂದ ಎದೆಯೊಡ್ಡಿ ನಿಲ್ಲುವುದು ಅಭ್ಯಾಸವಾಗಿತ್ತು. ಮನೆಯಲ್ಲಿದ್ದರೂ, ಸಣ್ಣವ್ವಾ ಬೈದಾಗಲೂ ಅವ್ವ ಹೊಡೆದಾಗಲೂ ಹಾಗೆಯೇ ನಿಲ್ಲುತ್ತಿದ್ದೆ ಹಠದಿಂದೆಂಬಂತೆ. ಈಗಲೂ ಹಾಗೆ ಆಗಿರಬೇಕು ಎಂದುಕೊಂಡೆ.

“ನಿಂಗೆ ಹೆದರಿಕೆ ಆಗಲಿಲ್ಲವಾ?”-ನರ್ಗಿಸ್ ಕೇಳಿದಳು.

“ಹೆದರಿಕೆನಾ? ಹೂಂ… ಆ… ಹೆಣಗಳು ನನಗೆ ಒಣಗಿದ ಕಟ್ಟಿಗೆಯ ಗೊಂಬೆಗಳಂತೆ ಕಂಡವು. ನಿನ್ನ ಹಾಗೆ ಹೆದರಿದ್ರೆ ಡಾಕ್ಟರ್ ಆದ ಹಾಗೇನೇ…” ಎಂದೆ ಧೈರ್ಯ ಪ್ರದರ್ಶಿಸುತ್ತಾ.

ಯಾರೋ ಹೇಳ್ತಾರಲ್ಲ ಹಾಗೆ. ಎಲ್ಲಿ ದೇವರುಗಳು ಅಲ್ಲಿ ದೆವ್ವಗಳು ನುಗ್ಗುತ್ತವಂತೆ ಹಾಗೆ.

ದಿನಗಳು ನನ್ನ ಪರಿವೇ ಇಲ್ಲದೇ ಉರುಳುತ್ತಿದ್ದವು. ದಿನಗಳೆದಂತೆ ನನ್ನ ಮಾನಸಿಕ, ದೈಹಿಕ ಬದಲಾವಣೆಯೂ ಆಗುತ್ತಿತ್ತು. ನನ್ನ ಅಲಂಕಾರವೂ ಸುಧಾರಿಸತೊಡಗಿತ್ತು. ನನ್ನ ಗಿಡ್ಡ ಗುಂಗುರು ಕೂದಲಿಗೆ, ಅವ್ವ ತಿರುಪತಿಯಿಂದ ತಂದಿದ್ದ ಅವ್ವನ ಹಳೆಯ ಚೌಲಿಯಿಂದ ಜಡೆಯು ನೀಳವಾಗಿ ಕಾಣುವಂತೆ ಹಾಕಿಕೊಳ್ಳುತ್ತಿದ್ದೆ. ಹಾಗೆಯೇ ಕಣ್ಣುಗಳಿಗೆ ಕಾಡಿಗೆಯನ್ನು ಹಚ್ಚಿಕೊಳ್ಳುತ್ತಿದ್ದೆ. ಒಂದು ದಿನ ಶೋಭಾ ತನ್ನ ರೂಮಿಗೆ ಕರೆದು,

“ಈ ಚೌಲಿ ಯಾಕೆ ಹಾಕ್ಕೊಳ್ತೀಯಾ? ಎಲ್ಲಾದ್ರೂ ತಟಕ್ಕನೆ ಉದುರಿ ಬಿದ್ದರೆ ಏನು ಮಾಡ್ತೀಯಾ?”

“….”
“ಈ ಕಣ್ಣುಗಳಿಗೆ ಇಷ್ಟು ಕಣ್ಣು ಕಪ್ಪು ಯಾಕೆ ಬಳಿದುಕೊಳ್ಳುತ್ತೀಯಾ?”
“….”
“ನೋಡಲು ಸುಂದರವಾಗಿ ಕಾಣ್ಬೇಕೂಂತ ತಾನೆ?”
“….”
“ಇವುಗಳನ್ನೆಲ್ಲಾ ತೆಗೆದುಹಾಕಿ ಸ್ವಚ್ಛವಾಗಿ ಮುಖ ತೊಳೆದುಕೊಂಡು ಬಾ. ಏನು ಮಾಡ್ಬೇಕು, ಸುಂದರವಾಗಿ ಕಾಣಲು ಹೇಳ್ತಿನಿ, ಸರೀನಾ?”

ನಾನು ಹಾಗೆ ಮಾಡಿದ್ದೆ. ನನ್ನನ್ನು ಕನ್ನಡಿಯ ಮುಂದೆ ನಿಲ್ಲಿಸಿ, “ಈಗ ನೋಡು ಎಷ್ಟು ಸಹಜವಾಗಿ ಕಾಣೀಯಾಂತ”- ಹೇಳಿದ್ದಳು.

ಹೌದು ಎನ್ನಿಸಿತ್ತು.

“ನೀನು ಕಪ್ಪಾಗಿದ್ದರೇನಾಯ್ತು? ಕಣ್ಣು ಮೂಗು ಬಾಯಿ ಚೆನ್ನಾಗಿದೆ. ಮುಖದ ಚರ್ಮ ಎಷ್ಟು ಶುಭ್ರವಾಗಿ ಹೊಳೆಯುತ್ತಿದೆ. ದೇವರು ಕೊಟ್ಟ ರೂಪವನ್ನು Artificial ವಸ್ತುಗಳಿಂದ ವಿಕಾರ ಮಾಡಿಕೊಳ್ಳಬಾರದು… ಮುಗ್ಧತೆ, ಸರಳತೆಯಿಂದ ಎಷ್ಟು ಸಹಜವಾಗಿ ಕಾಣ್ತಾಯಿದ್ದೀಯಾ… ಅಲ್ವಾ?”

ಮತ್ತೆ ಮತ್ತೆ ಕನ್ನಡಿಯನ್ನು ನೋಡಿಕೊಂಡಿದ್ದೆ.

“ನಮ್ಮಲ್ಲಿರುವ ಒಳ್ಳೆಯತನ, ವಿದ್ವತ್ತು ಕಣ್ಣುಗಳಲ್ಲಿ ಒಂದು ತರಹದ ಹೊಳಪನ್ನು ತರುತ್ತದೆ. ಅದಕ್ಕೆ ಕಾಡಿಗೆ ಕಪ್ಪು ಹಚ್ಚಿ ಯಾಕೆ ಹಾಳು ಮಾಡ್ಕೊಳ್ಳೋದು ಏನಂತೀಯಾ?”

ಹೌದೆನ್ನಿಸಿತ್ತು. ಅಂದಿನಿಂದ ಇಂದಿನವರೆಗೂ ಹಾಗೆ ಇರತೊಡಗಿದೆ. ಇದ್ದೀನಿ ಕೂಡಾ.

ಹಾಗೆಯೇ ಶೋಭಾ, ಒಳ ಉಡುಪುಗಳಿಂದ ಹಿಡಿದು ಸೀರೆ ಉಡುವುದನ್ನು ಕಲಿಸಿದ್ದಳು. ಯಾವ ಬಣ್ಣದ ಸೀರೆ ನನಗೆ ಒಪ್ಪುತ್ತದೆಯೆಂದೂ ಹೇಳಿದ್ದಳು. ಇದನ್ನೆಂದೂ ಅವ್ವ ಹೇಳಿರಲಿಲ್ಲ…! ಮನೆಯವರಿಗದು ಗೊತ್ತಿರಲಿಲ್ಲವೋ ಏನೋ? ಹಂಗಿಸಲು ಗೊತ್ತಿತ್ತು. ಆದರೆ ಶೋಭಾ ಹೇಳಿದ ರೀತಿಯಲ್ಲಿ ಹೇಳಿದ್ದರೆ ಕೇಳುತ್ತಿದ್ದೆನೋ ಏನೋ? ಅದಕ್ಕೆ ಒಳ್ಳೆಯ ಸಂಸ್ಕಾರ ಬೇಕೆಂದೆನ್ನಿಸಿತ್ತು. ನಾನು ಶೋಭಾಳನ್ನು ಹಾಸ್ಟೆಲಿನ ಸಂಗಾತಿ, ಒಳ್ಳೆಯ ಸ್ನೇಹಿತೆ ಎಂದುಕೊಳ್ಳುವುದಕ್ಕಿಂತ ಹೆಚ್ಚಾಗಿಯೇ ಆಧರಿಸತೊಡಗಿದ್ದೆ. ಆರಾಧಿಸತೊಡಗಿದೆ. ಆಕೆ ನನಗೆ ಸ್ನೇಹಿತೆಗಿಂತ ಹೆಚ್ಚಾಗಿ ತಾಯಿಯಂತೆ ಕಾಣತೊಡಗಿದ್ದಳು. ಆಕೆಯಲ್ಲಿ ಆ ಮಾತೃತ್ವದ, ವಾತ್ಸಲ್ಯದ, ಪ್ರೀತಿಯ ಬೆಚ್ಚಗಿನ ಪ್ರೀತಿಯಲ್ಲಿ ಸುರಕ್ಷಿತ, ಸುಕ್ಷೇಮ, ಸುಭದ್ರವಾಗಿರುವಂತಹ ಭಾವನೆ ಬೆಳೆದಿತ್ತು.

ನನಗೆ ಅಲ್ಲ… ನನ್ನ ಕ್ಲಾಸಿನ ಹಾಸ್ಟೆಲಿನ ಸ್ನೇಹಿತೆಯರಿಗೆ, ಸಿನಿಮಾ ನೋಡುವ ಹುಚ್ಚು ಇತ್ತು. ನನಗೂ ಕೂಡಾ ಹಾಸ್ಟೆಲಿನ ರೂಲ್ಸುಗಳು ಬೇರೆ ವಿಧವಾಗಿದ್ದವು. ರಾತ್ರಿ ಒಂಭತ್ತು ಗಂಟೆಯೊಳಗಾಗಿ ಎಲ್ಲರೂ ಹಾಸ್ಟೆಲಿನೊಳಗಡೆ ಇರಬೇಕಾಗಿತ್ತು. ಸೀನಿಯರ್ ವಿದ್ಯಾರ್ಥಿನಿಯರಿಗೆ ರಿಯಾಯಿತಿ ತೋರಿಸಲಾಗಿತ್ತು. ಕಾರಣ, ಅವರುಗಳು ಲೈಬ್ರರಿಯಲ್ಲಿ ಕುಳಿತು ಓದಿ ಬರುತ್ತಿದ್ದರು. ಒಂಭತ್ತು ಗಂಟೆಯ ನಂತರ ಬಂದವರು, ‘Late Coming’ ಗುಂಪಿಗೆ ಸೇರಿಸಿ, ಬೇರೆಯ Register Book ನಲ್ಲಿ ಸಹಿ ಹಾಕಬೇಕಾಗಿತ್ತು. ಹಾಗೆ ಮಾಡಿದವರನ್ನು ವಾರ್ಡನ್ ಮರುದಿನ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದರ ಭಯ ನಮ್ಮೆಲ್ಲರಿಗೂ ಇತ್ತು.

ಹೊಸದಾಗಿ ಬಿಡುಗಡೆಯಾಗುತ್ತಿದ್ದ ಎಲ್ಲಾ ಭಾಷೆಯ ಸಿನಿಮಾಗಳನ್ನು ನಮ್ಮ ಗುಂಪು ನೋಡಲು ಹೋಗುತ್ತಿತ್ತು. ಮ್ಯಾಟಿನಿ ಶೋ ಗೆ ಮಾತ್ರ ಹೋಗಲು ಸಾಧ್ಯವಾಗುತ್ತಿತ್ತು. ಈ ಸಿನಿಮಾ ನೋಡುವ ಚಟ ಹೆಚ್ಚಾಗಿದ್ದು ಶೋಭಾಳ ಭಯಕ್ಕೆ ನಾನು ಕಡಿಮೆ ಮಾಡಿದ್ದೆ.

“ಭಾನುವಾರ ಬಂತೂಂದ್ರೆ ಸಿನಿಮಾನೇ ಯಾಕೆ ನೋಡ್ಬೇಕು? ಅದೇ ದುಡ್ಡಿಗೆ ಒಂದು ಒಳ್ಳೆಯ ಪುಸ್ತಕ ನಿನಗಿಷ್ಟವಾದದ್ದನ್ನು ತಂದು ಓದಬಹುದಲ್ಲ. ಹೇಗೂ ನೀನು ಕಾದಂಬರಿಗಳನ್ನು ಓದ್ತೀಯಲ್ಲ”.

ಹೌದು ಎನ್ನಿಸಿತ್ತು.

“ಒಂಟಿ ಕೊಪ್ಪಲಿನಲ್ಲಿ ರಾಮಕೃಷ್ಣಾಶ್ರಮವಿದೆ. ನಮ್ಮಷ್ಟು ಹೆಚ್ಚು ಓದುವುದಿಲ್ಲವಾದರೂ, ಸ್ವಲ್ಪ ಬಿಡುವು ಸಿಕ್ಕಾಗ ಅಲ್ಲಿಗೆ ಹೋಗಿ ಬಾ… ಒಂಥರಾ ಸಮಾಧಾನ ಸಿಗುತ್ತದೆ… ನಿನ್ನ ಆಯ್ಕೆ… ನಿನ್ನ ಇಷ್ಟ…” ಎಂದು ಆಯ್ಕೆಯನ್ನು ನನಗೇ ಬಿಟ್ಟು ಹೇಳಿದ್ದಳು.

ಶೋಭಾ… ಹೇಳುವ ಮಾತುಗಳನ್ನು ನಾನೆಂದು ಮೀರುತ್ತಿರಲಿಲ್ಲ. ಅಷ್ಟು ವಿಶ್ವಾಸ, ನಂಬಿಕೆಯಿತ್ತು. ನನ್ನ ವ್ಯಕ್ತಿತ್ವವನ್ನು ರೂಪಿಸಿದ ಗುರುವಾಗಿದ್ದಳು.

ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸಿದರೂ, ಆಗಾಗ್ಗೆ ಕದ್ದು ಹೋಗುವುದನ್ನು ನಿಲ್ಲಿಸಿರಲಿಲ್ಲ. ಒಳ್ಳೆಯ ಸಿನಿಮಾ ಅಂತ ನೋಡಿದವರು ಮೆಸ್‌ಗೆ ಹೋದಾಗ ಯಾರಾದರೂ ಹೇಳಿದರೆ ಹೋಗುತ್ತಿದ್ದೆ. ನನ್ನ ಮೂರು ಜನರ ಗುಂಪು ಓದುವುದು, Clinicalಗೆ ಅಂತ ಬೆಳಿಗ್ಗೆ ಆಸ್ಪತ್ರೆ ನಂತರ Theory Class ಮುಗಿಸಿ ಸಂಜೆಗೇ ಬರುತ್ತಿದುದು. Ladies Room ಗೆ ಒಮ್ಮೊಮ್ಮೆ ಊಟವನ್ನು ಮಧ್ಯಾನ್ಹ ತರಿಸಿಕೊಳ್ಳುತ್ತಿದ್ದೆವು. ಸಂಜೆಯ Coffee ಕುಡಿದು ಬಿಟ್ಟರೆ ರಾತ್ರಿ ಎಂಟು ಗಂಟೆಗೆ ಊಟ. ಅಲ್ಲಿಯವರೆಗೂ ಸ್ವಲ್ಪ ಹರಟೆ, ನಂತರ ಓದುವುದು. ಊಟದ ನಂತರ ಹರಟೆಯಿಲ್ಲ. ನಿದ್ದೆ ಬಂದರೆ Combined Studies, Coffee ರೂಮಿನಲ್ಲಿಯೇ ಮಾಡಿಕೊಳ್ಳುತ್ತಿದ್ದೆವು.

ಹೀಗೆ ಸಾಗಿತ್ತು ನನ್ನ ವೈದ್ಯಕೀಯ ಕಾಲೇಜಿನ ದಿನಗಳು. ನಮ್ಮ ಗುಂಪಿಗೆ ಹೊಸದಾಗಿ ಸೇರಿದ್ದು ಜಾನಕಿ. ನಾವು ಚೆನ್ನಾಗಿ ಓದುತ್ತಿದ್ದೇವೆಂದು ಆಕೆಯು ನಮ್ಮ ಗುಂಪಿಗೆ ಸೇರಿದ್ದಳು. ಆದರವಳು ತಿಂಡಿಪೋತಿ. ಆದರೂ ಓದುತ್ತಿದ್ದಳು ನಮ್ಮಂತೆ, ನಮ್ಮ ಜೊತೆ ಬೆಂಗಳೂರು ಹತ್ತಿರವಾದುದರಿಂದ ವಾರಕ್ಕೊಮ್ಮೆ ಅವಳ ಮನೆಯಿಂದ ಕುರುಕಲು ತಿಂಡಿ ತುಂಬಿದ ಬುಟ್ಟಿ ಬರುತ್ತಿತ್ತು.

ಆಶ್ಚರ್ಯವೆಂಬಂತೆ, ಎಂದೂ ಹೆಚ್ಚಾಗಿ ದೇವಸ್ಥಾನಕ್ಕೆ ಹೋಗದ ಜಾನಕಿ ಸಂಜೆಯ ವೇಳೆ ಹಾಸ್ಟೆಲ್ ತೀರಾ ಸಮೀಪದಲ್ಲಿದ್ದ ಕೃಷ್ಣ ಮಂದಿರಕ್ಕೆ ಹೋಗಿ ಬರತೊಡಗಿದ್ದಳು. ಪ್ರಸಾದವು ನಮಗೂ ಸಿಗುತ್ತಿತ್ತು.

“ನೋಡಿ… ನಿಮ್ಮ ಫ್ರೆಂಡ್‌ಗೆ ದೇವರ ಮೇಲೆ ಅದೆಷ್ಟು ಭಕ್ತಿಯಿದೇಂತ. ಪ್ರತಿದಿನಾ ಸಂಜೆ ಬಂದು ಹೋಗ್ತಾರೆ…” ಪೂಜಾರಿಗಳು ಜಾನಕಿಯನ್ನು ಹೊಗಳಿದ್ದೇ ಹೊಗಳಿದ್ದು, ನಮಗೇನೋ ಅನುಮಾನ!

ಹಾಸ್ಟೆಲಿಗೆ ಬಂದ ಕೂಡಲೇ ಕೇಳಿದೆವು. ಹೆಚ್ಚ-ಕಡಿಮೆ ಅವಳ ಮೇಲೆ ಆಕ್ರಮಣ ಮಾಡಿದ್ದೆವು.

“ಪೂಜಾರಿ ಹೇಳಿದ್ದು ನಿಮಗೆಲ್ಲ ಹೊಟ್ಟೆ ಕಿಚ್ಚು ಆಗಿರ್ಬೇಕು” ಎಂದಳು ತಪ್ಪಿಸಿಕೊಳ್ಳುತ್ತಾ.

“ಕೃಷ್ಣನ ಮೇಲೇನೆ ಯಾಕಿಷ್ಟು ಪ್ರೀತಿ… ಪಕ್ಕದಲ್ಲಿ ಶಿವನ ಗುಡಿಯಿದೆಯಲ್ಲ…” ನಮ್ಮವಾದ.

“ಆದರೆ ಅಲ್ಲಿ ಈ ತರಹ ಸಿಹಿ ಪ್ರಸಾದ ಕೊಡೋಲ್ವಲ್ಲ…” ಎಂದಳು ತುಂಟನಗೆಯಿಂದ.

ನಂತರ ಸತ್ಯ ಹೊರಬಿತ್ತು. ಅವಲಕ್ಕಿ, ಬೆಲ್ಲ, ತುಪ್ಪ, ಕಾಯಿ, ಜೇನು ತುಪ್ಪ ಬೆರೆಸಿದ ಆ ಪ್ರಸಾದ ತುಂಬಾ ರುಚಿಯಾಗಿರುತ್ತಿತ್ತು. ಅದರ ರುಚಿ ಹತ್ತಿ ಕೃಷ್ಣ ಮಂದಿರದ ಕೃಷ್ಣನಿಗೆ ಬೆನ್ನು ಬಿದಿದ್ದಳು.

“ತಿಂಡಿ ಪೋತೀಂದ್ರೆ.. ನೀನೇ ಕಣೆ…”-ಎನ್ನುತ್ತಾ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ಒಂದು ದಿನ ಹೀಗಾಯ್ತು…
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿತ್ತಲ ತುಳಸಿ
Next post ನಾಟಕವೊಂದರ ಹಾಡುಗಳು – ೨

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…