ನೀನು ಮಾಡಬೇಕಾದದ್ದು ನೋಡಬೇಕಾದದ್ದು
ಇನ್ನೂ ಬಹಳವಿತ್ತು
ಯಾಕೆ ಹೋದೆ ?
ನಂಬಲೂ ಕಷ್ಟ
ಮಲಗಿದೆಯಂತೆ ತುಸು ತುಸು
ಮುಲುಗಿದೆಯಂತೆ
ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ
ಏರುತ್ತ
ಇಳಿದು ಬಿಟ್ಟಿತಂತೆ
ಈಗೀಗ ಪದೇ ಪದೇ ನಿನ್ನ ನೆನಪು
ಅದೇ ರೂಪು ಅದೇ ರೂಹು
ನನ್ನ ಕಾಡುತ್ತವೆ ; ಕುಣಿದಾಡುತ್ತವೆ
ಯಾಕೆ ಹೀಗೆ ?
ಇನ್ನೂ ಹಸಿ ಬದುಕು – ಇನ್ನೂ
ಬಿಸಿ ರಕ್ತ
ನಿನ್ನ ನಗೆ ಮುಗಿದಿರಲಿಲ್ಲ – ಅಲ್ಲ
ಸುರುವೇ ಆಗಿರಲಿಲ್ಲ
ಯಾವನು ಆತ
ಅರಳುವ ಮೊದಲೇ ಹೂ ಕೊಯ್ದವನು
ಎಲ್ಲಾ ಬಿಟ್ಟು ನಿನ್ನೇ ಆಯ್ದವನು
ತೀಡಿದೆ, ತೋಡಿದೆ
ನೆನಪಿನ ಬಾವಿ
ಇಳಿದೆ, ಅಳೆದೆ
ಅಲ್ಲಲ್ಲಿ ಬಂಗಾರ – ಹೊಳೆಯಿತು ವರ್ಣ ಸಿಂಗಾರ
ಅಪೂರ್ಣ ಕತೆಯೇ
ವಿಷಾದ – ನೀನು ಸತ್ತಿದ್ದಕ್ಕೆ
ಕಣ್ಣೀರು – ನಿನ್ನ ನೆನಪಿನ ಸಸಿಗೆ
ಇನ್ನೂ ಸ್ವಲ್ಪ ದಿನ – ಸ್ವಲ್ಪ ವರ್ಷ – ಬಹುಶಃ
ಯಾವಾಗಲೂ
ನೀನು ನೆನಪಾಗುತ್ತೀಯ – ಬರೀ
ನೆನಪಾಗುತ್ತೀಯ
ಕೊನೆಗೊಂದು ಪ್ರಶ್ನೆ :
ಸತ್ತೂ ಬದುಕಿರುವ ನಿನಗೆ
ಶ್ರಾದ್ಧ ಯಾಕೆ ?
*****