ಮತೀಯ ಬೆಳವಣಿಗೆ – ಮಾನವ ಮಾರಕ

ಮತೀಯ ಬೆಳವಣಿಗೆ – ಮಾನವ ಮಾರಕ

The hardest thing in the world is to convince a man that he is FREE -Richard Buck

ನಗರಕ್ಕೆ ಜಿಲ್ಲೆಗೆ ಹುಡುಕುತ್ತಿರುವ ಕಾಲರಾಕ್ಕಿಂತ ಕ್ರೂರವಾಗಿ ಮತೀಯ ಮೌಢ್ಯ ಹರಡುತ್ತಿದೆ. ಹತ್ತನೇ ತಾರೀಖಿನ ಕ್ರೈಸ್ತ ಮೆರವಣಿಗೆ ೧೪,೧೫ ರಂದು ನಡೆಯುವ ಮತಮೌಢ್ಯ, ದಿನ ನಿತ್ಯ ಕಿವಿಗಡಚಿಕ್ಕುವಂತೆ ಅರಚಿಕೊಳ್ಳುವ ರಾಘವೇಂದ್ರನ ಜಾಗಟೆ, ಇತ್ಯಾದಿ.

ಮಳೆ ಇಲ್ಲದೆ ಕುಡಿವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಭೂಮಿ ಆಕಾಶಗಳ ನಡುವೆ ಕಾವು ಕೆಂಡವಾಗಿ ಎಲ್ಲೆಲ್ಲೂ ನಗೆಯನ್ನು ಕೊಲ್ಲುವ ಧಗೆ ಆವರಿಸುತ್ತಿದೆ. ಇದರ ನಡುವೆಯೂ ಜಾತಿ, ಮತ ಕುಲಗಳೆನ್ನದೆ ಪ್ರಕೃತಿ ತನ್ನ ಒಡಲಿನಿಂದ ಹಸಿರನ್ನು ಚಿಮ್ಮಿ ಹೂಗಳನ್ನು ಹೊಮ್ಮಿಸಿದೆ. ಆದರೆ ಮನುಷ್ಯ? ತಾನು ಹೊಕ್ಕಿರುವ ಜಾತಿ ಮತಗಳ ಹುತ್ತದಿಂವ ಹೊರ ಬರಲಾರದೆ ನರಳುತ್ತಿದ್ದಾನೆ.

ನಮ್ಮ ನಿತ್ಯ ಬದುಕಿನ ಸಮಸ್ಯೆಗಳನ್ನು, ಪ್ರಾಥಮಿಕ ಅವಶ್ಯಕತೆಗಳನ್ನು ಮೀರಿ ಈ ಮತಮೌಢ್ಯ ಬದುಕಿಗೆ ಕಿಚ್ಚು ಹಚ್ಚುವಷ್ಟು ಹೆಚ್ಚಾಗಲು ಕಾರಣವೇನು? ಇದು ಒಂದೊಂದು ಗುಂಪಿನ, ವರ್ಗದ ಜನರನ್ನು ಅವರಿಗರಿವಿಲ್ಲದಂತೆಯೇ ಮತ್ತೊಬ್ಬರ ವಿರುದ್ಧ ಒಳಗೊಳಗೆ ಕತ್ತಿಮಸೆಯುವಂತೆ, ಕತ್ತುಹಿಚುಕುವಂತೆ ಮಾಡುವುದರ, ದಿನದಿಂದ ದಿನಕ್ಕೆ ಮನುಷ್ಯನನ್ನು ಮೃಗೀಯವಾಗಿಸುತ್ತಿರುವುದರ ಅರ್ಥವೇನು? ಇದು ಈ ಕ್ಷಣಕ್ಕೂ ನನ್ನನ್ನು ಅತ್ಯಂತ ನಿಗೂಢವಾಗಿ ಕಾಡುತ್ತಿರುವ ಪ್ರಶ್ನೆ.

ಅನಾದಿಕಾಲದಿಂದಲೂ ಮನುಷ್ಯನನ್ನು ಕಾಡುತ್ತಾ ಅವನ ಹೃದಯ ಮನಸ್ಸುಗಳನ್ನು ಆಕ್ರಮಿಸಿ ಅವನ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿರುವುವುಗಳೆಂದರೆ ಒಂದು ಭಯ, ಮತ್ತೊಂದು ಸ್ವಾರ್ಥ. ಪ್ರಕೃತಿಯ ಬಗ್ಗೆ ಅರಿವಿರದ ಆದಿಮಾನವನ ಈ ಭಯ, ಸ್ವಾರ್ಥಗಳು ಸ್ವಲ್ಪವೂ ಕ್ಷಯಿಸದೆ ಇಂದಿಗೂ ಆಧುನೀಕರಣಗೊಂಡು ಅಂತರಂಗದಲ್ಲಿ ಅಡಗಿ ಕುಳಿತಿವೆ. ಇದರಿಂದಾಗಿ ಬದುಕಿನ ರಥ ತನ್ನ ಪಥ ತಪ್ಪಿ ವಿನಾಶದತ್ತ ಅತಿವೇಗವಾಗಿ ಉರುಳುತ್ತಿದೆ. ಇಂದಿನ ಅಗತ್ಯ: ನಮ್ಮನ್ನು ವಂಚಿಸುತ್ತಿರುವ ಈ ಮತಮೌಢ್ಯದ ಬಗ್ಗೆ ಎಚ್ಚರಗೊಳ್ಳುವುದು.

ನಿಜ, ಇಸ್ಲಾಂ ಆದಿಯಾಗಿ ಎಲ್ಲ ಮತಗಳೂ ಮಾನವರನ್ನು ಸಹೋದರರಂತೆ ಕಾಣಿರಿ ಎಂದಿವೆ. ಆದರೆ ಆ ಮತಗಳೆಲ್ಲವೂ ಅವರ ಅರಿವಿಗೇ ಬಾರದಂತೆ ಅವರವರ ಅಂತರಂಗದಲ್ಲಿ ಸೃಷ್ಟಿಸುತ್ತಿರುವ ಆಟಂಬಾಂಬಿಗಿಂತ ಕ್ರೂರವಾದ ಮತಮೌಢ್ಯಗಳ ಸ್ಫೋಟಕತೆಯ ಎಚ್ಚರವಿದೆಯೆ ? ಎಲ್ಲ ಮತಗಳೂ ಸಹಜೀವಿಯನ್ನು ಸಹೋದರ ಎಂದು ಕಂಡಿದ್ದರೆ ಸಹೋದರ ಎಂದು ಕರೆಯದೆ ಅವನು ಹಿಂದೂ, ಇವನು ಕ್ರಿಶ್ಚಿಯನ್ ಮತ್ತೊಬ್ಬ ಮುಸಲ್ಮಾನ ಇತ್ಯಾದಿಗಳೆಂದು ಸಾಲದೆ ಅಣುವಿನಂತೆ ಸಿಡಿಸಿಡಿದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಂತ್ಯಜ ಎಂದೂ ; ಕ್ಯಾಥೋಲಿಕ್, ಪ್ರಾಟೆಸ್ಟೆಂಟ್ ಎಂದೂ: ಶಿಯಾ-ಸುನ್ನಿ ಎಂದೂ; ಗುರುತಿಸಿ ಕರೆದು ಮಾನವತೆಯನ್ನು ತುಂಡು ತುಂಡಾಗಿ ತುಂಡೀಕರಿಸುತ್ತಿವೆ ಏಕೆ ? ಎದುರು ಬದರಾದರೆ ಒಳಗೊಳಗೇ ದ್ವೇಷ ಕಾರುವ, ರಕ್ತ ಕಕ್ಕುವ ಈ ಮತಮೌಡ್ಯಗಳಿಗೆ ಪ್ರತ್ಯಕ್ಷವಾಗಿ ಸಾವಿರಾರು ಬಲಿಯಾದರೆ ಪರೋಕ್ಷವಾಗಿ ಎಲ್ಲ ಕೊರಳು ಇದರ ಉರುಳಿಗೆ ಬಂಧಿಯಾಗಿವೆ.

ಮಾನವೀಯತೆ ಅರಳಬೇಕಾದರೆ ಮಠಕ್ಕೆ ಮೂರು ಸುತ್ತುಹಾಕಿ ತೀರ್ಥಕ್ಕೆ ಕೈಯೊಡ್ಡಿ ನಿಂತರೆ; ನಾವು ಪಾಪಿಗಳು ನಮ್ಮನ್ನು ಕ್ಷಮಿಸು ಎಂದು ಮಂಡಿಯೂರಿದರೆ; ಅಲ್ಲ, ನೀನೇ ಎಲ್ಲಾ ಎಂದು ವಾಯುವ್ಯ ದಿಕ್ಕಿಗೆ ಸೊಂಟ ಬಗ್ಗಿಸಿದರೆ ಸಾಲದು. ಬದಲಿಗೆ ಭೂಮಿ ಆಕಾಶಗಳನ್ನರಿತು ಆನಂದಿಸಬೇಕು. ಅಲ್ಲಾ ಇಲ್ಲಾ. ನಾನೇ ಎಲ್ಲಾ ಎನ್ನುವ ಅರಿವಿನ ಜಾಡಿನಲ್ಲಿ ನಮ್ಮ ನಾಡಿ ಮಿಡಿಯಬೇಕು. ಇಂತ ಭುವಿಬಾನ್ಗಳ ಅನಂತತೆಯ ಭವ್ಯತೆಯ, ವೈವಿಧ್ಯತೆಯ ನಡುವೆ ಬಂದುಹೋದ ಯಾವುದೇ ಜೀವಗಳು ತಾನು ದೇವದೂತ ಎಂದು ಕರೆದುಕೊಂಡರೂ ಅದರ ಕೈಗೂಸು ಎನ್ನುವುದನ್ನು ಮರೆಯಬಾರದು. ವ್ಯಕ್ತಿಗತವಾಗಿ ಒಳಹೊಕ್ಕಿರುವ ಭಯ, ಸ್ವಾರ್ಥಗಳನ್ನು ವ್ಯಕ್ತಿಗತವಾಗಿಯೆ ಗೆಲ್ಲಬೇಕೇ ಹೊರತು ನೂರು ಜನ ದೇವದೂತರು ಬಂದರೂ ಅವರಿಂದ ಸಾಧ್ಯವಿಲ್ಲ ಎನ್ನುವ ಪ್ರಾಥಮಿಕ ಅರಿವು ಇಂದು ಜನತೆಗೆ ಆಗಬೇಕಾಗಿದೆ.

ಈ ದೇವದೂತನ, ದೈವದ ಅರಿವು ಒದಗಿದ್ದರೂ ಯಾರಿಗೆ ಏತಕ್ಕಾಗಿ? ಉಳ್ಳವರ ಕಳ್ಳತನದ ರಕ್ಷೆಗಾಗಿ. ಬಡವರ, ಮುಗ್ಧರ ರಕ್ತಹೀರಿ ಮಲಿನಗೊಂಡ ಮನಸ್ಸಿನ ಸಮಾಧಾನಕ್ಕಾಗಿ- ದೇವರ ಡಬ್ಬಿಗೆ ಪುಡಿಗಾಸು, ಧೂಪ, ತನ್ಮೂಲಕ ಕಳ್ಳತನದ ತಪ್ಪಿಗಾಗಿ ದೇಶದುದ್ದಗಲಕ್ಕೆ ಕೊಳ್ಳೆಹೊಡೆವ ಕಳ್ಳರ ರಕ್ಷಕನಾದ ತಿರುಪತಿ ತಿಮ್ಮಪ್ಪನ ಡಬ್ಬಿಗೆ ಕೋಟಿಕೋಟಿ ಕಪ್ಪುಹಣ. ವರ್ಷವಿಡೀ ಹಗಲಿರುಳೂ ಕಣ್ಣಿನಲ್ಲಿ ಕಣ್ಣಿಟ್ಟು ಕಾದು, ಜಟಕಾ ಹೊಡೆದು ಬೆವರು ಹರಿವಂತೆ ದುಡಿದರೂ ದಕ್ಕುವ ಫಲ ಹರಿದ ಲಂಗಿ: ಅದಕ್ಕೆ ಇಸ್ಲಾಂ ಧರ್ಮದ ರಕ್ಷೆ. ಹೀಗೇಕೆ ಎನ್ನುವ ಅರಿವು ಮೂಡಿಸುವಲ್ಲಿ ಮಠಾಧೀಶರುಗಳು, ಮುಲ್ಲಾಗಳು, ಪಾದ್ರಿಗಳು ಇತ್ಯಾದಿಗಳೆಲ್ಲ ಅತ್ಯಂತ ಜಾಣ ಕಿವುಡರಾಗಿದ್ದಾರೆ. ಇದರಿಂದಾಗಿ ಸತ್ತ ರಾಘವೇಂದ್ರನ ಹೆಸರಿನಲ್ಲಿ ಒಂದು ಮಠ ಅರ್ಥಾತ್ ಜನರನ್ನು ರೋಗಗ್ರಸ್ತರನ್ನಾಗಿಸುವ ಕೊಚ್ಚೆ ಗುಂಡಿ. ಸತ್ತ ಶಂಕರನ, ಬಸವನ, ಬುದ್ಧನ, ಮಹಾವೀರನ, ನಾನಕನ, ಏಸುವಿನ, ಪೈಗಂಬರನ ಇತ್ಯಾದಿ ಅವರಿವರ ಹೆಸರಿನ ಸ್ವಾರ್ಥದ ನೂರಾರು ರೋಗಗ್ರಸ್ತ ತಾಣಗಳು ಸೃಷ್ಟಿಯಾಗುತ್ತಿವೆ. ಇಂತಹ ರೋಗಗ್ರಸ್ತ ತಾಣಗಳ ಸೃಷ್ಟಿಗೆ ಕಾರಣ ಅದೇ ಭಯ ಮತ್ತು ಸ್ವಾರ್ಥ. ಆದಿಮಾನವ ಕಾಡಿನಲ್ಲಿ ಗುಂಪುಗುಂಪಾಗಿ ಭಯದಿಂದ ಬದುಕುತ್ತಿದ್ದ ರೀತಿಯಲ್ಲೇ ಈ ವರ್ಗ, ಗುಂಪುಗಳು ತಮ್ಮತಮ್ಮ ಗುಂಡಿಗಳಲ್ಲಿ ಭಯವನ್ನು ಬಿತ್ತಿಕೊಂಡು ಬದುಕುತ್ತಿವೆ. ಅರಿವು ಮೂಡಿಸಿ ಭಯ ಸ್ವಾರ್ಥಗಳನ್ನು ನೀಗುವ ಜ್ಞಾನತಾಣಗಳಾಗುವ ಬದಲು ಆಧುನೀಕರಣಗೊಂಡ ಈ ಗುಂಡಿಗಳಲ್ಲಿ ಕಾಲರಾಕ್ಕಿಂತ ಕ್ರೂರವಾದ ಆದಿಮಾನವನ ಬುದ್ಧಿ ಸ್ಫೋಟಗೊಳ್ಳಲು, ಮಾನವತೆಯನ್ನು ನುಂಗಿ ನೊಣೆಯಲು ಅತಿ ಸೂಕ್ಷ್ಮತೆಯಿಂದ ಸಿದ್ಧವಾಗಿ ನಿಂತಿವೆ. ಇದು ಆಕಾಶದ ಅನಂತತೆಯ ಎದುರು, ಭೂಮಿಯ ಭವ್ಯ ವೈವಿದ್ಯತೆಯ ಎದುರು ಮಾನವತೆಯ ಅತ್ಯಂತ ಕ್ರೂರ ವ್ಯಂಗ್ಯ..

ಹೀಗಾಗಿ ಇಂದು ಎಲ್ಲರಿಗೆ ಬೇಕಾದ್ದು ಮೋಸವಿರದ, ಸ್ವಾರ್ಥವಿರದ, ಭಯವಿರದ, ಮಾನವ ಮಾನವರ ನಡುವೆ ಇರಬೇಕಾದ ನೈಜ ಪ್ರೀತಿ, ಪ್ರೇಮ, ವಿಶ್ವಾಸಗಳು.

ಆದ್ದರಿಂದ ಸಹಜೀವಿ ಮಾನವ ಬಂಧುಗಳೇ, ನಿಮ್ಮಲ್ಲಿ ನನ್ನ ಕಳಕಳಿಯ ಪ್ರಾರ್ಥನೆ: ದಯಮಾಡಿ ನೀವು ಹೂತು ಹುದುಗಿರುವ ನಿಮ್ಮ ನಿಮ್ಮ ಸಂಕುಚಿತ ಬಿಲಗಳಿಂದ ಬಿಡಿಸಿಕೊಂಡು ಹೊರಬನ್ನಿ; ನಿಮಗೆ ಬರಲು ಸಾಧ್ಯವಾಗದಿದ್ದರೆ ಕಡೆಯಪಕ್ಷ ಎಳೆಯ ಕಂದಮ್ಮಗಳನ್ನು ಆಕಾಶದ ಆನಂತತೆಯಿಂದ ವಂಚಿಸಿ ನಿಮ್ಮ ಕಂದಕಕ್ಕೆ ಕರೆದೊಯ್ಯುವ ಇಲ್ಲ ತಳ್ಳುವ ಕ್ರೂರ ಕೆಲಸದಿಂದ ದೂರ ನಿಲ್ಲಿ. ಅದು ನಿಮ್ಮೆಲ್ಲ ಸ್ವಾರ್ಥದ ನಡುವೆಯೂ ನೀವು ಮಾನವತೆಗೆ ಕೊಡುವ ಅತ್ಯಂತ ದೊಡ್ಡ ಕೊಡುಗೆಯಾಗುತ್ತದೆ.

ಮೇ೧೯೮೩.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆಬೆಳಕು
Next post ಮಾತು

ಸಣ್ಣ ಕತೆ

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಅವರು ನಮ್ಮವರಲ್ಲ

  ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys