ಬಿಲ್ಲಿಗೆ ಏರಿದೆ ಬಾಣ
ಕೊರಳಿಗೆ ಹಾರಿದೆ ಪ್ರಾಣ
ಭಯವಿಸ್ಮಯದಲಿ ಗೀತೆಯ
ಕೊನೆಚರಣದ ಗಾನ

ಸಂಜೆಯ ಸೂರ್ಯನ ಕೆಂಪಿಗೆ
ಕಂಪಿಸುತಿದೆ ಮರದೆಲೆಯಲಿ
ಸಂಚರಿಸಿಯು ನಿಂತಂತಿದೆ
ಗಾಳಿಗು ನಿತ್ರಾಣ

ಮಳೆಸುರಿದೂ ಹೊಳೆಹರಿದೂ
ಹಕ್ಕಿ ಹಗುರ ದನಿಗರೆದೂ
ಲೋಕ ಏಕೋ ಮಂಕು ಮೋರೆ
ಹಾಕಿ ನಿಂತ ಭಾವ,
ಚಲಿಸುತ್ತಿದೆ ಹಳೆ ನೆರಳಿಗೆ
ದಣಿವ ಕಳೆವ ತಾಯ ಉಡಿಗೆ
ಹಗಲ ಹಚ್ಚಿ ಅದರೊಳಿಡುವ
ಸೃಜನ ಶೀಲ ಇರುಳಿಗೆ

ಅರಳಿದೆ ಅರಿಯದ ಹೊಸ ಭವ
ಕ್ರಯವಾಗುತ ಹಳೆಯನುಭವ
ಹೊಸ ಕಾಣ್ಕೆಗೆ ಕಣ್ಣೆತ್ತಲಿ
ಚಡಪಡಿಸದೆ ಜೀವ
*****