‘ಆನುದೇವಾ ಹೊರಗಣವನು…’ ಒಂದು ಪ್ರತಿಕ್ರಿಯೆ

‘ಆನುದೇವಾ ಹೊರಗಣವನು…’ ಒಂದು ಪ್ರತಿಕ್ರಿಯೆ

ಡಾ. ಬಂಜಗೆರೆ ಜಯಪ್ರಕಾಶ ಅವರ ಸಂಶೋಧನಾ ಕೃತಿ ‘ಆನುದೇವಾ ಹೊರಗಣವನು…’ ಚರ್ಚೆಯಾಗುತ್ತಲಿರುವ ಕೃತಿ. ಈ ಕೃತಿಯ ಸುತ್ತ ಅನೇಕ ವಿವಾದಗಳೆದ್ದಿವೆ. ಬಂಜಗೆರೆಯವರ ನಿಲುವು ಅನೇಕರಿಗೆ ಮುಜುಗರ ಉಂಟು ಮಾಡಿದೆ. ‘ಬಸವಣ್ಣ ಮಾದಿಗನಿರಬಹುದು’ ಎನ್ನುವ ಸಂಗತಿಯನ್ನು ಅಷ್ಟಾಗಿ ಸ್ವೀಕರಿಸಿದ ಮನಸ್ಥಿತಿಯನ್ನು ನಾವಿಂದ ಕಾಣುತ್ತಿದ್ದೇವೆ. ಇನ್ನೂ ಕೆಲವರು ಕೃತಿಯನ್ನು ಜನಪ್ರಿಯತೆಗಾಗಿ ಹೆಣೆಯಲಾಗಿದೆ ಎಂತಲೂ ಪ್ರಚಾರ ಮಾಡುತ್ತಿದ್ದಾರೆ. ಕೃತಿಯ ಒಳಗಣ ಹೂರಣ ಚರ್ಚೆಯಾಗುವುದು ಆರೋಗ್ಯಪೂರ್‍ಣ ವಿಚಾರಮಂಥನದಿಂದ ಸಾಧ್ಯ. ಆದರೆ ಜಯಪ್ರಕಾಶರು ಎತ್ತಿರುವ ವಿಷಯವನ್ನು ಚರ್ಚಿಸದೆ ಅನಾದರದಿಂದ ನೋಡುವುದು, ಸರಳಗೊಳಿಸಿಕೊಂಡು ಅಭಿಪ್ರಾಯ ವ್ಯಕ್ತಪಡಿಸುವುದು ಎಲ್ಲವೂ ಅಪ್ರಜಾಸತ್ತಾತ್ಮಕ ನಿಲುವುಗಳು ಎನ್ನಬಹುದು.

ಇಂದು ಜಾತಿ, ಧರ್‍ಮದ ವಿಷಯಗಳು ಆತ್ಯಂತ ಸೂಕ್ಷ್ಮ ವಿಷಯಗಳಾಗಿದ್ದು, ಯಾರು ಏನು ಮಾತನಾಡಿದರೂ ಪರಿಸ್ಥಿತಿ ಕೆಡುವ೦ತಿದೆ. ಆಯಾ ಜಾತಿಯ/ಧರ್‍ಮದ ಹಿತಾಸಕ್ತಿಗಳನ್ನು ರಕ್ಷಿಸುವ ಮಾತುಗಳು ಮಾತ್ರ ಒಪ್ಪಿಗೆಯಾಗುವ ಸ್ಥಿತಿಯಲ್ಲಿದ್ದು, ಇದಕ್ಕೆ ಮಿಕ್ಕು ಮೀರಿ ಮಾತನಾಡಿದವರು ತಲೆದಂಡ ತೆರಬೇಕಾದ ಅಪಾಯಕಾರಿ ಸಮಾಜ ಸೃಷ್ಟಿಯಾಗುತ್ತಲಿದೆ. ಇದರಿಂದ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಧಕ್ಕೆಯಾಗುವುದರೊಂದಿಗೆ ಚರ್ಚೆಗೆ ಸಿದ್ದವಿರುವ ಬಾವಿಕಪ್ಪೆಗಳ ಸಂಖ್ಯೆ ವೃದ್ಧಿಸುತ್ತಿದೆ. ಇದು ದಿಗಿಲು ಹುಟ್ಟಿಸುವ ವಿಷಯ. ಇದಲ್ಲದೆ ಜಾತಿಯ ಸಂಗತಿ ಮೇಲ್ನೋಟಕ್ಕೆ ಸೆಕ್ಯುಲರ್ ಸಮಾಜದಲ್ಲಿ ಆಪ್ರಸ್ತತವೆಂಬಂತೆ ಕಂಡರೂ ಅದು ಆಷ್ಟು ಸುಲಭದ ಮಾತಾಗಿಲ್ಲ. ಜಾತಿಯ ಸಮಸ್ಯೆಗಳು ವಿದಳನಗೊಳ್ಳುತ್ತ ಆಳದಲ್ಲಿ ಸ್ಪೋಟದ ಆತಂಕವನ್ನು ಜ್ವಾಲಾಮುಖಿಯಂತೆ ಬಚ್ಚಿಟ್ಟುಕೊಂಡಿದೆ.

‘ಆನುದೇವಾ ಹೊರಗಣವನು…’ ಕೃತಿಯ ಬಗ್ಗೆ ಮೊಟ್ಟ ಮೊದಲ ಆಪಾದನೆ ಉದಾರವಾದಿ ನಿಲುವಿನದು. ಬಸವಣ್ಣನ ಜಾತಿಯ ಪ್ರಶ್ನೆ ಈಗೇಕೆ? ಬಸವಣ್ಣನ ಜಾತಿಯನ್ನು ಮೀರಿ ಆವನ ತತ್ತ್ವಾದರ್‍ಶನಗಳು ಮುಖ್ಯವಲ್ಲವೆ? ಈ ಪ್ರಶ್ನೆಗಳು ಸಮಸ್ಯೆಯನ್ನು ತೆಳುಗೊಳಿಸುವುದರ ಜೊತೆಗೆ ಹುಸಿ ಜಾತ್ಯಾತೀತವನ್ನು ಮುಂದೊಡ್ಡಿವೆ. ಇರುವ ಗಾಯವನ್ನು ಇಲ್ಲ ಎಂದು ಹೇಳಬಹುದೇ. ಕನ್ನಡಸಾಹಿತ್ಕ ಚರಿತ್ರೆಯನ್ನು ಅವಲೋಕಿಸಿದರೆ ಸಾಕು, ಅದು ಜಾತಿ ಧರ್‍ಮದ ಆಧಾರವಿಲ್ಲದೆ ಇಲ್ಲ ಎನ್ನುವುದು ತಿಳಿಯುತ್ತದೆ. ಜೈನಯುಗ, ಬ್ರಾಹ್ಮಣಯುಗ, ವೀರಶೈವಯುಗ ಇತ್ಯಾದಿಯಾಗಿ ವಿಭಜಿಸಿಕೊಂಡಲ್ಲದೆ ಕನ್ನಡ ಸಾಹಿತ್ಯ ಪರಿಚಯವಾಗುವುದಿಲ್ಲ. ಪಂಪ ‘ಮುನ್ ಬ್ರಾಹ್ಮಣ’ ಆಮೇಲೆ ಜೈನನಾದೆ ಎಂದು ಹೇಳಿಕೊಳ್ಳುತ್ತಾನೆ. ಹಾಗೇ ಎಲ್ಲ ಬರಹಗಾರರಲ್ಲು ತಮ್ಮ ಜಾತಿಯ ಬಗೆಗಿನ ಹೆಮ್ಮೆ, ಕೀಳರಿಮೆಗಳು ಕಾಡಿದಂತಿದ್ದು, ನಾವು ಓದುವಾಗಲೂ ಸಹ ಓದುಗರಾಗಿ ಲೇಖಕರ ಕೃತಿಗಳನ್ನು ಅವರ ಜಾತಿ/ಧರ್‍ಮದ ಮೂಲ, ಹಿನ್ನೆಲೆ ತಿಳಿಯದೆ ಓದುವುದು ಸಾಧ್ಯವಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಆಧುನಿಕ ಕಾಲದಲ್ಲೂ ಈ ವಿಧಾನ ನಿಂತಿಲ್ಲ. ಕುವೆಂಪು ಅಂತಹ ಕವಿಯನ್ನು ಸಹ ಜಾತಿ ಆಧಾರವಿಲ್ಲದೆ ಅವರ ಸಾಂಸ್ಕೃತಿಕ ಕೊಡುಗೆಯನ್ನು ಗಮನಿಸಲಾಗಿಲ್ಲ. ದೇವನೂರು, ಮೊಗಳ್ಳಿ, ಸಿದ್ದಯ್ಯ ಇವರನ್ನೆಲ್ಲ ದಲಿತ ಲೇಖಕರು ಎಂದು ವಿವೇಚನೆ ಮಾಡಿಕೊಂಡೇ ಅವರ ಕೃತಿಯ ಪ್ರವೇಶ ಮಾಡುತ್ತೇವೆ; ಅನುಸಂಧಾನ ಮಾಡುತ್ತೇವೆ. ಬಸವಣ್ಣನ ಜಾತಿ ನಿಶ್ಚಿತೆತೆಯು ಅವನ ಸಾಹಿತ್ಯಕ್ಕೆ ಒಂದು ಹೊಸ ದ್ಯಷ್ಟಿಕೋನಗಳನ್ನು ಕೊಡುವಂತಿದ್ದರೆ, ಅವನು ಬ್ರಾಹ್ಮಣನೋ ಮಾದಿಗನೋ ಎಂದು ಪ್ರಸ್ತತಪಡಿಸುವುದರಲ್ಲಿ ಬಹುಶಃ ತಪ್ಪೇನೂ ಇಲ್ಲ. ಅಷ್ಟಕ್ಕೂ ಪುನರ್ ಪರಿಶೀಲನೆಯ ತತ್ತ್ವಕ್ಕೆ ಸಂಶೋಧನೆಯಲ್ಲಿ ಸದಾ ಸ್ವಾಗತವಿದೆ.

ಇನ್ನೊಂದು ಮುಖ್ಯ ಪಶ್ನೆಯನ್ನು ಇಲ್ಲಿ ಕೇಳಬಹುದು. ಬಸವಣ್ಣ ಬ್ರಾಹ್ಮಣನಾಗಿಲ್ಲದೆ ಮಾದಿಗನಾಗಿದ್ದರೆ ನೋವಾಗುವುದು ಯಾಕೆ? ಅದರಲ್ಲೂ ಅವನು ಯಾವ ಜಾತಿಯವನಾದರೇನು. ಬಸವಣ್ಣ ಮಾದಿಗನೆಂದರೆ ಕನ್ನಡ ಸಾಹಿತ್ಯದ ದಿಕ್ಕುದೆಸೆಗಳು ಪ್ರಗತಿಶೀಲವೂ, ಕ್ರಿಯಾಶೀಲವೂ ಆಗಿದ್ದೀರಬಹುದೆಂದು ಹೆಮ್ಮೆಯಿಂದ ಹೇಳಬಹುದಲ್ಲವೆ. ಆದರೆ ವಿಷಯ ಇರಿಸುಮುರಿಸು ಉಂಟು ಮಾಡುತ್ತಿರುವುದು ಸಾಂಸ್ಕೃತಿಕ ಯಜಮಾನಿಕೆಯನ್ನು ಹೊತ್ತ ಕೆಲವು ಪಟ್ಟಭದ್ರರಿಗೆ. ಇವರನ್ನು ಬಿಟ್ಟರೆ, ಸಂಸ್ಕೃತೀಕರಣ, ಬ್ರಾಹ್ಮಣೀಕರಣದ ಅಲೆಯಲ್ಲಿ ತೇಲುತ್ತ, ತಮ್ಮ ಜಾತಿಯ ಪೂರ್ವಸ್ಮರಣೆಯನ್ನು ಮರೆತ ಉನ್ನತೀಕರಣಗೊಂಡ ಹಿಂದುಳಿದ ಜಾತಿ/ವರ್‍ಗಗಳಿಗೆ ಇದು ಮುಜುಗರದ ವಿಷಯ.

ಬಂಜಗೆರೆಯವರ ಪುಸ್ತಕದ ನಿಲುವುಗಳು ಭೌತವಾದಿ ವಿಶ್ಲೇಷಣೆಗೆ ಹತ್ತಿರವಿದ್ದು, ಸಬಾಲ್ಟ್ರನ್ ಚರಿತ್ರೆಯ ಬಗ್ಗೆ ಸುದೀರ್ಘ ವಿವರಣೆಯನ್ನು ಹಿನ್ನೆಲೆಯಾಗಿ ಒದಗಿಸಿರುವ ಜಯಪ್ರಕಾಶರಿಗೆ ಚರಿತ್ರೆ ಇಂದು ಬಹುಮುಖೀ ಚರ್ಚೆಯ ವಿಷಯ ಎಂಬ ಅರಿವು ಖಂಡಿತವಾಗಿಯೂ ಇದೆ. ಡಿ.ಡಿ. ಕೊಸಾಂಬಿಯವರಂತಹ ಇತಿಹಾಸಕಾರರ ಮಾದರಿಯನ್ನು ಜಯಪ್ರಕಾಶ್ ಅವರು ಬೆಂಬಲಿಸುತ್ತಾರೆ. ಸಾಂಸ್ಕೃತಿಕ, ಸಾಮುದಾಯಿಕ ನೆಲೆಗಳಿಂದ ಚರಿತ್ರೆಯ ಪುನರ್ ನಿರ್‍ಮಾಣದಲ್ಲಿ ತೊಡಗಿಕೊಂಡ ಕೊಸಾಂಬಿ ಒಂದೆಡೆ ಹೇಳುತ್ತಾರೆ, “ಒ೦ದು ಪ್ರಾಂತದ ದೊರೆ ಯಾರಾಗಿದ್ದ ಎನ್ನುವ ಪ್ರಶ್ನೆಗಿಂತ ಆ ಪ್ರಾಂತದ ಜನರಿಗೆ ನೇಗಿಲನ್ನು ಬಳಸುವುದು ತಿಳಿದಿತ್ತೋ ಇಲ್ಲವೋ ಎನ್ನುವುದೇ ಹೆಚ್ಚು ಮುಖ್ಯವೆನಿಸುವ ಪ್ರಶ್ನೆ”. ಸಮಾಜಶಾಸ್ತ್ರ ಮತ್ತು ಪ್ರಾಕ್ತನಶಾಸ್ತ್ರಗಳಿಂದ ಪ್ರೇರಿತರಾದ ಇತಿಹಾಸಕಾರರ ವಿಧಾನವೇ ಜಯಪ್ರಕಾಶರ ವಿಶ್ಲೇಷಣೆಗು ಮೂಲವಾಗಿದೆ. ಅವರದು ಸಮಾಜಶಾಸ್ತ್ರೀಯ ಮತ್ತು ಸಾಂಕೃತಿಕ ನೆಲೆಗಟ್ಟುಗಳಿಂದ ಹೊರಟ ಸಂಶೋಧನಾ ಮಾದರಿ.

ಬಂಜಗೆರೆಯವರ ಪ್ರಕಾರ ೧೨ ನೆಯ ಶತಮಾನದ ಚಳವಳಿಯು ತಳವರ್ಗದಿಂದ ಹುಟ್ಟಿದ್ದು, ಅದನ್ನು ಮುನ್ನಡೆಸಿದವರು ಹೆಚ್ಚಾಗಿ ಕುಶಲಕರ್ಮಿಗಳು- ಅವರ ಪುಸ್ತಕದಲ್ಲಿ ಅವರು ನೀಡುವ ಆಕರ ಮತ್ತು ವಿವರಣೆಯಂತೆ, “ಇಡೀ ಭಾರತದಲ್ಲಿ ಅವೂರ್‍ವವೆನಿಸಿದ ಸಾಮಾಜಿಕ ಕ್ರಾಂತಿಯೊಂದರ ಮುಖ್ಯ ಪಾತ್ರಧಾರಿಗಳು, ನೇತಾರರೆಲ್ಲ ಹೇಮಾದ್ರಿಯ ‘ಚತುರ್ವರ್ಗ ಚಿಂತಾಮಣಿ’ಯ ಪ್ರಕಾರ ಆಗ ಅಸ್ಪೃಶ್ಯಜಾತಿಗಳಿಗೆ ಸೇರಿದವರಾಗಿದ್ದರು” (ಪು. ೬೧). ಇದಕ್ಕಾಗಿ ಜಯಪ್ರಕಾಶರು ಸಾಂಸ್ಕೃತಿಕ ಆಕರಗಳನ್ನು ಶೋಧಿಸುತ್ತ, ಮೌಖಿಕ ಪರಂಪರೆಯಲ್ಲಿರಬಹುದಾದ ಮಿಥ್‌ಗಳನ್ನು ಶೋಧಿಸಿಕೊಂಡಿದ್ದಾರೆ. ಕೊಸಾಂಬಿಯವರ ಪ್ರಕಾರ ಮಿಥ್‌ಗಳು ಬಹುಮುಖ್ಯ ಆಕರಗಳು. ಬಂಜಗೆರೆಯವರು ಈವರೆಗಿನ ಸಂಶೋಧನೆಗಳು ಆಧರಿಸಿರುವ ಶಾಸನ ಮತ್ತು ಕಾವ್ಯಗಳು ಹೇಗೆ ಸ್ವಯಂಪೂರ್‍ಣವಲ್ಲ ಎನ್ನುವುದರ ಕಡೆಗೆ ಬೆರಳು ಮಾಡಿ ತೋರಿಸಿದ್ದಾರೆ ಮತ್ತು ಸಾಂಸ್ಕೃತಿಕ ಆಕರಗಳು ಮತ್ತು ಮಿಥ್‌ಗಳನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರೆ. ಬಹುತೇಕ ಎಲ್ಲಾ ವಚನಕಾರರಿಗು ಜಾತಿ ಸಂಬಂಧಿಯಾದ ವಿಶೇಷಣ ಇದ್ದು (ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ ಹೀಗೆ), ಬಸವಣ್ಣನಿಗೆ ಇಲ್ಲದಿರುವ ಬಗ್ಗೆ ನಮ್ಮ ಗಮನ ಸೆಳೆಯುವ ಕೃತಿಕಾರ, ಬಾಲಬಸಪ್ಪಗಳ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ ಬಸವಣ್ಣ ‘ಕರಸಂಜಾತ’ನಾದ ಕಾರಣ, ತನ್ನ ಜಾತಿಯ ಬಗ್ಗೆ ಇಬ್ಬಂದಿಯಾಗಿ ಕಾಣುತ್ತಾನೆ-ಎನ್ನುವುದು ಇಲ್ಲಿ ಚರ್ಚಿತವಾಗಿರುವುದು ಮುಖ್ಯ. ಹನ್ನೆರಡನೆಯ ಶತಮಾನವು ಸಂಕ್ರಮಣದ ಕಾಲ- ಸಾಂಸ್ಕೃತಿಕವಾಗಿ ಪಲ್ಲಟಗಳನ್ನು ಕಂಡ ಕಾಲ. ಸಾಂಸ್ಕೃತಿಕ ವೀರರು ಹುಟ್ಟಿರುವುದೆಲ್ಲ ಸಾಮಾನ್ಯವಾಗಿ ಇಂತಹ ಸಂದರ್‍ಭದಲ್ಲಿಯೇ. ಜಾನಪದವು ಸಂಕಥನಗಳಲ್ಲಿ ಮಾಡಿಕೊಳ್ಳುವ ಸ್ವೀಕರಣ ನಿರಾಕರಣಗಳು ಮುಖ್ಯವಾಹಿನಿಯೆಂದು ಹೇಳುವ ಸಂಸ್ಕೃತಿಗಿಂತ ಭಿನ್ನವಾಗಿರುತ್ತವೆ. ಜಾನಪದ ಸಂಸ್ಕೃತಿಯಲ್ಲಿ ಜಾತಿಯ ಹಂಗಿಲ್ಲದೆ ಒಪ್ಪಿಕೊಳ್ಳಲಾಗಿದೆ. ಈ ಕಾರಣವನ್ನೇ ಇಟ್ಟುಕೊಂಡು ನೋಡುವುದಾದರೆ, ಬಸವಣ್ಣ ಮಾದಿಗಮೂಲದವನಾದರು ಸಾಂಸ್ಕೃತಿಕವಾಗಿ ಒಪ್ಪಿತವಾದ ವೀರ ಎಂದು ಒಪ್ಪಿಕೊಳ್ಳಬಹುದು. ಕನಕದಾಸರಂತಹ ಕೆಳಚಾತಿಯ ಭಕ್ತ, ಕಬೀರನಂತಹ ಆನ್ಯಧರ್ಮೀಯ ಸಾಂಸ್ಕೃತಿಕ ಪಲ್ಲಟಗಳ ಕಾರ್‍ಅಣದಿಂದಲೇ ನಮಗೆ ದಕ್ಕಿದ್ದಾರೆ. ಜನಪದವು ತನ್ನ ದೇಸಿ ಪರಂಪರೆಯನ್ನು ಪೋಷಿಸಿಕೆ‌ಎಳ್ಳುವುದು ಒಂದು ಆಧ್ಯಾತ್ಮಿಕ ಹಿನ್ನಲೆಯ, ಜೀವಪರವಾದ ನಿಲುವಿನಿಂದ. ಅಲ್ಲಿಂದ ಹೊರಟು ತನ್ನದೇ ಆದ ಒಂದು Social matrix ಅನ್ನು ರೂಪಿಸಿಕೊಂಡಿರುತ್ತದೆ. ಇದು ಚಾರಿತ್ರಿಕವಾಗಿಯೂ ಪ್ರಮಾಣವಾದಂತಹ ಸಿದ್ಧಾಂತ. ಹಾಗಾಗಿಯೇ ಇಲ್ಲಿ ಭಕ್ತಿ ಚಳವಳಿಗಳು, ಸುಧಾರಣಾ ನಿಲುವಿನಿಂದ ಕಂಗೊಳಿಸಿ, ಸಮಾಜವನ್ನು ಕಟ್ಟಲು ಬಯಸಿದ್ದು. ಹಾಗಾಗಿಯೇ ಮಾದೇಶ್ವರ, ಮಂಟೇಸ್ವಾಮಿ, ಅಲ್ಲಮ, ಸಿದ್ದದಾಮನಂತಹ ವಚನಕಾರರು ಕನಕ, ಕಬೀರರಂತಹ ಭಕ್ತರು ಹುಟ್ಟಲು ಸಾಧ್ಯವಾಗಿದ್ದು. ಈ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬಸವಣ್ಣನ ಜಾತಿಮೂಲವನ್ನು ನೋಡಬೇಕಾಗಿದೆ. ಸಾಂಸ್ಕೃತಿಕ ಪಲ್ಲಟಗಳು ಸಂಭವಿಸುತ್ತಿದ್ದ ಕಾಲದಲ್ಲಿ ಬಂದ ಬಸವಣ್ಣ ಬ್ರಾಹ್ಮಣನಾಗಿ ಬ್ರಾಹ್ಮಣತ್ವ ತ್ಯಜಿಸಿ ಬಂದು, ಸುಧಾರಕನಾದ ಎನ್ನುವುದಕ್ಕಿಂತ ಮಾದಿಗನಾಗಿ ಹುಟ್ಟಿ, ದೀಕ್ಷೆ ಪಡೆದು ಆಧ್ಯಾತ್ಮಿಕ ಶ್ರದ್ಧಾಭಾವಗಳಿ೦ದ ಒಂದು ಸಾಂಸ್ಕೃತಿಕ/ಸಾಮಾಜಿಕ ಚಳವಳಿಯ ಚುಕ್ಕಾಣಿ ಹಿಡಿದ ಎನ್ನುವುದು ಸಾಂದರ್ಭಿಕವಾಗಿಯೂ ಹೊಂದುವಂತಿದೆ. ಬಹುಶಃ ಬಂಜಗೆರೆಯವರಿಗೆ ಇರುವ ಕಳಕಳಿ ಅವನ ಜಾತಿ ಯಾವುದು ಎಂದು ನಿರೂಪಿಸುವುದಕ್ಕಿಂತ, ಆ ಕಾಲದ ಚಾರಿತ್ರಿಕ ಘಟನೆಗಳು ಬೆರಳು ಮಾಡಿ ತೋರಿಸುತ್ತಿರುವ ಸಾಂಸ್ಕೃತಿಕ ಪಲ್ಲಟಗಳು, ಮತ್ತು ಅಲ್ಲಿಂದ ಹುಟ್ಟಿರುವ ತಳವರ್ಗದ ಬಸವಣ್ಣನಂತಹ ಅನೇಕ ಚೇತನಗಳ ಬಗ್ಗೆ ಎಂದು ನನ್ನ ನಂಬಿಕೆ.
(ಹೊನ್ನಾರು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಪನ ಒರತೆ
Next post ಬಡವನ ಆಸೆ

ಸಣ್ಣ ಕತೆ

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys