ಪಂಪನ ಒರತೆ

(ಸಾವಿರ ವರ್ಷದ ಹಬ್ಬದಲ್ಲಿ)

ಪದಿನೂರು ನೆರೆಯೆ, ಪಿರಿದೊಸಗೆ ಮೆರೆಯೆ,
ಪುಲಿಗೆರೆಯ ತಿರುಳ ಕನ್ನಡದ ಪುರುಳ
ರಸರಸದ ಬಾವಿ ಮನೆಮನೆಗೆ ತೀವಿ
ತನ್ನೆರಡು ಪಾಟ್ಟು ಮೆಸೆಯೆ, ನೆಲನೊಸೆಯೆ,
ತನ್ನ ಸೆರಪೇ ಸೆರಪು,
ತನ್ನ ತೇಜಮೆ ತೇಜಮ್
ಎನೆ ಬೆಳಪ ಪಂಪನ್
ಎಮ್ಮ ತಾಯ್ನುಡಿಗೀಗೆ ಪೊಸಪೊಸತು ಪೊಂಪನ್ !

ಓ ಪಂಪ, ಗುರುಪಂಪ, ಏನ್ ನೋನ್ತ ನೋನ್ಪಿಯೋ,
ಏನ್ ಪಾರ್‍ತ ಪಾರ್‍ಪೋ,
ಕಡೆದಿಟ್ಟೆ ಕಬ್ಬದೊಳ್ ಸಂಸಾರಸಾರಮನ್,
ಮಾನಮನ್, ದಾನಮನ್, ಧೀರ ಗಾಂಭೀರ್‍ಯಮನ್,
ಧರ್‍ಮಮನ್, ಕರ್‍ಮಮನ್, ಶಿವಪದದ ಮರ್‍ಮಮನ್,
ಸರ್‍ವಸ್ವಮನ್ !
ನಿನ್ನು ನಿರ್‌ ತುಂಬಿ,
ನಂಬುವುದೆ ನಂಬಿ,

ರನ್ನನುಂ, ಚಾವುಂಡರಾಯನುಂ ಕಂಡರ್
ಬೆಳ್ಗೊಳದ ಕಗ್ಗಲ್ಲ ಕೋಡಿನೊಳ್ ದೇವರಾ ಬಿಂಬಮನ್,
ಕಂಡು ಕಡೆದಿಟ್ಟರ್
ಪಾರುವಾ ಪಾರ್‍ಪೊಂದನಿಳೆಗೆ ತಡೆದಿಟ್ಟರ್-
ಕಲೆಯ ಸೌಂದರ್‍ಯಂ, ಜೀವದೌನ್ನತ್ಯಂ,
ತಪದೊಂದು ಭಾಗ್ಯಂ, ಕ್ರಾಂತಿಯೊಳ್‌ ಶಾಂತಿ,
ಪಸುಳೆವೋಲ್ ನಿಲ್ವಾಳ ನಿಲವು !
ಏನ್ ಚೆಲ್ವು ಚೆಲ್ವು !

ಓ ಪಂಪ, ನೀನ್ ತುಂಬಿ ತೊರೆದೋರೆತೆ ಪರಿವುದಿನ್ನು೦.
ಸಾವಿರಂ ಸಂದುಮದು ಪರಿವುದಿನ್ನುಂ
ಅದನೆ ಬಸವಣ್ಣನ್,
ಅದನೆ ಕುವರವ್ಯಾಸನ್
ಇನ್ನೊಮ್ಮೆ ಸಾರಿದ‌ರ್‌ ತಮ್ಮ ಕಣ್ಣಿನ್ ಕಂಡು
ಪೊಸಪೊಸತು ಪರಿಯಿನ್,
ಆಳ ಬಾಳನ್ ಕಡೆವ ಶಿವಕಲೆಯ ಕೃಪೆಯಿನ್ :
ಅದು ಶಿವಂ, ಸತ್ಯಮದು, ಸುಂದರಂ.
ಗುರು ಪಂಪ, ಓ ತಂದೆ ಪಂಪಾ,
ತೆಂಕನಾಡನ್ ಮರೆಯಲಾರದೆಲೆ ಜೀವಾ,

ಮರೆಯದಿರು, ಪರಸು, ಪರಸೆಮ್ಮನ್,
ಪಳೆಯ ಕರ್ನಾಟಕಂ ಮತ್ತೊರ್‍ಮೆ ಕಟ್ಟುಗೆ !
ಎಳೆಯ ಕರ್ನಾಟಕಂ ಪೊಸಪುಟ್ಟು ಪುಟ್ಟುಗೆ !
ಪಿರಿಯತನಮನ್ ಮರೆತ ಕಿರುಮಕ್ಕಳನ್ ಪರಸು,
ಪರಸು ನೀನೆಮ್ಮನ್.
*****
೧೯೪೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಡಿಸು ನನ್ನ ಜಾಡಿಸು ನನ್ನ
Next post ‘ಆನುದೇವಾ ಹೊರಗಣವನು…’ ಒಂದು ಪ್ರತಿಕ್ರಿಯೆ

ಸಣ್ಣ ಕತೆ

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…