ಧರ್ಮ ಸಮಾಜ ಮತ್ತು ಮೀಸಲಾತಿ

ಧರ್ಮ ಸಮಾಜ ಮತ್ತು ಮೀಸಲಾತಿ

scan0043
ಚಿತ್ರ: ಅಪೂರ್ವ ಅಪರಿಮಿತ

ಮೊದಲಿನಿಂದಲೂ ಅಂದರೆ ಪ್ರಾಚೀನಕಾಲದಿಂದಲೂ ಈ ಮೀಸಲಾತಿ ಇದ್ದಿತೆ? ಸ್ವಾತಂತ್ರ್ಯಾನಂತರ ಹರಿಜನರ ಉದ್ಧಾರಕ್ಕಾಗಿ ಸರ್ಕಾರ ಮೀಸಲಾತಿ ಜಾರಿಗೆ ತಂದಿತು. ಈಗ ಇದರ ಬಗ್ಗೆ ಕಿಸರುಗಣ್ಣುಬಿಡುವವರ ಸಂಖ್ಯೆ ಹೆಚ್ಚುತ್ತಿದೆ, ಮೀಸಲಾತಿ ಪಡೆಯುವವರ ಬಗ್ಗೆ ಅಸೂಯೆ ಹಲವು ಮನಗಳಲ್ಲಿ ಮನೆ ಮಾಡುತ್ತಿದೆ. ಯಾಕೆ ಹೀಗೆ? ಮೀಸಲಾತಿ ಜಾರಿಗೆ ಬರಲು ಏನು ಕಾರಣ ? ಪ್ರಾಚೀನದಲ್ಲೂ ಈ ಮೀಸಲಾತಿ ಇತ್ತೆ?

ಇತ್ತು ಆಗ ಬ್ರಾಹ್ಮಣರಿಗಿತ್ತು. ರಾಜಮಹಾರಾಜರುಗಳು ಪಾಳೇಗಾರರು, ಜಮೀನುದಾರರ ಕಾಲದಲ್ಲಿ ಭೂಸುರರೆಂಬ ಹೆಗ್ಗಳಿಕೆಗೆ ಪಾತ್ರರಾದ ಬ್ರಾಹ್ಮಣರಿಗೆ ಗೌರವಪೂರ್ವಕವಾಗಿ ಗೋದಾನ, ಭೂದಾನ ದತ್ತಿ ಕಾಣಿಕೆಗಳನ್ನು ನೀಡುತ್ತಿದ್ದರಲ್ಲದೆ ರಾಜಾಸ್ಥಾನಗಳಲ್ಲಿ ಅವರಿಗೆ ಬಹು ಸುಲಭವಾದ ನೇಮಕಾತಿಯೂ ಇತ್ತು, ಹಲವು ರಿಯಾಯಿತಿಗಳೂ ಇದ್ದವು. ವಿದ್ಯೆಯ ಗುತ್ತಿಗೆ ಹಿಡಿದಿದ್ದ ಅವರು ಅವತ್ತೇ ಉಳಿದವರಿಗೆ ವಿದ್ಯಾದಾನ ಮಾಡದಿದ್ದರೆ ವಿದ್ಯೆಗೆ ಮೇಲ್‌ ಜಾತಿಯ ಸಂಕೋಲೆ ತೊಡಿಸದೆ ಹೋಗಿದ್ದರೆ ಕರುಣೆಯಿಂದ ಕೆಳಗಿನವರನ್ನು ಕಂಡಿದ್ದರೆ, ಕೈಹಿಡಿದೆತ್ತುವ ಔದಾರ್ಯ ತೋರಿದ್ದರೆ ಈವತ್ತು ಮೀಸಲಾತಿಯಿಂದ ದೇಶ ನರಳುವ ನಾರುವ ಸ್ಥಿತಿ ಬರುತ್ತಿರಲಿಲ್ಲ.

ಹಿಂದಿನವರು ಮಾಡಿದ್ದಕ್ಕೆ ನಮಗೆ ಶಾಪವೆ, ನಾವೀಗ ಜವಾಬ್ದಾರರೇ ಎಂದು ಹಪಹಪಿಸುವ ಈ ಜನ ಹಿಂದಿನವರ ಆಸ್ತಿಪಾಸ್ತಿಗಳಲ್ಲಿ ಪಾಲು ಪಡೆವಂತೆ ಶಾಪದಲ್ಲೂ ಪಾಲಿರುತ್ತದೆಂಬುದನ್ನು ಅರಿಯಬೇಕು. ಶಾಪದ ರೂಪದಲ್ಲೀಗ ಮೀಸಲಾತಿ ಕಾಡುತ್ತಿದೆಯಷ್ಟೆ – ಕಾಡಲಿ.

ಪಂಚಮರನ್ನು ಬ್ರಾಹ್ಮಣರು ಮಾತ್ರವೇ ಶೋಷಿಸಲಿಲ್ಲ. ಎಲ್ಲಾ ನಾಲ್ಕು ವರ್ಗದವರು ಸೇರಿಯೇ ಶೋಷಿಸಿದ್ದಾರೆ. ದಲಿತರನ್ನಷ್ಟೇ ಅಲ್ಲ ಸ್ತ್ರೀಯರನ್ನೂ ಈ ದೇಶದ ಧರ್ಮಗಳು ಶೋಷಣೆ ಮಾಡಿವೆ. ವೀರಶೈವ ಧರ್ಮ ಈ ದೇಶದಲ್ಲಿ ಹುಟ್ಟದೇ ಹೋಗಿದ್ದಿದ್ದರೆ ಸಮಾನತೆ, ಸ್ತ್ರಿಸ್ವಾತಂತ್ರಕ್ಕೋಸ್ಕರ ನಾವು ಗಾಂಧಿ, ಅಂಬೇಡ್ಕರ್ ಅಂತಹ ಮಹಾತ್ಮರು ಹುಟ್ಟಿಬರುವವರೆಗೂ ಕಾಯಬೇಕಿತ್ತು. ಇಷ್ಟಾದರೂ ಈ ಮಹಾತ್ಮರ ಬಗ್ಗೆ ನೆನೆದರೇನೆ ಭಯವಾಗುತ್ತೆ. ಒಬ್ಬೊಬ್ಬ ಮಹಾತ್ಮ ಹುಟ್ಟಿಬಂದಾಗಲೂ, ಒಂದೊಂದು ಹೊಸ ಜಾತಿ, ಅದರ ಹಿಂದೆ ನಾನಾ ಪಂಗಡಗಳು ಮರುಹುಟ್ಟು ಪಡೆದಿವೆ. ವೈದಿಕ ಧರ್ಮವನ್ನೇ ನೋಡೋಣ. ಮಧ್ವಾಚಾರ್ಯರು ಬಂದಿದ್ದರಿಂದ ಮಧ್ವಮತ ಹುಟ್ಟಿಕೊಂಡಿತು. ಶಂಕರಾಚಾರ್ಯರಿಂದ ಸ್ಮಾರ್ತರ ಬೇಧಭಾವ ಹುಟ್ಟಿ ಶ್ರೀರಾಮನುಜಾಚಾರ್ಯರಿಂದ ಶ್ರೀ ವೈಷ್ಣವಪಂಗಡ ಹುಟ್ಟಿಕೊಂಡಿತು. ವೈದಿಕರಲ್ಲೇ ಮೇಲುಕೀಳು ಭಾವನೆಗಳಾಗಿ ಭಾವೈಕ್ಯಕ್ಕೆ ಅಡ್ಡಿವುಂಟಾಯಿತು. ವೈದಿಕಧರ್ಮದಲ್ಲಿನ ಮೌಢ್ಯ ಕಂದಾಚಾರ ಕ್ರೌರ್ಯವನ್ನು ವಿರೋಧಿಸಿ ಹುಟ್ಟಿಕೊಂಡ ಬೌದ್ಧ ಧರ್ಮ – ಏನಾಯಿತು ? ಅದೂ ಒಂದು ಜಾತಿಯಾಯಿತು.

ನಂತರ ವೈದಿಕರನ್ನು ವಿರೋಧಿಸಿ ಜನ್ಮ ತಳೆದ ಜೈನಧರ್ಮ ಕೂಡ ಬರುಬರುತ್ತಾ ಜಾತಿರೂಪ ತಳೆಯಿತು. ಆಗ ಇವರನ್ನೆಲಾ ಪ್ರತಿಭಟಿಸಿ ಬಂದ ಚಾರ್ವಕ ಧರ್ಮ ಅಷ್ಟೇನು ಪ್ರಭಾವ ಬೀರದಿದ್ದರೂ ಅಂತಹ ಮನೋಧರ್ಮದ ಜನರನ್ನು ಹುಟ್ಟಿಹಾಕಿತು. ಅನಂತರ ವೈದಿಕ ಧರ್ಮವನ್ನು ಕಟ್ಟಾವಿರೋಧಿಸಿ ಹುಟ್ಟಿದ ಲಿಂಗವಂತಧರ್ಮ ಕೂಡ ಒಂದು ಜಾತಿಯಾಗಿ ವೀರಶೈವರು ವೈದಿಕರಿಗಿಂತ ಜಾತಿವಾದಿಗಳಾಗಿ ಧರ್ಮಮರೆತದ್ದು ಬಸವಣ್ಣನ ದುರ್ದೈವವೇ ಸರಿ.

ನ ಕೋಯಿ ಹಿಂದು ನ ಕೋಯಿ ಮುಸ್ಲಿಂ ಅಂತ ಭಾವೈಕ್ಯತೆ ಸಾರುತ್ತ ಹುಟ್ಟಿ ಕೊಂಡ ಗುರುನಾನಕರ ಸಿಖ್ ಧರ್ಮ ಕೂಡ ಜಾತಿಯಾಗಿ ಹೋಗಿದ್ದು ಈ ದೇಶ ಕಂಡ ಬಹು ದೊಡ್ಡ ದುರಂತ, ಬುದ್ಧ ಮಹಾವೀರ ಬಸವ ಗುರುನಾನಕ್ ರಂತಹ ಮಹಾತ್ಮರು ಹುಟ್ಟಿ ಕೂಡ ಈ ದೇಶ ಜಾತಿಭೂತದಿಂದ ಪಾರಾಗದೆ ಮಹಾತ್ಮರು ಸೃಷ್ಟಿಸಿದ ಧರ್ಮಗಳೆಲ್ಲಾ ಅವರ ಅನುಯಾಯಿಗಳಿಂದಾಗಿ ಜಾತಿ ರೂಪತಾಳಿ ದೇಶದ ಪ್ರಗತಿಗೆ, ಭಾವೈಕ್ಯತೆಗೆ ಮಾರಕವಾದದ್ದನ್ನು ಅವಲೋಕಿಸುವಾಗ ಮಹಾತ್ಮರ ಬಗ್ಗೆಯೇ ಭಯವಾಗುತ್ತದೆ. ಈ ದೇಶದಲ್ಲಿ ಮುಂದೆ ಮಹಾತ್ಮರ ಹುಟ್ಟು ಬೇಡ ಅನಿಸುತ್ತದೆ. ಪ್ರೀತಿ ಹುಟ್ಟಿಸಬೇಕಾದ ಜಾತಿಯಿಂದು ಭೀತಿ ಹುಟ್ಟಿಸುತ್ತಾ ಇದೆ.

ವೇದಗಳ ಕಾಲದಲ್ಲಿ ಜಾತಿಗಳಿಗೆ ಪ್ರಾಬಲ್ಯವಿರಲಿಲ್ಲ ಆಗಲೆ ಅಂತರ್ಜಾತೀಯ ವಿವಾಹಗಳು ನಡೆದಿದ್ದವು. ವಸಿಷ್ಟ ಅರುಂಧತಿ, ಜಮದಗ್ನಿ ರೇಣುಕಾ ಇಂತಹ ಅನೇಕ ಉದಾಹರಣೆಗಳಿವೆ. ‘ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮವಿಭಾಗಶಃ ’ ಅಂತ ಗೀತೆಯಲ್ಲಿ ಹೇಳಿದೆ. ಇಂತಹ ವೃತ್ತಿ ಇಂತಹ ಜನ ಮಾಡುತ್ತಾರೆ ಎಂದು ವಿಭಾಗಿಸಿದ್ದೇ ವರ್ಗವಾಗಿ ದೇಶವನ್ನೇ ವಿಭಾಗಿಸಲು ಹೊರಟಿದ್ದು ಶೋಚನೀಯ ಸಂಗತಿ. ಜಾತ್ಯಾತೀತ ದೇಶ ಹೆಸರಿಗೆ ಮಾತ್ರ, ಈವತ್ತಿಗೂ ಹಳ್ಳಿಗಳಲ್ಲಿ ಹೊಲೆಯರ ಕೇರಿ ಪ್ರತ್ಯೇಕವಾಗೇ ಇದೆ. ಹೋಟಲ್ ಗಳಲ್ಲಿ ಕಾಫಿ ಕೊಡೋಲ್ಲ, ಬಾವಿಗಳಲ್ಲಿ ನೀರು ಬಿಡೋಲ್ಲ, ಹಂದಿ, ನಾಯಿ, ಬೆಕ್ಕುಗಳನ್ನು ಮನೇಲಿ ಬಿಟ್ಟೊಳ್ಳೋ ಜನ ದಲಿತರನ್ನು ದನಕ್ಕಿಂತಲೂ ಕಡೆಯಾಗಿ ಕಾಣುತ್ತಾರೆ. ದನದಲ್ಲಿ ಮೂವತ್ತು ಮೂರು ಕೋಟಿ ದೇವರನ್ನು ಕಂಡು ಪೂಜಿಸುತ್ತಾರೆ. ಬಸವಣ್ಣನನ್ನೂ ಕಾಣಬಲ್ಲರು!

ಹಿಂದಿನಿಂದಲೂ ಹಿಂದುಳಿದ ವರ್ಗದವರ ಶೋಷಣೆ ನಡೆವುದು ತಪ್ಪಿಲ್ಲ. ಪುರಾಣ ಪ್ರಸಂಗವನ್ನೇ ಅವಲೋಕಿಸೋಣ. ಏಕಲವ್ಯನ ಬೆರಳನ್ನೇ ಗುರುದಕ್ಷಿಣೆಯಾಗಿ ಕೇಳಿ ದಲಿತರ ಪ್ರಗತಿಯನ್ನೇ ವಿರೋಧಿಸಿದ ಮೊದಲ ಬ್ರಾಹ್ಮಣ-ದ್ರೋಣ. ಆದರೆ ಈ ದ್ರೋಹವನ್ನು ಮರೆಮಾಚಿ ಏಕಲವ್ಯನ ಗುರುಭಕ್ತಿ ಎಂದೇ ಪ್ರಚಾರಕೊಡಲಾಯಿತೆ ವಿನಹ, ದ್ರೋಣನ ದ್ರೋಹ ಎಂದು ಹೈಲೈಟ್ ಮಾಡಲೇ ಇಲ್ಲ. ಶೂದ್ರ ಶಂಭೂಕನನ್ನು ವಿನಾಕಾರಣ ಕೊಂದ ಶ್ರೀರಾಮ ದೇವಪುರುಷನಾದ. ಕರ್ಣ ಕ್ಷತ್ರಿಯನಾದರೂ ಬೆಸ್ತನೆಂಬ ಕಲ್ಪನೆಯಿಂದಾಗಿ ಅವನ ನಾಶವೇ ಆಗಿಹೋಯಿತು. ರಾಮಾಯಣದಲ್ಲಿ ದಲಿತರನ್ನು ರಾಕ್ಷಸರಂತೆಯೇ ಚಿತ್ರಿಸಲಾಗಿದೆ. ಪುರಾಣಕಾಲದಿಂದ ಪ್ರಸ್ತುತದವರೆಗೂ ದಲಿತರ ಮೇಲೆ ದೌರ್ಜನ್ಯ ನಡೆಯೋದು ತಪ್ಪಲೇ ಇಲ್ಲ. ಇವರಿಗೆ ದೇವಾಲಯಗಳಲ್ಲಿ ಪ್ರವೇಶವಿಲ್ಲ. ಯಾಕೆ, ಅವರದ್ದೇ ಆದ ದೇವಾಲಯಗಳಿಲ್ಲವೆ ? ಆದರೂ ಮಾರಿ, ದುರ್ಗಿ, ಕಾಳಿ, ಭೈರೆದೇವರುಗಳನ್ನು ಫೋರ್ತ್ ಕ್ಲಾಸ್ ದೇವರುಗಳೆಂದೇ ಪರಿಗಣಿಸಲಾಗಿದೆಯೆ ! ಹಿಂದಿನ ಬೆಲ್ಚಿ ಪ್ರಿಪ್ರನಾರಾಯಣಪುರ ಪ್ರಕರಣದಿಂದ ಹಿಡಿದು ಇಂದಿನ ಬದನವಾಳುವರೆಗೂ ಹರಿಜನರ ಕಗ್ಗೋಲೆಯಾಗಿದೆ. ಹರಿಜನ ಹೆಂಗಸರ ಮಾನ ಹರಾಜಾಗಿದೆ.

ನಾವು ಎಷ್ಟೋ ಸಲ ಹೇಳ್ತೀವಿ. ಸರ್ಕಾರವೇ ಅವರ್ದು ಅಂತ. ಆದರೂ ಒಬ್ಬ ಹರಿಜನನೂ ಈ ದೇಶದ ಪಿ.ಎಂ. ಆಗಲಿಲ್ಲ. ಕನಿಷ್ಟ ಸಿ.ಎಂ. ಕೂಡ ಆಗಲಿಲ್ಲ. ಯಾಕೆ? ಮೇಲ್ವರ್ಗದವರ ತಂತ್ರ, ಕುತಂತ್ರ, ಲಾಬಿಗಳು ಇವರಿಗೊಲಿಯದ ಕಲೆ, ಅಂತಹ ಕಲೆಗಾರ್ತಿಯಾಗಿದಿದ್ದರೆ ಲಲಿತನಾಯಕ್ ರಾಜೀನಾಮೆ ಕೊಡುವಂತಹ ಪೆದ್ದು ಪ್ರಸಂಗವೇ ಸೃಷ್ಟಿಯಾಗುತ್ತಿರಲಿಲ್ಲ. ಮೀಸಲಾತಿ ಬಗ್ಗೆ ಮೊದಲಿನಿಂದಲೂ ವಿರೋಧ ಇತ್ತೆ ? ಖಂಡಿತ ಇರಲಿಲ್ಲ. ಇತ್ತೀಚೆಗಷ್ಟೆ ಶುರುವಾದದ್ದು. ಕಳೆದ ೫/೬ ವರ್ಷಗಳಲ್ಲಂತೂ ಮೀಸಲಾತಿಯನ್ನು ವಿರೋಧಿಸಿ ಬೆಂಕಿ ಹಚ್ಚಿಕೊಂಡು ಸಾಯುವಷ್ಟು ಕೆಲವರ ದೂರ್ತತನ ಪೊರೆ ಬಿಟ್ಟಿದೆ. ಇಂತಹ ವಿರೋಧ ಯಾಕೆ ? ಈ ದೇಶದಲ್ಲಿ ಜಾತಿ ಇರೋದು ಸುಳ್ಳಾ? ಅದಕ್ಕೆ ಜಾತಿ ಇರೋವರ್ಗೂ ಮೀಸಲಾತಿ ಅಗತ್ಯವಿದೆ. ಇಂತಹ ಪರಿಸ್ಥಿತಿ ಬರಬಾರ್ದು, ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವಂತಾಗಬಾರದು. ಮನುಷ್ಯರೆಲಾ ಒಂದೇ ಧರ್ಮ-ಅದು ವೀರಶೈವ ಧರ್ಮ ಅಂತ ಆಗಲೆ ಸಾರಿದ್ದ ಬಸವಣ್ಣ ೧೨ನೇ ಶತಮಾನದಲ್ಲೆ ಅಂತರ್ಜಾತೀಯ ವಿವಾಹವನ್ನು ನಡೆಸಿದ ಧೀರ. ಅದೇ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಅಷ್ಟೆ ಆಮೇಲೆ ? ಬಸವಧರ್ಮಿಯರು ಬಸವತತ್ವ ಮರೆತರು. ಅಂತರ್ಜಾತೀಯ ವಿವಾಹಗಳಲ್ಲಿ ಬೆರೆಯಲಿಲ್ಲ, ಬೆಂಬಲ ನೀಡಲಿಲ್ಲ, ಲಿಂಗವಂತ ಧರ್ಮ ಜಾತಿಯಾಗದೆ, ಬಸವಕ್ರಾಂತಿಯಂತೆ ಅನ್ಯ ಜಾತಿಗಳಲ್ಲಿ ವಿವಾಹಗಳಾಗಿದ್ದರೆ ಈವತ್ತು ಜಾತಿನೂ ಇರ್ತಾ ಇರಲಿಲ್ಲ ಮೀಸಲಾತಿನೂ ಇರ್ತಾ ಇರಲಿಲ್ಲ.

ಈವತ್ತಿಗೂ ಅಸ್ಪೃಶ್ಯತೆ ಇದೆ. ಸಾವಿರಾರು ವರ್ಷಗಳಿಂದ ಕಗ್ಗತ್ತಲಲ್ಲಿ ಇದ್ದವರು ಕೇವಲ ೫೪ ವರ್ಷಗಳಲ್ಲಿ ಮುಂದುವರೆದವರ ಸರಿ ಸಮಾನರಾಗಲು ಹೇಗೆ ಸಾಧ್ಯ? ಮೀಸಲಾತಿ ಈವತ್ತು ಅಸೂಯಾಪರರ ಆಡಿಕೆಯ ವಸ್ತುವಾಗಿಬಿಟ್ಟಿದೆ. ಮೀಸಲಾತಿಯಿಂದ ಓದಿದವರು, ಕೆಲಸಕ್ಕೆ ಸೇರಿದವರು, ದಡ್ಡರು, ಅದಕ್ಷರು. ಅಂತವರು ಡಾಕ್ಟರೋ, ಇಂಜಿನೀಯರೋ ಆದರೆ ಕಟ್ಟಡ ಉರುಳುತ್ತೆ ಪ್ರಾಣ ಉಳಿದೀತೆ ಅಂತ ಗೇಲಿ ಮಾಡೋದನ್ನ ಕೇಳಬಹುದು. ಇಂತವರು ಆಡಳಿತ ಹಿಡಿದರೆ ಕಛೇರಿ ನಡೆದೀತೆ ಅಂತ ಟೀಕೇನೂ ಇದೆ. ಆದರೆ ಈವರೆಗೂ ಅಂತಹ ದೂರುಗಳು ಮಾತ್ರ ಲಿಖಿತ ಮೂಲಕ ಕಾಣಲಿಲ್ಲ. ಕುಹಕಿಗಳಾಡುವ ಮಾತು ನಿಜವೇ ಆಗಿದ್ದಿದ್ದರೆ ಎಸ್.ಸಿ. ಡಾಕ್ಟರ್, ಎಸ್.ಸಿ. ಇಂಜಿನಿಯರ್ ಗಳ ಅಚಾತುರ್ಯದ ಬಗ್ಗೆ ಸುದ್ದಿ ಆಗ್ತಾ ಇರಲಿಲ್ವೆ? ಪತ್ರಿಕಾ ಮಾಧ್ಯಮ ಕೂಡ ಮುಂದುವರೆದವರ ಸೊತ್ತು. ಒಂದಿಷ್ಟು ಹೊಗೆಯಾಡಿದ್ದರೂ ಬೆಂಕಿನೇ ಹತ್ತಿಸಿಬಿಡ್ತಾ ಇದ್ದರು. ಖಂಡಿತ ಪರಿಸ್ಥಿತಿ ಹಾಗಿಲ್ಲ, ದಡ್ಡರು ಅರ್ಹತೆಯಿಲ್ಲದವರು, ಕೆಳಜಾತಿಯಲ್ಲಿ ಮಾತ್ರವುಂಟೆ ? ಮುಂದುವರೆದ ಜಾತಿಗಳಿಲ್ಲವೆ ? ಹಾಗೆ ನೋಡಿದರೆ ಮಹಾನ್ ಮೇಧಾವಿಗಳೆಲ್ಲಾ ಹಿಂದುಳಿದವರೆ. ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ಬರೆದ ವ್ಯಾಸ, ಭಗವದ್ಗೀತೆಯ ಕೃಷ್ಣ, ೧೬ನೇ ಶತಮಾನದಲ್ಲೆ ‘ಕಂದಾಚಾರವನ್ನು ಟೀಕಿಸಿದ ಕನಕದಾಸ’, ಕಬೀರ, ಸರ್ವಜ್ಞ , ಕಾಳಿದಾಸ ಯಾರೂ ಮೇಲು ಜಾತಿಯವರಲ್ಲ, ೧೨ನೇ ಶತಮಾನದ ಮಹಾನ್ ವಚನಕಾರರಾದ ಮಾದರ ಚನ್ನಯ್ಯ – ಡೋಹರ ಕಕ್ಕಯ್ಯ , ಹರಳಯ್ಯ, ಹರಳಯ್ಯನಿಂದ ಹಿಡಿದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ವರೆಗೂ, ಅಂಬೇಡ್ಕರ್ ರಿಂದ ಹಿಡಿದು ಇಂದಿನ ಒಡಲಾಳ, ಕುಸುಮಬಾಲೆಯಂತಹ ವಿಶಿಷ್ಟಕೃತಿಗಳನ್ನು ನೀಡಿದ ದೇವನೂರಮಹಾದೇವ ಎಲ್ಲರೂ ದಲಿತರೆ, ದಲಿತ ಬರಹಗಾರರೆ, ಬುದ್ದಿವಂತಿಕೆ ಯಾವ ಜಾತಿಯ ಗುತ್ತಿಗೆಯೂ ಆಲ್ಲ. ಈವತ್ತು ಮೀಸಲಾತಿ ಇಲ್ಲದೆ ಹೋಗಿದ್ದರೆ ನಾವೇನು ದೊಡ್ಡ ದೊಡ್ಡ ಅಧಿಕಾರಿಗಳಲ್ಲಿ ದಲಿತರನ್ನ ನೋಡ್ತಾ ಇದೀವಿ ಅಂತಹ ಅವಕಾಶದಿಂದಲೇ ವಂಚಿತನಾಗುತ್ತಿದ್ದೆವು. ಆದರೂ ಮೊದಲಿನಿಂದಲೂ ಕೀಳು ಜಾತಿಯವರ ಮೇಲಿನ ಲೇವಡಿ ನಡೆದೇ ಇದೆ. ದೇವರ ಮುಖದಿಂದ ಬ್ರಾಹ್ಮಣ, ಭುಜಗಳಿಂದ ಕ್ಷತ್ರಿಯ, ಹೊಟ್ಟೆಯಿಂದ ವೈಶ್ಯ, ಪಾದದಿಂದ ಶೂದ್ರ ಬಂದ ಅಂತ ಬಳಸುತಾರೆ. ಇದರರ್ಥ ಶೂದ್ರನ ಸ್ಥಾನ ಕೆಳಗೆ ಹಾಗಾದರೆ ಶೂದ್ರ ದೇವರ ಪಾದದಲ್ಲಿ ಇದ್ದಾನೆ. ಎಲ್ಲರೂ ನಮಸ್ಕರಿಸೋದು ಎಲ್ಲಿಗೆ ? ದೇವರ ಪಾದಗಳಿಗೆ! ಅಂದರೆ ಶೂದ್ರನಿಗೆ ಇದರ ಅರ್ಥ ಏನು ? ಎಲ್ಲರೂ ಸಮಾನರು ಅಂತಲೇ ಇದನ್ನು ನಾನು ಅನೇಕ ಕಡೆ ನನ್ನ ಬರಹದಲ್ಲಿ ಲೇವಡಿ ಮಾಡಿದ್ದುಂಟು.

ಇಷ್ಟಾದರೂ ದಲಿತರಲ್ಲಿ ಒಗ್ಗಟ್ಟಿಲ್ಲ. ಈಗಿನ ದಲಿತರನ್ನು ದಲಿತರೇ ಶೋಷಣೆ ಮಾಡುವಷ್ಟು ದಲಿತರು ಬುದ್ಧಿವಂತರಾಗಿದ್ದಾರೆ. ಮುಂದುವರೆದು ಪಟ್ಟ ಪದವಿಗಳಲ್ಲಿ ಇರೋರು ತಮ್ಮ ಹಟ್ಟಿಗಳನ್ನೇ ಮರಿತಾರೆ. ಹುಟ್ಟನ್ನ, ಹುಟ್ಟಿಸಿದವರನ್ನ ಕಡೆಗಣಿಸಿ ಸಿಟಿಗಳಲ್ಲಿ ಸೇರ್‍ಕೊಂಡು ಫಾರ್ ವರ್ಡ್‌ಕ್ಲಾಸ್ ಹುಡುಗಿಯರನ್ನ ಮದುವೆಯಾಗಿ ತಾವು ಮಾತ್ರ ಫಾರ್ ವರ್ಡ್ ಆಗಿದ್ದಾರೆ. ಇಂತಹ ಬದಲಾವಣೆ ಬದಲಾವಣೆಯಲ್ಲ. ಕೈಹಿಡಿದು ಕೆಳಗಿದ್ದವರನ್ನು ಎತ್ತಬೇಕಾದ್ದು ಮೇಲ್ವರ್ಗದವರ ಧರ್ಮವಷ್ಟೇ ಅಲ್ಲ ಅದು ತಮ್ಮದೂ ಕರ್ತವ್ಯವೆಂಬುದನ್ನು ದಲಿತ ಇಂಟಲಕ್ಚುಯಲ್ಸ್ ಅರಿಯಬೇಕು. ಮೀಸಲಾತಿ ನಮ್ಮ ದೇಶಕ್ಕೆ ಇನ್ನೂ ಸ್ವಲ್ಪ ಕಾಲ ಬೇಕೆನಿಸುತ್ತೆ. ಕನಿಷ್ಟ ಐದು ಅಂಕಿ ಸಂಬಳದಾರರಿಗಾದರೂ ಮೀಸಲಾತಿಯನ್ನು ಮನ್ನಾ ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕು. ಎಲ್ಲಾ ಜಾತಿಗಳಲ್ಲಿ ಬಡವರಿದ್ದಾರೆ ನಿಜ. ಬ್ರಾಹ್ಮಣರಲ್ಲೂ ಕಡು ಬಡವರಿದ್ದಾರೆ. ಆದರೆ ಅವರೆಂದೂ ಚಪ್ಪಲಿ ಹೊಲೆಯೋಲ್ಲ ಬೀದಿ ಕಸ ಗುಡಿಸೋಲ್ಲ, ಹೊಲಗೇಯೊರಲ್ಲ. ಹೋಟಲಲ್ಲಿ ಮಾಣಿಯಾದರೇ ಹೊರ್ತು ಕ್ಲೀನರ್ ಆಗೋಲ್ಲ. ಇನ್ನಿತರ ಜಾತಿ ವಡೆ ಮೆಣಸಿನಕಾಯಿ ಮಾರಿ ಜೀವನ ಸಾಗಿಸಬಲ್ಲರು. ಗ್ರೈಂಡರ್ ಇಟ್ಕೊತಾರೆ. ಖಾನಾವಳಿ ನಡೆಸ್ತಾರೆ. ಬಡವರಾದರೂ ಅವರಿಗೆ ಸಾಮಾಜಿಕ ಸ್ಥಾನಮಾನಗಳಿವೆ. ಆದರೆ ದಲಿತನಿಗೆ ? ಕೂಲಿಯೇ ಗತಿ, ಸಾಮಾಜಿಕ ಸ್ಥಾನಮಾನ, ಗೌರವಾದರಗಳು ಈಗಲೂ ಸೊನ್ನೆ . ನೋಡಿ ಇದೊಂದು ಉದಾಹರಣೆ. ಬೆವರು ಸುರಿಸಿ ಬೆಳೆ ಬೆಳೆದು ನಮಗೆ ಆಹಾರ ಒದಗಿಸುವ ರೈತ ಊಟ ಮಾಡುವ ಪರಿ ಹೇಗೆ? ಎಲ್ಲೋ ಮೂಲೇಲಿ ಕುಕ್ಕರಗಾಲಲ್ಲಿ ಕೂತು ತಲೆಗೆ ಕೊಳಕು ವಲ್ಲಿ ಹೊದ್ದು ಗಬಗಬನೆ ನಿಂತಾನೆ. ಇಂವಾ ಶ್ರಮಜೀವಿ. ಬಾಳೆ ಎಲೆ ಹಾಸ್ಕೊಂಡು, ಬಿಸಿಬಿಸೀದು, ಬಡಿಸ್ಕೊಂಡು ಪಟ್ಟಾಗಿ ಪದ್ಮಾಸನ ಹಾಕಿ ಕೂತ್ಕೋಂಡು ಸಖತ್ ಆಗಿ ಊಟ ಮಾಡ್ತಾನೆ-ಯಾರ್ ಅವಾ ? ಅವನೇ ಸುಖಜೀವಿ, ಇಂದಿಗೂ ಶೋಷಣೆ ದರ್ಪ, ದೌರ್ಜನ್ಯ ಹರಿಜನರ ಮೇಲೆ ನಡಿತಾನೇ ಇದೆ. ಅವರ ಮೇಲೆ ದೌರ್ಜನ್ಯ ಮಾಡಿದವರಿಗೆ ಶಿಕ್ಷೆಯಾಗಿದ್ದನ್ನ ಮಾತ್ರ ನಾವ್ ಕೇಳಿಲ್ಲ, ಓದಿಲ್ಲ. ಹೀಗಾದರೆ ಜಾತಿ ಹೋಗುತ್ತಾ? ದ್ವೇಷ ಹೋಗುತ್ತಾ?

ಹತ್ತು ವರ್ಷದ ಹಿಂದೆ ಜಾತಿ ಹೆಸರು ಹೇಳೋಕೆ ಅಂಜುತ್ತಿದ್ದ, ನಾಚುತ್ತಿದ್ದವರು ಇ೦ದು ರಾಜಾರೋಷವಾಗಿ ಜಾತಿ ಹೇಳ್ಕೋತಾರೆ. ಯಾಕೆ ನಾಚ್ಕೋಬೇಕು ಅನ್ನೋ ಸ್ಥಿತಿಗೆ ನಾವ್ ಬ೦ದು ಮುಟ್ಟಿದ್ದೀವಿ. ಜಾತಿಗೊಂದು ಮಠಗಳ ನಿರ್ಮಾಣವಾಗುವಂತಹ ಹೀನ ಸ್ಥಿತಿ, ದೀನ ಸ್ಥಿತಿ, ನಮ್ಮದಾಗ್ತಾ ಇದೆ. ಜಾತಿ ಬೇಕಿರೋದೂ ಈ ದೇಶದಲ್ಲಿ ಇಬ್ಬರಿಗೆ ಒಬ್ಬ ರಾಜಕಾರಣಿ, ಇನ್ನೊಬ್ಬ ಮಠಾಧಿಪತಿ. ಜಾತಿಯಿಂದಲೇ ಒಬ್ಬರಿಗೆ ಓಟು-ಸೀಟು. ಇನ್ನೊಬ್ಬರಿಗೆ ಮಠ-ಅಸ್ತಿತ್ವ. ಇರೋ ಮಠ ಮಂದಿರಗಳನ್ನೆ ಜನ ಮೂಸ್ತಾ ಇಲ್ಲ, ಗುಮಾನಿಯಿಂದ ನೋಡಾ ಇದ್ದಾರೆ. ನಮಗೆ ಬೇಕಿರೋದು ವಿದ್ಯಾಲಯಗಳು, ವಿಶ್ವವಿದ್ಯಾಲಯಗಳು. ಈ ದಿಸೆಯಲ್ಲಿ ನೋಡಿದಾಗ ವಿದ್ಯೆಯೇ ವಾಪಾರ ಮಾಡಿದರೂ ಕ್ಯಾಪಿಟೇಶನ್ ವಿದ್ಯಾದಾನ ಮಾಡ್ತಾ ಇರೋ ವೀರಶೈವ ಮಠಗಳು ಎಷ್ಟೋ ವಾಸಿ. ಬ್ರಾಹ್ಮಣ ಮಠಗಳು ಮಾತ್ರ ಇನ್ನೂ ಮಡಿಮೈಲಿಗೆಯಲ್ಲೇ ಚೊಂಬು ಹಿಡಿದು ಕೂತಿವೆ.

ಒಟ್ಟಿನಲ್ಲಿ ಎಲ್ಲರಿಗೂ ಓದು ಮುಖ್ಯ. ವಿದ್ಯಾವಂತರಾದರೆ ಮಾತ್ರ ಅರ್ಹತೆ, ಘನತೆ, ಸಮಾನತೆ, ಪ್ರಾಮುಖ್ಯತೆ, ಸ್ಥಾನಮಾನ, ಗೌರವ ಎಲ್ಲಾ. ಆಗ ಮಾತ್ರವೆ ಮೇಲು-ಕೀಳು ಭಾವನೆ ಅಳಿಸಿ ಹೋಗೋಕೆ ಸಾಧ್ಯ. ಹರಿಜನ ಡಿ.ಸಿ.ಯಾದ್ರೆ ಉಚ್ಛವರ್ಗದ ಗುಮಾಸ್ತ ಡೊಗ್ಗು ಸಲಾಂ ಹೊಡಿಲೇಬೇಕಲ್ಲವೆ. ಕಾರಣ ಮೀಸಲಾತಿ ಬೇಕು. ಆದರೆ ಅದಕ್ಕೊಂದು ಅಂತ್ಯವೂ ಬೇಕು. ಅಂಬೇಡ್ಕರ್, ಜಗಜೀವನರಾಮ್, ಮೀಸಲಾತಿಯಿಂದ ಮುಂದೆ ಬಂದವರಲ್ಲ. ಅಂಬೇಡ್ಕರ್ ಮೀಸಲಾತಿಗೆ ನೀಡಿದ ಅವಧಿ ಕೇವಲ ಹತ್ತು ವರ್ಷ ಮಾತ್ರ. ಆದರೆ ಮೀಸಲಾತಿ ಬಲ ಬೇಕಿರುವುದು ರಾಜಕಾರಣಿಗಳಿಗೆ. ಅದನ್ನ ಬೆಳಸ್ತಾನೇ ಇದ್ದಾರೆ. ಉಳಿಸ್ಕೋತಾನೆ ಇದ್ದಾರೆ. ಇಷ್ಟಾದರೂ ಮೀಸಲಾತಿಯ ದುರುಪಯೋಗ ತಪ್ಪಿಲ್ಲ. ಮೇಲ್ವರ್ಗದವರು ಸುಳ್ಳು ಸರ್ಟಿಫಿಕೇಟ್‌ ಪಡೆದ ನಿದರ್ಶನಗಳಿವೆ. ಮಂತ್ರಿ ಶಾಸಕರ ಮಕ್ಕಳಿಗೂ ಮೀಸಲಾತಿಯ ಟ್ಯಾನಿಕ್ ಬೇಕು ! ಇವರಿಗೆಲ್ಲಾ ಸ್ವಾಭಿಮಾನ ಬರೋದು ಯಾವಾಗ ? ಇಂಥವರೆಲ್ಲಾ ಮೀಸಲಾತಿಯ ಹಿಂದೆ ಬಿದ್ದಿರುವುದರಿಂದಲೇ ಮೀಸಲಾತಿ ಇಂದು ಉಳಿದವರ ಪಾಲಿನ ಗ್ಯಾಂಗರಿನ್ ಆಗ್ತಾ ಇದೆ. ಅದನ್ನೇ ಕತ್ತರಿಸಿ ಹಾಕಬೇಕೆಂಬ ಈರ್ಷೆ ಚಿಗುರೊಡಿತಾ ಇದೆ. ಇದರ ವಿರುದ್ದ ಹೋರಾಟವೂ ನಡೀತಾ ಇದೆ. ಈವತ್ತು ನಾವು ವಿರೋಧಿಸಬೇಕಿರೋದು, ಹೋರಾಟ ನಡೆಸಬೇಕಿರೋದು, ಭ್ರಷ್ಟಾಚಾರದ ವಿರುದ್ಧ, ಜಾಗತೀಕರಣದ ವಿರುದ್ಧ, ಕೋಮುವಾದದ ವಿರುದ್ಧ.

ಈ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕ್ತಾ ಇದೆ. ದೇಶದ ಮಿಲ್ಟ್ರಿ ರಹಸ್ಯವನ್ನ ಮಾರ್‍ಕೋತಾ ಇದಾರೆ. ದೇಶದ ನೈಸರ್ಗಿಕ ಸಂಪತ್ತನ್ನ ಮಾರ್‍ಕೋತಾ ಇದಾರೆ. ನೆಲ-ಜಲವನ್ನು ಮಾರ್‍ಕೋತಾ ಇದಾರೆ, ಕೈಗಾರಿಕೆಗಳನ್ನ ಮಾರ್‍ಕೋತಾ ಇದಾರೆ. ಸಾಂಸ್ಕೃತಿಕ ಸಂಪತ್ತನ್ನ ಮಾರ್‍ಕೋತಾ ಇದಾರೆ. ಕಲ್ಲುಗಳನ್ನು, ಗ್ರಾನೈಟ್ ಕಲ್ಲುಗಳನ್ನು ಮಾರ್‍ಕೋತಾ ಇದಾರೆ. ನಾಳೆ ಲಂಚ ತಗೊಂಡು ದೇಶವನ್ನೇ ಮಾರಿಬಿಡ್ತಾರೆ. ನಮ್ಮ ಹೋರಾಟ, ದೃಷ್ಟಿಕೋನ, ಆಲೋಚನೆಗಳಲ್ಲಿ ವಿಶಾಲಭಾವನೆ ಬರಬೇಕು. ಮೊದಲು ಒಬ್ಬರನ್ನೊಬ್ಬರು ಪ್ರೀತಿಸೋದನ್ನ ಕಲಿಬೇಕು. ಕೆಳಗಿನವರ ಬಗ್ಗೆ ಅಂತಃಕರಣವಿರಬೇಕು. ಆಗ ಮಾತ್ರವೇ ದೇಶದಲ್ಲಿ ಭಾವೈಕ್ಯತೆ ಭಾರ್ತೃತ್ವ ಉಳಿಯೋಕೆ ಸಾಧ್ಯ. ಸಮಾಜದಲ್ಲಿ ಶಾಂತತೆ ನೆಲಸೋಕೆ ಸಾಧ್ಯ. ಮೀಸಲಾತಿಯನ್ನ ಮಾನವೀಯತೆಯಿಂದ ನೋಡಬೇಕೆ ಹೊರತು ಮತ್ಸರದಿಂದಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು – ಹಲವು
Next post ಆಶಯಾ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys