ಮರಮರವನು ಸುತ್ತಿಮುತ್ತಿ ಕೊಂಬೆ ರೆಂಬೆ ಸವರಿ ಏರಿ
ಎಲೆ‌ಎಲೆಯನು ಎಣಿಸುವಂಥ ಹುಚ್ಚು ಹಂಬಲಾ
ಹೂವ ಹೂವ ಮೂಸುವಂಥ ಆಶೆ ಬೆಂಬಲಾ

ಗುಡ್ಡ ಗುಡ್ಡ ಏರಿ ಇಳಿದು ಸೆಡ್ಡು ಹೊಡೆದು ಸೆಟೆದು ನಿಂತು
ಅಡ್ಡ ಹಾದಿಯಲ್ಲಿ ಬಹರ ತರಿವ ಆಶಯಾ
ಕಡ್ಡಿಯೆ ಬ್ರಹ್ಮಾಸ್ತ್ರವಾಗಲೆಂಬ ಆಶಯೂ

ಸಾಹಿತ್ಯದ ಸಾಗರದಲಿ ಆಳದಲ್ಲಿ ಮುಳುಗಿ ಮುಳುಗಿ
ಮುತ್ತು ರತ್ನಗಳನು ತೆಗೆದು ನೋಳ್ಪ ಆಶಯಾ
ಹತ್ತು ಮುಖಗಳಲ್ಲಿ ಹಬ್ಬಿ ನಿಲ್ಲುವಾಶಯಾ

ಹೊಸತು ಹೊಸತು ಎಂದು ನಿತ್ಯ ನವ್ಯ ರೂಪ ಧರಿಸಿ ಮೆರೆವ
ಕಲೆಯ ಬೆಡಗಿಯನ್ನು ಒಲಿಸಿ ಕೂಡುವಾಶಯಾ
ಚೆಲುವ ಹೀರಿ ಹಿಪ್ಪೆಮಾಡಿ ಒಗೆಯುವಾಶಯಾ

ತತ್ವ ಭೇದಗಳನು ತೂರಿ ಸಂಕೋಚದ ತೆರೆಯ ಹರಿದು
ಸ್ನೇಹದಿಂದ ಲೋಕವನ್ನ ಗೆಲ್ಲುವಾಶಯಾ
ಮೋಹರಹಿತ ನಾಕವನ್ನು ನಿಲಿಸುವಾಶಯಾ

ಅವರ ಧರ್ಮ ಅವರ ದಾರಿ ಎಂದೆಲ್ಲರ ಗೌರವಿಸುವ
ನನ್ನ ಧರ್ಮದಲ್ಲಿ ವಿಶ್ವಧರ್ಮ ಬಿಂಬವಾ
ಕನ್ನಡಿಸುತ ವಿಶ್ವದಗಲ ಹರಡಿ ತುಂಬುವಾ

ಒಂದು ಒಡಲಿನೂಡನೆ ನೂರು ಜೀವಿಗಳನು ಕೂಡಿಕೊಂಡು
ಹಂದರವೇ ಹಬ್ಬಿಬಿಡಲಿ ಒಲವಿನಾಶಯಾ
ಸೌಂದರ್ಯವೆ ಸತ್ಯವಾಗಿ ಹೊಮ್ಮುವಾಶಯಾ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)