ಶ್ರೇಷ್ಠತೆಯ ಸವಾರಿ

ಶ್ರೇಷ್ಠತೆಯ ಸವಾರಿ

ಶ್ರೇಷ್ಠತೆಯ ಕಲ್ಪನೆ ಮನುಷ್ಯನಿಗೆ ಎಲ್ಲಿಂದ, ಯಾಕೆ ಬರುತ್ತದೆ ಎನ್ನುವುದೇ ಒಂದು ಸೋಜಿಗದ ವಿಷಯ. ಜರ್ಮನ್ ರಕ್ತವೇ ಶ್ರೇಷ್ಠವೆಂದು ಯಹೂದಿಗಳನ್ನು ಕೊಂದ ಹಿಟ್ಲರಿನಿಗಾಗಲಿ, ದಶಕಗಳ ಕಾಲ ಕಪ್ಪು ಜನರ ಮೇಲೆ ವಿಷಯವನ್ನು ಮೆರೆದ ಬಿಳಿಯರಿಗಾಗಲಿ, ಪ್ರಪಂಚ ನಡೆಯುವುದು ತಮ್ಮಿಂದಲೆ ಎನ್ನುವ MCP (Male Chounist Pigs) ಗಳಿಗಾಗಲೀ ಶ್ರೇಷ್ಠತೆಯ ಕಲ್ಪನೆ ಎಲ್ಲಿಂದ ಬರುತ್ತದೆ?

ತಾನು ಶ್ರೇಷ್ಠ ಎಂದು ಬೀಗುವ ಅಹಮ್ಮಿನ ಎದುರು ಇನ್ನೊಂದು ಆಹಂ ಕುಸಿಯುತ್ತಾ ಹೋಗುತ್ತದೆ. ಈ ಹಂತದಿಂದ ಮೇಲೇಳಬೇಕಾದರೆ ನಾನೂ ನನ್ನನ್ನು ತುಳಿದಿರುವವನಂತೆಯೇ ಆಗಬೇಕೆನ್ನುವ ಹುಂಬತನ ಬೆಳೆಸಿಕೊಳ್ಳುತ್ತದೆ. ಹೀಗೆ ಪಡಿನೆಳಲಿನ ಪರಂಪರೆ ಬೆಳೆಯುತ್ತದೆ. ಮೇಲುಜಾತಿಯ ಆಚಾರಣೆಗಳು ಕೆಳಗಿನ ಜಾತಿಯವರಿಗೆ ಆದರ್ಶಪ್ರಾಯವಾಗುತ್ತವೆ. ಮೇಲುವರ್ಗದ ನಡೆನುಡಿಗಳು ಕೆಳ ವರ್ಗದ ಆದರ್ಶವಾಗುತ್ತವೆ. ಕರಿಯರಿಗೆ ಬಿಳಿಯ ಬಣ್ಣದ ಜನ ಆದರ್ಶವಾಗುತ್ತಾರೆ.

ಅಷ್ಟೇ ಏಕೆ, ಭಾರತದಂತಹ ತೃತೀಯ ರಾಷ್ಟಗಳು ಆಮೆರಿಕಾ ದೇಶದಂತಹ ಮುಂದುವರೆದ ರಾಷ್ಟಗಳನ್ನು ನೋಡುತ್ತ ತಮ್ಮ ಪ್ರಗತಿಯ ರೂಪುರೇಷೆಗಳನ್ನು ಹಾಕಿಕೊಳ್ಳುತ್ತವೆ. ಇದು ಸಾಮ್ರಾಜ್ಯಶಾಹಿಯ ಶ್ರೇಷತೆಯ ಪ್ರಭಾವ. ಇದರರ್ಥ ಕೀಳುಸ್ಥಾನದದಲ್ಲಿರುವವರು ತಮ್ಮತನ ಪೂರ್ತಿಯಾಗಿ ಕಳೆದುಕೊಂಡು, ಮೇಲುಸ್ಥಾನದಲ್ಲಿರುವುದರ ಬಗ್ಗೆ ಆರಾಧನಾಭಾವ ತಾಳುತ್ತಾರೆ ಎಂದಲ್ಲ. ಆದರೆ, ಶ್ರೇಷ್ಠತೆಯನ್ನು ಪ್ರತಿಪಾದಿಸುವ ಜನ ಫ್ಯೂಡಲ್ ಧೋರಣೆಗಳಿಟ್ಟುಕೊಂಡಿರುವುದರಿಂದ, ಇವರ ಕೈಕೆಳಗಿನ ದೇಶ, ಜನ ಯಾವುದೇ ಆಗಲಿ, ಅವರ ಪ್ರಭಾವವನ್ನು ತನ್ನಲ್ಲಿ, ತನಗೇ ಗೊತ್ತಿಲ್ಲದಂತೆ ಪೋಷಿಸುತ್ತದೆ. ಈ ಪ್ರಭಾವ ಹೊರಗೆ ಸಿಡಿದು ತೋರುವುದಿಲ್ಲ. ಬದಲಾಗಿ ಅದು ಏಡಿ ಹುಣ್ಣಿನಂತೆ ಒಳಗೇ ಇದ್ದು, ತನ್ನ ಆಸ್ತಿತ್ವ ಪ್ರಕಟಪಡಿಸುತ್ತದೆ. ಸಾಮ್ರಾಜ್ಯಶಾಹಿಯಾಗಲಿ, ಪುರೋಹಿತಶಾಹಿಯಾಗಲಿ ತನ್ನ ಕೈಕೆಳಗಿನವರನ್ನು, ತನ್ನ ಹಿಡಿತದಲ್ಲಿರುವವರ ಮೇಲೆ ಅವುಗಳ ರೀತಿ ನೀತಿಯನ್ನು ಹೇರುತ್ತವೆ. ಕೊನೆಗೆ, ಸಾಮ್ರಾಜ್ಯಶಾಹಿ ಅಥವಾ ಪುರೋಹಿತಶಾಹಿ ಆಳಿದರೂ, ಅದು ಬೆಳೆಸಿದ ವ್ಯವಸ್ಥೆ ಉಳಿದಿರುತ್ತದೆ. ಹೀಗಾಗಿ ಸಾಮ್ರಾಜ್ಯಶಾಹಿ/ಪುರೋಹಿತಶಾಹಿ ನಾಶವಾಗುವುದೇ ಇಲ್ಲ! ಸ್ವತಃ ಸಾಮ್ರಾಜ್ಯಶಾಹಿ ದೇಶವಾಗಿದ್ದ ಇಂಗ್ಲೆಂಡ್, ಹನ್ನೊಂದನೆಯ ಶತಮಾನದ ಅಂಚಿನಲ್ಲಿ ಫ್ರಾನ್ಸಿನ ಕೈಕೆಳಗೆ ಇತ್ತು. ಪ್ರೆಂಚ್ ಭಾಷೆ, ಸಂಸ್ಕೃತಿ, ಇಂಗ್ಲಿಪ್ ಭಾಷೆ, ಸಂಸ್ಕೃತಿಯನ್ನು ಗುಡಿಸಿಹಾಕಿತು. ಆದ್ದರಿಂದಲೇ, ಇಂದಿಗೂ ಕಲೆ, ಮೋಜು, ರಸಿಕತೆಗೆ ಸಂಬಂಧಪಟ್ಟ ಬಹುಪಾಲು ಪದಗಳು ರೀತಿನೀತಿಗಳು ಫ್ರೆಂಚಿನವೇ ಆಗಿದೆ. ಸಾಮ್ರಾಜ್ಯಶಾಹಿ/ಪುರೋಹಿತಶಾಹಿ ಧೋರಣೆಗಳು ಹೀಗೆ ಒಂದು ಜೀವಂತ ಇರುವ ಸಂಸ್ಕೃತಿಯನ್ನು ರೋಗಗ್ರಸ್ತವನ್ನಾಗಿ ಮಾಡುತ್ತವೆ.

-೧-
ಭಾರತದಲ್ಲಿ ಪುರೋಹಿತಶಾಹಿ ಕಾಣಿಸಿಕೊಳ್ಳುವುದು ಜಾತಿ ವ್ಯವಸ್ಥೆಯ ಮೂಲಕ. ಚಾತುವರ್ಣಪದ್ದತಿಯಿಂದ ಬೆಳೆದ ಜಾತಿ ಪದ್ದತಿ, ಸಾವಿರಾರು ಜಾತಿಗಳ ನಿರ್ಮಾಣಕ್ಕೆ ಕಾರಣವಾಯಿತು. ಅದನ್ನು ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಎಂದು ಸರಳವಾಗಿ ವಿಂಗಡಿಸಬಹುದು! ಭಾರತದ ಇತಿಹಾಸದಲ್ಲಿ ಬ್ರಾಹ್ಮಣ ಜಾತಿ ವರ್ಗಕ್ಕೆ ಶ್ರೇಷ್ಠತೆಯ ಕಿರೀಟ ಯಾವಾಗಲೂ ಸಿಕ್ಕಿದೆ. ಬ್ರಾಹ್ಮಣಶಾಹಿಗೆ ಸ್ವಲ್ಪವಾದರೂ ಸಮಬಲವಾಗಿ ಎದಿರು ನಿಂತಿದ್ದು ಬೌದ್ಧಧರ್ಮ. ಬ್ರಾಹ್ಮಣಶಾಹಿಗೆ ಪರ್ಯಾಯವಾಗಿ ನಿಂತ ಈ ಧರ್ಮವು ನೆಲೆಯೇ ಇಲ್ಲದಂತೆ ಆಗಿದ್ದರಿಂದ, ಬ್ರಾಹ್ಮಣಶಾಹಿಯ ಶ್ರೇಷ್ಠತೆಯನ್ನು ಪ್ರಶ್ನೆ ಮಾಡುವವರೇ ಇಲ್ಲದಂತಾಯಿತು. ಹೀಗಾಗಿ, ಉಳಿದ ಜಾತಿಗಳೆಲ್ಲ ಬ್ರಾಹ್ಮಣಜಾತಿಯ ಶ್ರೇಷ್ಠತೆಯ ನೆರಳಿನಲ್ಲಿ ಇರಬೇಕಾಯಿತು. ಇದರಿಂದ ಬ್ರಾಹ್ಮಣ ಸಂಸ್ಕೃತಿಯ ಪ್ರಭಾವ ಹೆಚ್ಚಾಯಿತು.

ಬ್ರಾಹ್ಮಣಶಾಹಿಯ ಕಟ್ಟುನಿಟ್ಟಿನ ಅಲಿಖಿತ ಕಟ್ಟಳೆಗಳ ವಿರುದ್ಧ ಇರುವ ಮುಖ್ಯವಾಹಿನಿಗಳಲ್ಲಿ, ಭಾರತದ ಮಧ್ಯಕಾಲೀನ ಭಕ್ತಿ ಚಳವಳಿಗಳು ಮುಖ್ಯವಾದವು. ಈ ಭಕ್ತಿ ಚಳವಳಿಗಳು ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದವು. ಇಲ್ಲಿ ಜಾತಿಭೇದವನ್ನು ನಿರಾಕರಿಸಲಾಯಿತು. ಏಕದೈವೋಪಾಸನೆಯನ್ನು ಹೆಚ್ಚು ಪ್ರಚೋದಿಸಲಾಯಿತು. ಕರ್ನಾಟಕದಲ್ಲಿ ಇದೇ ಸುಮಾರಿನಲ್ಲಿ ನಡೆದ ಭಕ್ತಿಚಳವಳಿಗಳ ತಿರುಳು ಇದೇ ಆಗಿತ್ತು. ಈ ಚಳವಳಿಗಳಲ್ಲಿ ಬ್ರಾಹ್ಮಣರೂ, ದಲಿತರೂ ಒಟ್ಟಾಗಿ ಇದ್ದರು. ಅಂದರೆ ಅಲ್ಲಿ ಪುರಂದರದಾಸರೂ ಇದ್ದರು. ಕನಕದಾಸ, ಡೋಹಾರಕಕ್ಕಯ್ಯ ನಂಥವರೂ ಇದ್ದರು. ಧರ್ಮದ ಪುನಶ್ಚೇತನ ಮಾಡುವುದರೊಂದಿಗೆ ಪ್ರಾರಂಭವಾದ ಈ ಚಳವಳಿಗಳು ಸಾಮಾಜಿಕ ಉದ್ಧಾರವನ್ನೂ ಮಾಡಲು ಯತ್ನಿಸಿದವು. ಈ ಹಂತದಲ್ಲಿ ಒಂದು ಶಿಷ್ಟ, ಶ್ರೇಷ್ಠ ಸಮಾಜ, ದೇವರ ಕಲ್ಪನೆಯನ್ನಿಟ್ಟುಕೊಂಡು, ಜನಪದದ ದಿಕ್ಕನ್ನೇ ಬದಲಾಯಿಸಲು ಭಕ್ತ-ಸುಧಾಕರವರ್ಗ ತೊಡಗಿತು. ಇಲ್ಲಿ ನಮಗೆ ಪ್ರಶ್ನೆ ಎದುರಾಗುತ್ತದೆ: ಇವರ ಶ್ರೇಷ್ಠತೆಯ ಕಲ್ಪನೆ, ಶಿಷ್ಟತೆಯ ಪರಿಕಲ್ಪನೆ ಉಂಟಾದದ್ದು ಎಲ್ಲಿಂದ? – ಎಂದು. ಶ್ರೇಷ್ಠತೆಯ ಈ ಕಲ್ಪನೆ ಹುಟ್ಟಿದ್ದು ಬ್ರಾಹ್ಮಣ ಆಥವಾ ವೈದಿಕ ಪರಂಪರೆಯ ಹಿನ್ನೆಲೆಯಿಂದ ಎನ್ನಬಹುದೆ? ಜನಪದದಲ್ಲಿ ಪ್ರಚಲಿತವಿರುವ ಊಟ, ಹಬ್ಬ, ದೇವರುಗಳ ಬಗೆಗಿನ ಅವರ ನಂಬಿಕೆಗಳನ್ನು ಕೀಳಾಗಿ ನೋಡಲಾಗಿದೆ. ಏಕದೈವೋಪಾಸನೆ ಮತ್ತು ಜಾತಿಭೇದ ನಿರ್ಮೂಲನೆಯ ಹೆಸರಿನಲ್ಲಿ ಜಾನಪದ
ದೇವರುಗಳು, ನಂಬಿಕೆಗಳನ್ನು ಹೀಗಳೆಯಲಾಗಿದೆ. ಮಾರಿ, ಚೌಡಿಯವರ ಬದಲು ವೈದಿಕ ದೇವರುಗಳಾದ ಶಿವ, ವಿಷ್ಣು ಇವರನ್ನು ಕೊಡಲಾಗಿದೆ. ಈ ದೇವರುಗಳೇ ಸರ್ವಶ್ರೇಷ್ಠ ಎಂಬ ನಂಬಿಕೆಯನ್ನು ಬೆಳಸಲಾಯಿತು.

-೨-
ಈ ನಂಬಿಕೆಯನ್ನು ಎತ್ತಿಹಿಡಿಯುವಂತಿರುವ ಪುರಂದರದಾಸರ ಒಂದು ಕವನ ನೋಡೋಣ:

ಮೂರ್ಖರಾದರು ಜನರು ಲೊಕದೊಳಗೆ
ಏಕದೇವನ ಬಿಟ್ಟು ಕಾಕು ದೈವದ ಭಜಿಸಿ
ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್‍ಖ
ಭೂಸಸುರರಿಗನ್ನವನು ಕೊಡದವನು ಮೂರ್‍ಖ
ಶೇಷಗಿರಿ ಕೃಷ್ನನ್ನ ಭಜಿಸದಿದ್ದವ ಮೂರ್‍ಖ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಕೊಂಡಾಡಿ ಭಜಿಸದವ ಮೂರ್‍ಖ

ಇಡೀ ಪದ್ಯದಲ್ಲಿ ವೈದಿಕ ಮೌಲ್ಯ, ನಂಬಿಕೆಗಳನ್ನು ಸಾರ್ವತ್ರಿಕಗೊಳಿಸಲಾಗಿದೆ. ಕಾಶಿಯಲ್ಲಿ ಸ್ನಾನ ಮಾಡುವುದು, ಬ್ರಾಹ್ಮಣರ ಸೇವನೆ, ಕೃಷ್ನ/ವಿಷ್ಣು ಆರಾಧನೆ ಇವು ಶುದ್ಧಾಂಗ ಬ್ರಾಹ್ಮಣಶಾಹಿಯ ಮೌಲ್ಯಗಳು ಇದನ್ನು ಮಾಡಿದರೇ ಶ್ರೇಷ್ಟ ಎನ್ನುವ ಧೊರಣೆ ಇಲ್ಲಿದೆ.

ಬಸವಣ್ಣನವರ ಒಂದು ವಚನ ಹೀಗಿದೆ :

ಗಂಡ ಶಿವಲಿಂಗ ದೇವರ ಭಕ್ತ! ಹೆಂಡತಿ ಮಾರಿ ಮಸಣಿಯ ಭಕ್ತೆ
ಗಂಡ ಕೊಂಬುದು ಪಾದೋದಕ ಪ್ರಸಾದ; ಹೆಂಡತಿ ಕೊಂಬುದು
ಸುರೆ-ಮಾಂಸ!
ಭಾಂಡ ಭಾಜನ ಶುದ್ದವಿಲ್ಲದವರ ಭಕ್ತಿ
ಹೆಂಡದ ಮಡಿಕೆಯ ಹೊರಗೆ ತೊಳದಂತೆ ಕೂಡಲಸಂಗಮದೇವ.

ಈ ವಚನದಲ್ಲಿ ಶಿವ (ಕೂಡಲಸಂಗಮ) ಶ್ರೇಷ್ಠದೈವವೆಂದೂ, ಮಾರಿಮಸಣಿಯರು ಕೀಳುದೈವಗಳೆಂದು ಹೇಳುವ ದ್ವನಿಯಿದೆ. ಶಿವಪೂಜೆ ಶ್ರೇಷ್ಠವೆಂಬ ಹೇರಿಕೆಯ ದ್ವನಿ ಇದು. ಸಾಮಾನ್ಯ ಜನರಿಗೆ ಲೌಕಿಕ ತುಂಬ ಮುಖ್ಯವಾದದ್ದು. ಅವರ ದೇವತೆಗಳೂ ಲೌಕಿಕಕ್ಕೆ ಹತ್ತಿರಕ್ಕೆ ಇರುತ್ತಾರೆ. ಅವರಿಗೆ ಸುರೆ-ಮಾಂಸಗಳು ದಿನನಿತ್ಯದ ಆಹಾರ ಅಗತ್ಯಗಳೇ ಹೊರತು ‘ಪಾದೋದಕ ಪ್ರಸಾದಗಳಲ್ಲ’ (“Lokayata was essentially materialistic in the sense of acknowledging the reality of nothing but the material human body and the material universal around us” – p.36: Lokayata. Debiprasad Chattopadhyaya) ಈ ತರದ ವರ್‍ಗಕ್ಕೆ ಮೇಲುವಗ೯ದವರ ‘ಪಾದೋದಕ ಪ್ರಸಾದ’ದ ಕಲ್ಪನೆಯೇ ಅಸಗಂತ.

ಕನಕದಾಸರ ಕವನವೊಂದರಲ್ಲಿ ಹೀಗೆ ಶ್ರೇಷ್ಮತೆಯ ಪ್ರತಿಪಾದನೆಯಿದೆ:
ರಂಗನಾಥನು ಇರಲಿಕ್ಕೆ ಜಂಗುಳಿದೈವಗಳೇಕೆ?
ಮಂಗಳಾತ್ಮಿನಿರಲಿಕ್ಕೆ ಪರದೈವವೇಕೆ?

ಮೇಲೆ ನೋಡಿದ ಮೂರು ಕವನಗಳಲ್ಲೂ ತಮ್ಮ ಇಷ್ಟದೈವ ಮತ್ತು ಇತರೆ (ಜನಪದ?) ದೇವರುಗಳ ತುಲನೆ ಇದೆ. ಆಶ್ಚರ್ಯವೆಂದರೆ, ಏಕದೈವೋಪಾಸನೆಯನ್ನು ಹೇಳುವ ಈ ಭಕ್ತಿ-ಕವಿಗಳು ಇನ್ನೊಂದು ದೈವವನ್ನು ಹಳಿಯುವುದರ ಮೂಲಕ. ಆ ದೈವಗಳ ಆಸ್ತಿತ್ವವನ್ನು ಪರೋಕ್ಷವಾಗಿ ಒಪ್ಪಿಕೊಳ್ಳುವುದು!

ಪುರಂದರ, ಬಸವರಂತಹ ಕವಿ-ಭಕ್ತರು ಬಂದಿರುವುದು ವೈದಿಕ ಪರಂಪರೆಯ ಹಿನ್ನಲೆಯಿಂದ. ಆದ್ದರಿಂದ, ಅವರಿಗೆ ವೈದಿಕ ದೇವರುಗಳು ಕಲ್ಪನೆ ಸಹಜವಾಗಿತ್ತೆನ್ನಬಹದು. ವಿಪರ್ಯಾಸವೆಂದರೆ, ಕನಕದಾಸರಂತಹ ದಲಿತ-ಕವಿ-ಭಕ್ತರಿಗೆ ಅವರ ಆರಾಧ್ಯದೈವ ರೂಪುಗೊಳ್ಳುವುದು ಮಧ್ವಮತದ ಹಿನ್ನೆಲೆಯಿಂದ! ‘ಅರಳೆಲೆಮಾಗಾಯಿ, ಕೊರಳಮುತ್ತಿನಸರ’ದಿಂದ ಅಲಂಕೃತವಾದ ಶ್ರೀ ವಿಷ್ಣು ಅವರ ಆರಾಧ್ಯ ದೈವ! ಇದು ಬ್ರಾಹ್ಮಣರ ಕಲ್ಪನೆಗಳ ಮುಂದುವರಿಕೆಯಲ್ಲದೆ ಬೇರೇನೂ ಅಲ್ಲ. ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮುಖ್ಯವಾಹಿನಿಯಲ್ಲಿ ಸೇರಿಹೋಗಿ, ಗುಪ್ತಗಾಮಿನಿಯಾದ ಜನಪದ ಸಂಸ್ಕೃತಿಯನ್ನು ಕನಕರು ಕಡೆಗಾಣಿಸುತ್ತಾರೆ.

ಕನಕದಾಸರ ಕವನಗಳನ್ನು ಸ್ಥೂಲವಾಗಿ ಎರಡು ಭಾಗಗಳನ್ನಾಗಿ ಮಾಡಿಕೊಳ್ಳಬಹುದು.
ಒಂದು: ನೈಜಭಕ್ತಿಯ, ತಾತ್ವಿಕ ಚಿಂತನೆಯ ಕವನಗಳ ಗುಂಪು.
ಇನ್ನೊಂದು: ಮಾಧ್ವಮತಾನುಯಾಯಿ ಆಗಿ, ದೇವರನ್ನು ಬಣ್ಣಿಸುವ, ಅವನ ಹಿರಿಮೆಯನ್ನು ಹೊಗಳುವ ವರ್ಣಕ ಕವನಗಳ ಗುಂಪು, ಈ ವರ್ಣಕ ಕವನಗಳ ಕಡೆ ಗಮನಹರಿಸಿದಾಗ, ಬೇರೆ ದೇವರು (ಮುಖ್ಯವಾಗಿ ಜನಪದ ದೇವರುಗಳನ್ನು) ಹೀಗಳೆದು, ತಮ್ಮ ದೈವದ ಹಿರಿಮೆಯನ್ನು ಹೇಳುವ ಅಂಶ ಕಾಣುತ್ತದೆ.

ಕನಕದಾಸರ ಒಂದು ಪದ್ಯವಂತೂ, ಇದಕ್ಕೆ ತಕ್ಕ ಉದಾಹರಣೆಯಂಬಂತಿದೆ:
ಎಕ್ಕನಾತಿ ಎಲ್ಲಮ್ಮ ಮಾರಿ ದುರ್‍ಗಿಯು ಚೌಡಿ
ಅಕ್ಕರಿಯಿಂದಲಿ ಪೂಜೆ ಮಾಡಲೇಕೆ
ಕಿಕ್ಕಿರಿದು ಯಮುನ ದೂತರೆಳೆದೊಯ್ವಾಗ
ಶಕ್ತೇರು ಬಿಡಿಸಿಕೊಂಡಾರೇನೋ ಮರುಳೆ||
ಸಂಭ್ರಮದಲೊಂದ್ಹೊತ್ತು ನೇಮದಲ್ಲಿದ್ದು
ತಂಬಿಟ್ಟನಾ ದೀಪ ಹೊರಲೇತಕೆ?
ಕೊಂಬು ಹೋತು ಕುರಿಕೋಣನಾ ಬಲಿಗೊಂಬ
ಡೊಂಬಿ ದೈವಗಳ ಭಜಿಸದಿರು ಮನವೆ||
ಚಿಗುರಲೆ ಬೇವಿನ ಸೊಪ್ಪು, ನಾರಸೀರೆ ಬಗೆಬಗೆಯಿಂದ ಶೃಂಗಾರ ಮಾಡಿ
ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು
ಮಿಗಿಲಾದ ಮುಕುತಿಯುಂಟೇ ಹುಚ್ಚುಮನವೇ||
ದಾನಧರ್ಮ ಪರೋಕಾರವ ಮಾಡು
ದೀನನಾಗಿ ನೀ ಕೆಡಬೇಡವೋ
ಜ್ಞಾನವಿಲ್ಲದೆ ಹೀನದೈವವ ಭಜಿಸಲು
ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ||

ತಂಬಿಟ್ಟಿನ ದೀಪದಾರತಿ, ಕುರಿ ಕೋಣಗಳ ಬಲಿ, ಚಿಗುರೆಲೆ, ಬೇವಿನ ಸೊಪ್ಪು, ಕುಣಿತ- ಇವೆಲ್ಲವನ್ನು ಕನಕದಾಸರು ಹೀಗಳೆಯುತ್ತಾರೆ. ಆದರೆ, ಈ ಎಲ್ಲಾ ಆಚರಣೆಗಳು ಜನಪದದ ಮುಖ್ಯ ವ್ಯಕ್ತ ಆಚರಣೆಗಳು (Expressive celebrations). ಇವು ಸಾಮಾನ್ಯ ಜನರಿಗೆ ಯಾಗ, ಯಜ್ಞಗಳಷ್ಟೇ ಪವಿತ್ರವಾದವು. ಜನಪದಕ್ಕೆ ಇನ್ನೊಂದು ಸತ್ತನಂತರ ಲೋಕದಲ್ಲಿ ಯಾವುದೇ ಆಸಕ್ತಿಯಿಲ್ಲ. ಆದ್ದರಿಂದ ‘ಯಮ’ನ ಬಗ್ಗೆ ಅವರು ಯಾವ ಯೋಚನೆಯನ್ನೂ ಮಾಡುವುದಿಲ್ಲ. ಈ ಮೊದಲೇ ಹೇಳಿದಂತೆ, ಅದರ ದೇವರುಗಳು ಲೌಕಿಕಕ್ಕೆ ಹತ್ತಿರ ಇರುವಂಥವು. ಇಂಥ ಆಚರಣೆಗಳನ್ನು ವೈದಿಕ ಸಂಸ್ಕೃತಿ ಕೀಳುಗಳೆದು ನೋಡುತ್ತದೆ.

ವೈದಿಕ ಸಂಸ್ಕೃತಿಗೆ ಪರ್ಯಾಯವಾಗಿ ಜನಪದ ಸಂಸ್ಕೃತಿ ಇದ್ದೇ ಇದೆ. ಜನಪದ ಸಂಸ್ಕೃತಿ ಪ್ರಾರಂಭವಾಗುವುದು ಪ್ರಾಗ್ರೂಪ ಪುರಾಣಗಳಿಂದ. ಮಾರಿ, ಚೌಡಿ ಮುಂತಾದ ದೇವತೆಗಳ ಆಚರಣೆ ಪ್ರಾಚೀನ ಕೃಷಿಪ್ರಾಗ್‌ತತ್ವ (Agrarian archatypes) ಗಳಿಂದ ಬಂದದ್ದು. ಜನಪದದ ಆರಾಧನೆ ಶಕ್ತಿಯಂತಹ ಮಾತೃದೇವತೆಗಳನ್ನು ಆಧರಿಸುತ್ತದೆಯೇ ವಿನಾ ಪುರುಷ ದೇವತೆಗಳನ್ನಲ್ಲ. ವೈದಿಕ ಸಂಸ್ಕೃತಿ ಪುರುಷ ಪ್ರಧಾನ ಸಂಹಿತೆಯುಳ್ಳದ್ದು. ಈ ಮೂಲತತ್ವವನ್ನು ನಿರ್‍ಲಕ್ಷಿಸಿ, ಪುರುಷ ದೇವರುಗಳನ್ನು ಪ್ರಚಾರ ಮಾಡುವುದು, ಶ್ರೇಷ್ಠತೆಯ ಕಲ್ಪನೆಯ ಮುಂದುವರಿಕೆ ಎನ್ನದೆ ವಿಧಿಯಿಲ್ಲ.

ಹಾಗಾದರೆ ಭಕ್ತಿಚಳವಳಿಯ ಹೆಸರಿನಲ್ಲಿ ನಡೆದ ಸಾಮಾಜಿಕ ಸುಧಾರಣೆಗಳು ಬ್ರಾಹ್ಮಣಶಾಹಿಯ ಮುಂದುವರಿಕೆ ಎನ್ನಬಹುದಲ್ಲವೆ? ಇದು ಹೊರಗಿನಿಂದ ಆದ ಸಾಂಸ್ಕೃತಿಕ ದುರಾಕ್ರಮಣ ಅಲ್ಲ, ಇದು ಒಳಗಿನ ಸಾಮಾಜಿಕ ಆಕ್ರಮಣ (intra- Social invasion). ಈ ಹಿನ್ನೆಲೆಯಲ್ಲಿ ಪ್ರಗತಿ ಅಥವಾ ಶ್ರೇಷ್ಠತೆಯ ಕಲ್ಪನೆಯ ವಿಚಾರಗಳನ್ನು ಪುನರ್ವಿಮರ್ಶಿಸಬೇಕಾಗಿದೆ. ಇದನ್ನು ಗಮನಿಸಿದರೆ ಆಕ್ರಮಣಶೀಲತೆಯ ಸ್ವರೂಪಗಳು ಗೋಚರಿಸುತ್ತವೆ.
* * *

ಪ್ರತಿಕ್ರಿಯೆ – ಚರ್ಚೆ

‘ಶ್ರೇಷ್ಠತೆಯ ಸವಾರಿ’ ಲೇಖನದ ಒಂದೆರೆಡು ಮಾತು. ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶಿಷ್ಟ, ಜಾನಪದ ನಂಬಿಕೆಗಳೆಂದು ಬೇರ್ಪಡಿಸುವುದು ತುಂಬ ಕಷ್ಟ. ಜಾನಪದ ದೇವತೆಗಳೂ ಶಿವ ಪಾರ್ವತಿಯರ ಅವತಾರಗಳೆಂದು ನಂಬಿ ವೀರಭದ್ರ, ಭೈರವ, ಚಾಮುಂಡಿ, ಚೌಡಿಗಳನ್ನು ಪೂಜಿಸುವ ಭಾವುಕ ಭಕ್ತರು ಹಿಂದೆಯೂ ಇದ್ದರು. ಇಂದಿಗೂ ಇದ್ದಾರೆ. ಲಜ್ಜಾಗೌರಿ, ಬನಶಂಕರಿ, ಎಲ್ಲಮ್ಮನ ಭಕ್ತರು ಯಾರು ಮತ್ತು ಬೇವಿನ ಸೊಪ್ಪು ಚಿಗುರೆಲೆ ನಾರು ಮುಡಿಗಳನ್ನು ಪೂಜಾ ವಿಧಾನದಲ್ಲಿ ಅಳವಡಿಸಿದವರು ಯಾರು? ಎಂದು ಯೋಚಿಸಹೋದರೆ, ವಿಭಾಜಿಸ ಹೋದರೆ Indian Ethosಗೆ ಚಿಕ್ಕ ಪರಿಧಿಯನ್ನು ಹಾಕಿದಂತೆ! ಮಹಾರಾಷ್ಟ ಕರ್ನಾಟಕಗಳಲ್ಲಿ ಅತ್ಯಂತ ಜನಪ್ರಿಯ ಜಾನಪದ ದೇವತೆಯಾದ ವಿಠೋಬ ಅಥವಾ ವಿಟ್ಠಲ ವಿಷ್ಣುವಿನ ರೂಪ ಎನ್ನುವವರಿಲ್ಲವೇ? ಭಕ್ತರಲ್ಲಿ ಶಿಷ್ಟರು ದಲಿತರು ಎಂದು ಬೇರೆ ಬೇರೆಯಾಗಿ ಇರುವರೇ?

ಲೇಖಕಿ ಉದ್ದರಿಸಿದ ಕನಕದಾಸರ ‘ಎಕ್ಕನಾತಿ ಎಲ್ಲಮ್ಮ ಮಾರಿ….’ ಪದ್ಯ ಬಾಹ್ಯಾಡಂಬರದ ಪೂಜಾ ವಿಧಾನಗಳನ್ನು ಖಂಡಿಸುತ್ತದಯೇ? ವ್ಯಾಸವಾಲ್ಮೀಕಿಯರ ಪರಂಪರೆಯ ನಾಡಿನಲ್ಲಿ ಹುಟ್ಟಿಬೆಳದು ದಾಸವರೇಣ್ಯರೆಂದು ಹಿಂದೊಮ್ಮ ಸಮಾಜದ ಸರ್‍ವ ಸದಸ್ಯರಿಂದ ಗೌರವಿಸಲ್ಪಟ್ಟ ಕನಕದಾಸರನ್ನು ದಲಿತ-ಕವಿ-ಭಕ್ತರೆಂದು ಪರಿಮಿತಿ ವರ್‍ಗಕ್ಕೆ ಹಾಕಲಿಕ್ಕಾಗುತ್ತದೆಯೇ? ಹಿಂದಿನವರೆಗೆ ಈ ದೃಷ್ಟಿಕೋನ ಬಾಧಿಸುತ್ತಿರಲಿಲ್ಲವೆಂದು ತೋರುತ್ತದೆ. ಮೌಖಿಕ ಪರಂಪರೆ ಗಟ್ಟಿಯಾದ ದೇಶದಲ್ಲಿ ದಾಸರ ಕೃತಿಗಳೆಲ್ಲ ಉಳಿದು ಬರಲು ಕಾರಣ ಹಾಡಲಿಕ್ಕೆ, ಪೂಜಿಸಲಿಕ್ಕೆ, ಬೋಧಿಸಲಿಕ್ಕೆ ಸಾಮಾಜಿಕ ತಾರತಮ್ಮವಿಲ್ಲದೇ ಎಲ್ಲರೂ ತಮ್ಮವನ್ನಾಗಿಸಿಕೊಂಡದ್ದು. ಅದರಲ್ಲೂ ದೀನ ದಲಿತರೆಂದು ಗುರುತಿಸಲ್ಪಡುವ ಜನವೇ ಈ ಹಾಡುಗಳನ್ನು ಚೌಡಿಕೆ, ಏಕತಾರಿ, ಕೋಲಾಟಗಳ ಮೂಲಕ ಜೀವಾಂತವಾಗಿರಿಸಿದ್ದರು.

ಜನಪದ ಮುಖ್ಯ ವ್ಯಕ್ತ ಆಚರಣೆಗಳು, ಪ್ರಾಗ್ರೂಪ ಪುರಾಣ, ಕೃಷಿ ಪ್ರಾಗ್ ತತ್ವ ಮುಂತಾದ ಶಬ್ಬಗಳನ್ನು ಮೂಲ ಇಂಗ್ಲಿಷ್ ಪದಗಳೊಂದಿಗೆ ಬಳಸಿದ್ದು, ಇವು ಪಾಶ್ಚಾತ್ಯ ಜಾನಪದ-ಸಾಹಿತ್ಯ ಇವುಗಳ ವಿಭಜನಾ ರೀತಿಯ ಅಧ್ಯಯನಕ್ಕೆ ಅನ್ವಯವಾಗುವವುಗಳೇ ಹೊರತು ಎಲ್ಲವನ್ನೂ ಕಬಳಿಸಿ ಅರಗಿಸಿಕೊಂಡು ಸ್ವಾರಸ್ಯರೂಪವನ್ನು ಜನತೆಗೆ ಕೊಡಮಾಡುವ ಈ ನೆಲದ ಜಾಯಮಾನದ ಸಂದರ್ಭದಲ್ಲಿ ‘ಶ್ರೇಷ್ಟ ಸವಾರಿ’ಯನ್ನು ಶೋಧಿಸಲು ಎಷ್ಟರಮಟ್ಟಿಗೆ ಸಹಾಯ ಮಾಡುತ್ತವೆಂಬುದನ್ನು ಯೋಚಿಸಬೇಕಾದ ಆಂಶ.

ಪುರೋಹಿತಶಾಹಿಯನ್ನು ಖಂಡಿಸಿದ ಬಸವರೇ ಕ್ರಮೇಣ ದೈವತ್ವ ಪಡೆದು ಅವರ ಹೆಸರಿನಿಂದಲೇ ಬಲವಾದ ಪುರೋಹಿತಶಾಹಿ ಬೆಳೆದುಬಂದದ್ದು ಈ ನೆಲದ ಗುಣವನ್ನು ತೋರಿಸುತ್ತದೆ. ಭಾರತೀಯ ಸಂಕೃತಿಯ ವಿಶಿಷ್ಟ (ಸಂಕೀರ್ಣವೂ ಹೌದು) ರೂಪವೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ಭಕ್ತ-ಸುಧಾರಕರು ಆಗಾಗ ಜನ-ಮನ ರೂಪಿಸುವ ಕಾರ್ಯ ಕೈಗೊಂಡರೂ ಜಾನಪದ ನಂಬಿಕೆಗಳು ಸಮಾನಾಂತರವಾಗಿ ಉಳಿದು, ಬೆಳೆದುಬಂದಿವೆ. ಪ್ರಗತಿ ಅಥದಾ ಶ್ರೇಷ್ಠತೆ ಎನ್ನುವ ಕಲ್ಪನೆ ಒಂದು ನಾಡಿನ ಜೀವನದಲ್ಲಿ ಒಂದೇ ಹಂತದಲ್ಲಿ ಕಂಡು ಬಂದ ಉದಾಹರಣೆಗಳು ವಿರಳವೆಂದು ಭಾರತದ, ಕನ್ನಡನಾಡಿನ ಚರಿತ್ರೆಯ ಅಭ್ಯಾಸ ತೋರಿಸಿಕೊಡುತ್ತದೆ.

-ಡಾ. ಜೋತ್ಸ್ನಾ ಕಾಮತ್

– ೩ –
ಪ್ರಿಯ ಸಂಪಾದಕರೆ,

ಶ್ರೀಮತಿ ಆರ್. ತಾರಿಣಿ ಶ:ಭದಾಯಿನಿ ಅವರ ‘ಶ್ರೇಷ್ಠತೆಯ ಸವಾರಿ (ಸಂವಾದ-೪೦) ಚಿಕ್ಕದಾದರೂ ಒಂದು ಮಹತ್ವದ ಸಾಂಸ್ಕೃತಿಕ ದುರಂತವನ್ನು ಎತ್ತಿ ತೋರುವ ಲೇಖನ. ನಮ್ಮ ಸಾಂಸ್ಕೃತಿಕ ಧಾರ್ಮಿಕ ಪುರುಷರು ಸುಧಾರಣೆಯ ಹೆಸರಿನಲ್ಲಿ ಮೂಢ ನಂಬಿಕೆಗಳ ನಿವಾರಣೆಯ ಪ್ರಕ್ರಿಯೆಯಲ್ಲಿ ನಮ್ಮ ಜನಪದದ ನೈಜ ಸಂಸ್ಕೃತಿಯನ್ನು
ನಾಶಪಡಿಸುವಲ್ಲಿ ವಹಿಸಿರುವ ಪಾತ್ರವನ್ನು ತಾರಿಣಿ ಸರಿಯಾಗೇ ಗುರಿತಿಸಿದ್ದಾರೆ. ಈ ಅಂಶವನ್ನು ಲಂಕೇಶರು ತಮ್ಮ ‘ಸಂಕ್ರಾಂತಿ’ಯಲ್ಲಿ, ಕೆ. ಜಿ. ನಾಗರಾಜಪ್ಪ ಅವರು ತಮ್ಮ ‘ಮರುಚಿಂತನೆ’ಯಲ್ಲಿ ಬೊಟ್ಟು ಮಾಡಿ ತೋರಿಸಿದ್ದಾರೆ.

ಜನಪದ ಪರಿಸರದಿಂದ ಪಟ್ಟಣದ ಪರಿಸರಕ್ಕೆ ಹೊಂದಿಕೊಂಡಿರುವ ನಮ್ಮ ಬಹುತೇಕ ಶೂದ್ರ ಸಮುದಾಯ ತಮ್ಮ ಮೂಲ ಸತ್ವಗಳನ್ನು ಕಳೆದುಕೊಂಡು ಮೇಲ್ಜಾತಿಯ ಶಿಷ್ಟ ಸಂಸ್ಕೃತಿ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳಲು ಹೆಣಗುತ್ತ ಒಂದು ಬಗೆ ಕೃತಕ ‘ಸುಸಂಸ್ಕೃತ’ ಜೀವನಕ್ಕೆ ಒಗ್ಗಿ ಹೋಗುತ್ತಿದ್ದಾರೆ. ಮೂರು ಪುಟ್ಟ ಕಲ್ಲಿಟ್ಟು ಅವಕ್ಕೆ ಅರಶಿಣ ಕುಂಕುಮ ವಿಭೂತಿ ಹಚ್ಚಿ ಊದುಕಡ್ಡಿ ಬೆಳಗಿ ಹೊಲ ಹೆಚ್ಚು ಮಾಡುತ್ತಿದ್ದವರು. ಹರಕೆ ಒಪ್ಪಿಸುತ್ತಿದ್ದವರು ಇಂದು ಅಂತಹವನ್ನೆಲ್ಲ ಹಳ್ಳಿಗಮಾರರ ನಡವಳಿಕೆಗಳೆಂದು ಮೇಲ್ಜಾತಿಯವರಿಗಿಂತ ತಾವೇ ಮುಂದೆ ನಿಂತು ಹೀಯಾಳಿಸುತ್ತಾರೆ. ತಿರುಪತಿ ತಿಮ್ಮಪ್ಪ ಧರ್‍ಮಸ್ಥಳದ ಮಂಜುನಾಥ ಇಂಥ ದೇವರುಗಳೇ ಶ್ರೇಷ್ಠ ಎಂಬ ಭಾವನೆ ಅವರಲ್ಲಿ ನೆಲೆನಿಂತಿದೆ. ತನ್ನೂರಿನ ತೇರೊಪ್ಪತ್ತಿಗೆ ಹೋಗುವುದಕ್ಕಿಂತ, ತನ್ನ ಮನೆ ದೇವರು ಮಾದೇಶ್ವರನ ವಾನ್ಯ ಎತ್ತಿಸುವುದಕ್ಕಿಂತ ತಿರುಪತಿಯ ಗರುಡೋತ್ಸವಕ್ಕೆ ಬ್ರಹ್ಮೋತ್ಸವಕ್ಕೆ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ, ಅಯ್ಯಪ್ಪನ ಯಾತ್ರೆಗೆ ಹೋಗುವುದೇ ಉಚ್ಚ ಸಂಸ್ಕೃತಿಯ ಅಥವಾ ಶ್ರೇಷ್ಠತೆಯ ಕುರುಹೆಂದು ನಂಬುತ್ತಾರೆ. ಪೂರ್ವದಲ್ಲಿ ತಾವು ಆಚರಿಸುತ್ವಿದ್ದ ಬಂಡಿಹಬ್ಬ, ಓಕಳಿಹಬ್ಬ, ಮಡೆಹಬ್ಬ, ಸುಂಕಿನಮಾರಿ, ಉರುಸು, ಪರಿಷೆಗಳಿಗಿಂತ ಗರುಡ ಪಂಚಮಿ, ಗೋಕುಲಾಷ್ಠಮಿ, ಸತ್ಯನಾರಾಯಣ ಪೂಜೆ ಇತ್ಯಾದಿ ವೈದಿಕ ಆಚರಣೆಗಳನ್ನು ತಮಗಿಲ್ಲದ ಕುಲಗೋತ್ರಗಳನ್ನು ಪುಜಾರಿಯ ಸಂಸ್ಕೃತ ಶಬ್ದಗಳ ಜತೆ ಸೇರಿಸಿ ಬೀಗಿ ಬರುತ್ತಾರೆ. ಜತೆಗೆ ಜಾತಕ ಬರೆಸುವ ಪಿಡುಗುಬೇರೆ. ಇನ್ನು ಭಾಷೆಯ ವಿಷಯದಲ್ಲಿ ಕೇಳುವುದೇ ಬೇಡ. ಅವ್ವನನ್ನು ಅಮ್ಮ ಮಮ್ಮಿ ಎಂದೋ Mother ಎಂದೋ ಪರಿಚಯಿಸುವುದು. ಅಪರೂಪಕ್ಕೆ ಬಸ್ಸಾರೋ ಪಜ್ಜಿಯೋ ಮಾಡಾದಾಗ ತಂಬುಳಿ ತಿಳಿಸಾರೆಂದು ಹೇಳಿ ತಮ್ಮ ಬೂಟಾಟಿಕೆಗಳನ್ನು ಪ್ರದರ್ಶಿಸಿಕೊಳ್ಳುತ್ತಾರೆ. ರಸ್ತೆ ಬದಿಯ ಗುಂಡನೆಯ ಕಲ್ಲೊಂದು ನಾಯಿಗಳ ಮೂತ್ರಾಭಿಷೇಕವಾಗುತ್ತಿದ್ದದ್ದು ಮಾರಿಯೋ ಮಸಣಿಯೋ ಆಗಿ ತನ್ನತ ಸುತ್ತ ಪಟ್ಟ ಗಡಿಯೆನಿಂದನ್ನು ಪಡೆದುಕೊಂಡಿದ್ದು ಅದಕ್ಕೊಬ್ಬ ಸ್ಥಳೀಯ ಕೆಳಜಾತಿಯ ಅರ್ಚಕನಿದ್ದೂ ಕ್ರಮೇಣ ಅದರ ಆದಾಯ ಹಿಗ್ಗಿದಂತೆ ಅದರ ಆಕಾರ ಆವಾರಗಳೂ ಹಿಗ್ಗಿ ಅಲ್ಲೊಂದು ದೊಡ್ಡ ದೇವಾಲಯವೇ ಎದ್ದು ಅದರ ಅರ್ಚಕನೂ ಪಲ್ಲಟಗೊಂಡು ಅವರ ಹೆಸರಲ್ಲಿ ಮುಂಜಾನೆಯ ಸುಪ್ರಭಾತ ಮೊಳಗುವ ಪವಾಡಗಳೂ ನಡೆಯುತ್ತಿವೆ. ಇವೆಲ್ಲ ಸಾಂಸ್ಕೃತಿಕ ಬೆಳವಣಿಗೆಗಳೇ? ಧರ್ಮಾಚರಣೆಗಳೇ? ನಿಜ. ಬಹುಜನಕ್ಕೆ ಒಂದು ದೇವರು ಒಂದು ಆಚರಣೆಬೇಕು. ಆದರೆ ತನ್ನ ಸ್ವಂತದ ನಡಾವಳಿಕೆಗಳನ್ನು ಕಳೆದುಕೊಂಡು/ಹೀಯಾಳಿಸಿಕೊಂಡು ತನ್ನದಲ್ಲದ ಹಾಗೂ ಮೂಲಭೂತವಾಗಿ ತನ್ನದಕ್ಕಿಂತ ಯಾವುದೇ ವಿಧದಲ್ಲಿ ಮಹತ್ವದ್ದಲ್ಲದ ಇನ್ನೊಬ್ಬರ, ಇನ್ನೊಂದರ ಸಂಸ್ಕೃತಿಗೆ ಜೋತು ಬೀಳುವುದು ಆಥವಾ ಮಾರು ಹೋಗುವುದು ಸಾಂಸ್ಕೃತಿಕ ಅಧಃಪತನವಲ್ಲದೆ ಇನ್ನೇನು?

-ಬಿ.ರಾಜಣ್ಣ
* * *

ಪ್ರತಿಕ್ರಿಯೆ-ಚರ್‍ಚೆ

೧. ಆರ್. ತಾರಿಣಿ ಶುಭದಾಯಿನಿ ಅವರ ‘ಶ್ರೇಷ್ಮತೆಯ ಸವಾರಿ’ (ಸಂವಾದ-೪೦) ಲೇಖನಕ್ಕೆ
ಒಂದು ಪ್ರತಿಕ್ರಿಯೆ.

ಶ್ರೇಷ್ಠತೆಯ ಕಲ್ಪನೆ, ಮನುಷ್ಯನಿಗೆ ಎಲ್ಲಿಂದ ಮತ್ತು ಯಾಕಾಗಿ ಬರುತ್ತದೆ ಎಂಬ ಸರಳ ಪ್ರಶ್ನೆಯೊಂದಿಗೆ ಆರಂಭಿಸಿರುವ ತಮ್ಮ ಲೇಖನದಲ್ಲಿ ತಾರಿಣಿ ಶುಭದಾಯಿನಿಯವರು ಶ್ರೇಷ್ಠ-ಕನಿಷ್ಟ ಅರ್ಥಾತ್ ಮೇಲು ಕೀಳು ಪರಿಕಲ್ಪನೆಗಳು ಮನುಷ್ಯ ಬದುಕಿನಲ್ಲಿ ಶಾಶ್ವತವಾಗಿ ನೆಲೆಗೊಂಡಿರುವುದನ್ನು ಐತಿಹಾಸಿಕ ಆಧಾರಗಳಿಂದ ಸ್ಪಷ್ಟಗೊಳಿಸುತ್ತಾ, ಶ್ರೇಷ್ಠತೆಯ ಸವಾರಿ ಎಲ್ಲಾ ಕಾಲಘಟ್ಟಗಳಲ್ಲಿ ಅನೂಚಾನವಾಗಿ ಸಾಗಿ ಬಂದಿರುವುದನ್ನು ವಿಶದಪಡಿಸಿದ್ದಾರೆ. ಸಮಾನತೆಯ ಪರಿಕಲ್ಪನೆ (Egalitarian concept)ಜಾರಿಗೊಳಿಸಲಾಗದ, ನೆಲೆಗೊಳಿಸಲಾಗದ, ಅತ್ಯಾದರ್‍ಶ (utopia)ಎನ್ನುವ ದ್ವನಿ ಲೇಖನದಲ್ಲಿದೆ. ಇದಕ್ಕೆ ಸಮರ್ಥನೆಯಾಗಿ ಸಾಮ್ರಾಜ್ಯಶಾಹಿ ಮತ್ತು-ಅಥವಾ ಪುರೋಹಿತಶಾಹಿ ಅಂಶಗಳು ಒಂದಲ್ಲಾ ಒಂದು ವಿಧದಲ್ಲಿ ಶಾಶ್ವತವಾಗಿ ಶೋಷಣೆಗೊಳಗಾಗಿರುವುದನ್ನು ಅವರು ಗ್ರಹಿಸಲಿಲ್ಲ. ಆದರೆ ಶ್ರೇಷ್ಟತೆಯ ಪರಿಕಲ್ಪನೆಯಿಂದಾಗಿಯೇ ಈ ಸ್ಥಾನಪಲ್ಲಟ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ ಎನ್ನುವುದು ಉತ್ತಮ ಗ್ರಹಿಕೆ.

ವಸಾಹತುಶಾಹಿಗಿಂತ ಸಾಮ್ರಾಜ್ಯಶಾಹಿ ಶ್ರೇಷ್ಠ, ಹೆಣ್ಣಿಗಿಂತ ಗಂಡು ಶ್ರೇಷ್ಠ, ಜನಪದ ಸಾಹಿತ್ಯಕ್ಕಿಂತ ಶಿಷ್ಠ ಸಾಹಿತ್ಯ ಶ್ರೇಷ್ಟ, ಮಾರಿ ಮಸಣಿಯರಿಗಿಂತ ಶಿವ ವಿಷ್ಣು ಶ್ರೇಷ್ಠ ಎನ್ನುವ ಜಾಡಿನಲ್ಲಿ ಸಾಗಿದ ಶ್ರೇಷ್ಠತೆಯ ಸವಾರಿ ಬಗೆಗಿನ ಅವರ ಆಲೋಚನೆ ಪ್ರಗತಿಗಾಮಿ ಸುಧಾಕರರಾದ ವಚನಕಾರರ ದಾಸರುಗಳ ಸಾಹಿತ್ಯವೂ ಶ್ರೇಷ್ಠತೆಯ ಹಮ್ಮು ಬಿಮ್ಮುಗಳಲ್ಲಿ ನಲಗುತ್ತಿರುವುದಾಗಿ ಗ್ರಹಿಸುತ್ತದೆ. ವೈದಿಕ ಪರಂಪರೆಯ ಪ್ರತಿಗಾಮಿ ಸಂಸ್ಕೃತಿ ತಮ್ಮ ಧಾರ್ಮಿಕ ಆಚರಣೆಗಳಲ್ಲಿ ವೈದಿಕ ಪರಂಪರೆಯ ಮುಂದುವರಿಕೆಯಾಗಿದೆಯೇ? ಪ್ರತಿಗಾಮಿ ಸಂಸ್ಕೃತಿಯ ಅಮಾನವೀಯ ಸಂಕೋಲೆಗಳನ್ನು ಧಿಕ್ಕರಿಸುವ ನಿಟ್ಟಿನಲ್ಲಿ ವಚನಕಾರರು ಮತ್ತು ದಾಸರು ಪ್ರತಿಪಾದಿಸಿದ ಏಕದೇವೋಪಾಸನೆ ಸಂಸ್ಕೃತಿ ಶೋಷಿತ ವರ್ಗದವರ ಬಹುದೇವೋಪಾಸನೆ ಸಂಸ್ಕೃತಿಯ ಮೇಲಿನ ಸಾಂಸ್ಕೃತಿಕ ದಾಳಿ (Cultural invasion) ಅಥವಾ ಹೇರಿಕೆ ಎನ್ನಬಹುದೇ? ಎನ್ನುವುದನ್ನು ಆರೋಗ್ಯಕರ ಚರ್‍ಚೆಗೆ ಒಳಪಡಿಸಬೇಕೆಂಬುದೇ ನನ್ನ ಈ ಪ್ರತಿಕ್ರಿಯೆಯ ಉದ್ದೇಶ.

ವೈದಿಕ ಪರಂಪರೆಯ ವಿರೋಧೀ ನೆಲೆಗಳೂ ಶಿಷ್ಠ ಸಂಸ್ಕೃತಿಯಾಗಿ ರೂಪಾಂತರಗೊಂಡು ಬಹು ಸಂಖ್ಯಾತರೆ, ಶೋಷಿತರ ಜನಪರ ಸಂಸ್ಕೃತಿಯನ್ನು ಲೇವಡಿಮಾಡುತ್ತಾ ಆ ಸಮುದಾಯದ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದನ್ನು, ಅಭಿಪ್ರಾಯ ಹೇರುವುದನ್ನು ಸಾಮ್ರಾಜ್ಯಶಾಹಿ ಮತ್ತು ಪುರೋಹಿತಶಾಹಿ ಸಂಸ್ಕೃತಿಯ ಮುಂದುವರಿಕೆ ಎನ್ನುವ ಅಭಿಪ್ರಾಯವಿದೆ. ಉಪ ಸಂಸ್ಕೃತಿಯನ್ನು ಸಂರಕ್ಷಿಸುವ ಕಾಳಜಿ ಇರುವ (?) ನಮ್ಮ ಕುಲಮಿತ್ರರ ಅಭಿಪ್ರಾಯ ಕೂಡಾ ಇದೇ ಆಗಿದೆ. ಬಹುಶಃ ಈ
interference (?) ಮತ್ತು imposition (?) ಗಳನ್ನೇ ತಾರಿಣಿ ಶುಧುದಾಯಿನಿಯವರು Intra Cultural invasionಎಂದು ಕರೆದಿರುವುದು ಹೊರ ನೋಟಕ್ಕೆ ಸೂಕ್ತವಾಗಿಯೇ ಇದೆ. ಇದಕ್ಕೆ ಸಮರ್ಥನೆಗಳೂ ಇಲ್ಲದಿಲ್ಲ.

ಎರಡನೆಯದಾಗಿ ಧಾರ್ಮಿಕ ಸುಧಾರಕರು ಜನಪದ ಉಪ ಸಂಸ್ಕೃತಿಗಳನ್ನು ಲೇವಡಿ ಮಾಡಿದುದರ ಬಗ್ಗೆ ಮತ್ತು ಹಸ್ತಕ್ಷೇಪದ ಬಗ್ಗೆ; ಈ ಉಪ ಸಂಕೃತಿಗಳನ್ನು ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗಬಯಸುವ ಜನ ತಾವು ಆ ಸಂಸ್ಕೃತಿಯೊಳಗಿನ ಎಲ್ಲ ಕಂದಾಚಾರಗಳನ್ನು ಸಮರ್‍ಥಿಸಿಕೊಳ್ಳುತ್ತಾ ಮತ್ತೊಮ್ಮೆ ಆ ಮುಗ್ಧ ಜನರನ್ನು ಶಿಲಾಯುಗ ಸಂಸ್ಕೃತಿಗೆ ಕೊಂಡೊಯ್ಯುವ ತಪ್ಪು ಮಾಡುತ್ತಿದ್ದೇವೆಂಬುದನ್ನು ಅರಿಯಬೇಕು. ಶಿಷ್ಠ ಸಂಸ್ಕೃತಿಯಲ್ಲಿ ಕಂದಾಚಾರಗಳಿವೆ ಎಂಬ ಕಾರಣಕ್ಕೆ ಶೋಷಿತ ವರ್ಗದವರ ಮೂಢನಂಬಿಕೆಗಳನ್ನು ಸಮರ್‍ಥಿಸುವ ಮುಂದುವರಿಸುವ ಪ್ರಯತ್ನಗಳು ಆ ವರ್ಗಕ್ಕೆ ಎಳ್ಳಷ್ಟೂ ನ್ಯಾಯ ಒದಗಿಸುವುದಿಲ್ಲ. ಬದಲಾಗಿ ಊಳಿಗಮಾನ್ಯ ಸಂಸ್ಕೃತಿ ಹುಟ್ಟು ಹಾಕಿದಂತಹ ಬೆತ್ತಲೆ ಸೇವೆ, ದೇವದಾಸಿ ಪದ್ದತಿ, ಜೀತ ಪದ್ದತಿ, ಮಾರಿ ಜಾತ್ರೆಗೆ ಸವರ್ಣೀಯರು ಕೊಡಿಸುವ ಕೋಣವನ್ನು ಮಾರಮ್ಮ ದುರುಗಮ್ಮಗಳಿಗೆ ಬಲಿಕೊಟ್ಟು ದಲಿತರು ತಿನ್ನುವ ಪದ್ದತಿಗಳಿಗೆ ಅತಾರ್ಕಿಕ ಸಮರ್ಥನೆ ನೀಡಿದಂತಾಗುತ್ತದೆ. ಶಿಷ್ಠ ಸಂಸ್ಕೃತಿಯಲ್ಲಿ ದೇವರಿಗರ್‍ಪಿಸುವ ಸಸ್ಯಹಾರದ ನೈವೇದ್ಯ ಆಥವಾ ಬಲಿಕೂಡ. ಆದರೆ ಇಲ್ಲಿ ಗಮನಿಸಬೇಕಾಗಿರುವುದು ವಚನಕಾರರ ಶರಣ ಸಂಸ್ಕೃತಿಯಲ್ಲಿನ ಪ್ರಸಾದ, ಪಾದೋದಕಗಳು ದೇವಸ್ಥಾನಗಳಲ್ಲಿ ಪಡೆಯುವ ತೀರ್‍ಥ ಪ್ರಸಾದಗಳಾಗದೆ ಉದರ ಪೋಷಣೆಗಾಗಿ ತನ್ನ ಶ್ರಮದಿಂದ (ಕಾಯಕ)ಗಳಿಸಿ ತಿನ್ನುವ ಪ್ರತಿ ತುತ್ತು ಅನ್ನ ಗುಟುಕು ನೀರೇ ಬೇರೇನೂ ಆಲ್ಲ. ತಾನೂ ಉಂಡು, ಇತರರಿಗೂ ಉಣ ಬಡಿಸುವ ಪರಿಕಲ್ಪನೆಯನ್ನು ನೀಡುವಂಥಹದೇ ದಾಸೋಹ. ೧೨ ನೇ ಶತಮಾನದ ಶರಣರ ಈ ಸಂಸ್ಕೃತಿಯಲ್ಲಿ ಒಬ್ಬರ ಕಾಲುಗಳನ್ನು ಮತ್ತೊಬ್ಬರು ತೊಳೆದು ಆ ನೀರನ್ನು ಪಾದೋದಕ ಎಂದು ಕುಡಿದ ಉದಾಹರಣೆಗಳಿಲ್ಲ; ಕಾಲುಗಳನ್ನು ಮುಟ್ಟಿ ನಮಸ್ಕರಿಸುವುದೂ ಕಂಡುಬರುವುದಿಲ್ಲ. ಬದಲಾಗಿ ‘ಶರಣೆಂ’ದವರಿಗೆ ‘ಶರಣು-ಶರಣು’ ಎನ್ನುವ, ಹರಳಯ್ಯನ ಚರ್ಮದ ಚಪ್ಪಲಿಗಳನ್ನು ತಲೆಯಮೇಲಿಟ್ಟುಕೊಂಡ ಅಪೂರ್‍ವ ವಿನಯವನ್ನು ಮನುಷ್ಯ ಸಹಜ ಭಾವುಕತೆಯನ್ನು ಬಸವಣ್ಣನವರಲ್ಲಿ ಕಾಣುತ್ತೇವೆ. ಅನುಭವ ಮಂಟಪದ ಅಂದಿನ ಎಲ್ಲ ಶರಣರಲ್ಲೂ ಕಾಣುತ್ತೇವೆ.

ಇದನ್ನು ಯಾಕೆ ಹೇಳಬೇಕಾಯಿತೆಂದರೆ, ತಾರಿಣಿ ಶೋಭದಾಯಿನಿಯವರು ತಮ್ಮ ಲೇಖನದಲ್ಲಿ ಬಸವಣ್ಣನವರ ವಚನದಲ್ಲಿ ‘ಪ್ರಸಾದ’, ‘ಪಾದೋದಕ’ವನ್ನು ಬೇರೊಂದು ರೀತಿಯಲ್ಲಿ ಗ್ರಹಿಸಿರುವುದು. ಬಹುಶಃ ಅವರ ಈ ಗ್ರಹಿಕೆಗೆ ಶರಣ ಸಂಪ್ರದಾಯಗಳ ವಕ್ತಾರರೆನ್ನಿಸಿಕೊಂಡ ಮಠಾಧಿಪತಿಗಳು ಬಸವಣ್ಣನ ವಿಗ್ರಹಕ್ಕೆ, ಗದ್ದುಗೆಗಳಿಗೆ ಮಾಡುವ ರುದ್ರಾಭಿಷೇಕ, ಕೊಡುವ ಪ್ರಸಾದ-ತೀರ್ಥಗಳ ಅವಾಂತರಗಳ ಪ್ರತ್ಯಕ್ಷಾನುಭವವಿರಬೇಕು. ಇವುಗಳನ್ನೇ ಪ್ರಸಾದ ಪಾದೋದಕ ಎಂದುಕೊಂಡರೆ ಅದು ೧೨ ನೇ ಶತಮಾನದ ಶರಣರಿಗೆ ಅವರ ತತ್ವಗಳಿಗೆ ಮಾಡಿದ ಅಪಚಾರವಾದೀತು. ಇವತ್ತಿನ ‘ಸಮಾಜವ್ಯಾಧಿ’ ರಾಜಕಾರಣಿಗಳನ್ನು ನೋಡಿ ಲೋಹಿಯಾ, ನರೇಂದ್ರದೇವ ಮುಂತಾದ ಸಮಾಜವಾದಿಗಳ ಬಗ್ಗೆ ಅರ್ಥೈಸುವುದು ಎಷ್ಟು ಅಪಾಯಕರವೋ, ಅಷ್ಟೇ ಅಪಾಯಕರ ಇವತ್ತಿನ ಸ್ಥಾವರ ಮಠಗಳ ಆಚರಣೆಗಳೂ ಆಧರಿಸಿ ೧೨ ನೇ ಶತಮಾನದ ಶರಣರ ಬಗ್ಗೆ ತೆಗೆದುಕೊಳ್ಳುವ ತೀರ್ಮಾನಗಳೂ ಆಗುತ್ತವೆ. ದಲಿತ ಸಂಸ್ಕೃತಿ, ಉಪಸಂಸ್ಕೃತಿಗಳನ್ನು ಪೋಷಿಸಬೇಕೆನ್ನುವ ನಮ್ಮ ಮಿತ್ರರೂ ಕೂಡ ಶ್ರೇಷ್ಠ-ಕನಿಷ್ಠ ಸಂಕೃತಿಗಳ ಜಿಜ್ಞಾಸೆಯಲ್ಲಿ ೨೧ನೇ ಶತಮಾನದಲ್ಲಿ ಶಿಲಾಯುಗ ಸಂಸ್ಕೃತಿಯನ್ನು ಜಾರಿಗೊಳಿಸಬೇಕೆನ್ನುವ ತಪ್ಪನ್ನು ಮಾಡುತ್ತಿರುವುದು ವಿಷಾದನೀಯ.

-ಜಿ. ಎನ್. ಮಲ್ಲಿಕಾರ್ಜುನಪ್ಪ

(ಈ ಲೇಖನ ‘ಸಂವಾದ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಇಲ್ಲಿ ಮೂರನ್ನು ಮಾತ್ರ ಆಯ್ಕೆಮಾಡಿ ಪ್ರಕಟಿಸಲಾಗಿದೆ).
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ
Next post ನಮ್ಮ ಜೀವ ನಮಗೆ ಬಿಡಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys