ಕಾದು ಕಾದು ಸೀದು ಹೋದೆ
ನಲ್ಲ ನಿನ್ನ ಬಯಸಿ
ನನ್ನ ಮರೆತು ಎಲ್ಲಿ ಹೋದೆ
ಹೊಸ ಪ್ರೀತಿಯನರಸಿ?
ಒಂದೇ ಪ್ರೀತಿ ಮಾತಿಗಾಗಿ
ಕಾದೆ ಹಿಂದೆ ದಿನ ದಿನಾ
ಹಂಬಲಿಸಿದೆ ನೋಡಲೆಂದು
ಮುಟ್ಟಲೆಂದು ಪ್ರತಿಕ್ಷಣ
ಒಣಗಿದೆಲೆಯ ರಾಶಿ ನಡುವೆ
ಬಿದ್ದ ಕಿಡಿಯ ರೀತಿ
ಜ್ವಾಲೆಯಾಗಿ ಹರಡುತಿತ್ತು
ಹಿಂದೆ ನಿನ್ನ ಪ್ರೀತಿ
ಹಾಗೆ ಉರಿದು ಹೀಗೆ ಮುಗಿಯ-
ಬಹುದೆ ಭಾವಜ್ವಾಲೆ?
ಮುಗಿಯಲು ಅದು ಪ್ರೀತಿಯೇ
ಅಥವಾ ಮೈಯ ಗೀಳೇ?
*****
ಪುಸ್ತಕ: ನಿನಗಾಗೇ ಈ ಹಾಡುಗಳು
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.