ನಿರಾಳ ಲಿಂಗವ ಕಾಂಬುದಕ್ಕೆ ಮನ ಮತ್ತೊಂದೆಡೆಗೆ ಹರಿಯದಿರಬೇಕು.
ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು.
ತನುವಿನಲ್ಲಿ ಮರಹಿಲ್ಲದಿರಬೇಕು. ಕಾಳಿಕೆ ಹೋಗದಿರಬೇಕು.
ಇಂತು ನಿಶ್ಚಿಂತವಾಗಿ, ಚಿತ್ತಾರದ ಬಾಗಿಲವ ತೆರೆದು,
ಮುತ್ತುಮಾಣಿಕ ನವರತ್ನ ತೆತ್ತಿಸಿದಂತಿರುವ
ಮೇಗಳ ಶಿವಾಲಯವ ಕಂಡು, ಮನ ಅಚ್ಚೊತ್ತಿದಂತಿರ್ದು,
ಇತ್ತ ಮರೆದು ಅತ್ತಲೆ ನೋಡಿ, ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****