Home / ಕವನ / ಕವಿತೆ / ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಹಾಡು – ೧

ಹೇಳಿರಣ್ಣ ಹೇಳಿರೊ
ಬುದ್ಧಿವಂತ ಜನಗಳೆ
ಕೇಳಿರಣ್ಣ ಕೇಳಿರೊ
ಮನಸುಳ್ಳ ಜನಗಳೆ ||

ಹೇಳಿರಣ್ಣ ಹೇಳಿರೊ
ಹೆಣ್ಣೆಚ್ಚೊ ಗಂಡಚ್ಚೊ ||

ಹೆಣ್ಣೆಚ್ಚು ಎಂಬುವರು
ಕಾರಣವ ತಿಳಿಯಿರೊ
ಗಂಡೆಚ್ಚು ಎಂಬುವರು
ಕಾರಣವ ಹೇಳಿರೊ ||

ಮಗುವಾಗಿ ಹುಟ್ಟಿದ್ದು
ಹೆಣ್ಣೇಗೆ ಆಯಿತು ?
ಮಗುವಾಗಿ ಹುಟ್ಟಿದ್ದು
ಗಂಡ್ಹೇಗೆ ಆಯಿತು? ||

ಹೆಣ್ಣೋಗಿ ಗಂಡ್ಹೋಗಿ
ಮಗುವಾಗೋದ್ಯಾವಾಗ
ಮನುಷ್ಯನ ಮನಸೋಗಿ
ಮಗು ಮನಸ್ಯಾವಾಗ ||

ಹಾಡು – ೨

ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||

ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ನಿಮಿಗೆ ಜನ್ಮ ಕೊಟ್ಟವಳು | ಹೆಣ್ಣಲ್ಲವೆ
ಹೆತ್ತು ಹೊತ್ತು ಸಾಕಿದವಳು | ಹೆಣ್ಣಲ್ಲವೆ
ಎದೆ ಹಾಲು ನಿಡಿದವಳು | ಹೆಣ್ಣಲ್ಲವೆ
ಕೈತುತ್ತು ತಿನಿಸಿದವಳು | ಹೆಣ್ಣಲ್ಲವೆ
ತಾಯಾಗಿ ಮರುಗಿದವಳು | ಹೆಣ್ಣಲ್ಲವೆ
ಅಕ್ಕ ತಂಗಿಯಾದವಳು | ಹೆಣ್ಣಲ್ಲವೆ
ಅತ್ತೆ ಸೊಸೆಯಾದವಳು | ಹೆಣ್ಣಲ್ಲವೆ
ಜೀವನ ಸಂಗಾತಿಯಾದವಳು | ಹೆಣ್ಣಲ್ಲವೆ
ಅತ್ತು ಮರುಗುದಿವಳು | ಹೆಣ್ಣಲ್ಲವೆ
ಮಮತೆಯ ಮಡಿಲಾದವಳು | ಹೆಣ್ಣಲ್ಲವೆ
ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||
ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ಹಾಡು – ೩

ಮಕ್ಕಳು ನಮ್ಮ ಮಕ್ಕಳಣ್ಣ
ಗಂಡು ಹೆಣ್ಣು ಅಂತೆಲ್ಲ
ಭಿನ್ನ ಭೇದ ತರವಲ್ಲಣ್ಣ ||

ಗಂಡಾಗಿ ಹೆಚ್ಚೇನು
ಹೆಣ್ಣಾಗಿ ಕೀಳೇನು
ನಮ್ಮ ಮನದ ವಿಕಾರವು
ಆಗುವುದೆಂದು ನಾಶವು ||

ಹೆಣ್ಣೆಂದು ಅಬಲೆಯಳು
ಎಂಬುದೇ ಅಜ್ಞಾನ
ಏನೆಲ್ಲ ಸಾಧಿಸಲುಳು
ಬೇಕು ಸಮಾನತೆಯು ||

ಹಾಡು – ೪

ಹೆಣ್ಣೆಂಬುದು ಕೇಳಣ್ಣ
ಗಂಡು ಮಾಡಿದ ರಾಜಕೀಯ ||

ವಿದ್ಯೆ ಕೊಡಲಿಲ್ಲ
ಬುದ್ಧಿ ಹೇಳಿಲಿಲ್ಲ
ಅವಳ ಬುದ್ಧಿಗೆ ಮೊದಲು
ಬೆಲೆಯ ಕೊಡಲಿಲ್ಲ ||

ಮಾತಿಗೆ ಮುನ್ನ ಬಾಯಿ ಮುಚ್ಚಿಸಿ
ತಲೆ ತುಂಬಾ ಚಿಂತೆ ಹೆಚ್ಚಿಸಿ
ಬಲವಿದ್ದೂ ಹೀನಳ ಮಾಡಿ
ಸುತ್ತಲು ತೊಡಿಸಿ ಬೇಡಿ ||

ಮೊದಲ ಸ್ಥಾನಕೆ ಬರದಂತೆ
ಸದಾ ಮಾಡುತ ಕುತಂತ್ರ
ಜಗದಲೆಲ್ಲ ಎರಡನೆ ದರ್ಜೆಗೆ
ಬಾಳುವಂತಾಯಿತೆ ಹೆಣ್ಣಿಗೆ ||

ಹಾಡು – ೫

ಭಿನ್ನ ಭೇದವ ಮಾಡಬ್ಯಾಡಿರಿ
ಗಂಡೆಚ್ಚೊ ಹೆಣ್ಣೆಚ್ಚೊ ಅನ್ನಬ್ಯಾಡಿರಿ ||

ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು
ಬಿಟ್ಟಿರದ ಬಂಧಾನ ನಡಕಂಡು
ಬಂದೈತೆ ಅನಂತ ರಗಳೆ ಯಾಕಂತ
ಚನ್ನಾಗಿ ತಿಳಿ ನೀನು ಮತಿವಂತ ||

ರೂಪಕೆ ಸೋಲಬ್ಯಾಡ
ಗುಣವಾ ಮರಿಬ್ಯಾಡ
ಹೆಣ್ಣು ನಿನ್ನ ಸುಖದಾ
ಕಣ್ಣಾ ಗೊಂಬೇನು ||

ದುಡ್ಡೀನ ಕಾಲಕೆ ದೊಡ್ಡವನಾಗಿ
ಬಡ್ಡಿಯ ಕಾಲಕೆ ಗಿಡ್ಡವನಾಗಿ
ಹೆಣ್ಣಿನ ಪ್ರೀತಿಯೆ ಚಿಗುರಾಗಿ
ಬೆಳೆಯುವೆ ಹೆಮ್ಮರವಾಗಿ ||

*****

 

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...