ಮುಂಜಾವಿನ ಚುಮುಚುಮು ಚಳಿಗೆ
ಸೂರ್ಯನ ಬೆಚ್ಚನೆಯ ಸ್ಪರ್ಶ
ನೇಸರನ ಹಸಿಬಿಸಿ ಮುತ್ತಿಗೆ
ಪಾಲುದಾರಳಾದ ಭೂಮಿಗೆ ಹರ್ಷ
ಚಳಿಗಾಳಿಯ ಚಲನೆಗೆ
ಜಡವಾಗಿದೆ ನಿಸರ್ಗ
ಚಿಂವ್ ಚಿಂವ್ ಕೂಗುತ್ತಾ
ಸ್ವಾಗತಿಸಿದೆ ಬೆಳಕನ್ನು ಪಕ್ಷಿ ವರ್ಗ
ಕೆಂಪು ಗುಲಾಬಿ ಅರಳಿ ನಿಂತಿದೆ
ಮನೆಯಂಗಳದಲ್ಲಿ
ಎಲೆಯಲ್ಲಿ ಇಬ್ಬನಿಯ ಹನಿಗುರುತು
ಪ್ರೇಮದ ಸಂಕೇತವೆಂಬಂತೆ
ಗಿಡಮರಗಳು ತುಂಬಿಕೊಂಡಿವೆ
ಬಸಿರನ್ನು ತಮ್ಮೊಡಲೊಳಗೆ
ಸೂರ್ಯನ ಸ್ಪರ್ಶದ ಪ್ರತಿಫಲವಾಗಿ
ಬಸಿರಾದ ಧರಿತ್ರಿ
ಜಡವಾಗಿದ್ದ ಜಗದ ಚಟುವಟಿಕೆ
ಮರುಜೀವ ಪಡೆದಿದೆ
ಮೈಮುರಿದು ತೆರೆದುಕೊಳ್ಳುತ್ತಿದೆ
ಉಲ್ಲಾಸದ ಪ್ರಪಂಚ
ರವಿಯು ಕವಿಯಾಗಿ ಬರೆದ
ಕವನ ಈ ಮುಂಜಾನೆ
ಕವನದ ಕೊನೆಯಲ್ಲಿ ಕವಿ
ತುಂಬಿದ್ದಾನೆ ಉತ್ಸಾಹದ ಚಿಲುಮೆ.
*****


















