ಎಷ್ಟೋ ನಾಡುಗಳಿವೆ ಎಷ್ಟೋ ಕಾಡುಗಳಿವೆ
ಕಾಸರಗೋಡು ಒಂದೇ
ಅದು ನಾ ಹುಟ್ಟಿ ಬೆಳೆದ ನಾಡು
ಕಾಶ್ಮೀರವಲ್ಲ ಕುಲು ಮನಾಲಿಯಲ್ಲ
ನೀಲಗಿರಿ ಊಟಿಯಲ್ಲ
ಆದರೂ ಅದಕಿರುವುದು
ಅದರದೇ ಆದ ಚಂದ
ಪಡುಗಡಲ ತಡಿಯ
ಒಂದು ತುಣುಕು
ಸುಂದರ ಚಂದ್ರಗಿರಿ ನದಿಪಕ್ಕ
ಚಂದ್ರಖಂಡದಂತದರ ಸೊಬಗು
ಭೋರ್‍ಗರೆವ ಸಮುದ್ರ ಪಡುವಲಲಿ
ಆಕಾಶಚುಂಬಿ ಸಹ್ಯಾದ್ರಿ ಬೆಟ್ಟ ಮೂಡಲಲಿ
ಮಧ್ಯೆ ಹಾಸಿ ಮಲಗಿದೆ ನಮ್ಮ
ಪ್ರೀತಿಯ ಕಾಸರಗೋಡು
ಕನ್ನಡ ತುಳು ಮಲೆಯಾಳ
ಕೊಂಕಣಿ ಮರಾಠಿ ಉರ್‍ದು
ಹಲವು ಹಕ್ಕಿಗಳ ಕಲರವದಂತೆ
ಅದೆ ಒಂದು ಕೇಳ್ವ ಸೊಗಸು
ದೇವಾಲಯ ಇಗರ್‍ಜಿ ಮಸೀದಿ
ಅಲ್ಲಲ್ಲಿ ಜಾತ್ರೆ ತೇರು ಬೆಡಿ ಸಂತೆ ಭೂತಕೋಲ
ಚೆಂಡೆ ಮದ್ದಳೆ ಯಕ್ಷಗಾನ ಬಯಲಾಟ
ಲೋಕದೊಳಗೆ ಇದೊಂದು ಲೋಕ
ಮಾವು ಇಮ್ಮಾವು ಹಲಸು
ತೇಗ ಬೀಟೆ ಶ್ರೀಗಂಧ
ಗೇರು ಬೀಜ ಕಾಳು ಮೆಣಸು
ಹುಲಿ ಹಂದಿ ಕಾಡು ಗೆಣಸು
ಕಂಗು ತಂಗು ಬಾಳೆ ಹಸಿರು
ಭತ್ತ ಕಬ್ಬು ಗದ್ದೆ ಬಯಲು
ಬೆಟ್ಟ ಕಣಿವೆ ಹಳ್ಳಕೊಳ್ಳಗಳ
ನೋಟ ಸಾಲುಸಾಲು
ಅದು ನೋಡು ಬೆರ್‍ಚಪ್ಪ
ಇದು ನೋಡು ಬೈಪಣೆ
ಇದು ತೊಂಡೆ ಚಪ್ಪರ ಬೆಂಡೆ ಬದನೆ ಸಾಲು
ಅಲಸಂಡೆ ಕುಂಬಳ ಸಿಹಿಗುಂಬಳ
ಸೊರಕಾಯಿ ಸೌತೆ
ಅಲ್ಲಲ್ಲಿ ಸಿಹಿನೀರ ಒರತೆ
ಇನ್ನೇನು ಯಾವುದಕೆ ಕೊರತೆ
ನೋಡುನೋಡು ಪನ್ನೀರು
ನೋಡು ಮಲ್ಲಿಗೆ ಸೇವಂತಿಗೆ
ನೋಡು ಎರವಂತಿಗೆ ನಿತ್ಯಪುಷ್ಪ
ನೋಡು ಕೇದಿಗೆ ರತ್ನಕಂಟಿಕೆ ಇದು ತುಲಸಿ
ನೋಡಿದೋ ತುಂಬಿ ಜೇನ್ನೊಣ ಜೇನು
ತೊಡವೆ ಮಂಜೆಟ್ಟಿ ಕೋಲುಜೇನು ಹೆಜ್ಜೇನು
ಇದೊ ಕಾಗೆ ಕೋಗಿಲೆ ಗಿಳಿ ಗುಬ್ಬಿ ಬಜಕರೆ ಹಕ್ಕಿ
ಇದಿಗೊ ಮನೆಬಾಗಿಲಿಗೆ ಸಿಹಿನೀರ ತರುವ ಅಬ್ಬಿ
ಕುಂಬಳೆ ಮಂಜೇಶ್ವರ ಮಂಗಲ್ಪಾಡಿ
ಕಾರಡ್ಕ ಬದಿಯಡ್ಕ ಬೋವಿಕಾನ
ಪೆರ್‍ಲ ಮುಳ್ಳರ್‍ಯ ಸುಳ್ಯ ಮಧೂರು
ಸೂರಂಬೈಲು
ಏನೆಂಥ ಹೆಸರುಗಳ ಊರು
ಓ ಆತ ಪಕೀರ ಈತ ಕೊರಗ ತುಕ್ರ ತನಿಯ
ಅವ ಮಾಲಿಂಗು ಈಕೆ ಕೊರಪಾಳು
ಇನ್ನಿವಳು ಬೆಳಚ್ಚಿ
ನನ್ನನೆತ್ತಿದವರು ಸೊಂಟದಲಿ ಹೆಗಲಲ್ಲಿ
ನೆತ್ತಿಯಲಿ
ನನ್ನನಾಡಿಸಿದವರು ಪ್ರೀತಿ ನೀಡಿದವರು
ಮಾತು ಕಲಿಸಿದವರು
ಈಗೆಲ್ಲಿ ಅವರು ಓ ಈಗೆಲ್ಲಿ ಅವರು
ಪಂಪನಿಗೆ ಬನವಾಸಿ ನಾನೊ ಅನಿವಾಸಿ
ಪಂಪನಂತೆಯೆ ನಾನು ವ್ಯಸನಿ
ಆರಂಕುಶಮಿಟ್ಟೊಡಂ
ನೆನೆವುದೆನ್ನ ಮನ ನನ್ನ ಹುಟ್ಟೂರ
ತೆಂಕಣಗಾಳಿಯಲಂಪು
ನಮ್ಮವರ ಮಾತಿನಿಂಪು
ನೆನಪುಗಳು ಕರೆಯುವುವು
ಮೇಘಗಳಂತೆ ಮಳೆಯಂತೆ
ದಿನದಿನವು ವರ್‍ಷಧಾರೆ
ಹರ್‍ಷವನಲಾರೆ ದುಃಖವನಲಾರೆ
ಹೆಸರಿಲ್ಲದೊಂದು ಭಾವ
ನನ್ನ ಮನಃ ಪಟಲದಲಿ ತುಂಬಿದೆ ಸದಾ
ನನ್ನೆಚ್ಚರದಂತೆ ನನ್ನ ಮನಃ ಸಾಕ್ಷಿಯಂತೆ
ಅದು ಮಿಡಿವ ತನಕ
ನನಗೆ ಭಯವಿಲ್ಲ
ಬೇಸರವಿಲ್ಲ
ಸ್ವರ್‍ಗವೋ ನರಕವೋ
ಆವೂರೊ ಈವೂರೊ
ಅದು ಮಿಡಿವ ತನಕ
ನಾನತೀತ ಎಂದೆಂದಿಗೂ
*****


















