ಹೊಂಗಳಸ ಮಿರುಗುವೆಡೆ ಮೊನೆಗೂಡುವಾಗಸದ
ಮೊಳಕಾಲಿನೊಳು ಸರಿವ ಬಿಸಿಲಿನಂಗಳದ
ಸದ್ದಿರದೆ ತುಟಿಬೆರಳಿನೊಳು ಸುಳಿವ ಮಾರುತದ
ಪಾವಿತ್ರ್ಯದೊಸಗೆಯನು ತಳೆದು ಬಹ ನೆಲದ
ನೆನೆದೊಡನೆ ನೆರೆಗೊಳುವ ನೇತ್ರಾಂಬು ತೀರ್ಥಗಳ
ಹೊಗೆವೊಳಗನೇರೆ ಬಹ ದಿವ್ಯ ಭಾವಗಳ
ಸಿರಿಯೆಂಬ ಗುರಿಯೆಂಬ ಇಲ್ಲೆ ಉಪರತಿಯೆಂಬ
ತುಂಬುವಾಸೆಯ ಮನೋಬುದ್ಧಿ ಮಮತೆಗಳ
ಮಂದಿರದಿ ಸಂಘಟಿಸಿತಷ್ಟಧಾಭಿನ್ನವಾದೀಶ್ವರಪ್ರಕೃತಿರೂಪಂ
ಪ್ರಸ್ಫುಟಿಸಿತೀಯೆಡೆಯೆ ಸತ್ಯಶಿವಸುಂದರದ ಸಚ್ಚಿದಾನಂದ ಸ್ವರೂಪಂ.
*****


















