ಎಷ್ಟೊಂದು ನಕ್ಷತ್ರಗಳು
ಅಡ್ಡ ಬಂದವು ಸೂರ್ಯನ ಬೆಳಕಿಗೆ
ಕತ್ತಲೆಯನ್ನು ಕತ್ತರಿಸುವ
ಕೋಲ್ ಮಿಂಚನು ತುಂಡರಿಸಬಹುದೆ?
ಎಷ್ಟೊಂದು ಶಬ್ದ ಕಂಪನಗಳಾಗಿವೆ
ಕತ್ತಲೊಡಗಿನ ಭೂಮಿಯ ಗರ್ಭದಲಿ
ಅಂತರಂಗದ ಕತ್ತಲೆಗೆ ಓಡಿಸಲು
ನಿಶ್ಯಬ್ದದೊಳಗಣ ಶಬ್ದ ಚಿತ್ತಾರ
ಶಬ್ದವಿಲ್ಲ ಬೇರು ಬಿಡಲು ಬ್ರಹ್ಮವೃಕ್ಷಕೆ

ಬದುಕು ಧಾನಸ್ಥ ತಪಸ್ಸಿನ ಮಾದರಿ
ಅಂತಃಕರಣ ತುಂಬಿ ಕಣಕಣದಲಿ
ತನ್ನಾಚೆ ದಿಟ್ಟಿಸುವ ಅಕ್ಷಿಪಟಲದ ನೋಟ
ಕಾಲಮಾನದಾಚೆಗೂ ನುಡಿವ ಸಾಕ್ಷಿಭೂತ
ಅಂತರಂಗ ಅರಳಿಸುವ ಮಹಾಗುರು
ಅರಿವಿನ ಜೋಳಿಗೆಯಲಿ ಹಸಿವಿನ ಹಪಹಪಿ
ಅಕ್ಷರಗಳು ಬಿತ್ತರಿಸುವ ವಿಚಾರವಾದದ ಲಹರಿ
ಸಮತಾವಾದದ ಬೆಳಕಿನ ಕಿಂಡಿ.

ಚೆಲ್ಲಾಪಿಲ್ಲಿಯಾದ ಅಕ್ಷರಗಳಿಗೆ ಪದಗಳ ಹಂಗಿಲ್ಲ
ನಿನ್ನ ಬಣ್ಣಿಸುವ ಮಾತಿಗೂ ಹೊಳಪಿಲ್ಲ
ದಾರಿ ಕ್ರಮಿಸಿದೆ ಬಹುದೂರ ದೂರ..
ಬಾಳ ಬಯಲ ಅಂಗಳದಲಿ ನಿಂತು
ಎದೆಯ ಹಣತೆಯ ಮಂದ ಬೆಳಕಿನಲ್ಲಿ
ಕ್ರಮಿಸಿದ ಸುದೀರ್ಘ ಹಾದಿಯ ನೋಟ
ಅಂಕು ಡೊಂಕುಗಳ ಸಿಂಹಾವಲೋಕನ

ಕನ್ನಡದ ಕಂಪು ರಷ್ಯಾದವರೆಗೂ ಹರಡಿ
ರಾಷ್ಟ್ರಗಳ ಸ್ನೇಹ ಸೇತುಗಳ ಬಿಗಿ ಬಂಧ
ಸೋವಿಯತ್ ಲ್ಯಾಂಡಿನ ಗೌರವದ ಧಿರಿಸು
ತಾಯ್ನಾಡಿನ ನೆಹರು ಪ್ರಶಸ್ತಿಗಳ ಮುಡಿಗೇರಿಸಿ
ಅಸಂಖ್ಯಾತ ಶಿಷ್ಯ ಬಳಗದ ಗುರುವಾಗಿ
ಧಾರವಾಡದ ಕರ್ಮಭೂಮಿಯ ಕಿಂಕರವಾಗಿ
ವಟುವೃಕ್ಷದ ಬೇರು ಎಷ್ಟೊಂದು ಆಳ-ನೀರಾಳ

ದೀಪದಿಂದ ದೀಪ ಹಚ್ಚುವ ನೀಲಾಂಜನ
ಬೆಳಕು ಚೆಲ್ಲಿದೆ ಬುದ್ಧಪೂರ್ಣಿಮೆಯ ಬುದ್ಧಣ್ಣ
ಸುತ್ತ ಹರಡಿದೆ ನೋಡು ಪ್ರಚಂಡ ಪ್ರಭೆ
ಬೆಳಕೆಂದರೆ ದೀಪ, ದೀಪವೆಂದರೆ
ಹಿಂಗಮಿರೆಯೆಂಬ ಬೆಳಕಿನ ಸೆಳಕು
ಹಣತೆ, ಕಂದೀಲು, ಬಲ್ಬು, ದೀಪಗಳು
ಸೂರ್ಯ ಬೆಳಕಿಗೆಲ್ಲಿಯ ಸಾಟಿ ಹೇಳು?

ಉದಯರಾಗದಿಂದ ಉದಯಿಸಿದ ಸೂರ್ಯ
ಭೂಮಿಗೀತದಿಂದ ಬೈಲೋರಷ್ಯದವರೆಗೆ
ಹೊಸ ದಿಕ್ಕುಗಳ ಹುಡುಕಿದ ಸರದಾರನಿಗೆ
ದೇಶ, ಗಡಿ, ಭಾಷೆಗಳ ಗೆರೆ ಕೊರೆಯಲಾರೆನು.
ಹರಿವ ನದಿ, ಸುಳಿವ ಗಾಳಿ, ಸುಗಂಧಗಳಿಗೆ
ಬಂಧನದ ಕಟ್ಟುಗಳನು ಬಿಗಿಯಲಾರೆನು
ಸಮತಾವಾದದ ಸಂತ ಸಾಧಕನಿಗೆ
ಭಾಷೆ, ದೇಶ, ಗಡಿಗಳ ಗೆರೆ ಕೊರೆಯಲಾರೆನು
*****
(ಬುದ್ಧಣ್ಣ ಹಿಂಗಮಿರೆಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)