ಅಧ್ಯಾಯ ಮೂರು
ಗೋಲ್ಕಂಡದಲ್ಲಿ ಸೆಟ್ಟರದೊಂದು ಸ್ಪಂತಮನೆ ಇದೆ. ಅಲ್ಲಿ ಸೆಟ್ಟರದು ಒಂದು ಸಂಸಾರ ಯಾವಾಗಲೂ ಇರುತ್ತದೆ. ಒಬ್ಬ ಮನೆವಾರ್ತೆ ಸಂಸಾರ ದೊಡನೆ ಅಲ್ಲಿ ಯಾವಾಗಲೂ ಇರುತ್ತಾನೆ. ಅಲ್ಲಿನ ವ್ಯಾಸಾರ ವಾಣಿಜ್ಯ ರಾಜಕೀಯ ಎಲ್ಲವನ್ನೂ ಸಂಗ್ರಹಿಸಿ ಸೆಟ್ಟರಿಗೆ ವಾರಕ್ಕೆ ಒಂದು ಸಲ ಟಪ್ಪಾಲು ಬರೆಯುವುದು. ಗೋಲ್ಕಂಡದ ಮನೆಯನ್ನು ಸರಿಯಾಗಿಟ್ಟು ಕೊಂಡು ಅಲ್ಲಿನ ವ್ಯಾಪಾರ ಸಾಪಾರ ನೋಡಿಕೊಳ್ಳುವುದು ಇದು ಅವನ ಕೆಲಸ. ಅಲ್ಲಿ ಅವರದು ಒಂದು ಅಂಗಡಿಯಿದೆ. ಅಂಗಡಿಯೂ ಮನೆವಾರ್ತೆಯ ಕೈಯಲ್ಲೇ ಇದೆ.
ಮನೆವಾರ್ತೆಗೆ ಸೆಟ್ಟರು ಬಂದಿರುವರು ಎಂಬ ಸುದ್ದಿ ಬಂತು. ಆತನಿಗೆ ಆಶ್ಚರ್ಯವಾಯಿತು. ಸೆಟ್ಟರು ಬರುವುದಕ್ಕೆ ಎರಡು ದಿನವಾದರೂ ಮುಂಚೆ ಟಪ್ಪಾಲು ಬರಬೇಕು. ಅವರಿಗೆ ಮಡಿ, ದೇವರಪೂಜೆ, ಊಟ ಇವುಗಳಿಗೆ ಯಾವಾಗಲೂ ಶ್ರದ್ಧೆಯಿಂದ ಅಣಿಮಾಡಿರಬೇಕು. ಈ ಸಲ ಟಪ್ಪಾಲು ಇಲ್ಲದೆ ಅವರು ಬಂದಿದ್ದಾರೆಯೆಂದರೆ ಅವನಿಗೆ ಏಕೋ ಅನುಮಾನವಾಯಿತು. ತನ್ನ ಮೇಲೆ ಯಾರಾದರೂ ಏನಾದರೂ ಇಲ್ಲದ ಸಲ್ಲದ ದೂರು ಬರೆದಿರು ವರೋ? ಅಥನಾ ಸುಲ್ತಾನನೇನಾದರೂ ಜರೂರು ಬರಬೇಕೆಂದು ಬರೆದಿರುವನೋ? ಎರಡನೆಯದಾಗಿದ್ದರೆ ತನಗೆ ನೇರವಾಗಿ ತಿಳಿಯದಿದ್ದರೆ ಸುಳಿವಾದರೂ ಇರಬೇಕು. ಅದರಿಂದ, ಅವರು ಬಂದಿರುವುದು ತನಗಾಗಿಯೇ ಇರಬೇಕು ಎನ್ನಿಸಿ ಆತನಿಗೆ ಏಕೋ ದಿಗಿಲಾಯಿತು. ಏನಾದರೂ ಒಡೆಯರು ಬಂದಿರುವರು ಎಂದಮೇಲೆ ಹೋಗಿ ನೋಡಬೇಕಲ್ಲ. ಅವಸರವಸರವಾಗಿ ಬಂದು ಕಾಣಿಸಿಕೊಂಡನು. ಒಡೆಯರು ಸಂತೋಷವಾಗಿ ಮಾತನಾಡಿದರು. ಅವನಿಗೆ ಥೈರ್ಯವಾಯಿತು.
“ಇದೇನು, ಸುದ್ದಿ ಕೊಡದೇನೇ ಸ್ವಾಮಿ, ಬಂದುಬಿಟ್ಟಿದ್ದು 7” ಎಂದು. ಮೆತ್ತಗೆ ವಿಚಾರಿಸಿದನು.
ಸೆಟ್ಟರು ನಕ್ಕು, “ಅಲ್ರೀ, ನನುಗೇನ್ರೀ ಕೆಲಸ? ನೀವೆಲ್ಲ ದುಡಿದು ಹಾಕಿಬಿಡುತ್ತೀರಿ. ನಾವು ವಿಜಯನಗರ, ಗೋಲ್ಕಂಡ, ಬೀಜಾಪುರ, ಗೋವೆ, ಗೋಕರ್ಣ, ಎಂದು ತಿರುಗಿಕೊಂಡಿರುವುದು ಅಷ್ಟೆ ತಾನೇ?” ಎಂದುಬಿಟ್ಟು, ಒಂದು ಚಿಟಿಕೆ ನಸ್ಯ ಹಾಕಿಕೊಳ್ಳುತ್ತ “ಏನೂ ಕೆಲಸ ಇಲ್ಲ. ಇವೊತ್ತು ರಾಜಧಾನಿಯಲ್ಲಿ ಇರುವುದಕ್ಕೆ ಇಷ್ಟವಿರಲಿಲ್ಲ. ಅದರಿಂದ ತರಾತುರಿಯಾಗಿ ಇಲ್ಲಿಗೆ ಬಂದುಬಿಟ್ಟೆ.” ಎಂದರು.
“ಒಬ್ಬರೇ ಸ್ಥ
“ಹೆಂಗಸರನ್ನೂ ಕರೆದುಕೊಂಡು ಬರಬೇಕೆಂದೇ ಇದ್ದೆ. ಆದಕ್ಕೆ ಈ ಸಲ ಬೇಗ ಬರಬೇಕಾಗಿತ್ತು. ಅವರಿಗೆ ಈ ಪ್ರಯಾಣದ ಆಯಾಸ ಹೆಚ್ಚಾಗುತ್ತರೆಯೆಂದು ಕರೆದುಕೊಂಡು ಬರಲಿಲ್ಲ. ಅದಿರಲಿ. ಸುಲ್ತಾನರು ಇಲ್ಲೇ ಇದ್ದಾರೋ 7”
“ಇದ್ದಾರಂತೆ. ವಿಚಾರಿಸಿದ್ದೆ. ಅವರು ಇನ್ನು ಎರಡು ಮೂರು ದಿನ ಬಿಟ್ಟುಕೊಂಡು ಬಿದರೆಗೆ ಹೋಗಿಬರುತ್ತಾರೆಂದು ವರ್ತಮಾನ.”
“ಸಾಧ್ಯವಾದರೆ, ನಾಳೆಯ ದಿನ ಸುಲ್ತಾನರ ಭೇಟಿಯಾಗುತ್ತದೆ ಯೇನೋ ವಿಚಾರಿಸಿ ನೋಡಿ.”
“ಅಪ್ಪಣೆ.”
“ನಮ್ಮ ರಾಯಭಾರಿಗಳೂ ಇದ್ದಾರೋ?”
“ಇದ್ದಾರೆ.”
“ನಾಳಿದ್ದು ಅವರನ್ನು ನೋಡೋಣ.”
“ಅಪ್ಪಣೆ.”
“ಬುಧವಾರ ಸಂಜೆಗೆ ನಾವು ಹೊರಟುಬಿಡುತ್ತೇವೆ.”
“ಅಪ್ಪಣೆ. “
“ಇನ್ನು ನಾವು ಸ್ನಾನಕ್ಕೆ ಏಳೋಣವೋ ??
“ಮಜ್ಜನವಾಗಲಿ. ಜಟ್ಟಿ ಬಂದಿದ್ದಾನೆ. ಎಲ್ಲಾ ಸಿದ್ಧವಾಗಿದೆ.”
“ಸರಿ, “
‘ಗೋಲ್ಕಂಡದ ಸುಲ್ತಾನರಿಗೆ ಆಶ್ಚರ್ಯ.. ಗರ್ವಗಂಧಿ ವಿಜಯ ನಗರದ ಸೆಟ್ಟಿಯು ತಾನಾಗಿ ಬಂದಿರುವುದು ಎಂದರೆ ಸುಲ್ಲಾನರು ನಂಬಲಾರರು. ಇರಲಿ. ಏನೋ ಬಂದಿದ್ದಾನೆ. ಇದೇ ಸಮಯ ಸಾಧಿಸಿ ತನ್ನ ಆಶೆಯನ್ನೂ ಈಡೇರಿಸಿಕೊಳ್ಳ ಬೇಕು ಎನ್ನಿಸಿತು. ಸುಲ್ತಾನರು ಸಿದ್ಧರಾಗಿದ್ದರು. ಮಧ್ಯಾನ್ಹದ ಎರಡು ಝಾವದ ಹೊಸ್ತಿನಲ್ಲಿ ಭೇಟಿಯು ನಡೆಯಿತು. ನಜರು ಕೊಟ್ಟು ಸೆ್ಟ್ಟರು ಸುಲ್ತಾನನ ದರ್ಶನ ಮಾಡಿದರು. ಸುಲ್ತಾನರೂ ಆ ಮಾತು ಈ ಆಡುತ್ತಾ “ಈಗ ತಾವು ಬಂದುದು ಬಹಳ ಒಳ್ಳೆಯ ದಾಯಿತು. ನಾವೇ ತನುಗೆ ಹೇಳಿಕಳುಹಿಸಬೇಕು ಎಂದಿದ್ದೆವು,” ಎಂದರು.
ಆಡುವುದಕ್ಕೆ ಯಾವ ಮಾತೂ ಇಲ್ಲದೆ ಒದ್ದಾಡುತ್ತಿದ್ದ ಸೆಟ್ಟರು ಒಂದು ವಿಷಯ ಸಿಕ್ಕಿತಲ್ಲ ಎಂದು ಸಂತೋಷಪಟ್ಟು “ಜಹಾಂಪನಾ, ನಿಜ ಹೇಳಬೇಕು ಎಂದರೆ, ಈಗ ನಾಲ್ಕು ಐದು ದಿನವಿಂದ ತಾವು ಎದುರಿಗೆ ಕಣ್ಣಿಗೆ ಕಟ್ಟಿದಹಾಗಾಗಿದೆ. ಏನು ಮಾಡುತ್ತಿದ್ದರೂ ತಮ್ಮ ರೂಪು ಎದುರಿಗೆ ನಿಂತಿರುವಹಾಗೆ ಆಗಿದೆ. ಎಚ್ಚರದಲ್ಲಿಯೂ ತಮ್ಮೊಡನೆ ಮಾತನಾಡುತ್ತಿದ್ದ ಹಾಗೆ; ಕನಸಿನ್ಲಂತೂ ತಾವೇ ತಾವು. ಹೀಗಾಗಿ ಏನೋ ಎಂತೋ ಎಂದು ನಿಲ್ಲಲಾರದೆ ಹೊರಟು ಬಂದೆ. ವಾಸ್ತವ್ಯವಾಗಿಯೂ ಈಗ ಯಾವ ಕೆಲಸವೂ ಇಲ್ಲದೆ ಸ್ವಾಮಿಯನ್ನು ಆಯಾಸಪಡಿಸಿದ್ದಕ್ಕೆ ನ್ಯಾಯವಾಗಿ ನನಗೆ ಶಿಕ್ಷೆಯೇ ಆಗಬೇಕು. ಇದ್ದ ಸಂಗತಿ ಸನ್ನಿಧಾನದಲ್ಲಿ ಅರಿಕೆ ಮಾಡಿದ್ದೇನೆ. ಮನ್ಸಿಸ ಬೇಕು, ಮಹಾಸ್ವಾಮಿ“
ಸುಲ್ತಾನರಿಗೆ ಆ ಸ್ತುತಿವಾಕ್ಯ ಮನಸ್ಸಿಗೆ ಹಿಡಿಯಿತು ತನಗೆ ವಿಜಯ ನಗರದ ಸುದ್ದಿಯೇ ಮನಸಿನಲ್ಲಿದ್ದರೂ ಸೆಟ್ಟಿಯಿಂದ ತನ್ನ ಕೆಲಸವಾದೀತು ಎಂದು ಯೋಚನೆ ಬಂದಿರಲಿಲ್ಲ. ಸೆಟ್ಟಿ ಹೇಳುವುದು ಸತ್ಯವಿರಬಹುದು ಎಂದು ನಂಬಿ, ಬಹುಶಃ ಈ ಮೂಲವಾಗಿ ತನ್ನ ಕಾರ್ಯವಾದೀತು ಎಂಬ ನಂಬಿಕೆಯೂ ಹುಟ್ಟಿ ಸುಲ್ತಾನನು ಕಾರ್ಯ ಸರಸಿಯೂ ಸುಲಭನೂ ಆಗಿ ಸೆಟ್ಟರ ಬಳಿ ತನ್ನ ಹೃದಯನನ್ನು ಬಿಚ್ಚಿ ಹೇಳಲು ಸಿದ್ದವಾದನು: “ಸೆಟ್ಟಿ ಸಾಹೆಬ್ ನಮ್ಮ ಅಂತರಂಗದ ಮಿತ್ರರಲ್ಲಿ ತಾವೂ ಒಬ್ಬರು ಎನ್ನುವುದು ತಮಗೇ ಗೊತ್ತಿದೆ. ಈಗ ಸುಮಾರು ಒಂದು ವರುಷದಿಂದ ನಮಗೆ ಒಂದು ಮನೋವ್ಯಾಧಿ ಬಂದಿದೆ. ಅದನ್ನು ನಿವಾರಣೆ ಮಾಡಿಕೊಳ್ಳದಿದ್ದರೆ ಅದು ನಮ್ಮನ್ನೇ ತಿಂದುಬಿಡಬಹುದು. ಈ ವಿಷಯ ತಮ್ಮಲ್ಲಿ ಹೇಳಿದರೆ ತಾವು ಅದನ್ನು ಗೋಪ್ಯವಾಗಿ ಇಡುವಿರಾ? ಕೆಲಸ ಮಾಡಿಕೊಡುವಿರಾ?”
ಸೆಟ್ಟರಿಗೆ ಆನಂದವಾಯಿತು. ಗೋಲ್ಯಂಡದ ಸುಲ್ತಾನರ ರಹಸ್ಯ ತನಗೆ ತಿಳಿದರೆ, ತಾನು ಅವರ ಅಂತರಂಗದ ಮಿತ್ರನಾದರಿ, ವಜ್ರದ ಗಣಿಯೇ ತನ್ನ ಕೈಗೆ ಬಂದರೂ ಬರಬಹುದು ಎನ್ನಿಸಿತು. ಸುಲ್ತಾನನೂ ಆದಕ್ಕೆ ಸರಿಯಾಗಿ “ಸೆಟ್ಟಿ ಸಾಹೆಬ್, ಈ ಕೆಲಸ ಸಾಧ್ಯವಾದರೆ ನಮ್ಮ ವಜ್ರದ ಗಣಿಯನ್ನೇ ಬೇಕಾದರೂ ತಮಗೆ ಕೊಡುವುದಕ್ಕೆ ನಮಗೆ ಇಷ್ಟ. ಆದು ಬರಿಯ ಮನೋ ರೋಗ ಮಾತ್ರವಲ್ಲ. ನಮ್ಮ ಮಾನದ ಪ್ರಶ್ನೆಯೂ ಸೇರಿದೆ.” ಎಂದನು.
ಸೆಟ್ಟರು ಕಿವಿಯವರೆಗೂ ಬಾಯಿ ಮಾಡಿಕೊಂಡು, “ಜಹಾಂಪನಾ, ಅಪ್ಪಣೆಯಾಗಲಿ. ಯಜಮಾನ್ ವೀರಸ್ಪಸೆಟ್ಟಿಯು ಬೇಕಾದುದಾಗಲಿ, ತಮ್ಮ ಅಪ್ಪಣೆಯನ್ನು ನೆರವೇರಿಸುವನು. ಸುಲ್ತಾನನ ಮನೋರೋಗ, ಸುಲ್ತಾನರ ಅಪಮಾನ, ಕಳೆಯುವುದು ನನ್ನಿಂದಾದರೆ ಇನ್ನು ಅದಕ್ಕಿಂತ ನನಗೇನಾಗಬೇಕು? ಇದು ಪರಮೇಶ್ವರನೇ ದಖುಪಾಲಿಸಿರುವ ಒಂದು ವರ ಎಂದು ಭಾವಿಸುತ್ತೇನೆ. ಮಹಾಸ್ವಾಮಿ. ಅಪ್ಪಣೆಯಾಗಲಿ. ರಹಸ್ಯ ಎಂದು ಅಪ್ಪಣೆಯಾಯಿತು. ಇದೋ ನಮ್ಮ ದೇವರ ಮೇಲಿನ ಆಣೆ ಇಡುತ್ತೇನೆ. ಅದನ್ನು ನಮ್ಮ ಹೆಂಗುಸರಿಗೂ ತಿಳಿಸುವುದಿಲ್ಲ. ಜೀವರತ್ನಗಳನ್ನು ಕಾಪಾಡುವಹಾಗೆ ಕಾಪಾಡು ತ್ತೇನೆ.
“ನಿಜವೇ ?”
“ನಿಜ ಮಹಾಸ್ವಾಮಿ.“
“ನಾವು ಹೇಳಬೇಕೆಂದಿರುನ ಮಾತು ಬಹು ಗೋಪ್ಯವಾದುದು. ಇದು ವರೆಗೆ ನಾವು ಯಾರಲ್ಲಿಯೂ ಹೇಳಿಲ್ಲ. ಆದರ ತಮ್ಮ ಮೇಲೆ ನಮಗೆ ವಿಶ್ವಾಸ ವಿದೆ. ಹೇಳುತ್ತೇವೆ. ಇಲ್ಲಿ ಬನ್ನಿ”, ಎಂದು ಅವರನ್ನು ತಮ್ಮ ಮಗ್ಗುಲಲ್ಲಿ ಕುಳ್ಳಿರಿಸಿಕೊಂಡು ಸುಲ್ತಾನರು ಪಿಸುಮಾತಿನಲ್ಲಿ ಹೇಳಿದರು: “ಸೆಟ್ಟಿ ಸಾಹೆಬ್, ತಾವು ಬಹಳ ಬುದ್ಧಿವಂತರು. ನಮ್ಮ ಮನಸ್ಸಿನಲ್ಲಿ ಏನಿರಬಹುದು ಹೇಳಿ. ನೋಡೋಣ.”
“ಜಹಾಂಪನಾ, ಅರಸುಗಳ ಸರಸ ಬೆಂಕಿಯೊಡನೆ ಆಡಿದಹಾಗೆ. ಆದ ರಿಂದ ತಾವು ಹೇಳಿದುತೆ ಕೇಳುವುದು ಸರಿ. ಇಲ್ಲದಿದ್ದರೆ ಶಂಖಕಪ್ಪೆಚಿಪ್ಪು, ಹಾಗೆ. ಅರಸರ ಅಂತರಂಗದಲ್ಲಿ, ಮಹಾಸ್ವಾಮಿ, ಅದೃಷ್ಟವಶಾತ್ ಭಾರಿ ಭಾರಿ ಯೋಚನೆ ಬರುತ್ತದೆ. ಇಲ್ಲದಿದ್ದಕ್ಕೆ ತಾವು ಕೋಪ ಮಾಡಿಕೊಳ್ಳ ಬಾರದು. ಹೆಣ್ಣು, ಹೊನ್ನು, ಮಣ್ಣು, ಮೂರಲ್ಲದೆ ಇನ್ನೇನೂ ಇರುವುದಿಲ್ಲ.”
“ಎಲೆಲಾ ಸೆಟ್ಟ, ಬುದ್ಧಿ ಎಂದರೆ ಇದು ಬುದ್ಧಿ, ನಿಜ. ಒಂದು ಹೆಣ್ಣಿನ: ವಿಚಾರ. ಹೇಳಲೇ?”
“ಮಹಾಸ್ವಾಮಿ, ತಾವು ಒಂದುಮಾತು ಮರೆಯಕೂಡದು. ತಾವು ಹೆಣ್ಣು ಎನ್ನುತ್ತಲೇ ತಿಳಿದು ಹೋಯಿತು. ಹಿಂದೆ ಚಿನ್ನಾಸಾನಿಯನ್ನು ಸಂಗೀತಕ್ಕಾಗಿ ಇಲ್ಲಿ ಕರೆಯಕಳುಹಿದಿರಿ. ಅವಳು ಆಗುವುದಿಲ್ಲ ಎಂದಳು. ತಾವು ಚಕ್ರವರ್ತಿಯವರಿಗೇ ಬರೆದಿದ್ದಿರಿ. ಆಗಲೂ ಆಗಲಿಲ್ಲ. ಈಗ ನೋಡಿ, ಮಹಾಸ್ವಾಮಿ, ನಮ್ಮ ಜನ ಬಹಳಕೆಟ್ಟುದು. ದೇವರು ನಮ್ಮನ್ನೂ ನಿಮ್ಮನ್ನೂ ಒಂದೇ ಆಗಿ ಸೃಷ್ಠಿ ಮಾಡಿದ್ದರೂ ನನ್ಮ ನಿಮ್ಮ ಜಾತಿ ಬೇರೆ ಬೇರೆ ಎಂದಾಗಿದೆ. ನಮ್ಮ ಜಾತಿಯವರು ನಿಮ್ಮ ಜಾತಿಯವರಿಗೆ ಹೆಣ್ಣು ಕೊಡುವುದಿಲ್ಲ. ನಿಮ್ಮಿಂದ ಹೆಣ್ಣು ತರುವುದಿಲ್ಲ. ಈ ಕೆಲಸಕ್ಕೆ ನಾವು ಪ್ರಯತ್ನ ಪಟ್ಟರೆ ನಮ್ಮ ಹೆಸರು. ಕೆಡುತ್ತದೆ. ನಮ್ಮ ಮನೆ ಬಾಗಿಲು ಎಲ್ಲಾ ಇರೋದು ವಿಜಯನಗರದಲ್ಲಿ. ನಮ್ಮ ವ್ಯಾಪಾರದಲ್ಲಿ ಒಂದು ಭಾಗ ಇಲ್ಲಿ. ಅಲ್ಲಿ ಚಕ್ರವರ್ತಿಗಳಿಗೆ ಕೋಪ ಬಂದರೆ ನಮ್ಮ ಸರ್ವಸ್ವವೂ ಹೋಯಿತು. ಇಲ್ಲಿ ತಮಗೆ ಕೋಪಬಂದರೆ ನಮ್ಮ ವ್ಯಾಪಾರ ಹೋಯಿತು. ಇಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು ?”
ಸುಲ್ತಾನನು. ನಗುತ್ತಾ ಹೇಳಿದನು: “ಸೆಟ್ಟಿ ಸಾಹೆಬ್, ನಾವು: ಕುಲಸ್ತ್ರೀಯರನ್ನು ಕೆಡಿಸುವುದಿಲ್ಲ. ಅದೆಲ್ಲ ನಿಮ್ಮ ಚಕ್ರವರ್ತಿಗಳದು. ನಮ್ಮ ರಾಜ್ಯದಲ್ಲಿ ಅಲ್ಲಾ ಅಲ್ಲದೆ ಇನ್ನು ಯಾರೂ ನಮಗೆ ಅಡ್ದಿ ಬರುವಹಾಗಿಲ್ಲ. ಅಂಥಾದ್ದರಲ್ಲಿ ನಮ್ಮಿಂದ ಯಾವಳ ಮಾನವೂ ಕೆಟ್ಟಿಲ್ಲ. ನಿಮ್ಮ ರಾಜ್ಯದಲ್ಲಿ ಹಾಗೆ ಇದೆ ಎಂದು ಹೇಳಬಲ್ಲಿರಾ? ಜೊತೆಗೆ ಯೋಚನೆ ಮಾಡಿ. ನಾವು ಅಲ್ಲಾ ಹೆಸರು ಹೇಳಿ ಮಜೀದ್‌ನಲ್ಲಿ ನಮಾಜ್ ಮಾಡಿದ ಮಾತ್ರಕ್ಕೆ ನಾವು ನಿಮ್ಮ ಜಾತಿಯಲ್ಲವೆ? ನಾವು ಇಲ್ಲಿ ಹುಟ್ಟಿ ಇಲ್ಲಿ ಬೆಳೆಯಲಿಲ್ಲವೆ ? ನಮ್ಮ ಗೋರಿ ಕೂಡಾ ಇಲ್ಲೇ ಆಗುವಾಗ, ನಮ್ಮನ್ನು ದೂರ ದೂರ ಎಂದು ದೂರಮಾಡು. ವುದೊಳ್ಳೆಯದೋ ? ಹತ್ತಿರ ತೆಗೆದುಕೊಳ್ಳುವುದು. ಒಳ್ಳೆಯದೋ? ಇದರ ಮೇಲೆ ಅಲ್ಲಾನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಹೆಣ್ಣಿನ ಮೈ ಬೇಡ : ನನಗೆ ಅವಳ ಮನಸ್ಸು ಬೇಕು. ಅದರಿಂದ ಬರಿಯ ಗಾನಕ್ಕೆ ಮೈಮರೆತು. ಹೋಗುವವ ನಾನು. ಅವಳ ಸಂಗೀತ ಕೇಳಬೇಕು. ಅದಕ್ಕೆ ನಾನು. ಕೇಳುತ್ತಿದ್ದೇನೆ. ನಾನು ಅವಳನ್ನು ನೋಡಿದ್ದೇನೆ. ನಿಜವಾಗಿಯೂ ಅವಳು ರೂಪವತಿ. ಆದರೂ ಬರಿಯ ರೂಪವತಿಯರೇ ಬೇಕೆಂದರೆ ಅರಬದಿಂದ ಕುದುರೆ ತರಿಸುವ ಹಾಗೆ ಜಾರ್ಜಿಯ, ಜೂದಿಯ, ಇರಾನ್, ಇರಾಕ್, ಕಂದಹಾರ್, ಕಾಶ್ಮೀರ್‌ಗಳಿಂದ ಸುಂದರಿಯರನ್ನು ತರಿಸಲಾರೆನೆ? ಸೆಟ್ಟಿಸಾಹೆಬ್, ನಮ್ಮ ದರಬಾರಿನಲ್ಲಿ ಚಿತ್ರಗಾರರಿದ್ದಾರೆ. ಗುಲಾಬ್ ಬೇಕು ಎಂದರೆ ನಿಜವಾದ ಗುಲಾಬ್‌ನ ತಲೆಯ ಮೇಲೆ ಹೊಡೆದ ಹಾಗೆ ಇರುವ ಚಿತ್ರ ಬರೆಸಬಲ್ಲೆ ; ಆದರೆ ನೂರು ಜನ ಚಿತ್ರಗಾರರು, ನಾವು ಸಾವಿರಜನ ಸುಲ್ತಾನರು ಸೇರಿದರೂ ಅಲ್ಲಾ ಅದರೊಳಗಿಟ್ಟ ಪರಿಮಳ ಇಡಲಾರೆವು. ಹಾಗೆ, ನಿಮ್ಮ ಚಿನ್ನಾಸಾನಿಗಿಂತ ರೂಪವತಿಯರನ್ನು ತರಿಸಬಹುದು. ಆದರೆ ಆದಿವ್ಯ ಕಂಠ. ಹಾಯ್ ಅಲ್ಲಾ, ಹಾಯ್, ನಮ್ಮ ರಾಜ್ಯ ಕೊಟ್ಟು ಬಿಡಬಹುದು. ಸೆಟ್ಟಿ ಸಾಹೆಬ್, ಅವಳನ್ನು ಇಲ್ಲಿಗೆ ಕರೆಸಿ ಈ ದರಬಾರ್‌ನಲ್ಲಿ ಒಂದುಸಲ ಹಾಡಿಸಿ. ಅವಳಿಗೆ ಒಂದು ಲಕ್ಷ ತಮಗೆ ಒಂದು ಲಕ್ಷ ಕೊಡಿಸುತ್ತೀನೆ. ಅವಳ ತಲೆಯ ಒಂದು ಕೂದಲೂ ಸಹ ಅಲ್ಲಾಡದಂತೆ ನೋಡಿಕೊಳ್ಳುತ್ತೇನೆ. ಇದಕ್ಕೇನು ಹೇಳುತ್ತೀರಿ ??
“ಜಹಾಪನಾ, ಅವಳು ತಲೆತಲಾಂತರದಿಂದ ಅರಮನೆ ಸೂರೆ ಹೊಡೆ ದಿರುವ ಸೂಳೆ. ಅವಳ ಐಶ್ವರ್ಯ ಇಷ್ಟು ಎಂದು ಲೆಕ್ಕವಿಲ್ಲ. ಅವಳ ಐಶ್ವರ್ಯದ ಮುಂದೆ ನಮ್ಮ ಐಶ್ವರ್ಯವಲ್ಲ. ಪ್ರಭು ಅವಳನ್ನು ಹಣದಿಂದ ಹಿಡಿಯುವುದಕ್ಕೆ ಸಾಧ್ಯವಿಲ್ಲ. ಹೊಡೆದುಕೊಂಡು ಬರೋಣ ಎಂದರೆ, ಚಕ್ರವರ್ತಿಗಳಿರಲಿ, ಅವರ ಸೈನ್ಯ ಇರಲಿ, ರಾಜಧಾನಿಗೆ ರಾಜಧಾನಿಯೇ ತಿರುಗಿಬಿದ್ದರೇನು ಗತಿ? ಆಗದ ಕೆಲಸ ಹೇಳುತ್ತಿದ್ದೀರಿ. ನಾನೇ ತಮಗೆ ಒಂದು ಲಕ್ಷ ರೂಪಾಯಿ ಕಾಣಿಕೆ ಮಾಡುತ್ತೇನೆ. ನನ್ನನ್ನು ಬಿಟ್ಟುಬಿಡಿ.”
“ಸೆಟ್ಟಿ ಸಾಹೆಬ್, ಐದು ಲಕ್ಷ ಅವಳ ಸಂಗೀತ ಕೇಳಿಸುವುದಕ್ಕೆ. ಆವಳು ಇಲ್ಲೇ ಇರುವಂತೆ ಮಾಡಿ ಕಳುಹಿಸಿಬಿಡಿ. ಅವಳಿಗೆ ಕೊಡುವುದು ಬಿಡುವುದು ಇರಲಿ. ತಮಗೆ ಒಂದು ವರ್ಷ ನಮ್ಮ ವಜ್ರದ ಗಣಿ ತಾವು ಹೇಳಿದ ಗುತ್ತಿಗೆಗೆ ಕೊಟ್ಟು ಬಿಡುತ್ತೇನೆ. ಇನ್ನು ಬೇರೆ ಮಾತು ಕೂಡದು. ತಾವು ಒಪ್ಪಲೇ ಬೇಕು. ಇನ್ನು ಬರುವ ತಿಂಗಳು ಇದೇ ದಿನ ತಾವು ಇಲ್ಲಿಗೆ ಬಂದು ಅಥವಾ ತಮ್ಮ ದಿವಾನರಿಂದ ನಮ್ಮ ಕೆಲಸ ಆಗಿದೆ ಎಂದು ಸುದ್ದಿ ಕಳುಹಿಸಬೇಕು.”
ಸೆಟ್ಟರು ಏನೋ ಹೇಳಹೋದರು. ಸುಲ್ತಾನನು ಬಾಯಿ ಮುಚ್ಚಿ ಬಿಟ್ಟನು. ಕೈಚಪ್ಪಾಳೆ ತಟ್ಟಿದನು. ಆಳು ಬಂದನು. ಅವನನ್ನು ಕರೆದು ಕಿವಿಯಲ್ಲಿ ಏನೋ ಹೇಳಿದನು. ಅವನು ಹೋಗಿ ಒಂದು ತಟ್ಟೆ ಯಲ್ಲಿ ಒಂದು ಕಂಠೀಹಾರ, ಒಂದು ಶಾಲುಜೋಡಿ, ಒಂದು ವೀಳೆಯ ತಂದನು. ಸುಲ್ತಾನನು ತನ್ನ ಕೈಯಿಂದಲೇ ಸೆಟ್ಟರಿಗೆ ಕಂಠೀಹಾರ ಹಾಕಿ, ಶಾಲು ಜೋಡಿ ಹೊದಿಸಿ ವೀಳೆಯ ಕೊಟ್ಟು ಕಳುಹಿಸಿದನು.
ಮರುದಿನ ಸೆಟ್ಟರು ವಿಜಯನಗರದ ರಾಯಭಾರಿಯನ್ನು ಕಾಣಲು ಹೋದರು. ರಾಯಭಾರಿಯು ಅತನನ್ನು ಬಹು ಗೌರವದಿಂದ ಬರಮಾಡಿ ಕೊಂಡು, “ಏನು ಸೆಟ್ಟರ ಸವಾರಿ, ಸುದ್ದಿ ಕೂಡ ಕೊಡದೆ ದಯಮಾಡಿಸಿದ್ದು?. ರಾಜಧಾನಿಯ ಸುದ್ದಿ ಏನು? ಚಕ್ರವರ್ತಿಗಳನ್ನು ಕಂಡಿದ್ದಿರಾ ?” ಎಂದು ಬಹು ವಿಸ್ವಾಸದಿಂದ ಮಾತನಾಡಿಸಿದನು. ಚಿನ್ನದ ತಟ್ಟೆಯಲ್ಲಿ ಬಾಳೆಯ. ಹಣ್ಣು, ಚಿನ್ನದ ಬಟ್ಟಲುಗಳಲ್ಲಿ ಹಾಲು ಬಂದವು. ದ್ರಾಕ್ಷಿಯ ಗೊಂಚಲು, ಮಾದಳದ ಹಣಿನ ಚೂರುಗಳು ಮತ್ತೊಂದು ತಟ್ಟೆಯಲ್ಲಿ ಮಗ್ಗುಲಲ್ಲಿ ಕುಳಿತವು. ಇಬ್ಬರೂ ಹಣ್ಣನ್ನು ತಿನ್ನುತ್ತಾ ಮಾತನಾಡಿದರು.
“ಇಲ್ಲಿ ಏನೋ ಒಂದು ತುರ್ತು ಕಾರ್ಯ ಇತ್ತು ಬುದ್ದಿ. ಅದರಿಂದ ಹೇಳದೆ ಕೇಳದೆ ಬಂದು ಬಿಟ್ಟೆ
“ಮೊನ್ನೆ ಚಿನ್ನಾಸುನಿ ಸಂಗೀತ, ಗೋಪಾಲರುಯರಿಗೆ ಸನ್ಮಾನ, ತಾವೇ ಆಧ್ಯಕ್ಷರಾಗಬೇಕಾಗಿದ್ದುದು. ಇದಲ್ಲ ಬಿಟ್ಟು ಬಂದರಲ್ಲ! “ಸೆಟ್ಟರು ಒಂದು ಗಳಿಗ ಸುಮಮ್ಮನಿದ್ದು ಹೇಳಿದರು: “ಬುದ್ಧಿ, ಬೇರು ಬಲ್ಲವರಿಗೆ ಎಲೆ ತಿಳಿಯದೆ? ಮುಚ್ಚಿಟ್ಟರೂ ತಮಗೆ ತಿಳಿಯದೇ ಇರುವುದೇನು ? ಅವಳಿಗೂ ರಾಯರಿಗೂ ಇರುವ ಸಂಬಂಧ ಗೊತ್ತಲ್ಲಾ! ವಿನೋದ ಮಾಡೋಣ ಎಂದು ಅವಳ ಸಂಗೀತ ಇಡಿ ಅವೊತ್ತು ಎಂದೆ. ಇನ್ನೂರೈವತ್ತು ರೂಪಾಯಿ ನನ್ನ ಚಂದಾ ಕೊಟ್ಟು ಬಿಟ್ಟೆ, ಅವಳು ಅವೊತ್ತಿನ ಸಂಗೀತವನ್ನು ಒಪ್ಪಿಕೊಂಡು ಎರಡು ಸಾವಿರದ ಐನೂರು ರೂಪಾಯಿ ಚಂದಾ ಕೊಟ್ಟು ಬಿಟ್ಟಳು. ನಾವೆಲ್ಲ ಊರ ಸೆಟ್ಟರು ಯಜನರಾನರು ಎನ್ನಿಸಿಕೊಂಡವರು. ನಾವು ಏನು ಮಾಡ ಬೇಕು? ಯತ್ನವಿಲ್ಲದೆ ಬಂತು. ನಾವು ಚಂದಾಪಟ್ಟಿ ಕಳುಹಿಸಲೇ ಇಲ್ಲ.. ನಾವು ನಾವೇ ನೋ ಬೇಕಾದ್ದೆಲ್ಲ ಮಾಡಿದೆವು. ಆಗಿಹೋಯಿತು. ಆದರೆ ನಾನು ಕೊಟ್ಟ ಚಂದಾಕ್ಕಿಂತ ಹತ್ತು ಪಟ್ಟು ಚಂದಾ ಕೊಟ್ಟಿರುವವಳು ಎದುರಿಗಿರುವಾಗ, ನಾನು ಹೇಗೆ ಬುದ್ದಿ, ಅಧ್ಯಕ್ಷನಾಗಿ ಕುಳಿತುಕೊಳ್ಳುವುದು? ಅದಕ್ಕಾಗಿ ತಲೆತಪ್ಪಿಸಿಕೊಂಡು ಇಲ್ಲಿಗೆ ಬಂದುಬಿಟ್ಟೆ. ಇಲ್ಲಿ ಬಂದ ಮೇಲೆ ತಮ್ಮನ್ನೂ, ಸುಲ್ಲಾನರನ್ನೂ ನೋಡದಿದ್ದರೆ ಹೇಗೆ ಎಂದು ನೋಡಿದೆ. ಸುಲ್ತಾನರು ವಜ್ರದ ಗಣಿ ಗುತ್ತಿಗೆಗೆ ತಕೋ ಎನ್ನುತ್ತಿದ್ದಾರೆ. ನನಗೆ ಪ್ರಾಣಕ್ಕೆ ಬಂದಿದೆ.”
“ನವರತ್ನದ ವ್ಯಾಪಾರಗಳೆಲ್ಲಾ ತಮ್ಮ ಕೈಯ್ಯಲ್ಲಿಯೇ ಇರುವುದು. ತೆಗೆದುಕೊಳ್ಳಿ ನಮಗೊಂದು ಲಾಭ ಆದ ಹಾಗೇ ಆಯಿತು. ಗೋಲ್ಕೊಂಡದಲ್ಲಿ ನಮ್ಮವರದು ಒಂದು ದಳ ಇಡುವುದಕ್ಕಿಂತ ನಮ್ಮ ರಾಜಧಾನಿಯ ಭಾರಿಯ ವರ್ತಕರು, ಚಕ್ರವರ್ತಿಗಳ ಪರಮಾಪ್ತರು, ತಾವು ಇಲ್ಲಿದ್ದರೆ, ಒಂದು ಮರಿ ವಿಜಯನಗರ ಇಲ್ಲಿದ್ದು ಗೋಲ್ಕೊಂಡ ಶತ್ರುರಾಜ್ಯವಲ್ಲ, ಮಿತ್ರರಾಜ್ಯ ಎನ್ನು ವಂತಾಯಿತು. ವಿಜಯನಗರ ರಾಜ್ಯಕ್ಕೇ ತಾವು ಪರಮೋಪಕಾರ ಮಾಡಿ ದಂತಾಗುತ್ತದೆ”
“ಏನು ಬುದ್ಧಿ, ಸುಲ್ತಾನರು ವಜ್ರದ ಗಣಿ ಗುತ್ತಿಗೆ ಕೊಡಬೇಕಾದರೆ ಸುಮ್ಮನೆ ಕೊಡುತ್ತಾರೆಯೆ? ಮಾರಿ ಒಲಿಯ ಬೇಕಾಗಿದ್ದರೆ ಕೋಣನನ್ನು ಕಡಿದರಲ್ಲವೆ ? ಸುಮ್ಮನೆ ಒಲಿದೀತೆ?
“ಯಾವ ಕೋಣ ಬೇಕಂತೆ ಈ ಸುಲ್ತಾನ್‌ಮಾರಿಗೆ??
“ನಾನೂ ಹೇಳಿಯೇ ಬಂದಿದ್ದೇನೆ ಎನ್ನಿ. ನಾವು ಹಿಂದೂಗಳು. ಏನಿ ದ್ದರೂ ಹಣ್ಣು ಕಾಯಿ ಕೇಳಬೇಕೇ ವಿನಾ ಕುರಿಕೋಳಿ ಕೇಳಬೇಡ ಮಾರಿ” ಎಂದು ಹೇಳಿದ್ದೇನೆ. “ಏನೋ ಬುದ್ಧಿ, ದೊಡ್ಡವರ ಸಹವಾಸ ಕಷ್ಟ.”
“ನೋಡಿ, ಸೆಟ್ಟರೆ, ನಮ್ಮೊಡನೆ ಹೇಳಿದರೆ ನಾವೇನಾದರೂ ಮಾಡ ಬಹುದು. ಸುಮ್ಮನೆ ಹಣ್ಣು ಕಾಯಿ. ಕುರಿ ಕೋಳಿ ಎಂದರೆ ನಾವೇನು ಮಾಡಲಾದೀತು? “
“ವಿಜಯನಗರದ ಉಪ್ಪು ತಿಂದು ಬದುಕಿದವನು ನಾವು. ತುರಕರವನು ಹೇಳಿದ ಎಂದು ನಾವು ಕುಣಿಯುವುದಕ್ಕೆ ಆದೀತೆ? ಇರಲಿ. ಅಡುಗೆಯೆಲ್ಲ ನಾವು ಮಾಡಿ ಒಗ್ಗರಣೆ ಚೊಯ್ ಎನ್ನಿಸುವ್ರದಕ್ಕೆ ತಮ್ಮನ್ನು ಕರೆಯಬೇಕು. ಇರಲಿ. ಈಗ ಸದ್ಯಕ್ಕೆ ಅಪ್ಪಣೆಯನ್ನು ಕೊಡಿ.”
ಸೆಟ್ಟರು ಗೋಲ್ಕೊಂಡಕ್ಕೆ ಹೋದಂತೆಯೇ ಹಠಾತ್ರಾಗಿ ರಾಜಧಾನಿಗೂ ಬಂದರು. ದಾರಿಯುದ್ದಕ್ಕೂ ಅವರಿಗೆ ಎಂದೂ ಇಲ್ಲದ ಅಯಾಸ. ಬರು ತ್ತಿದ್ದವರೇ ಜಟ್ಟಿಗೆ ಹೇಳಿಕಳುಹಿಸಿ ಮಲಗುವ ಮನೆಗೆ ಹೊರಟುಹೋದರು. ಗೌರಮ್ಮನು ಬಂದು ಸುದ್ದಿ ಕೊಡದೆ ಬಂದರೆಂದು ಆಶ್ಚರ್ಯಪಡುತ್ತಾ ಆಳನ್ನು ಕರೆದು ಹಾಲು ಹಣ್ಣು ತರುವಂತೆ ಹೇಳಿ ತಾವು ಹೋಗಿ, ಹಾಸುಗೆಯ ಮೇಲೆ ಮಲಗಿದ್ದ ಗಂಡನ ಮಗ್ಗುಲಲ್ಲಿ ಮೈಯೊತ್ತುತ್ತಾ ಕುಳಿತರು.
ಸೆಟ್ಟರು ಸಹಜವಾಗಿ “ಏನು ವಿಶೇಷ?” ಎಂದರು. ಗೌರಮ್ಮನವರೂ ಸಹಜವಾದ ಆನಂದದಿಂದ ಸನ್ಮಾನ ಸಭೆಯನ್ನು ಕುರಿತು ರತಿರತಿಯಾಗಿ, ವರ್ಣಿಸಿದರು. “ನನಗೇನೋ, ನೀವು ಸಾವಿರ ಹೇಳಿ, ನೀವು ಇರಬೇಕಾಗಿತ್ತು. ಅಂಥ ಸಭೆಗಳಲ್ಲಿ ನೀವಲ್ಲದೆ ಇನ್ನು ಯಾರು ಅಧ್ಯಕ್ಷರಾದರೂ ಕಳೆಯೇ ಇರು ವುದಿಲ್ಲ.”ಎಂದಾಗ ಹೆಚ್ಚು ಕಡಿಮೆ ಮೋಡಗಳವರೆಗೂ ಏರಿದ ಮನಸ್ಸು, ಚಿನ್ನಾಸಾನಿಯ ಸಂಗೀತವನ್ನು ವರ್ಣಿಸಿದಾಗ ಹೂ ಹೂ ಎಂದು ಸಮಾಧಾನ ವಾಗಿದ್ದು ಗೋಪಾಲರಾಯನು ತನಗೆ ಕೊಟ್ಟ ಥೋಡಾವನ್ನು ಭರತಾಚಾರ್ಯರಿಗೆ ಒಪ್ಪಿಸಿದ್ದ ಆ ಮಾತು ಆಡಿದ್ದ ಈಮಾತು ಆಡಿದ, ಎಂದು ಹೇಳುತ್ತಿದ್ದ ಹಾಗೆಯೇ ಥಟ್ಟನೆ ಕೆಳಕ್ಕೆ ಬಿದ್ದುಹೋಯಿತು. ಇನ್ನೊಂದು ಎರಡು ಮಾತು ಕೇಳುವುದರೊಳಗಾಗಿ ಸೆಟ್ಟರು ಕೋಪಪರವಶರಾಗಿ ಹೆಂಡತಿಯ ಕೈತೆಗೆದು ಅತ್ತ ಎಸೆದು ಅಮ್ಮಣ್ಣಿಯವರು ನಾಟಕದವರನ್ನು ಹೊಗಳುವುದು ಹೆಚ್ಚಾಗಿ ಹೋಯಿತು.:ಥತ್!” ಎಂದು ದುರುಗುಟ್ಟಿಕೊಂಡು ಹೊರಟುಹೋದರು. ಹಾಲು ಹಣ್ಣು ಅನಾಥವಾಗಿ ಕಾಲುಮಣೆಯ ಮೇಲೆ ಕುಳಿತಿತ್ತು. ಸೆಟ್ಟರ ವರ್ತನೆ ಅದಕ್ಕೂ ಅರ್ಥವಾಗಲಿಲ್ಲ. ಗೌರಮ್ಮನವರಿಗಂತೂ ಎಳ್ಳಷ್ಟೂ ಅರ್ಥವಾಗಲಿಲ್ಲ.
ಸೆಟ್ಟರು ಹೋದವರೇ ಎಣ್ಣೆ ಒತ್ತಿಸಿಕೊಂಡರು. ಜಟ್ಟಿಯು ಎಣ್ಣೆ ಒತ್ತುತ್ತಾ “ಬುದ್ದಿಯವರು ಸಭೆ ದಿನ ಇರಲಿಲ್ಲ ಎಂದು ಊರಿಗೆ ಊರೇ ಕೊರಗಿಹೋಯಿತು ಬುದ್ಧಿ” ಎಂದನು…“ಭರತಾಚಾರ್ಯರು ಅವೊತ್ತು ಅಧ್ಯಕ್ಷರಾಗಿದ್ದರಲ್ಲೋ ? ನಾವು ದುಡ್ಡಿನವರು. ಅವರು ಶಾಸ್ತ್ರ ಓದಿದವರು. ಆಂತಹ ಸಭೆಗೆ ಅವರು ಇರಬೇಕು. ಅದಕ್ಕೇ, ಅವರನ್ನೇ ಮಾಡಲಿ ಎಂದೇ ನಾನು ಹೊರಟುಹೋದುದು. ಅಲ್ಲದೆ, ಜಟ್ಟಿ, ಸೂಳೆಯ ಸಂಗೀತ ನಾಟಕ ದನನಿಗೆ ಸನ್ಮಾನ, ಅಂಥಾ ಸಭೆಗೆ ನಾವಿದ್ದರೆ ನಮ್ಮ ತೂಕ, ನಮ್ಮ ಮಾನ, ಏನಾದೀತು? ಹೇಳು” ಎಂದರು.
ಜಟ್ಟಿಯು ಒತ್ತುತ್ತಲೇ ಹೇಳಿದನು: “ಇಲ್ಲ ಬುದ್ಧಿ, ತಾವು ಹಾಗೆನ್ನಬಾರದು. ಚಿನ್ನಾಸಾನಿ ಎಲ್ಲ ಸೂಳೆಯರ ಹಾಗೆ ಮೈಮಾರಿಕೊಳ್ಳೋ ಸೂಳೆಯೂ ಅಲ್ಲ. ಗೋಪಾಲರಾಯರು ಬಣ್ಣ ಬೊಳೆಕೊಂಡು ಕುಣಿಯೋ ನಟರೂ ಅಲ್ಲ ಬುದ್ಧಿ. ಅವೊತ್ತು ಭರತಾಚಾರ್ರು ಹೇಳಿದಂಗೆ ಯೋಗಿಗಳು. ಅದೇನು ಬುದ್ದಿ ಆ ಸಂಗೀತ! ನಾವು ಇನ್ನೆಲ್ಲಾದರೂ ಕೇಳೇವಾ? ಆದಿನ ಮಂಟಪದಲ್ಲಿ “ಸುಮಾರು ಹದಿನೈದು ಇಪ್ಪತ್ತು ಸಾವಿರ ಜನ ಸೇರಿತ್ತಲ್ಲಾ ! ಒಬ್ಬರಾದರೂ ನಶ್ಶೆ ನಾದರೂ ಗಟ್ಟಯಾಗಿ ಸೇದಬೇಕಲ್ಲಾ ! ಅವಳು ನಿಜವಾಗಿ ಸರಸ್ವತಿ ಬುದ್ದಿ. ತಾವಂತವರಲ್ಲ ಅನ್ನಿ. ಆದರೂ ಏನೋ ದೇವರ ಚಿತ್ತದಲ್ಲಿದ್ದು ತಾವೇ ಅವಳಿಗೆ ಗಂಟುಬಿದ್ದರೂ ಜನ ತಮ್ಮನ್ನು ಏನೂ ಅನ್ನೋಲ್ಲ ಬುದ್ಧಿ. ಏನೋ ತಪ್ಪಿ ಅವಳು ಸೂಳೆಯಾಗಿ ಹುಟ್ಟಿದ್ದರೂ ಈ ವೂರಿನ ಎಷ್ಟೋ ಗರತಿಯರಿಗಿಂತ ಗರತಿ ಬುದ್ದಿ…”
ಸೆಟ್ಟರಿಗೆ ಮನಸ್ಸು ಚುಳ್ ಎಂದಿತು. ತಲೆಯ ಮೇಲೆ ತಟಪಟ ಎಂದು ಒತ್ತುತ್ತಿದ್ದರೆ ಅವರ ಮನಸ್ಸಿಗೇ ಏಟು ಬೀಳುವಂತಿತ್ತು. ಮೈಯೆಲ್ಲ ಹಿಸುಕುತ್ತಿದ್ದರೆ, ಮನಸ್ಸನ್ನು ಹಿಸುಕುತ್ತಿರುವಂತಿತ್ತು. ಸೆಟ್ಟರು ಅವನನ್ನು ಆ ವಿಷಯ ಬಿಡು ಎನ್ನುವಂತಿಲ್ಲ. ಎಣ್ಣೆ ಒತ್ತುವಾಗ ಅವನು ಊರಿನ ಸುದ್ದಿಯನ್ನೆಲ್ಲ ಹೇಳುವುದು ವಾಡಿಕೆ. ಸೆಟ್ಟರು ವಾಡಿಕೆಯ, ಸಂಪ್ರದಾಯದ ಕಟ್ಟುನಿಟ್ಟನ ಭಕ್ತರು. ಅವರು ವಾಡಿಕೆಯನ್ನು ಎಂದಿಗೂ ಬಿಡರು.
ಜಟ್ಟಿಯು ಮುಂದುವರಿದನು : “ಅವೊತ್ತು ಇನ್ನೊಂದಾಯಿತಲ್ಲ ಬುದ್ಧಿ. ಹೇಳು ಅಂದರೆ ಹೇಳಿಯೇಬಿಡುತೀನಿ.?
“ಹೇಳು, ಹೇಳು.”
“ತಾವು ಅವೊತ್ತು ಇರದೆ. ಹೊರಟುಹೋದಿರಲ್ಲ. ಅದಕ್ಕೆ ಜನ ಏನೇನೋ ಅರ್ಥ ಮಾಡಿಬಿಟ್ಟಿದ್ದಾರೆ ಬುದ್ದಿ. ಕೆಲವರು ತಮಗೂ ಗೋಪಾಲ ರಾಯರಿಗೂ ಗಂಟುಹಾಕಿ, ನೀವಿಬ್ಬರೂ ಷಡ್ಡಕರು. ಅದಕ್ಕೇ ಅವರು ಹೊರಟುಹೋದರು ಅಂತ ಕೂಡ ಅಂದುಬಿಟ್ಟರು. ನನಗೆ ಕೋಪ ಬಂದು ನಾನು ಒಬ್ಬನ ಕಪಾಳಕ್ಕೆ ಕೂಡ ಕುಟ್ಟಿ ಬಿಡುತ್ತಿದ್ದೆ.“
ಸೆಟ್ಟರ ಮುಖ ಕೆಂಪಾಗಿ ಹೋಯಿಇತು.“ಏನೋ ಹಾಗಂದರೆ?” ಎಂದರು. ಬಿಡಿ ಬುದ್ಧಿ. ತಮಗೆ ತಿಳೀಲಿಲ್ಲವಾ ? ಚಿನ್ನಾಸಾನಿ ತಮಗೂ ಸೆರಗು ಹಾಸವಳೇ! ಅಂತ. ಅದಕ್ಕೇನೆ ಅವಳು ಒಪ್ಪಿಕೊಂಡದ್ದು ಅಂತ ಕೂಡಾ ಅಂದರು. ತಾವೇನಂತ ಅವಳನ್ನು ಸಂಗೀತಕ್ಕೆ ಒಪ್ಪಿಸಿದ್ದು? ”
“ಸರಿ ಜನದಮಾತು ಬಿಡು. ಆಡುವ ನಾಲಗೆಗೆ ಮೂಳೆ ಇದ್ದರಲ್ಲವೆ ?“
“ಆಂ, ಹೆಂಗಂದರಾದೀತಾ ಬುದ್ದಿ. ಜನರ ಬಾಯಲ್ಲಿ ಆಡೋಕೆ ಜಗದೀಶ. ಜನದಮಾತು ಸುಳ್ಳಿನಂಗೆ ಕಂಡರೂ ಅದು ನಿಜ.”
“ಬಿಡೋ, ಹುಚ್ಚ, ಈಗ ನನಗೂ ಚಿನ್ನಾಸಾನೀಗೂ ಗಂಟು ಹಾಕಿದೆ ಹಾಗೇ ತಾನೇ! ನಮಗೇನಾದರೂ ಆ ಹುಚ್ಚು ಇದುವರೆಗೂ ಉಂಟೇ? ಯಾವನೋ ತನಗೆ ತೋರಿತು ಅಂದ. ಮಿಕ್ಕವರೂ ಕೂಗಿ ಬಿಟ್ಟರು. “
ಆವೇಳೆಗೆ ಎಣ್ಣೆಒತ್ತಿ ಮುಗಿಯಿತು. ನೀರು ಕಾದಿದೆಯೆಂದು ಸುದ್ದಿ ಬಂತು. ಸೆಟ್ಟರಿಗೆ ಏನೇನೋ ಯೋಚನೆ. ನೀರು ಹಾಕಿಸಿಕೊಳ್ಳುವಾಗ ಹಾಗೆ ಒಡ್ಡಿ, ಹೀಗೆ ಒಡ್ಮಿ, ಬಹುಸುಖಪಡುವಜಾತಿ ಅವರು. ಆದಿನ ಮಾತ್ರ ಏನೋ ಪಂಪಾಪತಿಗೆ ರುದ್ರಾಭಿಷೇಕ ಆದ ಹಾಗಾಯಿತು. ಜಟ್ಟಿಯೂ ತಾನು ಆಡಿದ ಮಾತಿನಲ್ಲಿ ಯಜಮಾನರಿಗೆ ಅಸಮಾಧಾನ ವಾಗಿರಬೇಕು ಎಂದು ಕೊಂಡು ಮುಂದೆ ಏನೂ ಮಾತನಾಡದೆ ತನ್ನ ಕೆಲಸ ಮಾಡಿ ಮುಗಿಸಿದನು.
ಸುಖವಾದ ಸುಪ್ಪತ್ತಿಗೆಯಲ್ಲಿ ಮಲಗಿದ್ದರೂ ಮೈಯೆಲ್ಲ ಮೀಣದಲ್ಲಿ ಕುಡಿದ ನೀರು ಕಾರಿದ್ದರೂ, ಅವರ ಮೈಹಗುರವಾಗಲಿಲ್ಲ. ಮನಸ್ಸಂತೂ ನಾಯಿಬಾಯಿಗೆ ಸಿಕ್ಕಿದ ಬಟ್ಟೆಹಾಗೆ ಒದರಿಹೋಗಿ ಹರಿದು ಚಿಂದಿ ಪಂದಿಯಾಗಿ ಹೋಗಿತ್ತು.
ಸೆಟ್ಟರು ಅಂಗಡಿಗೆ ಹೋದರು. ಅಲ್ಲಿಯೂ ಲೆಕ್ಕ ನೋಡಿದ ಶಾಸ್ತ್ರ ವಾಯಿತು. ಕೈಯ್ಯಲ್ಲಿ ಹಿಡಿದಿದ್ದ ನೆಶ್ಯದ ಚುಟಿಗೆ ಹಾಗೇ ಹಿಡಿದುಕೊಂಡು ಸುಮ್ಮನೆ ಶಥಪಥತಿರುಗುತ್ತಲಿದ್ದಾರೆ. “ಆಗಲೇ ಇದು ದಿನವಾಯಿತು. ಇನ್ನು ಉಳಿದಿರುವುದು ಇಪ್ಪತ್ತೈದು ದಿನ ಮಾತ್ರ. ಏನು ಮಾಡಬೇಕು ? ? ಇದೇ ಯೋಚನೆ.
ಗೋಪಾಲರಾಯನ ನೆನಪಾದಾಗ ಆ ಚಿನ್ನಳನ್ನು ಹಿಡಿದು ಆ ತುರುಕನಿಗೆ ಕೊಟ್ಟು ಬಿಟ್ಟರೆ ನನ್ನ ಉರಿ ಶಾಂತವಾದೀತು ಎನ್ನಿಸುವುದು. ಜೊತೆಯಲ್ಲಿ ಜನ ಏನೆಂದಾರು? ಮೊದಲೇ ಜಾತಿದ್ವೇಷ ತುಂಬಿತುಳುಕುತ್ತಿದೆ. ಆಕಿಚ್ಚು ಹೊತ್ತಿದರೆ ಅದರಲ್ಲಿ ತಾನೂ, ತನ್ನವರೂ, ತನ್ನ ಸರ್ವಸ್ವವೂ ಭಸ್ಮವಾಗಿ ಹೋಗುತ್ತದೆ. ಅಲ್ಲದೆ ರಾಜಧಾನಿಯಲ್ಲಿ ಚಕ್ರವರ್ತಿಯವರ ಆಸ್ಥಾನದಲ್ಲಿ ಚಿನಿವಾರ ಕಟ್ಟೆಯಲ್ಲಿ, ಬಂಧುಬಳಗದಲ್ಲಿ ಎಲ್ಲೆಲ್ಲೂ ಮೊದಲನೆಯ ವೀಳೆಯ ತೆಗೆದುಕೊಳ್ಳುವ ಯಜಮಾನ, ಹೆಣ್ಣಿನ ಲಂಚಕೊಟ್ಟು ಗಣಿಹಿಡಿದ ಎಂದರೆ ಬದುಕಿದ ಬಾಳು ಏನಾಗಬೇಕು? ಈಗ ಈ ಕೆಲಸ ಮಾಡದಿದ್ದರೆ ನಮಗೆ ಗಣಿ ಸಿಕ್ಕುವುದು ಹೇಗೆ ? ಗಣಿಯೆಂದರೆ ಬಿಟ್ಟೀಯೆ ?“ಥಟ್ಟನೆ ತಿರುಗಿ “ಎಲ್ಲಿರಿ? ಹೋದ ವರ್ಷ ಯುಗಾದಿಯಿಂದ ಯುಗಾದಿಯವರೆಗೆ ನಾವು ವಜ್ರದವವ್ಯಾಪಾರ ಮಾಡಿರುವುದೆಷ್ಟು ? ಬಂದಿರುವ ಹುಟ್ಟು ಲಾಭ ಎಷ್ಟು ತೆಗೀರಿ?” ಎಂದನು.
ಶಾನುಭೋಗನು ಬಂದು ಕೈಮುಗಿದು ಲೆಕ್ಕ ಒಪ್ಪಿಸಿದನು. “ಬುದ್ದಿ, ಗೋಲ್ಕೊಂಡದಲ್ಲಿ ಹರಾಜ್ ನಡೆದದ್ದು ಫಾಲ್ಗುನ ಬಹುಳ ದಶಮಿ. ಸರಕು ನಾವು ಜಮಾ ಹಿಡಿದನ್ನು ಬಹುಳ ತ್ರಯೋದಶಿ. ನಾವು ವ್ಯಾಪಾರ ಆರಂಭಿಸಿದ್ದು ಚೈತ್ರಶುದ್ಧ ತದಿಗೆ. ವ್ಯಾಪಾರ ಆದದ್ದು ಫಾಲ್ಗುನ ಬಹುಳ ತ್ರಯೋದಶಿವರೆಗೆ. ಬಂದ ಸರಕು ಒಟ್ಟು ಐದೂವರೆಮಣ ಎರಡುಸೇರು ಎರಡೂ ಕಾಲು ತೊಲ. ಅದರಲ್ಲಿ ಬ್ರಹ್ಮ ಜಾತಿ ವಜ್ರ ಶುದ್ಧವಾದದ್ದು ಹತ್ತು ಸಾವಿರದ ಐನೂರ ನಲವತ್ತನಾಲ್ಕು. ಮಿಶ್ರ ಹದಿನಾರುಸಾವಿರದ ಏಳುನೂರ ಎಂಟು. ಕ್ಷತ್ರಜಾತಿ ಶುದ್ಧವಾದದ್ದು ಹದಿನಾಲ್ಕುಸಾವಿರದ ಮುನ್ನೂರಿಪ್ಪತ್ತೆರಡು. ಮಿಶ್ರ ಹದಿನೆಂಟುಸಾವಿರದ ಮುನ್ನೂರೆಪ್ಪತ್ತನಾಲ್ಕು. ವೈಶ್ಯಜಾತಿ ಇಪ್ಪುತ್ತು ಸಾವಿರದ ಏಳುನೂರೆಂಟು, ಮಿಕ್ಕವು ಹನ್ನೆರಡು ಸೇರು ಒಂದುಪಾವು ಕಾಲು ಚಟಾಕು, ಒಟ್ಟು ಅರವತ್ತು ಸಾವಿರದ ಆರುನೂರನಲವತ್ತು. ಇದಲ್ಲಿ ಮಾರಾಟ ವಾಗಿರುವುದು ಒಂದು ಲಕ್ಷ ಮೂವತ್ತೆರಡು ಸಾವಿರದ ನಾಲ್ಕುನೂರ ನಲವತ್ತೆಂಟು. ನಾವು ಗೋಲ್ಕೊಂಡದ ಖಜಾನೆಗೆ ಕೊಟ್ಟಿದ್ದು ಹತ್ತುಲಕ್ಷ ಎಂಭತ್ತೆಂಟು ಸಾವಿರ. ನಮಗೆ ಬಂದಿರುವುದು ಇಪ್ಪತ್ತೆರಡುಲಕ್ಷ ಹದಿನೆಂಟು ಸಾವಿರದ ಐನೂರೊಂಭತ್ತುರೂಪಾಯಿ. ಇದರಲ್ಲಿ ರಾಜಾದಾಯ ಎರಡುಲಕ್ಷ ಎಂಭತ್ತುಸಾವಿರದ ನೂರ ಇಪ್ಪತ್ತೇಳು ಹಾಗ ರೂಪಾಯಿ. ನಮ್ಮ ಖರ್ಚು ಎರಡು ಲಕ್ಷದ ಎಂಭತ್ತೆಂಟುಸಾವಿರದ ಮುನ್ನೂರ ಐವತ್ತು ರೂಪಾಯಿ. ಸಮಕಲು ನಲವತ್ತುಸಾವಿರದ ಇನ್ನೂರೆಪ್ಪತ್ತೆರಡು ರೂಪಾಯಿ. ಧರ್ಮ ಹದಿನೇಳು ಸಾವಿರದ ಐನೂರೆಂಟು ರೂಪಾಯಿ ಅಡ್ಡಆಣೆ. ಇದೆಲ್ಲ ಹೋಗುತ್ತ ಹುಟ್ಟುಲಾಭ ನಾಲ್ಕುಲಕ್ಷ ಐವತ್ತನಾಲ್ಕು ಸಾವಿರದ ಇನ್ನೂರೈವತ್ತು ಬೇಳೆ ಆಣೆ.
“ಇದು ಬರಿಯ ಗೋಲ್ಕೊಂಡದ ಲೆಕ್ಕ ?“
“ಹೌದು.”
“ಅಲ್ಲಿಂದ ಬಂದ ಲೆಕ್ಕ ಸೇರಿದೆಯೋ?”
“ಇದು ಇಲ್ಲಿ ವಿಜಯನಗರದ ಅಂಗಡಿಯ ಲೆಕ್ಕ ಮಾತ್ರ.”
“ಗೋಲ್ಕೊಂಡದ್ದೆಷ್ಟು ?”
“ಅಲ್ಲಿ ಹುಟ್ಟು ಲಾಭ ಎರಡು ಲಕ್ಷ ಇಪ್ಪತ್ತೆಂಟುಸಾವಿರದ ಇನ್ನೂರಿಪ್ಪತ್ತು.“
“ಒಟ್ಟು ಹಾಗಾದರೆ ಆರುಲಕ್ಷ ಎಂಭತ್ತೆರಡು ಸಾವಿರ ಎನ್ನಿ.”
“ಅವೊತ್ತು ನೀವೂ ಹರಾಜಿಗೆ ಬಂದಿದ್ದಿರಲ್ಲ. ಗಣಿಯ ಸರಕೆಲ್ಲ ಬಂದಿತ್ತೇ ??
“ಇಲ್ಲ ಹೋದ ಸಲ ಗಣಿ ಏನೇನೋ ಆಗಿ ಆರೇ ತಿಂಗಳು ನಡೆದದ್ದು. ಅದರಲ್ಲೂ ಬಿದರೆಯವರು,, ಅಹಮದ್‌ನಗರದವರು, ಬಿಜಾಪುರದನರು, ಗೋವಾದವರು, ಸೀಮೆಯವರು, ದೆಹಲಿಯವರು ಇವರಿಗೆಲ್ಲ ನಾವೇ ಸುಮಾರು ಐವತ್ತೆಂಟುಲಕ್ಷದಷ್ಟು ಸರಕು ಕೊಟ್ಟು ಬಿಟ್ಟೆವು… ಅವೊತ್ತು ತಮಗೆ ಬೇಡ ಬೇಡ ಹತ್ತೇಲಕ್ಷ ಸರಕು ಸಾಕು ಎನ್ನಿಸಿತು. ನಾನು ಎಷ್ಟು ಹೇಳಿದರೂ ಕೇಳಲೇ ಇಲ್ಲ.”
“ಈಗ ನಮ್ಮ ಹತ್ತಿರ ಉಳಿದಿರುವುದರ ಬೆಲೆಯೆಷ್ಟು ?”
“ಸುಮಾರು ಒಂದು ಲಕ್ಷ್ಮ”
“ನೋಡಿ ಹೇಳು. ಗೋಲ್ಕಂಡದ ಗಣಿ ನಾವು ಗುತ್ತಿಗೆ ಹಿಡಿದರೆ ಎಷ್ಟು ಕೊಡಬಹುದು.?
ಶಾನುಭೋಗನು ಅಷ್ಟುಹೊತ್ತು ಯೋಚಿಸಿ “ಐವತ್ತು- ಚೌಕಾಸಿ ಮಾಡಿದರೆ ಅರವತ್ತರವರೆಗೆ ಕೊಡಬಹುದು.”
ಸೆಟ್ಟರು ತಲೆದೂಗಿ ”
ಗಾಡಿ ಬರಹೇಳು” ಎಂದರು. ಬಂದ ಗಾಡಿ ಯಲ್ಲಿ ಶಾನುಭೋಗನೇ ಹೋಗಿ ಸೆಟ್ಟರು ಕರೆದರು ಎಂದು ರಾಜಧಾನಿಯ ಪ್ರಮುಖ ರತ್ನಪಡಿ ವ್ಯಾಪಾರಿಗಳನ್ನೆಲ್ಲ ಸಂಜೆ ಎರಡು ಝಾವದ ಹೊತ್ತಿಗೆ ಬರಬೇಕು ಎಂದು ಕರೆದುಬಂದನು.
ಸೆಟ್ಟರು ಮನೆಯಲ್ಲಿಯೂ ಸಮಾಧಾನವಾಗಿರಲಿಲ್ಲ. ಅವರು ಏನಾ ದರೂ ಯೋಚನೆಮಾಡಬೇಕಾದರೆ ಮಹಡಿಯ ಮೇಲೆ ತಿರುಗುತ್ತಿರುವುದು ಅವರ ಪದ್ಧತಿ. ಆಗ ಮಾದಳದ ಹಣ್ಣಿನ ಸಿಪ್ಪೆಯ ಬಾಳಕ, ಹುರಿದು ಬಾಲ ಮೆಣಸಿನ ಕಾರ, ಸೈಂಧವಲವಣದ ಪುಡಿ, ಯಾಲಕ್ಕಿ ಪುಡಿ ಹೆಚ್ಚಿರುವ ಬಾದಾಮಿ ಬೀಜ ತಿನ್ನುತ್ತಿರುವುದು ಅವರ ಪದ್ಧತಿ. ಒಂದೊಂದು ದಿನ ಅಂಗೈಯಗಲದ ತಟ್ಟೆಗಳ ತುಂಬಾ ಇಟ್ಟದ್ದ ಬಾದಾಮಿ ಬೀಜ, ಮಾದಳದ ಬಾಳಕ, ಸಾಲದೆ, ಇನ್ನೂ ಒಂದೆರಡು ಸಲ ಬರುತ್ತಿತ್ತು. ಇವೊತ್ತು ಅವರಿಗೆ ಅದೂ ಬೇಕಾಗಿಲ್ಲ. ಒಂದು ಬಾದಾಮಿ ಬಾಯಲ್ಲಿ ಹಾಕಿಕೊಂಡಿದ್ದಾರೆ. ಅದು ಹಾಗೆ ಹಲ್ಲಿನ ನಡುವೆ ಇದ್ದೇ ಇದೆ. ಕೈಯಲ್ಲಿ ಹಿಡಿದಿರುವ ಬಾಳಕವೂ ಹಾಗೆ ಇದೆ. “ಹೊಡೆದುಕೊಂಡು ಹೋಗಬಹುದು. ಆದರೆ ಅವಳು ಮೆಚ್ಚ ದಿದ್ದರೆ ಸಂಗೀತ ಆಗುವುದು ಹೇಗೆ? ಸುಲ್ತಾನನು ಸಂಗೀತದಲ್ಲಿ ತೃಪ್ತನಾಗದೆ ಮುಂದೆ ನುಗ್ಗಿದರೆ ಹೇಗೆ? ಎರಡು ರಾಜ್ಯಗಳಿಗೂ ತಾನಾಗಿ ಯುದ್ಧ ತಂದಿಟ್ಟ ಹಾಗಾಗುವುದಲ್ಲ? ಈಗ ಸುಲ್ತಾನನ ಇಷ್ಟ ನೆರವೇರದೆ ಹೋದರೆ, ತನ್ನ ವ್ಯಾಪಾರ ಹೋಗಿಬಿಡುವುದು. ಅವನ ಮನಸ್ಸಿನಲ್ಲಿ ಅದೇ ಖಾರಾ ನಿಂತು ಮುಂದೆ ಏನು ಮಾಡುವನೋ ?. ಮೊದಲೇ ಎರಡು ರಾಜ್ಯಕ್ಕೂ ಒಳಗೊಳಗೆ ಮಸೆಯುತ್ತಿದೆ. ಈಗ ಅಲ್ಲಾನಮೇಲೆ ಆಣೆಯಿಟ್ಟಿದ್ದಾನೆ. ಇರಲಿ ನನ್ನಂಥಾ ಬುದ್ಧಿವಂತನೇ ಈ ಕೆಲಸಸಾಧಿಸದಿದ್ದರೆ ಇನ್ನು ಯಾರು ಸಾಧಿಸಬೇಕು?”
ಸಮಸ್ಯೆ ಗಡುಸಾದಷ್ಟು ಸೆಟ್ಟರಿಗೆ ಹಠ ಹುರಿಯಾಗುತ್ತಿದೆ. “ಕೊನೆಗೆ ಏನೂ ಆಗದಿದ್ದರೆ ಕಾರ್ಯವಾಸಿ ಕತ್ತೆ ಕಾಲುಕಟ್ಟು ಎಂದು ಇದ್ದೇ ಇದೆ. ಗೋಪಾಲರಾಯನನ್ನೇ ಬುಟ್ಟಿಗೆ ಹಾಕಿಕೊಳ್ಳುವುದು” ಎಂದುಕೊಂಡರು. ನಗು ಬಂತು. “ದೇವರು ಅಂತಹ ಸಂದರ್ಭ ಒದಗಿಸದೆ ಇರಲಿ. ಪಂಪಾಪತಿ ! ವಿರೂಪಾಕ್ಷ! ಕೈ ಬಿಡಬೇಡ. ಬೇಕಾದ್ದಾಗಲಿ ಅವನ ಬಳಿ ಹೋಗಬಾರದು. ಅಂಥಾ ಘಟ್ಟ ಬಂದರೆ ಅವಳ ಕಾಲನ್ನೇ ಹಿಡಿದರೂ ಚಿಂತೆಯಿಲ್ಲ” ಎಂದು ಗಟ್ಟಿ ಮಾಡಿದರು. “ಇನ್ನೇನು? ವರ್ತಕರೆಲ್ಲಾ ಬರುತ್ತಾರೆ. ನೋಡೋಣ ಯಾರ ಬಾಯಲ್ಲಿ ಏನು ಮಾತು ಬಂದೀತೋ?” ಎಂದು ತಲೆದೂಗುತ್ತಾ ಬಾಳಕ, ಬಾದಾಮಿ ಮುಗಿಸಿದರು.
ಸರಿಯಾದ ಹೊತ್ತಿಗೆ ವರ್ತಕರೆಲ್ಲಾ ಬಂದರು. ಸೆಟ್ಟರು ವಜ್ರದ ಗಣಿ ಹಿಡಿಯುನ ಮಾತೆತ್ತಿ ಅಲ್ಲಿ ಹಿಂದೂಗಳದೇ ಒಂದು ಪಾಳ್ಯ ಆಗುವುದು. ಒಂದು ವೇಳೆ ಬೇಕು ಎಂದರೆ ಅಲ್ಲಿ ಒಂದು ಸಲವಾದರೂ ವಿಜಯನಗರದ ಬಾವುಟ ಹಾರಿಸುವುದೂ ಕೂಡ ಅಸಾಧ್ಯವಾಗುವುದಿಲ್ಲ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ವಜ್ರದ ವ್ಯಾಸಾರವೆಲ್ಲ ತಮ್ಮ ಪಾಲಾಗುವುದು ಎಂದು ರಸವತ್ತಾಗಿ ಉಪ್ಪು ಕಾರ ಹಚ್ಚಿ ಹೇಳಿದರು. ವರ್ತಕರು ಸೆಟ್ಟರ ಯೋಚನೆಗೆ ತಲೆದೂಗಿದರು. ಆ ಕಾರ್ಯಕ್ಕೆ ತಮಗೆ ಸಾಧ್ಯವಾದಷ್ಟೂ. ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದರು. “ಎಲ್ಲರೂ ಸೇರಿ ಬಂಡವಾಳ ಹಾಕುವುದು. ಸೆಟ್ಟರ ಯಜಮಾನ್ಯದಲ್ಲಿ ಗಣಿ ನಡೆಸುವುದು. ಐದು ಕೋಟ ಬಂಡವಾಳ. ಆದರಲ್ಲಿ ಸೆಟ್ಟರದು ಹತ್ತರಲ್ಲಿ ಒಂದುಪಾಲು. ಐದು ಲಕ್ಷಕ್ಕೆ ಕಡಿಮೆ ಯಾರೂ ಹಾಕಕೂಡದು” ಎಂದು ಗೊತ್ತಾಯಿತು. ಅಲ್ಲಿದ್ದವರೇ ಆರು ಕೋಟವರೆಗೂ ಮಾತುಕೊಟ್ಟರು. ಸೆಟ್ಟರಿಗೆ ಅರ್ಧ ತೃಪ್ತಿಯಾಯಿತು.
*****
ಮುಂದುವರೆಯುವುದು


















