ಕಾಡುತಾವ ನೆನಪುಗಳು – ೨

ಕಾಡುತಾವ ನೆನಪುಗಳು – ೨

ಮನೆಗೆ ಯಾರಾದರೂ ನೆಂಟರಿಷ್ಟರು ಬಂದರೆ ತಿರುಗಿ ಹೋಗುವಾಗ ನಮ್ಮನ್ನು ಕರೆದು ಚಿಲ್ಲರೆ ಹಣ ಕೊಡುತ್ತಿದ್ದರು. ಈಗ ಆ ದದ್ಧತಿ(?) ಭಾವನೆಗಳಿಲ್ಲ. ‘ಟಾಟಾ…’ ‘ಬೈ… ಬೈ…’ ಯಲ್ಲಿಯೇ ಮುಗಿಸಿಹೋಗಿ ಬಿಡುತ್ತಾರೆ. ಹಾಗೇ ನೆಂಟರು ನಮಗೆ ದುಡ್ಡು ಕೊಡಲು ಬಂದರೆ, ಅವ್ವ ಕಣ್ಣ ಸನ್ನೆಯಿಂದಲೇ “ತಗೋಬೇಡಾ…” ಎನ್ನುವಂತೆ ಸಂಜ್ಞೆ ಮಾಡುತ್ತಿದ್ದಳು. ಬೇಡಾ ಎನ್ನಲು ನನಗಾಗುತ್ತಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮುಂದಿನ ಪುಟ್ಟ ಗೇಟಿನ ಬಳಿ ನಿಂತುಬಿಡುತ್ತಿದ್ದೆ. ಮನೆಗೆ ಹೋಗುವಾಗ ಆ ನೆಂಟರು.

“ಇಲ್ಲಿ ನಿಂತ್ಬಿಟ್ಟಿದ್ದೀಯಾ? ತಗಾ-ಬಿಸ್ಕತ್ ತಿನ್ನು” ಎನ್ನುತ್ತಾ ಚಿಲ್ಲರೆ ಹಣ ಕೊಡುತ್ತಿದ್ದಾಗ ಮರುಮಾತನಾಡದೆ ತೆಗೆದುಕೊಳ್ಳುತ್ತಿದ್ದೆ. ಅವರು ಹೋದ ನಂತರ ಉಳಿದವರ ಬಳಿಯಿದ್ದ ದುಡ್ಡನ್ನು ಪಡೆಯುತ್ತಿದ್ದೆ. ಯಾವುದೇ ತಿಂಡಿ-ತಿನಿಸುಗಳನ್ನು ತಿನ್ನುವಾಗ ಮೊದಲು ನನಗೆ “ಕಪ್ಪ” ಕೊಡಬೇಕಾಗುತ್ತಿತ್ತು. ಇಲ್ಲದಿದ್ದರೆ ರಜಾ ದಿನಗಳಲ್ಲಿ ಜಾರು ಬಂಡೆಗಳಿರುವ ಪಾರ್‍ಕಿಗೆ ಹೋಗುವಾಗ ಸೇರಿಸಿಕೊಳ್ಳುತ್ತಿರಲಿಲ್ಲ. ಅಳುತ್ತಾ ಬೆನ್ನು ಬಿದ್ದರೂ No Chance. ಒಟ್ಟಿನಲ್ಲಿ ಹುಡುಗಿಯ ಉಡುಪಿನಲ್ಲಿ ಹುಡುಗನಂತೆ ಬೆಳೆಯುತ್ತಿದ್ದೆ.

ನಮ್ಮ ಗುಂಪಿನಲ್ಲಿಯೇ ಗುಪ್ತಚಾರರಿರಬೇಕು. ಅವ್ವನಿಗೆ ಈ ವಿಷಯ ತಿಳಿದೇ ಹೋಯಿತು.

“ಬಂದೋರ ಮುಂದೆ ನನ್ ಮಾನ ತೆಗೀತೀಯೇನೇ? ನನ್ನ ಹೊಟ್ಟೆ ಉರಿಸ್ತೀಯಲ್ಲೇ… ನಿನ್ನಿಂದ ಎಲ್ಲರೂ ಹಾದಿ ತಪ್ಪಿಬಿಡ್ತಾರೆ…” ಎಂದು ಸಿಟ್ಟಿನಿಂದ ಕೋಲು ಮುರಿಯುವವರೆಗೂ ಹೊಡೆಯುತ್ತಿದ್ದಳು.

ನಾನು ‘ಕಮಕ್…’ ‘ಕಿಮಕ್…’ ಅನ್ನದೇ ಹಠದಿಂದೆಂಬಂತೆ ನಿಂತುಕೊಂಡು ಏಟಿನ ನೋವನ್ನು ಸಹಿಸಿಕೊಳ್ಳುತ್ತಿದ್ದೆ. ಇಂತಹ ಘಟನೆಗಳು ನನಗೆ ಸಾಮಾನ್ಯವಾಗಿ ಹೋಗಿದ್ದವು. ಹೊಡೆಯುತ್ತಿದ್ದ ಅವ್ವ ಕೈ ಸೋತವಳಂತೆ ಕೋಲು ಬಿಸಾಕಿ, ಬಾಸುಂಡೆ ಬಂದಿದ್ದ ಜಾಗಗಳನ್ನು ಹುಡುಕಿ ಆ ಜಾಗಗಳಿಗೆ ಕೊಬ್ಬರಿ ಎಣ್ಣೆಯನ್ನು ಸವರುತ್ತಾ,

“ಹಿಂಗ್ಯಾಕ್ಕಾಡ್ತೀಯೇ… ಹುಡುಗರ ಜೊತೆ ಆಟ ಆಡಬ್ಯಾಡಾಂದ್ರೂ ಹೋಗ್ತಿಯಾ… ನಾನು ಬೇಡಾಂತ ಹೇಳಿದ್ದನ್ನೆ ಬೇಕೂಂತ ಮಾಡ್ತೀಯಾ… ನಾನೇನು ಮಾಡ್ಲಿ?”-ಎಂದು ಕಣ್ಣೀರು ಹಾಕುತ್ತಲೇ ಮದ್ದು ಸವರಿ ಮುದ್ದು ಮಾಡುತ್ತಿದ್ದಳು.

ಆದರೆ ನನ್ನ ಸಣ್ಣವ್ವ ಅದೇ ಸರಿಯಾದ ಸಮಯವೆಂಬಂತೆ,

“ಸಣ್ಣ ಹುಡೀರಂಗೆ, ಹುಡ್ಗರ ಜತೀ ಕುಣೀತೀಯಲ್ಲ. ನಾನ್ಹೇಳ್ಲಿ… ನೋಡು… ನಿನಗಿಂತ ಸಣ್ಣವು ಹ್ಯಾಂಗ್ ಓಡ್ತಾ ಕೂತಿದ್ದಾರೇಂತ…” ಉರಿಯುತ್ತಿರುವ ಬೆಂಕಿಗೆ ಎಣ್ಣೆ ಸರಿಯುವ ಮಾತನಾಡುತ್ತಿದ್ದಳು.

ಅವ್ವ ಯಾವ ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಆಕೆಯ ಮಾತು, ನಡತೆ ಅವ್ವನಿಗೆ ಗೊತ್ತಿತ್ತೂಂತ ಕಾಣುತ್ತೆ. ನಾನು ನೋವಿನಿಂದ ಮುಲುಗುತ್ತಿದ್ದೆ. ಸಣ್ಣವ್ವನ ಬಗ್ಗೆ ಎಂದೂ ದೂರು ಹೇಳುತ್ತಿರಲಿಲ್ಲ. ಹೇಳಿದ್ರೆ ಅದರ ಪರಿಣಾಮವೇನಿರುತ್ತಿತ್ತೂಂತ ನೆನೆಸಿಕೊಂಡರೆ ಹೆದರಿಕೆಯಾಗುತ್ತಿತ್ತು. ಅವ್ವನದು ರಾತ್ರಿಯ ಪಾಳಿಯ ಡ್ಯೂಟಿ ಇದ್ದರಂತೂ ಸಣ್ಣವ್ವನನ್ನು ಸಿಟ್ಟಿಗೇಳಿಸಿದ್ದರೆ, ರಾತ್ರಿಯಿಡೀ ಕತ್ತಲಲ್ಲಿಯೇ ಹೊರಗೆ ಮುಚ್ಚಿದ ಬಾಗಿಲ ಬಳಿಯೇ ಮುದುಡಿಕೊಂಡು ಕುಳಿತುಕೊಳ್ಳಬೇಕಾಗುತ್ತಿತ್ತು. ನಿದ್ರೆ ಬಂದರೆ ಅಲ್ಲಿಯೇ ಮುದುಡಿಕೊಂಡೇ ಮಲಗಬೇಕಾಗುತ್ತಿತ್ತು. ಬೆಳಿಗ್ಗೆ ನಸುಕಿನಲ್ಲಿಯೇ ನನ್ನನ್ನು ಒಳಗೆ ಕರೆದುಕೊಳ್ಳುತ್ತಿದ್ದಳು! ಅದೆಲ್ಲಾ ಈಗ ಮುಖ್ಯವಲ್ಲ, ಬಿಡು ಮಗಳೇ.

ಅವ್ವಾ… ಅಪ್ಪ ಸತ್ತ ನಂತರ ತವರು ಮನೆಗೆ ಶಾಶ್ವತವಾಗಿ ತನ್ನ ಮಕ್ಕಳೊಂದಿಗೆ ಬಂದು ಸೇರಿದ್ದರೂ ಗಂಡನ ಮನೆಯ ನಂಟನ್ನು ಕಳಚಿಕೊಂಡಿರಲಿಲ್ಲ. ಹಬ್ಬ, ಹರಿದಿನಗಳು, ಜಾತ್ರೆಗಳು ನಡೆದರೆ ನಮ್ಮನ್ನು ಅಪ್ಪನ ಊರಿಗೆ ಕಳುಹಿಸುತ್ತಿದ್ದಳು. ಅಲ್ಲಿಗೆ ಅತ್ಯಂತ ಖುಷಿಯಿಂದಲೇ ಕರೆಯಲು ಬಂದವರ ಜೊತೆ ಹೋಗಲು ನಾನು ಸಜ್ಜಾಗಿಬಿಡುತ್ತಿದ್ದೆ. ಆದರೆ ನನ್ನ ತಂಗಿ ಅವ್ವನಿಗೆ ಅಂಟಿಕೊಂಡೇ ಇರುತ್ತಿದ್ದಳು. ನಾನು ಸ್ವತಂತ್ರ ಸಿಕ್ಕವಳಂತೆ ಹೋಗಿ ಬಿಡುತ್ತಿದ್ದೆ. ಜಾತ್ರೆ ಒಂದು ನೆಪ ಮಾತ್ರ. ಬಿಂದಾಸ್ ಜಾತ್ರೆಯಲ್ಲಿ ಸುತ್ತುವ ಅವಕಾಶ ಸಿಗುತ್ತಿತ್ತು. ಅಲ್ಲಿ ನನ್ನ ಸರಗೆಯ ಹುಡುಗರು ಆಟವಾಡಲು ಸಿಗುತ್ತಿದ್ದರು. ಹುಡುಗರು ಎಲ್ಲಿ ಹೋದರೂ ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೆ.

“ನೀನ್ಯಾಕ್ ನಮ್ಮ ಹಿಂದೆ ಹಿಂದೆ ಬಾರ್‍ತಾಯಿದ್ದೀಯಾ?”

“ಏನಾಗ್ತೈತಿ ಬಂದ್ರೆ?” – ನನ್ನ ಉತ್ತರ ಸವಾಲಿನಂತಿರುತ್ತಿತ್ತು.

“ನಾವಿಲ್ಲಿ ಚುಟ್ಟಾ ಸೇದ್ತೀವಿ…”

“ಆಂ…?”

“ನೀನ್ ಹೋಗಿ ನನ್ ಮನೇವ್ರಿಗೆ ಹೇಳಿದ್ರೆ ಏನ್ ಮಾಡೋದು?”

“ಇಲ್ಲ… ಯಾರೂ ಹೇಳಂಗಿಲ್ಲ ಕಣೋ…” ನನ್ನ ಗೋಗರೆತ.

“ಸರಿ… ನಡೀ…”

ನಮ್ಮ ಗುಂಪು ಹೊಲದ ಮಧ್ಯೆ ಕಟ್ಟೆ ಬಾವಿಯ ಬಳಿ ಹೋಗಿ ನಿಂತಿತು. ಯಾರಿಗೂ ಕಾಣದ ಹಾಗೆ ಕುಳಿತಿದ್ದಾಯ್ತು. ನಾಲ್ಕು ಜನರಿದ್ದೇವು. ಯಾರಾರೋ ಸೇದಿ ಅರ್‍ಧಕ್ಕೇ ಬಿಸಾಡಿದ್ದ, ಬೀಡಿಯ ಚುಟ್ಟಾಗಳನ್ನು ಜೇಬಿನಿಂದ ಹೊರತೆಗೆದು ಮಧ್ಯದಲ್ಲಿ ಹಾಕಿದ. ಬೆಂಕಿ ಪೊಟ್ಟಣವನ್ನು ಹೊರತೆಗೆದ ಮತ್ತೊಬ್ಬ,

“ನೀನೂ… ಹೋಗೆ ಬಿಡ್ತೀಯಾ?”-ಕೇಳಿದ.

“ಹೂಂ…” ಎಂದೆ ಆಸಕ್ತಿ ಕುತೂಹಲದಿಂದ.

ಎಲ್ಲರೂ ಒಂದೊಂದು ಚುಟ್ಟಾ ಎತ್ತಿಕೊಂಡು, ಬೆಂಕಿ ತಾಗಿಸಿ ಕೊಂಡಿದ್ದಾಯಿತು. ತುಟಿಗಳ ಮಧ್ಯೆ ಬೆಂಕಿ ತಾಗಿಸಿದ್ದ ಚುಟ್ಟಗಳನ್ನಿಟ್ಟುಕೊಂಡು “ಪುಸ್… ಪುಸ್…” ಎಂದು ಹೊಗೆ ಬಿಡಲಾರಂಭಿಸಿದ್ದರು. ನಾನೂ ಪ್ರಾರಂಭಿಸಿದ್ದೆ. ಅವರ ಹಾಗೆ ಹೊಗೆಯನ್ನು ಹೊರಗೆ ಬಿಡಲಾರದೆ, ಗಂಟಲು ಕಿತ್ತು ಹೋಗುವ ಹಾಗೆ ಘಾಟು ಹೆಚ್ಚಾಗಿ ಕೆಮ್ಮತೊಡಗಿದ್ದೆ. ಕಣ್ಣುಗಳಲ್ಲಿ ಮೂಗಿನಲ್ಲಿ ನೀರು ಬರತೊಡಗಿತ್ತು.

“ಆಕೀ… ತಲಿ ತಟ್ಟಲೇ ಕೆಮ್ಮು ನಿಂದ್ರತೈತಿ. ಬ್ಯಾಡಂದ್ರೂ ಬಂದಾಳ”.

“ಏನಾಗಿಲ್ಲ ಬಿಡೋ…” ನನ್ನ ನೆತ್ತಿಯ ಮೇಲೆ ಕೈಯಿಂದ ತಟ್ಟಲು ಬಂದವನ ಕೈಯ್ಯನ್ನು ಕಿತ್ತೆಸೆದೆ.

“ನೀನು ಸೇದಿದ್ದು ಸಾಕು. ಕೆಮ್ಮಿ… ಕೆಮ್ಮಿ… ಜನ್ರನ್ನು ಸೇರ್‍ಸಿಬಿಡ್ತೀಯಾ. ಈಗ ಸುಮ್ಮನ ಕುಂದ್ರು…”

ಅಲ್ಲಿಗೆ ಬೇಡಿಯ ಚಟ ಮುಗಿದಿತ್ತು!

ನಾನು ಯಾರಿಗಾದರೂ ಬೀಡಿ, ಸಿಗರೇಟು ಮುಟ್ಟಬೇಡಿ. ಕ್ಯಾನ್ಸರ್ ಬರುತ್ತದೆಂದು ಹೇಳುವಾಗ ನನ್ನ ಕಣ್ಣುಗಳ ಮುಂದೆ, ಬಾವಿ ಕಟ್ಟೆ ಚುಟ್ಟಗಳು, ಆ ಹುಡುಗರು ಕಣ್ಣುಗಳ ಮುಂದೆ ಬರ್‍ತಾರೆ… ಬೀಡಿಯ ಹೊಗೆಯ ವಾಸನೆ… ಮೂಗಿಗೆ ಬಂದು ತಟ್ಟಿದಂತಾಗುತ್ತದೆ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳುದಿಂಗಳು
Next post ಪುನರಾವತಾರ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys