Home / ಕವನ / ಅನುವಾದ / ಪುನರಾವತಾರ

ಪುನರಾವತಾರ

ಹಿಗ್ಗುತ್ತಿರುವ ವೃತ್ತದಾಕಾರದಲ್ಲಿ, ಸುತ್ತುತ್ತ ಸುತ್ತುತ್ತ,
ಕೇಳಿಸದು ಡೇಗೆಗೆ ಡೇಗೆಗಾರನ ಕೂಗು;
ಕಳಚಿಕೊಳ್ಳುತ್ತಲಿದೆ ಅಂಗಾಂಗ, ಒಟ್ಟಾಗಿ ಹಿಡಿಯಲಾರದ ಕೇಂದ್ರ,
ಛೂಬಿಟ್ಟ ಹಾಗಿದೆ ಅನಾಯಕತೆಯನ್ನೇ ಇಡಿಯ ಲೋಕದ ತುಂಬ;
ರಕ್ತಮಂದ ಪ್ರವಾಹ ಕಟ್ಟೊಡೆದು ನುಗ್ಗಿದೆ
ಮುಗ್ಧತೆಯ ಉತ್ಸವ ಮುಳುಗಿ ತಳ ಸೇರಿದೆ,
ಉತ್ತಮರಿಗಿಲ್ಲ ದೃಢನಂಬಿಕೆ, ನಿಕೃಷ್ಟರಿಗೆ
ತೀವ್ರ ಭಾವೋನ್ಮಾದಪರತೆ.

ಯಾವುದೋ ದರ್‍ಶನಕ್ಕಿದು ಕಾಲ ಖಂಡಿತ,
ಪುನರಾವತಾರಕ್ಕೆ ಕಾಲ ಇದು ಖಂಡಿತ.
ಪುನರಾವತಾರ! ಪದದುಚ್ಚಾರ ಆಯಿತೋ
ಕಣ್ಣಕುಕ್ಕುತ್ತಿದೆ ಪುರಾಣಸ್ಮೃತಿಯಿಂದೆದ್ದ ಘೋರ ಬೃಹದಾಕಾರ,
ದೂರ ಮರುಭೂಮಿಯಲ್ಲೆಲ್ಲೊ ನರಶಿರವನ್ನು ಹೊತ್ತ ಸಿಂಹಶರೀರ;
ಶೂನ್ಯಕಾರುವ ನೋಟ, ಸೂರ್‍ಯನಂತೇ, ಕ್ರೂರ,
ಭಾರ ತೊಡೆಯೆತ್ತೆತ್ತಿ ನಿಧಾನ ಚಲಿಸುತ್ತಿದೆ,
ಕೆರಳಿರುವ ಮರುಭೂಮಿಹಕ್ಕಿಗಳ ನೆರಳುಗಳು ಅದರ ಸುತ್ತ.
ಕತ್ತಲಿಳಿಯುತ್ತಿದೆ ಮತ್ತೆ ಕೆಳಗೆ. ಈಗ
ಗೊತ್ತಾಗುತ್ತಿದೆ ನನಗೆ ತೂಗುತೊಟ್ಟಿಲದೊಂದು
ಇಪ್ಪತ್ತು ಶತಕಗಳ ಗಾಢನಿದ್ದೆಯ ಕಾಡಿ ದುಃಸಪ್ನ ಬಡಿಸಿದ್ದು.
ತನ್ನ ಜನನದ ಗಳಿಗೆ ಇನ್ನೇನು ಬಂತೆಂದು
ತೂಗಿ ಚಲಿಸುತ್ತಿದೆಯೊ ಹೇಗೆ ಈ ಘೋರಮೃಗ
ಬೆತ್ಲಹಮ್ಮಿನ ಕಡೆಗೆ?
*****
ಎರಡು ಸಾವಿರ ವರ್‍ಷಗಳಿಗೊಮ್ಮೆ ಯುಗ ಬದಲುತ್ತದೆ; ಹೊಸ ಅವತಾರದಿಂದ ಅದರ ಆರಂಭವಾಗುತ್ತದೆ ಎಂದು ಏಟ್ಸ್ ನಂಬಿದ್ದ. ಕ್ರಿಸ್ತ ಜನಿಸಿ ಎರಡು ಸಹಸ್ರ ವರ್‍ಷಗಳಾಗುತ್ತಿವೆ. ಯುಗಜೀವನ ತುಂಬ ಕಲುಷಿತವಾಗಿದೆ. ಆಗಲಿರುವ ಅವತಾರದ ಕಲ್ಪನೆ ಕವನದಲ್ಲಿ ಮೂಡಿದೆ.

ಪುರಾಣ ಸ್ಮೃತಿ: ಮನುಷ್ಯ ಜನಾಂಗಕ್ಕೆಲ್ಲ ಸಾಮಾನ್ಯವಾದ ಸ್ಮೃತಿ, ಪುರಾಣ ಐತಿಹ್ಯಗಳಲ್ಲಿ ಮತ್ತೆಮತ್ತೆ ಪುನರಾವರ್‍ತಿಸುವ ಪ್ರತಿಮೆಗಳ ಸಂಗ್ರಹ. ಇಲ್ಲಿ ಬರುವ ‘ನರಶಿರವನ್ನು ಹೊತ್ತ ಸಿಂಹಶರೀರ’ ಅಂಥ ಒಂದು ಪ್ರತಿಮೆ.

ಬೆತ್ಲೆಹೆಮ್ : ಕ್ರಿಸ್ತನ ಜನ್ಮಸ್ಥಳ.

ಮೂಲ: ವಿಲಿಯಂ ಬಟ್ಲರ್ ಏಟ್ಸ್

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...