ಸಂವಿಧಾನ : ಡಾ|| ಅಂಬೇಡ್ಕರ್ ಆತಂಕಗಳು

ಸಂವಿಧಾನ : ಡಾ|| ಅಂಬೇಡ್ಕರ್ ಆತಂಕಗಳು

ಚಿತ್ರ ಸೆಲೆ: ರಿಪಬ್ಲಿಕ್ ಕಾಯಿನ್ಸ್ ಆಫ್ ಇಂಡಿಯಾ.ಕಾಂ
ಚಿತ್ರ ಸೆಲೆ: ರಿಪಬ್ಲಿಕ್ ಕಾಯಿನ್ಸ್ ಆಫ್ ಇಂಡಿಯಾ.ಕಾಂ

ಸ್ವದೇಶಿ ಮಂತ್ರದ ಕೆಳಗೆ ವಿದೇಶೀಯ ತಂತ್ರಗಳು ವಿಜೃಂಭಿಸುತ್ತಿವೆ. ದೇಶ ಭರಿಸಲಾರದಷ್ಟು ಸಾಲದ ಶೂಲಕ್ಕೆ ಸಿಕ್ಕಿ ಉಸಿರುಗಟ್ಟುತ್ತಿದೆ. ಮತೀಯವಾದದ ಅನಿಷ್ಟ ಭಾರತದ ಮಣ್ಣನ್ನು ಕಲುಷಿತಗೊಳಿಸುತ್ತಿದೆ. ಯಾರ ಹಿಡಿತವೂ ಇಲ್ಲದೆ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ. ನಿರುದ್ಯೋಗ ಯುವ ಜನತೆಯನ್ನು ಹಿಂಡುತ್ತಿದ್ದರೆ ಮತ್ತೊಂದುಕಡೆ ರಾಜಕೀಯ ಅಧಿಕಾರದ ಭ್ರಷ್ಟಾಚಾರ ಮುಗಿಲು ಮುಟ್ಟುತ್ತಿದೆ. ಶ್ರಮದಿಂದ ಉತ್ಪಾದಿಸಿದ ರೈತರ, ಕಾರ್ಮಿಕರ ಉತ್ಪಾದನೆಗೆ ಕವಡೆ ಬೆಲೆಯು ಸಿಗದ ಪರಿಸ್ಥಿತಿ ಪ್ರಾಪ್ತವಾಗಿದೆ. ಭೂಗತ ದೊರೆಗಳ, ಕಾಡುಗಳ್ಳರ ಅಟ್ಟಹಾಸ ಅಧಿಕಾರ ಹಿಡಿದವರನ್ನು ಭಯಬೀತರನ್ನಾಗಿಸಿದೆ. ಭೌತಿಕವಾಗಿ ಅಷ್ಟಿಷ್ಟು, ಪ್ರಗತಿ ಸಾಧಿಸಿರುವ ಭಾರತ ನೈತಿಕವಾಗಿ ಕುಸಿದು ಅವರಿವರೆನ್ನದೆ ಎಲ್ಲರನ್ನೂ ಅಸಹಾಯಕತೆ ಅಪ್ಪುತ್ತಿದೆ.

ಎಂದ ಮೇಲೆ ನಮ್ಮ ಸಂವಿಧಾನ ನಮಗೆ ಕೊಟ್ಟಿದ್ದೇನು? ಡಾ|| ಅಂಬೇಡ್ಕರ್ ಮತ್ತಿತರರ ಪರಿಶ್ರಮದಿಂದ ರಚಿತವಾದ ಭಾರತದ ಸಂವಿಧಾನದಲ್ಲಿಯೇ ದೋಷವಿದೆಯೆ? ಅಂಬೇಡ್ಕರ್ ಅಭಿವ್ಯಕ್ತಿಸಿದ ಆತಂಕಗಳು ಯಾವುವು? ಈ ಕುರಿತು ನಾವಿಂದು ಚಿಂತಿಸಬೇಕಾಗಿದೆ.

೧೯೪೭ ರಿಂದ ಮೂರು ವರ್ಷಗಳ ಕಾಲ ಮೂರು ಸಂವಿಧಾನ ಕರಡು ಪ್ರತಿಗಳನ್ನು ಎಂಟು ತಿಂಗಳ ಕಾಲ ಸಾರ್ವಜನಿಕರ ಪರಮಾರ್ಶೆಗೆ ಇಟ್ಟು ಸಾರ್ವಜನಿಕರಿಂದ ೭೬೩೫ ತಿದ್ದುಪಡಿಗಳು ಸೂಚಿಸಲ್ಪಟ್ಟು ಅರ್ಹವೆನಿಸಿದ ೨೪೭೭ ತಿದ್ದುಪಡಿಗಳ ಬಗ್ಗೆ ಚರ್ಚಿಸಿ ಅಂತಿಮವಾಗಿ ೨೬- ೧-೧೯೫೦ ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯ್ತು. ಈ ಸಂವಿಧಾನ ಕರಡು ಪ್ರತಿಯನ್ನು ಡಾ|| ಅಂಬೇಡ್ಕರ್ ಪ್ರಪಂಚದ ಎಲ್ಲ ರಾಷ್ಟ್ರಗಳ ಲಿಖಿತ ಹಾಗೂ ಅಲಿಖಿತ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ ರಚಿಸಿದ್ದರು. ಅಂತಹ ಒಂದು ಉತ್ತಮ ಸಂವಿಧಾನ ಈಗಿನ ನಮ್ಮ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣವಾಗಿದೆಯೆ? ಇಲ್ಲಾ ಮತ್ತೇನಾದರೂ ಬೇರೆ ಕಾರಣಗಳೂ ಇವೆಯೆ?

ಈ ಹಿನ್ನೆಲೆಯಲ್ಲಿ ನಾವು ಮೂರು ಮುಖ್ಯ ಸಂಗತಿಗಳನ್ನು ಮನಗಾಣಬೇಕು.
೧. ಭಾರತಕ್ಕೆ ಸ್ವಾತಂತ್ರ್ಯ ಕೊಡುವ ತೀರ್ಮಾನವನ್ನು ಅಂದಿನ ಪ್ರಧಾನಿ ಅಟ್ಲೀ ತೆಗೆದುಕೊಂಡಾಗ ಇಂಗ್ಲೆಂಡಿನ ಮಾಜಿ ಪ್ರಧಾನಿ ಚರ್ಚಿಲ್ ತಮ್ಮ ಆತಂಕವನ್ನು ಹೀಗೆ ವ್ಯಕ್ತಪಡಿಸಿದ್ದರು.

“ಸ್ವಾತಂತ್ರ ಭಾರತದಲ್ಲಿ ಅಧಿಕಾರ ಎನ್ನುವುದು ದಗಾಕೋರರ, ಠಕ್ಕರ ಹಾಗೂ ನಿರಂಕುಶ ದರೋಡೆಕೋರರ ಕೈಗೆ ಹೋಗುತ್ತದೆ. ಗಾಳಿಯೊಂದನ್ನು ಬಿಟ್ಟು ಒಂದು ಸೀಸೆ ನೀರಾಗಲಿ ಇಲ್ಲಾ ಒಂದು ತುಂಡು ಬ್ರೆಡ್ಡಾಗಲೀ ತೆರಿಗೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರು ತಮ್ಮ ತಮ್ಮೊಳಗೇ ಹೊಡೆದಾಡುತ್ತಾರೆ. ಈ ಬಹಿರಂಗ ಕಾದಾಟದಿಂದಾಗಿ ಭವ್ಯ ಭಾರತ ಕಳೆದು ಹೋಗುತ್ತದೆ”

೨. ಭಾರತದ ಬುದ್ಧಿವಂತ ವರ್ಗದ ಬೇಜವಾಬ್ದಾರಿ ತನವನ್ನ ಹಾಗೂ ಸ್ವಾರ್ಥ ಮನೋಧರ್ಮವನ್ನು ಕುರಿತು ಗಾಂಧಿ ೧೯೪೬ ರಲ್ಲಿ ತಮ್ಮ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ.

“ಸಂವಿಧಾನಸಭೆಯಲ್ಲಿ ಇರಬಯಸುವ ವ್ಯಕ್ತಿಗಳ ಎಷ್ಟೊಂದು ಪತ್ರಗಳು ನನ್ನ ಟಪಾಲಿನಲ್ಲಿ ಇರುತ್ತವೆ ಎಂದರೆ ನನಗೆ ಹೆದರಿಕೆ ಆಗುತ್ತದೆ. ಬುದ್ಧಿ ಜೀವಿ ವರ್ಗ ಭಾರತದ ಸ್ವಾತಂತ್ರ್ಯಕ್ಕಿಂತ ವೈಯಕ್ತಿಕ ಸುಖಲೋಲುಪತೆಯ ಬಗ್ಗೆ ಹೆಚ್ಚು ಆತುರದಲ್ಲಿದೆ ಎಂಬ ಸಾರ್ವತ್ರಿಕ ಭಾವನೆಯ ಸೂಚಕ ಇದಾಗಿದೆಯೋ ಎಂಬ ಸಂಶಯ ಬರುತ್ತಿದೆ.”

ಹಾಗೆ ಡಾ|| ಅಂಬೇಡ್ಕರ್ ಕೂಡ

“ಮಾರ್ಗದರ್ಶನಕ್ಕಾಗಿ ತಮ್ಮ ಕಡೆ ಮೊಗಮಾಡಿರುವ ಜನಸಾಮಾನ್ಯರಿಗೆ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನ, ತಿಳಿವಳಿಕೆ ನೀಡುವಲ್ಲಿ ಬುದ್ಧಿವಂತ ವರ್ಗದವರು ಅತ್ಯಂತ ಅಸಡ್ಡೆ ತೋರುವರಾಗಿರುತ್ತಾರೆ ಇಲ್ಲಾ ಅತ್ಯಂತ ಅಪ್ರಾಮಾಣಿಕರಾಗಿರುತ್ತಾರೆ” ಎಂದು ಅಂದೆ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ.

೩. ಡಾ|| ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಮತ್ತೊಂದು ಮಹತ್ವದ ಹೇಳಿಕೆಯನ್ನು ನೀಡಿದ್ದರು. ಅದು “ಒಂದು ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಅದನ್ನು ಅಳವಡಿಸುವ ಜನ ಶ್ರೇಷ್ಠರಾಗಿರದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಒಂದು ಸಂವಿಧಾನ ಶಿಥಿಲವಾಗಿದ್ದರೂ ಅಳವಡಿಸುವ ಜನ ಶ್ರೇಷ್ಠರಾಗಿದ್ದರೆ ಅದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.”

ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಹೆಜ್. ಜಿ. ಬಾಲಕೃಷ್ಣ ಅವರು “ಪರಾಮರ್ಶೆ ಆಗಬೇಕಾಗಿರುವುದು ಸಂವಿಧಾನವನ್ನು ಕುರಿತು ಅಲ್ಲ, ಅದನ್ನು ಅಳವಡಿಸುವಲ್ಲಿ ನಮ್ಮ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಕಾರ್ಯ ವೈಖರಿಯನ್ನು ಕುರಿತು” ಎಂದು ಹೇಳಿರುವ ಮಾತು ಅತ್ಯಂತ ಮಹತ್ವದ್ದಾಗಿದೆ.

ಭಾರತದ ಸಾಮಾಜಿಕ ಅಂಗ ರಚನೆಯನ್ನು ಚೆನ್ನಾಗಿ ಅರಿತಿದ್ದ ಅಂಬೇಡ್ಕರ್ ನಮಗೆ ಸ್ವಾತಂತ್ರ್ಯ ಬಂದರೂ, ಉತ್ತಮ ಸಂವಿಧಾನವನ್ನು ನಾವು ಅಳವಡಿಸಿಕೊಂಡರೂ ಪಟ್ಟಭದ್ರ ಹಿತಾಸಕ್ತರು ದೇಶಕ್ಕಿಂತ ತಮ್ಮ ಹಿತಾಸಕ್ತಿಗಳನ್ನೇ ಪ್ರಧಾನವಾಗಿ ಪರಿಗಣಿಸುತ್ತಾರೆ ಎನ್ನುವುದನ್ನು ಮನಗಂಡಿದ್ದರು. ದಿನಾಂಕ ೨೫-೧೧-೧೯೪೯ ರ ಸಂವಿಧಾನ ರಚನಾ ಸಭೆಯಲ್ಲಿ ತಮ್ಮ ಆತಂಕವನ್ನು ಹೀಗೆ ವ್ಯಕ್ತಪಡಿಸಿದ್ದರು.

“ಚರಿತ್ರೆ ಪುನರಾವರ್ತನೆಗೊಳ್ಳಲಿದೆಯೆ? ಇದು ನನ್ನ ಆತಂಕದ ಪ್ರಶ್ನೆಯಾಗಿದೆ. ಜಾತಿ, ವರ್ಗ, ಪಂಥಗಳೆಂಬ ನಮ್ಮ ಹಳೆಯ ಶೃತ ಶಕ್ತಿಗಳ ಜೊತೆಗೆ ಭಾರತ ಗಣರಾಜ್ಯದಲ್ಲಿ ರಾಜಕೀಯ ಪಕ್ಷಗಳೆಂಬ ಹೊಸ ಶಕ್ತಿಕೇಂದ್ರಗಳು ಸೃಷ್ಟಿಯಾಗಲಿದ್ದು ಇವುಗಳೂ ಶೋಷಕ ಶಕ್ತಿಗಳಾಗುವ ಅಪಾಯವಿದೆ. ಈ ಪಕ್ಷಗಳ ಗುರಿಯೂ ಪರಸ್ಪರ ವಿರೋಧಿ ಆಗಿರಲೂಬಹುದು. ಪ್ರತಿಯೊಂದೂ ತನ್ನ ಹಿತಾಸಕ್ತಿಗಾಗಿ ಶ್ರಮಿಸಬಹುದು. ಜಾತಿ, ವರ್ಗ ಪಂಥಗಳ ಹಿತಾಸಕ್ತಿಗಳೇ ಮುಖ್ಯವಾಗಿ ನಾವು ಹಲವಾರು ವಿದೇಶೀ ಆಳ್ವಿಕೆಗೆ ಗುಲಾಮರಾದೆವು. ಒಂದು ವೇಳೆ ರಾಜಕೀಯ ಪಕ್ಷಗಳೂ ಕೂಡ ಸ್ವತಂತ್ರ ಭಾರತದಲ್ಲಿ ಸ್ವಹಿತಾಸಕ್ತಿಯನ್ನೇ ಮುಖ್ಯವಾಗಿ ಪರಿಗಣಿಸಿ ರಾಷ್ಟ್ರ ಹಿತವನ್ನು ಕಡೆಗಣಿಸಿದ್ದೇ ಆದಲ್ಲಿ ಈ ಸಂವಿದಾನವೂ ನಿಷ್ಪ್ರಯೋಜಕವಾಗಿಬಿಡಬಹುದು. ಆಗ ನಮ್ಮ ಸ್ವಾತಂತ್ರ್ಯ ಕೂಡ ಅಪಾಯಕ್ಕೆ ಗುರಿಯಾಗಬಹುದು.”

ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಅನ್ಯರ ಆಳ್ವಿಕೆಗೆ ಒಳಗಾಗಿ ಗುಲಾಮರಾದಂತೆ ಈಗಲೂ ಪರೋಕ್ಷವಾಗಿ ಗುಲಾಮರಾಗುತ್ತಿದ್ದೇವೆ. ಭಾರತ ಭರಿಸಲಾರದಷ್ಟು ಸಾಲದ ಶೂಲಕ್ಕೆ ಸಿಕ್ಕಿದೆ. ಬಹು ರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ಒಳಗಾಗಿದೆ. ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳಿಂದ ಭಾರತದ ಸಾರ್ವಭೌಮತೆಗೆ ಧಕ್ಕೆ ಒದಗಿರುವುದು ಅಂಬೇಡ್ಕರ್ ಅವರ ಆತಂಕವನ್ನು ನಿಜಗೊಳಿಸುತ್ತಿದೆ. ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ ರಾಷ್ಟ್ರವನ್ನು ಮತ್ತೆ  ಅತಂತ್ರಗೊಳಿಸುತ್ತಿದೆ.

ಅಲ್ಲದೆ ಡಾ||ಅಂಬೇಡ್ಕರ್ ದಿನಾಂಕ ೨೬-೧-೧೯೫೦ ರಂದು ಭಾರತ ಗಣರಾಜ್ಯವಾಗಿ ಘೋಷಿಸಿಕೊಂಡ ದಿನದಂದು ಹೇಳಿದ ಮಾತು ಭಾರತ ಸಮಾನತೆಯನ್ನು ಸಾಧಿಸುವ ಸಾಧ್ಯತೆಯ ಬಗ್ಗೆ ಅವರಿಗಿದ್ದ ಆತಂಕವನ್ನು ವ್ಯಕ್ತಪಡಿಸುತ್ತದೆ.

“ನಾವು ೨೬-೧-೧೯೫೦ ರಂದು ವೈರುಧ್ಯದ ಜೀವನಕ್ಕೆ ಕಾಲಿಡುತ್ತೇವೆ. ರಾಜಕೀಯದಲ್ಲಿ ಸಮಾನತೆ ಪಡೆಯುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸಮಾನತೆಗೆ  ಒಳಗಾಗುತ್ತೇವೆ.

ರಾಜಕೀಯದಲ್ಲಿ ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಎಂಬ ತತ್ವಕ್ಕೆ ಒಳಗಾಗುತ್ತೇವೆ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಕಾರಣ ಸಾಮಾಜಿಕ ಮತ್ತು ಆರ್ಥಿಕ ರಂಗದಲ್ಲಿ ಒಬ್ಬ ವ್ಯಕ್ತಿ ಒಂದು ಮೌಲ್ಯ ಎಂಬುದರಿಂದ ವಂಚಿತರಾಗುತ್ತೇವೆ.

ನಾವು ಎಲ್ಲಿಯವರೆಗೆ ಈ ವಿರೋಧಾಭಾಸದಲ್ಲಿ ಬದುಕುವುದು? ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಎಲ್ಲಿಯವರೆಗೆ ಸಹಿಸುವುದು? ಇದನ್ನು ಮುಂದುವರೆಸುವುದೆಂದರೆ ರಾಜಕೀಯ ಸ್ವಾತಂತ್ರ್ಯದ ನಾಶಕ್ಕೆ ನಾಂದಿ ಹಾಡಿದಂತೆ.

ಈ ವಿರೋಧಾಭಾಸವನ್ನು ಆದಷ್ಟು ಶೀಘ್ರವಾಗಿ ಅಳಿಸಿಹಾಕಬೇಕು. ಇಲ್ಲವಾದರೆ ಪರಿಶ್ರಮದಿಂದ ರಚಿಸಿದ ಈ ರಾಜಕೀಯ ಪ್ರಜಾಪ್ರಭುತ್ವ ಒಡೆದುಹೋಗುತ್ತದೆ.”

ನಿಜ. ಸ್ವಾತಂತ್ರ್ಯ ಬಂದು ೫೩ ವರ್ಷಗಳು ಸಂದರೂ, ನಾವು ಸಂವಿಧಾನವನ್ನು  ಅಳವಡಿಸಿಕೊಂಡು ೫೧ ವರ್ಷಗಳು ಕಳೆದರೂ ನಮಗೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಬದಲಾಗಿ ಅದು ಉಲ್ಬಣಗೊಳ್ಳುತ್ತಿರುವುದು ಡಾ||ಅಂಬೇಡ್ಕರ್ ಅವರ ಆತಂಕವನ್ನು ನಿಜಗೊಳಿಸುತ್ತಿದೆ. ಈ ಕುರಿತು ಗಾಢವಾಗಿ ಚಿಂತಿಸಬೇಕಾದುದು ಎಲ್ಲರ ಗುರುತರ ಜವಾಬ್ದಾರಿಯಾಗಿದೆ.
-೨೦೦೧
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಕ್ಷ
Next post ರಾಜಕಾರಣಿ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys