ತಪ್ಪೇನಾದ್ರೂ ನನ್ನಲಿದ್ರೆ
ತೋರ್‍ಸಮ್ಮಾ ತೋರ್‍ಸಮ್ಮಾ,
ತಪ್ ತೋರ್‍ಸಿದ್ರೆ ತಿದ್ಕೋತೀನಿ
ಗುಡ್ ಬಾಯ್ ಆಗ್ತೀನ್ ಹೇಳಮ್ಮಾ

ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ
ಬೆಳ್ಳಗೆ ಆಗೋದಿಲ್ವಾಮ್ಮ?
ಹಾಗೇ ಶುದ್ಧ ಆಗ್ತೀನ್ ನಾನೂ
ಬುದ್ಧಿ ಮಾತು ಹೇಳಮ್ಮಾ

ತಪ್ ತೋರ್‍ಸಿದ್ರೆ ಅಪ್ಪನ ಹಾಗೆ
ಸಿಟ್‌ಗಿಟ್ ಮಾಡೋದಿಲ್ಲ!
ತಿದ್ಕೊಂಡ್ ಜಾಣ ಆದ್ರೆ ಮುಂದೆ
ನನಗೇ ಒಳ್ಳೇದಲ್ವ?

ಓದಿ ಬರ್‍ದು ದೊಡ್ಡೋನಾಗಿ
ಊರ್‍ಗೇ ಬೇಕಾಗ್ತೀನಿ,
ಇಂಥೋನ್ ತಾಯಿ ಎಷ್ಟ್ ಒಳ್ಳೇವ್ರೋ
ಅಂತ ಅನ್ನಿಸ್ತೀನಿ!

ತಂದೆ ತಾಯ್ಗೆ ಸ್ಕೂಲ್ಗೆ, ಕೇರಿಗೆ
ಒಳ್ಳೇ ಹೆಸ್ರು ತಂದ್ರೆ
ಎಷ್ಟೊಂದ್ ಖುಷಿ ಜನಕ್ಕೆ, ಬಳ್ಳೀ
ತುಂಬ ಹೂ ಸುರಿದ್ಹಂಗೆ!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)