Home / ಕವನ / ಕವಿತೆ / ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

(“ನೂರು ದೇವರನು ನೂಕಾಚೆ ದೂರ ಭಾರತೀ ದೇವಿಯನು ಪೂಜಿಸುವ ಬಾರ”…. ಕುವೆಂಪು)

ದೇವಿ ಭಾರತಿ ತಾಯಿ ಭಾರತಿ ಎಲ್ಲಿಗೆ ಬಂತೇ ನಿನ್ನ ಗತಿ
ಯಾರಿಗೆ ಅವರೇ ಬಡಿದಾಡ್ತಾರೆ ಯಾರಿಗೆ ಬೇಕೇ ನಿನ ಚಿಂತಿ ||ಪ||

ಪುಣ್ಯಭೂಮಿ ನೀ ಗಣ್ಯಭೂಮಿ ಎಂದೇನೇನೋ ನಿನ ಹೊಗಳಿದರು
ದಿವ್ಯ ಭವ್ಯ ಭಾರತ ಅಂತಂದು ಬಾಯ್ತುಂಬ ಸುಳ್ಳೇ ಹಾಡಿದರು ||೧||

ಕೀರುತಿವಂತೆ ಖ್ಯಾತಿವಂತೆ ದಿಕ್ಕಿಲ್ಲದಂಥ ದುರ್ಗತಿ
ಯಾರಿಗಾಗಿ ನೀ ಬಾಳುವಿಯೇನೋ ಬದುಕಿದ್ದೂ ನೀ ಸತ್ತಿ ||೨||

ಲಂಡ ಭಂಡ ಪುಂಡಾಟದ ಕಂತ್ರಾಟ ರಾಜಕಾರಣಂದೋ ಯಾಪಾರ
ಹಾಡ ಹಗಲೆ ನಿನ್ನ ಲೂಟಿ ಮಾಡ್ಯಾರ ಮಂತ್ರಿ ಶಾಸಕರು ಕೈಯಾರ ||೩||

ವೋಟಿಗೆ ನೋಟನು ತೂರಿದ ಮಂತ್ರಿಗೆ ನಿನ್ನೆನಪ್ಹ್ಯಾಂಗ ಬರತೈತಿ
ಒಂದಕ್ಕ ನೂರ್ರಷ್ಟು ಬಳಕೊಳ್ಳಾಕ ಹಗಲಿಳ್ಳು ಸಾಲದು ಬಂದೈತೆ ||೪||

ಸಾವುಕಾರನಿಗೊ ಸಾವಿರ ಕೆಲಸ ಆಸ್ತಿ ಪಾಸ್ತಿ ಅಂತ ಬೆಳೆಸೋದೆ
ಬಡವರ ಬೆನ್ ಮ್ಯಾಲೆ ಸವ್ವಾರಿ ಮಾಡತಾ ದೇಶಾನ್ನ ನರಕಕೆ ಕಳಸೋದೆ ||೫||

ವ್ಯಾಪಾರಿ ತೂಗತಾನೆ ಅನ್ಯಾಯ ತಕ್ಕಡಿ ರೊಕ್ಕಾನೇ ಅವ್ಗೆ ಮನೆದೇವ್ರು
ಗಂಟು ಬಡ್ಡಿಗಳ ಹಣದ ಮೂಟೆಗಳು ದೇಶನ್ಯಾಕೆ ನೆನಸ್ತಾರೆ ಅಂಥಾವ್ರು ||೬||

ತಲೆಗಳ ಬೋಳಿಸಿ ಕೂಡಿಟ್ಟ ಭಂಡವಾಳ ಭಂಡತನವನ್ನೇ ಕಲಿಸ್ಯೈತಿ
ದೊಡ್ಡ ದೊಡ್ಡ ಬಿಜಿನೆಸು ದೊಡ್ಡದಾಗಿ ಬೆಳದಾವೆ ತಾಯಿಯ ಒಡಲೋ ಬರಿದೈತೆ ||೭||

ಲಂಚ ಲಂಚ ಅಂತ ನಾಲಿಗೆ ಚಾಚುತ ರೈತನ್ನ ರಗುತ ಹೀರುತ್ತ
ಉಬ್ಬುವ ಕೊಬ್ಬುವ ಅಧಿಕಾರಿಗಳಿಗೆ ದೇಶದ ಮಾತೇ ಅತ್ತತ್ತ ||೮||

ಸಂಬಳ ಸಾಲದು ಭಡತೀ ಸಾಲದು ಗಿಂಬಳಕಾಗೀ ಪೈಪೋಟಿ
ಸಾವಿರ ಲಕ್ಷದ ನೌಕರಿದಾರರು ತಾಯಿಗೆ ಸುಖವು ಯಾಪಾಟಿ ||೯||

ಊರೂರಿಗೊಬ್ಬೊಬ್ಬ ಜಗದ್ದ್ ಗುರುವು ಶ್ರೀಮಂತ ಶಿಷ್ಯರ ಒಡನಾಟ
ಭೇದವ ಬೆಳೆಸೀ ಬಡದಾಡಕ್ಹಚ್ಚಿ ಮೆರೆಯೋರ್ ದೇಶಕೆ ಭಂಡಾಟ ||೧೦||

ತಿಮ್ಮಪ್ಪ ಬೊಮ್ಮಪ್ಪ ಎಲ್ಲವ್ವ ಹುಲಿಗೆವ್ವ ನೂರಾರು ದೇವರು ಮನೆಮನೆಗೆ
ಎಲ್ಲಾವು ಜನರನು ಹರಕೊಂಡು ತಿನುವಾಗ ಭಾರತಿ ದೇವಿಗೆ ಏನ್ ಕೊನೆಗೆ ||೧೧||

ಪೂಜಾರಿ ಚಿಂತೆ ಕಾಣಿಕೆ ಕಡೆಗೆ ಭಕ್ತರ ಚಿಂತೆ ಹೊರಗಡೆಗೆ
ಪುರಾಣ ನೀತಿ ಹೇಳುವ ಶಾಸ್ತ್ರಿಗೆ ಸುಂಭಾವನೆಯೇ ಕಡೆ ಗಳಿಗೆ ||೧೨||

ಬರೆಯುವ ಕವಿಗೆ ಸನ್ಮಾನ ಭಾಷಣ ಕೊರೆವಗೆ ಧನಮಾನ
ಭಾರತ ಮಾತೆಯ ಎಲ್ಲರು ಬಳಸಿ ಲಂಪಟತನದಲೆ ದಿನಮಾನ ||೧೩||

ಹರೇದ ಹುಡುಗ್ರಿಗೆ ಬಣ್ಬಣ್ಣ ಹುಡುಕೋದು ಮೀಸೆ ಬಂದಾಗ ದೇಶ ಕಾಣದು
ಹರೇದ ಹುಡುಗ್ಗೆ‍ಗೆ ಬಣ್ಬಣ್ಣ ಮೆರೆಯೋದು ದೇಶ ಅಂತಂದ್ರೆ ಗೊತ್ತಾಗದು ||೧೪||

ಖಾಕೀಯ ಉಡುಪಿಗೆ ಕೇಸೀನ ಬ್ಯಾಟಿ ಖಾದಿ ಉಡುಪಿಗಂತು ದೇಶನೆ ಬ್ಯಾಟಿ
ಕರ್ರನ್ನ ಉಡುಪಿಗೆ ಕೊಲೆಗಡ್ಕುರನುಳುಸೋದು ನ್ಯಾಯಾಲಯ್ದಾಗೆ ನ್ಯಾಯ ಲೂಟಿ ||೧೫||

ದುಡಿಯುವ ರೈತಗೆ ಶ್ರಮ ಜೀವಿಗಳಿಗೆ ಹೊಟ್ಟೇನ ತುಂಬೋದೆ ಕಡುಚಿಂತೆ
ಸುಲಿದು ತಿನ್ನುವಂಥ ಹದ್ದು ಕಾಗೆಗಳ ಕೈಯಾಗೆ ನರಳುವ ಜೀವ ಚಿತೆ ||೧೬||

ನೆಲದ ಮಕ್ಕಳೇ ನಿನ್ನ ಮಕ್ಕಳು ಅವರ ದುಸ್ಥಿತಿಯೆ ನಿನ್ನ ಸ್ಥಿತಿ
ಮಣ್ಣಿನ ಮಕ್ಕಳು ಕಣ್ಣು ಬಿಟ್ಟು ನಿಲ್ಲೋವರೆಗೆ ತಾಯಿ ನಿನಗಂತೂ ಇದೇ ಗತಿ ||೧೭||

೧೩.೬.೮೬
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...