೧
ಇರುಳಲಿ ಅಗ್ನಿಯ ರಥದಲಿ ಬರುತಿರೆ
ಘೋರಾರಣ್ಯದ ಮಧ್ಯದಲಿ
ಅರಬೈಲೆನ್ನುವ ಗುರುತರ ವನಗಿರಿ
ದರೆಯಲಿ ರಥವದು ಸಾಗದಿರೆ
೨
ಕೊರಗುತ ರೇಗುತ ಮರುಗುತ ಪೊರಮಡೆ
ಬನಸಿರಿ ಬಗನಿಯ ಬನಗಳನು
ಕಾಣುತ ಸನಿಹದೆ ಕುಣಿಯುವ ಮನದಿಂ
ಮಾಣದೆ ಮನದಣಿಯಿಂ ನೋಡೆ
೩
ಗೊನೆಗಳ ಸೊಂಪಿದೊ ಹೆಡೆಗಳ ಬೆಡಗಿದೊ
ಚಮರಿಯ ಹೋಲುವ ಜಡೆಗಳಿವೊ
ಕಳಸದ ಕೇತುವ ಹೋಲುವ ಕವಲಿನ
ಎಳೆಗರಿ ಬೆಳೆಸಿರಿ ಹೊಳಪುಗಳೊ
೪
ತಳೆದಿಹ ಚಲುವಿನ ಗರಿಗಳನಾರಯೆ
ವಿಧಿ ತಾ ವೇದವ ಬರೆವುದಕೆ
ಪೂರ್ವದೆ ಧರಿಸಿದ ಗರಿಗಳ ಧರೆಯೊಳು
ನರರಿಗೆ ದೊರೆಕೊಳೆ ತೊರೆದಿಹನೊ
೫
ಎಲೆ ಗರಿ ನೀನಿಳೆಯೊಳು ನೆಲಸಿರದಿರೆ
ಬಳಿಕೆಯ ಸೊಲ್ಲನು ಬರೆದಿರಿಸಿ
ಇಳೆಯೊಳು ಕಲೆಗಳ ಹೊಲಬನು ತಿಳಿಸುತ
ಬೆಳಸುವ ಗೆಳೆಯನ ಕಾಣದಿಹೆ
೬
ತೂಕದ ದಂಡೆಗೆಗೊನಕೆಯ ದಿಂಡಿಗೆ
ಈಸಿನ ಕಸುವಿನ ಕಂಬಿಂಗೆ
ಹೊಲವನು ಹಸನವ ಮಾಡುವ ಹಲಿಗೆಗೆ
ಕಸುವನು ಕೊಡುತಿಹ ಕೋಲಿಂಗೆ
೭
ನೇಗೆಯ ಹಲಿಗೆಗೆ ಅಣಿಗಳ ಕೋಲಿಗೆ
ಮಿಂಚಿನ ದೀಪದ ಕಂಬಿಂಗೆ
ಕೆಚ್ಚಿಂ ಕೂಡಿರೆ ಬಳಸುವ ಕೆಲಸಕೆ
ಬಲುಹಿತ ಗೆಯ್ಯುತ ಬಾಳುವುದು
೮
ಮದಿರಾ ಪಾನವ ಪದುಳದೆಯೊದಗಿಪ
ಸದನವೆ ವಸುಧೆಗೆ ತಾನಾಗೆ
ಕೆದರಿದ ಗರಿಗಳ ಸಂದಿನ ಗೊನೆಗಳು
ಮದನನ ಮನಸಿನ ಮರಹುಗಳೊ
೯
ಸಭೆಗಳ ಸೇರುವ ಸದನಕೆ ಸೊಂಪಿಡೆ
ಬೆಡಗಿನ ಹೆಡೆಗಳ ತೊಡಹುಗಳ
ತೊಡಿಸಲು ಜನಪದ ಜನಗಳ ಮನವನು
ಬಿಡದಲೆ ಬಲ್ಪಿಂ ಸೆಳೆಯುವುದು
೧೦
ಬಾಳೆಯ ಸುಳಿಯಲಿ ಏಳುವ ಗೊನೆಯಿಂ
ಬಾಳೆಗೆ ಬಾಳಿನ ಕೊನೆಯಹುದು
ಸುಳಿಗೊನೆಯೇಳಲು ಬಗನಿಯ ಮರಕದು
ಭವಸಂಸಾರದ ಕೊನೆಯಹುದು
೧೧
ಎಲೆ ಮರ ಜನಹಿತ ಮನದಿಂ ಮಾಡುತ
ಜನಪದ ಜನಗಳ ಮನವೊಲಿಪೆ
ತಿಳಿವನು ಕೊಚ್ಚುತ ಕೊರಳನು ಹಿಚುಕುವ
ನರರನು ನೋಡಿಯು ನಗುತಿರುವೆ
*****