ದೂರವಿರಲಿ ಪ್ರೇಮಿಸಿರುವ ಹೆಣ್ಣು
ದೂರವಿದ್ದರೇನೆ ಪ್ರೇಮ ಚೆನ್ನು,
ತೀರಾ ಬಳಿ ಬಂದರೆ
ತಡೆಯೇ ಇಲ್ಲ ಎಂದರೆ
ಸುಟ್ಟು ಬಿಡುವ ಬೆಳಕೀಯುವ ಭಾನು.

ಏನು ಚೆಲುವ ದೂರ ನಿಂತ ಚಂದಿರ!
ಬರಿಗಣ್ಣಿಗೆ ತಂಬೆಳಕಿನ ಮಂದಿರ,
ದುರ್ಬೀನಿನ ನೋಟಕೆ
ವಿಜ್ಞಾನಿಯ ಪಾಠಕೆ
ಕರಿಮುಸುಡಿಯ ತಗ್ಗು, ದಿನ್ನೆ, ಕಂದರ

ಮೈಲಿಯಾಚೆ ನಿಂತ ಹಿರಿಯ ಬೆಟ್ಟ
ಬಾನ ತೂರಿ ನಿಂತ ಹಸಿರು ಅಟ್ಟ
ಹತ್ತಿರವೇ ಸುಳಿದರೆ
ಅಂತರವೇ ಅಳಿದರೆ
ಕಲ್ಲು ಮುಳ್ಳು ಮೈಯ ವಿಕಟಚಿತ್ರ

ಅಯ್ಯೋ ಎನಿಸಿ ಸಿಗಲಿ ನನ್ನ ನಲ್ಲೆ
ಆಹಾ ಎನಿಸಿ ದೂರವಾಗಲಲ್ಲೆ!
ಪ್ರೇಮದ ಮಧು ಬೇಟಕೆ
ಹೃದಯ ಕುಣಿಸುವಾಟಕೆ
ಸಿಕ್ಕೂ ಸಿಗದ ಹೆಣ್ಣೆ ಚೆನ್ನ, ಬಲ್ಲೆ
*****

ಪುಸ್ತಕ: ನಿನಗಾಗೇ ಈ ಹಾಡುಗಳು

 

 

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)