ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ
ಧೂಳು ತುಂಬಿದ ಭಯಾನಕ ಪೊದೆಗಳು
ಕಣಿವೆ ಎದೆಗೆ ತಬ್ಬಿದ್ದ
ಮುಳ್ಳು ಗೋರಂಟಿಗಳ
ಹಳದಿ ಹೂವುಗಳ ತುಂಬ
ಜೇಡರ ಬಲೆಗಳು
ಹಾರಾಡುತ್ತಿವೆ ಹುಳು ಹುಪ್ಪಡಿಗಳು
ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ
ಕಂದಕದಾಳಕ್ಕೆ ಬೈನಾಕ್ಯುಲರ್ ಸ್ಪರ್ಶಿಸದೆ
ಪಕ್ಷಿಗಳ ಕೀಟಗಳ
ಒಂದಕ್ಕೊಂದರ ಬೇಟೆಯಾಟ
ಕಪ್ಪು ಪತಂಗಗಳ, ರಣಹದ್ದುಗಳ
ಕಿಚ್ ಕಿಚ್ ಶಬ್ದ
ಹರಿದಾಡುವ ಪೆಟ್ರೋ ವಾಹನಗಳಲ್ಲಿ
ಹೆಪ್ಪುಗಟ್ಟಿವೆ ಪುರಾತನ
ಅರೇಬಿಯ ವ್ಯಾಪಾರಿ ಮಾರ್ಗಗಳು
ಆದರೂ ಕಾಣುತ್ತೇನೆ ಅಲ್ಲಲ್ಲಿ
ಕಾಲ್ನಡಿಗೆಯಿಂದಲೇ
ಹಾದಿಕೊಂದ ಜನರನ್ನು
ಸೊಂಟಕ್ಕೆ ಬಿಗಿದ ಖಡ್ಗಗಳನ್ನು
ತಲೆಗೆ ಸುತ್ತಿದ ‘ಘೋತ್ರಾ’ ಗಳನ್ನು
ನನ್ನದು ನಿನ್ನದು ಎಂದು
ಕಾದಾಡಿದ ಜನರನ್ನು
ಕೊಳ್ಳೆ ಹೊಡೆದ ಕೊಲೆಗಡುಕರನ್ನು
ಕೊಳ್ಳಕ್ಕೆ ಹರಿದ ನೆತ್ತರನ್ನು
ಮರುಭೂಮಿಯಲ್ಲಿ ಹೂತು ಹೋದ
ಎಲುಬುಗಳನ್ನು, ಅವುಗಳೆದೆಯ ಮೇಲೆ
ಬೆಳೆದ ಪೊದೆಗಳನ್ನು.
ಇಂದು ಒಂಟೆಗಳು
ಸ್ವತಂತ್ರತೆಯ ಖುಷಿಯಲ್ಲಿ
ಧ್ವನಿ ಕಳೆದುಕೊಂಡಿವೆ.
ಬುರ್ಕಾದ ಕಾಲು ತೊಡೆತಕ್ಕೆ ಬಿದ್ದೇಳುವ
ಕುರಿ ಕಾಯುವ ತುಂಟು ಹುಡುಗಿಯರು
ಕೆಂಡ ಸಂಪಿಗೆಯಂತೆ
ತುಂಬು ಗುಲಾಬಿಗಳಂತೆ
ಅರಳುತ್ತಿದ್ದಾರೆ, ಅಷ್ಟೇ
ಕನಸು ಕಾಣದ ಕೋಮಲೆಯರು
ಸುಡುತ್ತಲೂ ಇದ್ದಾರೆ.
ಈಗ ಎಲ್ಲವೂ ನಿಶ್ಶಬ್ದ
ಶತ ಶತಮಾನಗಳ
ಪರಿಪೂರ್ಣತೆಗೆ ಕೃತಜ್ಞತೆಗಳು ಎಂದು
ಸೂರ್ಯ ತೆಪ್ಪಗಾಗುತ್ತಿದ್ದಾನೆ.
ಹೊಸ ಶತಮಾನದ ಉಬ್ಬರಕ್ಕೆ
ಸ್ವಾಗತದ ಹೆಜ್ಜೆಗಳು
ಪುಟಿ ಪುಟಿದು ಓಡಾಡುತ್ತಿವೆ.
(ಅರೇಬಿಯದ ದಕ್ಷಿಣ ಭಾಗದಲ್ಲಿ ಆಳವಾದ ‘ಶಾರ್ ಕಣಿವೆ’ ಮಾರ್ಗಗಳಲ್ಲಿ ಪ್ರವಾಸ ಕೈಗೊಂಡಾಗ ನೋಡಿದ ದೃಶ್ಯ)
*****
ಪುಸ್ತಕ: ಗಾಂಜಾ ಡಾಲಿ


















