ಪ್ರಿಯ ಸಖಿ,

ದುಃಖತಪ್ತ ಶಿಷ್ಯನೊಬ್ಬ ತನ್ನ ಗುರುವಿನ ಬಳಿಗೆ ಬಂದು ಗುರುಗಳೇ ಈ ಪ್ರಪಂಚದಲ್ಲಿ ನನ್ನನ್ನು ಯಾರೂ ಪ್ರೀತಿಸುವವರಿಲ್ಲ. ನಾನು ಯಾರಿಗೂ ಬೇಕಾಗಿಲ್ಲ. ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇನೆ ಎಂದ. ಗುರುಗಳು ಆ ಶಿಷ್ಯನನ್ನು ತೀಕ್ಷ್ಣವಾಗಿ ನೋಡಿ ಹೋಗಿ ಸಾಯಿ ಎಂದರು. ಗುರುಗಳಿಂದ ಇಂತಹ ಮಾತನ್ನು ನಿರೀಕ್ಷಸದಿದ್ದ ಶಿಷ್ಯ ಪೆಚ್ಚಾಗಿ ಹೋದ.

ತಡವರಿಸುತ್ತಾ ಇಲ್ಲಾ ಗುರುಗಳೇ….. ಅದೂ…. ನನಗೆ ಜೀವನವೇ ಬೇಸರವಾಗಿ ಹೋಗಿದೆ…. ಅದಕ್ಕೆ ಹಾಗೆಂದೆ…. ಎನ್ನುತ್ತಾ ಮತ್ತೆ ತನ್ನ ದುಃಖವನ್ನು ತೋಡಿಕೊಂಡ. ಎಲ್ಲವನ್ನು ಮತ್ತೆ ಕೇಳಿಸಿಕೊಂಡ ಗುರುಗಳು, ನೋಡಿದೆಯಾ ನೀನು ನನ್ನಿಂದ ಸಮಾಧಾನ, ಸಾಂತ್ವನವನ್ನು ಮಾತ್ರ ಬಯಸಿದ್ದೀಯ, ನಿನಗೆ ಸಾಯಲು ಸ್ವಲ್ಪವೂ ಇಷ್ಟವಿಲ್ಲ. ಏಕೆಂದರೆ ನೀನು ನಿನ್ನನ್ನೇ ತುಂಬಾ ಹೆಚ್ಚು ಪ್ರೀತಿಸಿಕೊಳ್ಳುತ್ತಿದ್ದೀಯಾ. ತನ್ನನ್ನು ತಾನು ಉತ್ಕಟವಾಗಿ ಪ್ರೀತಿಸಿಕೊಳ್ಳುವ ವ್ಯಕ್ತಿ ಸ್ವಾರ್ಥಿ ಮತ್ತು ಅಹಂಕಾರಿಯಾಗುತ್ತಾನೆ. ಅವನು ಬೇರೆಯವರನ್ನು ಹೇಗೆ ಪ್ರೀತಿಸಿಯಾನು? ಅರ್ಥಮಾಡಿಕೊಳ್ಳುತ್ತಿಲ್ಲಾ ಎನ್ನುತ್ತೀಯ. ಇಲ್ಲಿ ನೀನು ಯಾರನ್ನಾದರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೀಯಾ ? ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನೀನು ನುಡಿಯುತ್ತಿದ್ದರೂ ನಿನ್ನ ಮನಸ್ಸು ಹಾಗೆ ನಡೆದುಕೊಳ್ಳಲು ತಯಾರಿಲ್ಲ. ಹೀಗಿರುವಾಗ ಬೇರೆಯವರು ನಿನ್ನ ಮಾತನ್ನು ಕೇಳುತ್ತಿಲ್ಲ ಎಂದು ಆಕ್ಷೇಪಿಸುವ ಹಕ್ಕು ನಿನಗೆಲ್ಲಿದೆ? ಎಂದರು. ಇದನ್ನು ಕೇಳಿದ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಯ್ತು.

ಸಖಿ, ನಾವು ಯಾವಾಗಲೂ ಹೀಗೇ ಅಲ್ಲವೇ? ನಾವು ಮಾತ್ರ ಸಾಚಾ, ತಪ್ಪುಗಳಿರುವುದೆಲ್ಲಾ ಇತರರಲ್ಲಿ ಎಂದುಕೊಳ್ಳುತ್ತೇವೆ. ಆದರೆ ಅದರ ಮೂಲ ನಮ್ಮಲ್ಲೇ ಇರುತ್ತದೆ. ವಿಶಾಲ ಹೃದಯದಿಂದ ಇನ್ನೊಬ್ಬರಿಗೆ ಪ್ರೀತಿಯನ್ನು ಕೊಡುವುದನ್ನು ತಿಳಿದಿಲ್ಲದ ನಾವು, ನಮ್ಮನ್ನು ಯಾರೂ ಪ್ರೀತಿಸುವುದಿಲ್ಲ ಎಂದುಕೊಳ್ಳುತ್ತೇವೆ. ಯಾರ ನೋವು ನಲಿವುಗಳನ್ನು. ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳಲು ಹೋಗದೇ ಬೇರೆಯವರು ಸದಾ ನಮ್ಮ ನೋವು ನಲಿವುಗಳಿಗೆ ಸ್ಪಂದಿಸಬೇಕೆಂದು ಬಯಸುತ್ತೇವೆ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ ಎಂದುಕೊಳ್ಳುತ್ತೇವೆ. ಅವರಲ್ಲಿ ನಮಗೆ ಪ್ರೀತಿಯೇ ಇಲ್ಲವೆಂದ ಮೇಲೆ ಅವರು ನಾವು ಹೇಳಿದಂತೆ ಕೇಳಬೇಕು ಎಂದು ಹೇಳುವ ಅಧಿಕಾರವಾದರೂ ನಮಗೆಲ್ಲಿದೆ ? ಅದಕ್ಕಿಂತಾ ಹೆಚ್ಚಿನ ಗುರು ಹೇಳಿದಂತೆ ಮಂಗನಂತಾ ನಿಮ್ಮ ಮನಸ್ಸೇ ನಾವು ಹೇಳಿದ ಮಾತು ಕೇಳುವುದಿಲ್ಲ. ಇನ್ನು ಬೇರೆಯವರ ಮಾತೇನು? ಪಾಠ ಕಲಿಸುವುದೇ ಆದರೆ ನಮ್ಮ ಮನಸ್ಸಿಗೆ ಪಾಠ ಕಲಿಸಬೇಕು. ಇತರರನ್ನು ಪ್ರೀತಿಸುವುದನ್ನು ಕಲಿಸಬೇಕು. ಅರ್ಥಮಾಡುವುದನ್ನು ಕಲಿಸಬೇಕು. ಹೀಗಾದಾಗ ಮಾತ್ರ ನಾವೂ ಬೇರೆಯವರಿಂದ ಇದನ್ನೇ ನಿರೀಕ್ಷಿಸಬಹುದು. ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವುದರಲ್ಲಿಯೇ ಮುಳುಗಿರುವವರಿಗೆ, ಬೇರೆಯವರಿಗೆ ಒಂದಿಷ್ಟು ಪ್ರೀತಿಯನ್ನು ಕೊಡಲರಿಯದವರಿಗೆ ಬೇರೆಯವರಿಂದ ಅದನ್ನು ನಿರೀಕ್ಷಿಸುವ ಹಕ್ಕು ಎಲ್ಲಿರುತ್ತದೆ? ಅಲ್ಲವೇ?
*****