ಇನ್ನೇನು ಕಳೆದು ಬಿಟ್ಟರೆ ಎರಡು ರಾತ್ರೆ
ಸನ್ನಿಹಿತವಾಗುವುದು ಮುಂಡೋಡ್ಳು ಜಾತ್ರೆ
ಹನ್ನೆರಡು ಮುಡಿ ಗದ್ದೆ ಉದ್ದಗಲ ಸಂತೆ
ಕಿನ್ನರರ ನಗರಿಯೇ ಇಲ್ಲಿಗಿಳಿದಂತೆ
ಎಲ್ಲಿ ನೋಡಿದರಲ್ಲಿ ಎಂಥದೋ ಸೆಳಕು
ಎಲ್ಲರನು ಒಟ್ಟಿಗೇ ಸೆರೆಹಿಡಿವ ಥಳಕು
ಮಲ್ಲಿಗೆಯ ಹೂಗಳದೆ ಎಂಥೆಂಥ ಚೆಂಡು
ಚೆಲ್ಲು ಜವ್ವನೆಯರದು ಬಹು ದೊಡ್ಡ ಹಿಂಡು
ಯಾವ ಹೆಜ್ಜೆಯ ಹಿಡಿದು ಹೊರಟವನು ನೀನು?
ಯಾವ ನೋವನು ಮತ್ತೆ ನೆನೆಯ ಬಯಸುವನು ?
ನೋವ ಮರೆ ನಲಿವಪಡೆ ಗುಂಪಿನಲಿ ಸೇರು
ಧಾವಿಸುತ ಏರಿಳಿವ ತೊಟ್ಟಿಲಿಗೆ ಹಾರು
ನೋಡು ದೊಂಬರ ಹೆಣ್ಣ ಆಟ ಮೈ ಮಾಟ
ಆಡು ಮೂರೆಲೆಯಾಟ ಓಡಿಬಿಡು ಓಟ
ಕೂಡು ಸುಸ್ತಾದ ಕಡೆ ಸೇದೊಂದು ಬೀಡಿ
ಮಾಡು ನಿದ್ದೆಯನಾಗಸಕ್ಕೆ ಮುಖ ಮಾಡಿ
ಚಲ್ಲಿದರೆ ಬೆಳಕು ಇನ್ನೆಲ್ಲಿಯದು ಸಂತೆ!
ಅಲ್ಲಿರುವುದೆಲ್ಲ ಬರಿ ಕನಸುಗಳ ಕಂತೆ
ತಲ್ಲಣಿಸದಿರು ಮನವೆ ಕನಸುಗಳು ಇದ್ದೆ
ಎಲ್ಲರಿಗು ಬೀಳುವುದು ಪ್ರತಿರಾತ್ರಿ ನಿದ್ದೆ
*****



















