ಹೂಜಿ

ಹೂಜಿ

ಚಿತ್ರ: ಮಾರ್‍ಕ ಪಾಸ್ಕಲ್

ಈ ಬಾರಿಯೂ ಆಲಿವ್ ಹಣ್ಣುಗಳ ಹುಲುಸಾದ ಬೆಳೆ ಬಂದಿದೆ. ಇವು ವರ್ಷದ ಹಿಂದಷ್ಟೇ ನೆಟ್ಟವು; ಒಳ್ಳೆಯ ಉತ್ಪತ್ತಿ ಕೊಡುವ ಮರಗಳು. ಹೂಬಿಡುವ ಸಂದರ್ಭದಲ್ಲಿ ದಟ್ಟ ಮಂಜಿತ್ತಾದರೂ ಎಲ್ಲವೂ ಹಣ್ಣುಬಿಟ್ವಿವೆ.

ಜಿರಾಫಾಗೆ, ಅಮಾಸೋಲ್‍ನಲ್ಲಿರುವ ತನ್ನ ತೋಟದಿಂದ ಐದು ಹೂಜಿಗಿಂತಲೂ ಜಾಸ್ತಿ ಎಣ್ಣೆ ಸಿಗಬಹುದು ಎಂದು ಮೊದಲೇ ಅಂದಾಜು ಸಿಕ್ಕಿತ್ತು. ಆದ್ದರಿಂದ ಆರನೇ ಹೂಜಿಯನ್ನು ತಯಾರಿಸಲು ಆಗಲೇ ಸ್ಯಾಲಟೊಝೀ ಸ್ಪಿಫಾನೋ ಡಿ ಕಮಾಸಾರ್ರನಿಗೆ ಹೇಳಿಟ್ಟಿದ್ದ. ಅದು ಮನುಷ್ಯರ ಹಾಗೆ ಉದ್ದ, ಸುಂದರ, ದೊಡ್ಡ ಆಕಾರದ್ದಾಗಿರಬೇಕು, ಉಳಿದ ಐದು ಹೂಜಿಗಳ ‘ಅಪ್ಪ’ ನಂತಿರಬೇಕು ಎಂದು ತಾಕೀತು ಕೂಡಾ ಮಾಡಿದ್ದ.

ಇನ್ನು ಈ ಹೂಜಿಯ ವಿಷಯದಲ್ಲೂ ಆತ ಆ ಒಲೆಯಲ್ಲಿ ಕೆಲಸ ಮಾಡುವವನ ಮೇಲೂ ವ್ಯಾಜ್ಯ ಹೂಡಿದ್ದನ್ನು ಬೇರೆ ಹೇಳಬೇಕಾಗಿಲ್ಲ. ಹಾಗೆ ನೋಡಿದರೆ ಈ ಜಮೀನ್ದಾರ ಲೊಲ್ಲೋ ಜಿರಾಫಾ ಯಾರ ಮೇಲೆ ಕೇಸು ಹಾಕಿಲ್ಲ ಎಂದು ಬೇಕಲ್ಲ ? ಎಂಥ ಕ್ಷುಲ್ಲಕ ಸಂಗತಿಯೇ ಇರಲಿ – ಚೆಕ್ಕ ಕಲ್ಲಿನ ತುಂಡು ಕಾಂಪೌಂಡಿನಿಂದ ಕೆಳಬಿದ್ದರೂ, ಹುಲ್ಲಿನ ಕಂತೆ ಮಿಸುಕಾಡಿದರೂ ಸಾಕು, ಆತ ನೇರ ಕೋರ್ಟಿಗೇ ಹೋಗುವುದಿತ್ತು. ಕಾನೂನಿನ ದಾಖಲೆಪತ್ರಗಳ, ವಕೀಲರುಗಳ ಫೀಜು ಎಂದು ಓಡಾಡಿ ಕಂಡಕಂಡವರಿಗೆಲ್ಲ ಸಮನ್ಸು ಜಾರಿ ಮಾಡಿ ಎಲ್ಲರ ಖರ್ಚನ್ನೂ ತಾನೇ ನಿಭಾಯಿಸಿ ಈಗಂತೂ ಅರ್ಧ ದಿವಾಳಿಯೆದ್ದು ಹೋಗಿದ್ದ.

ವಾರಕ್ಕೆ ಎರಡು ಮೂರು ಸಲ ಭೇಟಿಯಾಗಲೆಂದು ಬರುವ ಅವನ ಕಾನೂನು ಸಲಹಾಗಾರ ಹೇಸರಗತ್ತೆಯ ಪ್ರಯಾಣ ಮಾಡಿ ಮಾಡಿ ಸುಸ್ತಾಗಿದ್ದಾನೆಂದು ಊರವರು ಹೇಳುತ್ತಿದ್ದರು. ಈ ಜಿರಾಫಾನಿಂದ ತಪ್ಪಿಸಿಕೊಳ್ಳಲೆಂದು ನ್ಯಾಯಸೂತ್ರಗಳಿರುವ ಕಿರುಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟುಬಿಟ್ಟಿದ್ದಾನೆಂದೂ ಜನ ಮಾತಾಡಿಕೊಳ್ಳುತ್ತಿದ್ದರು.

ಹಿಂದೆ ಅವನೊಂದಿಗೆ ಜಗಳಾಡಿದವರು ಅವನನ್ನು ರೇಗಿಸಲೆಂದು, ‘ಆ ಹೇಸರಗತ್ತೆಯ ಮೇಲೂ ಕೇಸು ಹಾಕು’ ಎಂದು ಹೇಳುತ್ತಿದ್ದವರು ಇತ್ತೀಚೆಗೆ, ‘ಪುಸ್ತಕದ ಸಲಹೆ ತೆಗೊಂಡು ಬಿಡು ಮಾರಾಯ’ ಎನ್ನಲು ಶುರುಮಾಡಿದ್ದರು.

ಆಗೆಲ್ಲ, ಜಮೀನ್ದಾರ ಲೊಲ್ಲೋ, “ಸೂಳೆಮಕ್ಕಳಾ…. ಮುಗಿಸಿಬಿಡ್ತೇನೆ ಹುಷಾರ್” ಎಂದು ಕೂಗಾಡುವುದಿತ್ತು.

ನಾಲ್ಕು ಬಿಜೆಯಷ್ಟು ಹಣತೆತ್ತು ಖರೀದಿಸಿದ್ದ ಆ ಹೊಸ ಹೂಜಿ ನೆಲಮಾಳಿಗೆಯ ಯಾವ ಭಾಗದಲ್ಲಿ ಇಡುವುದೆಂದು ನಿರ್ಧಾರವಾಗದೆ ಸದ್ಯ ದ್ರಾಕ್ಷಿ ಹಣ್ಣುಗಳನ್ನು ಹಿಂಡುವ ಶೆಡ್ಡಿನಲ್ಲಿಟ್ಟಿದ್ದರು. ಕನಿಷ್ಠ ಇನ್ನೂರು ಲೀಟರು ಸಾಮರ್ಥ್ಯವಿದ್ದ ಅಂಥ ಹೂಜಿಯನ್ನು ಇದುವರೆಗೆ ಯಾರೂ ನೋಡಿದ್ದಿಲ್ಲ. ಹೂಜಿಯಿರಿಸಿದ್ದ ಆ ಕಗ್ಗತ್ತಲ ಕೋಣೆಯಲ್ಲಿ ಗಾಳಿ ಬೆಳಕು ಹಾಯದೇ ಹಳಸಲು ವಾಸನೆ ಮತ್ತು ವಿಚಿತ್ರ ಘಾಟು ತು೦ಬಿಕೊ೦ಡಿದ್ದು, ಹೊಗಲಿಕ್ಕೇ ಅಸಹ್ಯವೆನಿಸುತ್ತಿತ್ತು. ಇದರಿಂದ ಏನೋ ಅವಘಡ ಸಂಭವಿಸುವ ಸಾಧ್ಯತೆಯಿದೆ ಎಂದು ಆಳುಗಳು ಎಷ್ಟು ಎಚ್ಚರಿಸಿದ್ದರೂ ಲೊಲ್ಲೋ ಮಾತ್ರ ಭುಜ ಹಾರಿಸುತ್ತ ಇಂಥ ಮಾತಿಗೆಲ್ಲ ನಕ್ಕುಬಿಡುತ್ತಿದ್ದ.

ಆಳುಗಳೆಲ್ಲ ಎರಡುದಿನ ಮೊದಲೇ ಆಲಿವ್ ಹಣ್ಣುಗಳನ್ನು ಆರಿಸಲು ಶುರು ಮಾಡಿದ್ದರು. ಆದರೆ ಬೀನ್ಸಿನ ಫಸಲಿಗೆ ಹೇಸರಗತ್ತೆಗಳ ಮೇಲೆ ರಾಶಿರಾಶಿ ಗೊಬ್ಬರ ಹೇರಿಕೊಂಡು ಆಳುಗಳು ಆಗಲೇ ಜಮಾಯಿಸಿದ್ದು ತಾನು ಯಾವುದನ್ನು ಮೊದಲು ನೋಡಿಕೊಳ್ಳುವುದೆಂದು ಅವನಿಗೇ ಸ್ಪಷ್ಟವಿರಲಿಲ್ಲ. ಇದರಿಂದ ಲೊಲ್ಲೋ ಸಿಕ್ಕಾಪಟ್ಟೆ ಕೋಪಗೊಂಡಿದ್ದ. ಒಮ್ಮೆ ಸಾಲುಗಟ್ಟಿ ನಿಂತ ಪ್ರಾಣಿಗಳಿಂದ ಚೀಲ ಇಳಿಸುವುದನ್ನು ನೋಡಬೇಕೆಂದು ಅನಿಸಿದರೆ, ಇನ್ನೊಮ್ಮೆ ಆಲಿವ್ ಹಣ್ಣುಗಳನ್ನು ಆರಿಸುತ್ತಿದ್ದವರನ್ನು ಬಿಟ್ಟು ಬರಲೂ ಮನಸ್ಸೊಪ್ಪುತ್ತಿರಲಿಲ್ಲ. ಹಾಗಾಗಿ ತುರುಕನಂತೆ ಹಿಡಿಶಾಪ ಹಾಕುತ್ತ, ಒಂದು ಹಣ್ಣು ಕಮ್ಮಿ ಬಿದ್ದರೂ ನಿಮ್ಮನ್ನೆಲ್ಲ ನಾಶ ಮಾಡಿಬಿಡುತ್ತೇನೆ ಎಂದು ಬಯ್ಯುತ್ತ, ಮರದ ಪ್ರತಿಯೊಂದು ಹಣ್ಣನ್ನೂ ಲೆಕ್ಕ ಮಾಡಿಟ್ಟು ಕೊಂಡವನ ಹಾಗೆ ಅತ್ತಿತ್ತ ಓಡಾಡುತ್ತಿದ್ದ. ಬಿಳಿಟೋಪಿ, ತೆರೆದೆದೆಯ ಷರಟು, ಬೆವರಿನಲ್ಲಿ ತೊಯ್ದ ಮೈ ಹೊತ್ತುಕೊಂಡು ಕೆಂಗಣ್ಣಿನಲ್ಲಿ ಏನೇನೋ ವಟಗುಟ್ಟುತ್ತ ಹರಿದಾಡುತ್ತಿದ್ದ. ಅವನು ಅದೆಷ್ಟೇ ಸಲ ಶೇವ್ ಮಾಡಿಕೊಂಡು ಕೆನ್ನೆ ನಣುಪಾಗಿಸಿಕೊಂಡರೂ ಅಲ್ಲಲ್ಲಿ ದಪ್ಪ ಕೂದಲುಗಳು ಆಗಲೇ ಬೆಳೆದಿರುತ್ತಿದ್ದವು.

ಮೂರನೇ ದಿವಸ, ಅವನ ಮೂವರು ಆಳುಗಳು ಆಲಿವ್‍ಹಣ್ಣುಗಳನ್ನು ಆರಿಸಿದ ನಂತರ ಏಣಿ ಮತ್ತು ದೊಣ್ಣೆಗಳನ್ನು ಇಡಲೆಂದು ವೈನ್ ತಯಾರಿಸುವ ಶೆಡ್ಡಿಗೆ ಬಂದವರು, ಎದುರಿಗಿದ್ದ ಸುಂದರ ಹೂಜಿ ಎರಡು ಹೋಳಾದ್ದನ್ನು ಕಂಡವರೇ ಸ್ತಬ್ಧರಾಗಿಬಿಟ್ಟರು. ಎದುರಿನ ದೊಡ್ಡ ಭಾಗವೊಂದು ಕಳಚಿಹೋಗಿ ಅದು ಯಾರೋ ಕೊಡಲಿಯಿಂದ ನೀಟಾಗಿ ತುಂಡುಮಾಡಿದಂತೆ ತೋರುತ್ತಿತ್ತು.

ಆಳುಗಳಲ್ಲೊಬ್ಬ, ಎದೆಬಡಿದುಕೊಳ್ಳುತ್ತ, “ಅಯ್ಯೋ…. ಸತ್ತೆ… ಸತ್ತೆ…” ಎಂದು ಗಟ್ಟಿಯಾಗಿ ಅರಚಿದ.

“ಯಾರಪ್ಪಾ ಇದನ್ನು ಮಾಡಿದ್ದು?” ಎರಡನೆಯವ ಕೇಳಿದ.

‘ಅಯ್ಯೋ ಜಮೀನ್ದಾರ ಲೊಲ್ಲೋ ನನ್ನು ಎದುರಿಸುವುದು ಯಾರಪ್ಪಾ ? ಇದನ್ನೀಗ ಅವನಿಗೆ ಹೇಳುವವರು ಯಾರು…. ಅಯ್ಯೋ?’ ಎಂದ.

ಎಲ್ಲರಿಗಿಂತ ಜಾಸ್ತಿಯೇ ಹೆದರಿಕೊಂಡಿದ್ದ ಮೊದಲನೆಯವ, ಏಣಿ ಮತ್ತು ದೊಣ್ಣೆಗಳನ್ನು ಹೊರಗಡೆಯೇ ಗೋಡೆಗಾನಿಸಿ, ತಕ್ಷಣ ಶೆಡ್ಡಿನ ಬಾಗಿಲು ಮುಚ್ಚಿ ತೆಪ್ಪಗೆ ಜಾರಿಕೊಂಡು ಬಿಡೋಣ ಎಂದು ಸಲಹೆಕೊಟ್ಟ. ಆದರೆ ಎರಡನೆಯವ ವಿರೋಧಿಸಿದ:

“ತಲೆ ಕೆಟ್ಟಿದೆಯಾ ನಿಂಗೆ? ಲೊಲ್ಲೋನನ್ನು ಎದುರುಹಾಕಿಕೊಳ್ಳುವುದೆ? ಅದನ್ನು ಒಡೆದಿದ್ದು ನಾವಲ್ಲ ಎಂದವನಿಗೆ ನಂಬಿಕೆ ಬರಬೇಕೆಂದರೆ ನಾವ್ಯಾರೂ ಓಡಿಹೋಗದೆ ಇಲ್ಲೇ ನಿಂತುಬಿಡಬೇಕು!”

ಶೆಡ್ಡಿನಿಂದ ಹೊರಗೆ ಓಡಿಹೋಗಿ, “ಜಮೀನ್ದಾರರೇ…. ಲೊಲ್ಲೋ ಅವರೇ” ಎಂದು ಜೋರಾಗಿ ಕೂಗಿಕರೆದ.

ಲೊಲ್ಲೋ ಗುಡ್ಡದಾಚೆಯೆಲ್ಲೋ ಗೊಬ್ಬರ ಇಳಿಸುತ್ತಿದ್ದ ಆಳುಗಳ ಜತೆಗಿದ್ದ. ಸಿಟ್ಟಿನಿಂದ ಏನೇನೋ ಸಂಜ್ಞಮಾಡುತ್ತ, ಎರಡೂ ಕೈಗಳಿಂದ ತನ್ನ ಹರಕು ಟೊಪ್ಪಿಯನ್ನು ಆಗಾಗ ಹಣೆಯವರೆಗೆ ಎಳಕೊಳ್ಳುತ್ತಿದ್ದ. ಸೂರ್ಯ ಕಂತುವ ಹೊತ್ತಿಗೆ ಆಕಾಶ ಕೆಂಪುಕೆಂಪಾಗಿತ್ತು. ಸಂಜೆಯ ವಾತಾವರಣದಲ್ಲಿ ಶಾಂತಿ ತುಂಬಿಕೊಂಡಿತ್ತು. ಸಿಟ್ಟಿಗೆದ್ದ ಲೊಲ್ಲೋನ ವಿಚಿತ್ರ ಹಾವಭಾವ ಇಂಥ ಹಿನ್ನೆಲೆಯಲ್ಲಿ ಎದ್ದುಕಾಣುತ್ತಿತ್ತು.

’ಜಮೀನ್ದಾರರೇ…. ಲೊಲ್ಲೋ ಅವರೆ!’

ಲೊಲ್ಲೋ ಬಂದ. ನಡೆದ ಅನಾಹುತವನ್ನು ಕಂಡವನಿಗೆ ಹುಚ್ಚೇ ಹಿಡಿದಹಾಗಾಯಿತು. ಮೂವರಲ್ಲಿ ಒಬ್ಬನ ಕುತ್ತಿಗೆಯಮ್ನೆ ಗೋಡೆಗೊತ್ತಿ, ‘ಸೂಳೆಮಕ್ಕಳೇ ನಿಮ್ಮಿಂದಲೇ ವಸೂಲು ಮಾಡ್ತೇನೆ’ ಎಂದು ಅಬ್ಬರಿಸಿದ.

ಹೆದರಿಕೆಯಿಂದ ಆಳುಗಳ ಮುಖ ಬಿಳಿಚಿಕೊಂಡಿತ್ತು. ತನ್ನ ಮೇಲೆಯೇ ಸಿಟ್ಟುಗೊಂಡು ಈಗ ಟೋಪಿಯನ್ನು ನೆಲಕ್ಕೆ ಬಡಿದ. ಸತ್ತವರನ್ನು ನೆನೆದು ಶೋಕಗೊಂಡವನ ಹಾಗೆ ಕೆನ್ನೆ ಕೆನ್ನೆ ಬಡಿದುಕೊಂಡ.

‘ಅಯ್ಯಯ್ಯೋ…. ಹೊಚ್ಚ ಹೊಸ ಹೊಜಿಯಿದು…. ನಾಲು ಬಿಜೆ ಕೊಟ್ಟು ಖರೀದಿಸಿದ್ದೆ…. ಒಮ್ಮೆಯೂ ಉಪಯೋಗಿಸಿರಲಿಲ್ಲ …. ಅಯ್ಯೋ!”

ಅದನ್ನು ಒಡೆದವರು ಯಾರೆಂದು ಪತ್ತೆ ಮಾಡಬೇಕಿತ್ತವನಿಗೆ. ತಾನಾಗೇ ಅದೇನೂ ಒಡೆದುಹೋಗಿಲ್ಲ…. ಯಾರೋ ಹೊಟ್ಟೆಕಿಚ್ಚಿನಿಂದ ಒಡೆದುಹಾಕಿರಬೇಕು! ಎಂದನಿಸಿತು. ಆದರೆ ಯಾವಾಗ? ಹೇಗೆ? ಎಂದು ಮಾತ್ರ ಗೊತ್ತಾಗಲಿಲ್ಲ. ಆಸುಪಾಸು ಯಾವ ಚಿಹ್ನೆಯೂ ಕಾಣಿಸಲಿಲ್ಲ. ತರುವಾಗಲೇ ಒಡೆದುಹೋಗಿರಬಹುದೇ ಎಂಬ ಸಂಶಯ ಬಂದರೂ… ಇಲ್ಲ…. ಇಲ್ಲ…. ತರುವಾಗ ಒಳ್ಳೇ ಗಂಟೆ ಬಾರಿಸಿದ ಹಾಗೆ ಶಬ್ಧ ಮಾಡುತಿತ್ತಲ್ಲ ಎಂದನಿಸಿತು.

ಲೊಲ್ಲೋನ ಸಿಟ್ಟು ತುಸು ಕಡಿಮೆಯಾದ ನಂತರ, ಅವನ ಆಳುಗಳು ಅವನನ್ನು ಶಾಂತವಾಗಿರುವಂತೆ ವಿನಂತಿಸಿದರು. ಆ ಹೂಜಿಯನ್ನು ರಿಪೇರಿ ಮಾಡಿಸೋಣ, ಪೂರ್ತಿಯೇನೂ ಹಾಳಾಗಿಲ್ಲ, ಬರೇ ಒಂದು ಚಿಕ್ ಚೂರಷ್ಟೇ ಹೋಗಿದೆ ಎಂದು ಸಮಾಧಾನ ಮಾಡಿದರು. ಇದಕ್ಕೆ ಡಿಮಾಲಿಕಾಸಿ ಅಂಕಲ್ ಸರಿಯಾದ ವ್ಯಕ್ತಿಯೆಂದೂ ಹೇಳಿ ಆತನ ಬಳಿ ಹೊಸ ಮ್ಯಾಜಿಕ್ ಸಿಮೆಂಟ್ನ ರಹಸ್ಯ ಫಾರ್ಮುಲಾ ಇದೆಯೆಂದೂ, ದೊಡ್ಡ ಸುತ್ತಿಗೆಯಿಂದ ಹೊಡೆದರೂ ತುಂಡಾಗದಂಥ ಸಿಮೆಂಟು ಅದೆಂದೂ ಹೇಳಿದರು. ನೀವು ಒಪ್ಪಿದಲ್ಲಿ ಡಿಮಾಲಿಕಾಸಿ ನಾಳೆ ಬೆಳಿಗ್ಗೆಯೇ ಬಂದು ತಕ್ಷಣ ಸರಿಮಾಡಿಕೊಡುವನೆಂದೂ ಪುಸಲಾಯಿಸಿದರು.

ಶುರುಶುರುವಿಗೆ ಎಷ್ಟು ಹೇಳಿದರೂ ಲೊಲ್ಹೋ ಕೇಳಲೇ ಇಲ್ಲ. ಎಲ್ಲವೂ ನಿಷ್ಪ್ರಯೊಜಕವಾದ್ದು; ಎಷ್ಟು ಒದ್ದಾಡಿದರೂ ಹೂಜಿಯನ್ನು ಸರಿಪಡಿಸಲು ಸಾಧ್ಯವೇ ಇಲ್ಲ – ಎಂದುಬಿಟ್ಟ. ಆದರೆ ಕೊನೆಗೆ ಅದೇಕೋ ಒಪ್ಪಿಕೊಂಡ. ಮಾರನೇದಿವಸ ಬೆಳಿಗ್ಗೆಯಾಗಿದ್ದೇ ಅಂಕಲ್ ಡಿಮಾಲಿಕಾಸಿ ತನ್ನ ಟೂಲ್ಬಾಕ್ಸ್ನೊಂದಿಗೆ ಪ್ರಮಾಸೋಲ್ನಲ್ಲಿ ಹಾಜರಾಗಿಬಿಟ್ಟ.

ಆತ ಗೂನುಬೆನ್ನಿನ ವ್ಯಕ್ತಿಯಾಗಿದ್ದ. ಸಂಧಿವಾತ ಬಡಿದವನಂತೆ ಅವನಿಗೆ ಅಲ್ಲಲ್ಲಿ ಗಂಟುಗಳಿದ್ದವು. ಸಾರಾಸೆನ್ ಜಾತಿಯ ಆಲಿವ್ ಮರದ ಹಳೇ ಕೊರಡಿನಂತಿದ್ದ (ಸಾರಾಸೆನ್ ಅಂದರೆ ಸಿಸಿಲಿಯನ್ನು ಆಕ್ರಮಿಸಿದ್ದ ಅರಬರು ನೆಟ್ಟರಮರ). ಅವನನ್ನು ಮಾತಿಗೆಳೆಯುವುದಂತೂ ಬಹಳ ಕಷ್ಟದ ಕೆಲಸವಾಗಿತ್ತು. ಬಾಯೊಳಗೆ ಕೊಕ್ಕೆ ತೂರಿಸಿದರೂ ಆತ ಮಾತಾಡಲೊಲ್ಲ. ದರ್ಪ, ದುಃಖ ಎಲ್ಲಾ ಆ ವಿಚಿತ್ರ ದೇಹದೊಳಗೆ ತುಂಬಿಕೊಂಡಂತಿದ್ದು ಗುಮ್ಮ ನಗುಸುಕನಂತೆ ಯಾವಾಗಲೂ ಮೌನವಾಗಿಯೇ ಇರುತ್ತಿದ್ದ. ಮಾತ್ರವಲ್ಲ, ತನ್ನ ಆವಿಷ್ಕಾರಗಳ ಮೂಲಕವೇ ತನ್ನ ಕುರಿತು ಜನರಿಗೆ ಗೊತ್ತಾಗಲಿ ಎಂದು ನಂಬಿಕೊಂಡಿದ್ದ ಅಂಕಲ್ ಡಿಮಾಲಿಕಾಸಿ ತಾನು ಕಂಡು ಹುಡುಕಿದ್ದ ಆ ಮ್ಯಾಜಿಕ್ ಸಿಮೆಂಟಿನ ಫಾರ್ಮುಲಾದ ರಹಸ್ಯ ಸೋರಿಹೋಗದಂತೆ ಬಹಳ ಎಚ್ಚರದಿಂದಿದ್ದ.

ತುಸು ಅಪನಂಬಿಕೆಯಿಂದಲೇ ಮಾತಿಗಿಳಿದ ಜಮೀನ್ದಾರ ಲೊಲ್ಲೋ, “ಮೊದಲು ಆ ರಹಸ್ಕ ತೋರಿಸು” ಎಂದ.

ಡಿಮಾ ಅಂಕಲ್ ತಲೆಯಲ್ಲಾಡಿಸುತ್ತ ಗಂಭೀರವಾಗಿ ನಿರಾಕರಿಸಿದ. “ಕೆಲಸ ಒಮ್ಮೆ ಮುಗಿದ ನಂತರ ನಿಮಗೇ ಗೊತ್ತಾಗುತ್ತದೆ.”
“ಆದರೆ ಆ ಸಿಮೆಂಟಿನಿಂದ ಸಾಧ್ಯವಿದೆಯೆ?” ಅಂಕಲ್ ಡಿಮಾ ತನ್ನ ಟೂಲ್ಬಾಕ್ಸನ್ನು ನೆಲದಮೇಲಿಟ್ಟು, ಅದರಿಂದ ಹರಿದು ಮಾಸಿಹೋದ ಹತ್ತಿಯ ರುಮಾಲನ್ನು ಹೊರತೆಗೆದ. ನಂತರ ಒಂದು ಜೊತೆ ಕನ್ನಡಕದ ಗಾಜುಗಳನ್ನು ಹೊರತೆಗೆದು ಅದರ ತುಂಡಾದ ಎರಡೂ ಬದಿಗೆ ತಂತಿಯನ್ನು ಕಟ್ಟಿ ಧರಿಸಿಕೊಂಡ.

ಈಗ ಚೂರಾದ ಹೂಜಿಯನ್ನು ಹೊರಗಡೆ ತಂದು ಸೂಕ್ಷ್ಮವಾಗಿ ಪರಲೀಕ್ಷಿಸತೊಡಗಿದ.

“ಹೌದು…. ಸರಿಪಡಿಸಬಹುದು.” ಎಂದ.

“ಬರೇ ಸಿಮೆಂಟಿನಿಂದ ಮಾತ್ರ ಭದ್ರವಾಗಲಾರದು ಅಂತ ನನ್ನ ಅನಿಸಿಕೆ. ಅದರ ಜತೆಗೆ ಮೊಳೆಗಳೂ ಇರಲಿ” ಎಂದ ಲೊಲ್ಲೋ.

“ಹಾಗಾದ್ರೆ ನಾನು ಹೊರಟೆ” ಎಂದು ತುಸು ಕಟುವಾಗಿಯೇ ಹೇಳಿದ ಅಂಕಲ್ ಡಿಮಾ ತನ್ನ ಟೂಲ್ಬಾಕ್ಸನ್ನು ಮತ್ತೆ ಬೆನ್ನಿಗೆ ಕಟ್ಟಿಕೊಂಡ.

ಜಮೀನ್ದಾರ ಲೊಲ್ಲೋ ಅವನ ರಟ್ಟೆ ಹಿಡಿದು, “ಎಲ್ಲಿಗೆ ಹೋಗ್ತಾ ಇದೀಯ? ನೀನು ನಿನ್ನ ಗಿರಾಕಿಗಳ ಜತೆ ಹೀಗೇನಾ ವ್ಯವಹರಿಸುವುದು? ಕತ್ತೆ ನನ್ಮಗನೆ…. ಆಜ್ಞೆ ಪಾಲಿಸುವುದಷ್ಟೇ ನಿನ್ನ ಕೆಲಸ ತಿಳಿಯಿತಾ! ಆ ಹೂಜಿಯಲ್ಲಿ ಎಣ್ಣೆ ಸಂಗ್ರಹಿಸಿಡಬೇಕು. ಆದರೆ ಈಗ ನೀನು ಬರೇ ಸಿಮೆಂಟಿನಿಂದ ಸರಿಪಡಿಸಿದರೆ ಎಲ್ಲ ಸೋರಿಹೋಗುತ್ತದೆ…. ನನಗೆ ಅದರ ಜೊತೆ ಮೊಳೆಗಳೂ ಬೇಕು ತಿಳೀತಾ…. ಸಿಮೆಂಟ್ ಮತ್ತು ರಿವೆಟ್ ಮೊಳೆಗಳು. ನಿನಗೆ ಆರ್ಡರ್ ಕೊಡ್ತಾ ಇದ್ದೇನೆ ಮಗನೆ.” ಎಂದು ಗರ್ಜಿಸಿದ.

ಅಂಕಲ್ ಡಿಮಾ ಕಣ್ಣುಮುಚ್ಚಿಕೊಂಡು ಸುಮ್ಮನೆ ತಲೆಯಾಡಿಸಿದ. ತನ್ನ ಪಾಡಿಗೆ ತಾನು ಕೆಲಸ ಮಾಡಲು, ಆ ಆನಂದವನ್ನು ಲೊಲ್ಲೋ ನಿರಾಕರಿಸಿದಂತೆ ಅನಿಸಿತು. ಅಲ್ಲದೆ, ಅವನಿಗೆ ತನ್ನ ಸಿಮೆಂಟಿನ ಶಕ್ತಿಯನ್ನು ತೋರಿಸಿಕೊಡುವ ಒಳ್ಳೆಯ ಅವಕಾಶವನ್ನು ಕಸಿದುಕೊಂಡಂತೆಯೂ ಭಾಸವಾಯಿತು.

ಡಿಮಾ, “ಪುನಃ ಆ ಹೂಜಿಯನ್ನು ಹಿಂದಿನಂತೆ ಗಂಟೆಯ ಶಬ್ದ ಹೊರಡಿಸುವ ಹಾಗೆ ನಾನು ಮಾಡಿದೆ ಎಂದಾದರೆ…” ಎಂದು ಹೇಳುವಷ್ಟರಲ್ಲಿ…. “ಇಲ್ಲ…. ಇಲ್ಲ…. ಸಾಧ್ಯವೇ ಇಲ್ಲ… ಮೊಳೆಗಳು ಬೇಕೇಬೇಕು…. ನಾನು ಮೊಳೆ ಮತ್ತು ಸಿಮೆಂಟುಗಳೆರಡಕ್ಕೂ ಹಣ ಕೊಡುತ್ತಿದ್ದೇನೆ. ಎಷ್ಟಾಗ್ತದೆ ಅಂತ ಹೇಳು?” ಎಂದು ಲೊಲ್ಲೋ ಅಬ್ಬರಿಸಿದ.

“ಬರೇ ಸಿಮೆಂಟ್ನಿಂದ ಮಾತ್ರ ಎಂದಾದರೆ….”

’ನೀನೆಂಥ ತರಲೆ ಮನುಷ್ಯ ಮಾರಾಯಾ! ನಾನು ಹೇಳ್ತಾ ಇರುವುದು ನಿನ್ನ ತಲೆಗೆ ಹೋಗ್ತಾ ಇಲ್ವಾ ? ಒಳಗಡೆ ಮೊಳೆಯನ್ನು ಬಳಸಿಯೇ ರಿಪೇರಿ ಮಾಡು ಗೊತ್ತಾಯ್ತಾ…. ಕೆಲಸ ಮುಗಿದ ನಂತರ ಎಷ್ಟು ಅಂತ ಲೆಕ್ಕಾಚಾರ ಮಾಡೋಣ. ನಾನು ಹೇಳಿದಷ್ಟು ಮಾಡು. ನಿನ್ನ ಪುರಾಣ ಕೇಳ್ತಾ ಕೂರೋದಕ್ಕೆ ನನ್ನ ಹತ್ತರ ಟೈಮಿಲ್ಲ….”

ಇಷ್ಟು ಹೇಳಿದ್ದೇ ಆತ ತನ್ನ ಕೆಲಸದಾಳುಗಳ ನಿಗಾ ವಹಿಸಲೆಂದು ಎಲ್ಲೋ ಹೋಗಿಬಿಟ್ಟ. ಸಿಟ್ಟಿನಿಂದ ಭುಸುಗುಡುತ್ತ ಅಂಕಲ್ ಡಿಮಾ ತನ್ನ ರಿಪೇರಿ ಕೆಲಸ ಪ್ರಾರಂಭಿಸಿದ ಕಬ್ಬಿಣದ ಸರಿಗೆ ತುರುಕಿಸಲು ಅವನು ಒಂದೊಂದೇ ತೂತು ಕೊರೆಯುತ್ತ ಹೋದಹಾಗೆ ಅವನ ಸಿಟ್ಟೂ ಹೆಚ್ಚುತ್ತ ಹೋಯಿತು. ರಿಪೇರಿ ಕೆಲಸದಲ್ಲಿ ಮಗ್ನನಾಗುತ್ತ ಹೋದಂತೆ ರೋಷದಿಂದ ಕಣ್ಣುಗಳು ಕೆಂಪಾದವು. ಮೊದಲ ಹಂತದ ಕೆಲಸ ಮುಗಿಯುತ್ತಲೇ ಡ್ರಿಲ್ಲಿಂ ಯಂತ್ರವನ್ನು ಆವೇಶದಿಂದ ತನ್ನ ಟೂಲ್‍ಬಾಕ್ನೊಳಗೆ ಎಸೆದುಬಿಟ್ಪ. ಕಳಚಿಹೋದ ಭಾಗವನ್ನು ಹೂಜಿಗೆ ಜೋಡಿಸುವಾಗ ತೂತುಗಳು ಸಮಾಂತರದಲ್ಲಿವೆಯೋ ಎಂದು ಖಾತರಿಪಡಿಸಿಕೊಂಡು ಮತ್ತು ಚಿಮುಟದಿಂದ ಸರಿಗೆಗಳನ್ನು ಸಾಧ್ಯವಾದಷ್ಟು ಸಣ್ಣಗೆ ಕತ್ತರಿಸಿದ. ಈ ನಡುವೆ ಆಲಿವ್ ಉದುರಿಸುತ್ತಿದ್ದ ಕೆಲಸದಾಳನ್ನು ಸಹಾಯಕ್ಕೆಂದು ಕರೆದುಕೊಂಡ.

ಅಂಕಲ್ ಡಿಮಾ ಮುಖ ಸಪ್ಪೆ ಮಾಡಿಕೊಂಡಿರುವುದನ್ನು ನೋಡಿದ ಆಳು, “ನಗುನಗುತ್ತ ಇರು ಮಾರಾಯಾ” ಎಂದ.

ಅಂಕಲ್ ಡಿಮಾ ತುಸು ಸಿಟ್ಚೆನಿಂದಲೇ ಕೈಯೆತ್ತಿದ. ಸಿಮೆಂಟು ಡಬ್ಬಿಯ ತಗಡಿನ ಮುಚ್ಚಳವನ್ನು ತೆರೆದು ಆಕಾಶದತ್ತ ತೋರಿಸುತ್ತ, ಆ ಸಿಮೆಂಟಿನ ಗುಣಲಕ್ಷಣಗಳನ್ನು ಮನುಸಂಕುಲವೇ ಒಪ್ಪಲು ನಿರಾಕರಿಸಿಬಿಟ್ಟಿದೆ ಎಂಬಂತೆ, ಅದನ್ನು ದೇವರಿಗೆ ಅರ್ಪಿಸುವವನಂತೆ ಅಲುಗಾಡಿಸಿದ. ನಂತರ, ತುಂಡಾದ ಭಾಗದ ತುದಿಗಳಿಗೆ, ಬಿರುಕುಬಿಟ್ಟ ಜಾಗಗಳಿಗೆ ಬೆರಳಿನಿಂದ ಸಿಮೆಂಟನ್ನು ಲೇಪಿಸಿದ. ಈಗ ಚಿಮುಟದಿಂದ ಆಗಲೇ ಮಾಡಿಟ್ಟಿದ್ದ ಕಬ್ಬಿಣದ ವೈರುಗಳ ಚಿಕ್ಕ ಚಿಕ್ಕ ತುಂಡುಗಳನ್ನು ಎತ್ತಿ ಹೂಜಿಯೊಳಗಡೆ ತೂರಿಸಿದ.

ಸಹಾಯಕ್ಕೆಂದು ನಿಂತಿದ್ದ ಕೆಲಸದಾಳು, “ಒಳಗಿನಿಂದ ತೂರಿಸುತ್ತೀಯಾ?” ಎಂದು ಕೇಳಿದ. ಅದಕ್ಕೆ ಆತ ಉತ್ತರಿಸಲಿಲ್ಲ. ಈಗಷ್ಟೇ ತಾನು ಮಾಡಿದ ಹಾಗೆ ಚಿಕ್ಕತುಂಡನ್ನು ಹೂಜಿಗೆ ಅಂಟಿಸಲು ಬರೇ ಸನ್ನೆ ಮೂಲಕವೇ ಹೇಳಿ ತಾನು ಮಾತ್ರ ಒಳಗೇ ಉಳಿದ.

ಮೊಳೆಗಳನ್ನು ಜೋಡಿಸುವ ಮುನ್ನ: “ಎಳೆ… ನಿನ್ನ ಶಕ್ತಿಯೆಲ್ಲ ಹಾಕಿ ಎಳೆದುಬಿಡು! ಪುನಃ ಕಳಚದ ಹಾಗೆ ನೋಡಿಕೋ! ಧಪ್ಪೆಂದು ಗಟ್ಟಿ ಹೊಡೆದುಬಿಡು…. ಆ ಶಬ್ದ ನನಗಿಲ್ಲಿ ಒಳಗಡೆ ಕೂತವನಿಗೂ ಕೇಳಿಸಬೇಕು…. ಹೋಗೂ ನಿನ್ನ ಧಣಿಗೆ ತಿಳಿಸು.” ಎಂದು ಆಳಿಗೆ ಆಜ್ಞಾಪಿಸಿದ.

‘ಸರಿ… ಈಗ ರಿವೆಟ್ಗಳನ್ನು ಒಂದೊಂದಾಗಿ ಹಾಕು’ ಎಂದು ಆಳು ನಿಟ್ಟುಸಿರಿದ.

ಡಿಮಾ ಅಂಕಲ್, ತಾಕಿಯೇ ಇದ್ದ ಎರಡು ತೂತುಗಳಿಂದ ಕಬ್ಬಿಣದ ವೈರುಗಳನ್ನು ತೂರಿಸುತ್ತ, ಆಚೆಯಿಂದ ಚಿಮುಟದಿಂದ ಎರಡೂ ತುದಿಗಳನ್ನು ತಿರುಚಿಬಿಟ್ಟ. ಎಲ್ಲ ವೃರುಗಳನ್ನು ಒಂದೊಂದಾಗಿ ತೂರಿಸಲು ಸುಮಾರು ಒಂದುಗಂಟೆ ಬೇಕಾಯಿತು. ಹೂಜಿಯೊಳಗಡೆ ಕೂತಿದ್ದ ಡಿಮಾ ಬೆವರಿನಿಂದ ತೊಯ್ದು ತೊಪ್ಪೆಯಾಗಿದ್ದ. ಕೆಲಸ ಸಾಗುತ್ತ ಇರುವಾಗ ತನ್ನ ನಸೀಬನ್ನು ಸುಮ್ಮನೆ ಬಯ್ದು ಕೊಳ್ಳುತ್ತಿದ್ದ. ಅತ್ತ ಹೊರಗಡೆ ಆಳು ಅವನನ್ನು ಸಂತೈಸುತ್ತಿದ್ದ.

ಕೊನೆಗೆ, ಎಲ್ಲ ಮುಗಿದ ನಂತರ, “ನಂಗೀಗ ಹೊರಬರಲು ಸಹಾಯ ಮಾಡು ಮಾರಾಯಾ” ಎಂದ.

ಆದರೆ, ಆ ಹೂಜಿಯ ಹೊಟ್ಟೆ ಯ ಭಾಗ ಎಷ್ಟು ಅಗಲವಾಗಿತೋ ಅದರ ಕುತ್ತಿಗೆಯ ಭಾಗ ಅಷ್ಟೇ ಇಕ್ಕಟಾಗಿತ್ತು. ಈ ಮೊದಲು ಕೆಲಸದಾಳಿಗೆ ಉಂಟಾಗಿದ್ದ ಅಳುಕು ಮಾತ್ರ ಈಗ ನಿಜವಾಯಿತು! ಸಿಟ್ಟಿನ ಭರದಲ್ಲಿ ಡಿಮಾ ಅಂಕಲ್ ಇದಕ್ಕೆ ಗಮನವನ್ನೇ ಕೊಟ್ಟಿರಲಿಲ್ಲ. ಈಗ ಎಷ್ಟು ಸರ್ಕಸ್ ಮಾಡಿದರೂ ಹೊರಬರಲಾಗಲಿಲ್ಲ. ಅತ್ತ, ಆ ಕೆಲಸದಾಳು ಸಹಾಯ ಮಾಡುವುದನ್ನು ಹೊಟ್ಟೆ ಹುಣ್ಣಗುವಂತೆ ನಗತೊಡಗಿದ. ತಾನೇ ರಿಪೇರಿ ಮಾಡಿದ ಹೂಜಿಯೊಳಗೇ ಬಂಧಿಯಾಗಿಬಿಟ್ಟ ಆತನನ್ನು ಹೊರತೆಗೆಯಲು ಈಗ ಅದನ್ನು ಒಡೆಯದೆ ಬೇರೆ ದಾರಿಯೇ ಇರಲಿಲ್ಲ.

ಆಳುಗಳ ಕೇಕೆ, ನಗು ಕೇಳಿ ಜಮೀನ್ದಾರ ಲೊಲ್ಲೋ ಓಡಿಬಂದ. ಹುಚ್ಚು ಹಿಡಿದ ಬೆಕ್ಕಿನ ಹಾಗೆ, ಅಂಕಲ್ ಡಿಮಾ ಹೂಜಿಯೊಳಗಡೆ, “ನನ್ನನ್ನು ಹೊರತೆಗೆಯಿರಿ…. ನನಗೆ ಹೊರಬರಬೇಕು ಸಹಾಯಮಾಡಿ ದಯವಿಟ್ಟು ನನ್ನ ಹೊರತೆಗೆಯಿರಿ….” ಎಂದು ಗೋಳಿಡುತ್ತಿದ್ದ.

ಇದನ್ನೆಲ್ಲ ಒಮ್ಮೆಗೇ ನೋಡಿ ದಿಗ್ಭ್ರಮೆಗೊಂಡ ಲೊಲ್ಲೋಗೆ ನಂಬಲೇ ಆಗಲಿಲ್ಲ. ಆದರೆ ಇದೆಲ್ಲ ಹೇಗಾಯಿತು? ಒಳಗೆ ಸಿಕ್ಕಿ ಬಿದ್ದಿದ್ದು ಹೇಗೆ? ತನ್ನನ್ನೇ ಬಂದಿ ಮಾಡಿಕೊಂಡು ಬಿಟ್ಟನೆ?

ಆತ, ಹೂಜಿಯ ಹತ್ತಿರ ಹೋಗಿ, ಒಳಗಿಣಿಕಿ ಮುದುಕ ಡಿಮಾನಿಗೆ ಹಿಗ್ಗಾ ಮುಗ್ಗಾ ಬಯ್ಯತೊಡಗಿದ: “ಸಹಾಯ ಮಾಡಬೇಕಾ? ನಿಂಗೆ ನಾವು ಸಹಾಯ ಮಾಡುವುದಾದರೂ ಹೇಗೆ ಮಾರಾಯಾ? ಕೆಲಸ ಶುರುಮಾಡುವ ಮೊದಲೇ ಹೂಜಿಯ ಅಳತೆ ತೆಗೆದುಕೊಳ್ಳಬೇಕು ಅಂತ ಗೊತ್ತಿರಲಿಲ್ವಾ ನಿಂಗೆ…. ಮೂರ್ಖ ಬಡ್ಡಿಮಗನೆ? ಮೆಲ್ಲಮೆಲ್ಲ ಬಾ…. ಕೈ ಕೊಡಿಲ್ಲಿ…. ನೋಡುವಾ….. ಎಂಥ ಕೆಲಸ ಮಾಡಿಕೊಂಡೆ ಮಾರಾಯಾ? ಈಗ ಆ ಹೂಜಿಯನ್ನು ಏನು ಮಾಡುವುದು? ಸ್ವಲ್ಪ ಸಮಾಧಾನದಿಂದಿರು….” ಎಂದು ತಾಳ್ಮೆ ಕಳಕೊಳ್ಳುತ್ತಿರುವುದು ತಾನಲ್ಲ, ಯಾರೋ ಬೇರೆಯವರು ಎಂಬಂತೆ ಲೊಲ್ಲೋ ಆಸುಪಾಸಿದ್ದವರಿಗೆಲ್ಲ ಸಲಹೆ ಕೊಡಲು ಪ್ರಾರಂಭಿಸಿದ.

ಲೊಲ್ಲೋ ಬೆರಳಿನ ಗೆಣ್ಣುಗಳಿಂದ ಹೂಜಿಯನ್ನು ಟಪಟಪನೆ ತಟ್ಟಿದ. ಅದು ನಿಜವಾಗಿಯೂ ಗಂಟೆಯಂತೆ ಮೊಳಗಿತು.

“ವ್ಹಾರೆವ್ಹಾ…. ಹೊಚ್ಚ ಹೊಸದಾಗಿ ಮಾಡಿದೆಯಲ್ಲ…. ತುಸು ತಡೆ ಮಾರಾಯಾ” ಎಂದು ಒಳಗಡೆ ಬಂಧಿಯಾದವನಿಗೆ ಹೇಳಿದ ಆತ, “ಹೋಗಿ ನನ್ನ ಹೇಸರಗತ್ತೆ ಯನ್ನು ತಾ” ಎಂದು ಆಳಿಗೆ ಆಜ್ಞಾಪಿಸಿದ. ಬೆರಳಿನಿಂದ ಹಣೆ ಕೆರೆದುಕೊಳ್ಳುತ್ತ, “‌ಇದು ಬರೇ ಹೂಜಿಯಲ್ಲ…. ಯಾವುದೋ ಭೂತದ ಸಂಚು ಇದು” ಎಂದ.

ಹೂಜಿಯ ಹತ್ತಿರ ಹೋಗಿ, ಪ್ರಾಣ ಸಿಕ್ಕಿಬಿದ್ದಂತೆ ಒಳಗಡೆ ಚಡಪಡಿಸುತ್ತಿದ್ದ ಅಂಕಲ್ ಡಿಮಾನನುದ್ದೇಶಿಸಿ; “ಅಂತೂ ಒಂದು ಕೇಸು ಸಿಕ್ಕಿಬಿಡ್ತು ಮಾರಾಯಾ… ಇದನ್ನು ಪರಿಹರಿಸಲು ನನಗೆ ವಕೀಲನೇ ಬೇಕು…. ತುಸು ತಾಳ್ಮೆಯಿಂದಿರು…. ಈಗ್ಲೇ ಹೋಗಿ ಬರ್ತೇನೆ…. ಇದೆಲ್ಲ ನಿನ್ನ ಒಳ್ಳೆಯದಕ್ಕೇ ಮಾರಾಯ? ಸುಮ್ಮನೆ ಅಲುಗಾಡದೆ ಒಳಗೇ ಶಾಂತವಾಗಿರು ಆಯಿತಾ? ನಿನ್ನ ಕೆಲಸಕ್ಕೆ ಖಂಡಿತಾ ಹಣ ಕೊಡ್ತೇನೆ…. ಮೂರು ಲೈರ್ ಸಾಕಲ್ಲ?” ಎಂದು ಕೇಳಿದ.

“ನಿನ್ನ ಚಿಕ್ಕಾಸೂ ಬೇಡ…. ಮೊದಲು ನನ್ನನ್ನ ಹೊರತೆಗೆ!”

“ಆಯ್ತು…. ನೀನು ಹೊರಗೆ ಬಂದೇ ಬರುತ್ತೀ…. ಆದರೆ ನಾನು ಕೆಲಸದ ಮಜೂರಿಯನ್ನು ಕೊಡಬೇಕಲ್ವಾ…. ಇಲ್ಲಿದೆ ನೋಡು ಮೂರು ಲೈರ್ ಎಂದು ತನ್ನ ಪಾಕೀಟಿನಿಂದ ನೋಟನ್ನೆಳೆದು ಹೂಜಿಯೊಳಗೆ ಎಸೆದ.

ನಂತರ ಕಳವಳಿಸುತ್ತ, “ನಿನ್ನ ಊಟ ಆಗಿದೆಯಾ? ಒಳಗೇ ಕೂತು ಊಟ ಮಾಡ್ತೀಯೋ ಹೇಗೆ? ನಿನಗೇನೂ ಬೇಡ ಅಂತಿದ್ದರೆ ನಾಯಿಗೆ ಎಸೆಯುತ್ತೇನೆ. ನನ್ನ ಮಟ್ಟಿಗೆ ನಿನಗೆ ಊಟ ಹಾಕಿದ್ದೇನೆ ಎಂದಾದರೆ ಸಾಕು.”

ಅವನಿಗೆ ಚೂರುಪಾರು ಊಟ ಹಾಕಲು ಆಳುಗಳಿಗೆ ಆಜ್ಞಾಪಿಸಿ, ಹೇಸರಗತ್ತೆಯನ್ನು ಹತ್ತಿದವನೇ ಪೇಟೆಕಡೆ ಹೋಗಿಬಿಟ್ಟ. ಆತ ತನ್ನೊಂದಿಗೇ ಮಾತಾಡಿಕೊಳ್ಳುತ್ತಿದ್ದ ರೀತಿ, ಅವನ ವಿಚಿತ್ರ ಹಾವಭಾವಗಳನ್ನು ನೋಡಿದವರೆಲ್ಲ ಆತ ಒಂದು ದಿನ ಹುಚ್ಚಾಸ್ಪತ್ರೆ ಸೇರುವುದು ಗ್ಯಾರಂಟಿ ಎಂದು ಹೇಳುತ್ತಿದ್ದರು.

ಅದೃಷ್ಟವಶಾತ್, ಅವನಿಗೆ ವಕೀಲನ ಕಛೇರಿಯಲ್ಲಿ ಅವನಿಗಾಗಿ ಜಾಸ್ತಿಹೊತ್ತು ಕಾಯುತ್ತ ಕೂರುವ ಅಗತ್ಯಬೀಳಲಿಲ್ಲ. ನಡೆದ ಸಂಗತಿ ವಿವರಿಸತೊಡಗಿದ್ದೇ ವಕೀಲ ಗಹಗಹಿಸಿ ನಗತೊಡಗಿದ. ಹಾಗಾಗಿ, ಅವನ ನಗು ನಿಲ್ಲುವ ತನಕ ಮಾತ್ರ ಕಾಯಬೇಕಾಗಿ ಬಂತು. ಇದು ಲೊಲ್ಲೋನನ್ನು ರೇಗಿಸಿತು.

“ಅದರಲ್ಲಿ ನಗುವಂಥದ್ದೇನಿದೆ? ನಿನಗೇನೂ ನಷ್ಪವಿಲ್ಲ. ಆ ಹೂಜಿ ನಂದು ತಿಳಿಯಿತಾ?”

ಆದರೆ, ವಕೀಲ ಮಾತ್ರ ನಗುವುದನ್ನು ಮುಂದುವರೆಸುತ್ತ, ಪುನಃ ಇಡೀ ಕತೆಯನ್ನು ಮತ್ತೆ ಮತ್ತೆ ಹೇಳುವಂತೆ ವಿನಂತಿಸುತ್ತ, ಈ ಮೂಲಕ ಮತ್ತಷ್ಟು ನಗಬಹುದೆಂಬ ಯೋಚನೆಯಲ್ಲಿ, “ಒಳಗಡೆ ಹಹ್ಹಹ್ಹಾ! ತನಗೆ ತಾನೇ ಮೊಳೆ ಹೊಡಕೊಂಡು ಬಂದಿಯಾಗಿಬಿಟ್ಟನೆ!” ಎನ್ನುತ್ತಿದ್ದ.

“ನಾನೀಗ ಆ ಹೂಜಿಯನ್ನು ಕಳಕೊಳ್ಳಬೇಕಾ? ಅಯ್ಯೋ…. ಹೊಜಿಯೂ ಹೋಗುವುದಲ್ಲದೆ ನನ್ನ ಮರ್ಯಾದೆ ಕೂಡ?” ಎಂದು ಮುಷ್ಟಿಬಿಗಿದುಕೊಳ್ಳುತ್ತ ಲೊಲ್ಲೋ ಕೇಳಿದ.

ಇದಕ್ಕೇನಂತಾರೆ…. ಗೊತ್ತಾ? ‘ನ್ಯಾಯಬಾಹಿರ ಬಂಧನ’ ಎನ್ನುತ್ತಾರೆ’ ಎಂದ ವಕೀಲ.

“ಬಂಧನವೇ? ಯಾರವನನ್ನು ಬಂಧಿಸಿದ್ದು? ಅವನೇ ಬಂದಿಯಾಗಿದ್ದು ಮಾರಾಯ್ರೇ…. ನನಗೇಕೆ ಈ ಅಪವಾದ?”

ವಕೀಲ ವಿವರಿಸಿದ: ಇಲ್ಲಿ ಎರಡು ಕೇಸುಗಳಿವೆ. ಒಂದನೆಯದಾಗಿ, “ನ್ಯಾಯಬಾಹಿರ ಬಂಧನ”ದ ಆಪಾದನೆಯಿಂದ ಪಾರಾಗಬೇಕೆಂದಿದ್ದರೆ ಲೊಲ್ಲೋ ಈಗ ಬಂಧಿಸಲ್ಪಟ್ಟವನನ್ನು ಬಿಟ್ಟುಬಿಡಬೇಕು. ಇಲ್ಲವೆ, ಇನ್ನೊಂದು ಉಪಾಯವೆಂದರೆ, ತನ್ನ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದಿಂದಾಗಿ ಉಂಟಾದ ಹಾನಿಗೆ ಬಂದಿಯಾದವನೇ ಉತ್ತರಿಸಬೇಕು.

“ಹಾಂ…. ಹೌದೌದು…. ನನಗೆ ಹೂಜಿಯ ಹಣಕೊಟ್ಟು ಇದನ್ನು ಪರಿಹರಿಸಬಹುದು.”

“ಇಷ್ಟೊಂದು ಆತುರ ಪಡಬೇಡ…. ಅದು ಹೊಸ ಹೂಜಿಯೇನೂ ಅಲ್ಲ….. ನೆನಪಿರಲಿ.”

“ಯಾಕೆ?”

“ಯಾಕೆಂದರೆ ಅದು ಒಡೆದುಹೋಗಿತ್ತಲ್ಲವೆ?”

“ಇಲ್ಲ ಸರ್…. ಅದೀಗ ಇಡಿಯಾಗಿದೆ. ಮೊದಲಿಗಿಂತ ಗಟ್ಟಿ ಮುಟ್ಟಾಗಿದೆ. ನಾನದನ್ನು ಈಗ ಪುನಃ ಒಡೆದರೆ ಅದನ್ನು ಮತ್ತೆ ರಿಪೇರಿ ಮಾಡಲು ಸಾಧ್ಯವೇ ಇಲ್ಲ” ಎಂದ ಜಿರಾಫಾ.

ಈ ವಿಷಯವನ್ನು ಗಣನೆಗೆ ತೆಗೆದುಕೊಳ್ಳಬಹುದು ಎಂದು ವಕೀಲ ಆಶ್ವಾಸನೆ ಕೊಡುತ್ತ, ಸದ್ಯದ ಸ್ಥಿತಿಯಲ್ಲಿ ಹೂಜಿಯ ಬೆಲೆ ಎಷ್ಟೋ ಅಷ್ಟನ್ನು ಕೊಟ್ಟುಬಿಡಬೇಕೆಂದು ಒತ್ತಾಯಿಸಿದರಾಯಿತು ಎಂದ.

‘ತುಂಬಾ ಥ್ಯಾಂಕ್ಸ್’ ಎನ್ನುತ್ತ ಜಮೀನ್ದಾರ ಲೊಲ್ಲೋ ಜಾಗ ಖಾಲಿಮಾಡಿದ.

ಸಂಜೆ ಹಳ್ಳಿಗೆ ವಾಪಾಸಾದವನಿಗೆ, ಆಳುಗಳೆಲ್ಲ ಕೇಕೆಹಾಕುತ್ತ ಹೂಜಿಯ ಸುತ್ತ ಜಮಾಯಿಸಿರುವುದು ಕಂಡಿತು…. ಕಾವಲು ಕಾಯುವ ನಾಯಿ ಕೂಡಾ ಆನಂದಿಸುತ್ತಿತ್ತು. ಅಂಕಲ್ ಡಿಮಾ ಈಗ ಶಾಂತನಾಗಿದ್ದನಲ್ಲದೆ, ಹೂಜಿಯೊಳಗಡೆ ಕೂತು ತನ್ನ ಈ ವಿಚಿತ್ರ ಸಾಹಸ ನೆನೆದು ನಗುತ್ತಿದ್ದ.

ಜಿರಾಫಾ ಎಲ್ಲರನ್ನೂ ಬದಿಗೆ ಸರಿಸುತ್ತ ಹೂಜಿಯೊಳಗೆ ಇಣಿಕಿದ.

‘ಆರಾಮಾಗಿದ್ದೀಯಲ್ಲ?’

“ಓಹ್…. ಹೌದು ಆರಾಮಾಗಿದ್ದೇನೆ….. ತಣ್ಣಗಿದೆ.”

“ಸರಿ…. ಕೇಳಿ ಖುಷಿಯಾಯಿತು…. ವಿಷಯ ಏನೆಂದರೆ ಈ ಹೂಜಿಯ ಬೆಲೆ ಈಗ ನಾಲ್ಕು ಓಂಜೆ ಆಗ್ತದೆ…. ನಿನ್ನ ಪ್ರಕಾರ ಎಷ್ಟಾಗಬಹುದು?”

“ನನ್ನನ್ನೂ ಸೇರಿಸಿಯೇ?” ಕೇಳಿದ ಡಿಮಾ ಅಂಕಲ್.

ಮಂದಿ ಭೋರ್ಗರೆಯಿತು.

“ಶ್… ಸುಮ್ಮನಿರಿ….” ಕೂಗಿದ ಜಿರಾಫಾ.

“ನಿನ್ನ ಸಿಮೆಂಟು ಕೆಲಸ ಮಾಡುತ್ತೋ ಇಲ್ಲವೋ ಗೊತ್ತಿಲ್ಲ…. ಕೆಲಸ ಮಾಡದಿದ್ದಲ್ಲಿ ನೀನೊಬ್ಬ ವಂಚಕ ಎಂದರ್ಥ. ಕೆಲಸ ಮಾಡಿದಲ್ಲಿ ಈ ಹೂಜಿಗೆ ಒಂದು ಬೆಲೆ ಅಂತ ಇರುತ್ತಲ್ಲ…. ಎಷ್ಟಾಗಬಹುದು? ನೀನೇ ಹೇಳಿಬಿಡು” ಎಂದ.

ಅಂಕಲ್ ಡಿಮಾ ತುಸು ತಡೆದು ನಂತರ ಹೇಳಿದ:

“ಸರಿ ಹೇಳುತ್ತೇನೆ ಕೇಳು…. ನೀನು ನನಗೆ ಸರಿಕಂಡ ಹಾಗೇ ಬರೇ ಸಿಮೆಂಟಿನಿಂದ ಜೋಡಿಸಲು ಬಿಟ್ಟಿದ್ದೇ ಆದಲ್ಲಿ ನಾನಿಲ್ಲಿ ಒಳಗಡೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಅಲ್ಲದೆ, ಈ ಹೊಜಿಗೂ ಮೊದಲಿನಷ್ಟೇ ಬೆಲೆಯೂ ಇರುತ್ತಿತ್ತು. ಆದರೆ ಈ ಸುಡುಗಾಡು ಮೊಳೆಗಳಿಂದಾಗಿಯೇ ನಾನು ಹೂಜಿಯೊಳಗೆ ಕೂತು ರಿಪೇರಿ ಮಾಡಬೇಕಾಯಿತು. ಈಗ ಇದಕ್ಕೆಂಥಾ ಬೆಲೆ? ಹೆಚ್ಚೂಕಮ್ಮಿ ಮೂಲಬೆಲೆಯ ಮೂರನೇ ಭಾಗ ಇರಬಹುದು” ಎಂದ.

“ಮೂರನೇ ಒಂದು ಭಾಗ ಅಂತೀಯಾ ಮಗನೆ?”

“ಬಹುಶಃ ಇನ್ನೂ ಕಮ್ಮಿ…. ಜಾಸ್ತಿಯಂತೂ ಖಂಡಿತಾ ಇಲ್ಲ.”

‘ಸರಿ ಹಾಗಾದರೆ…. ನೀನೇ ಹೇಳಿದ ಹಾಗೆಯೇ ಆಗಲಿ. ನನಗೀಗ ಹದಿನೇಳು ಲೈರು ಕೊಟ್ಟುಬಿಡು” ಎಂದ ಲೊಲ್ಲೋ.

“ಏನೂ?” ಎಂದು ಕೇಳಿದ ಅಂಕಲ್ ಡಿಮಾ – ಅರ್ಥವಾಗದವನಂತೆ.

“ಹೂಜಿ ಒಡೆದು ನಿನ್ನನ್ನು ಹೊರತೆಗೆಯುತ್ತೇನೆ. ವಕೀಲ ಹೇಳಿದಂತೆ ಇದರ ಬೆಲೆ ಎಷ್ಟೋ-ಅಂದರೆ ಒಂದು ಓಂಜೆ – ಅಷ್ಟನ್ನು ಕೊಟ್ಟುಬಿಡು.” ಎಂದ.

“ನಾನು ಕೊಡಬೇಕಾ? ತಮಾಷೆ ಮಾಡ್ತಾ ಇದ್ದೀರಾ? ನಾನು ಇಲ್ಲೇ ಇರ್ತೇನೆ ಬೇಕಾದರೆ ಎಂದ ವ್ಯಂಗ್ಯವಾಗಿ.

ಇಷ್ಟು ಹೇಳಿದವನೇ, ಬಹಳ ಕಷ್ಟಪಟ್ಟು ತನ್ನ ಪುಟ್ಟ ಸಿಗಾರ್ ಪೈಪನ್ನು ಕಿಸೆಯಿಂದ ಹೊರತೆಗೆದು, ಹತ್ತಿಸಿ ಸೇದತೊಡಗಿದ. ಹೂಜಿಯ ಕುತ್ತಿಗೆಯಿಂದ ಹೊಗೆ ಹೊರಬರತೊಡಗಿತು.

ಜಮೀನ್ದಾರ ಲೊಲ್ಲೋ ಮೌನಿಯಾಗಿಬಿಟ್ಟ. ಅಂಕಲ್ ಡಿಮಾ ಹೂಜಿಯಿಂದ ಹೊರಬರಲು ಒಪ್ಪದೇ ಇರುವ ಈ ಹೊಸ ಸಾಧ್ಯತೆಯನ್ನು ಅವನಾಗಲೀ, ವಕೀಲನಾಗಲೀ ನಿರೀಕ್ಷಿಸಿರಲಿಲ್ಲ. ಈಗ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆಂದು ಮಾತ್ರ ಗೊತ್ತಾಗಲಿಲ್ಲ. ಇನ್ನೇನು ಮತ್ತೆ ಪುನಃ ‘ಹೇಸರಗತ್ತೆಯನ್ನು ತಾ’ ಎಂದು ಕೂಗಬೇಕು ಎನ್ನುವಷ್ಟರಲ್ಲಿ ಆಗಲೆ” ಸಂಜೆಯಾಗಿದ್ದರ ಅರಿವಾಗಿ ಸುಮ್ಮನಾದ.

“ಓಹೋ…. ಹಾಗಾ? ಹೂಜಿಯೊಳಗಡೆಯೇ ಉಳಿಯುತ್ತೇನೆ ಎಂದೆಯಾ? ನೀವೆಲ್ಲ ಸಾಕ್ಷಿದಾರರು ಇಲ್ಲಿದ್ದೀರಿ…. ನೋಡಿ ಹಣ ಕೊಡಬೇಕಾಗುತ್ತದೆ ಅಂತ ಅವನು ಹೊರಬರುವುದಿಲ್ಲವಂತೆ. ನಾನೀಗ ಅದನ್ನು ಒಡೆಯಲು ತಯಾರಾಗಿದ್ದೇನೆ. ನನಗೂ ಆ ಹೂಜಿಯನ್ನು ಉಪಯೋಗಿಸಲು ಬಿಡುತ್ತಿಲ್ಲ ಬಡ್ಡೀಮಗ. ಆದರೆ ನಾಳೆಯೇ ನನಗುಂಟಾದ ಹಾನಿಗೆಗ್ ಅವನಿಗೊಂದು ಸಮನ್ಸ್ ಜಾರಿಮಾಡಿಬಿಡ್ತೇನೆ” ಎಂದಬ್ಬರಿಸಿದ.

ಯಾವುದಕ್ಕೂ ಪ್ರೌತಿಕ್ರಿಯಿಸುವ ಮುನ್ನ ಅಂಕಲ್ ಡಿಮಾ, ಬಾಯ್ತುಂಬ ಹೊಗೆಯುಗುಳಿದ. ನಂತರ ತಣ್ಣಗೆ ಹೇಳಿದ: “ಹಾಗಲ್ಲ ಧಣಿಗಳೇ. ನಾನಿಲ್ಲಿ ನನ್ನ ಸಂತೋಷಕ್ಕಾಗಿ ಇದ್ದೇನೆಯೆ? ನೀವು ಏನು ನಿರ್ಧರಿಸಿದರೂ ನಾನದನ್ನು ತಡೆಯುವುದಿಲ್ಲ. ಹಾಗಂತ, ನಿಮಗೆ ಒಂದು ಚಿಕ್ಕಾಸನ್ನೂ ನಾನು ಕೊಡುವವನಲ್ಲ. ಅಂಥ ಮಾತುಗಳನ್ನು ತಮಾಷೆಯಾಗಿಯೂ ಆಡಬೇಡಿ. ಆದರೆ ಮೊದಲು ನನ್ನನ್ನು ಇಲ್ಲಿಂದ ಹೊರತೆಗೆಯಿರಿ.

ಸಿಟ್ಬು ನೆತ್ತಿಗೇರಿ ಜಮೀನ್ದಾರ ಲೊಲ್ಲೋ ಹೊಜಿಗೊಂದು ಒದ್ದುಬಿಡಬೇಕೆಂದು ಕಾಲನ್ನೆತ್ತಿದವನು ನಂತರ ಹಠಾತ್ತನೆ ಸುಮ್ಮನಾಗಿ ಅದನ್ನು ಎರಡೂ ಕೈಗಳಿಂದ ಹಿಡಿದು ಗಲಗಲ ಅಲುಗಾಡಿಸುತ್ತ, ಒಳಗಿದ್ದ ಮುದುಕನತ್ತ ಕೂಗತೊಡಗಿದ:

“ಬೋಳಿಮಗನೆ….. ಹಾನಿಯುಂಟುಮಾಡಿದ್ದು ಯಾರು? ನಾನೋ, ನೀನೋ? ನಷ್ಟ ಆಗ್ತಾ ಇರುವುದು ನನಗೆ. ಗೊತ್ತಾ? ಒಳಗೇ ಹಸಿವಿನಿಂದ ಸಾಯಿ…. ನೋಡುತ್ತೇನೆ ಯಾರು ಗೆಲ್ಲುತ್ತಾರೆ ಅಂತ”

ಬೆಳಿಗ್ಗೆ ತಾನೇ ಹೂಜಿಯೊಳಗೆ ಬಿಸಾಕಿದ್ದ ಮೂರು ಲೈರ್ನ ಬಗ್ಗೆ ಯೋಚನೆಯೇ ಮಾಡದ ಆತ ಹೊರಟುಹೋದ. ಆ ದುಡ್ಡು ಅಂಕಲ್ ಡಿಮಾನಿಗೆ ಆಳುಗಳ ಜತೆ ಸೇರಿ ಸಂಜೆ ಪಾರ್ಟಿ ನಡೆಸಲು ಸಹಾಯಕಾರಿಯಾಯಿತು. ಇಂಥದೊಂದು ವಿಚಿತ್ರ ಘಟನೆಯನ್ನು ನೋಡಲೆಂದೇ ಹಳ್ಳಿಗರು ರಾತ್ರಿಯಿಡೀ ನೆರೆದಿದ್ದರು. ಅವರಲ್ಲೊಬ್ಬ ಸಾರಾಯಿ ಅಂಗಡಿಗೆ ಹೋಗಿ ಒಂದಿಷ್ಟು ಮದ್ಯ ಖರೀದಿ ಮಾಡಿಬಂದ. ರಾತ್ರಿ ಸರಿಯುತ್ತ ಹೋದ ಹಾಗೆ ಚಂದ್ರ ಹೊಳೆಯುತ್ತ ಸುತ್ತ ಬೆಳದಿಂಗಳನ್ನು ಚೆಲ್ಲಿದ. ನಡುವೊಮ್ಮೆ ಜಮೀನ್ದಾರ ಲೊಲ್ಲೋ ನಿದ್ದೆ ಹೋದವನು ಎಂಥದೋ ಗಲಾಟೆ ಕೇಳಿ ಎಚ್ಚರಾದ. ಫಾರ್ಮ್ ಹೌಸಿನ ಬಾಲ್ಕನಿಗೆ ಬಂದು ನೋಡಿದರೆ ಬೆಳದಿಂಗಳಲ್ಲಿ ಪಾನಮತ್ತರಾದ ಅವನ ಕೆಲಸದಾಳುಗಳು ಕೈಕೈ ಹಿಡಿದು ಹೂಜಿಯ ಸುತ್ತ ಕುಣಿಯುತ್ತಿದ್ದರು. ಅಂಕಲ್ ಡಿಮಾ ಗಂಟಲು ಹರಿಯುವಂತೆ ಹಾಡುತ್ತಿದ್ದ.

ಈ ಸಲ ಮಾತ್ರ ಲೊಲ್ಲೋನಿಗೆ ಸಹಿಸಲಾಗಲಿಲ್ಲ. ಹುಚ್ಚುಹಿಡಿದ ಗೂಳಿಯಂತೆ ನುಗ್ಗಿದ ಅವನನ್ನು ಅವರೆಲ್ಲರೂ ಸೇರಿ ತಡೆಯುವಷ್ಟರಲ್ಲಿ ಹೂಜಿಗೊಂದು ಒದೆಕೊಟ್ಟು ಬೆಟ್ಟದಿಂದ ಕೆಳನೂಕಿಬಿಟ್ಟ.

ಉರುಳಾಡುತ್ತ, ಪಾನಮತ್ತ ಆಳುಗಳ ಅಟ್ಟಹಾಸ, ಮುಗಿಲು ಮುಟ್ಟುವಾಗಲೇ ಆ ಹೂಜಿ ಆಲಿವ್ ಮರಕ್ಕೆ ಡಿಕ್ಕಿ ಹೊಡೆದು ಚೂರುಚೂರಾಗಿಹೋಯಿತು.

ಅಂತೂ ಅಂಕಲ್ ಡಿಮಾ ಗೆದ್ದೇಬಿಟ್ಟ.
*****
ಇಟಾಲಿಯನ್ ಮೂಲ: ಲುಯಿಗಿ ಪಿರಾಂಡೆಲ್ಲೋ
The Olive Jar

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ತ್ರೀ ರೋಧನೆ
Next post ಓ ಮಧುರ ಮಾರುನುಡಿ !

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys