ಅದೊಂದು ಮರ ಬೃಹದಾಕಾರ
ರೆಂಬೆ-ಕೊಂಬೆಗಳಿಂದ
ಸೊಂಪಾಗಿ,
ಬೇರುಗಳ ಜೊತೆ ಬೀಳಲುಗಳು
ನೆಲ ತಬ್ಬಿ,
ಎಲೆ ಕಾಯಿ ಹಣ್ಣು
ಸಮೃದ್ಧ ತುಳುಕಾಡಿ
ಆತಿಥ್ಯಕ್ಕೆ ಎತ್ತಿದ ಕೈ
ಆಶ್ರಯಿಸಿ ಬಂದರೆ
ಬುಡಕೆ ಆಧರಿಸಿ
ನೆರಳು ನೀಡುವುದು ಮುದದಿಂದ.
ಅದಕ್ಕೆ ಮರದ ಕೊಂಬೆಗಳಲ್ಲಿ
ಪೊಟರೆಗಳಲ್ಲಿ
ಚಿಲಿಪಿಲಿ, ಕಚಪಿಚ ಸರ್ವಕಾಲಕ್ಕೂ
ಆದರೆ,
ಮರದ ಬುಡದಿ ಬೆಳೆಯ ಹೊರಟರೆ
ಚಿಗುರು ಗಿಡವಾಗಿ
ಸಹಿಸಲಾಗದು ಅದಕ್ಕೆ
ಮಣ್ಣ ಸತ್ವವನ್ನೆಲ್ಲಾ
ತನ್ನ ಕಬಂಧ ಬಾಹುಗಳಲಿ
ಹೀರಿ ಬಿಟ್ಟುಬಿಡದೆ
ಪೀಚಲಾಗಿಸುವುದು
ಮರಿಗಿಡವ-ಮದದಿಂದ
ಅರಿಯಬೇಕಿದೆ ಈ ಒಳ ಮರ್ಮ
ದೊಡ್ಡ ದೊಡ್ಡ ಮರಗಳ ಧರ್ಮ.
*****