ರುಸ್ತುಂ! ರುಸ್ತುಂ!!

ರುಸ್ತುಂ! ರುಸ್ತುಂ!!

“ಆ ಹುಡುಗ ಎಂಥಾ ದುಷ್ಟ.. ಅವನಿಗೆ ಹರೆಯದ ಗಮಂಡು ಜಾಸ್ತಿ… ತಾಯಿ… ತಂದೆಗಳಿಗೂ ಯಾರ್ರಾಬಿರ್ರಿಯಾಗಿ ಬಯ್ಯುತ್ತಾನೆ.. ಕೈಗೆ ಸಿಕ್ಕ ವಸ್ತುಗಳನ್ನು ಸಿಕ್ಕವರ ಮೇಲೆ ಬೀಸಿ ಒಗೆಯುತ್ತಾನೆ… ಅಕ್ಕ ತಂಗಿಯರಿಗೂ ಹೊಡೆಯುತ್ತಾನೆ. ಅವನ ಹಾವಳಿಗೆ ಮನೆಯ ಒಂದೂ ವಸ್ತು ಉಳಿಯಲಾರದು…. ಅಯ್ಯಯ್ಯೋ… ಹುಡುಗ ಕೆಟ್ಟೇ ಹೋದ… ಅವನ ಗೆಳೆಯರು ಕೂಡಾ ಉಡಾಳ ಠಪ್ಪೂಗಳು. ಮೊನ್ನೆ ಕಾಲೇಜ ಸ್ಟ್ರಾಯಿಕ್‌ನಲ್ಲಿ ಬಸ್ಸಿಗೆ ಕಲ್ಲುಹೊಡೆದು ಕಾಜು ಒಡೆದವ ಇವನೇ…. ಇವನೇ… ನಾವು ನಮ್ಮ ವಯಸ್ಸಿನಲ್ಲಿ ಎಂಥಾ ಚೊಲೊ ಇದ್ವಿ… ಇದೇನು ಬಂತಪ್ಪಾ ಕೆಟ್ಟ ಕಾಲಾ!”

ಇಂಥ ಮಾತುಗಳನ್ನು ಹೆಚ್ಚುಕಡಿಮೆ ಬಹುತೇಕ ಮನೆಗಳಲ್ಲಿ ಆಗಾಗ ಕೇಳುತ್ತೇವೆ, ನೋಡುತ್ತೇವೆ. ಈ ಯೌವನಿಗರ ಮಾನಸಿಕ ಅಶಾಂತಿ ಅಸಂತೋಷ ದುಷ್ಪ್ರೇರಣೆಗಳಿಗೆ ಮೂಲ ಕಾರಣ ಏನು ಎಂದು ಮಾತ್ರ ನಾವು ಈವರೆಗೂ ಆಲೋಚಿಸಿಯೇ ಇಲ್ಲ!

ನಾವು ಕೂಡ… ಹಸಿದು ಬಂದು ಬಿಸಿ ಬಿಸಿಯ ಹೋಳಿಗೆ ತುಪ್ಪದ ತುತ್ತು ಬಾಯಲ್ಲಿ ಇಟ್ಟುಕೊಳ್ಳುವ ಕ್ಷಣದಲ್ಲೇ… ನಮ್ಮ ತುತ್ತು ಯಾರಾದರೂ ಗಬಕ್ಕನ ಕಸಿದುಕೊಂಡರೆ ಎಷ್ಟು ಸಿಟ್ಟಾಗುತ್ತೇವೆ! ಅವರನ್ನೇ ತಿಂದುಹಾಕುವಂತೆ ಕೆಂಗಣ್ಣು ಕಾರುತ್ತೇವೆ!

ಈ ಮಾತು ಯುವಕರ ಬದುಕಿಗೂ ಅಷ್ಟೇ ಸತ್ಯ. ಅವರ ಮಾನಸಿಕ ಸ್ಥಿತಿ ಸ್ತಿಮಿತ ಸಂಯಮಗಳ ವೈಫಲ್ಯಕ್ಕೆ ಕೆಲವು ಸಲ ನಾವೂ… ಇನ್ನು ಕೆಲಸಲ ಈ ಅನಾರೋಗ್ಯಕರ ಪೈಪೋಟಿಯ ಪರಿಸರವೂ… ಕಾರಣವಾಗುತ್ತವೆ… ಶತದಡ್ಡರೆಂಬವರು ಕೆಲವರು ಏರಕಂಡೀಶನ್ಡ್ ಕಾರಿನಲ್ಲಿ ಹೋಗುತ್ತಾರೆ. ಅಧಿಕಾರದ ಗದ್ದುಗೆ ಅಲಂಕರಿಸುತ್ತಾರೆ, ಉತ್ತಮೋತ್ತಮ ಅವಕಾಶಗಳನ್ನು ಕಿತ್ತು ಕೊಳ್ಳುತ್ತಾರೆ. ಅದೆಷ್ಟೋ ಸಮರ್ಥರಾದ ಡಿಗ್ರಿ ಹೋಲ್ಡರುಗಳಾದ ಯುವಕರು ಹೊಟ್ಟೆ ಪಾಡಿಗೆ ಕೂಲಿ ಕುಂಬಳಿ ಗಾರೆ ಕೆಲಸಕ್ಕೂ ಹೋಗಬೇಕಾಗುತ್ತದೆ. ನಾವು ನಿರ್ಮಿಸಿದ ಸಾಮಾಜಿಕ ಚೌಕಟ್ಟು, ಶೈಕ್ಷಣಿಕ ಮಾನದಂಡ, ಅರ್ಹತೆಯ ಅವಕಾಶದಲ್ಲಿ ಅನರ್ಹರು, ಅವಿವೇಕಿಗಳು, ಪೈಸವಾಲಾಗಳು, ಪ್ರಭಾವಿಗಳು, ಕೆಲಸಲ ಜಾತೀಯ ಮುಖಂಡರು ಖೀರು ಪುರಿ ಉಣ್ಣುವ ಟೇಬಲ್ಲಿಗೆ ಹೋಗುತ್ತಾರೆ. ಇಂಥ ಸಾಮಾಜಿಕ ಅವ್ಯವಸ್ಥೆ, ಅನಾಸ್ಥೆ. ಶೋಷಣೆಗಳು ನಮ್ಮ ಯುವಜನಾಂಗದ ಮಾನಸಿಕ ಆರೋಗ್ಯಕ್ಕೆ ಮಾಯಲಾರದ ಘಾಯ ಮಾಡಿದಾಗ, ಅವರಲ್ಲಿ ತಾವು ತಳಭ್ರಷ್ಟರಾದ ಅತಂತ್ರ ಅವಸ್ಥೆಯ ನೋವಿನ ಅನುಭವ ಇಂದು ಕಾಡಿದಾಗ, ಅವರಲ್ಲಿ ಲಾವಾರಸದಂತೆ ಕತಕತ ಕುದಿಯುವ ಆವೇಶದ ಆಗ್ನಿಜ್ವಾಲೆ ಉಲ್ಬಣವಾಗುತ್ತದೆ. ಅಂಥವರು ತಮ್ಮೊಳಗಿನ ತಾಪದಿಂದ ತಪ್ತರಾಗಿ ತಂದೆ ತಾಯಿಗಳ ಮೇಲೂ ರೇಗಾಡುತ್ತಾರೆ. ಕಂಡವರ ಮೇಲೂ ಹರಿಹಾಯುತ್ತಾರೆ. ಇಲ್ಲವೆ ಸುಂದರ ಬಸ್ಸುಗಳಿಗೂ ಕಲ್ಲು ಹಚ್ಚುತ್ತಾರೆ. ಇನ್ನು ಕೆಲವರು ಇನ್ನಿಷ್ಟು ಅನಾಹುತಗಳಿಂದ ವಕ್ರವಕ್ರವಾಗಿ ವರ್ತಿಸಿ, ತಮ್ಮನ್ನು ತಾವೇ ಗಂಡಾಂತರದಲ್ಲಿ ತೊಡಗಿಸಿಕೊಂಡು …ಮದ್ಯಪಾನ… ಧೂಮಪಾನ… ಮಾದಕ ವಸ್ತುಗಳ ಸೇವನೆ…ಜೂಜಾಟ… ಅಶ್ಲೀಲ ಚಿತ್ರಗಳು… ವ್ಯಸನಯುಕ್ತ ಜೀವನ ಶೈಲಿಗೆ ಬಲಿಪಶುವಾಗುತ್ತಾರೆ. ಇಂಥವರಲ್ಲಿ ಕೆಲವರು ಹತಾಶರಾಗಿ ಆತ್ಮಹತ್ಯೆಯ ನೇಣಿಗೆ ಶರಣಾದವರೂ ಉಂಟು. ಇವೆಲ್ಲ ಅಸಮಾನತೆಯಿಂದುಂಟಾದ ಸಾಮಾಜಿಕ ಅನಾರೋಗ್ಯದ ಭಯಂಕರ ಲಕ್ಷಣಗಳು!

ಎಂಥದೇ ಮನೋರೋಗಿಯನ್ನು ಯೋಗಧ್ಯಾನ, ಪ್ರಾರ್ಥನೆ, ವ್ಯಾಯಾಮ, ಸತ್ ಚಿಂತನೆಗಳಿಂದ ರಿಪೇರಿ ಮಾಡುವುದು ಸಾಧ್ಯವಿದೆ. ಆದರೆ ಮದ್ಯಪಾನ, ಮಾದಕ ಹವ್ಯಾಸಗಳಂತಹ ದುಶ್ಚಟಗಳಿಗೆ ಬಲಿಯಾಗಿ ಡಬಲ್ ರೋಗಿಯಾದ ಮನೋರೋಗಿಗಳನ್ನು ಮೇಲೆತ್ತಲು ಇದೊಂದೇ ಸಾಲದು. ಅವರಲ್ಲಿ ಅವರ ಆಂತರ್ಯದಲ್ಲಿಯೇ ಹುದುಗಿ ಕುಂತ ಆತ್ಮಸಂಕಲ್ಪವೆಂಬ ಸಿಂಹವನ್ನು ಎಚ್ಚರಿಸಲೇಬೇಕು. ಗೀತೆ ಕೂಡಾ.. ‘ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ’ ಈ ಆತ್ಮನೇ ಆತ್ಮನ ಮಿತ್ರನೂ ಹಾಗೂ ಈ ಆತ್ಮನೇ ಆತ್ಮನ ಶತೃವೂ ಆಗಿದೆ (೬-೫)… ಎಂದು ಸಾರಿದೆ. ಬಸವಣ್ಣನವರು… ಪುಣ್ಯಪಾಪವೆಂಬವು ತಮ್ಮಿಷ್ಟ ಕಂಡಿರೇ ಎಂದು ಕನ್ನಡಿ ಹಿಡಿದಿದ್ದಾರೆ. ಸಾವಿರ ಉಪದೇಶಗಳಿಗಿಂತಲೂ ಸ್ವಯಂ ಜಾಗೃತಿ ಬಲಾಢ್ಯವಾದದ್ದು.

ಕಂದಕದ ಪ್ರಪಾತದಲ್ಲಿ ಬಿದ್ದ ಯುವಕರಿಗೆ… ನೀನು ದುಷ್ಟ ಗುಣಗಳಿಗೆ ಬಲಿಯಾಗಿದ್ದಿ… ದುಷ್ಟರ ಗೆಳೆತನ ಮಾಡಿಕೊಂಡಿರುವಿ… ನಿನ್ನ ಕುಣಿ ನೀನೇ ತೋಡಿಕೊಂಡಿರುವಿ… ಹುಷಾರು… ಎಂದು ಹೇಳುವ ಬದಲು, “ಹುಡುಗಾ… ನಿನ್ನನ್ನು ನಾನು ಚೆನ್ನಾಗಿ ಬಲ್ಲೆ… ಹತ್ತು ಮಂದಿಯ ಪ್ರಾಣ ಉಳಿಸುವ ತಾಕತ್ತು ಇರುವ ಶಕ್ತಿವಂತ ನೀನು… ಬಯಸಿದರೆ ಗುಡ್ಡವನ್ನು ಕಿತ್ತಿಡುವ ಶಕ್ತಿ ನಿನ್ನಲ್ಲೇ ಇದೆ. ನೀನು ನಮ್ಮಂತ ಹಿರಿಯರಿಗೆ ಕೂಡ ಮಾರ್ಗದರ್ಶನ ಮಾಡಬಲ್ಲ ಜ್ಞಾನಿಯಾದವ… ಎಲ್ಲಿ ತಪ್ಪಿದೆ… ಏನು ತಪ್ಪಿದೆ… ಅನ್ನುವುದನ್ನು ನಿನಗೆ ನೀನೇ ಕಂಡುಕೋ… ನಮಗೆಲ್ಲ ನಿನ್ನ ಮೇಲೆ ಅಖಂಡ ವಿಶ್ವಾಸ ಇದೆ…” ಹೀಗೆ ನೀಡುವ ಆತ್ಮ ಜಾಗೃತಿಯ ಶಿಕ್ಷಣ ನಮ್ಮ ಯುವಕರಿಗೆ ದೊರೆತರೆ, ಅವರು ತಮ್ಮ ಸ್ವಯಂ ಶ್ರೇಷ್ಠತೆಯನ್ನು ತಮ್ಮಲ್ಲೇ ಕಂಡುಕೊಂಡು… ರಾಕ್ಷಸರಾಗುವ ದುರಂತ ತಪ್ಪಿ… ರಕ್ಷಕರಾಗುವ ರಾಷ್ಟ್ರೀಯ ಆರೋಗ್ಯದ ಬಲಾಢ್ಯ ಕಾಲ ಬಂದೇ ಬರುತ್ತದೆ.

ಖ್ಯಾತ ಆಂಗ್ಲ ಕವಿ ಮ್ಯಾಥ್ಯೂ ಅರ್ನಾಲ್ಡ ಬರೆದ.. ‘ಸೋಹ್ರಾಬ್ ಮತ್ತು ರುಸ್ತುಂ’ ಕಾವ್ಯದಲ್ಲಿ… ಇಬ್ಬರೂ ರಣಭಯಂಕರರು ಭರ್ಚಿಕಾಳಗದ ಹಾಣಾಹಣೆಯಲ್ಲಿ ತೊಡಗಿದಾಗ… ತ್ರಿಲೋಕವೀರ ರುಸ್ತುಂ ಸಣ್ಣ ಹುಡುಗನ ಕೈಯಲ್ಲಿ ಮಣ್ಣು ತಿನ್ನುವ ದಯನೀಯ ಕ್ಷಣ ಪ್ರಾಪ್ತವಾದಾಗ… ರುಸ್ತುಂ.. ರುಸ್ತುಂ… ಎಂದು ತನಗೆ ತಾನೇ ತನ್ನ ಹೆಸರನ್ನು ಕೂಗಿಕೊಳ್ಳುತ್ತಾನೆ. ಆಗ ಅವನ ಶಕ್ತಿ ಒಂದಕ್ಕೆ ನೂರು ಪಟ್ಟಾಗಿ ವಿಜಯ ಸಂಪಾದಿಸುತ್ತಾನೆ. ಇಂದಿಗೂ ನಂಬರ್ ಒನ್ ಪೈಲವಾನರು… ತಾವು ದೆಖ್ಖಾ ದೆಖ್ಖಿಯ ಆಖಾಡದಲ್ಲಿ ಮಣ್ಣು ಮುಕ್ಕುವ ಕಾಲ ಬಂದಾಗ… ತಮ್ಮ ಹೆಸರು ತಾವೇ ಕೂಗಿಕೊಳ್ಳುತ್ತಾರಂತೆ!

ತನ್ನನ್ನು ತಾನೇ ಎಚ್ಚರಿಸಿಕೊಳ್ಳುವ ಆತ್ಮಜಾಗೃತಿ ಮಂತ್ರಕ್ಕಿಂತ ಶ್ರೇಷ್ಠ ತಂತ್ರ ಈ ಭುವನದಲ್ಲಿ ಇನ್ನೊಂದಿಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ಅದನ್ನೆ ಮಾಡಿದೆ
Next post ಬೇಲಿ ಮತ್ತು ಹೊಲ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys