ಚಿತ್ರ: ಐಲೋನ

ನಿಮ್ಮ ಹೊಲದ ಬೇಲಿಗುಂಟ ನೀಲಗಿರಿ ಗಿಡಗಳನ್ನು ಹಚ್ಚಿರುತ್ತೀರಿ. ಆ ಗಿಡಗಳ ಸುತ್ತಮುತ್ತಲಿನ ಜಾಗದಲ್ಲಿ ಬೆಳೆಯುತ್ತಿರುವ ಇನ್ನಿತರ ಯಾವುದೇ ಸಸ್ಯಗಳು ಕ್ರಮೇಣ ಸತ್ತು ಹೋಗುತ್ತವೆ, ಅಥವಾ ಯಾವುದೇ ಹೊಸ ಸಸ್ಯಗಳು ಅದರ ಅಡಿಯಲ್ಲಿ ಬೆಳೆಯುವುದುದಿಲ್ಲ. ಇದನ್ನು ಗಮನಿಸಿದ್ದೀರಾ? ಇದಕ್ಕೆ ಕಾರಣ ಸಸ್ಯಗಳಲ್ಲಿ ನಡೆಯುವ ರಾಸಾಯನಿಕ ಸಮರ! ಅಂದರೆ ಕೆಲವು ಸಸ್ಯಗಳು ನಿಷೇಧಕ ರಾಶಯನಿಕಗಳನ್ನು ತಯಾರಿಸಿ ಇನ್ನಿತರ ಸಸ್ಯಗಳ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತವೆ.

ಕಳೆನಾಶಕ ರಸಾಯನ
ಸಸ್ಯಗಳಲ್ಲಿ ದ್ವಿತೀಯಕ ಪದಾರ್ಥಗಳು ಉತ್ಪತ್ತಿಯಾಗುತ್ತವಷ್ಟೇ. ಅವು ಬೇರು ಅಥವಾ ಎಲೆಗಳ ಮುಖಾಂತರ ಮಣ್ಣನ್ನು ಸೇರುತ್ತವೆ. ಅಲ್ಲಿ ಕಳೆನಾಶಕ ರಸಾಯನದ ಹಾಗೆ ವರ್ತಿಸುತ್ತವೆ.

ಅಕ್ರೋಡ ಗಿಡದ ಸುತ್ತಮುತ್ತಲಿನ ಸಸ್ಯಗಳು ಮತ್ತು ಹುಲ್ಲು ಸರಿಯಾಗಿ ಏಕೆ ಬೆಳೆಯುತ್ತಿಲ್ಲ ಎಂದು ವಿಜ್ಞಾನಿಗಳು ಪ್ರಶ್ನೆ ಹಾಕಿಕೊಂಡು ಸಂಶೋಧನೆ ನಡೆಸಿದರು. ಪರೀಕ್ಷಿಸಿದಾಗ ಅದರ ಎಲೆ, ತೊಗಟೆ, ಹಣ್ಣಿನ ಸಿಪ್ಪೆ ಮತ್ತಿತರ ಅಂಗಾಂಗಗಳಿಂದ ‘ಜುಗ್ಲೋನ್’ ಎಂಬ ರಾಸಾಯನಿಕ ಬೇರ್ಪಡಿಸಲಾಯಿತು. ಈ ರಾಸಾಯನಿಕ ಮಣ್ಣನ್ನು ಸೇರಿ, ಆಕ್ಸೀಡೀಕರಣವಾಗಿ ಇತರ ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸಿತ್ತು.

ಮಣ್ಣಿಗೆ ಆವಿಶೀಲ ತೈಲ
ಸಾಲ್ವಿಯಾ ಜಾತಿಯ ಮರಗಳ ಎಲೆಗಳು ನೆಲಕ್ಕೆ ಬಿದ್ದಾಗ ಆವಿಶೀಲ ತೈಲವನ್ನು ಮಣ್ಣಿಗೆ ಬಿಡುತ್ತವೆ. ಅದು ಇನ್ನಿತರ ಸಸ್ಯಗಳ ಬೀಜಗಳು ಮೊಳಕೆಒಡೆಯದ ಹಾಗೆ ತಡೆ ಒಡ್ಡುತ್ತವೆ. ಕ್ಲಿರೋಡೆಂಡ್ರಾನ್ ಸಸ್ಯವು ವಿಸರ್ಜಿಸುವ ರಾಸಾಯನಿಕದಿಂದ ತುರುಬಿಗಿಡ, ಮುಳ್ಳ ಕೀರೆ ಸೊಪ್ಪು, ಚಗಚಿ ಇತ್ಯಾದಿ ಸಸ್ಯಗಳು ಒಣಗಿಹೋಗುತ್ತವೆ. ಪಾರ್ಥೇನಿಯಂ, ಆಡನ್‌ಸೋನಿಯ ಮತ್ತಿತರ ಸಸ್ಯಗಳೂ ರಾಸಾಯನಿಕಗಳನ್ನು ವಿಸರ್ಜಿಸುತ್ತವೆ.

ಮಣ್ಣಿನಲ್ಲಿರುವ ಪೆನಿಸಿಲಿಯಂ ಶಿಲೀಂಧ್ರ ಪ್ರತಿ ಜೈವಿಕ ಪದಾರ್ಥ ಉತ್ಪತ್ತಿ ಮಾಡಿ ಬಿಡುಗಡೆ ಮಾಡುತ್ತದೆ. ಅದರಿಂದ ಅನೇಕ ಬ್ಯಾಕ್ಟೀರಿಯಾ ಪ್ರಭೇದಗಳು ನಾಶವಾಗುತ್ತವೆ. ಹೀಗೆ ಸಸ್ಯಗಳು ಒಸರುವ ರಾಸಾಯನಿಕಗಳಲ್ಲಿ ಕೆಲವನ್ನು ಮಾತ್ರ ಗುರುತಿಸಲಾಗಿದೆ. ಅವು ಫಿನೋಲಿಕ್ ಆಮ್ಲ, ಲ್ಯಾಕ್ಟೋನ್‌ಗಳು, ಕ್ಯಾಂಫರ್‍, ನಾರಿಂಗಿನಿನ್, ಸ್ಕೇಲಿನ್, ಆರ್ಬುಟಿವ್ ಇತ್ಯಾದಿ. ಗುರುತಿಸಲಾಗದ ಅನೇಕ ರಾಸಾಯನಿಕಗಳು ಸವಾಲಾಗಿ ನಿಂತಿವೆ. ಸಸ್ಯಗಳು ವಿಸರ್ಜಿಸುವ ರಾಸಾಯನಿಕವು ಒಂದು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದರೆ ಇನ್ನೊಂದರ ಬೆಳವಣಿಗೆ ಶೀಘ್ರಗೊಳಿಸಲೂಬಹುದು!

ಸಸ್ಯಗಳು ರಾಸಾಯನಿಕ ಸಮರದಿಂದ ತಮ್ಮ ವೈರಿಯನ್ನು ಹೀಗೆ ಹತೋಟಿಯಲ್ಲಿಡುತ್ತವೆ. ಇದು ವಿನಾಶಕಾರಿ ಕಳೆ ಗಿಡಗಳನ್ನು ನಿಯಂತ್ರಿಸಲು ಹೊಸದೊಂದು ಪರಿಣಾಮಕಾರಿ ರಾಸಾಯನಿಕಗಳ ಆವಿಷ್ಕಾರಕ್ಕೆ ನಾಂದಿ ಆಗಬಹುದು.
*****