ಬೆಟ್ಟದಾ ಮೇಲಿಂದ ಮಡಿಕೇರಿಗೆ

ಆ ಹಾದಿಯಲ್ಲಿ ಪಯಣಿಸುವಾಗ ಅದೆಷ್ಟು ಬಾರಿ ಆ ಬೆಟ್ಟ ಸಾಲುಗಳನ್ನು ನೋಡಿದ್ದೆನೊ? ಸುಳ್ಯದಿಂದ ಮಡಿಕೇರಿಗೆ ಹೋಗುವಾಗ ಸಂಪಾಜೆ ದಾಟಿದ ಮೇಲೆ ಎಡಭಾಗದಲ್ಲಿ ಕಾಣಸಿಗುತ್ತವೆ ಅವು. ಭತ್ತ ರಾಶಿ ಹಾಕಿದಂತೆ ಸೂರ್ಯನ ಬೆಳಕಲ್ಲಿ ಬಂಗಾರ ವರ್ಣದಿಂದ ಹೊಳೆಯುವ ಗಿರಿಶಿಖರಗಳು. ಪರ್ವತದ ಇಳಿಜಾರು ಪ್ರದೇಶಗಳಲ್ಲಿ ಹಸಿರು ಮುತ್ತು ಪೋಣಿಸಿಟ್ಟಂತೆ ಮರಗಿಡಗಳು. ಆ ಬೆಟ್ಟಗಳಲ್ಲಿ ಬೆಳಂದಿಗಳಲ್ಲಿ, ಸುಳಿದಾಡುತ್ತಾ ಸಂಪಾಜೆಯಿಂದ ಮಡಿಕೇರಿ ಸೇರಬೇಕೆಂದು ಎಷ್ಟು ಬಾರಿ ಅಂದುಕೊಂಡಿದ್ದೆನೊ? ಕನಸುಗಳಿಗೆ ರೆಕ್ಕೆ ಮೂಡಿಸುವುದು ಸುಲಭ. ಆದರೆ ಹಾರುವುದು ಹೇಗೆ?

ಹಾಗೆ ಮೂಡುತ್ತಿದ್ದ ಆಸೆಗೆ ತುಪ್ಪವೆರೆಯುತ್ತಿದ್ದವನು ವಳಲಂಬೆಯ ರವಿರಾಜ. ಅವನಿಗೆ ಕಾಡು ಮೇಡೆಂದರೆ ಹುಚ್ಚು. ‘ಅದಕ್ಕೆ ರಿಜ್ಜು ವಾಕಿಂಗು ಅಂತಾರೆ ಸರ್‌. ಬಹಳ ಅಪಾಯಕಾರಿ. ನನಗೆ ಗೊತ್ತಿರುವ ಹಾಗೆ ಆ ದಾರಿಯಲ್ಲಿ ಯೋಜಿತವಾಗಿ ರಿಜ್ಜು ವಾಕಿಂಗು ಮಾಡಿದವರಿಲ್ಲ. ಹೋಗಿದ್ದರೆ ಬೇಟೆಗಾರರು ಅಥವಾ ಕಾಡನ್ನೇ ನಂಬಿಕೊಂಡಿರುವ ಮಲೆಕುಡಿಯರು ಮಾತ್ರ. ಯಾರೂ ಮಾಡದ್ದನ್ನು ಸಾಧಿಸಿ ನಾನು ದಾಖಲೆ ನಿರ್ಮಿಸಬೇಕೆಂದಿದ್ದೇನೆ. ‘

‘ನಿನ್ನ ದಾಖಲೆ ಮನೆ ಮುಂಡಾಮೋಚ್ತು. ಆ ಸಾಹಸದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ನನಗಿದೆ. ಯಾವಾಗ ಹೊರಡುತ್ತಿ ಹೇಳು. ನಾನೂ ಬಂದು ಬಿಡ್ತೇನೆ.’

ವಳಲಂಬೆ ದೊಡ್ಡದಾಗಿ ನಕ್ಕಿದ್ದು ಅಯ್ಯಪ್ಪ’ ಇದೊಳ್ಳೇ ಗ್ರಾಚಾರವಾಯ್ತಲ್ಲಾ  ನಾನೇ ಹೋಗೋದು ಕಷ್ಟದಲ್ಲಿ. ಏನಾದರೂ ಹೆಚ್ಚು ಕಡಿಮೆಯಾದರೆ ಜನರೆದುರು ನಾಲ್ಕು ಹನಿ ಕಣ್ಣೀರು ಹಾಕಲಿಕ್ಕೆ ಒಂದೇ ಒಂದು ಹೆಂಡ್ತಿ ಇಲ್ದೋನು. ನಿಮಗೆ ಒಂದಾದರೂ ಹೆಂಡತಿ ಉಂಟು. ನಾನು ಹೋಗುವಾಗ ನಿಮಗೆ ಖಂಡಿತಾ ಒಂದೇ ಒಂದು ಮಾತನ್ನೂ ಹೇಳಲಾರೆ.’

ವಳಲಂಬೆ ಹೋಗಲಿಲ್ಲ. ಕೆಲವು ವರ್ಷಗಳ ಹಿಂದೆ ಈ ಟೀವಿ ಸೇರಿಕೊಂಡ. ಅಲ್ಲಿಯವರೆಗೆ ಎಲ್ಲೆಲ್ಲೋ ಅಲೆಯುತ್ತಿದ್ದ ಗುಳಿಗನಿಗೊಂದು ಕಲ್ಲು ಸಿಕ್ಕಂತಾಯ್ತು. ಕೆಲಸ ಸಿಕ್ಕಿತೆಂದು ಕರುಣಾಳುಗಳು, ಯಾರೋ ಅವನಿಗೊಂದು ಹೆಣ್ಣನ್ನು ಕೊಟ್ಟರು. ಈಗವನು ರಿಜ್ಜು ವಾಕಿಂಗನ್ನು ಮರೆತಿರಬೇಕು.

ನನಗದು ಮರೆತು ಹೋಗಿರಲಿಲ್ಲ. ಇಲ್ಲಿ ಸುಳ್ಯದಲ್ಲಿ, ನನ್ನೂರು ಶಿಶಿಲದಲ್ಲಿ ನಾ ನೇರದ ಬೆಟ್ಟ ಗುಡ್ಡಗಳು ಸಾಕಷ್ಟಿವೆ. ವಯಸ್ಸಿದ್ದಾಗ ಅದೇನು ಮಹಾ ಎಂಬ ಅಸಡ್ಡೆ. ಈಗ ವಯಸ್ಸಾಗುತ್ತಿದೆ. ಇರುವುದೊಂದೇ ಜನ್ಮ. ಏನಿದ್ದರೂ ಇನ್ನು ಕೆಲವೇ ಕೆಲವು, ಉಳಿದಿರುವ ವರ್ಷಗಳಲ್ಲಿ ಸಾಧಿಸಿಕೊಳ್ಳಲೇಬೇಕು ಎಂಬ ಆತಂಕ. ಇಲ್ಲದಿದ್ದರೆ? ಅಂತಕನ ದೂತರಿಗೆ ಕಿಂಚಿತ್ತು ದಯೆಯಿಲ್ಲ!

ಸ್ಟಾರ್ಟಿಂಗು ಟ್ರಬಲ್ಲು

ಈ ವರ್ಷ ಈಗಾಗಲೇ ಮೂರು ಸಾಹಸ ಮಾಡಿ ಮುಗಿಸಿದ್ದ ನಮ್ಮ ಅಂತಿಮ ಬಿ. ಎ. ಹೈದರು ಇನ್ನೊಂದು ಸಾಹಸಕ್ಕೆ ಕಾದಿದ್ದರು. ಕುಮಾರ ಪರ್ವತಕ್ಕೆ ಹೋಗೋಣವೆಂದು ದುಂಬಾಲು ಬೀಳುತ್ತಿದ್ದವರು ಸರಕಾರ ಅಲ್ಲಿಗೆ ಚಾರಣ ನಿಷೇಧಿಸಿದಾಗ ತೆಪ್ಪಗಾದರು. ಸಾಹಸವೆಂದಾಗ ಬೇಕಾದರೆ ಅದು ಅಪೂರ್ವವಾಗಿರಬೇಕು. ಸಂಪಾಜೆ ಟು ಮಡಿಕೇರಿ ರಿಜ್ಜು ವಾಕಿಂಗು ಬಗ್ಗೆ ಪ್ರಸ್ತಾಪಿಸಿದಾಗ ಇನ್ನಿಲ್ಲದ ಉತ್ಸಾಹದಿಂದ ಹೊರಟರು. ಡಿಸೆಂಬರು 17ರಂದು ಹೊರಟು 18ರಂದು ವಾಪಾಸು ಬರುವುದೆಂದು ನಾಯಕ ಪಾವನ ಕೃಷ್ಣ ಪೂರ್ವ ತಯಾರಿಗಳನ್ನು ಮಾಡಿಕೊಂಡ.

ಅಷ್ಟರಲ್ಲಿ ಬಂತಲ್ಲಾ ಜಿಲ್ಲಾ ಪಂಚಾಯತು ಚುನಾವಣೆ. ಡಿಸೆಂಬರ್‌ 18ರಂದು ನಾನು ಪಂಜದಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಲೇಬೇಕಿತ್ತು. ತಪ್ಪಿಸಿದರೆ ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಳದಲ್ಲಿ ಸುಗ್ರಾಸ ಆತಿಥ್ಯ!

ವಿಷಯ ತಿಳಿದು ಪಾವನಕೃಷ್ಣ ಪೆಚ್ಚಾದ. ಹದಿನೇಳು ಮತ್ತು ಹದಿನೆಂಟು ಒಳ್ಳೆ ಬೆಳದಿಂಗಳಿರುತ್ತದೆ. ನಮ್ಮ ಸ್ಟುಡಿಯೋ ಸೀತಾರಾಮ ಬೇರೆ ಪ್ರೋಗ್ರಾಂ ತ್ಯಜಿಸಿ ನಮ್ಮೊಡನೆ ಬರಲು ಒಪ್ಪಿದ್ದಾನೆ. ಅರಣ್ಯ ಇಲಾಖೆಯವರಲ್ಲಿ ಮಾತಾಡಿದ್ದೇನೆ. ಹದಿನಾರರಂದು ರಾತ್ರಿ ಕೋಯನಾಡು ಗಣಪತಿ ದೇವಸ್ಥಾನದಲ್ಲಿ ಉಳಕೊಳ್ಳಲು ವ್ಯವಸ್ಥೆ ಮಾಡಿದ್ದೇನೆ. ಈಗ ಹೀಗಾಯಿತಲ್ಲ ಸರ್‌ ಎಂದು ಪೇಚಾಡಿಕೊಂಡ.

ತಕಣ ಪರಿಹಾರ ನನಗೂ ಹೊಳೆಯಲಿಲ್ಲ. ‘ಇಪ್ಪತ್ತನಾಲ್ಕು ಕಾಲೇಜು ಡೇ. ಇಪ್ಪತ್ತಾರರಂದು ಕುರುಂಜಿ ವೆಂಕಟ್ರಮಣ ಗೌಡರ ಬತ್ರ್‌ಡೇ. ಅವರೆಡು ದಿನ ಬಿಟ್ಟು ಬೇರೆ ಯಾವತ್ತಿದ್ದರೂ ಬಂದು ಬಿಡುತ್ತೇನೆ’ ಎಂದೆ.

‘ಕ್ರಿಸ್ಮಸ್‌ ರಜೆಯಲ್ಲಿ ಸೌತಿಂಡಿಯಾ ಟೂರು ಇರಿಸಿಕೊಂಡಿದ್ದೇನೆ ಸರ್‌. ಹೊನನಮ್ಮ ಮೇಡಂ ಮತ್ತು ಬೆಳ್ಳಿಯಪ್ಪ ಸರ್‌ ಅವರ ಟೈಮು ಕೇಳುತ್ತಿದ್ದೇವೆ. ಅವರು ಬರಲೊಪ್ಪಿದರೆ ಟೂರು ಗ್ಯಾರಂಟಿ. ಹಾಗಾದರೆ ಬೇರೆ ದಿನಗಳು ರಜಾ ಕಾಲದಲ್ಲಿ ಸಿಗುವುದಿಲ್ಲ. 15 ಮತ್ತು 16ರಂದು ಹೋಗಿ ಬರಬಹುದು. ಪ್ರಿನ್ಸಿಪಾಲರಲ್ಲಿ ಕೇಳುತ್ತೇನೆ.’ ಎಂದ.

ನಾನು ಪ್ರತಿಯಾಡಲಿಲ್ಲ. ಅಂದು ಚುನಾವಣಾ ಸಂಬಂಧೀ ತರಬೇತಿಯಲ್ಲಿ ಪಾಲ್ಗೊಂಡು ಸಂಜೆ ಮನೆಯಲ್ಲಿ ಅದೇನನ್ನೋ ಬರೆಯುತ್ತಿದ್ದಾಗ ಪಾವನಕೃಷ್ಣನ ಕರೆ ಬಂತು.’ ಪ್ರಿನ್ಸಿಪಾಲರಲ್ಲಿ ನೀವೇ ಒಂದು ಮಾತು ಕೇಳಿ ನೋಡಬೇಕಷ್ಟೇ.’

ನಾನು ಕಾಲೇಜಿಗೆ ಹೋದಾಗ ಪ್ರಿನ್ಸಿಪಾಲರು ಗಂಭೀರವದನರಾಗಿ ಛೇಂಬರಲ್ಲಿ ಕೂತಿದ್ದರು. ಪ್ರಾಚಾರ್ಯರ ಆಸನವೆಂದರೆ ಅದು ವಸ್ತುಶಃ ಮುಳ್ಳಿನ ಕುರ್ಚಿ. ಸರಕಾರ, ವಿಶ್ವವಿದ್ಯಾಲಯ, ಇಲಾಖೆ, ಸಮಾಜ, ಮ್ಯಾನೇಜುಮೆಂಟು, ಹೆತ್ತವರು, ಹೊತ್ತವರು, ಸ್ಟೂಡೆಂಟ್ಸು, ಸ್ಟಾಫು, ಯೂಜಿಸಿ, ನ್ಯಾಕು ಎಂದು ಎಲ್ಲರನ್ನೂ ನಿಭಾಯಿಸಬೇಕು. ಏನು ಸಮಸ್ಯೆ ಇದೆಯೋ ಏನೋ? ಹೇಗೆ ವಿಷಯ ಪ್ರಸ್ತಾಪಿಸಲಿ.

ಪ್ರಿನ್ಸಿಪಾಲರು ಅವರಾಗಿಯೇ ರಿಜ್ಜು ವಾಕಿಂಗಿನ ಪ್ರಸ್ತಾಪ ತೆಗೆದರು. ‘ನೋಡಿ. ಹದಿನೈದು ಮತ್ತು ಹದಿನಾರು ವರ್ಕಿಂಗ್‌ಡೇ. ರಜಾದಿನಗಳಲ್ಲಿ ರಿಜ್ಜುವಾಕು ಮಾಡಿ’. ನಾನು ‘ಆಯಿತು ಸರ್‌’ ಎಂದಷ್ಟೇ ಹೇಳಿ ಬಂದು ನಾನು ಬಿಟ್ಟೆ.

‘ಏನೇ ಆದರೂ ನಾವೀ ಬಾರಿ ರಿಜ್ಜುವಾಕಿಂಗು ಮಾಡಲೇಬೇಕು ಸರ್‌’ ಎಂದು ಪಾವನಕೃಷ್ಣ ಘೋಷಿಸಿದ. ಹೊನ್ನಮ್ಮ ಮೇಡಂಗೆ ಟೂರಿಗೆ ಹೊರಡಲು ಸಾಧ್ಯವಾಗಲಿಲ್ಲ. ವಿಶಾಖ ಪಟ್ಟಣ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲು ಬೆಳ್ಳಿಯಪ್ಪ ಗೌಡರು ಹೊರಟು ಬಿಟ್ಟರು. ಅಂತಿಮ ಬಿ. ಎ., ಟೂರು ಕಾರ್ಯಕ್ರಮ ರದ್ದುಗೊಂಡಿತು. ರಿಜ್ಜು ವಾಕಿಂಗಿಗೆ ಬೇಕಾದಷ್ಟು ದಿನಗಳು. ಡಿಸೆಂಬರ್‌ 30- 31ರಿಜ್ಜು ವಾಕಿಂಗು ಎಂದು ನಾಯಕ ದಿನ ನಿಗದಿಗೊಳಿಸಿಯೇ ಬಿಟ್ಟ.

ರಿಜ್ಜು ವಾಕಿಂಗಿನ ಅಪಾಯದ ಬಗ್ಗೆ ನನಗರಿವಿತ್ತು. ಇತ್ತೀಚಿನ ದಿನಗಳಲ್ಲಿ ಮನಸ್ಸಿಗೆ ಕಿರಿಕಿರಿಯಾಗುವ ಘಟನೆಗಳೇ ಸಂಭವಿಸುತ್ತಿವೆ. ರೋಟರಿ ಅಧ್ಯಕನಾಗಿ ದೊಡ್ಡೇರಿ ಗಿರಿಜನ ಕಾಲನಿಗೆ ನಿರ್ಮಿಸ ಹೊರಟ ತೂಗುಸೇತುವೆಗೆ ಧನ ಸಹಾಯಕ್ಕೆ ನನ್ನ ನೆರೆಕರೆಯ ಶ್ರೀಮಂತರಿಗೆಲ್ಲಾ ಮನವಿ ಕಳುಹಿಸಿಕೊಟ್ಟಿದ್ದೆ. ಪ್ರತಿಯೊಬ್ಬರೂ ನಾಲ್ಕೈದು ತೂಗುಸೇತುವೆ ನಿರ್ಮಿಸುವ ತಾಕತ್ತುಳ್ಳವರು. ನನ್ನ ಕೋಟ್ಯಧೀಶ ಮಿತ್ರನೊಬ್ಬನಿಗೆ ಮೂರು ಪತ್ರ ಬರೆದಿದ್ದೆ. ಈಗ ಒಳ್ಳೆಯ ಕೆಲಸದಲ್ಲಿರುವ ಸಮೀಪದ ಬಂಧುಗಳಿಬ್ಬರಿಗೆ ಎರಡೆರಡು ವಿನಂತಿ ಪತ್ರ ಕಳುಹಿಸಿದ್ದೆ. ಜಬಲ್‌ಪುರದಲ್ಲಿರುವ ತಂಗಿ ಊರ್ಮಿಳಾ ಮೈಸೂರಿನ ರೊಜ ಗುರು ಮತ್ತು ರೊಜ ಕೃಷ್ಣ, ಕೊಣಾಜೆಯ ಡಾಜ ಚಿನನಪ್ಪ ಗೌಡ ಇವರನ್ನು ಬಿಟ್ಟರೆ ಒಂದು ಪ್ರತಿಕ್ರಿಯೆ ತೋರಿದವರಿಲ್ಲ. ಜಾತಿಯ ಹೆಸರಲ್ಲಿ, ದೇವರ ಹೆಸರಲ್ಲಿ ಹಣ ಸಂಗ್ರಹ ಮಾಡುವವರಿಗೆ ಸಾಕಷ್ಟು ಸಂಗ್ರಹವಾಗುತ್ತದೆ. ನಿಜವಾದ ಸಮಾಜ ಸೇವೆಗೆಲ ಬಡಪಾಯಿ ಗಿರಿ ಜನರ ಸಂಕಷ್ಟಕ್ಕೆ ಸ್ಪಂದಿಸದ ಇವರು ಇನ್ನು ಮುಖಕ್ಕೆ ಮುಖಕೊಟ್ಟು ಮಾತಾಡಲುಂಟೆ!

ಹೇಗೆ ಬರುತ್ತದೆ ಮನಸ್ಸು ಇವರಿಗೆ

ಆಮೆಗಳ ಹಾಗೆ ಬದುಕಲು ಚಿಪ್ಪೊಳಗೆ ಲ

ಯಾಕೆ ತಿಳಕೊಳ್ಳುವುದಿಲ್ಲ ಉಳ್ಳವರು

ಕೊಟ್ಚದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

ಮನಸ್ಸಿಗೆ ರಿಲೀಫ್‌ ಕೊಡಲು ಪ್ರಕೃತಿಯೊಡನೆ ಅನುಸಂಧಾನ. ಹಾಗಾಗಿ ಆ ಅಸಾಧ್ಯ ಚಳಿಯ ದಿನಗಳಲ್ಲೇ ಹೊರಟು ಬಿಟ್ಟೆ.

ಹೀಗೊಂದು ಮೊದಲ ರಾತ್ರಿ

ಡಿಸೆಂಬರ 28ರಂದು ನಾವೊಂದು ಅನಧಿಕೃತ ಸಭೆ ನಡೆಸಿ ರಿಜ್ಜುವಾಕಿಂಗಿಗೆ ಬೇಕಾದ ತಯಾರಿಯ ಬಗ್ಗೆ ಚರ್ಚಿಸಿದೆವು. ‘ಬಂದು ಆಶೀರ್ವಾದ ಮಾಡಿ’ ಎಂದು ಛೇಂಬರಲ್ಲೇ ಕೂತಿದ್ದ ಪ್ರಾಚಾರ್ಯರನ್ನು ವಿನಂತಿಸಿದೆ. ಅವರು ಸಭೆಗೆ ಬಂದು ಶುಭ ಹಾರೈಸಿದರು. ‘ರಿಜ್ಜುವಾಕು ರಿಸ್ಕುವಾಕು. ನಿಮ್ಮದು ಮೊತ್ತಮೊದಲ ಅಪೂರ್ವ ಸಾಹಸ. ಜಾಗ್ರತೆಯಿಂದ ಹೋಗಿ ಬನ್ನಿ.
ಹೊಸ ವರ್ಷ ಶುಭದಾಯಕವಾಗಿರಲಿ. ‘ ಬಹಳ ಅರ್ಥಪೂರ್ಣ ಮಾತುಗಳವು. ಆದರೂ ಏನಾದರೂ ಅಪಾಯ ಸಂಭವಿಸಬಹುದೆಂಬ ಅಳುಕು ಅವರಲ್ಲಿತ್ತೆ?

29ರಂದು ಕೋಯನಾಡು ಗಣಪತಿ ದೇವಸ್ಥಾನದಲ್ಲಿ ನಮ್ಮ ವಾಸ್ತವ್ಯ. ಅಂದು ಸುಳ್ಯದಲ್ಲಿ ರೋಟರಿ ಪರಿವಾರ ಮಂಗಳೂರಿನ ಕಾಡ್ಸ್ರ್‌ ಸಂಸ್ಥೆಯ ಸಹ ಭಾಗಿತ್ವದಲ್ಲಿ ಬೃಹತ್‌ ಏಡ್ಸ್‌ ಜಾಗ್ರತಿ ಜಾಥಾ ಹಮ್ಮಮಿಕೊಂಡಿತ್ತು. ಬೆಳಿಗ್ಗೆ ಹತ್ತಕ್ಕೆ ಆರಂಭವಾದ ಜಾಥಾ ಹನ್ನೊಂದುವರೆಗೆ ಮುಗಿಯಿತು. ಅದಾಗಿ ಸಭಾ ಕಾರ್ಯಕ್ರಮ. ಮನೆಗೆ ಮುಟ್ಟುವಾಗ ಎರಡೂವರೆ.

ಅಂದೇ ರೋಟರಿ ಜಿಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ಕ್ಲಬ್ಬಿನ ಸಾಧನೆಗಳ ವರದಿ ಸಿ್ಧಿಪಡಿಸಿ ಶಿವಮೊಗ್ಗದ ಡಾ|| ನಾರಾಯಣರಿಗೆ ಮತ್ತು ನಾಲ್ವರು ಜಿಲ್ಲಾ ನಿರ್ದೇಶಕರುಗಳಿಗೆ ಕಳುಹಿಸಿಕೊಡಬೇಕಿತ್ತು. ಎಲ್ಲ ಮುಗಿಯುವಾಗ ಐದು ದಾಟಿತು. ರಾತ್ರಿ ಏಳರೊಳಗೆ ನಾವೆಲ್ಲರೂ ಕೋಯನಾಡು ಗಣಪತಿ ದೇವಸ್ಥಾನದಲ್ಲಿರಬೇಕಿತ್ತು. ಗಡಿಬಿಡಿಯಲ್ಲಿ ಅಗತ್ಯದ ವಸ್ತುಗಳನ್ನು ಹ್ಯಾವರ್‌ ಸ್ಯಾಕಿನಲ್ಲಿ ತುಂಬಿಸಿಕೊಂಡು ಹೊರಟೆ. ಶೈಲಿಯ ಮುಖದಲ್ಲಿ ಆತಂಕವಿತ್ತು. ಈ 150/100ರಷ್ಟು ಬಿ. ಪಿ. ಇರುವವನಿಗೆ ರಿಜ್ಜು ವಾಕಿಂಗು ಬೇರೆ ಕೇಡು.ಅ ಮಕ್ಕಳಿಬ್ಬರು ಕೈ ಬೀಸಿದರು. ಅಪ್ಪನ ಅಧಿಕಪ್ರಸಂಗಗಳ ಪೈಕಿ ಇದೂ ಒಂದು ಎಂದುಕೊಂಡಿರಬೇಕು. ಪೇಟೆಗೆ ಬಂದು ಮೂಸಂಬಿ ಕೊಳ್ಳುವಾಗ ಜಯಲಕ್ಷ್ಮಿ ಬಸ್ಸು ಕಣ್ಣೆದುರೇ ಹೋಗಿ ಬಿಟ್ಟಿತು. ನನ್ನ ಬೊಬೆ*ಯನ್ನು ಡ್ರೈವರ್‌ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಕೊನೆಗೊಂದು ವ್ಯಾನಲ್ಲಿ ಉಪ್ಪಿನಲ್ಲಿ ಹಾಕಿದ ಮಾವಿನಕಾಯಿಯಂತೆ ಹೇಗೋ ಕೋಯನಾಡಿಗೆ ಮುಟ್ಟುವಾಗ ರಾತ್ರೆ ಎಂಟು. ಒಂದು ಗಂಟೆ ನಾನೇ ತಡಮಾಡಿದ್ದೆ. ಪಾವನಕೃಷ್ಣ ಓಡಿಕೊಂಡು ಬಂದ. ‘ನಿಮಗೇನೋ ಆಗಿರಬೇಕೆಂದುಕೊಂಡು ಫೋನು ಮಾಡಲು ಹೊರಟಿದ್ದೆ ಸರ್‌’ ಎಂದ. ಅವನ ಮುಖ ಈಗ ನಿರಾಳವಾಗಿತ್ತು.

ಕೋಯನಾಡು ದೇವಾಲಯದ ವಿಶಾಲ ಸಭಾಭವನದಲ್ಲಿ ನಾವು ಉಳಕೊಂಡೆವು. ಅಲ್ಲಿ ಸುಮಾರು ಇಪ್ಪತ್ತರಷ್ಟು ಅಯ್ಯಪ್ಪ ವೃತದವರಿದ್ದರು. ಕೇರಂ ಆಡಿಕೊಂಡು ಕಾಲ ಕಳೆಯುತ್ತಿದ್ದರು. ಮಾಲೆ ಹಾಕದಿರುತ್ತಿದ್ದರೆ ಯಾವ ಆಟ ಆಡುತ್ತಿದ್ದರೊ!

ನಾನು, ಪಾವನಕೃಷ್ಣ ಊಟ ಮುಗಿಸಿದೆವು. ಕಲ್ಲಾಳಕ್ಕೆ ಹೋಗುವಾಗ ನಮಗೆ ಊಟ ತಿಂಡಿ ಒದಗಿಸಿದ ಅದೇ ಮಲ್ಟಿಸ್ಟಾರ್‌ ಹೋಟೆಲಲ್ಲಿ. ಪಡ್ಡೆಗಳ್ಯಾರೂ ಕಾಣುತ್ತಿಲ್ಲ. ಅಲ್ಲೇ ಹತ್ತಿರದ ಚಡಾವಿನಲ್ಲಿ ತಾಹಿರಾಬಾನುವಿನ ಮನೆಯಿತ್ತು. ಅಲ್ಲಿಗೆ ಹೋಗಿರಬಹುದೆಂದು ನಾವೂ ಒಂದು ವಾಕಿಂಗು ಮಾಡಿದೆವು. ಅವಳು ಡ್ಯಾನ್ಸರಾಗಿ ಕಾಲೇಜಲ್ಲಿ ವಿಶ್ವಪ್ರಸಿದ್ಧಿ ಪಡೆದವಳು. ನಾನು ಅವಳಲ್ಲಿ ಮಾತಾಡುತ್ತಿದ್ದುದು ಅವಳ ಮನೆಮಾತು ಉರ್ದುವಿನಲ್ಲಿ. ‘ ಸಬ್‌ ಆಯಾ ಥಾ ಸಾಬ್‌. ಅಬ್‌ ಸಂಪಾಜೆ ಗಯಾ’ ಎಂದವಳು ವರದಿ ಒಪ್ಪಿಸಿದಳು. ಚಾಯ್‌ ಬನಾವೂಂಗು ಎಂದು ಆದರಿಸಿದಳು. ವಿನಯ ಪೂರ್ವಕವಾಗಿ ಅವಳ ಆತಿಥ್ಯ ನಿರಾಕರಿಸಿ ನಾವು ವಾಪಾಸಾದಾಗ ಮಲ್ಟಿಸ್ಟಾರ್‌ ಹೋಟೆಲಲ್ಲಿ ನಮ್ಮ ತಂಡ ಊಟದ ಸಂಭ್ರಮದಲ್ಲಿತ್ತು.

ಕೋಯನಾಡು ಪರ್ವತಗಳ ಸೆರಗಲ್ಲಿ ಪವಡಿಸಿರುವ ಪುಟ್ಟ ಊರು. ಮಧ್ಯದಲ್ಲಿ ಯುವತಿ
ಪಯಸ್ವಿನಿಯ ಜಲಲ ಜಲಲ ಮಧುರ ನಿನಾದ. ನನಗಾಗಿ ಪಾವನಕೃಷ್ಣ ಹಾಸಲೊಂದು, ಹೊದೆಯಲೊಂದು ಬೆಡ್‌ಶೀಟು ತಂದಿದ್ದ. ಅಸಾಧ್ಯ ಚಳಿಯಿತ್ತು. ದೊಡ್ಡೇರಿ ಹ್ಯಾಂಗಿಂಗು ಬ್ರಿಜ್ಜು, ರೋಟರಿ ರಜತ ಮಹೋತ್ಸವ ಭವನ ಒಟ್ಟು ಮೂವತ್ತು ಲಕ್ಷಗಳು ತಲೆಯಲ್ಲಿ ಧೀಂಗಿಣ ಹಾಕುತ್ತಿದ್ದವು. ಹಾಲಿನಲ್ಲಿ ಅಲ್ಲಲ್ಲಿ ಬಿದ್ದುಕೊಂಡಿದ್ದ ಪಡ್ಡೆಗಳ ನಗು, ಕೇಕೆ ಮತ್ತು ಅರ್ಥಹೀನ ಒಣ ಹರಟೆ. ನಿದ್ದೆ ಹೇಗೆ ಬಂದೀತು? ರಾತ್ರಿ ಹನೆನರಡು ದಾಟಿದ ಮೇಲೂ ಮಾತು ಮುಕ್ತಾಯಗೊಳ್ಳದ್ದನ್ನು ಕಂಡು ಗದರಿದೆ.’ ಸುಮ್ಮನಿರು ಮಾರಾಯ ರಂಜು. ಮಾತಾಡಲೇ ಬೇಕೆಂದಿದ್ದರೆ ಬಾಯಿ ಮುಚ್ಚಿಕೊಂಡು ಮಾತಾಡು.’ ರಂಜನ್‌ ಹೇಳಿದ. ುನಾನಲ್ಲ ಸರ್‌. ಯತಿರಾಜ.’ ಅಪರಾಧಿ ಸಿಕ್ಕಿ ಬಿದ್ದಿದ್ದ. ‘ಸಾರಿ ಸರ್‌. ನಿಮಗೆ ನಿದ್ದೆ ಬಂದಿರ ಬಹುದೆಂದು ಕೊಂಡಿದ್ದೆ’ ಎಂದು ಯತಿರಾಜ ಕ್ಷಮೆ ಯಾಚಿಸಿದ. ಎಲ್ಲರೂ ಸುಮ್ಮನಾದರು. ಆದರೆ ಮತ್ತೂ ಅರ್ಧಗಂಟೆ ಯತಿರಾಜನ ಗೊಣಗಾಟ ಕೇಳಿಸುತ್ತಲೇ ಇತ್ತು.

ಮಧ್ಯ ರಾತ್ರೆ ವಿಪರೀತ ಚಳಿಯಾಗಿ ಗಡಗಡ ನಡುಗತೊಡಗಿದೆ. ಹಲ್ಲುಗಳು ಕಟಕಟಿಸಿದವು. ನನ್ನ ಜರ್ಕಿನ್‌ ಎಲ್ಲೆಂದು ಹ್ಯಾವರ್‌ಸ್ಯಾಕ್‌ ಶೋಧಿಸತೊಡಗಿದೆ. ಕಾಣಿಸುತ್ತಿಲ್ಲ. ಹೇಗೆ ತಾಳಿಕೊಳ್ಳಲಿ ಈ ಅಸಾಧ್ಯ ಚಳಿಯನ್ನು ಮನೆಯಲ್ಲಾದರೆ ಕಂಬಳಿ ಇದೆ. ಷಾಹಿ ಬಳಿ ಎಂದು ಹೇಳಬಹುದು. ಇಲ್ಲೀಗ ಏನು ಮಾಡಲಿ ಎಂದು ಪೇಚಾಡಿಕೊಂಡೆ. ನನ್ನಿಂದ ಐದಡಿ ದೂರದಲ್ಲಿ ಮಲಗಿದ್ದ ಹುಡುಗರಲ್ಲಿ ಒಬ್ಬ ಧ್ವನಿ ಹೊರಡಿಸಿದ. ‘ಇದು ನಿಮ್ಮದಾ ಸರ್‌. ಅಲ್ಲಿ ಹೊರಗಿತ್ತು. ಚಳಿಯಾದುದಕ್ಕೆ ನಾನು ಹಾಕಿಕೊಂಡೆ. ಇರಿ ಕೊಡುತ್ತೇನೆ.’

ಅವ ಅಡಿಕೆ ಹಾಳೆ ಟೋಪಿ ಪ್ರಸಿದ್ಧಿಯ ಶಿವಪ್ರಸಾದ. ತಾನು ಹಾಕಿದ್ದ ನನ್ನ ಜರ್ಕಿನನ್ನು ತೆಗೆದು ಕೊಟ್ಟ. ಅವನು ಕಣ್ಣುಮುಚ್ಚಿಕೊಂಡು ಮಲಗಿದ್ದರೂ ದಕ್ಕಿಹೋಗುತ್ತಿತ್ತು. ಬೋಳ. ಅವನಿಗೊಂದು ಬೆಡ್‌ಶೀಟೂ ತಂದಿರಲಿಲ್ಲ. ಇನ್ನು ಇವನು ನಡುಗಲಿದ್ದಾನೆ. ನಲ್ವತ್ತರ ಆಸುಪಾಸಿನವನಂತೆ ಕಂಡರೂ ಇನ್ನೂ ಇಪ್ಪತ್ತರ ಹರೆಯದವ. ತಾಳಿಕೊಳ್ಳುತ್ತಾನೆ.

ಬೆಳಿಗ್ಗೆ ನಾಲ್ಕಕ್ಕೆ ಎಚ್ಚರವಾಯಿತು. ಅಯ್ಯಪ್ಪಗಳು ಎದ್ದು ಸ್ನಾನಕ್ಕೆ ಹೊರಟರು. ಗದಗುಟ್ಟುವ ಚಳಿಯಲ್ಲಿ ಕೋರೈಸುವ ಪಯಸ್ವಿನಿಯಲ್ಲಿ ಇವರು ಮಿಂದು ಬರಬೇಕು. ಅಯ್ಯಪ್ಪ ನಾಮ ಸ್ಮರಣೆ ಸ್ಥಾಯಿಯಿಂದ ಮಂದ್ರವಾಗಿ ನೀರಲ್ಲಿ ಮುಳುಗುವಾಗ ತಾರಕಕ್ಕೇರಿತು. ಮೇಲಕ್ಕೆ ಬರುವಾಗ ಮತ್ತೂ ಜೋರಾಯಿತು.

ಸ್ನಾನ ಮಾಡದೆ ರಿಜ್ಜುವಾಕು ಆರಂಭಿಸಲು ಮನಸ್ಸು ಬರಲಿಲ್ಲ. ಮನೆಯಲ್ಲಾದರೆ ಆಹಾ ಸೋಲಾರು ಹೀಟರಿನ ಹಿತಕರ ಸಮೃದ್ಧಿ ನೀರು. ಏಕಕಾಲದಲ್ಲಿ ಜಲ ಮತ್ತು ಸೂರ್ಯಸ್ನಾನ. ಪಯಸ್ವಿನಿಯಲ್ಲಿ ಎರಡು ಬಾರಿ ಮುಳುಗೆದ್ದೆ. ಆಗ ಅಯ್ಯಪ್ಪ ನಾಮ ಸ್ಮರಣೆ ತಾರಕಕ್ಕೇರಿದ್ದೇಕೆಂದು ಈಗ ಅರ್ಥವಾಯಿತು. ನನಗೆ ಬೆಂಗಾವಲಾಗಿ ಬಂದಿದ್ದ ಪುರುಷೋತ್ತಮ ದಡದಲ್ಲೇ ನಡುಗುತ್ತಾ ನಿಂತಿದ್ದ.

ನಾನು ಮೈಯುಜ್ಜಿಕೊಳ್ಳುವಾಗ ಮೇಲ್ಬದಿ ರಸ್ತೆಯಂಚಿನಲ್ಲಿ ಯಾರೋ ಕ್ಯಾಕರಿಸುವುದು
ಕೇಳಿಸಿತು. ಬಟ್ಟೆಯ ಮೂಟೆಯಂತಿದ್ದ ವ್ಯಕ್ತಿಯೊಬ್ಬ ತನ್ನ ಪ್ಯಾಂಟು ಜಿಪ್ಪು ಜಾರಿಸುತ್ತಿದ್ದ. ಅವನ ಉದ್ದೇಶ ಅರ್ಥವಾಗಿ ಟಾರ್ಚು ಬೆಳಕನ್ನು ಅವನ ಮುಖಕ್ಕೆ ಬಿಟ್ಟೆ. ಆತ ಗಡಬಡಿಸಿ ಬೇರೆ ಕಡೆಗೆ ಹೋದ. ಸ್ವಲ್ಪ ತಡವಾಗಿದ್ದರೆ ಸ್ನಾನ ಮಾಡದ ಪಾಪಕ್ಕೆ ಪುರುಷೋತ್ತಮನಿಗೆ ತೀರ್ಥಾಭಿಷೇಕ ಮತ್ತು ಸ್ನಾನ ಮಾಡಿದ ಪುಣ್ಯಕ್ಕೆ ನನಗೆ ಮಹಾಲಿಂಗದರ್ಶನ ಆಗಿ ಬಿಡುತ್ತಿತ್ತು.

ಗಜಮುಖನೆ ಗಣಪತಿಯೇ

ಮಲ್ಟಿಸ್ಟಾರ್‌ ಹೋಟಲಲ್ಲಿ ಅವರವರ ಶಕ್ತ್ಯಾನುಸಾರ ಐದರಿಂದ ಹದಿನೈದರವರೆಗೆ ಇಡ್ಲಿ ಕಬಳಿಸಿ ಆರು ಗಂಟೆಗೆ ಸರಿಯಾಗಿ ಗಣಪತಿಯ ಮೂರ್ತಿಯೆದುರು ನಮ್ಮ ದಂಡು ನೆರೆಯಿತು. ಅದರೆದುರಿಂದ ಹಾದು ಹೋಗುವಾಗ ಕೆಲವು ಪಡ್ಡೆಗಳು ಹಾಡುತ್ತಿದ್ದರು. ‘ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ. ಬಾಕಿ ಉಳಿದ ಎಂಟಾಣೆ ನಾಳೆ ಕೊಟ್ಟನೆ.’ ಆಣೆಗಳೇ ಚಾಲ್ತಿಯಲ್ಲಿಲ್ಲದ ಕಾಲದಲ್ಲಿ ಈ ಹಾಡು. ಯಾರೋ ಸಾಲದಲ್ಲೇ ಜೀವನ ತಳ್ಳುವ ಬೃಹಸ್ಪತಿ ಹೆಣೆದ ಹಾಡದು. ‘ಯಾಕೆನ್ನ ಈ ರಾಜ್ಯಕೆಳೆತಂದೆ ಹರಿಯೇ, ಸಾಕಲಾರದ ಎನ್ನ ಏಕೆ ಪುಟ್ಟಿಸಿದೆ’ ಎಂಬ ದಾಸರ ಹಾಡಿನ ಸಾಲುಗಳನ್ನು ಅದು ನೆನಪಿಸಿಬಿಡುತ್ತದೆ.

ನಿನ್ನೆ ರಾತ್ರಿ ಸ್ಥಳೀಯ ಮಾರ್ಗದರ್ಶಕ ಬಾಲ ನಮ್ಮನ್ನು ಭೇಟಿಯಾಗಿದ್ದ. ಅವನು ತೆಳ್ಳಗಿನ, ಲವಲವಿಕೆಯ ಮೂವತ್ತರ ಆಜೂಬಾಜಿನ ಆಸಾಮಿ. ಅವನೊಟ್ಟಿಗೆ ಹದಿನೆಂಟರ ಹರೆಯದ ಜಗದೀಶನಿದ್ದ. ಮೆಟ್ರಿಕ್ಯುಲೇಶನ್‌ ಓದಿ, ಮುಂದೆ ಹೋಗಲಾಗದೆ ಶಿಕಣಕ್ಕೆ ಎಳ್ಳು ನೀರು ಬಿಟ್ಟವನು. ಲವಲವಿಕೆಯಿಂದ ಪುಟಿಯುವ ಇವನು ಓದುತ್ತಿದ್ದರೆ ಏನಾಗಿಬಿಡುತ್ತಿದ್ದನೋ! ಇಬ್ಬರೂ ಉತ್ಸಾಹದಿಂದ ನಾಳಿನ ಹಾದಿಯ ಬಗ್ಗೆ ಹೇಳುತ್ತಿದ್ದರು. ‘ ಹಾದಿಯಲ್ಲಿ ಕೆಳಗಿಳಿದರೆ ಭೀಮನ ಗುಂಡಿಯಿದೆ. ಅಲ್ಲಿ ವಜ್ರದ ಗಣಿ ಇದೆ. ಅಜ್ಜ ಅಜ್ಜಿ ಕಲ್ಲು ಇದೆ. ಅಜ್ಜಿ ಗುಡ್ಡೆಯಿದೆ. ಒಂದಕ್ಕಿಂತ ಒಂದು ಚೆನ್ನಾಗಿವೆ. ಎಲ್ಲಾ ನೋಡಿಕೊಂಡು ಗಾಳಿಬೀಡಿನಲ್ಲಿ ತಂಗೋಣ. ಬೆಳಿಗ್ಗೆ ಅಲ್ಲಿಂದ ಮಡಿಕೇರಿಗೆ ಹೋದರಾಯಿತು.’

ಬಾಲನ ಐಡಿಯಾ ಚೆನ್ನಾಗಿತ್ತು. ನಮ್ಮ ತಂಡವೂ ಒಪ್ಪಿದಂತಿತ್ತು. ನಮ್ಮದಿದು ಚಾರಣ. ನಮ್ಮ ಪಡ್ಡೆಗಳಿಗೆ ಓದೆಂದರೇ ಅಲರ್ಜಿ. ಇನ್ನು ಜಾನಪದ ಸಂಶೋಧನೆ. ಆ ಎತ್ತರದ ಗಿರಿಶಿಖರಗಳಲ್ಲಿ ನಡೆದು ಮಡಿಕೇರಿಗಿಳಿಯಬೇಕು ಎಂಬುದಷ್ಟೇ ನನಗಿದ್ದ ಆಸಕ್ತಿ. ಸ್ಥಳೀಯ ಜಾನಪದ ಕತೆಗಳನ್ನು ಮತ್ತು ಐತಿಹ್ಯಗಳನ್ನು ಸಂಗ್ರಹಿಸುತ್ತಾ, ಸ್ಥಳಗಳನ್ನು ನೋಡುತ್ತಾ ಹೋದರೆ ನಾಲ್ಕೈದು ದಿನಗಳು ಬೇಕು. ಹಾಗಾಗಿ ನಾನೆಂದೆ. ‘ಕೋಯನಾಡಿನಿಂದ ಮಡಿಕೇರಿಗೆ ಹೋಗುವುದಷ್ಟೇ ನಮ್ಮ ನಿಗದಿತ ಕಾರ್ಯಕ್ರಮ. ದಾರಿಯಲ್ಲಿ ಸಿಕ್ಕಷ್ಟನ್ನು ನೋಡೋಣ. ಒಳ ಪ್ರದೇಶಗಳಿಗೆ ಹೋಗುವುದು ಬೇಡ. ತಿನ್ನಲು ಆಹಾರವಿಲ್ಲ. ಕುಡಿಯಲು ನೀರಿಲ್ಲ. ತಂಗುವ ವ್ಯವಸ್ಥೆಯಿಲ್ಲ. ನಾಳೆ ಬೆಳಿಗ್ಗೆ ಹೊರಟರೆ ರಾತ್ರಿಯೊಳಗೆ ಮಡಿಕೇರಿಗೆ ಮುಟ್ಟುವಂತೆ ಕಾರ್ಯಕ್ರಮ ರೂಪಿಸಿಕೊಳ್ಳೋಣ.’
ಅದೇ ನಮ್ಮೆಲ್ಲರ ಅಂತಿಮ ತೀರ್ಮಾನವಾಯಿತು. ಬೆಳಗ್ಗೆ ಬಾಲ ಒಂದು ಸಣ್ಣ ತೆಂಗಿನ ಕಾಯಿ ಹಿಡಿದುಕೊಂಡು ಬಂದಿದ್ದ, ಗಣಪತಿಗೆ ಈಡುಗಾಯಿ ಹೊಡೆಯಲು. ಅಷ್ಟು ಹೊತ್ತಿಗೆ ಗುಡಿಯೆದುರು ಜೀಪೊಂದು ಬಂದು ನಿಂತಿತು. ಯಾರೋ ಗಣಪತಿಯ ಕೃಪಾ ಕಟಾಕ್ಷ ಪಡೆಯಲು ಬರುತ್ತಿದ್ದಾರೆ ಎಂದುಕೊಂಡರೆ, ಪುರೋಹಿತ ನಾಗರಾಜ ಭಟ್ಟರು. ಅವರು ವೇದ ಬಲ್ಲ ಪುರೋಹಿತರಾದರೂ ಜಾತ್ಯಂಧತೆಯಿಲ್ಲದೆ, ಸರ್ವಸಮಾನತಾ ಭಾವದಿಂದ ಅಪ್ಪಟ ಮನುಷ್ಯನಾಗಿ ಸಾರ್ಥಕ ಜೀವನ ನಡೆಸುವವರು. ಈ ವರ್ಷ ಗೆಳೆತನಕ್ಕೆ ಕಟ್ಟುಬಿದ್ದು ರೋಟರಿ ಸದಸ್ಯರಾದವರು. ಒಬ್ಬ ಪುರೋಹಿತರು ಹೀಗೆ ರೋಟರಿ ಸದಸ್ಯರಾದದ್ದು ದೊಡ್ಡ ಕೌತುಕಕ್ಕೆ ಕಾರಣವಾಗಿತ್ತು.

ಕೆಂಪು ಮಂಕಿ ಕ್ಯಾಪು ಹಾಕಿಕೊಂಡಿದ್ದ ಕರಿಗಡ್ಡದ ನಾಗರಾಜ ಭಟ್ಟರು ಒಳ್ಳೆಯ ಸರ್ದಾರ್ಜಿ ಗೆಟಪ್ಪಿನಲ್ಲಿದ್ದರು. ಬಂದವರೇ ನನ್ನನ್ನು ಅಪ್ಪಿಕೊಂಡು ‘ಯಾವ ಪ್ರಳಯಾಂತಕ ಸಾಧನೆಗೆ ಹೊರಟಿದ್ದೀರಿ’ ಎಂದು ಕೇಳಿದರು. ನನ್ನ ಉತ್ತರ ಕೇಳಿ ಅವರ ಹುಬ್ಬು ಮೇಲೇರಿತು. ‘ಎಷ್ಟು ದೂರವಾಗಬಹುದು? ನಲುವತ್ತು ನಲುವತೈದು ಅವರು ಗಾಬರಿಯಿಂದ ‘ಇಂತಹ ಕಾಡು ಗುಡ್ಡಗಳಲ್ಲಿ ಅಷ್ಟೊಂದು ದೂರ ನಡೆಯುತ್ತೀರಾ? ಈ ಗಣಪತಿಯೇ ನಿಮ್ಮನ್ನು ಕಾಪಾಡಬೇಕು’ ಎಂದು ಕೈ ಕುಲುಕಿ ಮುಂದುವರಿದರು.

ಬಾಲ ತೆಂಗಿನಕಾಯಿಯನ್ನು ನನ್ನ ಕೈಗಿತ್ತ. ನಾನದನ್ನು ಗಣಪತಿಯೆದುರಿನ ಕಲ್ಲಿಗೆ ಅಪ್ಪಳಿಸಿದೆ. ಚೂರುಗಳನ್ನು ನೋಡಿ ನಮ್ಮ ತಂಡ ಖುಷಿಯಿಂದ ‘ಶುಭಶಕುನ, ಶುಭಶಕುನ’ ಎಂದು ಉದ್ಗರಿಸಿತು. ನನ್ನ ಪುಣ್ಯ. ಅವರ ನಂಬಿಕೆಯ ಪ್ರಕಾರದ ಅಪಶಕುನವಾಗಿ ಬಿಡುತ್ತಿದ್ದರೆ ‘ಹೋಗಿ ಹೋಗಿ ಇವರಿಂದ ಕಾಯಿ ಒಡೆಸಿದೆವಲ್ಲಾ’ ಎಂದು ಹಲುಬಿ ಬಿಡುತ್ತಿದ್ದರು!

ಮಾಪ್ರೆ ಕಾಡಿನಲ್ಲಿ ಪುಂಡಿ ಪುರಾಣ

ಕೋಯನಾಡಿನಿಂದ ಎಡಕ್ಕೆ ಗುಡ್ಡದ ಹಾದಿಯಲ್ಲಿ ನಾವು ಸಾಗಬೇಕು. ಆರಂಭದಲ್ಲಿ ರಸ್ತೆ ಪಯಣ. ಅಲ್ಲಲ್ಲಿ ನಮ್ಮ ಗದ್ದಲಕ್ಕೆ ಬೆಚ್ಚಿ ನಮ್ಮನ್ನು ವಿಚಿತ್ರವಾಗಿ ನೋಡುವ ಜನರು ಮತ್ತು ಬೊಗಳುವ ನಾಯಿಗಳು. ಒಮ್ಮಮಿಂದೊಮ್ಮೆಗೇ ಗುಡ್ಡೆ ಎದುರಾದಾಗ ನಮ್ಮ ವೇಗಕ್ಕೆ ಬ್ರೇಕು ಬಿತ್ತು. ಕೊನೆಗೆ ಗುಡ್ಡ ಮುಗಿದು ಕಾಡು ಪ್ರದೇಶ ಸಿಕ್ಕಿತು. ಅಲ್ಲಲ್ಲಿ ಹರಿಯುವ ನೀರು ಮತ್ತು ಬೀಸುವ ತಣ್ಣನೆಯ ಗಾಳಿ.

‘ಇದು ಕುಂಟಿಕ್ಕಾನ ಕಾಡು’ ಮಾರ್ಗದರ್ಶಿ ಬಾಲ ಹೇಳಿದ. ಕಾಡು ಭಯಾನಕವೇನಾಗಿರಲಿಲ್ಲ. ಸಣ್ಣ ಪುಟ್ಟ ಪೊದೆಗಳು ಮತ್ತು ದೊಡ್ಡ ಮರಗಳೇನೋ ಇದ್ದವು. ಅದು ನಿಬಿಡಾರಣ್ಯವೇನಲ್ಲ. ಆದರೆ ಕುಂಟಿಕ್ಕಾನದ ಎರಡು ದಿಬ್ಬಗಳು ನಮ್ಮ ಕಾಲುಗಳ ಬಲವನ್ನು ಹಿಂಗಿಸಿಬಿಟ್ಟವು.

ಮತ್ತಷ್ಟು ದೂರ ನಡೆದಾಗ ಸಿಕ್ಕಿತು ನಿಬಿಡಾರಣ್ಯ. ‘ಇದಕ್ಕೆ ಎಲೆಕನ್‌ ಕಾಡೆಂದು ಹೆಸರು’ ಎಂದು ಮಾರ್ಗದರ್ಶಕ ಹೇಳಿದಾಗ ನನಗೆ ಆಶ್ಚರ್ಯವಾಯಿತು. ‘ಯಾಕೆ ಹಾಗಂತಾರೆ ಗೊತ್ತಾ? ಎಂದು ಕೇಳಿದ್ದಕ್ಕೆ ‘ ಸರಿಯಾಗಿ ಗೊತ್ತಿಲ್ಲ. ಆದರೆ ಒಂದು ಕಾಲದಲ್ಲಿ ಇಲ್ಲಿಯ ವರೆಗೂ ಲಾರಿಗಳು ಬರುತ್ತಿದ್ದವು. ಮರಗಳನ್ನು ಕಡಿದು ಸಾಗಿಸುತ್ತಿದ್ದರಂತೆ’ ಎಂದು ಬಾಲ ಹೇಳಿದ. ಅವನು ಬ್ರಿಟಿಷ್‌ ಆಡಳಿತ ಕಾಲದ ಕತೆ ಹೇಳುತ್ತಿದ್ದಾನೆ. ಆಗ ನಿಬಿಡಾರಣ್ಯಗಳಿಂದ ಆಯ್ದ ಮರಗಳನ್ನು ಕಡಿದು ಸಾಗಿಸುತ್ತಿದ್ದರು. ಅದಕ್ಕೆ ಸೆಲೆಕನ್‌ ಫೆಲ್ಲಿಂಗ್‌ ಎಂದು ಹೆಸರು. ಗ್ರಾಮಸ್ಥರು ಅದನ್ನು ಸೆಲೆಕನ್‌ ಕಾಡೆಂದು ಕರೆಯುತ್ತಿದ್ದಿರಬೇಕು. ಈಗ ಅದು ಇಲೆಕನ್‌ ಕಾಡಾಗಿ ಬಿಟ್ಟಿದೆ! ಬೃಹತ್ತಾದ ಮರಗಳು ಮುಗಿಲೆತ್ತರಕ್ಕೆ ಬೆಳೆದಿವೆ. ದಿಮ್ಮಿ ಸಾಗಣೆಯ ಹಾದಿಯನ್ನು ಅರಣ್ಯ ನುಂಗಿ ಬಿಟ್ಟಿದೆ.

ಸೆಲೆಕನ್‌ ಕಾಡು ಮುಗಿಯುತ್ತಿದ್ದಂತೆ ಆರಂಭವಾಯಿತು ಮಾಪ್ರೇ ಕಾಡು. ಇದು ನಿಜಕ್ಕೂ ಭಯಾನಕವಾದ ಅರಣ್ಯ. ಗಂಟೆ ಎಂಟು ಕಳೆದರೂ ಸೂರ್ಯಕಿರಣ ಸೋಂಕದ ನೆಲ. ಕೆಲವೆಡೆ ಕಗ್ಗತ್ತಲು. ಇಲ್ಲಿ ದಾರಿತಪ್ಪಿದವರು ಹೊರಬರುವುದು ಅಸಾಧ್ಯದ ಮಾತು. ಅಲ್ಲಲ್ಲಿ ಉಂಡೆ ಹುಳಿಯ ಮರಗಳು. ನಮ್ಮೊಡನೆ ದಾರಿ ತೋರಿಸಲೆಂದು ಬಂದ ನಾಲ್ವರೂ ಆ ಮರಗಳನ್ನು ಏರುವವರೇ. ಕಾಡನ್ನು ನಂಬಿ ಬದುಕುವವರಿಗೆ ಅದು ಮುಖ್ಯ ಆದಾಯ ಮೂಲ. ಅಂತಹ ಮರಗಳು ಶಿಶಿಲದ ಕಾಡಲ್ಲೂ ಇವೆ. ನಮ್ಮ ಮನೆಯ ಹಿಂದೆಯೇ ಒಂದು ಮರವಿತ್ತು. ದೊಡ್ಡ ಮಾವ ಆ ಮರವೇರಿ ಉಂಡೆ ಹುಳಿ ಕೊಯ್ಯುವಾಗ ನಾವೆಲ್ಲಾ ಹೆಕ್ಕುತಿದ್ದೆವು. ಹಣ್ಣಾಗಿದ್ದರೆ ಮುಕ್ಕುತಿದ್ದೆವು.

ಮಾಪ್ರೇ ಕಾಡಿನಲ್ಲಿ ಏರುವುದು, ಇಳಿಯುವುದು, ಏರುವುದು, ಇಳಿಯುವುದು. ಸಮತಟ್ಟು ಜಾಗವೇ ಇಲ್ಲ. ಏರುವುದೆಂದರೇನು ? ನೆಟ್ಟಗೆ 75 ಅಥವಾ 80 ಡಿಗ್ರಿ ಕೋನದಲ್ಲಿ. ಮಾರ್ಗದರ್ಶಕನಿಗೆ ಹೇಳಿ ಮೊದಲೇ ದೊಣ್ಣೆಯೊಂದನ್ನು ಸಿದ್ಧಪಡಿಸಿಟ್ಟುಕೊಂಡಿದ್ದೆ. ಪಡ್ಡೆಗಳು ಆಗ ನಕ್ಕಿದ್ದವು. ‘ಸುಮ್ಮನಿರ್ರೋ, ಆನೆ ಬಂದ್ರೆ ಓಡ್ಸೋಕಂತ ಮಾಡ್ಸಿಕೊಂಡಿದ್ದೀನಿ’ ಎಂದೆ. ‘ಆನೆಗೆ ಎರಡು ಬಾಲ ಸರ್‌. ನಿಮ್ಮ ದೊಣ್ಣೆ ನೋಡಿದ್ರೆ ಆನೆ ಎದ್ರು ಬಾಲದಿಂದ ನಿಮ್ಮನ್ನು ಜೋಕಾಲಿಯಾಡಿಸುತ್ತದೆ’ ಎಂದು ಚೊಕ್ಕಾಡಿ ವಿನಯ ಹೇಳಿದ್ದ. ಈಗ ಎಲ್ಲರೂ ದೊಣ್ಣೆಗಳಿಗಾಗಿ ಮಾರ್ಗದರ್ಶಕರಿಗೆ ದುಂಬಾಲು ಬೀಳತೊಡಗಿದರು. ‘ಈಗೇನು ಹೇಳುತ್ತೀರಿ’ ಎಂಬಂತೆ ಅವರನ್ನು ನೋಡಿದೆ. ‘ಆನೆಯನ್ನು ಓಡ್ಸೋದಕ್ಕೆ ಒಂದು ದೊಣ್ಣೆ ಸಾಕಾಗೋದಿಲ್ಲ ಸರ್‌’ ಎಂದು ಪಡ್ಡೆಗಳು ಹೇಳಿದರು.

ಏರಿ, ಏರಿ, ಏರಿ ಸುಸ್ತಾಗಿ ಒಂದು ಬಂಡೆಕಲ್ಲಿನ ಮೇಲೆ ಕೂತುಬಿಟ್ಟೆ. ಕೆಳಕ್ಕೆ ನಲುವತ್ತು ಐವತ್ತು ಅಡಿ ಆಳದಲ್ಲಿ ಯತಿರಾಜ, ಮರ್ಕಂಜ ಗಿರೀಶ, ಜಾಲಿ, ಜಯಪ್ರಕಾಶ, ನವೀನ ಮತ್ತಿತರರು ತೇಕುತ್ತಾ ದೊಣ್ಣೆ ಊರಿಕೊಂಡು ಬರುತ್ತಿದ್ದರು. ಗಂಟೆ ಹನ್ನೊಂದು ದಾಟಿತ್ತು. ಹೊಟ್ಟೆ ತಾಳ ಹಾಕುತ್ತಿತ್ತು. ಬಿ. ಪಿ. ಇರುವವರಿಗೆ ಹಸಿವಾದರೆ ಕೈಕಾಲು ನಡುಕ ಶುರುವಾಗುತ್ತದೆ. ಈಗಂತೂ ಬೆಟ್ಟ ಹತ್ತಿದ ಆಯಾಸ ಬೇರೆ. ‘ುಪುಂಡಿ ತಿನ್ನೋಣವಾ’ ಎಂದು ಕೇಳಿದೆ. ಜತೆಗಿದ್ದವರ ಪರಿಸ್ಥತಿ ಮಂಗನ ಉಪವಾಸದಂತಾಗಿತ್ತು. ಅಷ್ಟು ಹೊತ್ತಿಗೆ ಆಳ ಪಾತಾಳದಲ್ಲಿದ್ದವರು ಮೇಲೇರಿ ಬಂದರು. ಅವರಿಗಂತೂ ನನ್ನ ಸಲಹೆ ಆಪ್ಯಾಯಮಾನವಾಯಿತು. ನಾವು ಪುಂಡಿ ತಿನ್ನಲು ಸನನ್ಧಿರಾದೆವು. ಪುಂಡಿ ಎಂದರೇನು?

ಬಲು ರುಚಿಯಾದ ಜಾನಪದ ತಿಂಡಿ

ಹತ್ತು ತಿಂದಾರ ಎಳಿಬಹುದು ಬಂಡಿ

ಅಕ್ಕಿ ರುಬ್ಬಿ ಮಾಡಬೇಕ ಉಂಡಿ

ಬೇಯಿಸಿದರ ಆಗುತ್ತದ ಪುಂಡಿ.

ಪಾವನಕೃಷ್ಣ ಪುಂಡಿಕಟ್ಟು ಬಿಚ್ಚಿದ. ಚಟ್ನಿ ಎಲ್ಲಿದೆ? ಪುರುಷೋತ್ತಮ ಅದನ್ನು ಹೊತ್ತುಕೊಂಡು ಹೋದವನು ನಮಗಿಂತ ಏನಿಲ್ಲವೆಂದರೂ ನೂರು ಮೀಟರ್‌ ದೂರದಲ್ಲಿದ್ದಾನೆ. ದಟ್ಟ ಕಾಡಿನಲ್ಲಿ ಅವನು ಮತ್ತು ಸಂಗಡಿಗರು ಕಾಣುತ್ತಿರಲಿಲ್ಲ. ಸ್ವರ ಮಾತ್ರ ಕೇಳಿಸುತ್ತಿತ್ತು. ನಮ್ಮ ದನಿಗೆ ಉತ್ತರವಾಗಿ ಅವನು .ಇಲ್ಲಿಗೇ ಬನ್ನಿ. ನಾನಿನ್ನು ಕೆಳಗಿಳಿದು ಬರುವುದಿಲ್ಲ. ಇಲ್ಲೇ ತಿನ್ನೋಣು ಎಂದ. ನಾನಂತೂ ಬಸವಳಿದಿದ್ದೆ. ಜಾಲಿ, ಗಿರೀಶ, ಚೇತನ್‌, ನವೀನ, ಇಕಬಾಲ್‌ ಮತ್ತು ಜಯಪ್ರಕಾಶರ ಪರಿಸ್ಥಿತಿ ನನಗಿಂತಲೂ ಚಿಂತಾಜನಕವಾಗಿತ್ತು. ಪುರ್ಸ ಅಲ್ಲಿಂದ ಇಳಿಯಲೊಲ್ಲ. ನಾವು ಮೇಲೆ ಹತ್ತಲಾಗದಷ್ಟು ಸುಸ್ತಾದವರು. ನಮ್ಮ ಗದರಿಕೆಗೆ ಅವನು ‘ಚಟ್ನಿ ಇಲ್ಲದೆ, ಪುಂಡಿ ಹೇಗೆ ತಿನ್ನುತ್ತೀರಿ ನೋಡುತ್ತೇನೆ’ ಎಂದ. ನನೊನಡನಿದ್ದವರು ‘ಚಟ್ನಿ ನಿನ್ನ ತಲೆಗೆ ಮೆತ್ತಿಕೋ, ನಿನ್ನ ಬೊಜ್ಜಕ್ಕೆ ಇಟ್ಟುಕೋ’ ಎಂಬಿತ್ಯಾದಿ ಅಣಿಮುತ್ತು ಉದುರಿಸಿದರು. ಪುರ್ಸ ಯಾವುದಕ್ಕೂ ಜಗ್ಗಲಿಲ್ಲ. ನಾವು ಪುಂಡಿ ಕಟ್ಟುಗಳನ್ನು ಬಿಚ್ಚಿದೆವು. ಒಂದೊಂದರಲ್ಲಿ ಐದೈದು ಪುಂಡಿಗಳು. ಪಾವನಕೃಷ್ಣ ಪ್ಲಾಸ್ಕಲ್ಲಿ ಚಾ ತಂದಿದ್ದ. ನನಗೆ ಜೀವ ಬಂತು. ಬೀಚರ! ಆದರೆ ಆತುರದಲ್ಲಿ ನನ್ನ ಪೊಟ್ಟಣದಿಂದ ಪುಂಡಿಯೊಂದು ಕೆಳಕ್ಕೆ ಬಿದ್ದುಬಿಟ್ಟಿತು. ಆಗ ಎತ್ತಿಕೊಳ್ಳಲು ಮನಸ್ಸಾಗಲಿಲ್ಲ. ಮುಂದೆ ಬೋಳುಗುಡ್ಡಗಳ ನೆತ್ತಿ ತುಳಿಯುತ್ತಾ ರಿಜ್ಜುವಾಕು ಮಾಡುವಾಗ ಮಾಪ್ರೆ ಕಾಡಿನಲ್ಲಿ ಕಳೆದುಹೋದ ಅದೊಂದು ಪುಂಡಿಯ ನೆನಪಾಗದಿರಲಿಲ್ಲ.

ಪುಂಡಿ ತಿನ್ನುತ್ತಿದ್ದಂತೆ ಸುನಿಲ್‌ ‘ಅಯ್ಯಯ್ಯಯೋ’ ಎಂದ ಕಿರುಚಿಕೊಂಡು ಎದ್ದ. ಅವನು ಹಾವೊಂದರ ಬಾಲದ ಬಳಿಯೇ ಕೂತಿದ್ದ. ಅದು ತರಗೆಲೆಗಳದೇ ಬಣ್ಣದ ಚಟ್ಟೆ ಕಂದಡಿ ಹಾವು. ಚಕ್ಕುಲಿಯ ಹಾಗೆ ಸುರುಳಿ ಸುತ್ತಿಕೊಂಡು ಗಡ್ಡದಾಗಿ ನಿದ್ದೆ ಮಾಡುತ್ತಿದೆ. ‘ಅದೀಗ ನೀವು ನನ್ನ ಪಿರಿಯಡ್ಡಿನಲ್ಲಿರುವಂತಿದೆ’ ಎಂದೆ. ಸುನಿಲ್‌ ಏದುಸಿರು ಬಿಡುತ್ತಾ ‘ಅದರ ಮೇಲೆ ಕೂತು ಬಿಡುತ್ತಿದ್ದರೆ ನನ್ನ ಕತೆ ಮುಗಿಯುತ್ತಿತ್ತು ಸರ್‌. ಏನೋ ಕೋಯನಾಡು ಗಣಪತಿಯ ದಯೆ’ ಎಂದ. ‘ಗುರುಗಳ ಆಶೀರ್ವಾದದಿಂದ ನೀನು ಬದುಕಿದ್ದು’ ಎಂದು ವಶಿಷ್ಠ ಸೇರಿಸಿದ. ‘ಅದಕ್ಕೊಂದು ಕಲ್ಲು ಹೊತ್ತು ಹಾಕು’ ಎಂದು ಗಿರೀಶ ಸಲಹೆ ಮಾಡಿದ. ನಾನು ತಡೆದೆ. ‘ಕೂಡದು. ಇದು ಅದರ ಊರು, ಅದರ ಮನೆ. ಅತಿಕ್ರಮ ಪ್ರವೇಶ ಮಾಡಿದವರು ನಾವು. ಅನ್ಯಾಯ ಮಾಡಬೇಡಿ’ ಎಂದೆ. ಪುಣ್ಯಕ್ಕೆ ಪಡ್ಡೆಗಳಿಗದು ಅರ್ಥವಾಯಿತು.

ತಿಂಡಿ ತಿಂದು ಎದ್ದೆವು. ಮೇಲೆ ಇದ್ದ ಪುರ್ಸ, ಪುಟ್ಟ ಕಮಲಾಕ, ರೈತ ಕಮಲಾಕ, ನಕಲೀಶ್ಯಾಮ ಕಮಲಾಕ, ಆದಿಮಾನವ, ಸ್ಟುಡಿಯೋ ಸೀತಾರಾಮ, ಮಾರ್ಗದರ್ಶಕ ತಂಡ ಎಲ್ಲರಿಗೂ ಪುಂಡಿ ಕೊಟ್ಟೆವು. ಪಾವನಕೃಷ್ಣು ಚಟ್ನಿಯನ್ನು ಕೊಂಡು ಹೋಗಿ ಬಿಸಿ ಮಾಡಿ ಒಂದು ವಾರ ಮುಕ್ಕು ಎಂದು ಪುರ್ಸನಿಗೆ ಅಮೂಲ್ಯವಾದ ಸೂಪರ್‌ ಸುಪ್ರೀಂ ಐಡಿಯಾ ನೀಡಿದ. ಪುರ್ಸನ ಮುಖ ಹರಳೆಣ್ಣೆ ಕುಡಿದವನಂತಿತ್ತು.

ಮಾಪ್ರೇ ಕಾಡು ಜೀವಸಂಕುಲಗಳ ತವರು. ಕಾಟಿಗಳ ಸೆಗಣಿ ಹೆಜ್ಜೆ ಹೆಜ್ಜೆಗೆ ಕಾಣಸಿಗುತ್ತದೆ. ಆನೆಗಳ ಲದ್ದಿಗೂ ಕೊರತೆಯಿಲ್ಲ. ‘ಇಲ್ಲಿ ಹಿಂಡು ಆನೆಗಳಿವೆ. ಸಲಗವೂ ಇದೆ’ ಎಂದು ಮಾರ್ಗದರ್ಶಿ ಬಾಲ ಹೇಳಿದ. ಒಂದು ಕಡೆ ಹಸಿಹಸಿ ಲದ್ದಿ ಕಂಡಾಗ ಪಾವನಕೃಷ್ಣ ‘ಇದು ಈಗ ಹಾಕಿದ್ದೇ ಇರಬೇಕು’ ಎಂದು ತನ್ನ ಜೀವ ವಿಜ್ಞಾನ ಜ್ಞಾನ ಪ್ರದರ್ಶಿಸಿದ. ‘ನಿನ್ನ ತಲೆ. ಸೂರ್ಯನ ಬಿಸಿಲೇ ಬೀಳದ ಕಾಡಿದು. ಹನಿ ಬಿದ್ದು ಹಸಿಯಂತೆ ಕಾಣುತ್ತದೆ’ ಎಂದು ಚಂದ್ರಜಿತ್‌ ಪ್ರತಿವಾದ ಮಂಡಿಸಿದ. ತೀರ್ಪು ನೀಡಲು ಯಾರೂ ಮುಂದಾಗಲಿಲ್ಲ. ‘ಗಣಪತಿಗೆ ಕಾಯಿ ಒಡೆದು ಬಂದಿದ್ದೇವೆ. ನಮಗೆ ಆನೆಗಳು ಏನೂ ಮಾಡಲಿಕ್ಕಿಲ್ಲ’ ಎಂದು ಶ್ರೀರಾಜ ಧೈರ್ಯ ತುಂಬಿದ.

ಇನ್ನಷ್ಟು ಮುಂದುವರಿದೆವು. ಅಲ್ಲಲ್ಲಿ ಬಿಳಿ ವಿಸರ್ಜನೆಗಳು ಗೋಚರಿಸಿದವು. ಮಾರ್ಗದರ್ಶಕ ಜಗದೀಶ ಗಾಬರಿಯ ದನಿಯಲ್ಲಿ ‘ಇದು ಹುಲಿಗಳದ್ದು ಸರ್‌. ನಮ್ಮ ದನಕರುಗಳು ಹಾದಿ ತಪ್ಪಿ ಇಲ್ಲಿಯವರೆಗೂ ಬಂದು ಬಿಟ್ಟರೆ ವಾಪಾಸಾಗುವುದಿಲ್ಲ’ ಎಂದ. ತಂಡದ ಕಲರವ ನಿಂತಿತು. ಹುಲಿಗಳಿಂದ ತೊಂದರೆಯಾಗದಿರಲು ಯಾವ ದೇವರಿಗೆ ಏನನ್ನು ನೀಡಬೇಕಿತ್ತೊ ಎಂದು ಪಡ್ಡೆಗಳು ಯೋಚಿಸತೊಡಗಿದವು. ಒಂದು ಕಣಕ್ಕೆ ನಾನೂ ಹೆದರಿದೆ. ನಮ್ಮೊಡನೆ ಕೋವಿಯವನೊಬ್ಬ ಇರಬೇಕಿತ್ತು.

ನಮ್ಮ ಚಾರಣದ ದಿನ ನಿಗದಿಯಾದಂದೇ ಸಂಪಾಜೆ ಅರಣ್ಯಾಧಿಕಾರಿಗಳಿಗೆ ಅನುಮತಿ ಮತ್ತು ಮಾರ್ಗದರ್ಶನಕ್ಕಾಗಿ ಪತ್ರ ಬರೆದಿದ್ದೆ. ಅಲ್ಲಿನ ಅರಣ್ಯದ ಭಯಾನಕತೆಯ ಅರಿವಿದ್ದ ಅಧಿಕಾರಿ ಅನುಮತಿ ನೀಡಿಕೆಗೆ ಹಿಂದೇಟು ಹಾಕಿದ್ದರು. ಪಂಚಾಯತು ಅಧ್ಯಕ್ಷ ಕಳಗಿ ಬಾಲಚಂದ್ರರು ಅವರಲ್ಲಿ ಮಾತಾಡಿ ನಮ್ಮನ್ನು ಆ ಭಯಾನಕ ಕಾಡೊಳಗೆ ಹೋಗಲು ಅನುಮತಿ ನಿರಾಕರಿಸದಂತೆ ಮಾಡಿದ್ದರು. ಆದರೆ ಅರಣ್ಯ ಇಲಾಖೆ ಶಸ್ತ್ರಧಾರಿ ಸಂರಕ್ಷಕನನ್ನು ಕೊಟ್ಟಿರಲಿಲ್ಲ. ಅಗತ್ಯ ಬಿದ್ದರೆ ಕೇವಲ ಹುಸಿ ಗುಂಡಿನ ಮೂಲಕ ಪ್ರಾಣಿಗಳನ್ನು ಹೆದರಿಸಿ ಓಡಲಿಸಲಿಕ್ಕಾದರೂ ಒಬ್ಬ ಗಾರ್ಡನನ್ನು ಕರೆತರಬೇಕಿತ್ತು.

ಚಾರಣದ ಪೂರ್ವ ಸಿದ್ಧತಾ ಸಭೆಯಂದು ಚೇತನ ಕುಮಾರ ಕೇಳಿದ್ದ. ‘ ಗರ್ನಾಲು ತರಬೇಕಾ ಸರ್‌’ ಅದು ಮದುವೆ, ಜಾತ್ರೆ, ಇತ್ಯಾದಿಗಳಂದು ಬಳಸುವ ಸ್ಪೋಟಕ. ನಾನದಕ್ಕೆ ‘ಬೇಡ. ಅದು ಅಪಾಯ’ ಎಂದಿದ್ದೆ.’ ಹೌದು. ಗರ್ನಾಲಿನ ಕಿಡಿ ಒಣ ಎಲೆಗೆ ಸೋಂಕಿ ಬೆಂಕಿ ತಗಲಬಹುದು’ ಎಂದು ಪಾವನಕೃಷ್ಣನೂ ಹೇಳಿದ್ದ. ಗರ್ನಾಲು ತಂದಿದ್ದರೆ ನಮ್ಮ ತಂಡದ ಧೂಮ್ಯಾಕರು ಅದನ್ನು ಉರಿಸುವ ನೆಪದಲ್ಲಿ ಕಣ್ಣೆದುರೇ ಬೀಡಿಯನ್ನೋ, ಸಿಗರೇಟನ್ನೋ ಸೇದಿ ಅದನ್ನೊಂದು ದೊಡ್ಡ ಸಾಧನೆಯೆಂದು ತಿಳಿದು ಬೀಗುವ ಸಂಭವವಿತ್ತು. ಹಾಗೆ ಮಕ್ಕಳು ದಮ್ಮು ಖಾಲಿ ಮಾಡಿಕೊಂಡು ರೋಗಕ್ಕೆ ತುತ್ತಾಗುವುದು ನನಗೆ ಬೇಡವಿತ್ತು. ಅಲ್ಲದೆ ನಾವು ಗರ್ನಾಲು ಹೊಡೆದರೆ ಅದರ ಸದ್ದು ಅರಣ್ಯದೆಲ್ಲೆಡೆ ಮಾರ್ಮೊಳಗುತ್ತದೆ. ಯಾರೋ ಭಯೋತ್ಪಾದಕರೆಂದೋ, ಕಳ್ಳ ನಾಟಾದವರೆಂದೋ, ಕಳ್ಳ ಶಿಕಾರಿಯವರೆಂದೋ ಭಾವಿಸಿ ಅರಣ್ಯ ಇಲಾಖೆಯವರು ನಮ್ಮನ್ನು ವಿಚಾರಿಸುವ ಸಂಭವವೂ ಇತ್ತು. ಹುಲಿ ಪುಕ್ಕಲು ಪ್ರಾಣಿ. ಅದು ನಮ್ಮ ತಂಟೆಗೆ ಬರುವುದಿಲ್ಲ.
ಬುದ್ಧಿಹೀನ ಕಾಡು ಕೋಣಗಳು ಎಲ್ಲಾದರೂ ಈ ಕೋಣಗಳನ್ನು ನೋಡಿ ಅಟ್ಟಿಸಿಕೊಂಡು ಬಂದರೇನು ಗತಿ?

ವಿದ್ಯಾರ್ಥಿಗಳನ್ನು ಹೊರಗೆ ಕರಕೊಂಡು ಹೋಗುವಾಗ ಅನೇಕ ಅಪಾಯಗಳ ಸಂಭವವಿರುತ್ತದೆ. ಹಿಂದೊಮ್ಮೆ ಅಂತಿಮ ಬಿ. ಎ. ತಂಡವೊಂದನ್ನು ಬೇಲೂರಿಗೆ ಕರೆದೊಯ್ಯುತ್ತಿದ್ದೆ. ಪೆರಿಯ ಶಾಂತಿಯಿಂದಾಚೆ ತನ್ನ ಅಕ್ಕನ ಮನೆಯ ಮುಂದೆ ಹುಡುಗನೊಬ್ಬ ಬಸ್ಸಿಳಿದು ಅತ್ತಿತ್ತ ನೋಡದೆ ಓಡಿದ. ಲಾರಿಯೊಂದಕ್ಕೆ ಢಿಕ್ಕಿ ಹೊಡೆದು ರಸ್ತೆಗೆ ಅಪ್ಪಳಿಸಿದ. ಅವನನ್ನು ಮಡಿಲಲ್ಲಿ ಹಾಕಿಕೊಂಡು ಹತ್ತಿರದ ಚಿಕಿತ್ಸಾಲಯಕ್ಕೆ ಧಾವಿಸಿದೆ. ಪರೀಕಿಸಿದ ಡಾಕ್ಟರರು ಕೈ ಎತ್ತಿದರು. ಉಪ್ಪಿನಂಗಡಿ ಸ್ಟೇಶನ್ನು ಮುಟ್ಟುವ ಮೊದಲೇ ಅವ ಕೊನೆಯುಸಿರೆಳೆದ, ನನ್ನ ತೊಡೆಗಳ ಮೇಲೆ. ಎಷ್ಟೋ ದಿನಗಳ ವರೆಗೆ ಅವನ ರಕ್ತ ನನ್ನ ಕೈಗಂಟಿದೆಯೆಂದೆನಿನಸುತ್ತಿತ್ತು. ಸ್ಪೂನಿನಲ್ಲಿ ಊಟ ಮಾಡಬೇಕಾದ ಮನೋಸ್ಥತಿ. ಇಲ್ಲೇನಾದರೂ ಆದರೆ? ಒಂದು ಹಾವು, ಒಂದು ಕಾಡುಕೋಣ, ಒಂದು ಆಳವರಿಯದ ಕಂದರ. ಸಾಕಲ್ಲಾ? ಹಾಗೆ ನೋಡಿದರೆ ಇದು ಕಾಲೇಜಿನಿಂದ ಏರ್ಪಡಿಸಿದ ಚಾರಣವೇನಲ್ಲ. ವೈಯಕ್ತಿಕ ಜವಾಬ್ದಾರಿಯ ಮೇಲೆ ಬಂದವರು ಇವರು. ಆದರೂ ದುರ್ಘಟನೆ ಸಂಭವಿಸಿದರೆ ನಾನದರಿಂದ ಜಾರಿ ಕೊಳ್ಳುವಂತಿರಲಿಲ್ಲ. ಅದಕ್ಕಿಂತಲೂ ಹೆಚ್ಚಿನದು ಅಳಿಯುವವರೆಗೂ ಉಳಿಯುವ ವಿಷಾದದ ನೆನಪುಗಳು.

ಅಜ್ಜಿಗೊಂದು ಕಲ್ಲು, ಭೀಮನಿಗೊಂದು ಗುಂಡಿ

ಕೊನೆಗೂ ಮಾಪ್ರೇ ಕಾಡು ಮುಗಿದು ಬೋಳು ಪ್ರದೇಶ ಸಿಕ್ಕಿತು. ಇನ್ನು ಕಾಡ ಪ್ರಾಣಿಗಳೊಡನೆ ಮುಖಾಮುಖಿಯಾಗುವ ಸಂಭವವಿಲ್ಲವೆಂದು ನೆಮ್ಮದಿಯ ಉಸಿರು ಬಿಟ್ಟೆ. ಬೋಳುಗುಡ್ಡೆಯಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಗಿಡಗಳಿದ್ದವು. ಒಂದೇ ಒಂದು ನೆಲ್ಲಿಕಾಯಿ ಮರವಿಲ್ಲ. ನಾವು ನಾಟಿಕಲ್ಲಿನ ಸಮೃದ್ಧಿ ನೆಲ್ಲಿಕಾಯಿ ಮರಗಳನ್ನು ನೆನಪಿಸಿಕೊಂಡವು.

‘ನಮ್ಮ ಎಡಬದಿಯದ್ದು ಕನಕಕೋಡಿ. ಬಲ ಭಾಗದ್ದು ಮಾಪ್ರೆ ಪ್ರದೇಶ’ ಎಂದು ಬಾಲ ಹೇಳಿದ. ಬಲಬದಿಯ ಬೋಳು ಪ್ರದೇಶದ ಅಂಚಿನುದ್ದಕ್ಕೂ ಭಯಾನಕ ಪ್ರಪಾತ. ಇಳಿಜಾರಿನಲ್ಲಿ ದಟ್ಟವಾದ ವನಸಿರಿ. ಅಷ್ಟು ಎತ್ತರದಿಂದ ಅಂತಹ ಸಸ್ಯ ಸಂಪತ್ತನ್ನು ನೋಡುವುದೇ ಒಂದು ಸೌಭಾಗ್ಯ. ಎಡಬದಿಯಲ್ಲಿ ಹಾದಿಯ ಪಕ್ಕದಲ್ಲಿ ಕೆಲವು ಮರಗಳು. ಅವುಗಳ ಎಡೆಯಿಂದ ಕಾಣುವ ಪ್ರಪಾತ. ಅಲ್ಲಲ್ಲಿ ಮುಳ್ಳು ಹಂದಿಗಳ ಮಾಟೆಗಳು. ಕೆಲವು ದೊಡ್ಡ ಮಾಟೆಗಳೂ ಕಾಣಿಸಿದವು. ಅವುಗಳೊಳಗೆ ಕಿರುಬವೋ, ಚಿರತೆಯೋ, ಹುಲಿಯೋ ಇರಬಹುದು.

ಮುಂದುವರಿದಾಗ ಸಿಕ್ಕಿದವು ಹಾದಿಯ ಇಕ್ಕೆಲಗಳಲ್ಲಿ ಎರಡು ಬಂಡೆಗಳು. ‘ಇವು ಅಜ್ಜ ಅಜ್ಜಿ ಬಂಡೆಗಳು. ಎಡಭಾಗದ ಪ್ರಪಾತ ಅಜ್ಜಿ ಮೂತ್ರ ಹೊೈದು ಆದದ್ದಂತೆ. ಬಲ ಭಾಗದ್ದು ಅಜ್ಜಮ ಮೂತ್ರದ ಪ್ರಭಾವದ್ದಂತೆ’ ಬಾಲ ವಿವರಿಸಿದ. ನನ್ನ ಹುಬ್ಬುಗಳು ಮೇಲೇರಿದವು. ‘ಈ ಅಜ್ಜ, ಅಜ್ಜಿ ಯಾರೆಂದು ನಿನಗೆ ಗೊತ್ತಾ?’ ಬಾಲ ತಲೆಯಾಡಿಸಿದ. ‘ಇಲ್ಲ ಸರ್‌. ನನ್ನಜ್ಜ ಹೇಳಿದ್ದನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಹಳೆಯ ಕತೆಗಳನ್ನೆಲ್ಲಾ ಈಗ ಯಾರು ನಂಬುತ್ತಾರೆ? ನಂಬುವುದೇ ಇಲ್ಲವೆಂದಾದ ಮೇಲೆ ಯಾಕೆ ನೆನಪಿಟ್ಟುಕೊಳ್ಳುತ್ತಾರೆ ?

ಅಲ್ಲಿಂದ ಮುಂದಿನದು ವಸ್ತುಶಃ ರಿಜ್‌ವಾಕು. ಎಡ ಬಲ ಎರಡೂ ಕಡೆ ಪ್ರಪಾತಗಳು. ಅಜ್ಜ ಅಜ್ಜಿಯರ ಮೂತ್ರದ ಶಕ್ತಿಯೇ! ಮಧ್ಯದಲ್ಲಿ ಕೆಲವು ಕಡೆ ಕೇವಲ ಒಂದಡಿಯ ಹಾದಿ. ಆಳ ಕಂದರ ಕಂಡಾಗ ತಲೆತಿರುಗಿದರೆ ರೊಯ್ಯಯೆಂದು ಕೆಳಕ್ಕೆ. ನಮ್ಮದು ನಿಜಕ್ಕೂ ಸಾಹಸ. ಇದನ್ನು ಚಿತ್ರೀಕರಣ ಮಾಡುತ್ತಿದ್ದಾನಲ್ಲಾ ಲೀಲಾಳ ಅಣ್ಣ ಸೀತಾರಾಮ. ಅವನದು ಇನ್ನೂ ದೊಡ್ಡ ಸಾಹಸ. ಬೆಳಗ್ಗೆ ಐದಕ್ಕೆ ಎದ್ದು ಅರಂತೋಡಿನಿಂದ ಅವನು ರೋಹನ್‌ ಜತೆ ಬೈಕಲ್ಲಿ ಬಂದಿದ್ದ ಗದಗುಟ್ಟುವ ಚಳಿಗೆ. ಅಪಾಯಕಾರಿಯಾದ ಏರುವ ಮತ್ತು ಇಳಿಯುವ ಹಾದಿಗಳಲ್ಲಿ ಅವನು ಅವನೊಡನೆ ವೀಡಿಯೋವನ್ನೂ ರಕ್ಷಿಸಬೇಕಿತ್ತು. ರೋಹನ್‌ ಕ್ಯಾಮರಾವನ್ನು ಕಾಪಾಡಬೇಕಿತ್ತು. ಸೀತಾರಾಮನ ಭಾಗ್ಯ. ಎಂತಹ ರೋಮಾಂಚಕಾರೀ ದೃಶ್ಯಗಳು ಅವನ ಕ್ಯಾಮರಾದೊಳಗೆ ಅಡಗಿವೆ. ಅದರೊಳಗೆ ನಾವೂ ಇದ್ದೇವೆ!

ತೀರಾ ಇತ್ತೀಚೆಗೆ ಲೀಲಾಳ ಪ್ರಥಮ ಕವನ ಸಂಕಲನ ನಮ್ಮ ಕಾಲೇಜಲ್ಲಿ ಕವಿ ಕಿರಣರಿಂದ ಬಿಡುಗಡೆಯಾಗಿತ್ತು. ಅವಳೀಗ ಕಾಲೇಜಲ್ಲಿ ಒಂದು ‘ಜನ’ ಆಗಿದ್ದಳು. ಅಂಥದ್ದೇನನ್ನೂ ಮಾಡಲಾಗದ ಪಡ್ಡೆಗಳು ‘ನಮ್ಮ ಹೆಸರು ಪ್ರಿಂಟಾಗುವುದು ಯಾವಾಗ ಸರ್‌’ ಎಂದು ಕೇಳಿದ್ದರು. ‘ಹೆದರಬೇಡಿ. ಎರಡು ಸಲ ಪ್ರಿಂಟಾಗುವ ಸಂಭವವಿದೆ. ಸಾಂಪ್ರದಾಯಿಕ ಮದುವೆಯಾದರೆ ಆಮಂತ್ರಣ ಪತ್ರದಲ್ಲಿ ಮೊದಲ ಸಲ. ನೀವು ದೇಶಕ್ಕಿತ್ತ ಕೊಡುಗೆಗಳಿಗೆ ಮನಸ್ಸಾದರೆ ಶಿವನ ಪಾದ ಸೇರಿದ ಕೆಲವು ದಿನಗಳಲ್ಲಿ ಎರಡನೇ ಸಲ’ ಎಂದಿದ್ದೆ. ಅದನ್ನು ನೆನಪಿಸಿಕೊಂಡು ದೇವರಾಜ ಹೇಳಿದ. ‘ಈಗ ನೀವು ನಮ್ಮ ಸಾಹಸದ ಬಗ್ಗೆ ಪುಸ್ತಕ ಬರಿಯುತ್ತೀರಲ್ಲ ಸರ್‌. ಅದರಲ್ಲಿ ನಮ್ಮ ಹೆಸರು ಇದ್ದೇ ಇರುತ್ತದೆ.’ ನಕಲಿ ಶ್ಯಾಮ ಜೋಕು ಹಾರಿಸಿಯೇ ಬಿಟ್ಟ. ‘ಲೀಲಾ ಅವಕಾಶ ಕೊಡಲಿಲ್ಲ. ನಿಮ್ಮ ಪುಸ್ತಕವನಾನದರೂ ನಾನೇ ಬಿಡುಗಡೆ ಮಾಡುತ್ತೇನೆ ಸರ್‌.’

ತಂಡದ ನಗು ಮುಗಿಲು ಮುಟ್ಟಿತು.’ ಮೊದಲು ಪುಸ್ತಕವನ್ನು ದುಡ್ಡು ಕೊಂಡು ಓದು. ಮತ್ತೆ ಬರೆಯಲು ಕಲಿ. ಮುಂದೊಂದು ದಿನ ನಿನ್ನಿಂದ ಪುಸ್ತಕ ಬಿಡುಗಡೆ ಮಾಡಿಸುವ ಬಲಿಪಶುವೊಂದನ್ನು ತಲಾಶ್‌ ಮಾಡು.’ ಪಡ್ಡೆಗಳು ಈಗ ಒಟ್ಟಾಗಿ ಭೀಷ್ಮ ಪ್ರತಿಜ್ಞೆ ಮಾಡಿದವು. ‘ಮೊದಲು ಪುಸ್ತಕ ಹೊರಬರಲಿ ಸರ್‌. ಕೊಂಡು ಓದುವುದು ಮಾತ್ರವಲ್ಲ. ಒಂದೇ ಒಂದು ಪ್ರತಿ ಉಳಿಯದಂತೆ ನೋಡಿಕೊಳ್ಳುತ್ತೇವೆ. ‘ ಆಗ ನೆನಪಾಯಿತು ನನಗೆ ಈ ಟಿ. ವಿ. ಯ ಮುಕ್ತದ ಕೋರ್ಟು ದೃಶ್ಯ.

ಸತ್ಯವನ್ನೇ ಹೇಳುತ್ತೇನೆ

ಸತ್ಯವನನಲ್ಲದೆ ಬೇರೇನನ್ನೂ ಹೇಳುವುದಿಲ್ಲ

ನಾನು ಹೇಳುವುದೆಲ್ಲಾ ಸತ್ಯ.

ಈ ನಕಲೀ ಶ್ಯಾಮ ಮೊನ್ನೆ ಕೊಲ್ಲಾಪುರಕ್ಕೆ ಎನ್‌. ಸಿ. ಸಿ. ಕ್ಯಾಂಪಿಗೆ ಹೋಗಿದ್ದ. ಇವನು ಅನುಭವಗಳನ್ನು ತರಗತಿಯಲ್ಲಿ ಹೇಳುವಾಗ ನಮಿತಾಳ ಪ್ರವೇಶವಾಯಿತು. ಅವಳ ಮನೆ ನನ್ನ ಕಾಲಿಗೆಲ್ಲಾದರೂ ಕಚ್ಚಿದರೆ ನನ್ನ ಕತೆ ಮುಗಿಯಿತು. ಎಚ್ಚರಿಕೆಯಿಂದ ಏರಿದೆ. ಅಲ್ಲಲ್ಲಿ ಜಾರಿದೆ.’ಕೈ ಹಿಡಿದು ಕೊಳ್ಳಬೇಕಾ ಸರ್‌’ ಎಂದು ವಶಿಷ್ಠ ಕೇಳುತ್ತಿದ್ದ. ಹ್ಯಾವರ್‌ಸ್ಯಾಕಿನಿಂದಾಗಿ ಭುಜ ನೋಯುತ್ತಿತ್ತು. ಆದರೂ ವಶಿಷ್ಠನ ಕೈ ಹಿಡಿದುಕೊಳ್ಳಲಿಲ್ಲ. ‘ನೋಡಲ್ಲಿ. ಅವರಿಗಿಂತ ನಾನು ಬೆಟರ್‌’ ಎಂದೆ. ಜಾಲಿಯ ತಂಡ ಇನ್ನೂ ಸಾಕಷ್ಟು ಕೆಳಗಿತ್ತು.

ಕೊನೆಗೂ ಸಾಧಿಸಿಬಿಟ್ಟೆ. ನಾನೀಗ ಅಜ್ಜಿ ಬೆಟ್ಟದ ಮೇಲಿದ್ದೆ. ನಮ್ಮ ಬಲಂಭಾಗದಲ್ಲಿ ಚೆಲ್ಲಿಕೊಂಡಿತ್ತು ಕಲ್ಮಕಾರು, ಕೂಜುಮಲೆ,ಪ್ರದೇಶ. ಏನು ಹಸಿರು! ಭೂಮಿತಾಯಿ ತನ್ನ ಚೆಲುವನ್ನೆಲ್ಲಾ ಇಲ್ಲೇ ಕ್ರೋಢೀಕರಿಸಿಟ್ಟುಕೊಂಡಿದ್ದಾಳೆ.

ಎಲ್ಲಿ ಭೂರಮೆ ದೇವಸನ್ನಿಧಿ

ಬಯಸಿ ಬಿಮ್ಮನೆ ಬಂದಳೊ ?

ಎಲ್ಲಿ ಮೋಹನ ಗಿರಿಯ ಬೆರಗಿನ

ರೂಪಿನಿಂದಲಿ ನಿಂದಳೊ ?

ಅದನ್ನು ನೋಡುವಾಗ ಮನಸ್ಸಿಗಾಗುವ ಆನಂದ ಹೆಚ್ಚಿನದೋ ಕಣ್ಣಿಗಾಗುವ ಧನ್ಯತೆ ಹೆಚ್ಚಿನದೋ ಎಂದು ಹೇಳಲಾಗುವುದಿಲ್ಲ. ಇಂಥದ್ದೊಂದು ಅವರ್ಣನೀಯ, ಅನುಪಮ ಸೌಂದರ್ಯವನ್ನು ಇಷ್ಟು ಎತ್ತರದಿಂದ, ಇಷ್ಟು ಜನರೊಟ್ಟಿಗೆ ಸವಿಯುವುದು ನಿಜಕ್ಕೂ ಭಾಗ್ಯ.

ಈಗ ವಿನೋದ ಒಂದಷ್ಟು ವಿಷಯ ತಿಳಿಸಿದ. ‘ಈ ಗುಡ್ಡದ ಬಗ್ಗೆ ಹಿರಿಯರು ಕತೆ ಹೇಳುತ್ತಿದ್ದರು. ಸಣ್ಣದಿರುವಾಗ ನಾನೂ ಅವುಗಳನ್ನು ನಂಬುತ್ತಿದ್ದೆ. ಇಲ್ಲಿ ಸುಮಾರು ಇಪ್ಪತೈದು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಎಡಕ್ಕೆ , ಬಲಕ್ಕೆ ಇರುವ ಕಾಡುಗಳಿಗೆ ಬೇರೆ ಬೇರೆ ಹೆಸರುಗಳಿವೆ. ದೇವತ್ತಮಲೆ, ನೀರುಳ್ಳಿ ಮಲೆ, ಕೊಪ್ಪಟ್ಟಿ ಮಲೆಗಳೆಂದು ಇವುಗಳನ್ನು ಕರೆಯುತ್ತಾರೆ. ನೀರುಳ್ಳಿ ಮಲೆಯಲ್ಲಿ ಏಳು ಗಂಧರ್ವ ಕನ್ಯೆಯರಿದ್ದಾರಂತೆ. ಅವರು ಏಳು ದೇವಸ್ಥಾನಗಳಲ್ಲಿ ನೆಲೆಸಿದ್ದಾರಂತೆ. ಈ ಎಲ್ಲಾ ದೇವಾಲಯಗಳ ಒಡತಿ ಮಲೆ ಚಾಮುಂಡಿ. ಮಲೆ ಚಾಮುಂಡಿಯ ವಿಗ್ರಹ ವಿಶಿಷ್ಟ ದಿನಗಳಲ್ಲಿ ಶಬ್ದ ಹೊರಡಿಸುತ್ತಿತ್ತಂತೆ ಮತ್ತು ಸ್ವಲ್ಪ ಚಲಿಸುತ್ತಿತ್ತಂತೆ. ನೀರುಳ್ಳಿ ಮಲೆಯ ವೈಶಿಷ್ಟ್ಯವನ್ನು ಸಂಶೋಧಿಸಲು ಹೋದವರು ಯಾರೂ ಬದುಕಿ ಬಂದಿಲ್ಲವಂತೆ. ಒಮ್ಮೆ ಒಂದು ಹೆಲಿಕಾಪ್ಟರೇ ಇಲ್ಲಿ ಮಾಯವಾಗಿದೆಯಂತೆ.’

ನಾವೆಲ್ಲಾ ಆಸಕ್ತಿಯಿಂದ ಕೇಳುತ್ತಿದ್ದೆವು. ವಿನೋದ ಇನ್ನಷ್ಟು ಹುರುಪಿನಿಂದ ಹೇಳತೊಡಗಿದಃ ‘ನೀರುಳ್ಳಿಮಲೆ ಮತ್ತು ಕೊಪ್ಪಟ್ಟಿ ಮಲೆಗಳಲ್ಲಿ ಜನರಿಲ್ಲ. ಆದರೂ ಅಲ್ಲಿನ ದೇವಾಲಯಗಳಲ್ಲಿ ಬೆಳಗ್ಗೆ ಗಂಟೆಯ ನಾದ ಕೇಳಿಸುತ್ತದಂತೆ. ಅದನ್ನು ಕೇಳಿದವರು ಇನ್ನೊಬ್ಬರಿಗೆ ಹೇಳಿದರೆ ಸತ್ತೇ ಹೋಗುತ್ತಾರಂತೆ. ಅಲ್ಲಿರುವ ವಿಶಿಷ್ಟ ಜಾತಿಯ ಮರಗಳಿಗೆ ಹಗಲಲ್ಲಿ ಏಟು ಹಾಕಿದರೆ ರಾತ್ರೆ ಅಷ್ಟೇ ಬಾರಿ ಗಂಟೆಯ ಸ್ವರ ಏಟು ಹಾಕಿದವರಿಗೆ ಕೇಳಿಸುತ್ತದಂತೆ.’

‘ದೇವತ್ತ ಮಲೆಯಲ್ಲಿ ಏಲಕ್ಕಿ ಆಗುತ್ತದೆ. ಅದನ್ನು ಕೊಯ್ಯಲು ಜನರು ಬರುತ್ತಾರೆ. ಕೊಯಯ್ದದ ಬಳಿಕ ಯಾರೂ ಉಳಿಯುವಂತಿಲ್ಲ, ಅಲ್ಲಿಗೆ ಬರುವಂತೆಯೂ ಇಲ್ಲ. ಬಂದರ ಮನೆಗೆ ಹತ್ತಿರದಲ್ಲಿದೆ. ಅವಳಿಗೀಗ ಮದುವೆಯಾಗಿದೆ. ಪತಿಗೃಹವಿರುವ ಬೆಳ್ಳಾರೆಯಿಂದ ಬರುತ್ತಿದ್ದಾಳೆ. ಪತಿರಾಯರ ಹೆಸರು ಪ್ರಭಾಕರ. ನಮ್ಮ ಕಾಲೇಜಿನ ಹುಡುಗಿಯರ ಪೈಕಿ ಮದುವೆಯ ಬಳಿಕ ಓದು ಮುಂದುವರಿಸಿದವರು ನನ್ನ ಇಪ್ಪತ್ತೆಂಟು ವರ್ಷಗಳ ಅನುಭವದಲ್ಲಿ, ಮೂವರೋ, ನಾಲ್ವರೋ ಇರಬಹುದು. ನಮಿತಾಳ ಗಂಡ ಒಳ್ಳೆಯವನಾದುದಕ್ಕೆ ಇವಳ ಶಿಕ್ಷಣ ಮುಂದುವರಿಯುತ್ತಿದೆ. ನಕಲಿ ಶ್ಯಾಮನ ಅನುಭವ ಕಥನ ಸುದೀರ್ಘವಾಗಿ ಬೆಲ್ಲಾಗಲು ಐದು ನಿಮಿಷ ಇದೆಯೆನ್ನುವಾಗ ನಿಂತಿತು. ಇನ್ನೇನು ಪಾಠ ಮಾಡುವುದುಲು ಈಗ ನಮಿತಾಳಿಂದ ಅನುಭವ ಕಥನ’ ಎಂದೆ. ತರಗತಿಯಲ್ಲಿ ನಗುವೋ ನಗು. ನಮಿತಾ ಕೆನ್ನೆ ಕೆಂಪೇರಿಸಿಕೊಂಡು ಕೂತಿದ್ದಳು. ತರಗತಿಯ ನಗುವಿನ ಕಣಗಳನ್ನು ನೆನಪಿಸಿಕೊಳ್ಳುತ್ತಾ ನಾವು ಸಂತೋಷದಿಂದ ಪರ್ವತದ ನೆತ್ತಿಯ ಮೇಲೆ ಸಾಗಿದೆವು. ಸಂತೋಷಂ ಜನಯತೇ ಪ್ರಾಜ್ಞಃ .

‘ಅದು ಭೀಮನಗುಂಡಿ ಸರ್‌. ಅಲ್ಲಿ ವಜ್ರದ ನಿಕೇಪ ಇದೆ. ಅರಣ್ಯ ಇಲಾಖೆಯವರು ಕಾವಲು ಕಾಯುತ್ತಾರೆ. ಬೇಕಿದ್ದರೆ ಕೆಳಗಿಳಿದು ನೋಡಿಕೊಂಡು ಬರಬಹುದು. ಸುಮಾರು ಒಂದೂವರೆ ಗಂಟೆ ಬೇಕಾದೀತು’ ಎಂದು ಇನ್ನೊಬ್ಬ ಗೈಡ್‌ ಜಗದೀಶ ಹೇಳಿದ. ಅವನು ವಜ್ರ ಎಂದು ಹೇಳುತ್ತಿರುವುದು ಹರಳು ಕಲ್ಲುಗಳನ್ನು. ಎಡ ಭಾಗದಲ್ಲಿ ಕೂಜಿಮಲೆ ಪ್ರದೇಶದಲ್ಲೂ ಹರಳು ಕಲ್ಲುಗಳಿವೆ. ಭೀಮನ ಗುಂಡಿಯ ಹರಳು ಕಲ್ಲುಗಳನ್ನು ತಾಕತ್ತುಳ್ಳವರು ತೆಗೆದೂ ತೆಗೆದೂ ಶ್ರೀಮಂತರಾದರು. ಈಗ ಊರು ಕೊಳ್ಳೆ ಹೋದ ಮೇಲೆ ದಿಡ್ಡೀ ಬಾಗಿಲು ಹಾಕಿದ್ದಾರೆ. ಅಲ್ಲಿ ಎಡಭಾಗದಲ್ಲಿ ದೂರಕ್ಕೆ ಕಾಣಿಸುವ ಕೂಜಿಮಲೆಯಲ್ಲಿ ಅರಣ್ಯ ಇಲಾಖೆಯ ಕಾವಲೇನೋ ಇದೆ. ದಿನವೂ ಹರಳು ಕಲ್ಲು ಲೂಟಿ ನಡೆಯುತ್ತಲೇ ಇದೆ. ಭೀಮನ ಗುಂಡಿಗೆ ಇಳಿಯುವಾಗಿನ ಮೊಣಕಾಲು ನಡುಕವನ್ನು ಮತ್ತೆ ಆ ಎಂಬತ್ತು ಡಿಗ್ರಿ ಕೋನದ ಎತ್ತರಕ್ಕೆ ಏರಬೇಕಾದ ಸಂಕಷ್ಟವನ್ನು ನೆನೆದು ಭೀಮನ ಗುಂಡಿಗೆ ನಾವಿಳಿಯಲಿಲ್ಲ. ಬೆಟ್ಟದ ಮೇಲಿನಿಂದ ಅಲ್ಲಿಗೆ ಇಳಿಯುವವರಿಗೆ ನಿಜಕ್ಕೂ ಬೇಕು ಭೀಮನಗುಂಡಿಗೆ.

ಅಜ್ಜಿಯ ಗುಡ್ಡ ಮತ್ತೊಂದಷ್ಟು ಐತಿಹ್ಯ

ನಮ್ಮ ತಂಡ ಮುಂದುವರಿಯಿತು. ಒಂದಷ್ಟು ದೂರ ಕ್ರಮಿಸಿದಾಗ ಎದುರಾಯಿತು ಒಂದು ಕಡಿದಾದ ಗುಡ್ಡ. ಅದರ ತುದಿಯಲ್ಲಿ ಎರಡು ಕೋಡುಗಲ್ಲುಗಳು. ನಮ್ಮ ಗೈಡುಗಳು, ಶಿವಪ್ರಸಾದ, ಶ್ರೀರಾಜ, ಮೂವರು ಕಮಲಾಕರು, ದೇವರಾಜ, ಪುರುಷ ಮತ್ತಿತರರು ಅದನ್ನು ಏರಿ ಬಂಡೆಯ ನೆರಳಲ್ಲಿ ವಿಶ್ರಾಂತಿ ಪಡೆಯ ತೊಡಗಿದರು. ಗುಡ್ಡದ ತುದಿಯವರೆಗೂ ವ್ಯಾಪಿಸಿರುವ ಮೊಣ ಕಾಲೆತ್ತರದ ಹುಲ್ಲಿನಿಂದಾಗಿ ಏರುವಾಗ ಕಾಲು ಜಾರುತ್ತಿತು. ಆಗ ಆಧಾರಕ್ಕೆ ಹುಲ್ಲನ್ನೇ ಹಿಡಿದುಕೊಳ್ಳಬೇಕು. ಆ ಹುಲ್ಲ ನಡುವೆ ಅಲ್ಲಲ್ಲಿ ಕಾಡೆಮ್ಮೆ ಕಾಡುಕೋಣಗಳ ಸೆಗಣಿ. ಹಾವೂ ಇರಬಹುದು ಅ ನಮ್ಮ ತಂಡದ ಕೆಲವು ಹುಡುಗರು ಎನ್‌ಸಿಸಿ ಬೂಟು ಹಾಕಿಕೊಂಡು ಬಂದಿದ್ದರು. ಆ ಬೂಟಿಗೆ ಕಚ್ಚಿದರೆ ಬಡಪಾಯಿ ಹಾವಿನ ಹಲ್ಲು ಉದುರೀತು. ನನ್ನದು ಚಪ್ಪಲು.

ಅಲ್ಲಿರುವ ಮಲೆಭೂತಗಳು ಅವರನ್ನು ರಕ್ತ ಕಾರುವಂತೆ ಮಾಡಿ ಕೊಂದು ಬಿಡುತ್ತವೆ. ಧೈರ್ಯವಂತನೊಬ್ಬ ಒಂದು ಬಾರಿ ಏಲಕ್ಕಿ ಕೊಯ್ಲಯಿನ ನಂತರ ಅಲ್ಲಿಗೆ ಬಂದು ಬಿಟ್ಟ. ಅವನನ್ನು ಮಲೆಭೂತಗಳು ಅಟ್ಟಿಸಿಕೊಂಡು ಬಂದವು. ಅವನು ಮಲೆ ಚಾಮುಂಡಿಯಲ್ಲಿ ರಕ್ಷಿಸೆಂದು ಮೊರೆಯಿಟ್ಟ. ಅವಳು ಅಜ್ಜಿಯ ರೂಪದಲ್ಲಿ ಕಾಣಿಸಿಕೊಂಡು ಅವನನ್ನು ಮಲೆ ಭೂತಗಳಿಂದ ಪಾರು ಮಾಡಿದಳು. ಅದಕ್ಕೇ ಇದು ಅಜ್ಜಿಯ ಗುಡ್ಡೆಯಾಯಿತಂತೆ.

ವಿನೋದ ಮಾತು ನಿಲ್ಲಿಸಿದ. ಮಲೆಚಾಮುಂಡಿ ಎಂದರೆ ಪಾರ್ವತಿ. ಅವಳು ಅಜ್ಜಿ. ಅವಳ ಗಂಡ ಶಿವನೇ ಅಜ್ಜ. ಹಾಗಾದರೆ ಇಲ್ಲಿ ಶಿವ ಪಾರ್ವತಿಯರಿದ್ದರೆಂದು ಜನ ನಂಬಿದ್ದರು. ತೊಡಿಕ್ಕಾನದಲ್ಲಿ ಮಲ್ಲಿಕಾರ್ಜುನನಿದ್ದಾನೆ. ಇಲ್ಲಿ ಅಜ್ಜಅಜ್ಜಿ ರೂಪದಲ್ಲಿ ಶಿವ ಪಾರ್ವತಿಯರು. ಎವರೆಸ್ಟ್‌ ಶಿಖರ ಏರಿದಾಗ ತೇನಸಿಂಗ ಶಿವಪಾರ್ವತಿಯರು ಎಲ್ಲಾದರೂ ಕಾಣಸಿಕ್ಕಾರೇ ಎಂದು ಹುಡುಕುತ್ತಿದ್ದನಂತೆ. ಈ ಅಜ್ಜಿ ನಮಗೂ ಒಮ್ಮೆ ಮುಖ ತೋರಿಸಬಾರದಿತ್ತೆ!

ಈಗ ಮೊಬೈಲನ್ನು ಹೊರತೆಗೆದೆ. ಸಂಪಾಜೆ, ಉಪ್ಪಿನಂಗಡಿ, ಕಡಬ, ಪುತ್ತೂರು ಮತ್ತು ಗುರುವಾಯನಕೆರೆ ರೇಂಜುಗಳು ಸಿಗತೊಡಗಿದವು. ಶೈಲಿಗೊಂದು ಕರೆ ಮಾಡಿ ಅಜ್ಜಿ ಗುಡ್ಡದಿಂದ ಕಾಣುವ ಪ್ರಕೃತಿಯನ್ನು ವರ್ಣಿಸಿದೆ. ಅವಳು ಇತ್ತೀಚೆಗೆ ಒಂದಷ್ಟು ಸ್ಕೌಟು ಗೈಡುಗಳನ್ನು ಹರಿದ್ವಾರಕ್ಕೆ ಕರಕೊಂಡು ಹೋದವಳು ಡೆಹ್ರಾಡೂನ್‌, ಕುಲು, ಮನಾಲಿ ನೋಡಿಕೊಂಡು ಬಂದಿದ್ದಳು. ಆದರೂ ಪತಿರಾಯರ ಮಾತುಗಳಿಗೆ ಮೆಚ್ಚುಗೆ ಸೂಚಿಸದಿದ್ದರೆ ಹೇಗೆ! ಅಲ್ಲಿಂದ ಏಳಲು ಯಾರಿಗೂ ಮನಸ್ಸು ಬರುತ್ತಿಲ್ಲ. ಮಾತುಗಳು ಮತ್ತು ಹಾಡುಗಳು. ಕುಣಿಯಲು ಕಾಲು ಬರುತ್ತಿಲ್ಲ .

ಕಾಂತಮಂಗಲದ ವಿನಯನೆಂದ ‘ಅವ ಪರಮ ಬೋದಾಳ ಸರ್‌. ಮೂರು ಚಾರಣಕ್ಕೆ ಬಂದವ ಈ ಸಾಹಸ ತಪ್ಪಿಸಿಕೊಂಡ.ಇವನು ಮಡಪ್ಪಾಡಿ ಪ್ರವೀಣನ ಬಗ್ಗೆ ಹೇಳುತ್ತಿದ್ದಾನೆ. ಅವನಿಗೇನಾಗಿದೆ ದಾಡಿ’ ‘ಕಾಲು ನೋವಂತೆ. ಅಪ್ಪ ಅಕ್ಕನ ಮನೆಗೆ ಹೋಗುತ್ತಾರಂತೆ , ತಾಯಿಗೆ ಸೌಖ್ಯವಿಲ್ಲವಂತೆ, ತೋಟದ ಕೆಲಸವಂತೆ’ ಎಂದು ಅವನ ಗೈರಿಗೆ ನಾಲ್ಕು ಕಾರಣಗಳನ್ನು ವಿನಯ ನೀಡಿದ್ದ. ಒಂದೇ ಕಾರಣ ಹೇಳುತ್ತಿದ್ದರೆ ನಾನೂ ನಂಬುತ್ತಿದ್ದೆ. ಮನೆಯಲ್ಲಿ ಮೂರು ವರ್ಷ ಭೂಮಿಗೆ ಭಾರವಾಗಿ ಕಾಲ ಕಳೆದ ಮಡಪ್ಪಾಡಿ ಅಕ್ಕನೊಡನೆ ಆಗಾಗ ಮನೆಗೆ ಬರುತ್ತಿದ್ದ. ಗುರುಗಳಿಗೆ ಹಣ್ಣು ಹಂಪಲು ತರುತ್ತಿದ್ದ. ಅಂತಿಮ ಬಿ. ಎ. ಗೆ ಬಂದಾಗ ತೀರಾ ಬದಲಾಗಿಬಿಟ್ಟ. ಅವನ ವಿರುದ್ಧ ದೂರುಗಳು ಬರುತ್ತಿದ್ದವು. ಈಗವನು ಗುರುಗಳ ಮನೆಗೆ ಖಾಲಿ ಕೈಯಲ್ಲಿ ಬರುವಷ್ಟು ಪ್ರಗತಿ ಹೊಂದಿದ್ದ ಅ ಫೋನಲ್ಲಿ ಶುಭಾಶಯ ಹೇಳುವ ಬದಲು ಮೆಸ್ಸೇಜು ಕಳಿಸುವಷ್ಟರ ಮಟ್ಟಕ್ಕೆ ಮುಂದುವರಿದಿದ್ದ. ಅವನಿಗೆ ಕೋಯನಾಡಿನಿಂದಲೇ ಒಂದು ಮೆಸ್ಸೇಜು ಕಳಿಸಿ ಮಿಸ್‌ಕಾಲ್‌ ಮಾಡಿದ್ದೆ . ಅವ ಉತ್ತರಿಸಲಿಲ್ಲ. ಅವನ ಜುಗ್ಗತನಕ್ಕೆ ಫೋನು ಬೇರೆ ಕೇಡು ಎಂದು ಸುಮ್ಮನಾಗಿದ್ದೆ. ಆದರೆ ವಿನಯ ಗೋಗರೆದ. ‘ ಒಂದು ಕಾಲ್‌ ಮಾಡಿಬಿಡಿ ಸಾರ್‌.’  ನಾನು ಗುಂಡಿಯೊತ್ತಿದೆ. ಮಡಪ್ಪಾಡಿ ಇನ್ನೂ ಒಂದಷ್ಟು ಸುಳ್ಳು ಪೋಣಿಸುತ್ತಾ ಹೋದ. ‘ನಿಲ್ಲಿಸು ನಿನ್ನ ಪುರಾಣ ಮಂಗ. ಗುರುಗಳಿಗೆ ಫೋನು ಮಾಡುವಾಗ ನಿನ್ನ ಹಣ ಖರ್ಚಾಗುತ್ತದಲ್ಲಾ? ಯಾರ್ಯಾರೋ ಹುಡುಗಿಯರಿಗೆ ಫೋನು ಮಾಡುತ್ತಿರುತ್ತೀಯಂತೆ ! ಮುಠ್ಠಾಳ. ಗುರುಗಳಲ್ಲಿ ಪ್ರೀತಿ ಇದ್ದರೆ ನೀನೇ ಫೋನು ಮಾಡು’ ಎಂದೆ.

ಇವ ಮೊನ್ನೆ ಕಾಲೇಜುಡೇಯ ಮುನ್ನಾದಿನ ಪಿ. ಯು. ಸಿ. ತರಗತಿಗೆ ಹೋಗಿ ಏನೋ ಅಧಿಕ ಪ್ರಸಂಗ ಮಾಡಿ ಬಂದಿದ್ದ. ಅದು ಗೊತ್ತಾಗಿ ಮಡಪ್ಪಾಡಿಯನ್ನು ಕರೆದು ಸಹಸ್ರ ನಾಮಾರ್ಚನೆ ಮಾಡಿದ್ದೆ. ುದಮ್ಮಯ್ಯ ಸರ್‌ ಅಕ್ಕನಿಗೊಂದು ಹೇಳಬಿಡಬೇಡಿು ಎಂದು ಕೈ ಮುಗಿದಿದ್ದ . ಅವನ ಅಕ್ಕ ುಪ್ರವೀಣ ಏನು ಮಾಡಿದರೂ ನನಗೆ ತಿಳಿಸಬೇಕು ಸರ್‌. ನನಗೆ ಎಂ. ಎ. ಮಾಡಲಾಗಲಿಲ್ಲ. ಅವನಾದರೂ ಎಕನಾಮಿಕ್ಸ್‌ ಎಂ. ಎ. ಮಾಡಬೇಕು. ಪಿಎಚ್‌ಡೀ ನೂ ಮಾಡಬೇಕು’ ಎಂದು ನನ್ನೆದುರು ಕನಸುಗಳನ್ನು ಬಿಚ್ಚಿದ್ದಳು. ಮೊನ್ನೆಯ ಎಡವಟ್ಟಿನಿಂದಾಗಿ ಇವ ಮಾನಸಿಕವಾಗಿ ಕುಗ್ಗಿಹೋಗಿದ್ದಾನೆ. ಅದಕ್ಕೇ ಚಾರಣ ತಪ್ಪಿಸಿಕೊಂಡಿದ್ದಾನೆ.

ಮಡಪ್ಪಾಡಿಯ ಫೋನು ಬಂತು. ನಮ್ಮ ತಂಡದ ವಿನಯ, ಜಾಲಿ, ವಶಿಷ್ಠ, ಶ್ರೀರಾಜ, ಪಾವನ ಕೃಷ್ಣ ಹೀಗೆ ಒಬ್ಬರಾದ ಮೇಲೊಬ್ಬರು ಮಾತಾಡತೊಡಗಿದರು. ‘ಪಿಟ್ಟಾಸಿ ಮಡಪ್ಪಾಡಿಗೆ ಇನ್ನೂರಾದರೂ ಖರ್ಚಾಗಬೇಕು’ ಎಂದು ವಿನಯ ಎಲ್ಲರನ್ನೂ ಮಾತಾಡುವಂತೆ ಪ್ರೇರೇಪಿಸುತ್ತಿದ್ದ. ಪಾಠ ಒಂದನ್ನು ಬಿಟ್ಟರೆ ಮತ್ತೆಲ್ಲಾ ವಿಷಯಗಳಲ್ಲಿ ಮಡಪ್ಪಾಡಿ ನಿಜಕ್ಕೂ ಪ್ರವೀಣನೇ. ಅವನೇ ಲೈನು ಕಟ್ಟುಮಾಡಿದ. ಅವನ ಮನಸ್ಸು ಮಾತ್ರ ತಹತಹಿಸ ತೊಡಗಿರಬೇಕು. ನನಗೆ ಚಿತ್ರವಿಚಿತ್ರ ಮೆಸ್ಸೇಜುಗಳನ್ನು ಮತ್ತು ರಿಂಗ್‌ ಟೋನುಗಳನ್ನು ಕಳುಹಿಸತೊಡಗಿದ. ಒಂದು ರಿಂಗ್‌ ಟೋನನ್ನು ಎಲ್ಲರಿಗೂ ಕೇಳಿಸಿದೆ.’ ದಂಡ ಪಿಂಡಗಳೂ…. ಅ’

ಅಜ್ಜಿ ಗುಡ್ಡೆಯಿಂದ ಹೊರಡಲು ಯಾರಿಗೂ ಮನಸ್ಸಿಲ್ಲ. ‘ಇಲ್ಲೇ ಇದ್ದು ಬಿಡೋಣವಾ ಸರ್‌’ಎಂದು ವಶಿಷ್ಠ ಯಾಚಿಸುತ್ತಿದ್ದ. ಚೊಕ್ಕಾಡಿ ವಿನಯ ‘ಬರುವ ವರ್ಷದ ಬ್ಯಾಚನ್ನು ಹೀಗೆ ಕರಕೊಂಡು ಹೋಗುತ್ತೀರಾ ಸರ್‌’ ಎಂದು ಕೇಳಿದ. ಇಂಥದ್ದೊಂದು ಅನುಭವ ಈ ಬ್ಯಾಚಿಗೆ ಮಾತ್ರವೇ ದಕ್ಕಬೇಕೆಂಬ ಬಯಕೆ ಅ ‘ಇನ್ನೊಮ್ಮೆ ಈ ದಾರಿಯಲ್ಲಿ ಬಂದೇನೆಂಬ ಧೈರ್ಯ ನನಗಿಲ್ಲ. ಹೋದರೂ ಬೇರೆ ಗುಡ್ಡಗಳಿಗೆ. ಕಳೆದ ವರ್ಷ ನಿಮ್ಮನ್ನೆಲ್ಲಾ ನೋಡುವಾಗ ಈ ಸಲಗಗಳು ಸಾಕಿದಾನೆಗಳಂತಾದರೆಂದು ನಾನು ಭಾವಿಸಿರಲಿಲ್ಲ. ಈಗ ನೋಡಿ ನನ್ನೆದುರಾದರೂ ಒಳ್ಳೆಯವರಂತೆ ವರ್ತಿಸುವಷ್ಟು ಸಂಸ್ಕಾರವಂತರಾಗಿದ್ದೀರಿ. ಅಂತಿಮ ಬಿ. ಎ. ಗೆ ಬಂದಾಗ ಸಾಧಾರಣವಾಗಿ ಎಲ್ಲರೂ ಬದಲಾಗುತ್ತಾರೆ. ಒಳ್ಳೆಯತನದಿಂದ ಮಾತ್ರ ಸಂತೋಷಪಡಲು ಸಾಧ್ಯ ‘ಎಂದೆ. ‘ಈಗ ನಮ್ಮಷ್ಟು ಒಳ್ಳೆಯವರು ಯಾರೂ ಇಲ್ಲ ಸರ್‌’ ಎಂದು ರವಿರಾಜ ಹೇಳಿಯೇ ಬಿಟ್ಟ.

ಗಾಳಿಬೀಡಿನ ಪೂಮಲೆ ಮೇದಪ್ಪ

ನಿಧಾನವಾಗಿ ಗುಡ್ಡವಿಳಿದು ಮುಂದಕ್ಕೆ ಸಾಗಿದಾಗ ಬಲಭಾಗದಲ್ಲಿ ಗೋಚರಿಸಿತು ದೇವರಕೊಲ್ಲಿ ರಸ್ತೆ. ಅದರಲ್ಲಿ ಪ್ರಯಾಣಿಸುವಾಗ ಅದೆಷ್ಟು ಬಾರಿ ಈ ಬೆಟ್ಟ ಗುಡ್ಡಗಳನ್ನು ಕಚ್ಚಾ ರಸ್ತೆ ಇದೆ. ಎಡಬದಿಯಲ್ಲಿ ಸರಕಾರದ ಗಾಳಿಗಿಡ ಪ್ಲಾಂಟೇಶನ್ನು. ಬಲಬದಿಯಲ್ಲಿ ದೇವರಕೊಲ್ಲಿ ಮದೆನಾಡು ಮಧ್ಯದ ದಟ್ಟ ಅರಣ್ಯ ಮತ್ತು ಪ್ರಪಾತ. ಪ್ಲಾಂಟೇಶನಿನ್ನಲ್ಲಿ ದನ ಮೇಯಿಸಿಕೊಂಡಿದ್ದ ಹೆಂಗಸೊಬ್ಬಳು’ ಮಡಿಕೇರಿಗಿನ್ನು ಆರೇ ಕಿಲೋಮೀಟರು’ ಎಂದಳು. ನಾವು ಹಾಯಾಗಿ ಉಸಿರಾಡಿದೆವು.

ನಮ್ಮ ಗೈಡುಗಳು, ಸೀತಾರಾಮ ಮತ್ತು ರೋಹನ್‌, ಕಮಲಾಕ ತ್ರಯರು, ಪ್ರವೀಣದ್ವಯರು, ನವೀನ, ಚಂದ್ರಜಿತ್‌, ಯತಿರಾಜ, ರವಿರಾಜ, ಶ್ರೀರಾಜ, ರಂಜನ್‌, ವಿನೋದ್‌, ಅಸೀಪ್‌, ಸುಬ್ರಹ್ಮಣ್ಯ, ವಿನೋದ್‌ ಜಯಪ್ರಕಾಶ್‌, ಪ್ರದೀಪ, ಪುರುಷ, ಲೋಕೇಶ್‌, ನಮಗಿಂತ ಮುಂದೆ ಹೋಗಿಬಿಟ್ಟರು.ನಾನು ಮತ್ತು ಪಾವನಕೃಷ್ಣ, ಶಿವಪ್ರಸಾದ್‌, ಶ್ರೀವತ್ಸ, ಚೇತನ್‌, ಗೀರೀಶ, ಸುನೀಲ್‌, ಜಾಲಿ, ವಿನಯದ್ವಯರು ಹಿಂದುಳಿದು ಬಿಟ್ಟೆವು. ಕವಲೊಡೆದ ಹಾದಿ ಸಿಕ್ಕಿತು. ಎಡಬದಿಯ ಹಾದಿಯಲ್ಲಿ ಸೊಪ್ಪು ಮತ್ತು ಬಾಣದ ಗುರ್ತು. ಆ ಹಾದಿಯಲ್ಲಿ ಮುಂದುವರಿದಾಗ ಮನೆಯೊಂದು ಎದುರಾಯಿತು.’ ಇದು ಗಾಳಿ ಬೀಡಿಗೆ ಹೋಗುವ ರಸ್ತೆ’ ಎಂದು ಮನೆ ಮಂದಿ ಹೇಳಿದಾಗ ನಾವು ಮುಖ ಮುಖ ನೋಡಿಕೊಂಡೆವು. ದಾರಿ ತಪ್ಪಿಸಿದ ಬೃಹಸ್ಪತಿಗೆ ವಶಿಷ್ಠ ಮತ್ತು ಪಾವನ ವಾಚಾಮ ಗೋಚರ ಬೈದರು.

ಆಗ ‘ನಿಮಗೆ ಎಲ್ಲಿಗೆ ಹೋಗಬೇಕು ಮಕ್ಕಳೇ’ ಎಂಬ ಆಪ್ಯಾಯಮಾನ ಸ್ವರ ಕೇಳಿ ಆವು ತಿರುಗಿ ನೋಡಿದೆವು. ಕುಳ್ಳು, ಸದೃಢ ಆಕೃತಿಯ ಆರುವತ್ತು ದಾಟಿದ ಅಜ್ಜ ನಿಂತಿದ್ದರು. ‘ಮಡಿಕೇರಿಗಾದರೆ ನೀವು ಈ ಗಾಳಿಬೀಡು ಗುಡ್ಡ ಏರಬೇಕು’ ಎಂದು ಕೈ ತೋರಿಸಿದರು. ನನ್ನ ಜಂಘಾಬಲ ಉಡುಗಿತು. ಹಿಂದೆ 1960ರ ದಶಕದ ಉತ್ತರಾರ್ಧದಲ್ಲಿ ಉಜಿರೆಯಲ್ಲಿ ನಾನು ಹೈಸ್ಕೂಲು ಓದುತ್ತಿದ್ದಾಗ ತಿಂಗಳಿಗೊಮ್ಮೆ ಶಿಶಿಲಕ್ಕೆ ನಡೆದುಕೊಂಡೇ ಹೋಗುತ್ತಿದ್ದೆ. ಏನಿಲ್ಲವೆಂದರೂ ಇಪ್ಪತೈದು ಕಿಲೋಮೀಟರ್‌ ದೂರದ ಭಯಾನಕ ಕಾಡ ಹಾದಿ. ಒಂದು ಬಾರಿ ದಾರಿ ತಪ್ಪಿ ಆಲೆದೂ ಆಲೆದೂ, ಕಂಗಾಲಾಗಿ ಅರಣ್ಯರೋದನ ಮಾಡಿ, ನಡುರಾತ್ರೆಯಲ್ಲಿ ಅದು ಹೇಗೋ ಮನೆ ಸೇರಿದ್ದೆ. ಆ ಕಾಡಲ್ಲಿ ಶಾಶ್ವತವಾಗಿ ಕಳೆದು ಹೋಗಿರುತ್ತಿದ್ದರೆ ನಾಗರಿಕ ಪ್ರಪಂಚಕ್ಕದು ಗೊತ್ತೂ ಆಗುತ್ತಿರಲಿಲ್ಲ. ಆ ನೆನಪುಗಳು ಈಗಿನ ಚಾರಣಗಳಿಗೆ ಸ್ಫೂರ್ತಿ. ಆದರೀಗ ಕಾಲುಗಳು ಸೋಲುತ್ತಿವೆ. ಕಾಲ ನನ್ನನ್ನು ಅಣಕಿಸುತ್ತಿದೆ .

ಅಜ್ಜ ನಮಗೆ ದಾರಿ ತೋರಿಸಿದರು. ಏರು ಪ್ರದೇಶ ಮುಗಿದು ರಸ್ತೆ ಸಿಕ್ಕಿತು. ‘ನಾವಿನ್ನು ಹೋಗುತ್ತೇವೆ. ತುಂಬಾ ಉಪಕಾರವಾಯಿತು ‘ಎಂದು ಅಜ್ಜನಿಗೆ ಚಾಕ್ಕೋ, ಬೀಡಿಗೋ ಹತ್ತು ರೂಪಾಯಿ ಕೊಟ್ಟೆ. ಅದನ್ನು ಖಡಾಖಂಡಿತವಾಗಿ ನಿರಾಕರಿಸಿದರು.’ ನಾನು ಮೇದಪ್ಪ ಪೂಮಲೆ ಕುಡಿಯ. ಕಾಂಗ್ರೆಸ್ಸ್‌ ಪಕ್ಷದ ಅಧ್ಯಕನಾಗಿದ್ದವ. ಆರೆಕಲ್ಲು ಜಾತ್ರೆಯ ಪೂಜಾರಿ ನಾನು. ಜಾತ್ರೆಗೆ ಒಳಹಾದಿಯಲ್ಲಿ ಈಗಲೂ ನಡಕೊಂಡೇ ಹೋಗುತ್ತೇನೆ. ಎಷ್ಟು ಪ್ರಾಯವೆಂದುಕೊಂಡಿದ್ದೀರಿ ನನಗೆ?. ಈಗ ನಡೆಯುತ್ತಿರುವುದು ಎಂಬತ್ತ ಐದು!’

ನಾವು ದಂಗಾದೆವು. ಅಭಿಮಾನದಿಂದ ಅಜ್ಜನನ್ನು ಆಲಂಗಿಸಿಕೊಂಡೆವು. ವಶಿಷ್ಠ ಒಂದು ಪೋಟೋ ಹೊಡೆದ.’ನನಗೊಂದು ಪ್ರತಿ ಬೇಕು. ಮೇದಪ್ಪ ಪೂಮಲೆ ಎಂದು ಬರೆದು ಸಂಪಾಜೆ ಪಂಚಾಯತಿಯಲ್ಲಿ ಕೊಟ್ಟರೆ ನನಗೆ ಸಿಗುತ್ತದೆ. ನೋಡಿ ಇದೇ ರಸ್ತೆ. ನೇರ ಹೋದರೆ ಮಡಿಕೇರಿ ಆಕಾಶವಾಣಿ ಸಿಗುತ್ತದೆ. ಇಲ್ಲಿಂದ ಏಳು ಕಿಲೋಮಿಟರ್‌ ದೂರ. ನಿಮಗೆ ಒಳ್ಳೆಯದಾಗಲಿ.’ ಅಜ್ಜ
ನೋಡಿದ್ದೆನೊ? ಈಗ ಇವುಗಳ ನೆತ್ತಿಯ ಮೇಲೆ ನಮ್ಮ ಪದಾಘಾತ. ಹಾಗಂತ ಇಲ್ಲಿ ಮೈಮರೆತುಬಿಟ್ಟರೆ ಕೇವಲ ನೆನಪಾಗಿ ಉಳಿಯಬಹುದಷ್ಟೇ! ಇಲ್ಲಿನ ಕಂದರಗಳನ್ನು ನೋಡುವಾಗ ಅಮೃತವರ್ಷಿಣಿ ಸಿನಿಮಾ ನೆನಪಾಗುತ್ತದೆ. ಅದರಲ್ಲಿ ಕೊಡೈಕನಾಲ್‌ ಕಂದರಗಳನ್ನು ತೋರಿಸುತ್ತಾರೆ. ನಮ್ಮ ಕನ್ನಡ ಚಿತ್ರರಂಗದವರಿಗೆ ಕನ್ನಡ ನಾಡಿನ ರಮ್ಯಾದುತಗಳ ಬಗ್ಗೆ ಅರಿವಿಲ್ಲ. ಇರುತ್ತಿದ್ದರೆ ಇಲ್ಲಿ ಎಷ್ಟೋ ಚಿತ್ರೀಕರಣ ನಡೆಸಿಬಿಡುತ್ತಿದ್ದರು. ಮಡಿಕೇರಿ ಕಡೆಯಿಂದ ಇಲ್ಲಿಯವರೆಗೆ ರಸ್ತೆಮಾಡಲು ಸಾಧ್ಯವಿದೆ. ಮರುಕಣದಲ್ಲಿ ಅಂದುಕೊಂಡೆ. ಬಹಳ ಒಳ್ಳೆಯದಾಯ್ತು. ಸಂಚಾರಯೋಗ್ಯ ರಸ್ತೆಯಿರುತ್ತಿದ್ದರೆ ಪ್ರವಾಸಿಗರು ಈ ಪರಿಸರವನ್ನೆಲ್ಲಾ ಹಾಳುಗೆಡಹುತ್ತಿದ್ದರು. ಜರ್ಮನ್‌ ಪ್ರವಾಸಿಗನ ಮಾತು ನೆನಪಾಯಿತು. ‘ಇಡೀ ಭಾರತವೇ ಒಂದು ಪಾಯಖಾನೆ !’

ಸ್ವಲ್ಪ ದೂರ ಸಾಗಿದಾಗ ಎಡಬದಿಯಲ್ಲಿ ಒಂದಕ್ಕಿಂತ ಒಂದು ಚೆಲುವೇ ಗುಡ್ಡೆಯಾದಂತಹ ಶಿಖರಗಳು. ಅಲ್ಲೆಲ್ಲಾ ಎಂದು ಅಡ್ಡಾಡಲು ಸಾಧ್ಯವೊ? ಮತ್ತೂ ಮುಂದುವರಿದಾಗ ಸುಮಾರು ಎರಡು ಕಿ. ಮೀ. ದೂರದಲ್ಲಿ ಗದ್ದೆಗಳು ಗೋಚರಿಸಿದವು. ಅಲ್ಲಿ ಮೂರು ರಾಸುಗಳು ಮೇಯುತ್ತಿದ್ದವು. ‘ಕಾಟಿ ಇರ್ದುಯಾ ‘ ಎಂದು ಸುಬ್ರಹ್ಮಣ್ಯ ಹೇಳಿದ . ‘ ಎಂಥಾ ಬೋದಾಳ ಸಿಂಗ ಮಾರಾಯ ನೀನು ! ಅಲ್ಲಿ ಕೃಷಿಯಿದೆ. ಈ ನಟಾ ಹಗಲಲ್ಲಿ ಕೃಷಿ ಇರುವಲ್ಲಿಗೆ ಕಾಟಿಗಳು ಬರ್ತವಾ’ ಎಂದು ಲೋಕೇಶ ಚುಚ್ಚಿದ. ಸ್ವಲ್ಪ ಮುಂದೆ ಬೇಲಿ ಕಾಣಿಸಿತು. ‘ಇಲ್ಲಿ ಮನೆಯಿರಬೇಕು ದಾರಿ ಕೇಳಿಕೊಂಡು ಬರುತ್ತೇವೆ ಎಂದು ಬಾಲ ಮತ್ತು ಜಗದೀಶ ನಮ್ಮನ್ನು ಬಿಟ್ಟು ಓಡಿದರು. ನಾವು ಮರದ ಕೆಳಗೆ ವಿಶ್ರಮಿಸಿಕೊಳ್ಳತೊಡಗಿದೆವು. ಮಡಿಕೇರಿ ಆಕಾಶವಾಣಿಯಿಂದ ಒಳ್ಳೆಯ ಹಾಡುಗಳು ಪ್ರಸಾರವಾಗುತ್ತಿದ್ದವು. ನಕಲೀ ಶ್ಯಾಮ ತನ್ನ ಜೇಬಿನಿಂದ ಚೀಟಿಯೊಂದನ್ನು ಹೊರತೆಗೆದು ‘ ರೇಡಿಯೋ ನಿಲ್ಲಿಸಿಯಾ. ನಾ ಈಗ ಹಾಡೆನ ‘ ಎಂದ. ಅಸೀಫು ರೇಡಿಯೋ ನಿಲ್ಲಿಸಿದ. ನಕಲೀ ಶ್ಯಾಮನ ಘನ ಘೋರ, ಕರ್ಣ ಕಠೋರ ಗೋಷ್ಠಿ ಆರಂಭವಾಯಿತು. ನಾಲ್ಕನೆ ಸಾಲಿಗೆ ಅವನು ಮುಟ್ಟುವಾಗ ಜಾಲ್ಸೂರು ಪ್ರವೀಣ ಹೇಳಿಯೇ ಬಿಟ್ಟ’ ದಮ್ಮಯ್ಯ ಮಾರಾಯ. ಓಡಿ ಹೋಗೋಣವೆಂದರೆ ಕಾಲುಗಳಲ್ಲಿ ಬಲವೇ ಇಲ್ಲ. ‘ ಅಸೀಫ ರೇಡಿಯೋ ಆನ್‌ ಮಾಡಿದ. ನಕಲೀ ಶ್ಯಾಮ ‘ಕತ್ತೆಗಳಿಗೇನು ಗೊತ್ತು ಕಸ್ತೂರಿಯ ಸೊಗಸು’ ಎಂದು ಹೇಳಿ ಗುನುಗುನಿಸುತ್ತಾ ತನ್ನ ಹಾಡಿಗೆ ತಾನೇ ಮೈಮರೆತ.

ನಮ್ಮ ನೀರ ಬಾಟಲಿಗಳು ಖಾಲಿಯಾಗಿದ್ದವು. ಆ ಸುಡು ಬಿಸಿಲಲ್ಲೂ ನನ್ನ ಜರ್ಕಿನ್‌ ಹಾಕಿಕೊಂಡು ಮೆರೆದಾಡುತ್ತಿದ್ದ ನಮ್ಮ ಆದಿ ಮಾನವ, ಅಕ್ಕನ ಮನವೊಲಿಸಿ ಒಳ್ಳೆಯ ಕ್ಯಾಮರವೊಂದನ್ನು ಲಪಟಾಯಿಸಿದ್ದ ವಶಿಷ್ಠ, ಚಟ್ಟೆ ಕಂದಡಿಯಿಂದ ಸ್ವಲ್ವದರಲ್ಲಿ ಪಾರಾಗಿ ಬಂದಿದ್ದ ಸುನೀಲ್‌, ಬೆಳಿಗ್ಗೆ ತೀರ್ಥಾಭಿಷೇಕದಿಂದ ಬಚಾವಾದ ಚಟ್ನಿ ಪುರ್ಸ ಖಾಲಿ ನೀರ ಬಾಟಲಿಗಳನ್ನು ಸಂಗ್ರಹಿಸಿಕೊಂಡು ದುಡು ದುಡು ಓಡಿದರು. ಆಹಾ! ತಂಪು ತಂಪು ತಂಪಾದ ಶೇ100ರಷ್ಟು ಪರಿಶು್ದ್ಧಿ ನೀರು. ತಂದವನೇ ವಶಿಷ್ಠ ನಿರಾಶೆಯ ದನಿ ಹೊರಡಿಸಿದ. ‘ಅಲ್ಲೊಂದು ಮನೆಯಿದೆ. ಗಂಜಿಯೋ. ತೆಳಿಯೋ, ನಿನ್ನೆಯ ತಂಞಣವೋ ಸಿಗಬಹುದೆಂದು ಅದಕ್ಕೊಂದು ಪ್ರದಕ್ಷಿಣೆ ಬಂದೆ. ಅಲ್ಲಿ ಯಾರೂ ಇರಲಿಲ್ಲ.’

ಅಲ್ಲಿಂದ ಮಡಿಕೇರಿಗೆ ಹತ್ತು ಕಿಲೋಮೀಟರ್‌ ಇರಬಹುದು. ಲಾರಿ, ಜೀಪು ಬರುವಂತಹ ಅಚ್ಚ ಕೊಡಗ ಭಾಷೆಯಲ್ಲಿ ಏನೋ ಹಾಡು ಹೇಳಿ ನಮ್ಮನ್ನು ಬೀಳ್ಗೊಟ್ಟರು. ನಮ್ಮನ್ನು ಬಿಟ್ಟು ಮುಂದೆ ಸಾಗಿದ್ದವರು ಅಲ್ಲೇ ಎತ್ತರದ ಗುಡ್ಡವೊಂದರಲ್ಲಿದ್ದರು. ಅವರಿಗೆ ಈ ಆಸಾಧ್ಯ ಅಜ್ಜನ ಭೇಟಿಯ ಭಾಗ್ಯವಿರಲಿಲ್ಲ. ಗಾಳಿ ಬೀಡಿನ ಹಾದಿ ಹಿಡಿದು ನಮಗಾದ ನಷ್ಟಕ್ಕಿಂತ ಈ ಅಜ್ಜನ ಪರಿಚಯದಿಂದಾದ ಲಾಭ ದೊಡ್ಡದು. ಅಲ್ಲಿ ಮೊಬೈಲ್‌ ನೋಡಿದರೆ ಮಂಡ್ಯ ಸಮೀಪದ ಮೇಲು ಕೋಟೆ ರೇಂಜು ಸಿಗುತ್ತಿತ್ತು!

ಮತ್ತೂ ಒಂದು ಕಿ. ಮೀ ಸಾಗಿದಾಗ ಬೆಡಿ ಹಿಡಿದು, ಎರಡು ನಾಯಿಗಳ ಸಮೇತ ಬೇಟೆಗೆ ಹೊರಟ ಆರೆಭಾಷಿಕ ಗೌಡರೊಬ್ಬರು ಎದುರಾದರು. ‘ಮಡಿಕೇರಿಗಿನ್ನು ಕರೆಕ್ಟು ಎಂಟು ಕಿಲೋಮೀಟರ್‌’ ಎಂದು ಅವರು ಹೇಳಬೇಕೆ! ಮೂರು ಕಿ. ಮೀ. ಹಿಂದೆ ಸಿಕ್ಕ ಹೆಂಗಸು ಆರು ಕಿ. ಮೀ. ದೂರವಿದೆ ಎಂದಿದ್ದಳು. ಮಡಿಕೇರಿ, ಸಮೀಪಿಸುತ್ತಿದ್ದಂತೆ ದೂರ ಹೆಚ್ಚಾಗುತ್ತಿದೆ!

ಕೊನೆಗೂ ಕಾಲೆಳೆಯುತ್ತಾ ಮಡಿಕೇರಿ ತಲುಪುವಾಗ ಏಳು ದಾಟಿತ್ತು. ನಿಶಾನಿ ಗುಡ್ಡೆಯೇರಿ ಆಕಾಶವಾಣಿ ತಲುಪಿ ಕಾವಲು ಭಟನಲ್ಲಿ ‘ನಾನು ಸುಬ್ರಾಯ ಸಂಪಾಜೆಯ ಗುರು. ಸುಳ್ಯದಿಂದ ಗುಡ್ಡದ ಹಾದಿಯಾಗಿ ಬಂದಿದ್ದೇವೆ. ನಮ್ಮ ಮಕ್ಕಳಿಗೆ ಮಡಿಕೇರಿ ಆಕಾಶವಾಣಿಯೆಂದರೆ ಇಷ್ಟ. ಒಳ ಬಿಡಬಹುದಾ’ ಎಂದು ಕೇಳಿದೆ. ಅವನು ‘ಆರು ಗಂಟೆಯ ಮೇಲೆ ಸ್ವತಾ ಡೈರೆಕ್ಟರರೇ ಹೇಳಿದರೂ ಸಾಧ್ಯವಿಲ್ಲ ಸಾರ್‌. ಬೆಂಗಳೂರು ವಿಜ್ಞಾನಿಗಳ ಮೇಲೆ ಆಟಾಕ್‌ ಆಯಿತ್ತಲ್ಲ. ಆಮೇಲೆ ಸೆಕ್ಯುರಿಟಿ ತುಂಬಾ ಟೈಟು’ ಎಂದ. ಪಾವನಕೃಷ್ಣನಿಗೆ ತುಂಬಾ ನಿರಾಶೆಯಾಯಿತು.’ ನಮ್ಮ ಸಾಹಸ ರೆಕಾರ್ಡ್‌ ಮಾಡಿ ಪ್ರಸಾರ ಮಾಡುತ್ತಾರೆ ಎಂದು ಕೊಂಡಿದ್ದೆ ಸರ್‌. ಹೀಗಾಯಿತಲ್ಲಾ’ ಎಂದು ವಿಷಾದಿಸಿದ.’ಜೀವನವೆಂದರೆ ಇದುವೇ ಮಾರಾಯ. ನಾವಂದು ಕೊಂಡದ್ದೆಲ್ಲಾ ನಡೆಯುವುದಿಲ್ಲ’ ಎಂದು ಅವನನ್ನು ಸಮಾಧಾನಿಸಿದೆ.

ಗೈಡುಗಳ ನಾಯಕ ಬಾಲನ ಕೈಯಲ್ಲಿ ನಾಲ್ಕು ನೂರು ರೂಪಾಯಿ ಇಟ್ಟಾಗ ಅವನ ಮುಖ ಬೆಳಗಿತು. ಅವ ಕೈ ಮುಗಿದು ಹೇಳಿದ.’ ಇದು ಮೇಸ್ಟ್ರು ಮತ್ತು ಮಕ್ಕಳು ಚಾರಣ ಬರುವ ಹಾದಿಯಲ್ಲ ಸಾರ್‌. ನೀವು ಇಂದು ಏನಿಲ್ಲವೆಂದರೂ ಸುಮಾರು ನಲವತೈದು ಕಿಲೋ ಮೀಟರು ನಡೆದಿದ್ದೀರಿ. ಹದಿಮೂರುವರೆ ಗಂಟೆಗಳು. ಇದೊಂದು ದಾಖಲೆ.’

ಗಿನ್ನೆಸ್‌ ಬುಕ್‌ ಓಫ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಾಗುವಾಗ ಸಾಧಕರ ಮುಖದಲ್ಲಿರಬಹುದಾದ ಸಂತೃಪ್ತಿಯನ್ನು ನನ್ನ ಹುಡುಗರ ಮುಖದಲ್ಲಿ ಕಂಡೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಗೆಯುಗಳದ ಸಿಗರೇಟು
Next post ಏಷ್ಯಾ

ಸಣ್ಣ ಕತೆ

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…