ಬೇಲಿಯೆದ್ದು ಹೊಲವ ಮೆದ್ದು
ಹೋಯಿತಂತೆ ಕಂಡಿರ?

ಗೂಳಿಯೆತ್ತು ಥರವೆ ಇತ್ತು
ಮೆಲ್ಲುತಿತ್ತು ನೋಡಿದೆ

ರಾತ್ರಿಯೆಲ್ಲ ತಿಂದಿತಲ್ಲ
ಸದ್ದು ನಿಮಗೆ ಕೇಳಿತೆ?

ಹೊಡೆದು ಡುರುಕಿ ಮಣ್ಣು ಕೆದಕಿ
ಕೂಗುತ್ತಿತ್ತು ಕೇಳಿದೆ

ಬತ್ತ ಹುರುಳಿ ಕಬ್ಬು ಕದಳಿ
ಎಲ್ಲ ತಿಂದು ಮುಗಿಸಿತೆ?

ಗಡ್ಡೆಗೆಣಸು ಹಣ್ಣುಮೆಣಸು
ತಿಂದು ಖಾಲಿ ಮಾಡಿತು

ಯಾರ ಮಜ ಯಾರಿಗೆ ಸಜ
ಬೆಳೆದವನಿಗೆ ಏನಿದೆ?

ಎಲ್ಲ ನಿಜ ಇದುವೆ ಸಹಜ
ಬೆಳೆಯ ಹಕ್ಕು ಬೇಲಿಗೆ!
*****