ಕೊರವಂಜಿಯ ಕಲೆ

ಅಣ್ಣನ ಮಗಳನ್ನು ಅಕ್ಕರೆಯಿಂದ ಮಗನಿಗೆ ತೆಗೆದುಕೊಂಡು ಮದುವೆಮಾಡಿದ್ದಳು, ನೀಲಗಂಗಮ್ಮ. ಆದರೆ ಮಗನು ಮನೆಗೇ ಹತ್ತಲೊಲ್ಲನಾದನು. ಹೊರಗಿನಿಂದ ಹೊರಗೇ ಇರತೊಡಗಿದನು.

ಬಾಳೆಯ ಬನದಲ್ಲಿ ಮಗನು ಚಂಡಾಡುತ್ತಿರುವನೆಂಬ ಸುದ್ದಿ ಕೇಳಿ ತಾಯಿ ಅಲ್ಲಿಗೆ ಹೋಗಿ ಮಗನನ್ನು ಕೇಳಿಕೊಂಡಳು . “ನನ್ನ ಸೊಸೆ ಬಾಳೆಗಿಂತ ಚಲುವೆಯಾಗಿದ್ದಾಳೆ. ಒಂದು ಸಾರೆ ಮನೆಗೆ ಬಂದು ಮುಖ ತೋರಿಸು.”

“ಬಾಳೆಗಿಂತ ಚಲುವೆಯಾದರೆ ಭಾವಿಯಲ್ಲಿ ನುಗಿಸು. ಇಲ್ಲವೆ ಉಟ್ಟಬಟ್ಟಿ ಕಳಕೊಂಡು ತವರುಮನೆಗೆ ಕಳಿಸು.  ನಾನು ನನಗೆ ತಿಳಿದಂತೆ ವರ್ತಿಸುವೆನು” ಎಂಬುದು ಮಗನ ಮರುನುಡಿ.

ಇನ್ನೊಂದು ಸಾರೆ, ಮಗನು ನಿಂಬಿಯ ಬನದಲ್ಲಿ ಚೆಂಡಾಡುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗಿ . “ನಿಂಬೆಗಿಂತ ನನ್ನ ಸೊಸೆ ಚೆಲುವೆಯಾಗಿದ್ದಾಳೆ ಒಂದೇ ಸಲ ಮನೆಗೆ ಬಂದು ಮೊಗದೋರು” ಎಂದು ಅಂಗಲಾಚಿದಳು.

ಕಟ್ಟಿಗೆ ಮುರಿದು ಕೈಗೆ ಕೊಟ್ಟಂತೆ ಮಗನು ಮರುನುಡಿದನು . “ನಿಂಬೆಗಿಂತ ಚೆಲುವೆಯಾಗಿದ್ದರೆ ಆಕೆಯನ್ನು ಬಾವಿಗೆ ನೂಕು. ಇಲ್ಲವೆ ಕಟ್ಟಿದ ಕರಿಮಣಿಯನ್ನು ಹರಕೊಂಡು ತವರುಮನೆಗೆ ಹಚ್ಚಗೊಡು.  ನಾನು ನನಗೆ ತಿಳಿದಂತೆ ಮಾಡುವೆನು.”

ತಾಯಿ ನಿರಾಶಳಾಗಿ ಮನೆಗೆ ಬಂದು ಸೊಸೆಗೆ ಹೇಳಿದಳು . “ಅಣ್ಣನ ಮಗಳೆಂದು ಹೆಮ್ಮೆಯಿಂದ ನಿನ್ನನ್ನು ತಂದುಕೊಂಡರೆ ಮಗನು ಮಾತೇ ಕೇಳದಾಗಿದ್ದಾನೆ. ಸೊಸೆಮುದ್ದೇ, ಹೋಗಿ ಬಿಡವ್ವ ನಿನ್ನ ತವರುಮನೆಗೆ.”

“ಯಾರು ಅಣ್ಣ, ಯಾರು ತಮ್ಮ? ತಾಯಿ ಯಾರು ತಂದೆ ಯಾರು?  ಅಣ್ಣನ ಮದುವೆ ಹೆಂಡಿರಾರು ಅತ್ತೆ? ತವರು ಮನೆಗೆ ಹೋಗಲಾರೆ ಒಂದು, ಹೊನ್ನು ಖರ್ಚುಮಾಡಿ ಮದುವೆ ಮಾಡಿದಿ; ಈಗ ಎರಡು ಹೊನ್ನು ಖರ್ಚುಮಾಡಿ ನನಗೆ ಕೊರವಂಜಿ ಬುಟ್ಟಿ ಕೊಂಡುಕೊಡು. ಅತ್ತೇ, ಗಂಡನನ್ನು ನೋಡಿ ಬರುವೆ. ಆತನ ರಂಡೆಯನ್ನು ನೋಡಿ ಬರುವೆ” ಎಂದಳು ಸೂಸೆ.

ಹೊರಮೈಗೆ ಮುತ್ತು ಹಚ್ಚಿ, ಒಳಮೈಗ ಮಾಣಿಕಹಚ್ಚಿ ಕೋದ ಬುಟ್ಟಿಯನ್ನು ಅತ್ತೆ ಆ ಕೂಡಲೇ ತಂದಿಟ್ಟಳು. ಸೊಸೆಯು ಅದನ್ನು ತಲೆಯಮೇಲೆ ಹೊತ್ತು ಕಾಲಲ್ಲಿ ಚೆಪ್ಪಲಿ ಮೆಟ್ಟಿಕೊಂಡು ತನ್ನ ರಾಯರಿರುವ ರಾಜಪಟ್ಟಣದ ದಾರಿ ಕೇಳುತ್ತ ನಡೆದಳು –

“ದನ ಕಾಯುವ ಅಣ್ಣಗಳಿರಾ, ದನಕಾಯುವ ತಮ್ಮಗಳಿರಾ, ನಮ್ಮ ರಾಯರಿರುವ ರಾಜಪಟ್ಟಣದ ದಾರಿಯಾವುದು?”

ದನಗಾಹಿಗಳು ಹೇಳಿಕೊಟ್ಟರು – “ಬಾಳೆ ಬನದ ಬಲಕ್ಕೆ ನಿಂಬೆ ಬನದ ಎಡಕ್ಕೆ ನಾಗಸಂಪಿಗೆಯ ನಡುವೆ ಹಸಿರು ಸೀರೆಯುಟ್ಟು, ಹಸಿರು ಕುಪ್ಪಸ ತೊಟ್ಟು, ಹಸಿರು ಸೆರಗ ಮರೆಮಾಡಿಕೊಂಡು ಎದುರು ಬರುತ್ತಿರುವ ತನ್ನಂಥ ಹರದಿಯರನ್ನು ಬಲಗೊಂಡಳು.  ಅದರಂತೆ ಕೆಂಪುಸೀರೆಯುಟ್ಟು, ಕೆಂಪು ಕುಪ್ಪಸ ತೊಟ್ಟು, ಕೆಂಪು ಸೆರಗು ಮರೆಮಾಡಿಕೊಂಡು ಎದುರು ಬರುತ್ತಿರುವ ಹರದಿಯರನ್ನೂ ಬಲಗೊಂಡಳು. ಬೀದಿಯಲ್ಲಿ ಸಾಗಿದ ಆನೆಗಳ ಮುಂದೆ, ಆನೆಮರಿಗಳ ಮುಂದೆ, ಆನೆಯನ್ನೇರುವ ಚದುರಮನ್ನೆಯರ ಮಗಳು ರಾಜಬೀದಿಯಲ್ಲಿ ಹೊರಟಳು.  ಒಂಟೆಗಳ ಮುಂದೆ, ಒಂಟೆಗಳನ್ನೇರುವ ಭಂಟಮನ್ನೆಯರ ಮಗಳು ರಾಜಬೀದಿಯಲ್ಲಿ ಸಾಗಿದಳು.

“ಕಾಲಲ್ಲಿ ಕಂಚಿನಪಿಲ್ಲೆ, ಕಿವಿಯಲ್ಲಿ ಹಿತ್ತಾಳೆಯ ಓಲೆ, ಸರಪಳಿ ಗಂಟಿಸರದಾಳಿ ಧರಿಸಿದ ನೀನು ಯಾವನಾಡಿನ ಕೊರವೆ” ಎಂದು ಕೇಳಿದನು ಒಬ್ಬ ತರುಣ.

“ನಾನು ಈ ನಾಡ ಕೊರವಿಯೂ ಅಲ್ಲ ; ಆ ನಾಡ ಕೊರವಿಯೂ ಅಲ್ಲ.  ದೇವಲೋಕದ ಕೊರವೆ. ಜಾಣ, ನಾನು ದೇವರು ಹೇಳುತ್ತೇನೆ ಕೇಳು-ಸೂಳೆಯರು ನಿನ್ನನ್ನು ಮೋಡಿಮಾಡಿ ಹೊಡೆಯುತ್ತಾರೆ” ಎ೦ದಳು ಕೊರವಿ.

“ಮಡದಿಯನ್ನು ಬಿಟ್ಟು ಹನ್ನೆರಡುವರುಷ ಆಯ್ತು ಕೊರವೀ. ಮಡದಿಯನ್ನು ಕೂಡಿಸು. ಕೈಮುಗಿಯುತ್ತೇನೆ ; ನಿನ್ನ ಕಾಲು ಬೀಳುತ್ತೇನೆ. ಅಷ್ಟು ಮಾಡಿದರೆ ನಿನ್ನನ್ನು ಕರೆತಂದು ಸೀರೆ ಕುಪ್ಪಸ ಉಡುಗೊರೆ ಕೊಡುತ್ತೇನೆ” ಎಂದನು ಆ ಜಾಣ.

“ನನ್ನ ಕಾಲ ಬೀಳುವುದಕ್ಕೆ, ನನ್ನ ಕೈಮುಗಿಯುವುದಕ್ಕೆ ಯಾರಿಗೆ ಯಾವ ತಪ್ಪು ಮಾಡಿರುವಿರಿ ಮಾರಾಯರೇ?  ಹೋಗೋಣ ನಡೆಯಿರಿ” ಎಂದು
ಕೊರವಿ ನುಡಿದು, ಆತನ ದಿಗಿಲನ್ನೆಲ್ಲ ಬಯಲು ಮಾಡಿದಳು.

ಗಂಡಹೆಂಡಿರು ಕೂಡಿಕೊಂಡು ಸಡಗರದಿಂದ ತಮ್ಮೂರ ಹಾದಿ ಹಿಡಿದರು. ಹಿ೦ದೆ ಆ ರಂಡಿ – ಸೂಳೆ ಬೆನ್ನುಹತ್ತಿದ್ದನ್ನು ಕಂಡು, ಆಕೆಯನ್ನು ಹಿಂದಕ್ಕೆ ಹೊಡೆದು ಹಾಕಿದರು.

“ಆರು ವರುಷ ತಿರುಗಿ ಅರಸನನ್ನು ತಂದಿದ್ದೇನೆ ಅತ್ತೇ, ಹೊರಗಡೆ ಬಾ.  ನಿನ್ನ ಮಗನನ್ನು ಒಳಗಡೆ ಕರೆದುಕೋ” ಎಂದು ಸೊಸೆಯು ಕೂಗಿದಾಗ ಅತ್ತೆಗಾದ ಆನಂದಕ್ಕೆ ಅಳತೆಯಿದೆಯೆ?
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ ಎಷ್ಟೊಂದು ಅನೈತಿಕ
Next post ಹೋತೋ ಐಸುರ ಬಂತು ಮೊಹೋರುಮ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…